Vishweshwar Bhat Column: ಸಿ.ಪಿ.ಎನ್. ಸಿಂಗ್ ನೆನಪು
ಸ್ವತಂತ್ರ ಭಾರತದ ಆರಂಭಿಕ ದಶಕಗಳಲ್ಲಿ ಪ್ರಮುಖ ದೇಶಗಳಲ್ಲಿ ರಾಯಭಾರಿಯಾಗಿ, ನಂತರದಲ್ಲಿ ಪ್ರಮುಖ ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಅವರು, ದೆಹಲಿಯ ರಾಜಕೀಯ ಕಾರಿಡಾರ್ ನಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದರು. ಸಿ.ಪಿ.ಎನ್. ಸಿಂಗ್ ಅವರು ಬಿಹಾರದ ಅತ್ಯಂತ ಪ್ರಭಾವಿ ಹಾಗೂ ಶ್ರೀಮಂತ ಜಮೀನ್ದಾರಿ ಕುಟುಂಬದಲ್ಲಿ ಜನ್ಮ ತಾಳಿದರು.
-
ಸಂಪಾದಕರ ಸದ್ಯಶೋಧನೆ
ಭಾರತೀಯ ರಾಜಕೀಯ, ರಾಜತಾಂತ್ರಿಕ ಹಾಗೂ ಆಡಳಿತಾತ್ಮಕ ಇತಿಹಾಸದಲ್ಲಿ ಸಿ.ಪಿ.ಎನ್. ಸಿಂಗ್ (ಚಂದೇಶ್ವರ ಪ್ರಸಾದ ನಾರಾಯಣ ಸಿಂಗ್) ಎನ್ನುವ ಹೆಸರು ಅತ್ಯಂತ ಗೌರವಾನ್ವಿತವಾದುದು.
ಸ್ವತಂತ್ರ ಭಾರತದ ಆರಂಭಿಕ ದಶಕಗಳಲ್ಲಿ ಪ್ರಮುಖ ದೇಶಗಳಲ್ಲಿ ರಾಯಭಾರಿಯಾಗಿ, ನಂತರದಲ್ಲಿ ಪ್ರಮುಖ ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಅವರು, ದೆಹಲಿಯ ರಾಜಕೀಯ ಕಾರಿಡಾರ್ ನಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದರು. ಸಿ.ಪಿ.ಎನ್. ಸಿಂಗ್ ಅವರು ಬಿಹಾರದ ಅತ್ಯಂತ ಪ್ರಭಾವಿ ಹಾಗೂ ಶ್ರೀಮಂತ ಜಮೀನ್ದಾರಿ ಕುಟುಂಬದಲ್ಲಿ ಜನ್ಮತಾಳಿದರು.
ಉನ್ನತ ಶಿಕ್ಷಣವನ್ನು ಪಡೆದಿದ್ದ ಅವರು, ಚಿಕ್ಕ ವಯಸ್ಸಿನಲ್ಲೇ ತಮ್ಮ ಜಾಣ್ಮೆ, ಗಂಭೀರ ವ್ಯಕ್ತಿತ್ವ ಮತ್ತು ಇಂಗ್ಲಿಷ್ ಭಾಷೆಯ ಮೇಲಿನ ಪ್ರಭುತ್ವದಿಂದ ದೇಶದ ಪ್ರಮುಖ ನಾಯಕರ ಗಮನ ಸೆಳೆದರು. ಬಿಹಾರ ಶಾಸನಸಭೆಯ ಸದಸ್ಯರಾಗುವ ಮೂಲಕ ಸಾರ್ವಜನಿಕ ಜೀವನ ಪ್ರವೇಶಿಸಿದ ಅವರು, ಬಿಹಾರ ವಿಶ್ವವಿದ್ಯಾಲಯದ ಕುಲಪತಿಗಳಾಗಿಯೂ ಸೇವೆ ಸಲ್ಲಿಸಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಕಾಣಿಕೆ ನೀಡಿದ್ದರು. ಸ್ವಾತಂತ್ರ್ಯದ ನಂತರ ಭಾರತದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರು ಅವರು ಸಿ.ಪಿ.ಎನ್. ಸಿಂಗ್ ಅವರ ಕೌಶಲವನ್ನು ಗುರುತಿಸಿ, 1949ರಲ್ಲಿ ನೇಪಾಳಕ್ಕೆ ಭಾರತದ ರಾಯಭಾರಿಯಾಗಿ ನೇಮಿಸಿದರು. ಆ ಸಮಯದಲ್ಲಿ ನೇಪಾಳದಲ್ಲಿ ರಾಣಾ ಆಡಳಿತ ವ್ಯವಸ್ಥೆ ಮತ್ತು ರಾಜ ತ್ರಿಭುವನ್ ನಡುವೆ ಭಾರಿ ಸಂಘರ್ಷ ನಡೆಯುತ್ತಿತ್ತು.
