ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

M J Akbar Column: ಔರಂಗಬೇಬನ ಬದುಕಿನಲ್ಲೂ, ಸಾವಿನ ಬಳಿಕವೂ ಸತ್ಯವಾದ ಭವಿಷ್ಯವಾಣಿ

ಶಹಜಹಾನ್ ಆ ‘ಮಂಗಳಕರ’ ಮಗುವನ್ನು ಒಂದು ತಟ್ಟೆಯ ತುಂಬಾ ಆಭರಣಗಳು, ಮುತ್ತುರತ್ನ ಗಳು ಹಾಗೂ 50 ಆನೆಗಳೊಂದಿಗೆ- 30 ಗಂಡು ಮತ್ತು 20 ಹೆಣ್ಣು- ತಂದು ತಾತನ ಬಳಿ ಅವನಿಗೊಂದು ಹೆಸರಿಡುವಂತೆ ಕೇಳಿದ್ದ. ‘ದೇವರ ದಯೆಯಿರಲಿ. ಅನುಕೂಲಕರ ಮುಹೂರ್ತದಲ್ಲಿ ಹೆಸರು ಇಡಲಾಗು ವುದು’ ಎಂದು ಜಹಾಂಗೀರ್ ಹೇಳಿದ್ದ.

ಔರಂಗಬೇಬನ ಬದುಕಿನಲ್ಲೂ, ಸಾವಿನ ಬಳಿಕವೂ ಸತ್ಯವಾದ ಭವಿಷ್ಯವಾಣಿ

-

Ashok Nayak Ashok Nayak Oct 10, 2025 1:23 PM

ಅಕ್ಬರ್‌ ನಾಮಾ

ಎಂ.ಜೆ.ಅಕ್ಬರ್

ದೇವರಿಗೇ ಗೊತ್ತು!

ಹಾಗಂತ ಉದ್ಗರಿಸಿದ ಜಹಾಂಗೀರ್. ಕುಡುಗೋಲಿನ ರೀತಿಯ ಧೂಮಕೇತುವೊಂದು ಆಗಸದಲ್ಲಿ ಕಾಣಿಸಿಕೊಂಡಾಗ ಅವನು ರಾಮಗಢದಲ್ಲಿದ್ದ. ಆ ದಿನ 1618ರ ಅಕ್ಟೋಬರ್ 20. ಅವನ ಜ್ಯೋತಿಷಿ‌ ಗಳು ಈ ಧೂಮಕೇತು ಕಾಣಿಸಿಕೊಂಡಿದ್ದರ ಪರಿಣಾಮ ರಾಜನಿಗೆ ಅಪಶಕುನವೆಂತಲೂ, ಶತ್ರುಗಳಿಗೆ ಜಯವೆಂತಲೂ ಭವಿಷ್ಯ ನುಡಿದಿದ್ದರು.

ಜಹಾಂಗೀರ್‌ಗೆ ಆಗಸದಲ್ಲಿ ಧೂಮಕೇತು ಕಾಣಿಸಿದ್ದು ಸೂರ್ಯೋದಯಕ್ಕಿಂತ ಮೂರು ‘ಘರಿ’ ಮೊದಲು. ಘರಿ ಅಂದರೆ 24 ನಿಮಿಷಗಳ ಪಂಚಾಂಗದ ಕಾಲ. ಮೊದಲಿಗೆ ಅದು ಹೊಳೆಯುವ ಕಂಬದಂತೆ ಕಾಣಿಸಿಕೊಂಡಿತ್ತು: ಅದು ಪೂರ್ಣರೂಪದಲ್ಲಿ ಗೋಚರಿಸಿದಾಗ ಈಟಿಯ ರೀತಿ ಕಾಣಿಸಿತ್ತು.

ಎರಡೂ ತುದಿಗಳಲ್ಲಿ ಸಪೂರವಾಗಿ, ಮಧ್ಯದಲ್ಲಿ ದಪ್ಪವಾಗಿತ್ತು. ಆದರೆ ಕುಡುಗೋಲಿನಂತೆ ಬಾಗಿತ್ತು. ಅದರ ಬಾಲ ದಕ್ಷಿಣಕ್ಕೂ, ತಲೆ ಉತ್ತರಕ್ಕೂ ಇತ್ತು. ಜ್ಯೋತಿಷಿಗಳು ಅದರ ಆಕಾರ ಮತ್ತು ಗಾತ್ರವನ್ನು ಗಮನಿಸಿ ಲೆಕ್ಕಾಚಾರ ಮಾಡಿದ್ದರು. ಬೇರೆ ಬೇರೆ ಸಮಯದಲ್ಲಿ ಅದು ತಾಳಿದ ರೂಪ ವನ್ನು ಗಮನಿಸಿದರೆ 24 ಅಂಶದಷ್ಟು ಬಾಗಿತ್ತು. ಸ್ವರ್ಗದ ತುತ್ತತುದಿಯಲ್ಲಿ ಅದು ಚಲಿಸಿತ್ತು.

ಅದಕ್ಕೆ ಅದರದೇ ಆದ ಚಲನೆಯಿತ್ತು. ಮೊದಲು ವೃಶ್ಚಿಕ ರಾಶಿಯಿಂದ ಪ್ರಯಾಣ ಆರಂಭಿಸಿ, ತುಲಾ ರಾಶಿಯನ್ನು ಪ್ರವೇಶಿಸಿತ್ತು. ಮುಖ್ಯವಾಗಿ ಅದು ದಕ್ಷಿಣಕ್ಕೆ ಇಳಿದಿತ್ತು. ಈ ವಿದ್ಯಮಾನ ಸಂಭವಿಸಿದ 16 ರಾತ್ರಿಗಳ ಬಳಿಕ ಅದೇ ಜಾಗದಲ್ಲಿ ಒಂದು ನಕ್ಷತ್ರ ಗೋಚರಿಸಿತ್ತು. ಅದರ ತಲೆ ಹೊಳೆಯುತ್ತಿತ್ತು.

ಇದನ್ನೂ ಓದಿ: M J Akbar Column: ಬಡತನದ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ಸಾರಿದ್ದ ಯುದ್ಧ...

