Lokesh Kayarga Column: ಡಿಜಿಟಲ್ ಯುಗದ ʼಡೆಡ್ಲಿʼ ಮಕ್ಕಳು !
ನಮ್ಮ ರಾಷ್ಟ್ರ ಆರ್ಥಿಕವಾಗಿ ಬಲಿಷ್ಠವಾಗಿರಬ ಹುದು. ನಮ್ಮ ಸೇನೆ ಬಲಶಾಲಿಯಾಗಿರ ಬಹುದು. ಆದರೆ ಸಮಾಜದ ಬುನಾದಿಯಾದ ಕುಟುಂಬ ವ್ಯವಸ್ಥೆ ಹಳಿ ತಪ್ಪಿದರೆ ಯಾರೂ ಅಂತಹ ದೇಶವನ್ನು ರಕ್ಷಿಸಲು ಸಾಧ್ಯವಿಲ್ಲ. ಇಡೀ ವಿಶ್ವದಲ್ಲಿಯೇ ಅತಿ ಹೆಚ್ಚಿನ ಕೌಟುಂಬಿಕ ಭದ್ರತೆ ಮತ್ತು ಸುರಕ್ಷತೆಗೆ ಹೆಸರಾದ ದೇಶದಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ಮಕ್ಕಳು ಹಂತಕರಾಗು ತ್ತಿದ್ದಾರೆ ಎಂದರೆ ಇದು ಅವರ ನೈತಿಕ ಅಧ:ಪತನವಲ್ಲ. ನಾವು ಕಟ್ಟಿದ ನಾಗರಿಕ ಸಮಾಜದ ಪತನ.
-
ಲೋಕಮತ
ನಾವು ಅಂಕಗಳ ಬೆನ್ನತ್ತಿ ಹೋಗುವ ರೇಸ್‌ನಲ್ಲಿ ಮಕ್ಕಳನ್ನು ‘ಸ್ಪರ್ಧಿ’ಗಳಾಗಿ ನೋಡುತ್ತಿದ್ದೇ ವೆಯೇ ಹೊರತು ಮನುಷ್ಯರನ್ನಾಗಿ ಅಲ್ಲ. ಮಕ್ಕಳಿಗೆ ಸಣ್ಣ ವಯಸ್ಸಿ ನಿಂದಲೇ ಸೋಲು, ತಿರಸ್ಕಾರ ಇಲ್ಲವೇ ನಿರಾಕರಣೆಯನ್ನು ಅರಗಿಸಿಕೊಳ್ಳುವ ಶಕ್ತಿ ಕುಂದುತ್ತಿದೆ. ಅನುಭೂತಿ, ಸಹಾನುಭೂತಿ ಎಂಬ ಗುಣಗಳು ಮೊಳಕೆಯಲ್ಲೇ ಕಮರುತ್ತಿವೆ. ಅವರ ಮಿದುಳು ವಿಷಯ ಸಂಗ್ರಹಣೆಯ ಭಂಡಾರವಾದರೂ ಹೃದಯ ಖಾಲಿಯಾಗುತ್ತಿದೆ.
ನೀಟ್‌ಗೆ ಓದಲು ಹೇಳಿದ ತಂದೆಯ ಗುಂಡಿಕ್ಕಿ ಕೊಲೆ.., ತಂದೆ, ತಾಯಿ, ತಂಗಿಯನ್ನು ಕೊಲೆ ಮಾಡಿ ಮನೆಯಲ್ಲೇ ಹೂತಿಟ್ಟ ಮಗ..., ಹಣಕ್ಕಾಗಿ ತಂದೆ-ತಾಯಿಯನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ ಟೆಕ್ಕಿ ಪುತ್ರ.., ಹೆತ್ತ ತಾಯಿಯ ಕೊಲೆ ಮಾಡಿ ಕತೆ ಕಟ್ಟಿದ ಪುತ್ರಿ..., ಕ್ಲಾಸ್ ರೂಮ್‌ನಲ್ಲಿಯೇ ಶಿಕ್ಷಕನ ಎದೆಗೆ ಗುದ್ದಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ..., ಸಹಪಾಠಿಯ ಕೊಂದು, ವಾರ್ಡನ್ ಸಹಿತ ಏಳು ಮಂದಿ ವಿರುದ್ಧ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಪರಾರಿಯಾದ 9ನೇ ತರಗತಿ ವಿದ್ಯಾರ್ಥಿ...
