ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranjith H Ashwath Column: ಮೋದಿ ಸುತ್ತಲೇ ಕಾಂಗ್ರೆಸಿನ ಗಿರಕಿ !

ಕಳೆದ ಒಂದೂವರೆ ದಶಕದಿಂದ ಕಾಂಗ್ರೆಸ್ ರಾಷ್ಟ್ರ ಮಟ್ಟದಲ್ಲಿ ಬಹುದೊಡ್ಡ ಹಿನ್ನಡೆ ಅನುಭವಿಸಲು ಈ ಲೆಕ್ಕಾ ಚಾರದಲ್ಲಿ ತಪ್ಪು ಹೆಜ್ಜೆ ಇಟ್ಟಿರುವುದೇ ಕಾರಣ ಎಂದರೆ ತಪ್ಪಾಗುವುದಿಲ್ಲ. 2014ರ ಲೋಕ ಸಭಾ ಚುನಾವಣೆಗೆ ಬಿಜೆಪಿ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದ ಕ್ಷಣದಿಂದ, ಈ ಟೀಕಾಸ್ತ್ರ ಪ್ರಯೋಗದ ವಿಷಯದಲ್ಲಿ ಕಾಂಗ್ರೆಸ್ ಎಡವಿಕೊಂಡು ಬಂದಿದೆ

ಮೋದಿ ಸುತ್ತಲೇ ಕಾಂಗ್ರೆಸಿನ ಗಿರಕಿ !

ಅಶ್ವತ್ಥಕಟ್ಟೆ

ranjith.hoskere@gmail.com

ರಾಜಕೀಯದಲ್ಲಿ ಟೀಕೆ-ಟಿಪ್ಪಣಿ ಸಾಮಾನ್ಯ. ಆಡಳಿತ ನಡೆಸುವ ಪಕ್ಷ ಅಥವಾ ವ್ಯಕ್ತಿಯ ವಿರುದ್ಧ ಟೀಕಿಸಿಕೊಂಡೇ ಅನೇಕರು ‘ದೊಡ್ಡ ದೊಡ್ಡ’ ಹುದ್ದೆಗೇರಿರುವ ಅಥವಾ ಅಧಿಕಾರದಲ್ಲಿರುವ ವ್ಯಕ್ತಿಗೆ ‘ಜೈ’ ಎಂದುಕೊಂಡೇ ರಾಜಕೀಯದ ಹತ್ತು ಹಲವು ಮೆಟ್ಟಿಲು ಏರಿರುವ ವ್ಯಕ್ತಿಗಳನ್ನು ಇತಿಹಾಸ ದಲ್ಲಿ ನೋಡಬಹುದು. ರಾಜಕೀಯದ ಮೆಟ್ಟಿಲುಗಳನ್ನು ಏರಲು ‘ಟೀಕಾಸ್ತ್ರ’ ಎಷ್ಟು ಸಹಕಾರಿ ಯೋ ಅನೇಕ ಸಮಯದಲ್ಲಿ ಅಷ್ಟೇ ಮಾರಕವಾಗಲಿದೆ ಎನ್ನುವುದನ್ನೂ ಮರೆಯಬಾರದು. ಟೀಕಾಸ್ತ್ರ ಗಳನ್ನು ಯಾವಾಗ? ಎಷ್ಟು ಪ್ರಮಾಣದಲ್ಲಿ ಯಾವೆಲ್ಲ ವಿಷಯದ ಮೇಲೆ ಪ್ರಯೋಗಿಸ ಬೇಕು ಎನ್ನುವುದರ ಮೇಲೆ ರಾಜಕೀಯದ ‘ಪ್ಲಸ್-ಮೈನಸ್’ ನಿರ್ಧಾರವಾಗುತ್ತದೆ. ಕಳೆದ ಒಂದೂವರೆ ದಶಕದಿಂದ ಕಾಂಗ್ರೆಸ್ ರಾಷ್ಟ್ರ ಮಟ್ಟದಲ್ಲಿ ಬಹುದೊಡ್ಡ ಹಿನ್ನಡೆ ಅನುಭವಿಸಲು ಈ ಲೆಕ್ಕಾ ಚಾರದಲ್ಲಿ ತಪ್ಪು ಹೆಜ್ಜೆ ಇಟ್ಟಿರುವುದೇ ಕಾರಣ ಎಂದರೆ ತಪ್ಪಾಗುವುದಿಲ್ಲ. 2014ರ ಲೋಕ ಸಭಾ ಚುನಾವಣೆಗೆ ಬಿಜೆಪಿ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದ ಕ್ಷಣದಿಂದ, ಈ ಟೀಕಾಸ್ತ್ರ ಪ್ರಯೋಗದ ವಿಷಯದಲ್ಲಿ ಕಾಂಗ್ರೆಸ್ ಎಡವಿಕೊಂಡು ಬಂದಿದೆ.