ಅದರ ಬಾಲ 2 ಅಥವಾ 3 ಯಾರ್ಡ್‌ಗಳಷ್ಟು ಉದ್ದವಿತ್ತು. ಆದರೆ ಬಾಲ ಹೊಳೆಯುತ್ತಿರಲಿಲ್ಲ. ಅದು ಈಗ ಕಾಣಿಸಿಕೊಳ್ಳತೊಡಗಿ 8 ರಾತ್ರಿಗಳಾಗಿವೆ. ಯಾವಾಗ ಅದು ಕಣ್ಮರೆಯಾಗುತ್ತದೆ ಎಂಬುದರ ಮೇಲೆ ಅದರ ಫಲಾಫಲಗಳು ನಿರ್ಣಯವಾಗುತ್ತವೆ. ಕೆಲವೇ ದಿನಗಳಲ್ಲಿ ಜಹಾಂಗೀರನಿಗೆ ಮೊಮ್ಮಗ ಜನಿಸಿದ: ಭಾನುವಾರದ ದಿನ, ಅಬಾನ್‌ನ ಇಲಾಹಿ ತಿಂಗಳಿನಲ್ಲಿ, ನಾನು ಪಟ್ಟಕ್ಕೆ ಬಂದ ಹದಿಮೂರನೇ ವರ್ಷದಲ್ಲಿ, ಹಿಜರಿ ಶಕೆ 1027ರ 15ನೇ ಜಿ-ಐ-ಕಾದಾ ದಿನದಂದು, ತುಲಾ ರಾಶಿಯಿಂದ 19 ಅಂಶಗಳ ಓರೆಯಲ್ಲಿ, ನನಗೆ ಸಂಪತ್ತನ್ನು ಕರುಣಿಸುವ ದೇವರು ನನ್ನ ಪುತ್ರ ಶಹಜಹಾನನಿಗೆ ಅಸಾಫ್ ಖಾನನ ಪುತ್ರಿಯಿಂದ (ಮುಮ್ತಾಜ್ ಮಹಲ್) ಪುತ್ರರತ್ನವನ್ನು ಕರುಣಿಸಿದ. ಅವನ ಆಗಮನವು ರಾಜ್ಯಕ್ಕೆ ಸಮೃದ್ಧಿಯನ್ನು ತರಲಿ ಎಂದು ಆಶಿಸುತ್ತೇನೆ.

ಈ ಮೊಮ್ಮಗನೇ ಔರಂಗಜೇಬ್.

ಉಜ್ಜಯಿನಿಯಲ್ಲಿ ಶಹಜಹಾನ್ ತನ್ನ ಮಗನ ಹುಟ್ಟುಹಬ್ಬದ ಮೋಜಿನ ಕೂಟ ಆಯೋಜಿಸಿದ್ದ. ಆ ದಿನ ಸಂತೋಷದಲ್ಲಿ ಕಳೆಯಿತು. ಇಂಥ ಪಾರ್ಟಿ ಹಾಗೂ ಔತಣಗಳನ್ನು ನೋಡಿಕೊಳ್ಳುತ್ತಿದ್ದ ಅವನ ಖಾಸಗಿ ಸೇವಕರು ಫಳಫಳ ಹೊಳೆಯುವ ಹೊಸ ರೀತಿಯ ಕಪ್‌ಗಳನ್ನು ನೋಡಿ ಸಂತೋಷಗೊಂಡಿದ್ದರು. ‌

ಶಹಜಹಾನ್ ಆ ‘ಮಂಗಳಕರ’ ಮಗುವನ್ನು ಒಂದು ತಟ್ಟೆಯ ತುಂಬಾ ಆಭರಣಗಳು, ಮುತ್ತುರತ್ನ ಗಳು ಹಾಗೂ 50 ಆನೆಗಳೊಂದಿಗೆ- 30 ಗಂಡು ಮತ್ತು 20 ಹೆಣ್ಣು- ತಂದು ತಾತನ ಬಳಿ ಅವನಿ ಗೊಂದು ಹೆಸರಿಡುವಂತೆ ಕೇಳಿದ್ದ. ‘ದೇವರ ದಯೆಯಿರಲಿ. ಅನುಕೂಲಕರ ಮುಹೂರ್ತದಲ್ಲಿ ಹೆಸರು ಇಡಲಾಗುವುದು’ ಎಂದು ಜಹಾಂಗೀರ್ ಹೇಳಿದ್ದ.

ಆ ಮುಹೂರ್ತವನ್ನು ಜ್ಯೋತಿಷಿಗಳು ನಿಗದಿಪಡಿಸಬೇಕಿತ್ತು. 7 ಆನೆಗಳನ್ನು ಅವನ ಖಾಸಗಿ ಕೊಟ್ಟಿಗೆಗೆ ಕಳುಹಿಸಲಾಯಿತು. ಇನ್ನುಳಿದವನ್ನು ಅಧಿಕಾರಿಗಳಿಗೆ ಹಂಚಲಾಯಿತು. ಅವನು ಸ್ವೀಕರಿಸಿದ ಕಾಣಿಕೆಯ ಮೌಲ್ಯ 200000 ರುಪಾಯಿ ಆಗಿತ್ತು. ಅದಕ್ಕಿಂತ 3 ವರ್ಷಗಳ ಮೊದಲು ದಾರಾ ಶುಕೋ ಜನಿಸಿದಾಗಲೂ ಆಕಾಶ ಸುಮ್ಮನಿರಲಿಲ್ಲ.

1616ರ ಮಾರ್ಚ್‌ನಲ್ಲಿ ಜಹಾಂಗೀರ್ ತನ್ನ ಹತ್ತನೇ ಪಟ್ಟಾಭಿಷೇಕೋತ್ಸವವನ್ನು ‘ವಿಚಿತ್ರ ರೀತಿ ಯಲ್ಲಿ’ ಭರ್ಜರಿ ಸಂಭ್ರಮದೊಂದಿಗೆ ಆಚರಿಸಿಕೊಂಡಿದ್ದ. ಮಾರ್ಚ್ 29ರ ಭಾನುವಾರ ‘ದಿನದ ಹನ್ನೆರಡು ಘರಿಗಳು ಕಳೆದಿರಲು ಪಶ್ಚಿಮದಿಂದ ಆರಂಭಿಸಿ, ಸೂರ್ಯನ ಐದನೇ ನಾಲ್ಕು ಭಾಗಕ್ಕೆ ಡ್ರ್ಯಾಗನ್ ಆಕಾರದಲ್ಲಿ ಗ್ರಹಣ ಕವಿದಿತ್ತು.

ಗ್ರಹಣ ಹಿಡಿಯಲು ಆರಂಭಿಸಿ, ಅದು ಬಿಡುವವರೆಗೆ ಎಂಟು ಘರಿಗಳು ಕಳೆದಿದ್ದವು’. ಲೋಹ, ಪ್ರಾಣಿ, ತರಕಾರಿ ಸೇರಿದಂತೆ ಎಲ್ಲಾ ರೀತಿಯ ದಾನಗಳನ್ನು ಫಕೀರರಿಗೆ ಮತ್ತು ಬಡಬಗ್ಗರಿಗೆ ನೀಡಿ ಗ್ರಹಣದ ಕಂಟಕದಿಂದ ಪಾರಾಗಲು ಜಹಾಂಗೀರ್ ಪ್ರಯತ್ನಿಸಿದ್ದ. ಏಕೆಂದರೆ ಗ್ರಹಣವೆಂಬುದು ದುರದೃಷ್ಟದ ಪೂರ್ವಸೂಚನೆಯಾಗಿತ್ತು.

1615ರ ಮಾರ್ಚ್ 30ರ ರಾತ್ರಿ ದಾರಾ ಶುಕೋ ಧನುರ್ ರಾಶಿಯಲ್ಲಿ ಜನಿಸಿದ್ದ. ಗಂಡು ಮಗುವಿನ ಜನನದಿಂದ ತನ್ನ ರಾಜ್ಯ ಚಿರಸ್ಥಾಯಿಯಾಗಲಿ ಮತ್ತು ಮಗುವಿನ ತಂದೆಗೆ ಅದೃಷ್ಟ ಸುರಿಸಲಿ ಎಂಬ ಆಶಯದೊಂದಿಗೆ ಅವನಿಗೆ ದಾರಾ ಶುಕೋ ಎಂದು ಜಹಾಂಗೀರ್ ಹೆಸರಿಟ್ಟಿದ್ದ.

