Lokesh Kaayarga Column: ಪ್ರವಾಸೋದ್ಯಮ ನಮ್ಮಲ್ಲೇಕೆ ʼಪ್ರಯಾಸೋದ್ಯಮʼ ?
ಪ್ರವಾಸೋದ್ಯಮ ನಮ್ಮ ರಾಜ್ಯದ ಆರ್ಥಿಕತೆಯ ಬೆನ್ನೆಲುಬು. ರಾಜ್ಯದ ಜಿಡಿಪಿಗೆ ಪ್ರವಾಸಿ ಗರ ಕೊಡುಗೆ ಸುಮಾರು ಶೇ. 14.8 ರಷ್ಟಿದೆ. ಸರಿಸುಮಾರು 30 ಲಕ್ಷಕ್ಕೂ ಹೆಚ್ಚು ಜನರು ನೇರವಾಗಿ ಅಥವಾ ಪರೋಕ್ಷವಾಗಿ ಪ್ರವಾಸೋದ್ಯಮದ ಮೇಲೆ ಅವಲಂಬಿತರಾಗಿದ್ದಾರೆ. ಇಷ್ಟಾದರೂ ಈ ಉದ್ಯಮ ನಮ್ಮಲ್ಲಿ ನಿರ್ಲಕ್ಷಿತ ಕ್ಷೇತ್ರ. ರಾಜ್ಯದ ಒಂದು ಕೋಟಿಗಿಂತ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸುವ ತಾಕತ್ತು ಈ ಕ್ಷೇತ್ರಕ್ಕಿದೆ. ಅಧಿಕಾರಸ್ಥರು ಪ್ರವಾಸದ ಕುರಿತು ತಮ್ಮ ‘ದೃಷ್ಟಿಕೋನ’ ಬದಲಾಯಿಸಿಕೊಂಡರಷ್ಟೇ ಇದು ಸಾಧ್ಯ.
-
ಲೋಕಮತ
ಭಾರತದ ನಾನಾ ರಾಜ್ಯಗಳ ತಲಾವಾರು ನಿವ್ವಳ ಉತ್ಪನ್ನವನ್ನು (ಜಿಡಿಪಿ) ಆಧರಿಸಿ ಇತ್ತೀಚೆಗೆ ಹೊಸ ಪಟ್ಟಿಯೊಂದು ಬಿಡುಗಡೆಯಾಗಿದೆ. ಇದರಲ್ಲಿ ಮೊದಲ ಐದು ರಾಜ್ಯಗಳ ಪೈಕಿ ಕರ್ನಾಟಕವೂ ಸೇರಿದೆ. ಎಂದಿನಂತೆ ಮಹಾರಾಷ್ಟ್ರ, ತಮಿಳುನಾಡು ಮೊದಲ ಎರಡು ಸ್ಥಾನದಲ್ಲಿವೆ. ಆದರೆ ಕಳೆದ ವರ್ಷ ಮೂರನೇ ಸ್ಥಾನದಲ್ಲಿದ್ದ ಕರ್ನಾಟಕ ಈ ಬಾರಿ ನಾಲ್ಕನೇ ಸ್ಥಾನಕ್ಕೆ ಜಾರಿದೆ. ಮೂರು ವರ್ಷಗಳ ಹಿಂದೆ ಐದನೇ ಸ್ಥಾನದಲ್ಲಿದ್ದ ಉತ್ತರಪ್ರದೇಶ ಈ ಸಲ ಮೂರನೇ ಸ್ಥಾನಕ್ಕೇರಿದೆ. ಉತ್ತರ ಪ್ರದೇಶದ ಈ ಪ್ರಗತಿಯ ಹಿಂದೆ ಯಾರಿದ್ದಾರೆ ಎಂದು ವಿಶ್ಲೇಷಿಸಿದರೆ ಕಾಣುವುದು ಸಾಕ್ಷಾತ್ ಶ್ರೀ ರಾಮಚಂದ್ರ.
