Ravi Sajangadde Column: ರಾಷ್ಟ್ರೀಯ ಏಕತೆಯ ಸರದಾರನ 150ನೇ ವರ್ಧಂತಿಯ ಸಂಭ್ರಮ
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ತುಂಡು ಗಳಾಗಿ ಹರಡಿಕೊಂಡಿದ್ದ, ಬಹುಮುಖಿ ಆಚಾರ-ವಿಚಾರಗಳ ರಾಜಸಂಸ್ಥಾನಗಳನ್ನು ಮತ್ತು ನವಾಬರ ಪ್ರಾಂತ್ಯಗಳನ್ನು ಭಾರತ ದೇಶದ ‘ಒಕ್ಕೂಟ ವ್ಯವಸ್ಥೆ’ಯೊಳಗೆ ಸೇರಿಸುವಲ್ಲಿ ಪಟೇಲರು ವಹಿಸಿದ ಪಾತ್ರ ನಿರ್ಣಾಯಕವಾದುದು. ಇಂದು (ಅಕ್ಟೋಬರ್ 31) ಈ ಯುಗಪುರುಷನ ಜನ್ಮದಿನ. 2014ರಿಂದ ಈ ದಿನವನ್ನು ಸಂದರ್ಭೋ ಚಿತವಾಗಿ ‘ರಾಷ್ಟ್ರೀಯ ಏಕತಾ ದಿನ’ವನ್ನಾಗಿ ದೇಶಾದ್ಯಂತ ಸಡಗರ-ಸಂಭ್ರಮದಿಂದ ಆಚರಿಸ ಲಾಗುತ್ತದೆ. ಈ ವರ್ಷ ಪಟೇಲರ 150ನೆಯ ಜನ್ಮದಿನ, ತನ್ನಿಮಿತ್ತ ಈ ನುಡಿನಮನ.
 
                                -
 Ashok Nayak
                            
                                Oct 31, 2025 7:06 AM
                                
                                Ashok Nayak
                            
                                Oct 31, 2025 7:06 AM
                            ನುಡಿನಮನ
ರವೀ ಸಜಂಗದ್ದೆ
ಸ್ವಾತಂತ್ರ್ಯೋತ್ತರ ಭಾರತದ ಮೊದಲ ಉಪಪ್ರಧಾನಿ ಎನಿಸಿಕೊಂಡು, ಕೇಂದ್ರ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡು ಆಧುನಿಕ ಭಾರತವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿ ದವರು ಸರ್ದಾರ್ ವಲ್ಲಭಭಾಯಿ ಪಟೇಲರು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ತುಂಡು ಗಳಾಗಿ ಹರಡಿಕೊಂಡಿದ್ದ, ಬಹುಮುಖಿ ಆಚಾರ-ವಿಚಾರಗಳ ರಾಜಸಂಸ್ಥಾನಗಳನ್ನು ಮತ್ತು ನವಾಬರ ಪ್ರಾಂತ್ಯಗಳನ್ನು ಭಾರತ ದೇಶದ ‘ಒಕ್ಕೂಟ ವ್ಯವಸ್ಥೆ’ಯೊಳಗೆ ಸೇರಿಸುವಲ್ಲಿ ಪಟೇಲರು ವಹಿಸಿದ ಪಾತ್ರ ನಿರ್ಣಾಯಕವಾದುದು. ಇಂದು (ಅಕ್ಟೋಬರ್ 31) ಈ ಯುಗಪುರುಷನ ಜನ್ಮದಿನ. 2014ರಿಂದ ಈ ದಿನವನ್ನು ಸಂದರ್ಭೋ ಚಿತವಾಗಿ ‘ರಾಷ್ಟ್ರೀಯ ಏಕತಾ ದಿನ’ವನ್ನಾಗಿ ದೇಶಾದ್ಯಂತ ಸಡಗರ-ಸಂಭ್ರಮದಿಂದ ಆಚರಿಸ ಲಾಗುತ್ತದೆ. ಈ ವರ್ಷ ಪಟೇಲರ 150ನೆಯ ಜನ್ಮದಿನ, ತನ್ನಿಮಿತ್ತ ಈ ನುಡಿನಮನ.
