Dr Niranjan Poojari Column: ದೇವನೂರು ಅವರಿಗೆ ಸಂಘದ ಆಳ-ಅಗಲದ ಅರಿವಿಲ್ಲ
ಸಂಘದ ಕುರಿತಾದ ದೇವನೂರು ಅವರ ವಿಮರ್ಶೆಯು, ಕುರುಡನೊಬ್ಬ ಆನೆಯನ್ನು ಸ್ಪರ್ಶಿಸಿ ವ್ಯಾಖ್ಯಾ ನಿಸಿದ ಕಥೆಯನ್ನು ನೆನಪಿಸುತ್ತದೆ. ಯಾರಿಗೋ ಅದು ಕಲ್ಲಿನ ಗೋಡೆಯಂತೆ, ಇನ್ಯಾರಿಗೋ ಕಂಬದಂತೆ, ಮತ್ತೊಬ್ಬರಿಗೆ ಹಾವಿನಂತಿದೆ- ಆದರೆ ಆನೆಯ ಸಮಗ್ರ ರೂಪದ ಪರಿಚಯ ಯಾರಿಗೂ ಆಗುವುದಿಲ್ಲ. ಸಂಘದ ಆಳ ಮತ್ತು ಅಗಲವನ್ನು ಅರಿಯಲು ಕೇವಲ ಪುಸ್ತಕದ ಓದು ಸಾಕಾಗದು; ಶಾಖೆಗೆ ಬಂದು ಅದರ ಸ್ಪಂದನೆಯನ್ನು ಅನುಭವಿಸಬೇಕು.

-

ವಿಶ್ಲೇಷಣೆ
ಡಾ.ನಿರಂಜನ ಪೂಜಾರಿ
ಆರೆಸ್ಸೆಸ್ ಶಾಖೆಯು ಭಾರತದಲ್ಲಿ ಜಾತಿ-ಭೇದವು ಅಸ್ತಿತ್ವದ ಇಲ್ಲದ ಏಕೈಕ ಸ್ಥಳವಾಗಿದೆ. ಇಲ್ಲಿ ಎಲ್ಲ ಸ್ವಯಂಸೇವಕರು ಒಂದೇ ಸಾಲಿನಲ್ಲಿ ನಿಂತು ವ್ಯಾಯಾಮ ಮಾಡುತ್ತಾರೆ, ಜತೆ ಗೂಡಿ ಊಟ ಮಾಡುತ್ತಾರೆ, ಆಟ ಆಡುತ್ತಾರೆ, ಒಂದೇ ಧ್ವಜಕ್ಕೆ ಪ್ರಣಾಮ ಸಲ್ಲಿಸುತ್ತಾರೆ. ಸಮಾನತೆ ಬಗ್ಗೆ ಘೋಷಣೆ ಕೂಗುವ ರಾಜಕೀಯ ಪಕ್ಷಗಳು ತಮ್ಮದೇ ಸಂಘಟನೆಯಲ್ಲಿ ಅದನ್ನು ಅನುಷ್ಠಾನಗೊಳಿಸಲು ವಿಫಲವಾಗಿವೆ. ಆದರೆ ಸಂಘ ಎಂದೂ, ಯಾರನ್ನೂ ಜಾತಿ ಕೇಳಿಲ್ಲ
ಪತ್ರಿಕೆಯೊಂದರಲ್ಲಿ ಇತ್ತೀಚೆಗೆ ಪ್ರಕಟವಾದ ದೇವನೂರು ಮಹಾದೇವ ಅವರ ಲೇಖನವು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತಾದ ಅವರ ಅಪೂರ್ಣ ಅಧ್ಯಯನ ಮತ್ತು ಪೂರ್ವಗ್ರಹ ಪೀಡಿತ ಅಭಿಪ್ರಾಯಗಳ ಪ್ರತಿಬಿಂಬವಾಗಿದೆ. ತಮ್ಮನ್ನು ಮುಕ್ತ ಚಿಂತಕ ಎಂದು ಕರೆದುಕೊಳ್ಳುವ ದೇವನೂರು ಅವರು, ಕಾರ್ಲ್ ಮಾರ್ಕ್ಸ್‌ನ ವರ್ಗಸಂಘರ್ಷದ ಸೀಮಿತ ಚೌಕಟ್ಟಿ ನಲ್ಲಿಯೇ ಬಂಧಿತರಾಗಿರುವುದು ವಿಪರ್ಯಾಸ.