ಇವೆಲ್ಲವೂ ನಿನ್ನೆ, ಮೊನ್ನೆ, ಒಂದೆರಡು ವಾರಗಳ ಅವಧಿಯಲ್ಲಿ ನಾವು ಓದಿದ ಸುದ್ದಿಗಳು. ಮೊದಲಿನ ಒಂದು ಘಟನೆ ಬಿಟ್ಟರೆ ಉಳಿದ ಎಲ್ಲವೂ ನಮ್ಮದೇ ರಾಜ್ಯದಲ್ಲಿ ಘಟಿಸಿದ ವಿದ್ಯ ಮಾನಗಳು. ನೂರಾರು ಜನರನ್ನು ಬಲಿ ಪಡೆಯುತ್ತಿರುವ ಯುದ್ಧದ ವರದಿಗಳ ನಡುವೆ ಈ ಸುದ್ದಿಗಳು ನಮ್ಮನ್ನು ಹೆಚ್ಚು ಕಾಡುತ್ತವೆ. ಕಾರಣ ಇಲ್ಲಿ ವ್ಯಕ್ತಿಗಳಷ್ಟೇ ಕೊಲೆಯಾಗಿಲ್ಲ. ನಮ್ಮ ನಂಬಿಕೆ, ಸಂಸ್ಕಾರ, ಸಂಸ್ಕೃತಿ, ಕೌಟುಂಬಿಕ ಮೌಲ್ಯಗಳೂ ಕೊಲೆಯಾಗಿವೆ. ನಮ್ಮ ಮನೆಯಲ್ಲಿ, ನಾವು ಓದುವ/ಕಲಿಸುವ ಶಾಲೆಯಲ್ಲಿಯೇ ನಾವು ಅಸುರಕ್ಷಿತರಾಗುವುದು ಯಾವುದೇ ಯುದ್ಧಕ್ಕಿಂತ ಹೆಚ್ಚು ಆತಂಕದ ವಿಷಯ.
ಕುಟುಂಬ ಎಷ್ಟೇ ಸುಶಿಕ್ಷಿತವಿರಬಹುದು, ಅಪ್ಪ-ಅಮ್ಮ ಸಂಸ್ಕಾರದ ಪಾಠ ಹೇಳಿ ಕೊಟ್ಟಿರ ಬಹುದು. ಆದರೆ ಕ್ಷಣಿಕ ಆವೇಶ, ತಾಳ್ಮೆಗೆಟ್ಟ ವರ್ತನೆ ಹೆತ್ತವರನ್ನೇ ಸಾಯಿಸುವಷ್ಟರ ಮಟ್ಟಿಗೆ ಹೋಗುತ್ತದೆ ಎಂದರೆ ನಮ್ಮ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಗಂಭೀರ ಪ್ರಶ್ನೆಯನ್ನು ಮುಂದೆ ಇಟ್ಟಿವೆ. ನಮ್ಮ ರಾಷ್ಟ್ರ ಆರ್ಥಿಕವಾಗಿ ಬಲಿಷ್ಠವಾಗಿರಬ ಹುದು. ನಮ್ಮ ಸೇನೆ ಬಲಶಾಲಿಯಾಗಿರಬಹುದು. ಆದರೆ ಸಮಾಜದ ಬುನಾದಿಯಾದ ಕುಟುಂಬ ವ್ಯವಸ್ಥೆ ಹಳಿ ತಪ್ಪಿದರೆ ಯಾರೂ ಅಂತಹ ದೇಶವನ್ನು ರಕ್ಷಿಸಲು ಸಾಧ್ಯವಿಲ್ಲ. ಇಡೀ ವಿಶ್ವದಲ್ಲಿಯೇ ಅತಿ ಹೆಚ್ಚಿನ ಕೌಟುಂಬಿಕ ಭದ್ರತೆ ಮತ್ತು ಸುರಕ್ಷತೆಗೆ ಹೆಸರಾದ ದೇಶದಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ಮಕ್ಕಳು ಹಂತಕರಾಗುತ್ತಿದ್ದಾರೆ ಎಂದರೆ ಇದು ಅವರ ನೈತಿಕ ಅಧ:ಪತನವಲ್ಲ. ನಾವು ಕಟ್ಟಿದ ನಾಗರಿಕ ಸಮಾಜದ ಪತನ.