ಗುಜರಾತಿನ ನಡಿಯಾದ್ ಎಂಬಲ್ಲಿ, ಝಾವೇರ್ ಭಾಯಿ ಪಟೇಲ್ ಮತ್ತು ಲಾದ್ಭಾ ದಂಪತಿಯ ಆರು ಮಕ್ಕಳಲ್ಲಿ ಒಬ್ಬರಾಗಿ 1875ರಲ್ಲಿ ಜನಿಸಿದ ಪಟೇಲರು, ಆರಂಭಿಕ ಶಾಲಾ ಶಿಕ್ಷಣದ ನಂತರ ಉನ್ನತ ಶಿಕ್ಷಣಕ್ಕೆ ತೆರಳಿದ್ದು ಲಂಡನ್‌ಗೆ. ಅಲ್ಲಿ ಬ್ಯಾರಿಸ್ಟರ್ ಪದವಿಯನ್ನು ಪೂರ್ಣಗೊಳಿಸಿ ಭಾರತಕ್ಕೆ ವಾಪಸಾಗಿ ವಕೀಲಿ ವೃತ್ತಿಯನ್ನು ಆರಂಭಿಸಿದರು.
1928-29ರ ಕಾಲಘಟ್ಟದಲ್ಲಿ ಗುಜರಾತಿನ ಖೇಡಾ, ಬೊರ್ಸಾದ್, ಬರ್ಡೋಲಿ ಮುಂತಾದ ಪ್ರದೇಶಗಳ ರೈತರನ್ನು ಸಂಘಟಿಸಿ, ಅವರ ಮೇಲೆ ಹೇರಲಾಗಿದ್ದ ಕರಭಾರವನ್ನು ಹಿಂತೆಗೆದುಕೊಳ್ಳುವುದಕ್ಕೆ ಬ್ರಿಟಿಷರ ಮೇಲೆ ಒತ್ತಡ ಹೇರಲು ಅಹಿಂಸಾತ್ಮಕ ಚಳವಳಿಗೆ ಚಾಲನೆ ನೀಡಿದರು ಪಟೇಲರು. ಈ ಚಳವಳಿ ಯಶಸ್ವಿಯಾದ ಪರಿಣಾಮ ‘ರೈತ ನಾಯಕ’ನಾಗಿಯೂ ಗುರುತಿಸಿಕೊಂಡರು ಮತ್ತು ಈ ನಾಯಕತ್ವ ಗುಣಕ್ಕೆ ಮನ್ನಣೆಯಾಗಿ ‘ಸರ್ದಾರ್’ ಎಂಬ ಬಿರುದು ಪಟೇಲರ ಹೆಸರಿನ ಜತೆಗೆ ಸೇರಿಕೊಂಡಿತು!
ಮುಂದೆ ಕಾಂಗ್ರೆಸ್ ಪಕ್ಷವನ್ನು ಸೇರಿ ಅಲ್ಲಿನ ಹಿರಿಯ, ಅನುಭವಿ ನಾಯಕ ಎನಿಸಿಕೊಂಡ ಪಟೇಲರು 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಮುಂಚೂಣಿ ನಾಯಕರಾಗಿ ಹೊರ ಹೊಮ್ಮಿದರು. ಸ್ವಾತಂತ್ರ್ಯಾನಂತರದ ಆಡಳಿತಾತ್ಮಕ ಚೌಕಟ್ಟು ರೂಪಣೆ, ರಾಜಕೀಯ-ಸಾಮಾಜಿಕ ಏಕೀಕರಣ, ಸಂವಿಧಾನ ಕರಡು ರಚನೆ ಮುಂತಾದ ದಿಕ್ಸೂಚಿ ಯೋಜನೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿ, ದೇಶವನ್ನು ಸರ್ವರೀತಿಯಲ್ಲೂ ಒಗ್ಗೂಡಿಸಿದ ಧೀಮಂತ ಎಂದೇ ಚರಿತ್ರೆಯ ಪುಟಗಳಲ್ಲಿ ದಾಖಲಾದವರು ಸರ್ದಾರ್ ಪಟೇಲರು.
ಇದನ್ನೂ ಓದಿ: Ravi Sajangadde Column: ನನ್ನ ದನಿಗೆ ನಿನ್ನ ದನಿಯು...