ಒಬ್ಬ ನಿಜವಾದ ಚಿಂತಕನ ಹೆಗ್ಗುರುತು ಎಂದರೆ ಎಲ್ಲ ಸಿದ್ಧಾಂತಗಳ ಬೇಲಿಗಳನ್ನು ದಾಟಿ ಸತ್ಯಾ ನ್ವೇಷಣೆ ಮಾಡುವುದು. ಆದರೆ, ಅವರ ಬರಹದಲ್ಲಿ ಸತ್ಯಶೋಧನೆಯ ಹಂಬಲಕ್ಕಿಂತ, ಗತಕಾಲದ ಸಿದ್ಧಾಂತದ ಬಂಧನವೇ ಹೆಚ್ಚು ಗೋಚರಿಸುತ್ತದೆ.
ಕುರುಡನಿಗೆ ಆನೆಯ ಬಿಂಬ
ಸಂಘದ ಕುರಿತಾದ ದೇವನೂರು ಅವರ ವಿಮರ್ಶೆಯು, ಕುರುಡನೊಬ್ಬ ಆನೆಯನ್ನು ಸ್ಪರ್ಶಿಸಿ ವ್ಯಾಖ್ಯಾನಿಸಿದ ಕಥೆಯನ್ನು ನೆನಪಿಸುತ್ತದೆ. ಯಾರಿಗೋ ಅದು ಕಲ್ಲಿನ ಗೋಡೆಯಂತೆ, ಇನ್ಯಾರಿಗೋ ಕಂಬದಂತೆ, ಮತ್ತೊಬ್ಬರಿಗೆ ಹಾವಿನಂತಿದೆ- ಆದರೆ ಆನೆಯ ಸಮಗ್ರ ರೂಪದ ಪರಿಚಯ ಯಾರಿಗೂ ಆಗುವುದಿಲ್ಲ. ಸಂಘದ ಆಳ ಮತ್ತು ಅಗಲವನ್ನು ಅರಿಯಲು ಕೇವಲ ಪುಸ್ತಕದ ಓದು ಸಾಕಾಗದು; ಶಾಖೆಗೆ ಬಂದು ಅದರ ಸ್ಪಂದನೆಯನ್ನು ಅನುಭವಿಸಬೇಕು.

ಒಬ್ಬ ಸಾಮಾನ್ಯ ಸ್ವಯಂಸೇವಕನ ಜತೆಗೆ ಒಂದು ದಿನ ಕಳೆದರೆ ಮಾತ್ರ ಆ ಸಂಘಟನೆಯ ಮೂಲ ತತ್ವಜ್ಞಾನ ಮತ್ತು ಮೌಲ್ಯಗಳ ಅರಿವಾಗುತ್ತದೆ. ಸಂಘ ಕೇವಲ ಒಂದು ಸಂಸ್ಥೆಯಲ್ಲ; ಅದು ಚಿಂತನೆ, ಸಂಸ್ಕೃತಿ ಮತ್ತು ನಿಸ್ವಾರ್ಥ ಸೇವೆಯ ಜೀವಂತ ಸಂಗ್ರಹ. ಶಾಖೆಯಲ್ಲಿ ಮೇಲು ಅಥವಾ ಕೀಳು ಎಂಬ ಭೇದವಿಲ್ಲ. ಅಲ್ಲಿ ಎಲ್ಲರೂ ಒಂದೇ ಸಾಲಿನಲ್ಲಿ ನಿಂತು ಪ್ರಾರ್ಥನೆ ಮಾಡುತ್ತಾರೆ, ಒಂದೇ ಆಟ ಆಡುತ್ತಾರೆ ಮತ್ತು ಒಂದೇ ಹೆಸರಿನಿಂದ ಗುರುತಿಸಿಕೊಳ್ಳುತ್ತಾರೆ- ಅದುವೇ ‘ಸ್ವಯಂಸೇವಕ’.