ಇದನ್ನೂ ಓದಿ: Lokesh Kaayarga Column: ಪ್ರವಾಸೋದ್ಯಮ ನಮ್ಮಲ್ಲೇಕೆ ʼಪ್ರಯಾಸೋದ್ಯಮʼ ?
ನೀಟ್ ಪರೀಕ್ಷೆಗೆ ಓದಲು ಮಗನನ್ನು ಒತ್ತಾಯಿಸುತ್ತಿದ್ದ ತಂದೆಯಲ್ಲಿ ‘ಕುಲೋದ್ಧಾರಕ’ನ ಭವಿಷ್ಯ ಬಿಟ್ಟರೆ ಬೇರೆ ಯಾವುದೇ ಉದ್ದೇಶವಿರಲಿಕ್ಕಿಲ್ಲ. ಆದರೆ ವಿದ್ಯಾರ್ಥಿಯ ಕುಟುಂಬ ಮತ್ತು ಸುತ್ತಲ ಸಮಾಜ ಅಂಕಗಳಿಕೆಯನ್ನೇ ಜೀವನದ ಉದ್ದೇಶವೆಂದು ಬಿಂಬಿಸುವ ಬದಲು ಅಂಕಗಳಿಗಿಂತ ಜೀವನದ ಮೌಲ್ಯ ದೊಡ್ಡದೆಂದು ಕಲಿಸಿ ಕೊಟ್ಟಿದ್ದರೆ ಈ ಪಾತಕ ನಡೆಯುತ್ತಿರಲಿಲ್ಲವೇನೋ ? ನಮ್ಮ ಮಕ್ಕಳ ಉದ್ಯೋಗ ಭವಿಷ್ಯದ ಬಗ್ಗೆಯೇ ಯೋಚಿಸು ತ್ತಾ ಅವರ ಮಿದುಳಿಗೆ ಪಠ್ಯದ ‘ಅರಿವು’ ತುಂಬುವ ಭರದಲ್ಲಿ, ನಮ್ಮ ಕೈಯಾರೆ ಅವರ ಹೃದಯದ ಸಂವೇದೆಗಳನ್ನು ಕಿತ್ತು ಹಾಕುತ್ತಿದ್ದೇವೆಯೇ ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಾಗಿದೆ. ಮಕ್ಕಳಲ್ಲಿ ಮನುಷ್ಯ ಸಹಜವಾದ ಪ್ರೀತಿ, ಬಂಧುತ್ವ, ಅಂತ:ಕರಣ, ಸಂವೇದನೆಗಳು ಬೆಳೆಯಲು ಅವಕಾಶ ಕೊಟ್ಟಿದ್ದರೆ, ಅವರ ಬಾಲ್ಯದ ಸಹಜ ಕುತೂಹಲದ ಪ್ರಶ್ನೆಗಳಿಗೆ ಕಿವಿಯಾಗಿದ್ದರೆ, ನಮ್ಮ ಬೆಚ್ಚನೆಯ ಅಪ್ಪುಗೆಯಲ್ಲಿ ಬಂಧಿಸಿ ನೆನಪುಗಳನ್ನು ಶೇಖರಿಸಿ ಕೊಡುತ್ತಿದ್ದರೆ ಇವರಲ್ಲಿ ಕೆಲವರಾದರೂ ಹಂತಕರಾಗುತ್ತಿರಲಿಲ್ಲ.
ಒಂದು ಕಾಲದಲ್ಲಿ ಮನೆಗಳು ಸಂಸ್ಕಾರದ ಪಾಠಶಾಲೆಗಳಾಗಿದ್ದವು, ಶಾಲೆಗಳು ಜ್ಞಾನದ ದೇಗುಲಗಳಾಗಿದ್ದವು. ಆದರೆ ಈ ಪವಿತ್ರ ಆವರಣಗಳು ಇಂದು ರಕ್ತಸಿಕ್ತವಾಗುತ್ತಿರುವುದು ನಮ್ಮ ಸಮಾಜದ ‘ಮಾನಸಿಕ ಆರೋಗ್ಯ’ ಕೆಟ್ಟಿರುವುದಕ್ಕೆ ಸಾಕ್ಷಿ. ಉದ್ಯೋಗಕ್ಕಾಗಿ ಅಂಕ ಗಳನ್ನು ಬೆನ್ನತ್ತಲು ಪ್ರೇರೇಪಿಸುವ ಶಿಕ್ಷಣ ವ್ಯವಸ್ಥೆ ಸಂವೇದನಾರಹಿತ ನವಪೀಳಿಗೆ ಯನ್ನು ಹುಟ್ಟು ಹಾಕುತ್ತಿದೆ. ಇದು ನಮ್ಮ ಸಮಾಜಕ್ಕೆ ಮಾತ್ರವಲ್ಲ, ರಾಷ್ಟ್ರದ ಪ್ರಗತಿಗೂ ಮಾರಕ.