ಅದರಲ್ಲಿಯೂ 2014 ಹಾಗೂ 2019ರ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಮಾಡಿಕೊಂಡ ಎಡವಟ್ಟುಗಳೇ ಇಂದಿನ ಕಾಂಗ್ರೆಸ್ ಸ್ಥಿತಿಗೆ ಕಾರಣ ಎಂದರೆ ಅಚ್ಚರಿಯೇನಿಲ್ಲ. ಹಾಗೆ ನೋಡಿದರೆ, ಹಿಂದಿನ ಎರಡು ಚುನಾವಣೆಯಲ್ಲಿ ಮಾಡಿದ್ದ ತಪ್ಪಿನಿಂದ ಎಚ್ಚೆತ್ತುಕೊಳ್ಳುವ ಬದಲು ಅದನ್ನೇ ಇನ್ನಷ್ಟು ತೀವ್ರ ಸ್ವರೂಪದಲ್ಲಿ ಮಾಡುವ ಮೂಲಕ ಸಮಸ್ಯೆಯ ಜಾಲದಿಂದ ತಪ್ಪಿಸಿಕೊಳ್ಳುವು ದಕ್ಕಿಂತ, ಜಾಲದಿಂದ ಹೊರಬರಲಾಗದ ರೀತಿಯಲ್ಲಿ ಕಾಂಗ್ರೆಸಿಗರು ಸಿಲುಕಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Ranjith H Ashwath Column: ಶಾಂತಿಯ ತೋಟಕ್ಕೆ ಓಲೈಕೆಯೇ ತೊಡಕು

ಕಾಂಗ್ರೆಸಿಗರು ಮಾತ್ರವಲ್ಲದೇ, ಇಡೀ ‘ಇಂಡಿ’ ಒಕ್ಕೂಟದವರೇ ಮೋದಿ ವಿರುದ್ಧದ ಟೀಕೆಗೆ ತಮ್ಮನ್ನು ತಾವು ಸೀಮಿತಗೊಳಿಸಿಕೊಳ್ಳುವ ಮೂಲಕ ದೇಶದ ಜನರ ಮುಂದೆ ತಮ್ಮನ್ನು ತಾವು ಕೆಳಗಿಳಿಸಿ ಕೊಳ್ಳುತ್ತಿದ್ದಾರೆ. ಈ ಹಿಂದಿನ ಲೋಕಸಭಾ ಚುನಾವಣೆಯ ‘ಮೋದಿ ವೇವ್’ ಗಮನಿಸಿದರೆ, 2024ರಲ್ಲಿ ಆ ವೇವ್ ಇರಲಿಲ್ಲ ಎನ್ನುವುದನ್ನು ಬಿಜೆಪಿಗರೇ ಒಪ್ಪಿಕೊಳ್ಳುತ್ತಾರೆ. ಆದರೆ ‘ಇಂಡಿ’ ಒಕ್ಕೂಟದ ನಾಯಕರ ಒಂದೊಂದು ಹೇಳಿಕೆಗಳು, ಈ ವೇವ್ ಅನ್ನು ಮರುಸೃಷ್ಟಿಸುವ ರೀತಿಯಲ್ಲಿವೆ.