ಅಪಶಕುನ: ಆಗಸದಲ್ಲಿ ಸಂಭವಿಸಿದ ಎರಡೂ ವಿದ್ಯಮಾನಗಳು ತನ್ನ ರಾಜ್ಯಕ್ಕೆ ಅಪಶಕುನವೆಂದೇ ಜಹಾಂಗೀರ್ ಭಾವಿಸಿದ್ದ. ಇತಿಹಾಸವನ್ನು ಮಗುಚಿ ಹಾಕಿದರೆ ಅವನ ನಂಬಿಕೆ ನಿಜವೇ ಆಗಿತ್ತು. ದಾರಾ ಶುಕೋಗೆ ಗ್ರಹಣ ಹಿಡಿದಿತ್ತು, ಆದರೆ ಔರಂಗಜೇಬನ ಧೂಮಕೇತು ಇಡೀ ಸಾಮ್ರಾಜ್ಯವನ್ನೇ ಸುಟ್ಟುಹಾಕಿತ್ತು.

ಔರಂಗಜೇಬ ತನ್ನ ಜಾತಕವನ್ನು ಬಹಳ ನಂಬುತ್ತಿದ್ದ. ಅವನು ಹುಟ್ಟಿದಾಗಲೇ ಶಾಸಬದ್ಧವಾಗಿ ಅದನ್ನು ರಚಿಸಲಾಗಿತ್ತು. ಅವನ ಬದುಕಿನಲ್ಲಿ ಸಂಭವಿಸಿದ ಎಲ್ಲಾ ಘಟನೆಗಳನ್ನೂ ಆ ಜಾತಕದಲ್ಲಿ ಮೊದಲೇ ಹೇಳಲಾಗಿತ್ತು. ಅಷ್ಟೇ ಅಲ್ಲ, ಅವನು ಹೋದ ಮೇಲೆ ಮೊಘಲ್ ಸಾಮ್ರಾಜ್ಯಕ್ಕೆ ಬಂದೆರಗ ಲಿರುವ ಆಪತ್ತಿನ ಬಗ್ಗೆಯೂ ಅದರಲ್ಲಿ ತಿಳಿಸಲಾಗಿತ್ತು.

1695ರಲ್ಲೇ, ಅಂದರೆ ತನ್ನ ಸಾವಿಗೆ 12 ವರ್ಷಗಳ ಮುಂಚೆ, ಮುಂದೆ ತನ್ನ ಉತ್ತರಾಧಿಕಾರಿ ಯಾಗಲಿರುವ ಮಿರ್ಜಾ ಮುಹಮ್ಮದ್ ಮುಜ್ಜಾಮ್‌ಗೆ (೧೬೪೩-೧೭೧೨)- ಇವನೇ ಬಹಾದೂರ್ ಶಾ- ‘ಆಜ್ ಮಸ್ತ್ ಹಮಾಹ್ ಫಸದ್ ಇ ಬಾಕಿ’ ಎಂದು ಔರಂಗಜೇಬ ಹೇಳಿದ್ದ. ಅಂದರೆ, ‘ನನ್ನ ನಂತರ ಅಲ್ಲೋಲಕಲ್ಲೋಲ!’

ಔರಂಗಜೇಬನ ಜಾತಕ ಬರೆದವನು ಮುಲ್ಲಾ ಅಲಾ ಉಲ್ ಮುಲ್ಕ್ ತುನಿ. ಶಹಜಹಾನ್‌ನ ಆಸ್ಥಾನ ದಲ್ಲಿದ್ದ ದೊಡ್ಡ ವಿದ್ವಾಂಸನಾಗಿದ್ದ ಆತ, ಅಲ್ಲೇ ಉನ್ನತ ಅಧಿಕಾರಿಯೂ ಆಗಿದ್ದ. ನಂತರ ಅವನಿಗೆ ಫಾಜಿಲ್ ಖಾನ್ ಎಂದು ಹೆಸರು ನೀಡಲಾಗಿತ್ತು. ಅವನು ಜಾತಕದಲ್ಲಿ ಹೇಳಿದ ಸಂಗತಿಗಳು ಎಷ್ಟು ನಿಖರವಾಗಿದ್ದವು ಎಂಬುದನ್ನು ಸಮಕಾಲೀನ ಇತಿಹಾಸಕಾರ ಹಮಿದ್ ಉದ್ ದಿನ್ ಖಾನ್ ಬಹಾದೂರ್ ಬರೆದ ‘ಅಹ್‌ಕಾಮಿ ಅಲಾಮ್‌ಗಿರಿ’ ಗ್ರಂಥದಲ್ಲಿ ಹೇಳಲಾಗಿದೆ. ಅದನ್ನು ಇಂಗ್ಲಿಷ್‌ಗೆ ‘ಅನೆಕ್ಟ್‌ಡೋಟ್ಸ್ ಆ- ಔರಂಗಜೇಬ’ ಹೆಸರಿನಲ್ಲಿ ಜಾದೂನಾಥ್ ಸರ್ಕಾರ್ ಅನುವಾದ ಮಾಡಿದ್ದಾರೆ.

ಫಾಜಿಲ್ ಖಾನ್‌ನನ್ನು ಔರಂಗಜೇಬ ತುಂಬಾ ನಂಬುತ್ತಿದ್ದ. 1658ರಲ್ಲಿ ಅವನಿಂದ ಶಹಜಹಾನ್ ಅಧಿಕಾರ ಕಿತ್ತುಕೊಂಡಾಗ ಔರಂಗಜೇಬ ಮತ್ತು ಶಹಜಹಾನ್ ನಡುವೆ ಮಧ್ಯವರ್ತಿಯಾಗಿ ಮಾತುಕತೆ ನಡೆಸಿದವನು ಇದೇ ಫಾಜಿಲ್ ಖಾನ್. 1663ರಲ್ಲಿ ಅವನ ಸಾವಿಗೂ ಮುನ್ನ ಅತ್ಯುನ್ನತ ‘ವಜೀರ್’ ಪದವಿಯನ್ನು ಅವನಿಗೆ ನೀಡಲಾಗಿತ್ತು.