ಸಮಾಜದ ಪ್ರಯೋಗಶಾಲೆ
ಆರೆಸ್ಸೆಸ್ ಶಾಖೆಯು ಭಾರತದಲ್ಲಿ ಜಾತಿ-ಭೇದವು ಅಸ್ತಿತ್ವದ ಇಲ್ಲದ ಏಕೈಕ ಸ್ಥಳವಾಗಿದೆ. ಇಲ್ಲಿ ಎಲ್ಲ ಸ್ವಯಂಸೇವಕರು ಒಂದೇ ಸಾಲಿನಲ್ಲಿ ನಿಂತು ವ್ಯಾಯಾಮ ಮಾಡುತ್ತಾರೆ, ಎಲ್ಲರೂ ಜತೆಗೂಡಿ ಊಟ ಮಾಡುತ್ತಾರೆ, ಆಟ ಆಡುತ್ತಾರೆ, ಒಂದೇ ಧ್ವಜಕ್ಕೆ ಪ್ರಣಾಮ ಸಲ್ಲಿಸುತ್ತಾರೆ.
ಸಮಾನತೆ ಬಗ್ಗೆ ಘೋಷಣೆ ಕೂಗುವ ರಾಜಕೀಯ ಪಕ್ಷಗಳು ತಮ್ಮದೇ ಸಂಘಟನೆಯಲ್ಲಿ ಅದನ್ನು ಅನುಷ್ಠಾನಗೊಳಿಸಲು ವಿಫಲವಾಗಿವೆ. ಆದರೆ ಸಂಘ ಎಂದೂ, ಯಾರನ್ನೂ ಜಾತಿ ಕೇಳಿಲ್ಲ. 1934 ರಲ್ಲಿ ಆರೆಸ್ಸೆಸ್ ಶಿಬಿರಕ್ಕೆ ಭೇಟಿ ನೀಡಿದ ನಂತರ ಮಹಾತ್ಮ ಗಾಂಧೀಜಿ “ಇಲ್ಲಿ ನನಗೆ ಅಸ್ಪೃಶ್ಯತೆ ಕಾಣುವುದಿಲ್ಲ. ಸಮಾನತೆ ಮತ್ತು ಸಹೋದರತ್ವದ ಭಾವನೆ ಕಂಡು ನನಗೆ ಅಚ್ಚರಿಯಾಗಿದೆ" ಎಂದಿದ್ದಾರೆ.
1939ರಲ್ಲಿ ಪುಣೆಯಲ್ಲಿ ನಡೆದ ಸಂಘದ ಶಿಬಿರದಲ್ಲಿ ಭಾಗವಹಿಸಿದ ಡಾ.ಬಿ.ಆರ್.ಅಂಬೇಡ್ಕರ್, “ನಿಜವಾದ ಸಾಮಾಜಿಕ ಸಮಾನತೆಯನ್ನು ನಾನು ಪ್ರಾಯೋಗಿಕವಾಗಿ ನೋಡಿದ್ದು ಇದೇ ಮೊದಲ ಬಾರಿಗೆ" ಎಂದು ನುಡಿದಿದ್ದಾರೆ.
ಇದನ್ನೂ ಓದಿ: Dr Vijay Darda Column: ಪುಟಿನ್ ಬೀಸಿದ ಬಲೆಯಲ್ಲಿ ಟ್ರಂಪ್ ಸಿಕ್ಕಿಬಿದ್ದಿದ್ದಾರಾ ?
ಸೇವೆಯ ಸಾಗರ
ಸಂಘದ ಮೇಲೆ ‘ಕೋಮುವಾದಿ’ ಎಂಬ ಆರೋಪ ಮಾಡುವವರು, ಸಂಘದ ನೂರಾರು ಸಮಾಜ ಸೇವಾ ಯೋಜನೆಗಳತ್ತ ದೃಷ್ಟಿ ಹರಿಸಬೇಕು. ಸೇವಾಭಾರತಿ, ಹಳ್ಳಿಗಳಲ್ಲಿ ಶಾಲೆಗಳು, ಆಸ್ಪತ್ರೆಗಳು, ಬಾಲಸಂಸ್ಕಾರ ಕೇಂದ್ರಗಳು, ಅನಾಥಾಶ್ರಮಗಳು ಮತ್ತು ಮಹಿಳಾ ಸಬಲೀಕರಣ ಯೋಜನೆಗಳ ಮೂಲಕ ಕೋಟ್ಯಂತರ ಜನರ ಬದುಕನ್ನು ಆರೆಸ್ಸೆಸ್ ಬದಲಾಯಿಸಿದೆ. ವನವಾಸಿ ಪ್ರದೇಶಗಳಲ್ಲಿ ಸಂಘವು ವಿದ್ಯಾಕೇಂದ್ರಗಳನ್ನು ಸ್ಥಾಪಿಸಿ, ಬುಡಕಟ್ಟು ಸಮುದಾಯಗಳನ್ನು ರಾಷ್ಟ್ರದ ಮುಖ್ಯ ವಾಹಿನಿಗೆ ತರುವ ಮಹತ್ತರ ಕಾರ್ಯ ಮಾಡಿದೆ.