ಹಿಂದಿನ ಎರಡು ಅವಧಿಯ ಆಡಳಿತವು ಮೋದಿ ಅವರ ಮೂರನೇ ಅವಧಿಯಲ್ಲಿಲ್ಲ, ಸಾಫ್ಟ್ ಆಗಿದ್ದಾರೆ ಎನ್ನುವ ‌ಮಾತುಗಳನ್ನು ಸ್ವತಃ ಬಿಜೆಪಿ ಬೆಂಬಲಿಗರೇ ಹೇಳಿಕೊಂಡು ಬಂದಿದ್ದನ್ನು ಗಮನಿಸಿದ್ದೇವೆ. ಆದರೆ ಈ ಎಲ್ಲ ಕೊಸರಾಟಗಳನ್ನು ಹೋಗಿಸಿದ್ದು, ಮೋದಿಯ ನಾಯಕತ್ವದಲ್ಲಿ ದೇಶದ ಜನರಿಗೆ ‘ನಂಬಿಕೆ’ ಬರುವಂತೆ ಮಾಡಿದ್ದು ಆಪರೇಷನ್ ಸಿಂದೂರ ಎಂದರೆ ತಪ್ಪಿಲ್ಲ.

ಪಹಲ್ಗಾಮ್ ದಾಳಿಯ ಬಳಿಕ ಮೋದಿ ಹಾಗೂ ಕೇಂದ್ರ ಸರಕಾರ ಮೊದಲ ಎರಡು ವಾರ ನಡೆದು ಕೊಂಡ ರೀತಿ, ಅನೇಕರಲ್ಲಿ ಅಸಮಾಧಾನವನ್ನು ತಂದಿತ್ತು. ನಮ್ಮ ಮೇಲೆ ದಾಳಿ ನಡೆದರೂ, ‘ಶಾಂತಿ ಪ್ರಿಯ’ ರಾಷ್ಟ್ರ ಎನ್ನುವ ಬ್ರ್ಯಾಂಡ್ ಉಳಿಸಿಕೊಳ್ಳಲು ‘ಮಾತಿನಲ್ಲಿಯೇ’ ಹೋರಾಟ ಮಾಡಿ ಮುಗಿಸಿದ್ದ ಈ ಹಿಂದಿನ ಅನೇಕ ಪ್ರಧಾನಿಗಳ ಸಾಲಿಗೆ ಮೋದಿಯೂ ಸೇರಿಬಿಟ್ಟರೆ? ಎನ್ನುವ ಪ್ರಶ್ನೆ ಗಳು ಬಲ ಪಂಥೀಯರಲ್ಲಿಯೂ ಮೂಡಿದ್ದು ಸುಳ್ಳಲ್ಲ. ಆದರೆ ಅದಾದ ಬಳಿಕ ನಡೆದ ಆಪರೇಷನ್ ಸಿಂದೂರ, ಈ ಕಾರ್ಯಚರಣೆಯ ಭಾಗವಾಗಿ ಪಾಕಿಸ್ತಾನದ ರಾಜಧಾನಿಯವರೆಗೆ ನುಗ್ಗಿ ಅಲ್ಲಿನ ವಾಯುನೆಲೆಗಳನ್ನು ಧ್ವಂಸ ಮಾಡುವ ಮೂಲಕ ‘ನವಭಾರತ’ದಲ್ಲಿ ದಾಳಿಗೆ ಪ್ರತಿದಾಳಿ ನಿಶ್ಚಿತ ಎನ್ನುವ ಸಂದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀಡುವ ಮುಖಾಂತರ, ರಕಾರದ ಮೇಲೆ ದೇಶದೊಳಗೆ ಸಣ್ಣಕ್ಕೆ ಶುರುವಾಗಿದ್ದ ಅಸಮಾಧಾನವನ್ನು ತಣಿಸುವ ಪ್ರಯತ್ನವನ್ನು ಮೋದಿ ಸರಕಾರ ಮಾಡಿದೆ.

modi (6)

ಇಡೀ ಕಾರ್ಯಚರಣೆಯ ಕ್ರೆಡಿಟ್ ಸೇನೆಗೆ ಸಲ್ಲಬೇಕು ಎನ್ನುವುದು ಸ್ಪಷ್ಟ. ಆದರೆ ಸೇನೆಗೆ ಆ ಪ್ರಮಾಣ ದಲ್ಲಿ ‘ಅಧಿಕಾರ’ ನೀಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗಬಹುದಾದ ಸಮಸ್ಯೆ ಯನ್ನು ನಿಭಾಯಿಸಲು ಸಿದ್ಧವಾಗಿಯೇ ಅನುಮತಿ ನೀಡಿದ್ದು ಮೋದಿ ಸರಕಾರದ ಸಾಧನೆ ಎನ್ನುವು ದನ್ನು ಒಪ್ಪಿಕೊಳ್ಳಲೇಬೇಕು.

