Kiran Upadhyay Column: ದುಡ್ಡೇ ದೊಡ್ಡಪ್ಪ; ಜಾಹೀರಾತು ಅದರಪ್ಪ !
ಯಾವುದೇ ಸಿನಿಮಾಕ್ಕೆ ಹೋದರೂ, ಸಿನಿಮಾ ಆರಂಭವಾಗುವುದಕ್ಕಿಂತ ಮೊದಲು ಬರುವ ಕಾಯಂ ಜಾಹೀರಾತುಗಳು ಇವಾಗಿದ್ದವು. ಬಾಲ್ಯದಲ್ಲಿ ಕಂಡ ಈ ಜಾಹೀರಾತುಗಳು ಇಂದಿಗೂ ನಮ್ಮ ಮನದ ಮೂಲೆಯಲ್ಲಿ ಮನೆ ಮಾಡಿಕೊಂಡು ಬೆಚ್ಚಗೆ ಕುಳಿತಿವೆ. ನಾವು ಪ್ರತಿನಿತ್ಯ ನೂ ರಾರು ಜಾಹೀರಾತು ನೋಡು ತ್ತೇವೆ.


ವಿದೇಶವಾಸಿ
dhyapaa@gmail.com
ದುಡ್ಡಿನ ಧರ್ಮ ಯಾವುದು? ಜಾಹೀರಾತಿನ ಜಾತಿ ಯಾವುದು? ಯಾರೂ ಉತ್ತರ ಹೇಳಲಾ ಗದ ಪ್ರಶ್ನೆ ಇದು. ಇದಕ್ಕೆ ಉತ್ತರ ಗೊತ್ತಿದ್ದರೆ ತಿಳಿಸಿ. ಸರಿಯಾದ ಉತ್ತರ ಕೊಟ್ಟವರಿಗೆ ಬಹು ಮಾನ ಇದೆ. ಆ ಬಹುಮಾನವೂ ಜಾಹೀರಾತೇ ಆಗಿರಲಿಕ್ಕೂ ಸಾಕು! ಅಥವಾ ಜಾಹೀರಾತಿ ನಲ್ಲಿ ಬಹುಮಾನ ತೂರಿಕೊಂಡರೂ ಆಶ್ಚರ್ಯವಿಲ್ಲ. ದುಡ್ಡೇ ದೊಡ್ಡಪ್ಪ ಎನ್ನುವುದು ಜಗದ ಮಾತು, ಜಾಹೀರಾತು ಅದರಪ್ಪ ಎನ್ನುವುದು ‘ಜಾಹೀರಾತು ಜಗ’ದ ಮಾತು. ಎಂಟಿಆರ್ ಗುಲಾಬ್ ಜಾಮೂನ್, ನಿರ್ಮಾ, ಥಮ್ಸ್ ಅಪ್ ಇತ್ಯಾದಿ ಜಾಹೀರಾತು ಗಳು ಯಾರಿಗೆ ನೆನಪಿಲ್ಲ ಹೇಳಿ? ಒಂದು ಕಾಲದಲ್ಲಿ ಇವೆಲ್ಲ ಅತ್ಯಂತ ಜನಪ್ರಿಯ ಜಾಹೀರಾತು ಗಳು. ಇಂದಿಗೂ ನಮ್ಮ ಮನದಲ್ಲಿ ಉಳಿದುಕೊಂಡಿವೆ. ಜಾಹೀರಾತಿನ ಲೋಕವೇ ಹಾಗೆ, ಮನುಷ್ಯನಿಗೆ ಮುಪ್ಪು ಆವರಿಸಬಹುದು, ಮನುಷ್ಯ ಸಾಯಬಹುದು, ಆದರೆ ಕೆಲವು ಜಾಹೀರಾತುಗಳಿಗೆ ಮುಪ್ಪು-ಸಾವು ಎರಡೂ ಇಲ್ಲ.