ಅವರ ಈ ಕಾರ್ಯಯೋಜನೆಗಳ ವಿವರಗಳು ಕುತೂಹಲಕಾರಿಯಾಗಿಯೂ ರೋಮಾಂಚಕಾರಿ ಯಾಗಿಯೂ ಇವೆ: ಭಾರತವು ಸ್ವತಂತ್ರಗೊಂಡ ಸಂದರ್ಭದಲ್ಲಿ ದೇಶದ ಅರ್ಧದಷ್ಟು ಭೂಭಾಗವು 562 ವಿವಿಧ ರಾಜಪ್ರಭುತ್ವದ ಸಂಸ್ಥಾನಗಳಾಗಿ, ಇನ್ನುಳಿದ ಅರ್ಧಭಾಗವು ಬ್ರಿಟಿಷರ ಆಡಳಿತ ದಲ್ಲಿತ್ತು. ದೇಶ ಬಿಡುವ ಸಂದರ್ಭದಲ್ಲಿ ಬ್ರಿಟಿಷರು ಭಾರತ ಮತ್ತು ಪಾಕಿಸ್ತಾನದ ಮಧ್ಯೆ ರಕ್ತಸಿಕ್ತ ಗೆರೆಯನ್ನು ಅದಾಗಲೇ ಹಾಕಿಯಾಗಿತ್ತು!
ಭಾರತವನ್ನು ವಿಭಜಿಸಿ, ಮುಸ್ಲಿಮರಿಗೆ ಪ್ರತ್ಯೇಕ ಪಶ್ಚಿಮ ಮತ್ತು ಪೂರ್ವ ಪಾಕಿಸ್ತಾನ ಸೃಷ್ಟಿಸಿ, ರಾಜರುಗಳಿಗೆ ತಮ್ಮ ಸಂಸ್ಥಾನವನ್ನು ಭಾರತ ಅಥವಾ ಪಾಕಿಸ್ತಾನದೊಂದಿಗೆ ಸೇರಿಸಿಕೊಳ್ಳುವ ಅಥವಾ ಸ್ವತಂತ್ರವಾಗಿರುವ ಆಯ್ಕೆಯನ್ನು ಕೊಡಲಾಯಿತು. ಇಂಥ ಬಹುತೇಕರು, ಬ್ರಿಟಿಷ್ ಆಳ್ವಿಕೆಗೂ ಮುಂಚೆ ಇದ್ದ ರೀತಿಯಲ್ಲಿ ತಂತಮ್ಮ ಸಂಸ್ಥಾನಗಳ ಆಳ್ವಿಕೆಯನ್ನು ಸ್ವತಂತ್ರವಾಗಿ ಮುಂದುವರಿಸಲು ತಯಾರಾಗಿದ್ದರು.
ಭಾರತವು ಮತ್ತೊಮ್ಮೆ ಆಂತರಿಕ ಕಲಹಗಳಿಗೆ ಗುರಿಯಾಗುವಂಥ ಸಂದಿಗ್ಧ ಪರಿಸ್ಥಿತಿಯಲ್ಲಿತ್ತು. ಇದನ್ನು ನಿಭಾಯಿಸಲು ಪಟೇಲರು ಕಟಿಬದ್ಧರಾದರು; ದೇಶದ ಗೃಹಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು, ಕನಸಿನ ಅಖಂಡ ಭಾರತವನ್ನು ಕಟ್ಟುವ ಮಹತ್ಕಾರ್ಯದಲ್ಲಿ ತೊಡಗಿಸಿ ಕೊಂಡರು.
 
    
ಆದರೆ, ಹರಿದು ಹಂಚಿಹೋಗಿದ್ದ ಈ ಪ್ರಾಂತ್ಯಗಳನ್ನು ಒಗ್ಗೂಡಿಸುವುದು ಸುಲಭವಾಗಿರಲಿಲ್ಲ. ಈ ಕಷ್ಟಸಾಧ್ಯ ಹೊಣೆಯನ್ನು ಕಾರ್ಯಗತಗೊಳಿಸಲು ವಿ.ಪಿ.ಮೆನನ್ ಎಂಬ ದಕ್ಷ ಅಧಿಕಾರಿಯ ನೇತೃತ್ವದಲ್ಲಿ ಸಮರ್ಥ ಸಮಿತಿಯನ್ನು ರಚಿಸಿದರು. ದೇಶದ ಎಲ್ಲ ಸಂಸ್ಥಾನಗಳಿಗೂ ಅನ್ವಯವಾಗು ವಂಥ ‘ವಿಲೀನ ಪತ್ರ’ವನ್ನು ಸಿದ್ಧಪಡಿಸಿದ ಪಟೇಲರು, ದೇಶದ ಉದ್ದಗಲಕ್ಕೂ ಪರಿಕ್ರಮಿಸಲು ಶುರುವಿಟ್ಟುಕೊಂಡರು.