ಔರಂಗಜೇಬ ತನ್ನ ತಂದೆಯಿಂದ ಈ ಶಕ್ತಿಶಾಲಿ ಸಂಪ್ರದಾಯವನ್ನು ಬಳುವಳಿಯಾಗಿ ಪಡೆದಿದ್ದ. ಕ್ರಿಸ್ಟೋಫರ್ ಮಿನ್‌ಕೋವ್‌ಸ್ಕಿ ಬರೆಯುತ್ತಾರೆ: ಸಮಕಾಲೀನ ಪರ್ಷಿಯನ್ ಇತಿಹಾಸದ ಗ್ರಂಥ ಗಳನ್ನು ಗಮನಿಸಿದರೆ ಮೊಘಲ್ ರಾಜರು ತಮ್ಮ ಜಾತಕ ಬರೆಯಲು ಹಿಂದೂ ಜ್ಯೋತಿಷಿ ಗಳನ್ನು ನೇಮಿಸಿಕೊಂಡಿದ್ದರು ಎಂಬುದು ಸ್ಪಷ್ಟವಾಗುತ್ತದೆ. ಅವರಿಗೆ ಜ್ಯೋತಿಕ್ ರಾಯಿ ಅಥವಾ ಜ್ಯೋತಿಷ್ಯರಾಜ ಎಂಬ ಬಿರುದು ನೀಡಲಾಗುತ್ತಿತ್ತು. ಈ ಜ್ಯೋತಿಕ್ ರಾಯಿಗಳು ಚಕ್ರವರ್ತಿ ಯುದ್ಧಕ್ಕೆ ಹೋಗುವಾಗಲೂ ಜತೆಗೆ ಹೋಗುತ್ತಿದ್ದರು.

ರಾಜನ ಅರಮನೆಯಲ್ಲಿ ಯಾರೇ ಜನಿಸಿದರೂ ಅವರ ಜಾತಕ ಬರೆಯುವುದು ಇವರ ಕೆಲಸವಾಗಿತ್ತು. ಜ್ಯೋತಿಷ್ಯದ ಪ್ರಕಾರ ರಾಜನ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿತ್ತು. ಶುಭಕಾರ್ಯಗಳನ್ನು ಅಥವಾ ಮಹತ್ವದ ಕೆಲಸಗಳನ್ನು ಮಾಡಲು ಮುಹೂರ್ತ ನಿಗದಿಪಡಿಸುವುದು ಕೂಡ ಇವರ ಕೆಲಸವಾಗಿತ್ತು. ರಾಜಮನೆತನದವರಿಗೆ ದಿನನಿತ್ಯದ ಕಾರ್ಯಗಳಲ್ಲೂ ಸಲಹೆ ಸೂಚನೆಗಳನ್ನು ನೀಡುವುದು ಮತ್ತು ರಾಜನ ವೈಯಕ್ತಿಕ ಹಾಗೂ ರಾಜಕೀಯ ಬದುಕಿಗೆ ಮಾರ್ಗದರ್ಶನ ಮಾಡುವುದು ಕೂಡ ಇವರ ಜವಾಬ್ದಾರಿಯಾಗಿತ್ತು.

ಪಟ್ಟಾಭಿಷೇಕ: ಔರಂಗಜೇಬನ ಪಟ್ಟಾಭಿಷೇಕದ ವಿಷಯದಲ್ಲೂ ಜ್ಯೋತಿಷಿಗಳ ಮಾತೇ ಅಂತಿಮ ವಾಗಿತ್ತು. 1659ರ ಮೇ ೧೨ರಂದು ಔರಂಗಜೇಬ ದೆಹಲಿಯನ್ನು ಪ್ರವೇಶಿಸಿದಾಗ ಬಾಜಾ ಭಜಂತ್ರಿ, ಕಹಳೆ, ತುತ್ತೂರಿಗಳು ಮೊಳಗಿದ್ದವು. ಆಭರಣಗಳಿಂದ ಅಲಂಕೃತ ಗಜ, ಅಶ್ವದಳಗಳು ಸ್ವಾಗತ ನೀಡಿದ್ದವು. ಅವನ ಸೇವಕರು ಜನರ ಮೇಲೆ ನಾಣ್ಯಗಳನ್ನು ಎರಚಿದ್ದರು. ನಂತರ ಔರಂಗಜೇಬ ಪಟ್ಟಕ್ಕೇರಲು ೨೪ ದಿನಗಳ ಕಾಲ ಕಾದಿದ್ದ. ಆಸ್ಥಾನ ಜ್ಯೋತಿಷಿಗಳು ೧೬೫೯ರ ಜೂನ್ ೫ರ ಭಾನುವಾರ ಒಳ್ಳೆಯ ದಿನ ಎಂದು ಹೇಳಿದ್ದರು. ಆ ದಿನ ಔರಂಗಜೇಬನ ಪಟ್ಟಾಭಿಷೇಕಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಯಿತು ಎಂದು ಜಾದೂನಾಥ್ ಸರ್ಕಾರ್ ಬರೆಯುತ್ತಾರೆ. ಸೂರ್ಯೋದಯ ವಾದ ಬಳಿಕ ೩ ಗಂಟೆ ೧೫ ನಿಮಿಷಕ್ಕೆ ಮುಹೂರ್ತ ನಿಗದಿಯಾಗಿತ್ತು.

ಔರಂಗಜೇಬ ಜೂನ್ ೫ರ ಬೆಳ್ಳಂಬೆಳಗ್ಗೆ ಪ್ರಶಾಂತ ವದನದೊಂದಿಗೆ ಆನೆಯ ಮೇಲೆ ಕುಳಿತು ಕೊಂಡು ಕೋಟೆಯೊಳಗೆ ಆಗಮಿಸಿದ. ಅಲ್ಲಿ ಮೊಘಲರ ಸರ್ವಸಂಪತ್ತನ್ನೂ ಪ್ರದರ್ಶನಕ್ಕೆ ಇರಿಸಲಾಗಿತ್ತು. ದಿವಾನಿ-ಇ-ಆಮ್‌ನ ಚಾವಣಿ ಹಾಗೂ ನಲವತ್ತು ಕಂಬಗಳನ್ನು ಗುಜರಾತಿನಿಂದ ತರಿಸಿದ ಕಸೂತಿಯ ರೇಷ್ಮೆ ಬಟ್ಟೆ, ಪರ್ಷಿಯಾದ ಚಿನ್ನ ಮತ್ತು ಬೆಳ್ಳಿಯ ಬಟ್ಟೆ, ಎಂಬ್ರಾಯ್ಡರಿ ಮಾಡಿದ ವೆಲ್ವೆಟ್ ಬಟ್ಟೆ, ಯುರೋಪಿನ ಪರದೆಗಳು, ಚೀನಾ ಮತ್ತು ಟರ್ಕಿಯ ಚಿನ್ನದ ಹಾಳೆ ಗಳಿಂದ ಅಲಂಕೃತಗೊಳಿಸಲಾಗಿತ್ತು.

ಜ್ಯೋತಿಷಿಗಳ ಹಸಿರು ನಿಶಾನೆಗೆ ದರ್ಬಾರು ಕಾಯುತ್ತಿತ್ತು. ಜ್ಯೋತಿಷಿಗಳು ಸೂರ್ಯೋದಯದ ಬಳಿಕ ೩ ಗಂಟೆ ೧೫ ನಿಮಿಷಕ್ಕೆ ಶುಭ ಮುಹೂರ್ತವಿದೆ ಎಂದು ಹೇಳಿದ್ದರು. ಅದರಂತೆ ಅವರ ತುಟಿ ಅಲುಗಾಡುವುದನ್ನೇ ಇಡೀ ಸಭೆ ಕಾಯುತ್ತಿತ್ತು. ಜ್ಯೋತಿಷಿಗಳು ತದೇಕಚಿತ್ತದಿಂದ ತಮ್ಮ ನೀರಿನ ಗಡಿಯಾರ ಮತ್ತು ಮರಳಿನ ಗಡಿಯಾರವನ್ನೇ ನೋಡುತ್ತಿದ್ದರು. ಕೊನೆಯಲ್ಲಿ ಅವರು ಹಸಿರು ನಿಶಾನೆ ತೋರಿದರು. ಶುಭ ಮುಹೂರ್ತ ಆಗಮಿಸಿತ್ತು.