ವಿಕೋ ವಜ್ರದಂತಿ, ಅಯೋಡೆಕ್ಸ್, ಅಮೃತಾಂಜನ್ ಇತ್ಯಾದಿ ಜಾಹೀರಾತನ್ನು ನಾವು ಕೆಲವು ದಶಕಗಳವರೆಗೆ ನೋಡಿದ್ದೇವೆ. ಯಾವುದೇ ಸಿನಿಮಾಕ್ಕೆ ಹೋದರೂ, ಸಿನಿಮಾ ಆರಂಭವಾಗುವುದಕ್ಕಿಂತ ಮೊದಲು ಬರುವ ಕಾಯಂ ಜಾಹೀರಾತುಗಳು ಇವಾಗಿದ್ದವು. ಬಾಲ್ಯದಲ್ಲಿ ಕಂಡ ಈ ಜಾಹೀರಾತುಗಳು ಇಂದಿಗೂ ನಮ್ಮ ಮನದ ಮೂಲೆಯಲ್ಲಿ ಮನೆ ಮಾಡಿಕೊಂಡು ಬೆಚ್ಚಗೆ ಕುಳಿತಿವೆ. ನಾವು ಪ್ರತಿನಿತ್ಯ ನೂರಾರು ಜಾಹೀರಾತು ನೋಡು ತ್ತೇವೆ.
ಇದನ್ನೂ ಓದಿ: Kiran Upadhyay Column: ಕ್ರಿಕೆಟ್ ದುಡ್ಡು; ದುಬೈನಲ್ಲಿ ಜಾತ್ರೆ !
ಒಂದು ತಿಂಗಳಿನಲ್ಲಿ, ದೃಶ್ಯ ಮಾಧ್ಯಮ, ದಿನಪತ್ರಿಕೆ, ರಸ್ತೆಯ ಅಕ್ಕ-ಪಕ್ಕದಲ್ಲಿ ಇರುವ ಹೋರ್ಡಿಂಗ್, ಬ್ಯಾನರ್, ವಾಹನಗಳ ಮೇಲೆ, ಹೀಗೆ ಸಾವಿರಾರು ಜಾಹೀರಾತುಗಳು ನಮ್ಮ ಕಣ್ಣಿಗೆ ಬೀಳುತ್ತವೆ. ಆದರೆ ಎಲ್ಲವೂ ನೆನಪಿನಲ್ಲಿ ಇರುವುದಿಲ್ಲ. ಜಾಹೀರಾತುಗಳನ್ನು ನೆನಪಿನಲ್ಲಿರುವಂತೆ ಮಾಡುವುದೂ ಒಂದು ಕಲೆ.
ಕೆಲವು ಜಾಹೀರಾತುಗಳು ಹತ್ತು ಸಲ ನೋಡಿದರೂ ನೆನಪಿನಲ್ಲಿರುವುದಿಲ್ಲ. ಅದೇ ಕೆಲವು ಜಾಹೀರಾತುಗಳು ಒಮ್ಮೆ ನೋಡಿದರೆ ಹತ್ತು ವರ್ಷವಾದರೂ ಮರೆಯುವುದಿಲ್ಲ. ಉತ್ಸವ, ಸಂಭ್ರಮಾಚರಣೆ ಎಂದರೆ ಕೇವಲ ನಮಗಷ್ಟೇ ಅಲ್ಲ, ಜಾಹೀರಾತುಗಳಿಗೂ ಸುಗ್ಗಿಯ ಕಾಲ. ಕೆಲವರು ಜನನಿಬಿಡ ಪ್ರದೇಶವನ್ನು ಇಷ್ಟಪಡದೇ ಇರಬಹುದು. ಆದರೆ ಜಾಹೀರಾತುಗಳಿಗೆ ಜನನಿಬಿಡ ಪ್ರದೇಶಗಳೇ ಇಷ್ಟ.
ಜಾಹೀರಾತುಗಳು ಬೆಳೆಯುವುದು ಅಲ್ಲಿಯೇ, ಬದುಕುವುದೂ ಅಲ್ಲಿಯೇ. ಜನ ಓಡಾಡದ ಜಾಗದಲ್ಲಿ, ನೋಡದ ತಾಣದಲ್ಲಿ ಜಾಹೀರಾತಿಗೆ ಏನು ಕೆಲಸ? ಜನರಿಗೆ ಉಸಿರಾಡಲು ಆಮ್ಲ ಜನಕ ಬೇಕಾದರೆ, ಜಾಹೀರಾತಿಗೆ ಜನರೇ ಆಮ್ಲಜನಕ. ಆ ಕಾರಣಕ್ಕಾಗಿಯೇ ಫುಟ್ಬಾ ಲ್ ಪಂದ್ಯದಲ್ಲಿ ಗೋಲಿನ ಅಬ್ಬರ, ಕ್ರಿಕೆಟ್‌ನಲ್ಲಿ ಸಿಕ್ಸರ್‌ನ ಎತ್ತರಕ್ಕಿಂತಲೂ, ಜಾಹೀರಾತಿನ ದರ ಸದ್ದು ಮಾಡುತ್ತದೆ, ಪರಿಣಾಮವನ್ನೂ ಬೀರುತ್ತದೆ.
ಹಾಗಿರುವಾಗ ಇಡೀ ವಿಶ್ವವೇ ಬೆರಗಿನಿಂದ ನೋಡುವಷ್ಟು ಜನ ಸೇರುವ ಕುಂಭಮೇಳದಿಂದ ಜಾಹೀರಾತು ಹೊರಗುಳಿಯಲು ಹೇಗೆ ತಾನೆ ಸಾಧ್ಯ? ಜತೆಗೆ, ಜಾಹೀರಾತಿನಲ್ಲಿ ಒಳ್ಳೆಯ ಸಂದೇಶ, ಸಾಮಾಜಿಕ ಕಾಳಜಿಯೂ ಸೇರಿಕೊಂಡರೆ ಸ್ವರ್ಣಪುಷ್ಪಕ್ಕೆ ಪರಿಮಳ ಬಂದಂತೆ. ಇತ್ತೀಚಿನ ಕುಂಭಮೇಳವೂ ಸೇರಿದಂತೆ, ಮೇಳದಲ್ಲಿ ಅಥವಾ ಕುಂಭವನ್ನೇ ಪ್ರಧಾನ ವಿಷಯವನ್ನಾಗಿಸಿಕೊಂಡು ತಯಾರಾದ, ಅತಿ ಹೆಚ್ಚು ಸುದ್ದಿ ಮಾಡಿದ ಕೆಲವು ಜಾಹೀ ರಾತುಗಳನ್ನು ಒಮ್ಮೆ ನೋಡಿ.
ನಾವು ತಿನ್ನುವ ರೊಟ್ಟಿಯೂ ಜಾಹೀರಾತಿಗೆ ಆಹಾರವಾಗಬಲ್ಲದು ಎಂದರೆ ನಂಬಲೇಬೇಕು. ಪ್ರಯಾಗರಾಜ್‌ನಲ್ಲಿ ಕಳೆದ ಬಾರಿ (2013) ನಡೆದ ಕುಂಭಮೇಳದಲ್ಲಿ, ಲೈಫ್ ಬಾಯ್ ಸಾಬೂನು ಕಂಪನಿಯವರ ಜಾಹೀರಾತು ಬಹಳ ಜನಪ್ರಿಯವಾಗಿತ್ತು. ತಮ್ಮ ಜಾಹೀರಾತು ಜನರಿಗೆ ತಲುಪಲು ಅವರು ರೊಟ್ಟಿಯನ್ನು ಮಾಧ್ಯಮವನ್ನಾಗಿ ಬಳಸಿಕೊಂಡಿದ್ದರು. ಹೇಗೆ ಎನ್ನುತ್ತೀರಾ? ಕುಂಭಮೇಳದಲ್ಲಿ ಉಚಿತ ಭೋಜನದ ವ್ಯವಸ್ಥೆ ಇರುವುದು ಗೊತ್ತೇ ಇದೆ ಯಲ್ಲ? ಆ ವರ್ಷ ಕೆಲವು ಟೆಂಟ್‌ಗಳಲ್ಲಿ ಊಟಕ್ಕೆ ಕುಳಿತವರಿಗೆ ಒಂದು ಆಶ್ಚರ್ಯ ಕಾದಿತ್ತು.
ಅವರ ತಟ್ಟೆಯಲ್ಲಿ ಬಂದು ಬಿದ್ದ ರೊಟ್ಟಿಯ ಮೇಲೆ ‘ನೀವು ಲೈಫ್ ಬಾಯ್‌ನಿಂದ ಕೈ ತೊಳೆದುಕೊಂಡಿದ್ದೀರಾ?’ ಎಂಬ ಸಂದೇಶವಿತ್ತು. ಆ ಒಂದು ಸಂದೇಶ ನೀಡಲು ಅಡುಗೆ ಮನೆಯಲ್ಲಿ ನೂರು ಮಂದಿ ಈ ಕೆಲಸಕ್ಕಾಗಿಯೇ ನಿಂತಿದ್ದರು. ಒಂದು ತಿಂಗಳಿನಲ್ಲಿ ಸುಮಾರು 25 ಲಕ್ಷಕ್ಕೂ ಹೆಚ್ಚು ರೊಟ್ಟಿಯ ಮೇಲೆ ಈ ರೀತಿಯ ಸಂದೇಶ ಮುದ್ರೆಯನ್ನು ಒತ್ತಿದ್ದರು. ಆ ಸಂದೇಶವನ್ನು ನೋಡಿದ ಜನರು, ಊಟದ ಮನೆಯ ಪಕ್ಕದಲ್ಲಿಯೇ ಇರುವ ಕೈ ತೊಳೆಯುವ ಸ್ಥಳಕ್ಕೆ ಹೋದಾಗ, ಅಲ್ಲಿ ಲೈಫ್ ಬಾಯ್ ಸಾಬೂನನ್ನು ಇಡಲಾಗಿತ್ತು.
ಅಂದು ಜನ ಊಟದ ಜತೆಗೆ ಲೈಫ್ ಬಾಯ್ ಕಂಪನಿಯ ಸೃಜನಶೀಲತೆಯನ್ನೂ ಮೆಚ್ಚಿ ಕೊಂಡಿದ್ದರು. ಕೈ ತೊಳೆದುಕೊಂಡು ಬಂದ ಜನ ತಮ್ಮ ಅಕ್ಕ-ಪಕ್ಕದವರಲ್ಲಿ, ‘ಲೈಫ್ಬಾ ಯ್‌ನಿಂದ ಕೈ ತೊಳೆದುಕೊಂಡಿದ್ದೀರಾ?’ ಎಂದು ಕೇಳುವುದನ್ನು ಕಂಪನಿಯವರು ಸೆರೆ ಹಿಡಿದಿದ್ದರು. ನಂತರದ ಕೆಲವು ದಿನ ಅದನ್ನೇ ಜಾಹೀರಾತಿಗಾಗಿಯೂ ಬಳಸಿಕೊಂಡರು. ದೃಶ್ಯಮಾಧ್ಯಮಗಳಲ್ಲಿ ಜಾಹೀರಾತು ಪ್ರದರ್ಶನಗೊಳ್ಳುವುದಕ್ಕಿಂತ ಮೊದಲು, ‘ಅಭಿವೃದ್ಧಿ ಶೀಲ ದೇಶಗಳಲ್ಲಿ ಪ್ರತಿವರ್ಷ ಅತಿಸಾರದಿಂದ ಹನ್ನೊಂದು ಲಕ್ಷಕ್ಕೂ ಹೆಚ್ಚು ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಊಟಕ್ಕಿಂತ ಮೊದಲು ಕೈ ತೊಳೆದುಕೊಳ್ಳುವುದರಿಂದ ಇದನ್ನು ನಿಯಂತ್ರಿಸಬಹುದು’ ಎಂಬ ಎರಡು ಸಾಲನ್ನು ಸೇರಿಸಿದ್ದರು.
ನಾಸಿಕ್‌ನಲ್ಲಿ ನಡೆದ ಪೂರ್ಣಕುಂಭಮೇಳದಲ್ಲಿ (2015) ಡೆಟಾಲ್ ಕಂಪನಿಯವರು ಅರವ ತ್ತಾರು ಸಾವಿರ ಹ್ಯಾಂಡ್ ಸ್ಯಾನಿಟೈಸರ್ ಹಂಚಿದ್ದರು. ನೂರಾರು ಕಾರ್ಯಕರ್ತರು ಡೆಟಾಲ್ ಸ್ಯಾನಿಟೈಸರ್ ತುಂಬಿದ ಟ್ಯಾಂಕ್ ಮತ್ತು ಪಂಪ್ ಹೊತ್ತು ತಿರುಗಿದ್ದರು.
ಭೋಜನ ಶಾಲೆಯ ಪಕ್ಕದಲ್ಲಿ ನಿಂತು ಸುಮಾರು ಎಪ್ಪತ್ತು ಲಕ್ಷ ಜನ ನೀರಿನ ಬದಲು ಡೆಟಾಲ್‌ನಲ್ಲಿ ಕೈ ತೊಳೆಯುವಂತೆ ಮಾಡಿದರು. ಅದನ್ನೇ ಬಳಸಿಕೊಂಡು ಜಾಹೀರಾತು ತಯಾರಿಸಿದರು. ಅದರಲ್ಲಿ, ‘ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ಒಂದೂವರೆ ಕೋಟಿಗೂ ಹೆಚ್ಚು ಜನ ನಾಸಿಕ್ ಪಟ್ಟಣಕ್ಕೆ ಬರುತ್ತಾರೆ. ಗೋದಾವರಿಯಲ್ಲಿ ಸ್ನಾನ ಮಾಡಿದರೆ ಆತ್ಮ ಶುದ್ಧಿಯಾಗುತ್ತದೆ ಎಂಬ ನಂಬಿಕೆ ಅವರಲ್ಲಿರುತ್ತದೆ.
ಆದರೆ ನೈರ್ಮಲ್ಯದ ಕೊರತೆಯಿಂದ ನೂರಾರು ರೋಗಗಳು ಹರಡುತ್ತವೆ. ಅದರಲ್ಲಿ ಕೆಲವು ಮಾರಕವಾಗಿಯೂ ಇರುತ್ತವೆ. ಅದರ ಕುರಿತು ಏನಾದರೂ ಮಾಡಲು ನಾವು ನಿರ್ಧರಿಸಿ ದ್ದೇವೆ. ಈ ಕುಂಭಮೇಳವನ್ನು ಮೊದಲ ಬಾರಿ ‘ಡೆಟಾಲ್‌ನಿಂದ ತೊಳೆದ ಕುಂಭಮೇಳ’ ವನ್ನಾಗಿಸಲು ನಾವು ಹೊರಟಿದ್ದೇವೆ. ಭಕ್ತರು ಮೋಕ್ಷದ ಕಡೆಗೆ ಸಾಗುವಾಗ ನೈರ್ಮಲ್ಯದ ಕಡೆಗೂ ಮೊದಲ ಹೆಜ್ಜೆ ಇಡುವಂತೆ ಮಾಡುತ್ತಿದ್ದೇವೆ.
ಊಟಕ್ಕೂ ಮೊದಲು ಕೈ ತೊಳೆಯುವ ಅಗತ್ಯದ ಬಗ್ಗೆ ತಿಳಿಸುತ್ತಿದ್ದೇವೆ. ಡೆಟಾಲ್‌ನಲ್ಲಿ ಕೈತೊಳೆಸುವುದರೊಂದಿಗೆ, ನಾಸಿಕ್ ಪಟ್ಟಣಕ್ಕೆ ಮೂವತ್ತು ಲಕ್ಷ ಲೀಟರ್ ನೀರನ್ನು ಉಳಿಸು ತ್ತಿದ್ದೇವೆ’ ಎಂದು ಜಾಹೀರಾತಿನಲ್ಲಿ ಹೇಳಿಕೊಂಡಿದ್ದರು.
ಪ್ರಯಾಗರಾಜ್‌ನಲ್ಲಿ 2019ರಲ್ಲಿ ನಡೆದ ಅರ್ಧ ಕುಂಭಮೇಳದಲ್ಲಿ ಡಾಬರ್ ಕಂಪನಿ ಯವರು ಇದಕ್ಕೆ ಹೊಂದುವಂಥ ಪ್ರಚಾರವೊಂದನ್ನು ಮಾಡಿದ್ದರು. ಕುಂಭಮೇಳದ ಅಲ್ಲಲ್ಲಿ, ದೊಡ್ಡ-ದೊಡ್ಡ ಬಿಲ್ ಬೋರ್ಡ್‌ಗಳಲ್ಲಿ, ಬ್ಯಾನರ್‌ಗಳಲ್ಲಿ, ಡಾಬರ್ ರೆಡ್ ಟೂತ್ ಪೇಸ್ಟ್‌ನ ಚಿತ್ರವನ್ನು ಹಾಕಿ, ಅದರ ಅಡಿಯಲ್ಲಿ ‘ಕುಂಭಸ್ನಾನಕ್ಕಿಂತ ಮೊದಲು ಡಾಬರ್ ದಂತಸ್ನಾನ’ ಎಂಬ ಸಾಲನ್ನು ಬರೆದಿದ್ದರು.
ಅಲ್ಲಲ್ಲಿ ಡಾಬರ್ ಪೇಸ್ಟ್‌ನ ವಿತರಣೆಯ ವ್ಯವಸ್ಥೆಯನ್ನೂ ಮಾಡಿದ್ದರು. ಹಳೆಯ ಹಿಂದಿ ಸಿನಿಮಾಗಳಲ್ಲಿ, ಬಾಲ್ಯದಲ್ಲಿ ಇಬ್ಬರು ಸಹೋದರರು ಬೇರೆಯಾದರೆ ಅದಕ್ಕೆ ಕುಂಭಮೇಳ ಕಾರಣವಾಗಿರುವುದನ್ನು ನೀವು ನೋಡಿರಬಹುದು. ಬ್ರೂಕ್‌ಬಾಂಡ್ ರೆಡ್ ಲೇಬಲ್ ಚಹಾ ಕಂಪನಿಯವರು ಇಂಥದ್ದೇ ಸನ್ನಿವೇಶವನ್ನು ಇಟ್ಟುಕೊಂಡು ಒಂದು ಜಾಹೀರಾತು ನಿರ್ಮಿ ಸಿದ್ದರು.
ಅ ಜಾಹೀರಾತಿನಲ್ಲಿ, ಅಪ್ಪ ಮತ್ತು ಮಗ ಮೇಳಕ್ಕೆ ಹೋಗುತ್ತಾರೆ. ಅಪ್ಪನನ್ನು ಕುಂಭಮೇಳ ದಲ್ಲಿ ಬಿಟ್ಟು ಬರುವ ಉದ್ದೇಶ ಮಗನzಗಿರುತ್ತದೆ. ಹೆಚ್ಚು ಜನರು ಇರುವ ಪ್ರದೇಶಕ್ಕೆ ಮಗ ತನ್ನನ್ನು ಕರೆದುಕೊಂಡು ಹೋಗುತ್ತಿರುವುದನ್ನು ಕಂಡ ಅಪ್ಪ, ‘ಅಲ್ಲಿ ಬಹಳ ಜನರಿದ್ದಾರೆ ಮಗ’ ಎಂದು ಹೇಳುತ್ತಾನೆ. ಆಗ ಮಗ, ‘ಕುಂಭಮೇಳದಲ್ಲಿ ಜನರು ಎಲ್ಲಾ ಕಡೆ ಇರುತ್ತಾರೆ, ಬನ್ನಿ ಹೋಗೋಣ’ ಎಂದು ಕರೆದುಕೊಂಡು ಹೋಗುವಾಗ, ತನ್ನ ಕೈ ಹಿಡಿದಿದ್ದ ಅಪ್ಪ ನಿಂದ ತಪ್ಪಿಸಿಕೊಂಡು ಬೇರೆ ಆಗುತ್ತಾನೆ.
ಬಿಟ್ಟುಹೋದ ಮಗನನ್ನು ಹುಡುಕುವ ಅಪ್ಪ ಒಂದು ಕಡೆಯಾದರೆ, ಅಪ್ಪನಿಂದ ತಪ್ಪಿಸಿ ಕೊಂಡು ದೂರವಾದ ಮಗ ಇನ್ನೊಂದು ಕಡೆ ನಡೆಯುತ್ತಿರುತ್ತಾನೆ. ವ್ಯಕ್ತಿಯೊಬ್ಬ ತನ್ನ ಸಣ್ಣ ಮಗನ ಕೈಗೆ ಶಾಲನ್ನು ಕಟ್ಟುತ್ತಾ, ‘ಮಗೂ, ಇಲ್ಲಿ ಬಹಳ ಜನರಿದ್ದಾರೆ, ನೀನು ಕಳೆದು ಹೋಗಬಾರದು ಎಂದು ನಮ್ಮಿಬ್ಬರ ಕೈಗಳನ್ನೂ ಶಾಲಿನಲ್ಲಿ ಕಟ್ಟುತ್ತೇನೆ’ ಎಂದು ಹೇಳುವ ದೃಶ್ಯ ಕಾಣುತ್ತದೆ.
ಅದನ್ನು ನೋಡಿದ ಮಗನಿಗೆ ತನ್ನ ಬಾಲ್ಯದಲ್ಲಿ ತನ್ನ ತಂದೆಯೂ ಹೀಗೇ ಮಾಡಿದ ಸನ್ನಿ ವೇಶ ನೆನಪಾಗುತ್ತದೆ. ಮರುಗಿದ ಮಗ ಅಪ್ಪನನ್ನು ಹುಡುಕುವ ಕೆಲಸಕ್ಕೆ ತೊಡಗುತ್ತಾನೆ. ಕೊನೆಗೆ ಅಪ್ಪ ಒಂದು ಕಡೆ ಕುಳಿತಿರುವುದನ್ನು ಕಂಡು ಅವನ ಪಕ್ಕದಲ್ಲಿ ಹೋಗಿ ಕುಳಿತು ಕೊಳ್ಳುತ್ತಾನೆ.