ಬ್ರಿಟಿಷರು ದೇಶವನ್ನು ಬಿಟ್ಟುಹೋದ ಮೇಲೆ ತಂತಮ್ಮ ಪ್ರಾಂತ್ಯವನ್ನು ಸ್ವತಂತ್ರವಾಗಿ ಆಳಿಕೊಂಡಿರಬಹುದು ಎಂಬ ಮನಸ್ಥಿತಿಯಲ್ಲಿದ್ದ ಅನೇಕ ರಾಜವಂಶಸ್ಥರಿಗೆ, ಪಟೇಲರ ಶಾಂತಿ ಸಂಧಾನ ಮತ್ತು ದೇಶವನ್ನು ಒಗ್ಗೂಡಿಸುವ ಪ್ರಯತ್ನಗಳು ಅಸಮಾಧಾನವನ್ನು ತಂದವು. ಇಂಥವರನ್ನು ದಾರಿಗೆ ತರಲು ಪಟೇಲರು ರಣತಂತ್ರವನ್ನು ಹೆಣೆದರು.
ಅದರ ಭಾಗವಾಗಿ, ‘ಮೊದಲು ಜೋಧಪುರ, ಜುನಾಗಢ, ತಿರುವಾಂಕೂರು, ಹೈದರಾಬಾದ್ ಮುಂತಾದ ಬೃಹತ್ ಸಂಸ್ಥಾನಗಳನ್ನು ಭಾರತ ಒಕ್ಕೂಟಕ್ಕೆ ಸೇರಿಕೊಳ್ಳುವುದಕ್ಕೆ ಒಪ್ಪಿಸಿದರೆ, ಮಿಕ್ಕ ಸಣ್ಣ ಸಂಸ್ಥಾನಗಳು ತಾವಾಗೇ ದಾರಿಗೆ ಬರುತ್ತವೆ’ ಎಂಬ ನಿಲುವಿನೊಂದಿಗೆ ಅಖಾಡಕ್ಕಿಳಿದರು, ಈ ಕಾರ್ಯದಲ್ಲಿ ಸಾಮ, ದಾನ, ಭೇದ, ದಂಡ ಹೀಗೆ ಚತುರೋಪಾಯಗಳನ್ನು ಪಟೇಲರು ಚಾಣಾಕ್ಷತೆ ಯಿಂದ ಬಳಸಿದರು.
ಪಟೇಲರು ಸಿದ್ಧಪಡಿಸಿದ್ದ ವಿಲೀನ ಪತ್ರಕ್ಕೆ ಮೊದಲಿಗೆ ಸಹಿಹಾಕಿದ್ದು ಅಂದಿನ ಪಟವರ್ಧನ್ ರಾಜವಂಶದ ಜಮಖಂಡಿ ಸಂಸ್ಥಾನದ ರಾಜರು. ಚಿತ್ಪಾವನ ಬ್ರಾಹ್ಮಣ ವಂಶಾವಳಿಯ ಈ ರಾಜ ಮನೆತನವು ‘ನಾವು ಭಾರತದೊಂದಿಗೆ ಹೆಮ್ಮೆಯಿಂದ ವಿಲೀನವಾಗಿದ್ದೇವೆ’ ಎಂಬ ಘೋಷಣೆ ಯೊಂದಿಗೆ ಇಡೀ ಭಾರತವನ್ನು ಒಗ್ಗೂಡಿಸುವ ಕಾರ್ಯಕ್ಕೆ ಚಾಲನೆ ನೀಡಿ ಬಲ ತುಂಬಿತು.
ಮೈಸೂರು ಸಂಸ್ಥಾನದ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರು ಈ ನಿಟ್ಟಿನಲ್ಲಿ ಎರಡನೆಯವರಾದರು. ದೇಶವನ್ನು ಒಗ್ಗೂಡಿಸಲು ನಿರಂತರ ಪರ್ಯಟನೆ ಮಾಡುತ್ತಿದ್ದ ಪಟೇಲರ ಬಳಕೆಗೆಂದು ತಮ್ಮ ಖಾಸಗಿ ವಿಮಾನವನ್ನು ಪೈಲಟ್ ಸಹಿತವಾಗಿ ಅವರು ಪಟೇಲರಿಗೆ ಒದಗಿಸಿ ದರು. ಈ ನೆರವನ್ನು ಪಟೇಲರು ಗೌರವಾದರದಿಂದ ಸ್ಮರಿಸಿದ್ದಾರೆ.