ಅಯೋಧ್ಯೆ ಶ್ರೀರಾಮನ ಜನ್ಮಭೂಮಿಯಲ್ಲಿ ರಾಮಮಂದಿರ ಉದ್ಘಾಟನೆಯಾದ ಬಳಿಕ ಉತ್ತರ ಪ್ರದೇಶದ ಆರ್ಥಿಕ ಬೆಳವಣಿಗೆಗೆ ಹೊಸ ವೇಗ ದೊರೆತಿದೆ. ಅಯೋಧ್ಯೆಗೆ ಸುಂದರ ಬಾಲರಾಮನ ಮೂರ್ತಿಯನ್ನು ಕೊಟ್ಟ ಕನ್ನಡಿಗರು, ಉತ್ತರದ ರಾಜ್ಯದ ಬೆಳವಣಿಗೆ ಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರೆ ನಿಮಗೆ ಅಚ್ಚರಿಯಾಗಬಹುದು.
ಪ್ರಸ್ತುತ ಕರ್ನಾಟಕದಿಂದ ಪ್ರತಿ ತಿಂಗಳು ಸರಾಸರಿ 2.5 ಲಕ್ಷದಿಂದ 4 ಲಕ್ಷ ಮಂದಿ ಅಯೋಧ್ಯೆ ಮತ್ತು ಕಾಶಿ (ವಾರಣಾಸಿ)ಗೆ ಭೇಟಿ ನೀಡುತ್ತಿದ್ದಾರೆ. ಕರ್ನಾಟಕ ಸರಕಾರದ 5,000 ರು.ಗಳ ‘ಕಾಶಿಯಾತ್ರೆ’ ಧನಸಹಾಯ ಯೋಜನೆ ಸಾವಿರಾರು ಜನರಿಗೆ ಅಯೋಧ್ಯೆ ಯಾತ್ರೆ ಕೈಗೊಳ್ಳಲು ಪ್ರೇರಣೆಯಾಗಿದೆ. ಪ್ರವಾಸೋದ್ಯಮ ಅದರಲ್ಲೂ ಧಾರ್ಮಿಕ ಅಥವಾ ಆಧ್ಯಾತ್ಮ ಪ್ರವಾಸೋದ್ಯಮ ಒಂದು ರಾಜ್ಯದ ಆರ್ಥಿಕ ಗತಿಯನ್ನು ಹೇಗೆ ಬದಲಾಯಿಸ ಬಹುದು ಎನ್ನಲು ಉತ್ತರಪ್ರದೇಶ ಉತ್ತಮ ಉದಾಹರಣೆ.
ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ-ಧಾರವಾಡದಿಂದ ವಾರಣಾಸಿ ಮತ್ತು ಅಯೋಧ್ಯೆಗೆ ವಿಶೇಷ ಆಸ್ಥಾ ರೈಲುಗಳು ಮತ್ತು ನಿಯಮಿತ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸುತ್ತಿವೆ. ಕೇವಲ ರೈಲುಗಳ ಮೂಲಕವೇ ತಿಂಗಳಿಗೆ ಸುಮಾರು 1.5 ಲಕ್ಷಕ್ಕೂ ಹೆಚ್ಚು ಕನ್ನಡಿಗರು ಈ ಭಾಗಕ್ಕೆ ಪ್ರಯಾಣಿಸುತ್ತಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಯೋಧ್ಯೆ ಮತ್ತು ವಾರಣಾಸಿಗೆ ನೇರ ವಿಮಾನ ಸಂಪರ್ಕವಿರುವುದರಿಂದ ಮಧ್ಯಮ ಮತ್ತು ಮೇಲ್ವರ್ಗದ ಪ್ರವಾಸಿಗರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಿದೆ. ಉ.ಪ್ರಕ್ಕೆ ಭಕ್ತಿ ಯಾತ್ರೆ ಕೈಗೊಂಡ ಇವರೆಲ್ಲರೂ ಆ ರಾಜ್ಯದ ಬೊಕ್ಕಸಕ್ಕೂ ಪರೋಕ್ಷವಾಗಿ ದೇಣಿಗೆ ಸಂದಾಯ ಮಾಡಿದ್ದಾರೆ.
