Vishweshwar Bhat Column: ಆ ಟಿಪ್ಪರರಿ ಮತ್ತು ತಿಪ್ಪಾರಳ್ಳಿ ನಡುವೆ ಹತ್ತಾರು ನೆನಪುಗಳು !
ಟಿಪ್ಪರರಿ ಐರ್ಲೆಂಡ್‌ನ ಅತಿದೊಡ್ಡ ಒಳನಾಡಿನ ಕೌಂಟಿ. ಇದು ಸಮುದ್ರ ತೀರವನ್ನು ಹೊಂದಿ ಲ್ಲದಿದ್ದರೂ, ಪ್ರಕೃತಿ ಸೌಂದರ್ಯಕ್ಕೆ ಕೊರತೆಯಿಲ್ಲ. ಸದಾ ನಿದ್ದೆಯಲ್ಲಿರುವಂತೆ, ನಿಧಾನ ಜೀವನಗತಿ ಹೊಂದಿರುವ ಊರು. ಲಿಮೆರಿಕ್ ನಗರದಿಂದ ಮುಕ್ಕಾಲು ಗಂಟೆ ಕಾರಿನಲ್ಲಿ ಪ್ರಯಾಣದಷ್ಟು ಹತ್ತಿರದಲ್ಲಿರುವ ಪಟ್ಟಣ. ಜನಸಂಖ್ಯೆ ಹೆಚ್ಚೆಂದರೆ ಐದಾರು ಸಾವಿರ ಇರಬಹುದು.
-
ಇದೇ ಅಂತರಂಗ ಸುದ್ದಿ
ನಾನು ಒಂಬತ್ತು ವರ್ಷಗಳ ಹಿಂದೆ, ಐರ್ಲೆಂಡ್‌ನ ಮನ್'ಟರ್ ಪ್ರಾಂತ್ಯದಲ್ಲಿರುವ ಟಿಪ್ಪರರಿ ಎಂಬ ಊರಿಗೆ ಹೋಗಿದ್ದೆ. ಈ ಊರು ತನ್ನ ಐತಿಹಾಸಿಕ ಶ್ರೀಮಂತಿಕೆ, ಫಲವತ್ತಾದ ಕೃಷಿ ಭೂಮಿ ಮತ್ತು ಸಾಂಸ್ಕೃತಿಕ ಪರಂಪರೆಗೆ ವಿಶ್ವಪ್ರಸಿದ್ಧವಾಗಿದೆ. ನಾನು ಈ ಊರಿನ ಹೆಸರನ್ನು ಕೇಳಿದ್ದು ದಿವಂಗತ ಪತ್ರಕರ್ತ ವೈಎನ್ಕೆ ಅವರಿಂದ.
“ಟಿ.ಪಿ.ಕೈಲಾಸಂಗೆ ಈ ಊರು ಬಹಳ ಇಷ್ಟವಾಗಿತ್ತು. ಅವರು It's a long way to Tipperary ಎಂಬ ಹಾಡನ್ನು ಅದೇ ಧಾಟಿಯಲ್ಲಿ ‘ನಮ್ಮ ತಿಪ್ಪಾರಳ್ಳಿ ಬಲುದೂರ’ ಎಂದು ಕನ್ನಡಕ್ಕೆ ಅನುವಾದಿಸಿದ್ದರು ಎಂದು ಅನೇಕ ಸಲ ಹೇಳುತ್ತಿದ್ದುದನ್ನು ಕೇಳಿದ್ದೆ. ವೈಎನ್ಕೆ ಹೇಳದಿದ್ದರೆ ನಾನು ಖಂಡಿತವಾಗಿಯೂ ಆ ಊರಿಗೆ ಹೋಗುತ್ತಿರಲಿಲ್ಲ.
ಟಿಪ್ಪರರಿ ಐರ್ಲೆಂಡ್‌ನ ಅತಿದೊಡ್ಡ ಒಳನಾಡಿನ ಕೌಂಟಿ. ಇದು ಸಮುದ್ರ ತೀರವನ್ನು ಹೊಂದಿಲ್ಲದಿದ್ದರೂ, ಪ್ರಕೃತಿ ಸೌಂದರ್ಯಕ್ಕೆ ಕೊರತೆಯಿಲ್ಲ. ಸದಾ ನಿದ್ದೆಯಲ್ಲಿರುವಂತೆ, ನಿಧಾನ ಜೀವನಗತಿ ಹೊಂದಿರುವ ಊರು. ಲಿಮೆರಿಕ್ ನಗರದಿಂದ ಮುಕ್ಕಾಲು ಗಂಟೆ ಕಾರಿ ನಲ್ಲಿ ಪ್ರಯಾಣದಷ್ಟು ಹತ್ತಿರದಲ್ಲಿರುವ ಪಟ್ಟಣ. ಜನಸಂಖ್ಯೆ ಹೆಚ್ಚೆಂದರೆ ಐದಾರು ಸಾವಿರ ಇರಬಹುದು.