ಸರ್ವಾಲಂಕಾರಭೂಷಿತನಾಗಿ ಪರದೆಯ ಹಿಂದೆ ಕುಳಿತಿದ್ದ ಚಕ್ರವರ್ತಿಗಳು ದರ್ಬಾರಿಗೆ ಆಗಮಿಸಿ ಸಿಂಹಾಸನಾರೋಹಣ ಮಾಡಿದರು. ತಾಂತ್ರಿಕವಾಗಿ ನೋಡಿದರೆ ಇದು ಔರಂಗಜೇಬನ ಎರಡನೇ ಪಟ್ಟಾಭಿಷೇಕವಾಗಿತ್ತು. 1658ರ ಜುಲೈನಲ್ಲೇ ಶಾಲಿಮಾರ್ ಬಾಗ್ ನಲ್ಲಿ ಮೊದಲ ಸಂಕ್ಷಿಪ್ತ ಪಟ್ಟಾಭಿಷೇಕ ನಡೆದಿತ್ತು. ಶಹಜಹಾನನನ್ನು ಸಿಂಹಾಸನದಿಂದ ಕೆಳಗಿಳಿಸಿದ ಮೇಲೆ ರಾಜನ ಸ್ಥಾನವನ್ನು ಖಾಲಿ ಬಿಡಬಾರದು ಎಂದು ಅಧಿಕಾರ ಗ್ರಹಣಕ್ಕಾಗಿ ಆಗ ಪಟ್ಟಾಭಿಷೇಕ ನಡೆಸಲಾಗಿತ್ತು.

ಮುಹಮ್ಮದ್ ಕಂಬು ಪ್ರಕಾರ ಆಗಲೂ ಜ್ಯೋತಿಷಿಗಳೇ ೧೬೫೮ರ ಜುಲೈ ೨೧ನ್ನು ಶುಭದಿನ ಎಂದು ಪಟ್ಟಾಭಿಷೇಕಕ್ಕೆ ನಿಗದಿಪಡಿಸಿದ್ದರು. ಅಂದರೆ ಔರಂಗಜೇಬನ ಪಟ್ಟಾಭಿಷೇಕಕ್ಕೆ ಎರಡು ಬಾರಿಯೂ ಜ್ಯೋತಿಷಿಗಳೇ ಮುಹೂರ್ತ ಸೂಚಿಸಿದ್ದರು. ಮಜಾ ಏನೆಂದರೆ, ಇಸ್ಲಾಮಿಕ್ ಕಾನೂನಿನ ಪ್ರಕಾರವೇ ನಡೆದುಕೊಳ್ಳುತ್ತಿದ್ದ ಚಕ್ರವರ್ತಿ ಔರಂಗಜೇಬ, ಇಸ್ಲಾಮಿಕ್ ಸಿದ್ಧಾಂತಗಳಿಗೆ ವಿರುದ್ಧವಾದ ನಿರ್ಧಾರಗಳನ್ನು ಮಾತ್ರ ಪದೇಪದೆ ಕೈಗೊಳ್ಳುತ್ತಿದ್ದ.

ಹೀಗಾಗಿ ಆಚರಣೆಯಲ್ಲಿ ಕುರಾನಿನ ಸುರಾ ಯೂನುಸ್, ೧೦೧ನೇ ಶ್ಲೋಕದಲ್ಲಿ ಹೇಳಿದ, ‘ಸ್ವರ್ಗ ಮತ್ತು ಭೂಮಿಯಲ್ಲಿರುವ ಎಲ್ಲವನ್ನೂ ಗಮನಿಸಿ. ಆದರೆ ನಂಬಿಕೆಯಿಲ್ಲದವರನ್ನು ಯಾವುದೇ ಶಕುನವಾಗಲೀ ಎಚ್ಚರಿಕೆಗಳಾಗಲೀ ರಕ್ಷಿಸುವುದಿಲ್ಲ’ ಎಂಬ ಮಾತನ್ನು ಸಂಪೂರ್ಣ ನಿರ್ಲಕ್ಷಿಸಿದ್ದ. ನಂಬಿಕೆ ಸ್ವಲ್ಪ ಆಚೆ-ಈಚೆ ಆಗುತ್ತದೆ ಬಿಡಿ.

1658ರಲ್ಲಿ ಔರಂಗಜೇಬ ತನ್ನ ಸಾಮ್ರಾಜ್ಯಕ್ಕೆ ಸಂಪೂರ್ಣ ಸಾರ್ವಭೌಮತೆಯನ್ನೇನೂ ಘೋಷಿಸಿ ಕೊಳ್ಳಲಿಲ್ಲ. ಅಷ್ಟರಮಟ್ಟಿಗೆ ಅವನು ವಾಸ್ತವವಾದಿಯಾಗಿದ್ದ. ಅವನ ಹೆಸರಿನಲ್ಲಿ ‘ಖುತ್ಬಾ’ ಪ್ರಾರ್ಥನೆ ಓದುತ್ತಿರಲಿಲ್ಲ. ೧೬೬೦ರಲ್ಲಿ ರಚಿಸಿದ, ಈಗ ಸೇಂಟ್ ಪೀಟರ್ಸ್‌ಬರ್ಗ್ ಆಲ್ಬಮ್‌ನಲ್ಲಿರುವ ಒಂದು ಕಲಾಕೃತಿಯಲ್ಲಿ ಯುವ ಔರಂಗಜೇಬನು ಸ್ವರ್ಗದ ಬೆಳಕಿನಲ್ಲಿ ಮೆತ್ತನೆಯ ಆಸನದ ಮೇಲೆ ಕುಳಿತು ಇಬ್ಬರು ರಾಣಿಯರ ಮುಂದೆ ಸ್ನಾನ ಮಾಡುವ ದೃಶ್ಯವಿದೆ.

ಅವನ ಪಕ್ಕದಲ್ಲಿ ಸಣ್ಣದೊಂದು ಪೆಟ್ಟಿಗೆ ಮತ್ತು ರುದ್ರವೀಣೆಯೂ ಕಾಣಿಸುತ್ತದೆ. ಎರಡನೇ ಪಟ್ಟಾಭಿಷೇಕದ ವೈಭವವು ಅಲ್ಲಿಯವರೆಗೆ ಔರಂಗಜೇಬನ ಸರಳ ವ್ಯಕ್ತಿತ್ವದ ಬಗ್ಗೆ ಕೃತಕವಾಗಿ ಮೂಡಿಸಿದ್ದ ಜನಾಭಿಪ್ರಾಯವನ್ನು ಸುಳ್ಳು ಮಾಡಿತು. ಔರಂಗಜೇಬ ರಾಜನಂತಿಲ್ಲ, ಅವನು ತುಂಬಾ ಸರಳವಾಗಿ ಬದುಕುತ್ತಾನೆ, ಪ್ರಾರ್ಥ ನೆಯ ಟೋಪಿಗಳನ್ನು ಹೊಲಿದು ಅದರಿಂದ ಬಂದ ಹಣದಲ್ಲಿ ಜೀವನ ನಡೆಸುತ್ತಾನೆ ಎಂದೆಲ್ಲಾ ಆವರೆಗೆ ಸುದ್ದಿ ಹಬ್ಬಿಸಲಾಗಿತ್ತು.