ಸಮಾಜವನ್ನು ವಿಭಜಿಸುವ ಬದಲಿಗೆ ಒಗ್ಗೂಡಿಸುವ ಇಷ್ಟು ದೊಡ್ಡ ಮತ್ತು ಸಮಗ್ರ ಕಾರ್ಯವನ್ನು ಮಾಡಿದ ಇನ್ನೊಂದು ಸಂಸ್ಥೆ ಭಾರತದ ಇತಿಹಾಸದಲ್ಲಿ ಇಲ್ಲ. ಸಂಘದ ಮುಕ್ತ ಚಿಂತನೆಯ ವ್ಯಾಪ್ತಿ ಯು ಶಿಕ್ಷಣದಿಂದ ವಿಜ್ಞಾನದವರೆಗೆ, ಕಲೆಗಳಿಂದ ಕೃಷಿಯವರೆಗೆ, ಆರೋಗ್ಯ ಸೇವೆಯಿಂದ ಸಂಶೋ ಧನೆಯವರೆಗೆ ಎಡೆ ವಿಸ್ತರಿಸಿದೆ.
ಇಂದು ನಾವು ಕಾಣುವ ಸಾವಿರಾರು ಸಂಸ್ಥೆಗಳು- ಸೇವಾಭಾರತಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ವಿಶ್ವ ಹಿಂದೂ ಪರಿಷತ್, ವನವಾಸಿ ಕಲ್ಯಾಣ ಆಶ್ರಮ- ಇವೆಲ್ಲವೂ ಸಂಘದ ವಿಶಾಲವಾದ ಮತ್ತು ಉದಾರವಾದ ತತ್ವದ ಫಲ.
ಸಂಘದ ಇತಿಹಾಸದ ಸತ್ಯಾಂಶಗಳು
1975ರ ತುರ್ತು ಪರಿಸ್ಥಿತಿಯ ಸಮಯದಲ್ಲಿ, ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿದ್ದು ಯಾರು? ಸಂಘದ ಸಾವಿರಾರು ಸ್ವಯಂ ಸೇವಕರು ಜೈಲುಗಳಲ್ಲಿ ಸತ್ಯದ ದೀಪವನ್ನು ಹಚ್ಚಿದರು.
ಇನ್ನು 1977ರ ತುರ್ತುಪರಿಸ್ಥಿತಿಯ ನಂತರ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು “ಆರೆಸ್ಸೆಸ್ ಫ್ಯಾಸಿಸ್ಟ್ ಆಗಿದ್ದರೆ, ನಾನೂ ಫ್ಯಾಸಿಸ್ಟ್" ಎಂದು ಘೋಷಿಸಿದ್ದಾರೆ. ಕಾಂಗ್ರೆಸ್‌ನ ಪರಮೋಚ್ಚ ನಾಯಕರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು 1948ರಲ್ಲಿ, “ಆರೆಸ್ಸೆಸ್ ಹಿಂದೂಗಳ ಸೇವೆ ಮತ್ತು ದೇಶದ ಏಕತೆಗಾಗಿ ದುಡಿಯುತ್ತಿದೆ.
ವಿಭಜನೆಯ ನಂತರ ಶರಣಾರ್ಥಿಗಳಿಗೆ ಅದು ನೀಡಿದ ಸಹಾಯ ಶ್ಲಾಘನೀಯ" ಎಂದಿದ್ದಾರೆ. ಭಾರತದ ಮಾಜಿ ರಾಷ್ಟ್ರಪತಿ ಡಾ.ಜಾಕಿರ್ ಹುಸೇನ್ ಅವರು, “ಆರೆಸ್ಸೆಸ್ ವಿರುದ್ಧದ ಸಾಮುದಾಯಿ ಕತೆಯ ಆರೋಪಗಳು ನಿರಾಧಾರ. ಆರೆಸ್ಸೆಸ್‌ನ ಸ್ವಯಂಸೇವಕರು ರಾಷ್ಟ್ರಸೇವೆಗೆ ಬದ್ಧರಾದ ದೇಶಭಕ್ತರು" ಎಂದಿದ್ದಾರೆ.