ಇದನ್ನೂ ಓದಿ: Lokesh Kaayarga Column: ಕಟ್ಟುವುದು ಸರಕಾರದ ಕೆಲಸ, ಮುರಿಯುವುದಲ್ಲ !
ಅಯೋಧ್ಯೆ ರಾಮಮಂದಿರ ನಿರ್ಮಾಣದ ಬಳಿಕ ಉತ್ತರ ಪ್ರದೇಶದ ಪ್ರವಾಸೋದ್ಯಮದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದೆ. 2025ರ ಅಂಕಿಅಂಶಗಳ ಪ್ರಕಾರ, ಅಯೋಧ್ಯೆ ಯೊಂದಕ್ಕೇ ಪ್ರತಿ ದಿನ ಸರಾಸರಿ 1.5 ಲಕ್ಷದಿಂದ 2 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಹಬ್ಬ ಹರಿದಿನಗಳಲ್ಲಿ ಈ ಸಂಖ್ಯೆ 5 ಲಕ್ಷ ದಾಟುತ್ತದೆ. ಈ ಹಿಂದೆ ಆಗ್ರಾ (ತಾಜ್ ಮಹಲ್) ರಾಜ್ಯದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿತ್ತು. ಈಗ ಅಯೋಧ್ಯೆ ಮತ್ತು ಕಾಶಿ ಪ್ರವಾಸಿ ಗರ ಭೇಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿವೆ.
ಕಳೆದ ಎರಡು ವರ್ಷಗಳಲ್ಲಿ ಉತ್ತರ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಶೇ.40 ರಿಂದ 50 ರಷ್ಟು ಹೆಚ್ಚಳವಾಗಿದೆ. ಇದು ರಾಜ್ಯದ ಜಿಡಿಪಿಗೆ ವಾರ್ಷಿಕ ಸುಮಾರು ₹25,000 ಕೋಟಿಗೂ ಅಧಿಕ ಆದಾಯವನ್ನು ತರುತ್ತಿದೆ. ಅಂದರೆ ಜಿಡಿಪಿಯಲ್ಲಿ ಐದನೇ ಸ್ಥಾನದಲ್ಲಿದ್ದ ಉತ್ತರ ಪ್ರದೇಶ ಮೂರನೇ ಸ್ಥಾನಕ್ಕೇರಲು ನೆರವಾಗಿದ್ದು ಅಲ್ಲಿನ ಪ್ರವಾಸೋ ದ್ಯಮದ ಬೆಳವಣಿಗೆ.
ದೊಡ್ಡ ಮಟ್ಟದ ಸ್ಥಿತ್ಯಂತರ ನಡೆಯದೇ ಹೋದರೆ ಇನ್ನು ಒಂದೆರಡು ವರ್ಷಗಳಲ್ಲಿ ಉತ್ತರ ಪ್ರದೇಶವು ಮಹಾರಾಷ್ಟ್ರ ನಂತರ ದೇಶದ ಜಿಡಿಪಿಗೆ ಅತಿಹೆಚ್ಚು ಕೊಡುಗೆ ನೀಡುವ ಎರಡನೇ ರಾಜ್ಯವಾಗಲಿದೆ. ರಾಮಮಂದಿರ ಮತ್ತು ಇತರ ಧಾರ್ಮಿಕ ಪ್ರವಾಸೋದ್ಯಮ ಕೇಂದ್ರಗಳ ಅಭಿವೃದ್ಧಿಯಿಂದ ಉತ್ತರ ಪ್ರದೇಶದ ಜಿಡಿಪಿಗೆ ವಾರ್ಷಿಕವಾಗಿ ಸುಮಾರು ₹4 ಲಕ್ಷ ಕೋಟಿ ಮೊತ್ತದಷ್ಟು ಆರ್ಥಿಕ ಚಟುವಟಿಕೆಗಳು ಸೇರ್ಪಡೆಯಾಗಲಿವೆ.