ಆದರೆ, ದಕ್ಷಿಣ ಭಾರತದಲ್ಲಿ ಬಹುಸಂಖ್ಯಾತ ಹಿಂದೂ ಜನಸಂಖ್ಯೆಯನ್ನು ಹೊಂದಿದ್ದ ಹೈದರಾ ಬಾದ್ ನವಾಬ ಮೀರ್ ಉಸ್ಮಾನ್ ಅಲಿಖಾನ್, ಭಾರತ ಒಕ್ಕೂಟವನ್ನು ಸೇರದೆ ಸ್ವತಂತ್ರವಾಗಿರಲು ನಿರ್ಧರಿಸಿದ್ದ. ಪರಿಸ್ಥಿತಿಯ ಗಂಭೀರತೆ ಅರಿತ ಪಟೇಲರು ನವಾಬನೊಂದಿಗೆ ಖುದ್ದಾಗಿ ಸಂಧಾನ ಕ್ಕಿಳಿದರು; ಅದಕ್ಕೆ ಆತ ಒಪ್ಪದಿದ್ದಾಗ ಮೇಜರ್ ಜನರಲ್ ಚೌಧರಿಯವರ ನೇತೃತ್ವದಲ್ಲಿ ‘ಆಪರೇಷನ್ ಪೋಲೋ’ ಹೆಸರಿನಲ್ಲಿ ಮಿಲಿಟರಿ ಕಾರ್ಯಾಚರಣೆಗೆ ಮುಂದಾದರು.
ಭಾರತೀಯ ಸೇನೆಯು ಹೈದರಾಬಾದನ್ನು ಎಲ್ಲಾ ಕಡೆಗಳಿಂದ ಸುತ್ತುವರಿಯಿತು. ಮೊದಲು ಪ್ರತಿ ರೋಧ ತೋರಿದ ಅಲಿ ಖಾನ್, 1948ರ ಸೆಪ್ಟೆಂಬರ್‌ನಲ್ಲಿ ಸೇನೆಗೆ ಶರಣಾಗಿ, ವಿಧಿಯಿಲ್ಲದೆ ವಿಲೀನ ಪತ್ರಕ್ಕೆ ಸಹಿ ಹಾಕಿದ. ಶ್ರೀ ಪದ್ಮನಾಭ ಸ್ವಾಮಿಯ ಹೆಸರಿನಲ್ಲಿ ರಾಜ್ಯಭಾರ ನಡೆಸುತ್ತಿದ್ದ ಸಂಪದ್ಭರಿತ ತಿರುವಾಂಕೂರು ಸಂಸ್ಥಾನವೂ ಸ್ವತಂತ್ರವಾಗಿರಲು ನಿರ್ಧರಿಸಿತು. ಇದನ್ನು ವಿರೋಧಿಸಿದ ಪಟೇಲರು ಹೋರಾಟ ನಡೆಸುವಂತೆ ಅಲ್ಲಿನ ದೇಶಪ್ರೇಮಿ ಕಾರ್ಯಕರ್ತರಿಗೆ ಕರೆ ನೀಡಿದರು. ಹೋರಾಟ ಹಿಂಸಾತ್ಮಕ ಸ್ವರೂಪವನ್ನು ಪಡೆದುಕೊಂಡು ಮಹಾರಾಜರು ಅನ್ಯಮಾರ್ಗ ವಿಲ್ಲದೆ ಭಾರತದೊಂದಿಗೆ ವಿಲೀನಕ್ಕೆ ಸಮ್ಮತಿಸಿದರು. ಉತ್ತರ ಭಾರತದಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನ ವಾಗಿರಲಿಲ್ಲ!
ಜೋಧಪುರದ ಮಹಾರಾಜ ಹನ್ವಂತ್ ಸಿಂಗ್‌ಗೆ ಪಾಕಿಸ್ತಾನದ ಮುಖ್ಯಸ್ಥ ಜಿನ್ನಾರಿಂದ ‘ನಮ್ಮ ದೇಶ ಸೇರಿಕೊಂಡರೆ ಕೇಳಿದ್ದು ಕೊಡುತ್ತೇವೆ’ ಎಂಬ ಆಮಿಷವಿತ್ತು. ಭೌಗೋಳಿಕವಾಗಿ ಪಾಕಿಸ್ತಾನಕ್ಕೆ ಸನಿಹದಲ್ಲಿದ್ದ ಜೋಧ್‌ಪುರದ ರಾಜನಿಗೆ ಸಂದಿಗ್ಧ ಪರಿಸ್ಥಿತಿ ಎದುರಾಯಿತು.