ಹೈಸ್ಕೂಲ್ ವಿದ್ಯಾರ್ಥಿಯೊಬ್ಬನ ಏಟಿಗೆ ಕ್ಲಾಸ್ ರೂಮ್‌ನಲ್ಲಿಯೇ ಕುಸಿದು ಬಿದ್ದ ಶಿಕ್ಷಕ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಕುಸಿದಿರುವ ಮೌಲ್ಯಗಳ ಸಂಕೇತ. ಹಿಂದೆ ಗುರು-ಶಿಷ್ಯರ ನಡುವೆ ಇದ್ದ ಪವಿತ್ರ ಸಂಬಂಧ ಇಂದು ‘ಸೇವಕ-ಗ್ರಾಹಕ’ನ ಸಂಬಂಧವಾಗಿ ಬದಲಾಗಿದೆ. ಸಂಬಳಕ್ಕಾಗಿ ದುಡಿಯುವ ಇತರ ನೌಕರ ವರ್ಗ ಮತ್ತು ಶಿಕ್ಷಕರ ನಡುವೆ ಇಂದಿನ ಸಮಾಜ ಯಾವುದೇ ಭಿನ್ನತೆ ಕಾಣುತ್ತಿಲ್ಲ. ಲಕ್ಷಗಟ್ಟಲೆ ಫೀಜು ಕೊಟ್ಟು ಶಾಲೆ/ಕಾಲೇಜು ಸೇರಿದ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲೂ ತಮ್ಮ ದುಡ್ಡಿಗೆ ತಕ್ಕ ಗೌರವ, ಪ್ರತಿಫಲ ಅಪೇಕ್ಷಿಸು ತ್ತಿದ್ದಾರೆ. ಪೋಷಕರಲ್ಲಿ, ವಿದ್ಯಾರ್ಥಿಗಳಲ್ಲಿ ತಮ್ಮ ಹಕ್ಕುಗಳ ಅರಿವಿದೆ. ಆದರೆ ಕನಿಷ್ಠ ಜವಾಬ್ದಾರಿಯ ಅರಿವು ಕಡಿಮೆಯಾಗಿದೆ.
ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆಯ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಈಗಿನ ಹೊಸ ಪ್ರವೃತ್ತಿಯೆಂದರೆ, ಈ ಒತ್ತಡವನ್ನು ತಮ್ಮನ್ನು ನಿಯಂತ್ರಿಸುವವರ (ಪೋಷಕರು ಅಥವಾ ಶಿಕ್ಷಕರು) ಮೇಲೆ ಹಿಂಸೆಯ ರೂಪ ದಲ್ಲಿ ಹೊರ ಹಾಕುವುದು. ನೀಟ್‌ಗಾಗಿ ಓದಲು ಹೇಳಿದ ತಂದೆಯ ಕೊಲೆಯು ಕೇವಲ ಒಂದು ಕ್ರಿಮಿನಲ್ ಪ್ರಕರಣವಲ್ಲ. ಇದು Academic Burnout ನ ಪರಮಾವಧಿ. ಒಬ್ಬ ವಿದ್ಯಾರ್ಥಿ ತನ್ನ ಹೆತ್ತವರನ್ನೇ ಕೊಲ್ಲುವ ಹಂತಕ್ಕೆ ಹೋಗುತ್ತಾನೆ ಎಂದರೆ, ಅವನ ಮನಸ್ಸಿ ನಲ್ಲಿ ಆ ಪರೀಕ್ಷೆಯ ಬಗ್ಗೆ ಎಷ್ಟು ಭಯ ಮತ್ತು ದ್ವೇಷ ತುಂಬಿರಬಹುದು ಎಂಬುದನ್ನು ನಾವು ಊಹಿಸಬೇಕು. ಇಲ್ಲಿ ತಂದೆ ಕೇವಲ ವ್ಯಕ್ತಿಯಲ್ಲ, ಆ ವಿದ್ಯಾರ್ಥಿಯ ಪಾಲಿಗೆ ಆತ ಒತ್ತಡದ ಸಂಕೇತ.