ಅಯೋಧ್ಯೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಹೊಸ ಹೋಟೆಲ್ ಯೋಜನೆಗಳು ಮತ್ತು ಹೋಂ ಸ್ಟೇಗಳು ಆರಂಭವಾಗಿದ್ದು, ಇದರಿಂದ ಸ್ಥಳೀಯವಾಗಿ ಕೋಟ್ಯಂತರ ರೂಪಾಯಿ ಹೂಡಿಕೆಯಾಗಿದೆ. ಸ್ಥಳೀಯವಾಗಿ 2ರಿಂದ 3 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬರುವ ಪ್ರವಾಸಿಗರಿಂದ ಸಾರಿಗೆ ಮತ್ತು ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ದೊಡ್ಡ ಮಟ್ಟದ ಆದಾಯ ಹರಿಯುತ್ತಿದೆ.
ಇದನ್ನೇ ಕರ್ನಾಟಕಕಕ್ಕೆ ಹೋಲಿಸಿ ನೋಡಿ. ಪ್ರವಾಸೋದ್ಯಮಕ್ಕೆ, ಪ್ರವಾಸಿಗರಿಗೆ ಏನೆಲ್ಲ ಬೇಕೋ ಅವೆಲ್ಲವೂ ಇಲ್ಲಿವೆ. ಆದರೆ ಹೇಗೆ ಶೋಕೇಷ್ ಮಾಡಬೇಕೆನ್ನುವುದು ಇನ್ನೂ ನಮಗೆ ಕರಗತವಾಗದ ವಿಚಾರ. ಪಶ್ಚಿಮ ಘಟ್ಟದ ಶೇ.60ರಷ್ಟು ಭಾಗವನ್ನು ಹೊಂದಿದ ಕರ್ನಾಟಕ ಪ್ರಕೃತಿದತ್ತ ಸೌಂದರ್ಯಕ್ಕೆ, ಇಲ್ಲಿನ ಅಪರೂಪದ ವನ್ಯಸಂಕುಲಕ್ಕೆ ಹೆಸರುವಾಸಿ. ಗೋವಾ ಮತ್ತು ಕೇರಳಕ್ಕಿಂತ ಹೆಚ್ಚು ಉದ್ದದ ನಯನ ಮನೋಹರ ಕಡಲ ತೀರ ನಮ್ಮಲ್ಲಿದೆ. ಹಂಪಿ, ಬಾದಾಮಿ, ಐಹೊಳೆ, ಬೇಲೂರು, ಹಳೆಬೀಡು, ಶ್ರವಣಬೆಳಗೊಳದಂತಹ ಶಿಲ್ಪಕಲೆಯ ಪರಮೋಚ್ಚ ವೈಭವವನ್ನು ಸಾರುವ ಐತಿಹಾಸಿಕ ತಾಣಗಳು ವಿಶ್ವ ಬೇರೆಲ್ಲೂ ಇಲ್ಲ. ತಾಜ್ ಮಹಲ್ ಬಿಟ್ಟರೆ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಮಾರಕ ಮೈಸೂರು ಅರಮನೆ.
ಇನ್ನು ನಮ್ಮಲ್ಲಿ ಇರುವಷ್ಟು ಆರಾಧನಾ ಸ್ಥಳಗಳು, ಆಚರಿಸುವ ವಿಶಿಷ್ಟ ಹಬ್ಬ ಹರಿದಿನ ಗಳು, ಜನಪದ ಪರಂಪರೆ, ಸಂಸ್ಕೃತಿ,ಸಂಭ್ರಮ ಇನ್ನೆಲ್ಲೂ ಕಾಣಲಾಗದ್ದು. ಇಷ್ಟಾದರೂ ಆದರೆ, ಕಳೆದ ಕೆಲವು ವರ್ಷಗಳಿಂದ ರಾಜ್ಯದ ಪ್ರವಾಸೋದ್ಯಮ ವ್ಯವಸ್ಥೆಯು ‘ಪ್ರಯಾಸೋದ್ಯಮ’ವಾಗಿ ಬದಲಾಗುತ್ತಿದೆ. ಮೂಲಸೌಕರ್ಯಗಳ ಕೊರತೆ, ಹಠಾತ್ ನಿರ್ಬಂಧಗಳು, ಅಸಮರ್ಪಕ ನಿರ್ವಹಣೆ, ಅಧಿಕಾರಿಗಳ ದರ್ಬಾರು, ಅಸುರಕ್ಷತೆ ನಮ್ಮ ಪ್ರವಾಸೋದ್ಯಮದ ಹೆಗ್ಗುರುತುಗಳು.
ಕರ್ನಾಟಕದ ಪ್ರವಾಸೋದ್ಯಮಕ್ಕೆ ಕಿರೀಟ ಪ್ರಾಯದಂತಿರುವ ನಾಗರಹೊಳೆ ಮತ್ತು ಬಂಡೀಪುರ ಅಭಯಾರಣ್ಯಗಳು ಇತ್ತೀಚೆಗೆ ಸುದ್ದಿಯಾಗುತ್ತಿರುವುದು ಹುಲಿಗಳ ದರ್ಶನ ಕ್ಕಲ್ಲ, ಬದಲಾಗಿ ಅಲ್ಲಿ ಹೇರಲಾಗುತ್ತಿರುವ ಸಫಾರಿ ನಿರ್ಬಂಧಗಳಿಗಾಗಿ. ಅರಣ್ಯದಂಚಿನಲ್ಲಿ ದನಗಾಹಿಯೊಬ್ಬರ ಮೇಲೆ ಹುಲಿ ದಾಳಿ ಮಾಡಿದ ನೆಪ ಮಾಡಿಕೊಂಡು ಸುಮಾರು ತಿಂಗಳು ಸಫಾರಿಯನ್ನೇ ಬಂದ್ ಮಾಡಿದ ಏಕೈಕ ರಾಜ್ಯ ನಮ್ಮದು.
ಹುಲಿಗಳ ಸಂತತಿ ಹೆಚ್ಚಿರುವ ಮಧ್ಯಪ್ರದೇಶ, ಉತ್ತರಾಖಂಡ, ಮಹಾರಾಷ್ಟ್ರ, ತಮಿಳು ನಾಡು, ಕೇರಳ ಮುಂತಾದ ರಾಜ್ಯದಲ್ಲೂ ಹುಲಿ ದಾಳಿಗಳು ಆಗಾಗ ವರದಿಯಾಗುತ್ತಲೇ ಇವೆ. ಆದರೆ ಈ ರಾಜ್ಯಗಳು ವನ್ಯ ಪ್ರವಾಸೋದ್ಯಮಕ್ಕೆ ಎಂದೂ ತಡೆ ಹೇರಿದ ಉದಾಹರಣೆ ಗಳಿಲ್ಲ. ಉತ್ತರಾಖಂಡದ ಜಿಮ್ ಕಾರ್ಬೆಟ್ ವನ್ಯಧಾಮ ತನ್ನಲ್ಲಿಗೆ ಬಂದ ಪ್ರವಾಸಿಗರನ್ನು ಎಂದೂ ಹಿಂದಕ್ಕೆ ಕಳುಹಿಸಿದ ಉದಾಹರಣೆಗಳಿಲ್ಲ. ಆದರೆ ಇಡೀ ದೇಶದಲ್ಲಿ ವ್ಯಾಘ್ರ ಸಂತತಿಯ ಅತಿ ಸುರಕ್ಷಿತ ತಾಣಗಳೆಂದು ಹೆಸರಾದ ನಾಗರಹೊಳೆ ಮತ್ತು ಬಂಡೀಪುರಕ್ಕೆ ಬಂದ ಪ್ರವಾಸಿಗರಿಗೆ ಸಫಾರಿ ಸವಾರಿ ಸಿಗುವುದೆಂಬ ಖಾತರಿ ಇಲ್ಲ.
ಆನ್‌ಲೈನ್ ಬುಕಿಂಗ್ ವ್ಯವಸ್ಥೆಯಲ್ಲಿನ ಲೋಪದೋಷಗಳು ಮತ್ತು ಸಫಾರಿ ಟಿಕೆಟ್‌ಗಳ ‘ಬ್ಲ್ಯಾಕ್ ಮಾರ್ಕೆಟ್’ ದಂಧೆಯಿಂದಾಗಿ ಸಾಮಾನ್ಯ ಪ್ರವಾಸಿಗರು ಕಾಡಿನ ಹಾದಿ ಹಿಡಿಯು ವುದೇ ದೊಡ್ಡ ದೊಡ್ಡ ಸಾಹಸ. ಪ್ರವಾಸಿಗರು ತಿಂಗಳುಗಳ ಮೊದಲೇ ಪ್ಲ್ಯಾನ್ ಮಾಡಿ ಕೊಂಡು ಬಂದರೂ, ಸ್ಥಳೀಯವಾಗಿಯೇ ವಾಸ್ತವ್ಯ ಹೂಡಿದರೂ ಸಫಾರಿ ಸಿಗದೆ ನಿರಾಸೆ ಯಿಂದ ಹಿಂತಿರುಗಿದ ಉದಾಹರಣೆಗಳಿವೆ. ವನ್ಯಜೀವಿ ಪ್ರೇಮಿಗಳು ಸಾವಿರಾರು ರೂಪಾಯಿ ವ್ಯಯಿಸಿ ಬಂಡೀಪುರಕ್ಕೆ ಬಂದಾಗ, ಇವತ್ತಿನ ಕೋಟಾ ಮುಗಿದಿದೆ ಎಂಬ ಫಲಕ ನೋಡಿ ನಿರಾಸೆಗೊಳ್ಳುತ್ತಿರುವುದು ನಮ್ಮ ಪ್ರವಾಸೋದ್ಯಮದ ವೈಶಿಷ್ಟ್ಯ.
ಟ್ರೆಕ್ಕಿಂಗ್ ಹೋದವರು ಅರಣ್ಯದಲ್ಲಿ ನಾಪತ್ತೆಯಾದರು ಎಂದಿಟ್ಟುಕೊಳ್ಳಿ. ಕರ್ನಾಟಕದಲ್ಲಿ ಮರು ದಿನವೇ ಟ್ರೆಕ್ಕಿಂಗ್‌ಗೆ ನಿರ್ಬಂಧ ಇಲ್ಲವೇ ನಿಷೇಧ ಹೇರಿ ಆದೇಶ ಹೊರಡಿಸಲಾಗುತ್ತದೆ. ಪಶ್ಚಿಮ ಘಟ್ಟದ ಶೇ.60ರಷ್ಟು ಭಾಗವನ್ನು ಹೊಂದಿರುವ ರಾಜ್ಯದ ಅರಣ್ಯಗಳಲ್ಲಿ ಟ್ರೆಕ್ಕಿಂಗ್ ಕೈಗೊಳ್ಳಬೇಕಾದರೆ ಪೂರ್ವಾನುಮತಿ ಕಡ್ಡಾಯ. ಇಷ್ಟಾದರೂ ಚಾರಣಿಗರನ್ನು ಅಧಿಕಾರಿ ಗಳು ಅಪರಾಧಿಗಳಂತೆ ಕಾಣುತ್ತಾರೆ. ಅತಿ ಹೆಚ್ಚು ಗಿರಿಧಾಮಗಳಿರುವ ಉತ್ತರಾಖಂಡದಲ್ಲಿ ಬದರಿ, ಯಮುನೋತ್ರಿ ಯಾತ್ರೆ ಅತ್ಯಂತ ಕಠಿಣವಾದುದು. ಇಲ್ಲಿ ಅವಘಡಗಳು, ದುರಂತಗಳು ಸಾಮಾನ್ಯ. ಆದರೆ ಈ ರಾಜ್ಯ ಪ್ರವಾಸಿಗರನ್ನು, ಯಾತ್ರಿಕರನ್ನು ಎಂದೂ ದೂರವಿಟ್ಟಿಲ್ಲ.