ಇಲ್ಲಿನ ಅತ್ಯಂತ ಗಮನಾರ್ಹ ಭೌಗೋಳಿಕ ಲಕ್ಷಣವೆಂದರೆ ‘ಗೋಲ್ಡನ್ ವೇಲ್’. ಇದು ಯುರೋಪಿನ ಅತ್ಯಂತ ಫಲವತ್ತಾದ ಭೂಭಾಗಗಳಲ್ಲಿ ಒಂದಾಗಿದ್ದು, ಡೈರಿ ಫಾರ್ಮಿಂಗ್ ಅಥವಾ ಹೈನುಗಾರಿಕೆಗೆ ಹೆಸರುವಾಸಿಯಾಗಿದೆ. ಇಲ್ಲಿನ ಹಸಿರು ಹುಲ್ಲುಗಾವಲುಗಳು ಉತ್ತಮ ಗುಣಮಟ್ಟದ ಹಾಲು ಮತ್ತು ಚೀಸ್ ಉತ್ಪಾದನೆಗೆ ಪೂರಕವಾಗಿವೆ.
ಇದನ್ನೂ ಓದಿ: Vishweshwar Bhat Column: ಕೊಂಬಿಲ್ಲದ ಖಡ್ಗಮೃಗಗಳು: ದಕ್ಷಿಣ ಆಫ್ರಿಕಾದ ಸಂರಕ್ಷಣಾ ಕ್ರಾಂತಿ !
ಟಿಪ್ಪರರಿ ಎಂದ ತಕ್ಷಣ ನೆನಪಿಗೆ ಬರುವುದು ‘ರಾಕ್ ಆಫ್ ಕಾಷೆಲ’ (The Rock of Cashel). ಇದು ಐರ್ಲೆಂಡ್‌ನ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದು. ಇದು ಶತಮಾನಗಳ ಕಾಲ ‘ಮನ್‌ಸ್ಟರ್’ ಪ್ರಾಂತ್ಯದ ರಾಜರ ಆಸ್ಥಾನವಾಗಿತ್ತು. ಇಲ್ಲಿ ಹನ್ನೆರಡು ಮತ್ತು ಹದಿಮೂ ರನೇ ಶತಮಾನದ ಅದ್ಭುತ ವಾಸ್ತುಶಿಲ್ಪದ ಚರ್ಚ್‌ಗಳು ಮತ್ತು ಗೋಪುರಗಳಿವೆ.
ಐರ್ಲೆಂಡ್ʼನ ಸುಪ್ರಸಿದ್ಧ ರಾಜ ಬ್ರಿಯಾನ್ ಬೋರು ಇಲ್ಲಿಯೇ ಪಟ್ಟಾಭಿಷೇಕ ಮಾಡಿಸಿ ಕೊಂಡ ಬಗ್ಗೆ ಅನೇಕ ರಸವತ್ತಾದ ಕಥೆಗಳಿವೆ. ಟಿಪ್ಪರರಿ ನೋಡದವರಿಗಿಂತ, ಆ ಹೆಸರನ್ನು ಕೇಳಿದವರೇ ಹೆಚ್ಚಿರಬಹುದು. ಈ ಊರಿನ ಹೆಸರು ಜಗತ್ತಿನಾದ್ಯಂತ ಪಸರಿಸಲು It's a Long Way to Tipperary’ ಎಂಬ ಹಾಡು ಪ್ರಮುಖ ಕಾರಣ.
ಒಂದನೇ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷ್ ಸೈನಿಕರು ತಮ್ಮ ಮನೆಯ ನೆನಪಾದರೆ ಈ ಹಾಡನ್ನು ಹಾಡುತ್ತಿದ್ದರು. ಇದು ಕೇವಲ ಒಂದು ಹಾಡಾಗಿ ಉಳಿಯದೇ, ದೂರ ದಲ್ಲಿರುವ ಪ್ರೀತಿಪಾತ್ರರನ್ನು ಮತ್ತು ತಾಯ್ನಾಡನ್ನು ನೆನೆಯುವ ಸಂಕೇತವಾಯಿತು.
ಐರಿಷ್ ಸಂಸ್ಕೃತಿ, ಧೈರ್ಯ ಮತ್ತು ಆತಿಥ್ಯದ ಪ್ರತೀಕವಾಗಿರುವ ಟಿಪ್ಪರರಿ, ಕನ್ನಡಿಗರಿಗೆ ಅಪರಿಚಿತವೇನಲ್ಲ. ನಾನು ಈ ಊರನ್ನು ಹುಡುಕಿಕೊಂಡು ಹೋಗಲು ಮುಖ್ಯ ಕಾರಣ ಕೂಡ ವೈಎನ್ಕೆ ಸದಾ ಗುನುಗುತ್ತಿದ್ದ ಆ ಹಾಡೇ- ‘ಇಟ್ಸ್ ಎ ಲಾಂಗ್ ವೇ ಟು ಟಿಪ್ಪರರಿ’. ಭಾರತದಲ್ಲೂ ಬ್ರಿಟಿಷ್ ಆಳ್ವಿಕೆಯಿದ್ದ ಕಾಲದಲ್ಲಿ ಈ ಹಾಡು ಸಾಕಷ್ಟು ಪ್ರಸಿದ್ಧಿ ಪಡೆದಿತ್ತು.