ಒಬ್ಬ ಸುಶಿಕ್ಷಿತ ಸಾಫ್ಟ್‌ವೇರ್ ಇಂಜಿನಿಯರ್ ತನ್ನನ್ನು ಕಷ್ಟಪಟ್ಟು ಬೆಳೆಸಿ, ಓದಿಸಿ ಜೀವನ ದಲ್ಲಿ ಯಶಸ್ಸಿನ ದಾರಿ ತೋರಿಸಿದ ವೃದ್ಧ ಮಾತಾಪಿತರನ್ನು ಬರ್ಬರವಾಗಿ ಸಾಯಿಸುವು ದನ್ನು ಕಲ್ಪಿಸಕೊಳ್ಳಲೂ ಸಾಧ್ಯವಿಲ್ಲ. ತಾಂತ್ರಿಕವಾಗಿ ಜಗತ್ತಿನೊಂದಿಗೆ ಸಂಪರ್ಕದಲ್ಲಿರುವ ವ್ಯಕ್ತಿಗಳು ಭಾವನಾತ್ಮಕವಾಗಿ ಒಂಟಿಯಾಗುತ್ತಿದ್ದಾರೆ. ಉದ್ಯೋಗದ ಅಭದ್ರತೆ, ಆರ್ಥಿಕ ಮುಗ್ಗಟ್ಟು , ಡಿಜಿಟಲ್ ಇಲ್ಲವೇ ಮಾದಕ ದ್ರವ್ಯ, ಕುಡಿತದ ವ್ಯಸನಗಳು ಯುವ ವರ್ಗವನ್ನು ಸಮಾಜ ಕಂಟಕರನ್ನಾಗಿ ರೂಪಿಸುತ್ತಿವೆ.
ತಾಂತ್ರಿಕವಾಗಿ ಹೊಸ ಬದಲಾವಣೆಗಳಿಗೆ ಒಗ್ಗಿಕೊಂಡ ನಮ್ಮ ಬದುಕು ನಮಗರಿವಿಲ್ಲ ದಂತೆಯೇ ನಮ್ಮ ಮಕ್ಕಳನ್ನು ನಮ್ಮಿಂದ ದೂರ ಮಾಡಿದೆ. ಪೋಷಕರ ಕಣ್ಣು ಸದಾ ಮೊಬೈಲ್‌ನತ್ತ ನೆಟ್ಟಿದ್ದರೆ ಮಕ್ಕಳು ರೀಲ್ಸ್, ಶಾರ್ಟ್ ವಿಡಿಯೋಗಳು ಮತ್ತು ಗೇಮ್‌ಗಳಿಂದ ಸಿಗುವ ತಕ್ಷಣದ ಸಂತೋಷಕ್ಕೆ ಒಗ್ಗಿಕೊಂಡಿದ್ದಾರೆ. ತಜ್ಞರ ಪ್ರಕಾರ ಯಾವುದಾದರೂ ವಿಷಯದಲ್ಲಿ ವಿಳಂಬವಾದರೆ ಅಥವಾ ಯಾರಾದರೂ ತಡೆದರೆ ಅವರ ಮೆದುಳು ತಕ್ಷಣವೇ ತೀವ್ರ ಕೋಪದ ಸಂಕೇತಗಳನ್ನು ರವಾನಿಸುತ್ತದೆ. ಈ ಡೋಪಮೈನ್ ಚಕ್ರ (Dopamine Loop) ನಮ್ಮ ಮಕ್ಕಳ ಪಾಲಿಗೆ ಸೈಲೆಂಟ್ ಕಿಲ್ಲರ್‌ಗಳಾಗಿವೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿಗಳ ಪ್ರಕಾರ, ಇತ್ತೀಚೆಗೆ ಭಾರತದಲ್ಲಿ ‘ಕ್ಷಣಿಕ ಆವೇಶ’ ಅಥವಾ ‘ಕ್ಷುಲ್ಲಕ ಕಾರಣ’ಗಳಿಂದ ನಡೆಯುವ ಕೊಲೆಗಳ ಸಂಖ್ಯೆ ಏರುತ್ತಿದೆ. ಹಾರ್ನ್ ಮಾಡಿದ, ಓವರ್‌ಟೇಕ್ ಮಾಡಿದ, ಮುಂದಕ್ಕೆ ಸಾಗಲು ಬಿಡಲಿಲ್ಲ ಎಂಬಿತ್ಯಾದಿ ಕಾರಣಗಳಿಗೆ ನಡೆಯುವ ರೋಡ್ ರೇಜ್ ಘಟನೆಗಳು ಇಂದು ತೀರಾ ಸಾಮಾನ್ಯವಾಗಿವೆ. ಇವುಗಳಲ್ಲಿ ಎಷ್ಟೋ ಘಟನೆಗಳು ಕೊಲೆಯಲ್ಲಿ ಪರ್ಯಾವಸಾನಗೊಂಡಿವೆ. ಇವೆಲ್ಲವೂ ‘ಕ್ಷಣಿಕ’ ಆವೇಶದ ಕೃತ್ಯಗಳು. ಕಳೆದ ಒಂದು ದಶಕದಲ್ಲಿ 16 ರಿಂದ 18 ವರ್ಷದೊಳಗಿನ ಯುವಕರು ಕ್ಷಣಿಕ ಆವೇಶದಲ್ಲಿ ಎಸಗಿದ ಗಂಭೀರ ಅಪರಾಧಗಳ ಪ್ರಮಾಣದಲ್ಲಿ ಶೇ. 20 ರಷ್ಟು ಏರಿಕೆ ಕಂಡುಬಂದಿದೆ.
ಕೂಡು ಕುಟುಂಬದ ಬೇಲಿ ದಾಟಿ, ತಮ್ಮದೇ ಗೂಡು ಕಟ್ಟಿಕೊಂಡ ಕುಟುಂಬ ಈಗ ಅಜ್ಜ-ಅಜ್ಜಿಯರನ್ನೂ ದೂರವಿಟ್ಟು ಅಣುವಿನಿಂದ ಪರಮಾಣುವಿನತ್ತ ಸಾಗಿದೆ. ಹಿರಿಯರ ಮಾರ್ಗದರ್ಶನವಿಲ್ಲದ, ಕೇವಲ ಪೋಷಕರು ಮತ್ತು ಮಕ್ಕಳಿರುವ ಮನೆಗಳಲ್ಲಿ ಮಾತಿನ ಸಂಘರ್ಷಗಳು ನಡೆದಾಗ ಮಧ್ಯಪ್ರವೇಶಿಸಿ ಸರಿಪಡಿಸುವವರು ಯಾರೂ ಇರುವುದಿಲ್ಲ. ಕೌಟುಂಬಿಕ ತಾಕಲಾಟಗಳು ಎದುರಾದಾಗ ಅನುಭವದ ಮಾತುಗಳಿಂದ ತಿಳಿ ಹೇಳುವವ ರಿಲ್ಲ. ನಮಗೆ ವಿಜ್ಞಾನ-ತಂತ್ರಜ್ಞಾನ, ಜಗತ್ತಿನ ವಿದ್ಯಮಾನಗಳೆಲ್ಲವೂ ಗೊತ್ತು. ಆದರೆ ಕೋಪ ಬಂದಾಗ ಏನು ಮಾಡಬೇಕು? ಬೇಸರವಾದಾಗ ಯಾರ ಬಳಿ ಹೇಳಿಕೊಳ್ಳ ಬೇಕು? ಎಂಬ ‘ಭಾವನಾತ್ಮಕ ನಿರ್ವಹಣೆ’ ತಿಳಿದಿಲ್ಲ. ಕಣ್ಣೀರು ಒರೆಸಬೇಕಿದ್ದ ಬಂಧುವರ್ಗ ವೂ ಜತೆಗಿಲ್ಲ.