ಸಂಘದ ಅದ್ಭುತ ಆರ್ಥಿಕ ಮಾದರಿ
ಸರಕಾರದಿಂದ ಆರೆಸ್ಸೆಸ್ ಒಂದು ಪೈಸೆಯನ್ನೂ ಪಡೆಯುವುದಿಲ್ಲ, ಸಮಾಜವೇ ಅದನ್ನು ನಿರ್ವಹಿ ಸುತ್ತದೆ. ಆರೆಸ್ಸೆಸ್‌ಗೆ ನೇರ ಖಾತೆಗಳೂ ಇಲ್ಲ, ಗುಪ್ತ ಖಾತೆಗಳೂ ಇಲ್ಲ. ಬೇರೆ ಸಂಘಟನೆಗಳಂತೆ ಇಲ್ಲಿ ವಿದೇಶಿ ಯಜಮಾನಿಕೆಯೂ ಇಲ್ಲ. ಸೇವೆಗಾಗಿ ಸಮಾಜವೇ ನೇರವಾಗಿ ಭಾಗಿಯಾಗಿ, ವಿನಿಯೋಗ ನೀಡುವುದರಿಂದ ಲೆಕ್ಕವನ್ನೂ ಅವರೇ ಮಾಡಿಕೊಳ್ಳುತ್ತಾರೆ.
ಇಲ್ಲಿನ ಸ್ವಯಂಸೇವಕರು ರಾಜಕೀಯ ಪಕ್ಷಗಳ ಕಾರ್ಯಕರ್ತರಂತಲ್ಲ, ಅವರಿಗೆ ದುಡ್ಡಿಲ್ಲದೇ ಸೇವೆ ಮಾಡುವ ಮಾರ್ಗದ ಅರಿವಿದೆ. ಸಮಾಜಕ್ಕೆ ತಲುಪಿಸಬೇಕಾದ್ದನ್ನು ನೇರವಾಗಿ ಸಮಾಜಕ್ಕೆ ಮುಟ್ಟಿ ಸುವ ಸರಳ ದಾರಿ ಸಿದ್ಧಿಯಾಗಿದೆ. ಹೀಗಾಗಿಯೇ ಕಳೆದ ನೂರು ವರ್ಷಗಳಲ್ಲಿ ಹಣದ ವಿಷಯದಲ್ಲಿ ಒಮ್ಮೆಯೂ ಸಂಘದ ಪಡಸಾಲೆಯಲ್ಲಿ ಹಣದ ಕಾರಣಕ್ಕೆ ಗಲಾಟೆ ಆಗಿಲ್ಲ.
ಏಕತೆ ಕಟ್ಟುವ ಸಂಘ
ದೇವನೂರು ಮಹಾದೇವ ಅವರ ಚಿಂತನೆಯು ಕಮ್ಯುನಿಸ್ಟ್ ಪರಂಪರೆಯ ಪ್ರತಿಫಲವಾಗಿದೆ. ಅವರು ವರ್ಗಸಂಘರ್ಷದ ಕಣ್ಣುಗಳಿಂದ ಭಾರತವನ್ನು ನೋಡುತ್ತಾರೆ. ಆದರೆ ಭಾರತವು ಕೇವಲ ವರ್ಗಗಳಿಂದ ನಿರ್ಮಿತವಾದ ರಾಷ್ಟ್ರವಲ್ಲ- ಅದು ಧರ್ಮದಿಂದ (ಮೌಲ್ಯಗಳಿಂದ) ನಿರ್ಮಿತವಾದ ಪಾರಂಪರಿಕ ರಾಷ್ಟ್ರ. ಕಮ್ಯುನಿಸ್ಟ್ ಚಿಂತನೆಯು ಧರ್ಮದ ಸ್ಥಾನವನ್ನು ಖಾಲಿ ಮಾಡಿ, ರಾಜ್ಯವನ್ನೇ ದೇವನನ್ನಾಗಿ ಮಾಡಲು ಯತ್ನಿಸುತ್ತದೆ. ಆದರೆ ಸಂಘವು ಪ್ರತಿ ವ್ಯಕ್ತಿಯನ್ನು ಅಪ್ಪಿಕೊಳ್ಳುತ್ತದೆ.