ಇದನ್ನೂ ಓದಿ: Vishweshwar Bhat Column: ಮೂರು ದೇಶಕ್ಕೆ ಸೇರಿದ ಒಂದು ದ್ವೀಪ
ನೇಪಾಳದ ರಾಜಕೀಯ ಬಿಕ್ಕಟ್ಟಿನ ಸಮಯದಲ್ಲಿ ಸಿ.ಪಿ.ಎನ್. ಸಿಂಗ್ ಅವರು ಭಾರತದ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವಲ್ಲಿ ಮತ್ತು ನೇಪಾಳದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೆ ರಾಜ ತ್ರಿಭುವನ್ ಅವರಿಗೆ ರಕ್ಷಣೆ ನೀಡುವಲ್ಲಿ ಅತ್ಯಂತ ಪ್ರಮುಖ ಹಾಗೂ ತಂತ್ರಗಾರಿಕೆಯ ಪಾತ್ರ ವಹಿಸಿದರು. ತದನಂತರ, 1950ರ ದಶಕದಲ್ಲಿ ಅವರು ಜಪಾನ್‌ಗೂ ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸಿ, ಭಾರತದ ವಿದೇಶಾಂಗ ನೀತಿಯನ್ನು ಬಲಪಡಿಸಿದರು.
ರಾಜತಾಂತ್ರಿಕ ಸೇವೆಗಳ ನಂತರ ಸಿ.ಪಿ.ಎನ್. ಸಿಂಗ್ ಅವರನ್ನು ಆಡಳಿತಾತ್ಮಕ ಕ್ಷೇತ್ರಕ್ಕೆ ತರಲಾ ಯಿತು. ಅವರು ಭಾರತದ ಪ್ರಮುಖ ರಾಜ್ಯಗಳಿಗೆ ರಾಜ್ಯಪಾಲರಾಗಿ ನಿಯೋಜನೆಗೊಂಡರು. ಪಂಜಾಬ್ ಮತ್ತು ಹರಿಯಾಣ ವಿಭಜನೆ ಹಾಗೂ ಗಡಿ ಸಂಘರ್ಷಗಳ ಸೂಕ್ಷ್ಮ ಅವಧಿಯಲ್ಲಿ ಅವರು ಪಂಜಾಬ್‌ನ ರಾಜ್ಯಪಾಲರಾಗಿ ಆಡಳಿತವನ್ನು ಚಾಣಾಕ್ಷತನದಿಂದ ನಿಭಾಯಿಸಿದರು.
ಇಂದಿರಾ ಗಾಂಧಿಯವರು ಮತ್ತೆ ಅಧಿಕಾರಕ್ಕೆ ಬಂದ ನಂತರ, ದೇಶದ ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದ ರಾಜ್ಯಪಾಲರನ್ನಾಗಿ ಸಿ.ಪಿ.ಎನ್. ಸಿಂಗ್ ಅವರನ್ನು ನೇಮಿಸಲಾಯಿತು. ಐದು ವರ್ಷಗಳ ಕಾಲ ಅತ್ಯಂತ ಯಶಸ್ವಿಯಾಗಿ ಆಡಳಿತ ನಡೆಸಿದ ಅವರು, ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರದ ನಡುವೆ ಜಾಣ್ಮೆಯ ಸೇತುವೆಯಾಗಿ ಕೆಲಸ ಮಾಡಿದರು. ಸಿ.ಪಿ.ಎನ್. ಸಿಂಗ್ ಅವರು ನೆಹರು ಕುಟುಂಬಕ್ಕೆ ಅತ್ಯಂತ ಹತ್ತಿರದ ಒಡನಾಡಿಯಾಗಿದ್ದರು.
ಪ್ರಧಾನಿ ಇಂದಿರಾ ಗಾಂಧಿ ಅವರ ಬಲಗೈ ಬಂಟನಾಗಿದ್ದ ಆರ್.ಕೆ. ಧವನ್ ಅವರಿಗೂ ಸಿ.ಪಿ.ಎನ್. ಸಿಂಗ್ ಅತ್ಯಂತ ಆತ್ಮೀಯರಾಗಿದ್ದರು. 1977ರಲ್ಲಿ ತುರ್ತು ಪರಿಸ್ಥಿತಿಯ ನಂತರ ನಡೆದ ಚುನಾವಣೆ ಯಲ್ಲಿ ಇಂದಿರಾ ಗಾಂಧಿ ಸೋತು, ಕಾಂಗ್ರೆಸ್ ಅಧಿಕಾರ ಕಳೆದುಕೊಂಡಾಗ, ಆರ್.ಕೆ. ಧವನ್ ಅವರಿಗೆ ನೆಲೆಸಲು ಸರಿಯಾದ ವಸತಿ ಇರಲಿಲ್ಲ. ಆ ಸಂಕಷ್ಟದ ಸಮಯದಲ್ಲಿ, ಸಿ.ಪಿ.ಎನ್. ಸಿಂಗ್ ಅವರು ಉದಾರ ಮನಸ್ಸಿನಿಂದ ದೆಹಲಿಯ ಅತ್ಯಂತ ದುಬಾರಿ ಮತ್ತು ಪ್ರಭಾವಿ ಎನಿಸಿದ 'ಗೊಲ್ಫ್ ಲಿಂಕ್ಸ್' ನಲ್ಲಿದ್ದ ತಮ್ಮ ಸ್ವಂತ ಬಂಗ್ಲೆಯ ಕೆಳಮಹಡಿಯನ್ನು ಧವನ್ ಅವರಿಗೆ ವಾಸಿಸಲು ಬಿಟ್ಟುಕೊಟ್ಟಿ ದ್ದರು!
ಧವನ್ ಅವರು ತಮ್ಮ ಕೊನೆಯುಸಿರಿನವರೆಗೂ ಅದೇ ಬಂಗ್ಲೆಯಲ್ಲಿ ವಾಸವಿದ್ದರು (ಧವನ್ ನಿಧನದ ನಂತರ ಈ ಬಂಗ್ಲೆಯ ಆಸ್ತಿಹಕ್ಕಿಗೆ ಸಂಬಂಧಿಸಿದಂತೆ ಸಿ.ಪಿ.ಎನ್. ಸಿಂಗ್ ಅವರ ಮಗಳು ಜಯಶ್ರೀ ಸಿಂಗ್ ಮತ್ತು ಧವನ್ ಪತ್ನಿ ಅಚಲಾ ಮೋಹನ್ ನಡುವೆ ಕಾನೂನು ಹೋರಾಟವೂ ನಡೆಯಿತು). ಸಿ.ಪಿ.ಎನ್. ಸಿಂಗ್ ವೈಯಕ್ತಿಕ ಹಾಗೂ ರಾಜಕೀಯ ಪರಂಪರೆಯನ್ನು ಅವರ ಕುಟುಂಬ ಮುಂದಕ್ಕೆ ಒಯ್ಯಿತು. ಅವರ ಕುಟುಂಬದ ಹಲವು ಸದಸ್ಯರು ಭಾರತೀಯ ರಾಜಕೀಯದಲ್ಲಿ ಸಕ್ರಿಯರಾದರು.
ಉತ್ತರ ಪ್ರದೇಶದ ಕುಶಿನಗರದ ಲೋಕಸಭಾ ಸದಸ್ಯರಾಗಿದ್ದ ಹಾಗೂ ಕೇಂದ್ರ ರಕ್ಷಣಾ ರಾಜ್ಯ ಸಚಿವ ರಾಗಿದ್ದ ಕುಂವರ್ ಸಿ.ಪಿ.ಎನ್. ಸಿಂಗ್ ಮತ್ತು ಅವರ ಮೊಮ್ಮಗ, ಕೇಂದ್ರ ಮಾಜಿ ಗೃಹ ರಾಜ್ಯ ಸಚಿವ ರಾಗಿದ್ದ ಆರ್.ಪಿ.ಎನ್. ಸಿಂಗ್ ಈ ರಾಜಮನೆತನ ಹಾಗೂ ರಾಜಕೀಯ ಪರಂಪರೆಯನ್ನೇ ಮುಂದುವರಿಸಿಕೊಂಡು ಬಂದಿದ್ದಾರೆ.