ಪಾಕಿಸ್ತಾನಕ್ಕೆ ಸೇರಿಕೊಳ್ಳುವುದನ್ನು ಅಲ್ಲಿನ ಜಾಗೀರ್‌ದಾರ್ ಸಮುದಾಯದವರು ವಿರೋಧಿಸಿದ್ದ ರಿಂದ ಗಲಭೆಗಳಾದವು. ಆ ವೇಳೆ ಸಂಧಾನಕ್ಕೆ ತೆರಳಿದ ವಿ.ಪಿ.ಮೆನನ್ ಮತ್ತು ಹನ್ವಂತ್ ಸಿಂಗ್ ನಡುವೆ ಮಾತಿನ ಚಕಮಕಿಯಾಗಿ ಪರಿಸ್ಥಿತಿ ಬಿಗಡಾಯಿಸಿತು; ಆದರೆ ಪಟೇಲರ ಸಮಯೋಚಿತ ಮಧ್ಯಸ್ಥಿಕೆಯಿಂದಾಗಿ ಪರಿಸ್ಥಿತಿ ತಣ್ಣಗಾಯಿತು, ವಿಲೀನ ಪತ್ರಕ್ಕೆ ಹನ್ವಂತ್ ಸಿಂಗ್ ಸಹಿಹಾಕಿದರು.
ಆ ವೇಳೆ ನೀಡಿದ ಆಶ್ವಾಸನೆಯಂತೆ, ಜೋಧ್‌ಪುರದಿಂದ ಕಾಥಿಯಾವಾಡಕ್ಕೆ ಆದ್ಯತೆಯ ಮೇರೆಗೆ ರೈಲು ಸಂಪರ್ಕವನ್ನೂ, ಯಥೇಚ್ಛವಾಗಿ ದವಸ-ಧಾನ್ಯಗಳನ್ನೂ ಒದಗಿಸಲಾಯಿತು. ಗುಜರಾತಿನ ಜುನಾಘಡದ ನವಾಬ ಮೊಹಮ್ಮದ್ ಮಹಬತ್ ಖಾನ್ ‘ಪಾಕಿಸ್ತಾನಕ್ಕೆ ಸೇರಿಕೊಳ್ಳುತ್ತೇನೆ’ ಎಂದು ಘೋಷಿಸಿ, ಆ ನಿಟ್ಟಿನಲ್ಲಿ ಮುಂದಾದ. ಶೇ.೮೦ಕ್ಕಿಂತ ಅಧಿಕ ಹಿಂದೂಗಳಿದ್ದ ಸಂಸ್ಥಾನವದು.
ಅದು ಪಾಕಿಸ್ತಾನಕ್ಕೆ ಸೇರುವುದು ಅಲ್ಲಿನ ಬಹುಸಂಖ್ಯಾತರಿಗೆ ಇಷ್ಟವಿರಲಿಲ್ಲ. ಪಟೇಲರು ಜುನಾ ಘಡಕ್ಕೆ ಸೇನೆಯನ್ನು ಕಳಿಸುವ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ದೂತರಿಂದ ಸಿಕ್ಕಿದ್ದೇ ತಡ, ನವಾಬನು ತನ್ನೆಲ್ಲ ಸಾಮಾನು-ಸರಂಜಾಮನ್ನು ಇಲ್ಲೇ ಬಿಟ್ಟು ಪಾಕಿಸ್ತಾನಕ್ಕೆ ಓಡಿದ. ಪಟೇಲರ ನೇತೃತ್ವ ಮತ್ತು ಸೇನೆಯ ಸಹಾಯದಿಂದ ಜುನಾಘಡದಲ್ಲಿ ಹಂಗಾಮಿ ಸರಕಾರ ಅಧಿಕಾರ ವಹಿಸಿಕೊಂಡಿತು.
1948ರ ಫೆಬ್ರವರಿಯಲ್ಲಿ ನಡೆದ ಜನಮತ ಸಂಗ್ರಹದಲ್ಲಿ ಅಲ್ಲಿನ ಶೇ.90ಕ್ಕೂ ಹೆಚ್ಚು ಜನರು ಭಾರತ ವನ್ನು ಸೇರುವ ಇಂಗಿತ ವ್ಯಕ್ತಪಡಿಸಿದರು. ಜೂನ್ ವೇಳೆ ಆ ಸಂಸ್ಥಾನವೂ ಭಾರತದ ಭಾಗವಾಯಿತು. ನಂತರ, ಪಟೇಲರ ನಿರಂತರ ಪ್ರಯತ್ನದ ಫಲವಾಗಿ ಮಣಿಪುರ, ಬರೋಡಾ, ಭೋಪಾಲ್ ಸಂಸ್ಥಾನ ಗಳೂ ಒಂದೊಂದಾಗಿ ಭಾರತದ ಒಕ್ಕೂಟವನ್ನು ಸೇರಿಕೊಂಡವು.
ಕಾಶ್ಮೀರದ ರಾಜಾ ಹರಿಸಿಂಗ್ ಯಾವುದೇ ಖಚಿತ ನಿರ್ಧಾರವನ್ನು ತೆಗೆದುಕೊಳ್ಳದ ಕಾರಣ ಅಲ್ಲಿ ಅನಿಶ್ಚಿತತೆ ಮುಂದುವರಿಯಿತು. ಕಾಶ್ಮೀರವನ್ನು ಕಬಳಿಸುವ ಹುನ್ನಾರವನ್ನು ಮೊದಲ ದಿನದಿಂದಲೇ ನಡೆಸಿದ್ದ ಪಾಕಿಸ್ತಾನ, ತನ್ನಲ್ಲಿ ಸೇರಿಕೊಳ್ಳುವಂತೆ ಹರಿಸಿಂಗ್ ಮೇಲೆ ರಾಜಕೀಯ ಒತ್ತಡವನ್ನು ತಂದಿತು. ಹರಿಸಿಂಗ್ ನಿರ್ಧಾರ ಪ್ರಕಟವಾಗುವುದಕ್ಕೂ ಮೊದಲೇ ಕಾಶ್ಮೀರ ಪ್ರದೇಶಕ್ಕೆ ಪಾಕಿಸ್ತಾನದ ಸೈನ್ಯ ನುಗ್ಗಿತು. ಇನ್ನು ತಡಮಾಡಿದರೆ ಅದು ಶ್ರೀನಗರವನ್ನೂ ಆಕ್ರಮಿಸಿಕೊಂಡು ಬಿಡುತ್ತದೆ ಎಂದರಿವಾಗಿ ರಾಜಾ ಹರಿಸಿಂಗ್ ವಿಲೀನ ಪತ್ರಕ್ಕೆ ಸಹಿಹಾಕುವುದಾಗಿ ಪಟೇಲರಿಗೆ ತಿಳಿಸಿದ. ನಾಲ್ಕೇ ದಿನದೊಳಗೆ ಪತ್ರಕ್ಕೆ ಸಹಿ ಬಿತ್ತು!
ಸೈನಿಕರಿಂದ ತುಂಬಿದ್ದ ಭಾರತೀಯ ವಾಯುಪಡೆಯ ವಿಮಾನಗಳು ಶ್ರೀನಗರದ ವಾಯು ನಿಲ್ದಾಣಕ್ಕೆ ಬಂದಿಳಿದವು. ಇದು ಕಾಶ್ಮೀರ ವಿಷಯದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಮೊದಲ ಯುದ್ಧ!
ಕೆಲ ದಿನಗಳಲ್ಲೇ ಪಾಕಿಸ್ತಾನದ ಪಡೆಗಳನ್ನು ಹಿಮ್ಮೆಟ್ಟಿಸಿದ ಭಾರತೀಯ ಸೇನೆಯು ಬಹುತೇಕ ಕಾಶ್ಮೀರವನ್ನು ಮರುವಶಪಡಿಸಿಕೊಂಡಿತು. ಆಗ ನಮ್ಮ ಸೇನೆಗೆ ಮುಕ್ತ ಅವಕಾಶವನ್ನು ಕೊಟ್ಟಿದ್ದಿ ದ್ದರೆ, ಪಾಕಿಸ್ತಾನದಿಂದ ಸಂಪೂರ್ಣ ಕಾಶ್ಮೀರವನ್ನು ಬಿಡಿಸಿಕೊಳ್ಳಬಹುದಿತ್ತೇನೋ! ಆದರೆ ಅಚ್ಚರಿ ಯೆಂಬಂತೆ ಅಂದಿನ ಪ್ರಧಾನಿ ನೆಹರು ಅವರು ಈ ಸಮಸ್ಯೆಯನ್ನು ಬಗೆಹರಿಸುವಂತೆ ವಿಶ್ವಸಂಸ್ಥೆಯ ಮೊರೆ ಹೋದರು.
ವಿಶ್ವಸಂಸ್ಥೆಯ ಅಸಂಬದ್ಧ ಆದೇಶದನ್ವಯ ಸೇನಾ ಕಾರ್ಯಾಚರಣೆ ಅಂದು ತಟಸ್ಥಗೊಂಡು ಕಾಶ್ಮೀರವು ಇನ್ನೂ ‘ಸಮಸ್ಯೆ’ಯಾಗಿಯೇ ಉಳಿದಿದೆ. ನೆಹರು ಅವರ ಹಸ್ತಕ್ಷೇಪವಾಗದೆ ಇದ್ದಿದ್ದರೆ, ಇತರೆ ಪ್ರಾಂತ್ಯಗಳ ಸಮಸ್ಯೆಯನ್ನು ಬಗೆಹರಿಸಿದಂತೆ ಪಟೇಲರು ಕಾಶ್ಮೀರ ಸಮಸ್ಯೆಯನ್ನೂ ಬಗೆಹರಿಸುತ್ತಿದ್ದರು. ಈಗ ಪಾಕ್ ವಶದಲ್ಲಿರುವ ಪ್ರದೇಶವೂ ಸೇರಿದಂತೆ ಒಂದಿಡೀ ಕಾಶ್ಮೀರವು ಭಾರತದ ಭಾಗವಾಗಿರುತ್ತಿತ್ತು.
ಆದರೆ ಹಾಗಾಗಲಿಲ್ಲ... ದೇಶದ ಇತಿಹಾಸದಲ್ಲಿ ಆಗಿಹೋಗಿರುವ ಕೆಲವೊಂದು ವ್ಯಕ್ತಿತ್ವಗಳನ್ನು ಹಗುರವಾಗಿ ಪರಿಗಣಿಸಲು ಸಾಧ್ಯವೇ ಇಲ್ಲ. ಅಂಥ ಮೇರು ವ್ಯಕ್ತಿತ್ವಗಳಲ್ಲಿ ಮುಂಚೂಣಿ ಯಲ್ಲಿರುವವರು ಸರ್ದಾರ್ ವಲ್ಲಭಭಾಯಿ ಪಟೇಲರು. 1991ರಲ್ಲಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ವನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಯಿತು.
ಭಾರತದ ಏಕತೆ ಮತ್ತು ಸಮಗ್ರತೆಯನ್ನು ದೇಶಪ್ರೇಮದ ಚೌಕಟ್ಟಿನ ಅಡಿಯಲ್ಲಿ ತಂದು, ‘ಅಖಂಡ ಭಾರತ’ದ ಪರಿಕಲ್ಪನೆಯನ್ನು ಸಾಕಾರವಾಗಿಸಿದ ಶ್ರೇಯಸ್ಸು ಪಟೇಲರಿಗೆ ಅರ್ಹವಾಗಿಯೇ ಸಲ್ಲುತ್ತದೆ. ಏಕೆಂದರೆ, ಅವರು ನವಭಾರತದ ನಿರ್ಮಾಣದ ರಾಯಭಾರಿ ಮತ್ತು ರೂವಾರಿ. ಇಂಥ ಚಾಣಾಕ್ಷ ‘ಲೋಹಮಾನವ’ನನ್ನು ಪಡೆದ ಭಾರತಮಾತೆಯೇ ಧನ್ಯಳು!
ಈಗಿರುವ ನಮ್ಮೆಲ್ಲರ ‘ಸದೃಢ ಅಸ್ತಿತ್ವ’ವೇ ಪಟೇಲರು ‘ಉಕ್ಕಿನ ಮನುಷ್ಯ’ ಎಂಬುದಕ್ಕೆ ಪ್ರಬಲ ಸಾಕ್ಷಿ. ನರ್ಮದಾ ನದಿಯ ತಟದಲ್ಲಿ 182 ಮೀಟರ್ ಎತ್ತರದ ಪಟೇಲರ ಪ್ರತಿಮೆಯನ್ನು ಪ್ರತಿ ಷ್ಠಾಪಿಸಲಾಗಿದೆ. ಮುಗುಳ್ನಗೆಯ ತಮ್ಮದೇ ಪ್ರತಿಮೆಗಿಂತ ಎತ್ತರದ ಹಾಗೂ ಜನಮಾನಸಕ್ಕೆ ಹತ್ತಿರ ವಿರುವ ವಲ್ಲಭಭಾಯಿ ಪಟೇಲರು ನಿಜಾರ್ಥದಲ್ಲಿ ಸರದಾರರು!
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)
 
            