ಕರ್ನಾಟಕದ ಪ್ರವಾಸಿ ತಾಣಗಳನ್ನು ತಲುಪುವುದೇ ಒಂದು ದೊಡ್ಡ ಯುದ್ಧ. ಹಂಪಿ ಅಥವಾ ಬಾದಾಮಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಗಳನ್ನು ಹೊರತುಪಡಿಸಿದರೆ, ಗ್ರಾಮೀಣ ಭಾಗದ ಪ್ರವಾಸಿ ತಾಣಗಳಿಗೆ ಹೋಗುವ ರಸ್ತೆಗಳದ್ದು ಅಧ್ವಾನದ ಸ್ಥಿತಿ. ಮಡಿಕೇರಿಯ ಸುಂದರ ತಾಣಗಳಿಗೆ ಭೇಟಿ ಕೊಟ್ಟವರು ಪಾರ್ಕಿಂಗ್ ತಾಣಗಳಿಗೆ ಬಡಿದಾಡಬೇಕು. ರಾಜ್ಯದ ಟೆಂಪಲ್ ಟೂರಿಸಂ ಮತ್ತು ಬೀಚ್ ಟೂರಿಸಂನ ಕೇಂದ್ರ ಸ್ಥಳಗಳಿಗೆ ಮಳೆಗಾಲ ಬಂತೆಂದರೆ ರಜೆ. ಮಂಗಳೂರು ಮತ್ತು ಬೆಂಗಳೂರು ನಡುವಿನ ರೈಲ್ವೆ ಮತ್ತು ರಸ್ತೆ ಸಂಪರ್ಕವು ಮಳೆಗಾಲದಲ್ಲಿ ಯಾವಾಗ ಕಡಿತಗೊಳ್ಳುತ್ತದೆ ಎಂದು ಹೇಳುವಂತಿಲ್ಲ.
ಮಂಗಳೂರು, ಪಡುಬಿದ್ರೆ, ಮಲ್ಪೆ, ಮರವಂತೆ, ಗೋಕರ್ಣ, ಹೊನ್ನಾವರ, ಕಾರವಾರ ದಂತಹ ಬೀಚ್‌ಗಳಲ್ಲಿ ಸ್ವಚ್ಛತೆ ಮತ್ತು ಸುರಕ್ಷತೆಯ ಕೊರತೆ ಯಾವತ್ತೂ ಮುಗಿಯದ ಸಮಸ್ಯೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸಿದರೂ, ಒಳನಾಡಿನ ಪ್ರವಾಸಿ ತಾಣಗಳಿಗೆ ತಲುಪಲು ಖಾಸಗಿ ವಾಹನಗಳನ್ನೇ ಅವಲಂಬಿಸಬೇಕು. ಪ್ರವಾಸಿಗರಿಂದ ಅಧಿಕ ಹಣ ವಸೂಲಿ ಮಾಡುವ ಮಾಫಿಯಾಗಳು ಎಲ್ಲೆಡೆಯೂ ಸಕ್ರಿಯ.
ಒಂದು ರಾಜ್ಯ, ಹಲವು ಜಗತ್ತು ಎಂಬ ಆಕರ್ಷಕ ಘೋಷವಾಕ್ಯದೊಂದಿಗೆ ಪ್ರವಾಸೋ ದ್ಯಮ ಭೂಪಟದಲ್ಲಿ ತನ್ನನ್ನು ತಾನು ಬಿಂಬಿಸಿಕೊಳ್ಳುತ್ತಿರುವ ಕರ್ನಾಟಕದ ಪ್ರವಾಸೋ ದ್ಯಮವು ’ಪ್ರಯಾಸೋದ್ಯಮ’ವಾಗುವುದನ್ನು ತಡೆಯಲು ಸರಕಾರ ತನ್ನ ದೃಷ್ಟಿಕೋನ ವನ್ನೇ ಬದಲಾಯಿಸಿಕೊಳ್ಳಬೇಕಿದೆ. ರಾಜ್ಯ ಸರಕಾರದ ಸಚಿವರು ‘ಡೆಡ್ ಸಿಟಿ, ಕೋಮುನಗರಿ’ ಎಂದು ಹಣೆ ಪಟ್ಟಿ ಇಟ್ಟು ಕರೆಯುವ ದಕ್ಷಿಣ ಕನ್ನಡ ಜಿಲ್ಲೆ ದೇಶದ ಟಾಪ್ 10 ಶ್ರೀಮಂತ ಜಿಲ್ಲೆಗಳ ಪೈಕಿ ಒಂದಾಗಿರುವುದು ಇಲ್ಲಿನ ಟೆಂಪಲ್ ಟೂರಿಸಂ ಮತ್ತು ಶೈಕ್ಷಣಿಕ ತಾಣಗಳ ಕಾರಣದಿಂದ ಎನ್ನುವುದನ್ನು ಮರೆಯಬಾರದು.
ಜನರಿಗೆ ಸವಲತ್ತುಗಳ ‘ಗ್ಯಾರಂಟಿ’ ಬದಲು ಉದ್ಯೋಗ ಕಲ್ಪಿಸಲು ಒತ್ತು ನೀಡಿ ಎಂದು ಸುಪ್ರೀಂಕೋರ್ಟ್ ಕೇಂದ್ರ ಮತ್ತು ರಾಜ್ಯಸರಕಾರಗಳ ಕಿವಿ ಹಿಂಡಿದೆ. ಜನರು ಗುಳೆ ಹೊರಡುವುದನ್ನು ತಪ್ಪಿಸಿ, ಸ್ಥಳೀಯವಾಗಿಯೇ ಉದ್ಯೋಗ ಕಲ್ಪಿಸಲು ಪ್ರವಾಸೋದ್ಯಮ ಕ್ಕಿಂತ ಪ್ರಶಸ್ತ ಕ್ಷೇತ್ರ ಬೇರೊಂದಿಲ್ಲ.
ಯೂರೋಪ್‌ನ 44 ರಾಷ್ಟ್ರಗಳಲ್ಲಿ 35ಕ್ಕೂ ಹೆಚ್ಚು ರಾಷ್ಟ್ರಗಳು ವಿಸ್ತೀರ್ಣದಲ್ಲಿ ಕರ್ನಾಟಕ ಕ್ಕಿಂತ ಚಿಕ್ಕದಾಗಿವೆ. ಆದರೆ ಇವುಗಳ ಜಿಡಿಪಿ ಹಲವು ಪಟ್ಟು ದೊಡ್ಡದು. ಪ್ರವಾಸೋದ್ಯಮ ಈ ಎಲ್ಲ ದೇಶಗಳಿಗೆ ಪ್ರಮುಖ ಆದಾಯದ ಮೂಲ. ಪ್ರವಾಸೋದ್ಯಮದ ಸಾಧ್ಯತೆಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಂಡರೆ ಕರ್ನಾಟಕವು ದೇಶದಲ್ಲಿ ಮಾತ್ರವಲ್ಲ ಜಾಗತಿಕ ಮಟ್ಟದಲ್ಲೂ ಗುರುತಿಸಿಕೊಳ್ಳಲು ಸಾಧ್ಯವಿದೆ.