ಆಭರಣಗಳ ವ್ಯಾಪಾರಿ ಜೀನ್ ಬಾಪ್ಟಿಸ್ಟೆ ಟ್ಯಾವರ್ನಿಯರ್ (೧೬೦೫-೧೬೮೯) ಔರಂಗಜೇಬನು ಚಿನ್ನದ ಹೊದಿಕೆಯ ಹರಳಿನ ಕಪ್‌ನಲ್ಲಿ ನೀರು ಕುಡಿಯುವುದನ್ನು ನೋಡಿದ್ದ. ಆದರೆ ಅವನು ಯಾವತ್ತೂ ಚಿನ್ನ ಮತ್ತು ಬೆಳ್ಳಿಯ ಪಾತ್ರೆಗಳನ್ನು ಬಳಸುವುದಿಲ್ಲ ಎಂದು ಪ್ರಚಾರ ಮಾಡಲಾಗಿತ್ತು.

೧೬೬೫ರಲ್ಲಿ ‘ಬಹಳ ದೊಡ್ಡ’ ಧೂಮಕೇತು ನಾಲ್ಕು ವಾರಗಳ ಕಾಲ ಆಗಸದಲ್ಲಿ ಕಾಣಿಸಿಕೊಂಡಾಗ ಔರಂಗಜೇಬನಿಗೆ ಭಯ ಶುರುವಾಯಿತು. ಅವನು ಏಕಾಏಕಿ ತಪಸ್ವಿಯಂತೆ ಆಗಿಬಿಟ್ಟ. ಮಾಂಸ ತಿನ್ನುವುದನ್ನು ಬಿಟ್ಟ. ಊಟವನ್ನು ಬಹಳ ಕಡಿಮೆ ಮಾಡಿ, ಕೇವಲ ಧಾನ್ಯದ ರೊಟ್ಟಿ ಮತ್ತು ನೀರಿಗೆ ಸೀಮಿತಗೊಳಿಸಿದ. ಹುಲಿಯ ಚರ್ಮವನ್ನು ನೆಲದ ಮೇಲೆ ಹಾಸಿಕೊಂಡು ಅದರ ಮೇಲೆ ಮಲಗತೊಡಗಿದ. ಧೂಮಕೇತು ಕಾಣಿಸಿಕೊಳ್ಳುವುದು ರಾಜರಿಗೆ ಅಪಾಯಕಾರಿ ಶಕುನವಾಗಿತ್ತು.

ಔರಂಗಜೇಬನಿಗೆ ಜ್ಯೋತಿಷ್ಯದಲ್ಲಿ ಇದ್ದ ಅಪಾರ ನಂಬಿಕೆಯನ್ನು ಫ್ರಾಂಕೋಯಿಸ್ ಬರ್ನಿಯರ್ ಕೂಡ ಖಚಿತಪಡಿಸಿದ್ದಾನೆ. ಅವನು ಅದರ ಹಿಂದಿನ ವರ್ಷ ರಾಜನ ಪರಿವಾರದಲ್ಲಿದ್ದ.

ಅಂತ್ಯ: ಇಸ್ಲಾಮಿನ ಸಂಪ್ರದಾಯಗಳನ್ನು ಕಿಂಚಿತ್ತು ಉಲ್ಲಂಘಿಸಿದರೂ ತನ್ನ ಜೀವಕ್ಕೆ ಆಪತ್ತು ಬರುತ್ತದೆ ಎಂಬ ಭಯ ಔರಂಗಜೇಬನಿಗಿತ್ತು. ಮಹತ್ತು ಇದ್ದಲ್ಲಿ ಅಪಾಯವೂ ಇರುತ್ತದೆ ಎಂದು ಅವನು ನಂಬಿದ್ದ. ಅವನಲ್ಲಿದ್ದ ದೊಡ್ಡ ದೌರ್ಬಲ್ಯವೆಂದರೆ ತೀರಾ ಸಣ್ಣ ಸಣ್ಣ ವಿಷಯಗಳನ್ನೂ ತಾನೇ ನಿರ್ಧರಿಸಬೇಕು ಎಂಬ ಹಪಾಹಪಿ, ಮಂತ್ರಿಗಳು ಮತ್ತು ಸೇನಾಪತಿಗಳಿಗೆ ನಿರ್ಧಾರ ಕೈಗೊಳ್ಳಲು ಬಿಡದೆ ಇರುವುದು ಹಾಗೂ ತುರ್ತು ಸಂದರ್ಭಗಳಲ್ಲಿ ಅವರ ಕೈಬಿಡುವುದು. ಅವನು ಅನುಮಾನದ ಪಿಶಾಚಿಯಾಗಿದ್ದ.

ಆ ಗುಣವು ಅವನ ಮಕ್ಕಳಲ್ಲಿದ್ದ ಸಾಮರ್ಥ್ಯವನ್ನೇ ಹೊಸಕಿ ಹಾಕಿತ್ತು. ರಾಜತಾಂತ್ರಿಕತೆಯಲ್ಲಿ ಅವನಿಗೆ ಸರಿಸಾಟಿ ಯಾರೂ ಇರಲಿಲ್ಲ. ಏನನ್ನು ಬೇಕಾದರೂ ರಹಸ್ಯವಾಗಿ ಬದಲಿಸುತ್ತಿದ್ದ. ಆದರೆ ಅವನ ಬೌದ್ಧಿಕತೆಯ ಮಟ್ಟ ಎತ್ತರದಲ್ಲಿರಲಿಲ್ಲ. ತನ್ನ ಹತ್ತಿರವಿರುವ ಹೊಗಳುಭಟರನ್ನೇ ನಂಬಿಬಿಡುತ್ತಿದ್ದ. ಔರಂಗಜೇಬನಲ್ಲಿ ಕರುಣೆ, ಕಲ್ಪನಾಶಕ್ತಿ, ದೂರದೃಷ್ಟಿ, ಹೊಂದಾಣಿಕೆಯ ಸ್ವಭಾವ, ದಾರಿಗಳ ಆಯ್ಕೆಯಲ್ಲಿ ವಿವೇಚನೆ ಮತ್ತು ತಲೆಯಲ್ಲಿ ಬರುವ ನೂರು ದುಷ್ಟ ಯೋಚನೆ ಗಳನ್ನು ನಿಗ್ರಹಿಸಿ ಪ್ರಾಯಶ್ಚಿತ್ತ ಮಾಡಿಕೊಳ್ಳುವ ವಿವೇಕ ಈ ಯಾವ ಗುಣಗಳೂ ಇರಲಿಲ್ಲ. ಅವನ ಈ ದೌರ್ಬಲ್ಯಗಳೇ ಮೊಘಲ್ ಸಾಮ್ರಾಜ್ಯಕ್ಕೆ ಮುಳುವಾದವು.