ಈ ಮೂಲಭೂತ ಚಿಂತನೆಯು ಸಂಘವನ್ನು ವಿಶ್ವದ ಅತಿ ವಿಶಿಷ್ಟ ಚಳವಳಿಯಾಗಿ ರೂಪಿಸಿದೆ. ಕಮ್ಯುನಿಸ್ಟ್ ಚಳವಳಿಗಳು ವರ್ಗಸಂಘರ್ಷದ ಹೆಸರಿನಲ್ಲಿ ಸಮಾಜವನ್ನು ಒಡೆದವು, ರಷ್ಯಾ, ಚೀನಾ ಮತ್ತು ಕಾಂಬೋಡಿಯಾದಲ್ಲಿ ಸುಮಾರು 10 ಕೋಟಿ ಅಮಾಯಕ ಜೀವಗಳನ್ನು ಬಲಿ ತೆಗೆದು ಕೊಂಡವು.
ಶೋಷಣೆಯ ಅಂತ್ಯದ ಹೆಸರಿನಲ್ಲಿ ಅವರು ಮಾನವತೆಯ ಅಂತ್ಯ ಕಂಡರು. ಆದರೆ ಸಂಘದ ತತ್ವ ‘ಸರ್ವೇ ಜನಾಃ ಸುಖಿನೋ ಭವಂತು- ಎಲ್ಲರ ಒಳಿತನ್ನು ಬಯಸುವ ಧರ್ಮನಿಷ್ಠ ಮಾರ್ಗವಾಗಿದೆ.
ನಿರುಪಯುಕ್ತ ವಿಮರ್ಶೆ
ದೇವನೂರು ಮಹಾದೇವ ಅವರಂಥ ಚಿಂತಕರು ಸಂಘವನ್ನು ವಿಮರ್ಶಿಸುವ ಮೊದಲು ಅದರ ಅಂತರಂಗದ ಸತ್ಯವನ್ನು ಅರಿಯಬೇಕು. ಸಂಘದ ತತ್ತ್ವವು ಯಾರನ್ನೂ ಹೊರಗಿಡುವುದಿಲ್ಲ, ಅದು ಎಲ್ಲರನ್ನೂ ಒಳಗೊಳ್ಳುತ್ತದೆ. ಅದು ಸಂಘಟಿತ ಸತ್ಯ ಪ್ರಯತ್ನದಿಂದ ಲೋಕಕಲ್ಯಾಣದ ಪ್ರಮುಖ ದಾರಿಯಾಗಿದೆ. ಸಂಘ ಕೇವಲ ಒಂದು ಸಂಘಟನೆಯಲ್ಲ, ಅದು ಭಾರತೀಯ ಸಂಸ್ಕೃತಿಯ ಸ್ಪಂದನ, ಭಾರತದ ಜೀವಸತ್ತ್ವದ ಪ್ರತ್ಯಕ್ಷ ರೂಪ. ದೇವನೂರು ಅವರು ಕಮ್ಯುನಿಸ್ಟ್ ವರ್ಗಸಂಘರ್ಷದ ಕನ್ನಡಿಯನ್ನು ಬಿಟ್ಟು, ಶಾಖೆಯ ಕಣ್ಣುಗಳಿಂದ ಭಾರತವನ್ನು ನೋಡುವ ದಿನ ಬಂದಾಗ, ಅವರಿಗೆ ನಿಜವಾದ ಸತ್ಯದ ಬೆಳಕು ಕಾಣಬಹುದು. ಅಲ್ಲಿಯವರೆಗೆ, ಅವರ ವಿಮರ್ಶೆ ಕೇವಲ ಶ್ಮಶಾನದ ಶಬ್ದದಂತೆ ಖಾಲಿ ಘೋಷಣೆಯಷ್ಟೇ ಆಗಿರುತ್ತದೆ.
(ಮುಂದುವರಿಯುತ್ತದೆ)
(ಲೇಖಕರು ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು)