Thimmanna Bhagwat Column: ನಮಸ್ತೇ ಸದಾ ವತ್ಸಲೇ ಎನ್ನಲು ನೋಂದಣಿಯಾಗಬೇಕೆ ?
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥರಿಗೆ ನಮ್ಮ ರಾಜ್ಯದ ಮಾನ್ಯ ಗೃಹ ಸಚಿವರು ಬರೆದಿದ್ದಾರೆನ್ನಲಾದ ಪತ್ರ ಸಂಚಲನವನ್ನು ಉಂಟು ಮಾಡಿದೆ. ಆರ್‌ಎಸ್‌ಎಸ್ ಯಾಕೆ ನೋಂದಣಿ ಯಾಗಿಲ್ಲ? ಸಂಘದ ಕಾರ್ಯಕ್ರಮಗಳಿಗೆ ಸರಕಾರದ ಅನುಮತಿ ಪಡೆಯಲಾಗಿದೆಯೇ? ಎಂಬೆಲ್ಲ ಪ್ರಶ್ನೆಗಳ ಮೂಲಕ ಸಂಘಕ್ಕೆ ಮೂಗುದಾರ ತೊಡಿಸುವ ಪ್ರಯತ್ನಗಳನ್ನು ಮಾನ್ಯ ಸಚಿವರು ಮಾಡುತ್ತಲೇ ಬಂದಿದ್ದಾರೆ.
-
ಕಾನೂನ್ ಸೆನ್ಸ್
ತಿಮ್ಮಣ್ಣ ಭಾಗವತ್
ದೇಶ ವಿದೇಶಗಳಲ್ಲೂ ಚಟುವಟಿಕೆಗಳಿರುವ 60ಲಕ್ಷಕ್ಕೂ ಅಧಿಕ ಸ್ವಯಂಸೇವಕರ ಬೃಹತ್ ಸಂಘಟನೆಯೊಂದು ನೋಂದಣಿಯಾಗಿರಬೇಕಿತ್ತು ಎಂಬುದು ಸಮಂಜಸವೆನಿಸಿದರೂ, ಕಾನೂನಿನ ಪ್ರಶ್ನೆ ಬಂದಾಗ ಅದು ಅವರ ವಿವೇಚನೆಗೆ ಬಿಟ್ಟ ವಿಷಯವಾಗುತ್ತದೆ. ಅದನ್ನು ಪ್ರಶ್ನಿಸುವುದಿದ್ದಲ್ಲಿ ಸೂಕ್ತ ಕಾನೂನಿನ ಮೊರೆ ಹೋಗಬೇಕಲ್ಲದೆ ಪತ್ರಗಳ ಮೂಲಕ ಕೆಲಸವಾಗಲಿಕ್ಕಿಲ್ಲ.
ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿಃ ಜಾನಾಮ್ಯಧರ್ಮಂ ನ ಚ ಮೇ ನಿವೃತ್ತಿಃ’- ‘ನನಗೆ ಧರ್ಮವೇನೆಂದು ತಿಳಿದಿದೆ ಆದರೆ ಅದು ನನ್ನ ಪೃವೃತ್ತಿಯಲ್ಲ. ಅಧರ್ಮವೇನೆಂದೂ ತಿಳಿದಿದೆ. ಆದರೆ ಅದರಿಂದ ನನಗೆ ನಿವೃತ್ತಿಯಿಲ್ಲ.’ ಕಾಯಿದೆ, ನಿಯಮಗಳು ತಿಳಿದಿದ್ದರೂ, ತಿಳಿಯದಂತೆ ಮಾತನಾಡುವ ಅಥವಾ ವ್ಯವಹರಿಸುವವರಿಗೆ ಇದು ಅನ್ವಯವಾಗುತ್ತದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥರಿಗೆ ನಮ್ಮ ರಾಜ್ಯದ ಮಾನ್ಯ ಗೃಹ ಸಚಿವರು ಬರೆದಿದ್ದಾರೆನ್ನಲಾದ ಪತ್ರ ಸಂಚಲನವನ್ನು ಉಂಟು ಮಾಡಿದೆ. ಆರ್‌ಎಸ್‌ಎಸ್ ಯಾಕೆ ನೋಂದಣಿ ಯಾಗಿಲ್ಲ? ಸಂಘದ ಕಾರ್ಯಕ್ರಮಗಳಿಗೆ ಸರಕಾರದ ಅನುಮತಿ ಪಡೆಯಲಾಗಿದೆಯೇ? ಎಂಬೆಲ್ಲ ಪ್ರಶ್ನೆಗಳ ಮೂಲಕ ಸಂಘಕ್ಕೆ ಮೂಗುದಾರ ತೊಡಿಸುವ ಪ್ರಯತ್ನಗಳನ್ನು ಮಾನ್ಯ ಸಚಿವರು ಮಾಡುತ್ತಲೇ ಬಂದಿದ್ದಾರೆ.
‘ಭಾರತ್ ಮಾತಾಕೀ ಜೈ’, ‘ವಂದೇ ಮಾತರಂ’ ಎಂಬ ಘೋಷಣೆಗಳನ್ನು ಕೂಗಿದರೆ ಬ್ರಿಟಿಷ್ ಕಾಲ ದಲ್ಲಿ ದೇಶದ್ರೋಹವೆಂದು ಜೈಲಿಗೆ ಹಾಕಲಾಗುತ್ತಿತ್ತು. ಗುಂಪಾಗಿ ಸೇರುವದನ್ನೇ ಪ್ರತಿಬಂಧಿಸ ಲಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯವೇ ಇಲ್ಲದ ಕಾಲವದು. ವಾಕ್ ಸ್ವಾತಂತ್ರ್ಯದ ಮೇಲೆ ವಿಧಿಸಲಾಗಿದ್ದ ಪ್ರತಿಬಂಧ ಮತ್ತು ಅದನ್ನು ವಿರೋಧಿಸಿ ದೇಶಪ್ರೇಮಿಗಳು ನಡೆಸಿದ ಹೋರಾಟಗಳೇ ಅಭಿವ್ಯಕ್ತಿ ಸ್ವಾತಂತ್ರ್ಯದ ಹಿನ್ನೆಲೆ ಎಂಬುದನ್ನು ಗಮನಿಸಬೇಕು.
ಅಭಿವ್ಯಕ್ತಿ ಸ್ವಾತಂತ್ರ್ಯವು ಸಂವಿಧಾನದ ಅಡಿಗಲ್ಲು ಎಂದು ಕರೆಯಲ್ಪಡುತ್ತದೆ. ಸಂವಿಧಾನದ 19(1) ಸಿ ಅಡಿಯಲ್ಲಿ ಲಭ್ಯವಿರುವ ಸಂಘ ಸಂಸ್ಥೆಗಳನ್ನು ರಚಿಸಿಕೊಳ್ಳುವ ಸ್ವಾತಂತ್ರ್ಯ ಕೂಡಾ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವೇ ಆಗಿದೆ. ದೇಶದ ಆಂತರಿಕ ಸುರಕ್ಷೆ, ವಿದೇಶೀ ನೀತಿ, ದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವದಂಥ ವಿಷಯಗಳಿಗೆ ವಿರುದ್ಧವಾಗಿದ್ದರೆ ಮಾತ್ರ 19(2)ನೇ ವಿಧಿಯನ್ವಯ ಅಂಥ ಸ್ವಾತಂತ್ರ್ಯವನ್ನು ಪ್ರತಿಬಂಧಿಸಬಹುದು.
ಇದನ್ನೂ ಓದಿ: Thimmanna Bhagwat Column: ಮರುವಿಂಗಡಣೆ ಹೊಸ ಪ್ರಸ್ತಾಪ: ಹಳೇ ಮದ್ಯ, ಹೊಸ ಪ್ರಸ್ತಾಪ ?
ಯಾವುದೇ ಸಂಘ ಅಥವಾ ಒಕ್ಕೂಟ ಇಂಥ ನಿಯಮಗಳಿಗೆ ವ್ಯತಿರಿಕ್ತವಾಗಿ ನಡೆಯದಿದ್ದರೆ ಅಂಥ ಸಂಘಟನೆಗಳ ಕಾರ್ಯನಿರ್ವಹಣೆಗೆ ಯಾವುದೇ ಮಿತಿ ಅಥವಾ ನಿರ್ಬಂಧಗಳನ್ನು ವಿಧಿಸುವ ಅಧಿಕಾರ ಸರಕಾರಗಳಿಗೆ ಇರುವುದಿಲ್ಲ.
ಸಂಘಗಳೆಂದರೆ ಸರಳ ಭಾಷೆಯಲ್ಲಿ ವ್ಯಕ್ತಿಗಳ ಸಮೂಹ. ಯಾವದೇ ಕಾಯಿದೆಬದ್ಧ ಉದ್ದೇಶಕ್ಕಾಗಿ ಸಂಘಗಳನ್ನು ರಚಿಸಿಕೊಳ್ಳಬಹುದು. ದೇಶದಲ್ಲಿ ಅಂಥ ಅನೇಕ ಸಂಘಗಳಿವೆ. ಗಲ್ಲಿ ಗಲ್ಲಿಗಳಲ್ಲಿ ಗಣೇಶೋತ್ಸವ ಸಮಿತಿಗಳು, ಮಿತ್ರ ಮಂಡಳಿಗಳು, ಕ್ರಿಕೆಟ್ ತಂಡಗಳು, ಭಜನಾ ಮಂಡಳಿಗಳು, ನಾಟಕ ಮಂಡಳಿಗಳು, ಯುತ್ ಕ್ಲಬ್‌ಗಳು ಹೀಗೆ ಅನೇಕ ಸಂಘಗಳಿವೆ. ಅಂಥ ಅನೇಕ ಸಂಘಗಳಿಂದ ಉತ್ತಮ ಸಮಾಜಸೇವಾ ಕಾರ್ಯಗಳು ನಡೆಯುತ್ತಿದ್ದು ಅವು ಸಮಾಜಕ್ಕೆ ಅಥವಾ ದೇಶಕ್ಕೆ ತೊಂದರೆ ಯೆನಿಸುತ್ತಿಲ್ಲ. ಅಥವಾ ಅಂಥ ಸಂಘಟನೆಗಳ ಕಾರ್ಯಗಳನ್ನು ಸರಕಾ ನಿಯಂತ್ರಿಸ ಬೇಕೆಂದು ಯಾರೂ ಆಗ್ರಹಿಸುತ್ತಿಲ್ಲ.
ತಮ್ಮ ಕಾರ್ಯ ನಿರ್ವಹಣೆ ಸುಸೂತ್ರವಾಗಿ ನಡೆಯುವ ಉದ್ದೇಶದಿಂದ ಅವು ತಮ್ಮದೇ ಆದ ಬೈಲಾಗಳು, ಆಂತರಿಕ ನಿಯಮಗಳನ್ನು ರೂಪಿಸಿಕೊಳ್ಳುತ್ತವೆ. ಕಾಲಕಾಲಕ್ಕೆ ಸಭೆಗಳನ್ನು ಮತ್ತು ಪದಾಧಿಕಾರಿಗಳ ಆಯ್ಕೆಯನ್ನು ನಡೆಸುತ್ತವೆ. ಅಂಥ ಸಂಘಟನೆಗಳು ಹಣಕಾಸಿನ ವ್ಯವಹಾರ ಗಳನ್ನೂ ನಡೆಸುತ್ತವೆ.
ಉದಾಹರಣೆಗೆ ಗಣೇಶೋತ್ಸವ ಅಥವಾ ನಾಡಹಬ್ಬ ನಡೆಸುವ ಸಲುವಾಗಿ ತಮ್ಮ ಸದಸ್ಯರಿಂದಲೋ, ಸಾರ್ವಜನಿಕರಿಂದಲೋ ವಂತಿಗೆ/ಚಂದಾ ಸಂಗ್ರಹಿಸುತ್ತವೆ. ಅಧ್ಯಕ್ಷ, ಉಪಾಧ್ಯಕ್ಷ. ಕಾರ್ಯದರ್ಶಿ, ಖಜಾಂಚಿ, ಲೆಕ್ಕ ಪರಿಶೋಧಕ ಮುಂತಾದ ಹುದ್ದೆಗಳನ್ನೂ ಹೊಂದಿರುವ ಅನೇಕ ಸಂಘಗಳು ಪಧಾದಿಕಾರಿಗಳ ಜಂಟಿ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನೂ ಹೊಂದಿರುತ್ತವೆ. ಇವೆಲ್ಲ ಸಹಜವಾಗಿ ಜನಸಾಮಾನ್ಯರಿಗೆ ತಿಳಿದಿರುವ ವಿಷಯಗಳು.
ಭಾರತೀಯ ಆದಾಯ ಕಾಯಿದೆಯಡಿ ನೋಂದಾಯಿತವಲ್ಲದ ಸಂಸ್ಥೆಗಳು ಕೂಡಾ ವ್ಯಕ್ತಿಗಳ ಸಮೂಹ Association of Persons –AOP) ಎಂಬ ಶೀರ್ಷಿಕೆಯಡಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಬಾಧ್ಯಸ್ಥರಾಗುತ್ತವೆ.
ನೋಂದಣಿ ಯಾಕೆ?
ಯಾವುದೇ ಸಂಸ್ಥೆ ನೋಂದಣಿಯಾದರೆ ಅದಕ್ಕೆ ಕಾನೂನಿನ ಅನ್ವಯ ಪ್ರತ್ಯೇಕ ಅಸ್ತಿತ್ವ ಲಭಿಸು ತ್ತದೆ. ಅದು ತನ್ನದೇ ಹೆಸರಿನಲ್ಲಿ ಆಸ್ತಿ ಖರೀದಿಸಬಹುದು. ಯಾವುದೇ ನ್ಯಾಯಾಲಯದಲ್ಲಿ ತನ್ನ ಹೆಸರಿನಲ್ಲಿ ದಾವೆ ಹೂಡಬಹುದು ಮತ್ತು ಅದರ ವಿರುದ್ಧ ಕೂಡಾ ಇತರರು ದಾವೆ ಹೂಡಬಹುದು. ಸಂಘಗಳ ನೋಂದಣಿಗೆ ಕೆಲವು ಕಾಯಿದೆಗಳಿವೆ. ಅದು ಸಹಕಾರೀ ಸಂಘವಾದರೆ ಆಯಾ ರಾಜ್ಯಗಳ ಸಹಕಾರೀ ಸಂಘಗಳ ಕಾಯಿದೆ, ಇತರ ಸಂಘಗಳಿಗೆ ಸೊಸೈಟಿ ಕಾಯಿದೆ, ಟ್ರಸ್ಟ್‌ಗಳಿಗೆ ಭಾರತೀಯ ಟ್ರಸ್ಟ್ ಕಾಯಿದೆ ಅನ್ವಯವಾಗುತ್ತದೆ.
ಪಾಲುದಾರಿಕೆ, ಕಂಪನಿ ಮುಂತಾದ ವಾಣಿಜ್ಯ ಸಂಸ್ಥೆಗಳಿಗೆ ಭಾರತೀಯ ಪಾಲುದಾರಿಕೆ ಕಾಯಿದೆ, ಕಂಪನಿ ಕಾಯಿದೆಗಳು ಅನ್ವಯವಾಗುತ್ತವೆ. ಇನ್ನು ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗಳು ವಾಣಿಜ್ಯ ವ್ಯವಹಾರಗಳನ್ನು ನಡೆಸುತ್ತಿದ್ದರೆ ಕೆಲವು ನಿಯಮಗಳಿಗೊಳಪಟ್ಟು ಜಿಎಸ್‌ಟಿ ಕಾಯಿದೆ, ಪ್ರೊವಿ ಡೆಂಟ್ ಫಂಡ್, ವೃತ್ತಿ ತೆರಿಗೆ, ಕಾರ್ಮಿಕ ಕಾನೂನುಗಳು ಮುಂತಾದ ಕಾಯಿದೆಗಳಡಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ. ಅಂಥ ನೋಂದಣಿಗೆ ಕೂಡಾ ನಿರ್ದಿಷ್ಟ ವ್ಯವಹಾರದ ಮಟ್ಟದ ವರೆಗೆ ವಿನಾಯತಿ ಇರುತ್ತದೆ.
ಸರಕಾರದ ಯೋಜನೆಗಳ ಅಥವಾ ಅನುದಾನಗಳ ಅಡಿಯಲ್ಲಿ ಲಾಭ ಪಡೆಯುವ ಸಂಸ್ಥೆಗಳು ಅಂಥ ಯೋಜನೆಗಳ ನಿಯಮಗಳ ಅನ್ವಯ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಿರುತ್ತದೆ. ಆದರೆ ಸ್ವ-ಸಹಾಯ ಸಂಘಗಳು ನೋಂದಾಯಿತವಲ್ಲದಿದ್ದರೂ ಬ್ಯಾಂಕ್ ಖಾತೆ ತೆರೆಯಬಹುದು, ಸಾಲ ಪಡೆಯಬಹುದು ಮತ್ತು ಸರಕಾರದ ಸಹಾಯಧನ ಕೂಡಾ ಅವುಗಳಿಗೆ ಲಭ್ಯವಿದೆ.
ಸಂಸ್ಥೆಯೊಂದನ್ನು ನೋಂದಣಿ ಮಾಡಲು ಸಂಬಂಧ ಪಟ್ಟ ನೋಂದಣಿ ಅಧಿಕಾರಿಗಳಿಗೆ (ಉದಾ ಹರಣೆಗೆ ಸಂಘಗಳ ರೆಜಿಸ್ಟ್ರಾರ್) ಕನಿಷ್ಠ ೭ ವ್ಯಕ್ತಿಗಳು, ಸಂಸ್ಥೆಯ ಬೈಲಾ, ಅಥವಾ ನಿಯಮಾವಳಿಗಳ ಜೊತೆಗೆ ನಿಗದಿತ ನಮೂನೆಯಲ್ಲಿ ನೋಂದಣಿ ಫೀ ಪಾವತಿ ಮಾಡಿ ಸಂಬಂಧ ಪಟ್ಟ ನೋಂದಣಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು.
ಸೊಸೈಟಿ ಕಾಯಿದೆಯಲ್ಲಿ ನೋಂದಣಿಯಾದ ಸಂಸ್ಥೆಗಳು ಕಾಲ ಕಾಲಕ್ಕೆ ತಮ್ಮ ಪದಾಧಿಕಾರಿಗಳ ಯಾದಿ, ಸಾಮಾನ್ಯ ಸಭೆಯಲ್ಲಿ ಅಂಗೀಕಾರವಾದ ಲೆಕ್ಕ ಪತ್ರಗಳು, ಆಡಿಟ್ ವರದಿ ಮುಂತಾದ ದಾಖಲೆಗಳನ್ನು ಸಲ್ಲಿಸಿ ನೋಂದಣಿಯನ್ನು ರಿನ್ಯೂವಲ್ ಮಾಡಿಸಿಕೊಳ್ಳಬೇಕು. ತಪ್ಪಿದರೆ ನೋಂದಣಿಯನ್ನು ರದ್ದುಪಡಿಸುವ ಅಧಿಕಾರ ಕೂಡಾ ನೋಂದಣಿ ಅಧಿಕಾರಿಗಳಿಗೆ ಇರುತ್ತದೆ.
ಆರ್‌ಎಸ್‌ಎಸ್ ಮತ್ತು ನೋಂದಣಿ
ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಸ್ವಾತಂತ್ರ್ಯಪೂರ್ವದಲ್ಲಿ ಅಂದರೆ 1925ರಲ್ಲಿ ಆರಂಭಿಸು ವಾಗ ಅದಕ್ಕೊಂದು ಸಾಂಸ್ಥಿಕ ಸ್ವರೂಪ ಇರಲಿಲ್ಲ. ಆಗ 1860ರ ಸೊಸೈಟಿ ಕಾಯಿದೆ ಅಸ್ತಿತ್ವದಲ್ಲಿ ಇದ್ದಿತ್ತಾದರೂ ಬಹುಶಃ ನೋಂದಣಿಗಾಗಿ ಬ್ರಿಟಿಷರಿಗೆ ಅರ್ಜಿ ಸಲ್ಲಿಸುವ ಮನಸ್ಥಿತಿಯಲ್ಲಿ ಸಂಘದ ಸಂಸ್ಥಾಪಕರಾದ ಡಾ.ಹೆಡಗೇವಾರರು ಇರಲಿಲ್ಲ. ಅದೊಂದು ಅನೌಪಚಾರಿಕ ಸಂಘಟನೆಯಾಗಿ ಶಾಖೆಗಳನ್ನು, ದೈಹಿಕ/ಬೌದ್ಧಿಕವರ್ಗಗಳನ್ನು ನಡೆಸಿಕೊಂಡು ಬಂದಿತು. 1948ರ ವರೆಗೂ ಅದಕ್ಕೊಂದು ಕಾನೂನು ಸ್ವರೂಪ ನೀಡುವ ಅಗತ್ಯ ಸಂಘದ ಮುಖ್ಯಸ್ಥರಿಗೆ ಕಾಣಲಿಲ್ಲ. 1948ರ ಗಾಂಧಿ ಹತ್ಯೆಯ ನಂತರ ಸಂಘವನ್ನು ನಿಷೇಧಿಸಲಾಯಿತು.
ಆ ನಿಷೇಧದ ಷಡ್ಯಂತ್ರದಿಂದ ಹೊರಬರುವ ಪ್ರಯತ್ನದಲ್ಲಿ ಸಂಘವು ತನ್ನ ಧೋರಣೆ, ನೀತಿ, ನಿಯಮಗಳನ್ನೊಳಗೊಂಡ ಸಂವಿಧಾನ ಅಂದರೆ ಬೈಲಾವನ್ನು ಅಳವಡಿಸಿಕೊಂಡು ಸರಕಾರಕ್ಕೆ ಸಲ್ಲಿಸಿತು. ಅಲ್ಲಿ ಸಾಮಾನ್ಯ ಸಂಘಗಳಿಗಿರುವಂತೆ ಆರ್ಥಿಕ ವ್ಯವಸ್ಥೆ, ಸಂಘಟನೆಯ ವಿವಿಧ ಸ್ತರಗಳು, ಪದಾಧಿಕಾರಿಗಳನ್ನು ಆರಿಸಲು ಚುನಾವಣಾ ವ್ಯವಸ್ಥೆ ಎಂಬೆಲ್ಲ ನಿಯಮಗಳನ್ನು ಅಧಿಕೃತವಾಗಿ ಒಪ್ಪಿಕೊಳ್ಳಲಾಯಿತು. ಆ ಬೈಲಾ ಮತ್ತು ಅಧಿಕೃತ ಹೇಳಿಕೆಗಳಲ್ಲಿ ಯಾವದೇ ರಾಷ್ಟ್ರ ವಿರೋಧಿ ಅಂಶಗಳು ಇರದಿದ್ದ ಕಾರಣಕ್ಕೆ ನಿಷೇಧ 1949ರಲ್ಲಿ ತೆರವಾಯಿತು.
ತುರ್ತುಪರಿಸ್ಥಿತಿಯ ಅವಧಿಯಾದ 1975ರಿಂದ 1977ರ ವರೆಗೆ ಮತ್ತು 1992ರಲ್ಲಿ ಅಂದರೆ ಬಾಬ್ರಿ ಮಸೀದಿ ಧ್ವಂಸವಾದಾಗ ಸಂಘವನ್ನು ಪುನಃ ನಿಷೇಧಿಸಲಾಯಿತು. ಆ ಆದೇಶವನ್ನು ದೆಹಲಿ ಹೈಕೋರ್ಟಿನ ಆದೇಶದ ಹಿನ್ನೆಲೆಯಲ್ಲಿ ತೆರವುಗೊಳಿಸಲಾಯಿತು.
ಯಾವುದೇ ರಾಜ್ಯದ ಗೃಹ ಇಲಾಖೆಗೆ ಪೋಲೀಸ್, ಕಾನೂನು ಸುವ್ಯವಸ್ಥೆ, ವಿಚಕ್ಷಣೆ, ಜೈಲುಗಳ ನಿರ್ವಹಣೆ, ಅಪರಾಧ ತನಿಖೆ ಮುಂತಾದ ಕಾರ್ಯಗಳಿರುತ್ತವೆ. ಸಾಮಾನ್ಯವಾಗಿ ಅಪರಾಧ ಅಥವಾ ಕಾನೂನು ಸುವ್ಯವಸ್ಥೆಯ ಸಮಸ್ಯೆ ಇದ್ದಲ್ಲಿ ಮಾತ್ರ ಗೃಹಖಾತೆ ಮಧ್ಯ ಪ್ರವೇಶಿಸುತ್ತದೆ. ಅದು ಅಪರಾಧ ವಿಚಾರಣೆಯಾಗಿದ್ದಲ್ಲಿ ಪತ್ರ ಬರೆದು ಕಾಗದ ಪತ್ರಗಳನ್ನು ಕೇಳುವ ಬದಲು ಅಧಿಕಾರಿಗಳ ಮೂಲಕ ಇಂಥ ಕಾರಣಗಳಿಗೆ ನೀವು ಕಾನೂನು ಪಾಲಿಸಲು ವಿಫಲರಾಗಿದ್ದೀರಿ, ಇಂಥ ಕಾನೂನಿನ ಪ್ರಕಾರ ನೀವು ಅಪರಾಧ ಎಸಗಿದ್ದೀರಿ ಎಂಬ ಭಾಷೆಯಲ್ಲಿ ನೋಟೀಸು ನೀಡಲಾಗುತ್ತದೆ. ಈಗ ಮಾನ್ಯ ಸಚಿವರು ಬರೆದ ಪತ್ರದ ಭಾಷೆ ನೋಡಿದರೆಸಂಘವು ನೋಂದಣಿಯಾಗಿರಬೇಕಿತ್ತು ಎಂಬ ಬಗ್ಗೆ ಅಥವಾ ಸಂಘವು ಕಾನೂನು ಉಲ್ಲಂಘನೆ ಮಾಡಿದ ಬಗ್ಗೆ ಸ್ವತಃ ಗೃಹ ಇಲಾಖೆಗೇ ಸ್ಪಷ್ಟತೆ ಇಲ್ಲ ಎನ್ನಬೇಕಾಗುತ್ತದೆ.
ದೇಶವ್ಯಾಪಿ ಕಾರ್ಯವ್ಯಾಪ್ತಿ ಹೊಂದಿರುವ ಸಂಘದ ಆದಾಯ, ಲೆಕ್ಕ ಪತ್ರ ಆಥವಾ ಇತರ ವಿವರ ಗಳನ್ನು ಕೇಳುವಾಗ ಮಾನ್ಯ ಸಚಿವರು ತಮ್ಮ ಇಲಾಖೆಯ ಕಾರ್ಯ ವ್ಯಾಪ್ತಿಯನ್ನು ಗಮನಿಸಿಲ್ಲ ಎಂದೆನಿಸುತ್ತದೆ. ಅಲ್ಲದೆ ಸಂಘದ ಮುಖ್ಯ ಕಾರ್ಯಾಲಯ ನಾಗಪುರದಲ್ಲಿದೆ ಹೊರತು ಕರ್ನಾಟಕ ದಲ್ಲಲ್ಲ ಎಂಬುದು ಕೂಡಾ ಕಾರ್ಯವ್ಯಾಪ್ತಿಯ ದೃಷ್ಟಿಯಿಂದ ಮಹತ್ವದ್ದಾಗುತ್ತದೆ. ಯಾವುದೇ ಅಪರಾಧ ತನಿಖೆಯ ಭಾಗವಾಗಿರದೆ ಆದಾಯ ಮತ್ತು ಲೆಕ್ಕ ಪತ್ರಗಳ ವಿವರಗಳನ್ನು ಕೇಳಿರುವುದು ಕೂಡಾ ಪ್ರಶ್ನಾರ್ಹವೆನಿಸುತ್ತದೆ.
ಮೊನ್ನೆಯಷ್ಟೇ ನಡೆದ ಇನ್ನೊಂದು ಘಟನೆಯನ್ನೂ ಇಲ್ಲಿ ಪ್ರಸ್ತಾವಿಸಲೇ ಬೇಕು. ಸಂಘದ ಕಾರ್ಯಕ್ರಮವೊಂದಕ್ಕೆ ಹಾಜರಾದ ಮೂವರು ವಿಶ್ವ ವಿದ್ಯಾಲಯದ ಉಪಕುಲಪತಿಗಳಿಗೆ ಕೇರಳ ಸರಕಾರ ಶಿಕ್ಷೆ ವಿಧಿಸಲು ಮುಂದಾಗಿರುವುದು ಇಂಥ ಎಲ್ಲ ಸಂಗತಿಗಳ ಸಾಮಾನ್ಯ ಸೂತ್ರವನ್ನು ಸೂಚಿಸುತ್ತದೆ.
ಪತ್ರದ ಬಗ್ಗೆ ಕೇಳಿದ ಪ್ರಶ್ನೆಗೆ ಸಂಘದ ಸರಸಂಚಾಲಕರು ತಾವು ಅದಕ್ಕೆ ಪ್ರತಿಕ್ರಿಯಿಸಬೇಕಿಲ್ಲ ಎಂದು ಹೇಳುತ್ತ ‘We are used to it’ ಅಂದರೆ ‘ಇಂಥವು ನಮಗೆ ಅಭ್ಯಾಸವಾಗಿವೆ’ ಅಂದಿದ್ದಾರೆ. ಯಾಕೆಂದರೆ ಸಂಘದ ನಿಷೇಧ, ಸಂಘಕ್ಕೆ ಸರಕಾರಿ ನೌಕರರು ಸೇರುವುದಕ್ಕೆ ನಿಷೇಧ ಇವೆಲ್ಲ ನಡೆಯುತ್ತಲೇ ಇವೆ. ಅಂಥ ಪ್ರಯತ್ನಗಳಿಗೆಲ್ಲ ನ್ಯಾಯಾಲಯಗಳಲ್ಲಿ ಸೋಲುಂಟಾಗಿದೆ. ಸುಪ್ರೀಂ ಕೋರ್ಟು ‘ಸುಮನ್ ಗುಪ್ತಾ ವರ್ಸಸ್ ಜಮ್ಮು ಮತ್ತು ಕಾಶ್ಮೀರ ಸರಕಾರ’, ‘ಮನೇಕಾ ಗಾಂಧಿ ವರ್ಸಸ್ ಭಾರತ ಸರಕಾರ’ದಂಥ ಅನೇಕ ಪ್ರಕರಣಗಳಲ್ಲಿ ಹೇಳಿದಂತೆ ‘ಸಕಾರಣ ಮತ್ತು ತರ್ಕಗಳ ಆಧಾರ ವಿಲ್ಲದೆ, ವ್ಯಕ್ತಿಗಳ ವೈಯಕ್ತಿಕ ಅಭಿಪ್ರಾಯ ಹಾಗೂ ಆಸಕ್ತಿ ಆಧಾರಿತ ನಿರಂಕುಶ ಆಡಳಿತಾತ್ಮಕ ಕ್ರಮಗಳು ಸಂವಿಧಾನದತ್ತ ಹಕ್ಕುಗಳ ಉಲ್ಲಂಘನೆಯಾಗುತ್ತವೆ.’
ಮಧ್ಯಪ್ರದೇಶ ಸರಕಾರ ವರ್ಸಸ್ ರಾಮಶಂಕರ ರಘುವಂಶಿ, ಪುರುಷೋತ್ತಮ ಗುಪ್ತಾ ವರ್ಸಸ್ ಭಾರತ ಸರಕಾರ, ಕಮಿಷನರ್ ಆಫ್ ಇನಕಮ್ ಟ್ಯಾಕ್ಸ್ ವರ್ಸಸ್ ಆರೆಸ್ಸೆಸ್ ಮುಂತಾದ ಪ್ರಕರಣ ಗಳಲ್ಲೂ ಇಂಥದ್ದೇ ಅವಲೋಕನಗಳನ್ನು ಮಾಡಲಾಗಿದೆ ದೇಶ ವಿದೇಶಗಳಲ್ಲೂ ಚಟುವಟಿಕೆ ಗಳಿರುವ 60 ಲಕ್ಷಕ್ಕೂ ಅಧಿಕ ಸ್ವಯಂಸೇವಕರ ಬೃಹತ್ ಸಂಘಟನೆಯೊಂದು ನೋಂದಣಿ ಯಾಗಿರಬೇಕಿತ್ತು ಎಂಬುದು ಸಮಂಜಸವೆನಿಸಿದರೂ, ಕಾನೂನಿನ ಪ್ರಶ್ನೆ ಬಂದಾಗ ಅದು ಅವರ ವಿವೇಚನೆಗೆ ಬಿಟ್ಟ ವಿಷಯವಾಗುತ್ತದೆ.
ಅದನ್ನು ಪ್ರಶ್ನಿಸುವುದಿದ್ದಲ್ಲಿ ಸೂಕ್ತ ಕಾನೂನಿನ ಮೊರೆ ಹೋಗಬೇಕಲ್ಲದೆ ಪತ್ರಗಳ ಮೂಲಕ ಕೆಲಸವಾಗಲಿಕ್ಕಿಲ್ಲ. ನಮ್ಮ ಸರಕಾರ ಬರೆದ ಪತ್ರಕ್ಕೆ ಸಂಘದಿಂದ ಉತ್ತರವೇ ಬರದಿದ್ದರೆ ಏನು ಮಾಡಬಹುದು ಎಂದು ಮಾನ್ಯ ಸಚಿವರು ಈಗಾಗಲೇ ಯೋಚಿಸಿರಬಹುದು.