ಹೀಗಾಗಿ ಅವನ ಸಾವಿನ ನಂತರ ಮೊಘಲ್ ಸಾಮ್ರಾಜ್ಯ ಏಕಾಏಕಿ ಪಾತಾಳಕ್ಕೆ ಪತನಗೊಂಡಿತು. ೧೭೦೭ರಲ್ಲಿ ೮೮ ವರ್ಷದ ಔರಂಗಜೇಬನಿಗೆ ತನ್ನ ಬದುಕು ಮುಗಿಯಿತು ಎಂಬುದು ಅರ್ಥವಾಗಿತ್ತು. ಹೀಗಾಗಿ ಆಜಮ್ ಶಾಗೆ ಬರೆದ ತನ್ನ ಕೊನೆಯ ಪತ್ರದಲ್ಲಿ ಹೀಗೆ ಬರೆದಿದ್ದ: ನಾನು ಒಬ್ಬನೇ ಬಂದಿದ್ದೇನೆ, ಈಗ ಒಬ್ಬನೇ ಹೋಗುತ್ತಿದ್ದೇನೆ. ನಾನು ಯಾರೆಂಬುದು ನನಗೆ ಗೊತ್ತಿಲ್ಲ. ನಾನೇನು ಮಾಡುತ್ತಿದ್ದೇ ನೆಂಬುದೂ ಗೊತ್ತಿಲ್ಲ... ನಾನು ಯಾವತ್ತೂ ಒಳ್ಳೆಯ ಆಡಳಿತ ನಡೆಸಲಿಲ್ಲ ಅಥವಾ ರೈತರಿಗೆ ಒಳ್ಳೆಯದನ್ನು ಮಾಡಲಿಲ್ಲ... ನಾನು ಬರುವಾಗ ನನ್ನೊಂದಿಗೆ ಏನನ್ನೂ ತರಲಿಲ್ಲ. ಈಗ ಹೋಗುವಾಗ ನನ್ನದೇ ಪಾಪದ ಫಲಗಳನ್ನು ಹೊತ್ತೊಯ್ಯುತ್ತಿದ್ದೇನೆ.

ನನಗೇನು ಶಿಕ್ಷೆ ಕಾದಿದೆಯೋ ಗೊತ್ತಿಲ್ಲ. ಕಾಮ್ ಬಕ್ಷನಿಗೆ ಬರೆದ ಪತ್ರದಲ್ಲೂ ಇಂಥದ್ದೇ ಪಶ್ಚಾತ್ತಾಪದ ಮಾತುಗಳಿವೆ. ‘ನಾನು ಮಾಡಿದ ಎಲ್ಲಾ ಪಾಪದ ಫಲಗಳನ್ನೂ ನನ್ನೊಂದಿಗೆ ಹೊತ್ತುಕೊಂಡು ಹೋಗುತ್ತಿದ್ದೇನೆ... ಜಮಖಾನ ಎಷ್ಟು ಅಗಲವಿದೆಯೋ ಅದರ ಮಿತಿಯಲ್ಲೇ ನಿನ್ನ ಕಾಲುಗಳನ್ನು ನಿಯಂತ್ರಿಸಿಕೋ’.

ಔರಂಗಜೇಬನ ಹಾಸಿಗೆಯ ದಿಂಬಿನ ಕೆಳಗೆ ಸಿಕ್ಕಿದ್ದು ಎನ್ನಲಾದ ಅವನದೇ ಕೈಬರಹದ ಹೇಳಿಕೆಯೊಂದಿದೆ. ಅದು ಈಗ ಬ್ರಿಟನ್ನಿನ ಇಂಡಿಯಾ ಆಫೀಸ್ ಲೈಬ್ರರಿಯಲ್ಲಿದೆ. ಅದರಲ್ಲಿ ಅವನು ತನ್ನ ಮಕ್ಕಳಿಗೆ, ‘ಸಿಂಹಾಸನಕ್ಕಾಗಿ ಮನುಕುಲವನ್ನು ಕೊಲ್ಲಬೇಡಿ. ಅಧಿಕಾರವನ್ನು ಹಂಚಿಕೊಳ್ಳಿ’ ಎಂದು ಬರೆದಿದ್ದಾನೆ. ಅದಕ್ಕಾಗಿ ಒಂದು ಸೂತ್ರವನ್ನೂ ಅವನು ನೀಡಿದ್ದ. ಆದರೆ ಅವನದು ಮೊಘಲ್ ವಂಶವಲ್ಲವೇ? ಮಕ್ಕಳು ಅವನ ಸಲಹೆಯನ್ನು ಮನಸಾರೆ ನಿರ್ಲಕ್ಷಿಸಿದ್ದರು.

ಅವನ ಹನ್ನೊಂದನೇ ಸಂದೇಶ ಅತ್ಯಂತ ಕುತೂಹಲಕರವಾಗಿದೆ: ಯಾವತ್ತೂ ನಿಮ್ಮ ಮಕ್ಕಳನ್ನು ನಂಬಬೇಡಿ. ಅವರನ್ನು ಮೆಚ್ಚಿಸಲು ಏನನ್ನೂ ಮಾಡಬೇಡಿ.

೧೬೮೭ರ ಫೆಬ್ರವರಿ ೨೧ರಿಂದ ಜೈಲಿನಲ್ಲಿದ್ದ ತನ್ನ ಉತ್ತರಾಧಿಕಾರಿ ಬಹಾದೂರ್ ಶಾನನ್ನು ೧೬೯೫ರ ಮೇ ೯ರಂದು ಬಿಡುಗಡೆ ಗೊಳಿಸಿದ ಔರಂಗಜೇಬನು ಅವನನ್ನು ತನ್ನ ಬಳಿಗೆ ಕರೆಸಿಕೊಂಡು ಸೆರೆಯಲ್ಲಿರಿಸಿದ್ದಕ್ಕೆ ಕಾರಣ ಹೇಳಿದ. ‘ಜೈಲುವಾಸ ಬಹಳ ಜನರಿಗೆ ಒಳ್ಳೆಯದನ್ನೇ ಮಾಡಿದೆ. ಪ್ರವಾದಿ ಜೋಸೆಫ್ ಕೂಡ ಈಜಿಪ್ಟ್‌ನ ರಾಜನಾಗುವುದಕ್ಕೂ ಮುನ್ನ ಜೈಲಿನಲ್ಲಿದ್ದ. ಹೀಗಾಗಿ, ಇದೇ ಭರವಸೆಯಲ್ಲಿ ನಾನು ಜೀವಂತವಾಗಿರುವಾಗಲೇ ನಿನಗೆ ಸ್ವರ್ಗದಂಥ ಹಿಂದುಸ್ತಾನವನ್ನು ಒಪ್ಪಿಸುತ್ತಿದ್ದೇನೆ’ ಎಂದು ಅಪ್ಪಣೆ ಮಾಡಿದ.

ನಂತರ ಔರಂಗಜೇಬ ತನ್ನ ಮಗನಿಗೆ ಅಚ್ಚರಿಯ ಸತ್ಯವೊಂದನ್ನು ಹೇಳಿದ: ‘ನನ್ನ ಜಾತಕದಲ್ಲಿ ಹೇಳಿದ ಎಲ್ಲವೂ ಇಲ್ಲಿಯವರೆಗೆ ಕರಾರುವಾಕ್ಕಾಗಿ ಹಾಗೇ ನಡೆದಿದೆ. ಫಾಜಿಲ್ ಖಾನ್ ರಚಿಸಿದ ಜಾತಕ ತುಂಬಾ ನಿಖರವಾಗಿತ್ತು. ನಾನು ಹುಟ್ಟಿದ ದಿನದಿಂದ ಇಲ್ಲಿಯವರೆಗಿನ ಪ್ರತಿಯೊಂದು ಘಟನೆಯನ್ನೂ ನೆನಪಿಸಿಕೊಂಡು ಪರಿಶೀಲಿಸಿದ್ದೇನೆ. ಎಲ್ಲವೂ ಅವನು ಹೇಳಿದಂತೆಯೇ ನಡೆದಿವೆ. ನನ್ನ ಸಾವಿನ ನಂತರ ಏನಾಗುತ್ತದೆ ಎಂಬುದನ್ನು ಕೂಡ ಜಾತಕದಲ್ಲಿ ಹೇಳಲಾಗಿದೆ. ಆಜ್ ಮಸ್ತ್ ಹಮಾಹ್ ಫಸದ್ ಇ ಬಾಕಿ. ನಾನು ಹೋದ ನಂತರ ಎಲ್ಲವೂ ಅಲ್ಲೋಲಕಲ್ಲೋಲವಾಗಲಿದೆ!’

ಮುಂದೆ ಬಂದೆರಗಲಿರುವ ದುರದೃಷ್ಟದ ಬಗ್ಗೆ ಔರಂಗಜೇಬ ಬಹಳ ಪ್ರಾಮಾಣಿಕವಾಗಿ ಹೇಳಿದ್ದ: ನನ್ನ ನಂತರ ಬರುವ ಚಕ್ರವರ್ತಿ ಅಜ್ಞಾನಿ, ಸಂಕುಚಿತ ಮನೋಭಾವದವನಾಗಿರುತ್ತಾನೆ ಎಂದು ಜಾತಕದಲ್ಲಿ ಬರೆದಿದೆ. ಅವನು ಆಡುವ ಮಾತುಗಳು ಸರಿಯಾಗಿರುವುದಿಲ್ಲ. ಅವನು ರೂಪಿಸುವ ಯೋಜನೆಗಳು ಅಪ್ರಬುದ್ಧವಾಗಿರುತ್ತವೆ.

ಕೆಲವರ ಮೇಲೆ ಅವನು ಅವರನ್ನೇ ಮುಳುಗಿಸುವಷ್ಟು ಸಂಪತ್ತನ್ನು ಖರ್ಚು ಮಾಡುತ್ತಾನೆ. ಇನ್ನುಳಿ ದವರ ಜತೆಗೆ ಅವರನ್ನು ಸರ್ವನಾಶ ಮಾಡುವಷ್ಟು ಕಠೋರವಾಗಿ ನಡೆದುಕೊಳ್ಳುತ್ತಾನೆ. ಈ ಎಲ್ಲಾ ಅದ್ಭುತ ಗುಣಗಳೂ ನಿನ್ನಲ್ಲಿ ಈಗಾಗಲೇ ಇವೆ! ನಾನೇನೋ ನಿನ್ನ ಜತೆಗೆ ಒಳ್ಳೆಯ ಮಂತ್ರಿಯನ್ನೇ ಬಿಟ್ಟು ಹೋಗುತ್ತೇನೆ. ಅಸಾದ್ ಖಾನ್ ಸಮರ್ಥ ವಾಜಿರ್. ನನ್ನ ಆಡಳಿತಾವಧಿಯಲ್ಲಿ ಅವನನ್ನು ಸುರಕ್ಷಿತವಾಗಿ ನೋಡಿಕೊಂಡಿದ್ದೇನೆ. ಆದರೆ ಅವನಂಥ ಮಂತ್ರಿಯಿದ್ದರೂ ಅದರಿಂದ ಏನು ಪ್ರಯೋಜನ? ಸಾಮ್ರಾಜ್ಯದ ನಾಲ್ಕು ಕಂಬಗಳಂತೆ ನೀವು ನಾಲ್ಕು ಮಕ್ಕಳಿದ್ದೀರಿ.

ನೀವು ಆ ಬಡಪಾಯಿಗೆ ಅವನ ಕೆಲಸ ಮಾಡಲು ಎಲ್ಲಿ ಬಿಡುತ್ತೀರಿ! ಔರಂಗಜೇಬ ಸತ್ಯವನ್ನೇ ಹೇಳಿದ್ದ. ‘ಸಾಕಷ್ಟು ಅಧಿಕಾರಿಗಳು ನಾನು ಆದಷ್ಟು ಬೇಗ ಸಾಯಲಿ ಎಂದು ರಹಸ್ಯವಾಗಿ ದೇವರಲ್ಲಿ ಬೇಡಿಕೊಳ್ಳುತ್ತಿದ್ದಾರೆ. ಆದರೆ ನಾನು ಸತ್ತ ನಂತರ ಅವರೇ ದೇವರ ಬಳಿ ತಮಗೆ ಬೇಗ ಸಾವು ಕೊಡು ಎಂದು ಬೇಡಿಕೊಳ್ಳುವ ಪರಿಸ್ಥಿತಿ ಬರುತ್ತದೆ.

ನೀನು ಪ್ರಜೆಗಳನ್ನು ತಂದೆಯಂತೆ ಪ್ರೀತಿಯಿಂದ ನೋಡಿಕೊಳ್ಳುವಾಗ ಅವರು ನುಂಗಲಾಗದೆ ಉಗಿಯುವಷ್ಟು ಉಪ್ಪಾಗಬೇಡ, ಹಾಗೆಯೇ ಅವರು ನುಂಗಿಬಿಡುವಷ್ಟು ಸಿಹಿಯೂ ಆಗಬೇಡ’ ಎಂದು ಬಹಾದೂರ್ ಶಾಗೆ ಉಪದೇಶ ಮಾಡಿದ್ದ.

(ಎಂ.ಜೆ.ಅಕ್ಬರ್ ಬರೆದ ‘ಆಫರ್ ಮಿ, ಕೇಯಾಸ್: ಆಸ್ಟ್ರಾಲಜಿ ಇನ್ ದಿ ಮುಘಲ್ ಎಂಪೈರ್’ ಎಂಬ ಹೊಸ ಪುಸ್ತಕದ ಆಯ್ದ ಭಾಗವಿದು).

(ಲೇಖಕರು ಹಿರಿಯ ಪತ್ರಕರ್ತರು)