ಮೂವರು, ನಾಲ್ವರಿದ್ದ ಅನೇಕ ಕುಟುಂಬಗಳು ಈಗ ಇಬ್ಬರಿಗೆ ಸೀಮಿತವಾಗುತ್ತಿವೆ. ಸಿಂಗಲ್ ಪೇರೆಂಟಿಂಗ್ ಭಾರತದಲ್ಲೂ ಸಾಮಾನ್ಯ ಸಂಗತಿಯಾಗಿದೆ. ತಾಯಿ ಅಥವಾ ತಂದೆ ಪೈಕಿ ಒಬ್ಬರ ಆಸರೆಯನ್ನಷ್ಟೇ ಪಡೆದು ದೊಡ್ಡವರಾದ ಮಕ್ಕಳು ಸ್ವಾಭಿಮಾನದ ಬದುಕು ರೂಪಿಸಿಕೊಂಡ ಉದಾಹರಣೆಗಳಿವೆ. ಆದರೆ ಒಂದೇ ಮನೆಯಲ್ಲಿ ವಾಸವಿದ್ದರೂ ಪ್ರತ್ಯೇಕ ಕೊಠಡಿಗಳಲ್ಲಿ ಮಲಗುವ, ಹಾವು ಮುಂಗುಸಿಗಳಂತೆ ಸದಾ ಕಿತ್ತಾಡುವ ದಂಪತಿ ಮಧ್ಯೆ ಬೆಳೆದ ಮಕ್ಕಳು ತಮ್ಮ ಅಸಹನೆ ಮತ್ತು ಕೋಪವನ್ನು ಹೊರಗೆ ತೋರಿಸಲಾರಂಭಿಸುತ್ತವೆ. ಬಾಲಾಪರಾಧಿಗಳ ಹಿನ್ನೆಲೆ ಕೆದಕುತ್ತಾ ಹೋದರೆ ಬಹುತೇಕರ ವಿಷಯದಲ್ಲಿ ಅವರ ಪೋಷಕರ ನಡುವೆ ಹೊಂದಾಣಿಕೆ ಸಮಸ್ಯೆ ಇರುವುದು ಕಂಡು ಬರುತ್ತದೆ.
ಹಿಂದೆ ಎಲ್ಲವೂ ಸರಿ ಇತ್ತೆಂದು ಇದರ ಅರ್ಥವಲ್ಲ. ಕೂಡು ಕುಟುಂಬವಿದ್ದಾಗಲೂ ಎಲ್ಲರಿಗೂ ‘ಭಾವನಾತ್ಮಕ ಆಸರೆ’ ಸಿಗುತ್ತಿರಲಿಲ್ಲ. ಆದರೆ ಸುತ್ತಲಿನ ಪರಿಸರದಲ್ಲಿ ನಾವು ಒಂದಾಗಲು ಸಾಧ್ಯವಿತ್ತು. ನಾವು ಓದುತ್ತಿದ್ದ ಚಂದಮಾಮ ಕಥೆಗಳು, ಕಥೆ, ಕಾದಂಬರಿ, ಧಾರಾವಾಹಿಗಳಲ್ಲಿ, ರಾಮಾಯಣ, ಮಹಾಭಾರತದ ಪಾತ್ರಗಳಲ್ಲಿ, ಯಕ್ಷಗಾನ, ನಾಟಕ, ಸಿನಿಮಾದ ತುಣುಕುಗಳಲ್ಲಿ ನಮ್ಮ ಸಂವೇದನೆಗಳು ಮರು ಹುಟ್ಟು ಪಡೆಯುತ್ತಿದ್ದವು. ಡಾ. ರಾಜ್‌ಕುಮಾರ್ ಅವರ ಸಿನಿಮಾದ ಒಂದು ಪಾತ್ರ, ಒಂದು ಸನ್ನಿವೇಶ ನಮ್ಮ ಮನಸ್ಸನ್ನು ಇನ್ನಷ್ಟು ಆರ್ದ್ರಗೊಳಿಸುತ್ತಿದ್ದವು. ಆದರೆ ಇಂದಿನ ಸಿನಿಮಾಗಳು, ಟಿವಿಯಲ್ಲಿ ಬರುವ ಧಾರಾವಾಹಿಗಳು, ಮಕ್ಕಳ ಕಾರ್ಟೂನ್‌ಗಳು ನಮ್ಮ ಮನಸ್ಸನ್ನು ಕದಡಿ ವಿಕ್ಷಿಪ್ತ ಮತ್ತು ಸಂಕ್ಷಿಪ್ತಗೊಳಿಸುತ್ತಿವೆಯೇ ಹೊರತು ಪ್ರಫುಲ್ಲಗೊಳಿಸುತ್ತಿಲ್ಲ.
ಮನೋವೈದ್ಯರ ಪ್ರಕಾರ, ಇದು ಕೇವಲ ಅಪರಾಧವಲ್ಲ, ಇದೊಂದು ಸಾಮಾಜಿಕ ತುರ್ತು ಸ್ಥಿತಿ. ನಾವು ಅಂಕಗಳ ಬೆನ್ನತ್ತಿ ಹೋಗುವ ರೇಸ್‌ನಲ್ಲಿ ಮಕ್ಕಳನ್ನು ‘ಸ್ಪರ್ಧಿ’ಗಳಾಗಿ ನೋಡು ತ್ತಿದ್ದೇವೆಯೇ ಹೊರತು ಮನುಷ್ಯರನ್ನಾಗಿ ಅಲ್ಲ. ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಸೋಲು, ತಿರಸ್ಕಾರ ಇಲ್ಲವೇ ನಿರಾಕರಣೆಯನ್ನು ಅರಗಿಸಿಕೊಳ್ಳುವ ಶಕ್ತಿ ಕುಂದುತ್ತಿದೆ. ಅನುಭೂತಿ, ಸಹಾನುಭೂತಿ ಎಂಬ ಗುಣಗಳು ಮೊಳಕೆಯಲ್ಲೇ ಕಮರುತ್ತಿವೆ. ಅವರ ಮಿದುಳು ವಿಷಯ ಸಂಗ್ರಹಣೆಯ ಭಂಡಾರವಾದರೂ ಹೃದಯ ಖಾಲಿಯಾಗುತ್ತಿದೆ. ಭಾವನೆಗಳನ್ನು ನಿರ್ವಹಿಸುವ ಕೌಶಲವನ್ನು ಹೃದಯ ಮತ್ತು ಮಿದುಳು ಜತೆಯಾಗಿ ನಿರ್ವಹಿಸಬೇಕು. ಆದರೆ ಹೆಚ್ಚುತ್ತಿರುವ ಯುವಜನರ ಅಸಹನೆ (Impulse Control Disorder ) ಸಮಾಜದ ಶಾಂತಿಗೆ ಧಕ್ಕೆ ತರುತ್ತಿದೆ.
ಸಮಾಜದ ಈ ರೋಗಕ್ಕೆ ಜೈಲುಗಳು ಮದ್ದಲ್ಲ, ಬದಲಾಗಿ ನಮ್ಮ ಮನೆಗಳ ಸಂಸ್ಕಾರ ಮತ್ತು ಶಾಲೆಗಳ ಮಾನವೀಯ ಶಿಕ್ಷಣವೇ ಮದ್ದು. ಹೂವಿನಂತಹ ಮನಸ್ಸುಗಳು ಕಲ್ಲಿನಂತಾಗುವ ಮುನ್ನ ನಾವು ಎಚ್ಚೆತ್ತುಕೊಳ್ಳಬೇಕಿದೆ. ಸಮಾಜವು ತನ್ನ ಮೂಲ ಮೌಲ್ಯಗಳಿಗೆ ಮರಳ ದಿದ್ದರೆ, ನಾವು ಯಂತ್ರಗಳನ್ನು ಸೃಷ್ಟಿಸಬಹುದೇ ಹೊರತು ಮಾನವರನ್ನಲ್ಲ. ಆರಂಭ ದಲ್ಲಿ ಉಲ್ಲೇಖಿಸಿದ ಪ್ರತಿ ಘಟನೆಯೂ ನಮಗೆ ಎಚ್ಚರಿಕೆಯ ಗಂಟೆ. ಇವು ಮನೆ ಮನೆಯ ದುರಂತ ಕಥೆಗಳಾಗುವ ಮುನ್ನ ಪ್ರೀತಿ, ಕರುಣೆ ಮತ್ತು ಪರಸ್ಪರ ಗೌರವದ ಆಧಾರದ ಮೇಲೆ ಸಮಾಜವನ್ನು ಕಟ್ಟುವ ಬಗ್ಗೆ ನಾವು ಗಂಭೀರ ಚಿಂತನೆ ನಡೆಸಬೇಕು. ಇದೊಂದೇ ಈಗ ಉಳಿದಿರುವ ದಾರಿ.