ಹಾಗೆ ನೋಡಿದರೆ, ಪಹಲ್ಗಾಮ್ ದಾಳಿ ಬಳಿಕ ನಡೆದ ಆಪರೇಷನ್ ಸಿಂದೂರದವರೆಗೆ ಇಡೀ ದೇಶ ಒಂದಾಗಿ ನಿಂತಿತ್ತು. ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯಿಂದ ಹಿಡಿದು ಬಹುತೇಕ ನಾಯಕರು ಕೇಂದ್ರದ ತೀರ್ಮಾನಕ್ಕೆ ನಾವೆಲ್ಲ ಬದ್ಧ ಎನ್ನುವ ಮೂಲಕ ದೇಶದ ‘ಏಕತೆ’ ಯನ್ನು ಸಾರಿದರು.

ಅಲ್ಲಲ್ಲಿ ಸಣ್ಣ-ಪುಟ್ಟ ಹೇಳಿಕೆಗಳೂ ವಿವಾದಕ್ಕೆ ಕಾರಣವಾದರೂ, ಅದೆಲ್ಲ ಒಟ್ಟಾರೆ ಚಿತ್ರಣದಲ್ಲಿ ಸಣ್ಣ ವಿಷಯ ಎನ್ನುವುದು ಸ್ಪಷ್ಟ. ಈ ಮಟ್ಟಿಗೆ ಶತ್ರುರಾಷ್ಟ್ರದೊಂದಿಗೆ ಹೋರಾಡುವಾಗ ಕೇಂದ್ರ ಸರಕಾರಕ್ಕೆ ಆಂತರಿಕ ‘ಬಲ’ ಸಿಕ್ಕಿತ್ತು. ಆದರೆ ನಿಜವಾದ ವಾಗ್ಯುದ್ಧ ಶುರುವಾಗಿದ್ದೇ, ‘ಕದನವಿರಾಮ’ ದ ಬಳಿಕ.

ಹೌದು, ಅಮೆರಿಕ ಮಧ್ಯಸ್ಥಿಕೆಯಲ್ಲಿಯೋ ಅಥವಾ ಅಮೆರಿಕದ ಸಲಹೆ ಮೇರೆಗೋ ಪಾಕಿಸ್ತಾನದ ವಿರುದ್ಧದ ಕದನಕ್ಕೆ ಭಾರತ ಮೂರು ದಿನದ ಬಳಿಕ ವಿರಾಮ ಹೇಳಿತ್ತು. ಈ ರೀತಿಯ ಮಧ್ಯಪ್ರವೇಶ ನಿಶ್ಚಿತವೆಂದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಹಿಂದೆಯೂ ಪಾಕಿಸ್ತಾನ-ಭಾರತ ನಡುವಿನ ಯುದ್ಧಗಳ ಸಮಯದಲ್ಲಿ ಅಮೆರಿಕ ಮೂಗು ತೂರಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯ.

ಪ್ರತಿ ಬಾರಿಯೂ ‘ಮೂರನೇ ರಾಷ್ಟ್ರದ ಮಧ್ಯಸ್ಥಿಕೆ’ ಬೇಡವೆಂದು ಭಾರತ-ಪಾಕ್ ತೀರ್ಮಾನಿ ಸಿದರೂ, ಅಂತಿಮವಾಗಿ ಒಂದಿಲ್ಲೊಂದು ರಾಷ್ಟ್ರಗಳು ಬರುತ್ತವೆ. ಜಿಯೋ ಪಾಲಿಟಿಕ್ಸ್ ನಲ್ಲಿ ಈ ರೀತಿಯ ಮಧ್ಯಪ್ರವೇಶಗಳು ಸರ್ವೇಸಾಮಾನ್ಯ. ಇಡೀ ಪ್ರಕರಣದಲ್ಲಿ ಕೇಂದ್ರದ ಬೆಂಬಲಕ್ಕೆ ಪ್ರತಿ ಪಕ್ಷಗಳು ನಿಂತಿದ್ದವು. ಯಾವಾಗ ಕೇಂದ್ರ ಸರಕಾರಕ್ಕೆ ಅದರಲ್ಲಿಯೂ ಮೋದಿ ನಾಯಕತ್ವಕ್ಕೆ ಕ್ರೆಡಿಟ್ ಸಿಗುತ್ತದೆ ಎನ್ನುವ ಸೂಚನೆ ಸಿಕ್ಕಿತೋ ಅಲ್ಲಿಂದ ಮೋದಿ ವಿರುದ್ಧದ ಕಾಂಗ್ರೆಸಿಗರ ಟೀಕಾಸ್ತ್ರ ಶುರು ವಾಗಿದೆ. ಮೋದಿಯನ್ನು ಟಾರ್ಗೆಟ್ ಮಾಡಿ ಟೀಕಿಸುವ ಭರದಲ್ಲಿ ಕೆಲ ಕಾಂಗ್ರೆಸಿಗರು, ಭಾರತೀಯ ಯೋಧರ ಹೋರಾಟವನ್ನು ಪ್ರಶ್ನಿಸುವ ರೀತಿಯಲ್ಲಿ ಮಾತನಾಡುತ್ತಿರುವುದು ಕಾಂಗ್ರೆಸಿನ ಬಹು ದೊಡ್ಡ ಸಮಸ್ಯೆಯಾಗಿದೆ.

ಕಾಂಗ್ರೆಸಿನ ಕೆಲ ನಾಯಕರು, ಈ ವಿಷಯದಲ್ಲಿ ದೇಶದ ಭದ್ರತೆ, ಅಂತಾರಾಷ್ಟ್ರೀಯ ವಿಷಯ
ಅಥವಾ ದೇಶದ ಏಕತೆಯ ವಿಷಯವಿದೆ ಎನ್ನುವುದಕ್ಕಿಂತ ಹೆಚ್ಚಾಗಿ, ಆಪರೇಷನ್ ಸಿಂದೂರದ ಕ್ರೆಡಿಟ್ ಮೋದಿ ತೆಗೆದುಕೊಂಡರೆ ನಮಗೆಲ್ಲ ಸಮಸ್ಯೆಯಾಗುವುದೋ ಎನ್ನುವ ಭಾವನೆಯಲ್ಲಿ ಮಾತನಾಡುತ್ತಿರುವುದು ಸ್ಪಷ್ಟ. ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಈ ರೀತಿಯ ಕ್ರೆಡಿಟ್ ವಾರ್ ಸಾಮಾನ್ಯ.

ಆದರೆ ಇತ್ತೀಚಿನ ದಿನದಲ್ಲಿ ಪ್ರತಿಪಕ್ಷಗಳು ಬಿಜೆಪಿಯ ಬಗ್ಗೆ ಆಲೋಚಿಸುವುದನ್ನು ಬಿಟ್ಟು, ಮೋದಿ ಸುತ್ತಲೇ ಗಿರಕಿ ಹೊಡೆಯುತ್ತಿವೆ. ಪಕ್ಷಕ್ಕಿಂತ ಹೆಚ್ಚಾಗಿ ವ್ಯಕ್ತಿಯನ್ನು ಟೀಕಿಸುವ ಅಥವಾ ವೈಯಕ್ತಿಕ ಟೀಕೆಯ ಮೂಲಕ ಜನರನ್ನು ಡೈವರ್ಟ್ ಮಾಡಬಹುದು ಎನ್ನುವ ಆಲೋಚನೆಯೇ ಪ್ರತಿಪಕ್ಷಗಳ ಬಹುದೊಡ್ಡ ಹಿನ್ನಡೆ. ಆದರೆ ಕಾಂಗ್ರೆಸ್ ನಾಯಕರ ಈ ನಡೆ ಇದೇ ಮೊದಲಲ್ಲ.

ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸಿದ ದಿನದಿಂದಲೂ ಕಾಂಗ್ರೆಸಿನ ನಾಯಕರು ಮೋದಿ ಕೇಂದ್ರಿಕೃತ ಆಲೋಚನೆಯನ್ನು ಮಾಡುತ್ತಿದ್ದಾರೆ. ಅದು ಚುನಾವಣಾ ಪ್ರಚಾರ ವಿರಬಹುದು ಅಥವಾ ಕೇಂದ್ರ ಸರಕಾರದ ವಿಷಯದಲ್ಲಿರಬಹುದು. ಇದಕ್ಕಿಂತ ದೊಡ್ಡ ದುರಂತ ವೆಂದರೆ, ಕೇಂದ್ರ ಅಥವಾ ಮೋದಿ ನಾಯಕತ್ವವನ್ನು ಯಾರಾದರೂ ‘ಬೆಂಬಲಿಸಿದರು’ ಅದು ತಪ್ಪು ಎನ್ನುವ ಮನಸ್ಥಿತಿಗೆ ಕೆಲ ಕಾಂಗ್ರೆಸಿಗರು ಬಂದಿದ್ದಾರೆ.

ತೀರಾ ಇತ್ತೀಚಿನ ಉದಾಹರಣೆ ಎಂದರೆ, ಆಪರೇಷನ್ ಸಿಂದೂರದ ವಿಷಯದಲ್ಲಿ ಶಶಿ ತರೂರ್ ಅವರು ಕೇಂದ್ರ ಸರಕಾರದ ನಡೆಯನ್ನು ಬೆಂಬಲಿಸಿ ಮಾತನಾಡಿದರು. ಅದಕ್ಕೂ ಕೆಲ ತಿಂಗಳಿಂದ ಕಾಂಗ್ರೆಸಿನ ಹಲವು ತಪ್ಪುಗಳನ್ನು ಆಂತರಿಕವಾಗಿ ಹಾಗೂ ಬಹಿರಂಗವಾಗಿ ತೋರಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಈ ಕಾರಣಕ್ಕೆ ಅವರನ್ನು ‘ಸೈಡ್‌ಲೈನ್’ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ.

ಯಾವ ಹಂತಕ್ಕೆ ಬಂದಿದೆ ಎಂದರೆ, ಪಾಕಿಸ್ತಾನದ ವಿರುದ್ಧದ ದಾಳಿಯ ಬಗ್ಗೆ ವಿದೇಶಗಳಿಗೆ ಹೋಗುವ ನಿಯೋಗಕ್ಕೆ ಶಶಿ ತರೂರ್ ಅವರ ಹೆಸರನ್ನು ನೀಡದಿರುವ ತೀರ್ಮಾನಕ್ಕೆ ಕಾಂಗ್ರೆಸ್ ಮಾಡಿತ್ತು. ಇಡೀ ದೇಶದಲ್ಲಿ ಗಾಂಧಿ ಕುಟುಂಬದ ಹೊರತಾಗಿಯೂ ಯಾರಿಗೆ ಕ್ರೆಡಿಟ್ ಕೊಟ್ಟರೂ, ಅದನ್ನು ವಿರೋಧಿಸಬೇಕು ಎನ್ನುವ ಸ್ಥಿತಿ ತಲುಪಿರುವುದು ಕಾಂಗ್ರೆಸ್‌ನ ಇಂದಿನ ಸ್ಥಿತಿಗೆ ಕಾರಣ ಎಂದರೆ ತಪ್ಪಾಗುವುದಿಲ್ಲ.

ಹಾಗೆ ನೋಡಿದರೆ, ಮೋದಿ ವಿರುದ್ಧದ ಕಾಂಗ್ರೆಸಿಗರ ಈ ಟೀಕಾಸ್ತ್ರದಿಂದ ಅವರ ಪಕ್ಷಕ್ಕೆ ಬಹು ದೊಡ್ಡ ನಷ್ಟವಾಗಿರುವುದು ಇದೇ ಮೊದಲೇನಲ್ಲ. ಈ ಹಿಂದೆ 2014ರಲ್ಲಿ ‘ಚಾಯ್ ವಾಲಾ’ ಎಂದು ಟೀಕಿಸಿ ಬಹುದೊಡ್ಡ ಹೊಡೆತ ತಿಂದರು. 2019ರಲ್ಲಿಯೂ ಇದೇ ರೀತಿಯ ಹತ್ತಾರು ಟೀಕೆಗಳನ್ನು ಮೋದಿ ವಿರುದ್ಧ ಮಾಡಿಕೊಂಡೇ ಬಂದರು.

ಕಾಂಗ್ರೆಸಿನ ನಾಯಕರು ಮಾಡಿದ ಬಹುತೇಕ ಟೀಕೆಗಳನ್ನೇ ಮೋದಿ ಆಂಡ್ ಟೀಂ ‘ಚುನಾವಣಾ ಅಭಿಯಾನ’ವನ್ನಾಗಿ ಮಾಡಿಕೊಂಡಿರುವುದನ್ನು ಇಡೀ ದೇಶ ನೋಡಿದೆ. ಕಾಂಗ್ರೆಸಿನಲ್ಲಿ, ಗಾಂಧಿ ಕುಟುಂಬವನ್ನು ‘ಮೆಚ್ಚಿಸುವ’ ಭರದಲ್ಲಿ ಮೋದಿ ಸೆಂಟ್ರಿಕ್ ಟೀಕೆಗಳನ್ನು ಮಾಡಿಕೊಳ್ಳುವ ಮನಸ್ಥಿತಿಯ ಅನೇಕ ನಾಯಕರಿದ್ದಾರೆ. ಈ ಮನಸ್ಥಿತಿಯೇ ಕಾಂಗ್ರೆಸ್‌ಗೆ ಪ್ರತಿ ಚುನಾವಣೆ ವೇಳೆ ಮಾರಕವಾಗುತ್ತಿದೆ.

ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳನ್ನು ಹೊರತುಪಡಿಸಿ, ಇನ್ನುಳಿದ ರಾಜ್ಯಗಳಲ್ಲಿ ಅಸ್ತಿತ್ವದ ಹುಡುಕಾಟದಲ್ಲಿರುವ ಕಾಂಗ್ರೆಸ್ ನಾಯಕರು, ‘ಮೋದಿ’ ಸುತ್ತ ತಮ್ಮ ದಾಳಿಯನ್ನು ಸೀಮಿತ ಗೊಳಿಸದೇ ಬಿಜೆಪಿ ಪಕ್ಷದ ಲೋಪ ದೋಷಗಳನ್ನು ಎತ್ತಿ ತೋರಿಸಬೇಕಿದೆ. ಕೇಂದ್ರ ಸರಕಾರ ವೆಂದರೆ, ಕೇವಲ ಮೋದಿ ಎನ್ನುವ ಸ್ಥಿತಿಯನ್ನು ಸೃಷ್ಟಿಸುವ ಮೂಲಕ ಕಾಂಗ್ರೆಸ್ ಪಕ್ಷವೇ ಬಿಟ್ಟಿ ಪ್ರಚಾರವನ್ನು ಪರೋಕ್ಷವಾಗಿ ನೀಡುತ್ತಿದೆ.

ಹಾಗೆ ನೋಡಿದರೆ, ಕಾಂಗ್ರೆಸಿನ ಬಹುತೇಕ ನಾಯಕರು ಆಪರೇಷನ್ ಸಿಂದೂರವನ್ನು ವಿರೋಧಿ ಸಿದ್ದು ಮೋದಿ ‘ಕ್ರೆಡಿಟ್’ ಪಡೆಯುತ್ತಾರೆ ಎನ್ನುವ ಆತಂಕದಿಂದಲೇ ಹೊರತು ಇದರಲ್ಲಿ ಇನ್ಯಾವ ಉದ್ದೇಶವಿರಲಿಲ್ಲ. ಇನ್ನಾದರೂ ಮೋದಿಯನ್ನು ವಿರೋಧಿಸುವ ಭರದಲ್ಲಿ ದೇಶದ ಜನರಿಗೆ ‘ಕಿರಿಕಿರಿ’ಯಾಗುವ ಹೇಳಿಕೆಗಳನ್ನು ನೀಡುವುದನ್ನು ಬಿಡಬೇಕು. ಇದನ್ನು ಮಾಡದೇ, ಕಾಂಗ್ರೆಸಿನ ಅಸ್ತಿತ್ವ ಅಥವಾ ಗಾಂಧಿ ಕುಟುಂಬದ ಅಸ್ತಿತ್ವವನ್ನು ಉಳಿಸುವ ಕಾರಣಕ್ಕೆ, ಮೋದಿಯನ್ನೇ ಟೀಕಿಸುತ್ತಾ ಹೋದರೆ ಅದರ ನೇರ ಲಾಭ ಬಿಜೆಪಿಗೆ ಹೊರತು, ಕಾಂಗ್ರೆಸ್‌ಗಲ್ಲ ಎನ್ನುವುದನ್ನು ಇನ್ನು ಮುಂದಾದರೂ ನಾಯಕರು ಅರ್ಥ ಮಾಡಿಕೊಳ್ಳಬೇಕಿದೆ.