ಈ ಹಾಡು ಕನ್ನಡಕ್ಕೂ ಹರಿದು ಬಂದಿದೆ ಅಂದ್ರೆ ಅಚ್ಚರಿಯಾಗಬಹುದು. ಈ ಹಾಡು ಕೇವಲ ಯುದ್ಧದ ಗೀತೆಯಾಗಿ ಉಳಿಯದೇ, ವಿಶ್ವಾದ್ಯಂತ ಮನ್ನಣೆ ಪಡೆದಿದ್ದು ಸೋಜಿಗ ವೇ. ಈ ಹಾಡನ್ನು ಕನ್ನಡಕ್ಕೆ ಅತ್ಯಂತ ಸುಂದರವಾಗಿ ಮತ್ತು ಭಾವನಾತ್ಮಕವಾಗಿ ಅನುವಾದಿಸಿದ ಕೀರ್ತಿ ಖ್ಯಾತ ಸಾಹಿತಿ ಟಿ.ಪಿ.ಕೈಲಾಸಂ ಅವರಿಗೆ ಸಲ್ಲುತ್ತದೆ. ಅವರು ಈ ಹಾಡನ್ನು ಅಣಕುರೂಪದಲ್ಲಿ ಕನ್ನಡದ ಸೊಗಡಿಗೆ ಒಗ್ಗುವಂತೆ ಭಾಷಾಂತರಿಸಿದ್ದರು.
ಮೂಲ ಇಂಗ್ಲಿಷಿನ ಈ ಹಾಡಿನ ಮೊದಲ ಚರಣ:
It's a long way to Tipperary,
It's a long way to go.
It's a long way to Tipperary,
To the sweetest girl I know!
Goodbye, Piccadilly,
Farewell, Leicester Square!
ಇದನ್ನು ಕೈಲಾಸಂ ಹೀಗೆ ಅನುವಾದಿಸಿದ್ದಾರೆ:
ನಮ್ ತಿಪ್ಪಾರಳ್ಳಿ ಬಲು ದೂರಾ
ನಡೆಯಕ್ ಬಲು ದೂರಾ
ನಮ್ ತಿಪ್ಪಾರಳ್ಳಿ ಬಲು ದೂರಾ
ಅಲ್ಲಿ ನಡೆಯೋಳ್ ನಮ್ ಬಸ್ವಿ
ಆ ಕಾಲದ ಕನ್ನಡದ ಹಲವು ನಾಟಕಗಳಲ್ಲಿ ಮತ್ತು ಸಭೆಗಳಲ್ಲಿ ಇಂಥ ಪಾಶ್ಚಾತ್ಯ ಧಾಟಿಗಳ ಹಾಡು ಗಳನ್ನು ಅಳವಡಿಸಿಕೊಳ್ಳುವ ಸಂಪ್ರದಾಯವಿತ್ತು. ಈ ಹಾಡು ಜನಪ್ರಿಯವಾಗಲು ಕಾರಣ ವೇನು? ಟಿಪ್ಪರರಿ ಎಂಬುದು ಐರ್ಲೆಂಡ್‌ನ ಒಂದು ಊರಾದರೂ, ಭಾರತೀಯ ಸೈನಿಕರು ಕೂಡ ಬ್ರಿಟಿಷ್ ಸೇನೆಯಲ್ಲಿದ್ದಾಗ ತಮ್ಮ ಊರುಗಳನ್ನು ನೆನೆಯಲು ಈ ರಾಗ ವನ್ನು ಬಳಸುತ್ತಿದ್ದರು.
ಇದರ ರಾಗವು ಅತ್ಯಂತ ಸರಳವಾಗಿದ್ದು, ಗುಂಪಿನಲ್ಲಿ ಹಾಡಲು ಸುಲಭವಾಗಿತ್ತು. ಟಿಪ್ಪರರಿ ಹಾಡು ಕನ್ನಡಕ್ಕೆ ಬಂದಾಗ ಅದು ಕೇವಲ ಅನುವಾದವಾಗಿ ಉಳಿಯಲಿಲ್ಲ. ಅದು ಕನ್ನಡದ ‘ಭಾವಗೀತೆ’ ಪರಂಪರೆಯ ಮೇಲೆ ಪ್ರಭಾವ ಬೀರಿತು. ದೂರದ ಊರಿನ ನೆನಪು,
ಹಳ್ಳಿಯ ಸೊಬಗು, ಹಳ್ಳಿಗರ ಮುಗ್ಧತೆಯನ್ನು ವ್ಯಕ್ತಪಡಿಸುವ ಹಾಡುಗಳಿಗೆ ಇದೊಂದು ಮಾದರಿಯಾಯಿತು. ಈ ಹಾಡನ್ನು ಕೇವಲ ಕನ್ನಡದಲ್ಲಷ್ಟೇ ಅಲ್ಲದೆ, ಪ್ರಪಂಚದ ಸುಮಾರು 40ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಿಸಲಾಗಿದೆ. ವಿಚಿತ್ರವೆಂದರೆ, ಈ ಹಾಡನ್ನು ಬರೆದ ಜ್ಯಾಕ್ ಜಡ್ಜ್ ಇದನ್ನು ಒಂದು ಸ್ಪರ್ಧೆಯಲ್ಲಿ ಬೆಟ್ಸ್ ಕಟ್ಟಿ ಕೇವಲ ಒಂದೇ ದಿನದಲ್ಲಿ ಬರೆದಿದ್ದ!
ಜ್ಯಾಕ್ ಜಡ್ಜ್ ಇಂಗ್ಲೆಂಡ್‌ನ ಒಬ್ಬ ಸಂಗೀತ ಪ್ರದರ್ಶಕ. ಜನವರಿ 30, 1912ರಂದು ಬ್ರಿಟನ್‌ನ ಸ್ಟಾಲಿಬ್ರಿಡ್ಜ್ ಎಂಬಲ್ಲಿ ಪ್ರದರ್ಶನ ನೀಡುತ್ತಿದ್ದಾಗ, ಅವನ ಸ್ನೇಹಿತನೊಬ್ಬ ‘ನೀನು ಒಂದೇ ದಿನದಲ್ಲಿ ಹೊಸ ಹಾಡನ್ನು ಬರೆದು, ಅದಕ್ಕೆ ರಾಗ ಸಂಯೋಜಿಸಿ ಸಂಜೆ ಪ್ರದರ್ಶನ ನೀಡಬಲ್ಲೆಯಾ?’ ಎಂದು ಐದು ಶಿಲ್ಲಿಂಗ್‌ಗಳ ಸವಾಲು ಹಾಕಿದ.
ಜ್ಯಾಕ್ ಈ ಸವಾಲನ್ನು ಸ್ವೀಕರಿಸಿ, ಕೇವಲ ಒಂದೇ ರಾತ್ರಿಯಲ್ಲಿ ಈ ಹಾಡನ್ನು ಸಿದ್ಧಪಡಿಸಿದ. ಜ್ಯಾಕ್ ಜಡ್ಜ್ʼನ ಪೋಷಕರು ಐರ್ಲೆಂಡ್‌ನ ಟಿಪ್ಪರರಿ ಮೂಲದವರಾಗಿದ್ದರು. ಹೀಗಾಗಿ, ಅವನಿಗೆ ಆ ಊರಿನ ಬಗ್ಗೆ ವಿಶೇಷ ಪ್ರೀತಿಯಿತ್ತು. ಈ ಹಾಡು ಲಂಡನ್‌ನಲ್ಲಿ ನೆಲೆಸಿರುವ ಒಬ್ಬ ಐರಿಷ್ ವ್ಯಕ್ತಿಯ ಬಗ್ಗೆ ಇದೆ. ಅವನು ತನ್ನ ಪ್ರೇಯಸಿ ‘ಮೋಲಿ ವೈರ್’ ಮತ್ತು ತನ್ನ ಪ್ರೀತಿಯ ಊರು ‘ಟಿಪ್ಪರರಿ’ಯನ್ನು ನೆನೆಯುತ್ತಾ, ಅಲ್ಲಿಗೆ ಹೋಗುವ ಹಾದಿ ಎಷ್ಟು ದೂರ ವಿದೆ ಎಂದು ಹಾಡುತ್ತಾನೆ. ಆರಂಭದಲ್ಲಿ ಇದು ಯುದ್ಧಗೀತೆಯಾಗಿರದೇ ಕೇವಲ ಒಂದು ಪ್ರೇಮಗೀತೆಯಾಗಿತ್ತು.
1914ರಲ್ಲಿ ಒಂದನೇ ಮಹಾಯುದ್ಧ ಆರಂಭವಾದಾಗ, ಬ್ರಿಟಿಷ್ ಸೇನೆಯ ‘ಕೊನಾಟ್ ರೇಂಜರ್ಸ್’ ಎಂಬ ರೆಜಿಮೆಂಟ್‌ನ ಐರಿಷ್ ಸೈನಿಕರು ಫ್ರಾನ್ಸ್‌ನ ಬೀದಿಗಳಲ್ಲಿ ಮೆರವಣಿಗೆ ಮಾಡುವಾಗ ಈ ಹಾಡನ್ನು ಹಾಡಿದರು. ಇದನ್ನು ಕಂಡ ‘ಡೈಲಿ ಮೇಲ್’ ಪತ್ರಿಕೆಯ ವರದಿ ಗಾರ, ದೊಡ್ಡದಾಗಿ ವರದಿ ಮಾಡಿದಾಗ, ಈ ಹಾಡು ಇಡೀ ಬ್ರಿಟಿಷ್ ಸೇನೆಯಲ್ಲಿ ವೈರಲ್ ಆಯಿತು.
ಸೈನಿಕರಿಗೆ ಇದು ಯುದ್ಧದ ನಡುವೆ ತಮ್ಮ ಮನೆ, ಊರು ಮತ್ತು ಪ್ರೀತಿಪಾತ್ರರನ್ನು ನೆನೆಯಲು ಒಂದು ಆಸರೆಯಾಯಿತು. 1914ರಲ್ಲಿ ಜಾನ್ ಮೆಕ್ ಕಾರ್ಮ್ಯಾಕ್ ಎಂಬ ಗಾಯಕ ಈ ಹಾಡನ್ನು ರೆಕಾರ್ಡ್ ಮಾಡಿದ, ಇದರ ಲಕ್ಷಾಂತರ ಪ್ರತಿಗಳು ಮಾರಾಟವಾಗಿ ದಾಖಲೆ ನಿರ್ಮಿಸಿತು. ಈ ಹಾಡಿನ ಯಶಸ್ಸಿನ ನಂತರ ಜ್ಯಾಕ್ ಜಡ್ಜ್ ಶ್ರೀಮಂತನಾದ. ಆತ ತಾನು ಹುಟ್ಟಿದ ಊರಿನ ಮೇಲೆ ಅಪಾರ ಪ್ರೀತಿ ಹೊಂದಿದ್ದ.
ಇಂದಿಗೂ ಟಿಪ್ಪರರಿಯಲ್ಲಿ ಅವನ ಸ್ಮರಣಾರ್ಥ ಸ್ಮಾರಕಗಳಿವೆ. ಈ ಹಾಡು ಎಷ್ಟು ಪ್ರಸಿದ್ಧ ವಾಯಿತೆಂದರೆ, ಜರ್ಮನ್ ಸೈನಿಕರು ಕೂಡ ಇದನ್ನು ತಮ್ಮದೇ ಭಾಷೆಗೆ ಭಾಷಾಂತರಿಸಿ ಹಾಡುತ್ತಿದ್ದರು! ಈ ಹಾಡನ್ನು ಕೆಲವು ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ಕೂಡ ಹಾಡಿರುವ ದಾಖಲೆಗಳಿವೆ.
ಜ್ಯಾಕ್ ಜಡ್ಜ್ʼನ ಈ ಒಂದು ಸಾಧಾರಣ ಹಾಡು ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿ ಯಾಗಿ ಉಳಿಯಿತು. ಕೈಲಾಸಂ ‘ನಮ್ ತಿಪ್ಪಾರಳ್ಳಿ ಬಲು ದೂರಾ ನಡೆಯಕ್ ಬಲು ದೂರಾ’ ಎಂದು ಬರೆದು ಈ ಹಾಡನ್ನು ಮೂಲ ಧಾಟಿಯಲ್ಲಿ ಹಾಡುತ್ತಿದ್ದರು. ನಂತರ ಸಿ.ಅಶ್ವಥ್ ಅವರು ಮತ್ತಷ್ಟು ಚೆನ್ನಾಗಿ ರಾಗ ಸಂಯೋಜಿಸಿ, ಸ್ವತಃ ಹಾಡಿದಾಗ ಈ ಹಾಡು ಕನ್ನಡ ದಲ್ಲೂ ಪ್ರಸಿದ್ಧವಾಯಿತು. ನಂತರ ಈ ಹಾಡನ್ನು ಎಸ್.ಪಿ.ಬಾಲಸುಬ್ರಹ್ಮಣ್ಯಂ ಕೂಡ ಹಾಡಿದರು.
ನಾನು ಟಿಪ್ಪರರಿಗೆ ಹೋದಾಗ, It's a long way to Tipperary ಹಾಡಿನ ಕನ್ನಡ ಅವತರಣಿಕೆಯಾದ ‘ನಮ್ ತಿಪ್ಪಾರಳ್ಳಿ ಬಲು ದೂರಾ ನಡೆಯಕ್ ಬಲು ದೂರಾ’ ಹಾಡನ್ನು, ನಾನು ಉಳಿದುಕೊಂಡ ಹೋಟೆಲ್ ಮ್ಯಾನೇಜರ್ ಮತ್ತು ಅವರ ಸಿಬ್ಬಂದಿಗೆ ಕೇಳಿಸಿದ್ದೆ. ಅದನ್ನು ಕೇಳಿ ಅವರೂ ಬಹಳ ಖುಷಿಪಟ್ಟಿದ್ದರು.
ಈಗ ನಾನು ಈ ಊರು ಮತ್ತು ಹಾಡನ್ನು ನೆನಪಿಸಿಕೊಳ್ಳಲು ಕಾರಣ, ಐರ್ಲೆಂಡಿನ ಕಾರ್ಕ್ ನಲ್ಲಿ ಸುಮಾರು ಇಪ್ಪತ್ತು ವರ್ಷ ವಾಸವಾಗಿದ್ದ ಚಳ್ಳಕೇರಿಯ ಮಹಾಂತೇಶ ಸ್ವಾಮಿ, ನಾನು ಅಲ್ಲಿಗೆ ಹೋಗಿದಾಗ ನನ್ನ ಅಪೇಕ್ಷೆಯ ಮೇರೆಗೆ ಟಿಪ್ಪರರಿಗೆ ಕರೆದುಕೊಂಡು ಹೋಗಿದ್ದರು. ಎರಡು ದಿನ ಅವರ ಕಾರಿನಲ್ಲಿ ಟಿಪ್ಪರರಿ, ಲಿಮರಿಕ್, ವಾಟರ್ ಫೋರ್ಡ್ ಮುಂತಾದೆಡೆ ಸುತ್ತಾಡಿಸಿದ್ದರು. ಒಂದೂವರೆ ತಿಂಗಳ ಹಿಂದೆ ಅವರು ನಿಧನರಾದರೆಂದು ಹಿಂದಿನ ವಾರವಷ್ಟೇ ಗೊತ್ತಾಯಿತು. ಅವರ ನೆನಪಿನೊಂದಿಗೆ ಟಿಪ್ಪರರಿ ಕೂಡ ಹಾದು ಹೋಯಿತು.
ಮರುಲಾ ಮತ್ತು ಅಮರುಲಾ
ದಕ್ಷಿಣ ಆಫ್ರಿಕಾದಿಂದ ನೀವು ಮರಳುವಾಗ, ಜೋಹಾನ್ಸ್‌ಬರ್ಗ್ ಅಥವಾ ಕೇಪ್ ಟೌನ್ ಡ್ಯೂಟಿ ಫ್ರೀ ಶಾಪ್‌ನಲ್ಲಿ ನನ್ನ ಸ್ನೇಹಿತರೊಬ್ಬರು, ‘ಬರುವಾಗ ಒಳ್ಳೆಯ ದೇಸಿಯ ಗುಂಡು ಬಾಟಲಿ ತೆಗೆದುಕೊಂಡು ಬಾ ಎಂದು ನನ್ನ ಗೆಳೆಯರೊಬ್ಬರು ಹೇಳಿದ್ದಾರೆ. ಯಾವ ಬಾಟಲಿ ಖರೀದಿಸಲಿ?’ ಎಂದು ನಾನೇನೋ ಈ ವಿಷಯದಲ್ಲಿ ಬಹಳ ಪರಿಣತ ಎಂಬಂತೆ ಕೇಳಿದರು.
ನಾನು ಅವರಿಗೆ ತಕ್ಷಣ ‘ಅಮರುಲಾ ಹೆಸರಿನ ಲಿಕ್ಯೂರ್ ತೆಗೆದುಕೊಂಡು ಹೋಗಿ’ ಎಂದು ಹೇಳಿದೆ. ಅದಕ್ಕೆ ಅವರು, ‘ಆ ಹೆಸರಿನ ಲಿಕ್ಕರ್ ಇದೆಯೆಂಬುದೇ ಗೊತ್ತಿಲ್ಲವಲ್ಲ?’ ಎಂದು ಹೇಳಿದರು.
ನಂತರ ನಾನು ಅವರಿಗೆ ಅಮರುಲಾ ಅಂದರೆ ಏನು, ಆ ಹೆಸರು ಹೇಗೆ ಬಂತು, ಲಿಕ್ಕರ್‌ಗೂ, ಲಿಕ್ಯೂರ್‌ಗೂ ಏನು ವ್ಯತ್ಯಾಸ ಎಂದ ಬಳಿಕ ಅವರು ಒಂದರ ಮೇಲೆ ಇನ್ನೊಂದು ಬಾಟಲಿ ಯನ್ನು ಖರೀದಿಸಿದರು. ಅದನ್ನು ಕೇಳಿಸಿಕೊಂಡ ನನ್ನ ಅಕ್ಕಪಕ್ಕ ಇದ್ದವರೂ ಅದನ್ನು ಖರೀದಿಸಿದರು.
ಅಮರುಲಾ (Amarula) ಎಂಬುದು ಕೇವಲ ಮದ್ಯವಲ್ಲ. ಅದು ದಕ್ಷಿಣ ಆಫ್ರಿಕಾದ ಕೆಂಪು ಮಣ್ಣಿನ ಘಮಲು, ವನ್ಯಜೀವಿಗಳ ಬದುಕು ಮತ್ತು ಅಲ್ಲಿನ ಜನರ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಒಂದು ಜೀವಂತ ಕಥೆ. ವಿಶ್ವದಾದ್ಯಂತ ಎರಡನೇ ಅತಿ ದೊಡ್ಡ ಕ್ರೀಮ್ ಲಿಕ್ಯೂರ್ ಆಗಿ ಗುರುತಿಸಿಕೊಂಡಿರುವ ಅಮರುಲಾದ ಹಿಂದೆ ಪ್ರಕೃತಿ ಮತ್ತು ಮನುಷ್ಯನ ನಡುವಿನ ಅಪೂರ್ವ ಸಂಬಂಧವಿದೆ.
ಈ ಪಾನೀಯದ ಆತ್ಮ ಇರುವುದು ‘ಮರುಲಾ’ ಎಂಬ ವಿಶಿಷ್ಟ ಹಣ್ಣಿನಲ್ಲಿ. ಅಮರುಲಾ ತಯಾರಾಗುವುದು ಆಫ್ರಿಕಾದ ಉಪ-ಸಹಾರಾ ಪ್ರದೇಶದ ವಿಶಾಲ ಬಯಲುಗಳಲ್ಲಿ ಬೆಳೆಯುವ ‘ಮರುಲಾ’ ಮರಗಳಿಂದ. ಈ ಮರಗಳನ್ನು ಸ್ಥಳೀಯರು ‘ಗಜವೃಕ್ಷ’ (Elephant Tree) ಅಥವಾ ‘ಸಂತಾನ ವೃಕ್ಷ’ ಎಂದು ಕರೆಯುತ್ತಾರೆ.
ಮರುಲಾ ಮರದ ಅಡಿಯಲ್ಲಿ ಮದುವೆಯಾದರೆ ಆ ದಂಪತಿಗಳಿಗೆ ಸಂತಾನಭಾಗ್ಯ ಮತ್ತು ಸಮೃದ್ಧಿ ಸಿಗುತ್ತದೆ ಎಂಬ ನಂಬಿಕೆ ಆಫ್ರಿಕಾದ ಬುಡಕಟ್ಟು ಜನರಲ್ಲಿ ಇಂದಿಗೂ ಇದೆ. ಈ ಮರಗಳನ್ನು ಯಾರೂ ಬೆಳೆಸುವುದಿಲ್ಲ. ಅವು ತಾವಾಗಿಯೇ ಕಾಡಿನಲ್ಲಿ ಬೆಳೆಯುತ್ತವೆ. ವರ್ಷಕ್ಕೊಮ್ಮೆ ಮಾತ್ರ ಈ ಮರಗಳು ಹಳದಿ ಬಣ್ಣದ, ಸುವಾಸನೆಯುಕ್ತ ಹಣ್ಣುಗಳನ್ನು ಬಿಡುತ್ತವೆ. ಈ ಹಣ್ಣುಗಳಲ್ಲಿ ಕಿತ್ತಳೆ ಹಣ್ಣಿಗಿಂತ ಎಂಟು ಪಟ್ಟು ಹೆಚ್ಚು ‘ವಿಟಮಿನ್ ಸಿ’ ಇರುತ್ತದಂತೆ.
ಅಮರುಲಾ ಬಾಟಲಿಯ ಮೇಲೆ ಆನೆಯ ಚಿತ್ರವಿರುವುದಕ್ಕೆ ಒಂದು ಬಲವಾದ ಕಾರಣವಿದೆ. ಮರುಲಾ ಹಣ್ಣುಗಳು ಮಾಗಿದಾಗ ಹರಡುವ ಸುವಾಸನೆಯು ಮೈಲಿಗಟ್ಟಲೆ ದೂರವಿರುವ ಆನೆಗಳನ್ನು ಸೆಳೆಯುತ್ತದೆ. ಹಣ್ಣುಗಳು ಮಾಗಿದ ತಕ್ಷಣ ಆನೆಗಳ ಹಿಂಡು ಹಿಂಡೇ ಈ ಮರಗಳ ಬಳಿ ಧಾವಿಸುತ್ತವೆ. ಆನೆಗಳು ಈ ಹಣ್ಣನ್ನು ಎಷ್ಟು ಇಷ್ಟಪಡುತ್ತವೆ ಎಂದರೆ, ಮರದ ಕೊಂಬೆಗಳನ್ನು ಜೋರಾಗಿ ಅಡಿಸಿ ಹಣ್ಣುಗಳನ್ನು ಬೀಳಿಸಿ ತಿನ್ನುತ್ತವೆ.
ಹಣ್ಣುಗಳು ಕೆಳಗೆ ಬಿದ್ದು ಕೊಳೆತಾಗ ಅವುಗಳಲ್ಲಿ ನೈಸರ್ಗಿಕವಾಗಿ ಆಲ್ಕೋಹಾಲ್ ಉತ್ಪತ್ತಿ ಯಾಗುತ್ತದೆ. ಇದನ್ನು ತಿಂದ ಆನೆಗಳು ಮತ್ತೇರಿದಂತೆ ಆಡುತ್ತವೆ ಎಂಬ ದಂತಕಥೆ ಯಿದೆ. ಆದರೆ ವಿಜ್ಞಾನಿಗಳ ಪ್ರಕಾರ, ಆನೆಗಳಂಥ ಬೃಹತ್ ಪ್ರಾಣಿಗೆ ಮತ್ತೇರಲು ಸಾವಿರಾರು ಹಣ್ಣುಗಳನ್ನು ತಿನ್ನಬೇಕಾಗುತ್ತದೆ. ಆದರೂ, ಆನೆ ಮತ್ತು ಮರುಲಾ ನಡುವಿನ ಈ ಬಾಂಧವ್ಯ ಅಮರುಲಾ ಬ್ರಾಂಡ್‌ನ ಜೀವಾಳವಾಗಿದೆ.
ಆನೆ ತಿಂದು ಬಿಟ್ಟ ಮರುಲಾ ಹಣ್ಣುಗಳನ್ನು ಕಾಡಿನಲ್ಲಿದ್ದ ಉಳಿದ ಪ್ರಾಣಿಗಳೆಲ್ಲ ತಿಂದು, ಇಡೀ ಕಾಡಿನಲ್ಲಿರುವ ಪ್ರಾಣಿಗಳೆಲ್ಲ ಕುಡಿದು ಟೈಟ್ ಆದವರಂತೆ ವರ್ತಿಸುವ ವಿಡಿಯೋ ಕೆಲ ವರ್ಷಗಳ ಹಿಂದೆ ವೈರಲ್ ಆಗಿದ್ದು ನೆನಪಿರಬಹುದು (ಈಗಲೂ ಆ ವಿಡಿಯೋವನ್ನು ಯೂಟ್ಯೂನಲ್ಲಿ ನೋಡಬಹುದು).
ಅಮರುಲಾ ತಯಾರಿಕೆಯ ಹಿಂದೆ ಸಾವಿರಾರು ಆಫ್ರಿಕನ್ ಮಹಿಳೆಯರ ಮತ್ತು ಹಳ್ಳಿಗರ ಬೆವರಿನ ಕಥೆಯಿದೆ. ಮರುಲಾ ಹಣ್ಣುಗಳನ್ನು ಬೆಳೆಯಲು ಯಾವುದೇ ತೋಟಗಳಿಲ್ಲದ ಕಾರಣ, ಕಾಡಿನಲ್ಲಿ ಅಲ್ಲಲ್ಲಿ ಬೆಳೆದಿರುವ ಮರಗಳಿಂದ ಬಿದ್ದ ಹಣ್ಣುಗಳನ್ನು ಆರಿಸುವುದೇ ಒಂದು ದೊಡ್ಡ ಸವಾಲು. ಕಾಡುಪ್ರಾಣಿಗಳ ಭಯದ ಮಧ್ಯದಲ್ಲಿ ಜೀವದ ಹಂಗು ತೊರೆದು ಈ ಹಣ್ಣುಗಳನ್ನು ಆಯ್ದು ತರುವುದು ಸುಲಭದ ಮಾತಲ್ಲ.
ಸುಗ್ಗಿ ಕಾಲದಲ್ಲಿ ಸಾವಿರಾರು ಹಳ್ಳಿಗರು ಈ ಹಣ್ಣುಗಳನ್ನು ಸಂಗ್ರಹಿಸಲೂ ಕಾಡಿಗೆ ಹೋಗು ತ್ತಾರೆ. ಇದರಿಂದ ಅವರಿಗೆ ಬದುಕಲು ಬೇಕಾದ ಆರ್ಥಿಕ ನೆರವು ಸಿಗುತ್ತದೆ. ಪ್ರತಿ ಹಣ್ಣನ್ನು ಕೈಯಿಂದಲೇ ಆರಿಸಿ, ಅದರ ತಿರುಳನ್ನು ತೆಗೆಯಲಾಗುತ್ತದೆ. ಈ ಮರಗಳನ್ನು ಕಡಿಯು ವಂತಿಲ್ಲ ಎಂಬ ಕಟ್ಟುನಿಟ್ಟಿನ ನಿಯಮವಿದೆ.
ಪ್ರಕೃತಿ ಕೊಟ್ಟದ್ದನ್ನು ಮಾತ್ರ ಪಡೆದು, ಅದಕ್ಕೆ ಪ್ರತಿಯಾಗಿ ಕಾಡನ್ನು ರಕ್ಷಿಸುವ ಕೆಲಸ ವನ್ನು ಅಲ್ಲಿನ ಸಮುದಾಯಗಳು ಮಾಡುತ್ತಿವೆ. ಅಮರುಲಾ ತಯಾರಿಕೆಯು ವೈನ್ ತಯಾರಿಕೆಯಷ್ಟೇ ಸಂಕೀರ್ಣ ಮತ್ತು ಕಲಾತ್ಮಕವಾಗಿದೆ. ಆರಿಸಿದ ಹಣ್ಣಿನ ತಿರುಳನ್ನು ವೈನ್‌ನಂತೆ ಹುದುಗಿಸಲಾಗುತ್ತದೆ. ಈ ಮರುಲಾ ಫಾರ್ಮೆಂಟ್ ಆದ ನಂತರ, ಎರಡು ಬಾರಿ ಭಟ್ಟಿ ಇಳಿಸಿ, ಶುದ್ಧ ಮರುಲಾ ಸ್ಪಿರಿಟ್ ತಯಾರಿಸಲಾಗುತ್ತದೆ. ಈ ಸ್ಪಿರಿಟ್ ಅನ್ನು ಸುಮಾರು ಎರಡು ವರ್ಷಗಳ ಕಾಲ ಓಕ್ ಮರದ ಪೀಪಾಯಿಗಳಲ್ಲಿ ಇಡಲಾಗುತ್ತದೆ.
ಇದರಿಂದ ಪಾನೀಯಕ್ಕೆ ವೆನಿಲ್ಲಾ ಮತ್ತು ಟೋಸ್ಟ್ ಮಾಡಿದ ಮರದ ಘಮ ಬರುತ್ತದೆ. ಕೊನೆಯ ಹಂತದಲ್ಲಿ ಇದಕ್ಕೆ ತಾಜಾ ಕ್ರೀಮ್ ಅನ್ನು ಬೆರೆಸಲಾಗುತ್ತದೆ. ಇದರ ಫಲಿತಾಂಶ ವೇ ರೇಷ್ಮೆಯಂಥ ಮೃದುತ್ವ ಹೊಂದಿದ ಅಮರುಲಾ ಲಿಕ್ಯೂರ್. ಅಮರುಲಾ ಲಾಭ ಗಳಿಸುವ ಉದ್ದೇಶವನ್ನು ಮಾತ್ರ ಹೊಂದಿಲ್ಲ. ಆಫ್ರಿಕಾದ ಆನೆಗಳ ಸಂಖ್ಯೆ ಕ್ಷೀಣಿಸುತ್ತಿರುವು ದನ್ನು ಕಂಡು, ಈ ಬ್ರ್ಯಾಂಡ್ ‘ಅಮರುಲಾ ಟ್ರಸ್ಟ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿದೆ.
ಪ್ರತಿ ಬಾಟಲಿಯ ಮಾರಾಟದ ಒಂದಷ್ಟು ಭಾಗ ಆನೆಗಳ ಸಂರಕ್ಷಣೆಗೆ ಬಳಕೆಯಾಗುತ್ತದೆ. ‘ಆನೆಗಳಿಲ್ಲದಿದ್ದರೆ ಮರುಲಾ ಇಲ್ಲ, ಮರುಲಾ ಇಲ್ಲದಿದ್ದರೆ ಅಮರುಲಾ ಇಲ್ಲ’ ಎಂಬುದು ಅವರ ಘೋಷವಾಕ್ಯ. ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಯ ಇಂಥ ಸಾಮಾಜಿಕ ಬದ್ಧತೆ ಈ ಪಾನೀಯಕ್ಕೆ ವಿಭಿನ್ನ ಘನತೆಯನ್ನು ತಂದುಕೊಟ್ಟಿದೆ.
ನೀವು ಒಂದು ಲೋಟ ಅಮರುಲಾವನ್ನು ಹೀರುತ್ತಿದ್ದೀರಿ ಎಂದರೆ, ನೀವು ಆಫ್ರಿಕಾದ ಹಸಿರು ಕಾಡಿನ ಒಂದು ಭಾಗವನ್ನು ಅನುಭವಿಸುತ್ತಿದ್ದೀರಿ ಎಂದರ್ಥ. ಅದರಲ್ಲಿ ಆಫ್ರಿಕಾ ಆನೆಗಳ ನೆನಪು, ಅಲ್ಲಿನ ಮಹಿಳೆಯರ ಪರಿಶ್ರಮವಿದೆ ಮತ್ತು ಪ್ರಕೃತಿಯನ್ನು ಗೌರವಿಸುವ ಸಂಕಲ್ಪವಿದೆ.