‘ಎಲ್ಲಿಗೆ ಹೋಗಿದ್ದೇ ಮಗ?’ ಎಂದು ಅಪ್ಪ ಕೇಳುತ್ತಾನೆ. ‘ಕಳೆದುಹೋಗಿದ್ದೇ ಅಪ್ಪ’ ಎಂದು ಮಗ ಉತ್ತರಿಸುತ್ತಾನೆ. ಅಷ್ಟರಲ್ಲಿ ಒಬ್ಬ ಎರಡು ಕಪ್ ಚಹಾ ತೆಗೆದುಕೊಂಡು ಬರುತ್ತಾನೆ. ಅಪ್ಪ ಅದನ್ನು ಎತ್ತಿಕೊಂಡು, ಒಂದು ಕಪ್ ಮಗನ ಕೈಗೆ ಕೊಡುತ್ತಾ ಹೇಳುತ್ತಾನೆ, ‘ನಾನು ಎರಡು ಕಪ್ ಚಹಾ ಹೇಳಿದ್ದೆ. ನೀನು ಬಂದೇ ಬರುತ್ತೀಯ ಎಂದು ನನಗೆ ಗೊತ್ತಿತ್ತು,
ಕುಡಿ’ ಎಂದು ನಗುತ್ತಾ ಹೇಳುತ್ತಾನೆ. ಮಗ ಕೇಳುತ್ತಾನೆ, ‘ಅಪ್ಪ, ನಮ್ಮಿಬ್ಬರ ಕೈಯನ್ನು ಕಟ್ಟಿ ಕೊಳ್ಳೋಣವೆ?’.. ಅಲ್ಲಿಗೆ ಜಾಹೀರಾತು ಮುಗಿದು ಎರಡು ಸಾಲುಗಳು ಕಾಣಿಸಿಕೊಳ್ಳುತ್ತವೆ. ‘ಕುಂಭಮೇಳ ಪ್ರಪಂಚದ ಅತಿ ದೊಡ್ಡ ಧಾರ್ಮಿಕ ಸಮ್ಮೇಳನವಾಗಿದ್ದು, ಇಲ್ಲಿ ಅನೇಕ ವೃದ್ಧರನ್ನು ಅವರ ಕುಟುಂಬದವರು ಬಿಟ್ಟು ಹೋಗುತ್ತಾರೆ. ಈ ಕುಂಭಮೇಳ ದಲ್ಲಿ ನಮ್ಮನ್ನು ನಾವಾಗಿಸಿದವರ ನಮ್ಮವರ ಕೈಗಳನ್ನು ಹಿಡಿಯೋಣ!’ ಇನ್ನೊಂದು, ಉಜ್ಜಯಿ ನಿಯಲ್ಲಿ ನಡೆದ 2016ರ ಕುಂಭಮೇಳದ ಜಾಹೀರಾತು.
ತೆರೆಯ ಮೇಲೆ, ‘ಕುಂಭಮೇಳವು ಜಗತ್ತಿನಲ್ಲಿ ಅತಿ ದೊಡ್ಡ ಮಾನವ ಸಭೆಯಾಗಿದ್ದು, ಹತ್ತು ಕೋಟಿಗೂ ಹೆಚ್ಚು ಭಕ್ತರು ದೇವರನ್ನು ಹುಡುಕಲು ಇಲ್ಲಿಗೆ ಬರುತ್ತಾರೆ’ ಎಂಬ ಸಂದೇಶ ದಿಂದ ಆರಂಭವಾಗುತ್ತದೆ. ಎಷ್ಟೇ ಒಟ್ಟಿಗೆ ಇರಲು ಪ್ರಯತ್ನಿಸಿದರೂ ಕೆಲವರು ಇಲ್ಲಿ ಕಳೆದುಹೋಗುತ್ತಾರೆ’ ಎಂಬ ಸಾಲಿನ ನಂತರ ಕುಂಭಮೇಳದಲ್ಲಿ ಕಳೆದುಹೋದವರ ಸಂಖ್ಯೆಯನ್ನು ಹೇಳುವ ಪತ್ರಿಕಾ ವರದಿಯ ತುಣುಕುಗಳು ತೆರೆಯ ಮೇಲೆ ಬರುತ್ತವೆ.
ಅದರ ಬೆನ್ನ, ‘ಭಾರತದ ದೊಡ್ಡ ಸಂಸ್ಥೆಯೊಂದು ಜನಸಂದಣಿಯಲ್ಲಿ ಭಕ್ತರು ಬೇರ್ಪಡ ದಂತೆ ಸಹಾಯಮಾಡಲು ಸಹಕರಿಸುತ್ತಿದೆ’ ಎಂಬ ವಾಕ್ಯದೊಡನೆ ‘ಫೆವಿಕಾಲ್’ ಎಂಬ ಪದಗಳು ಮೂಡುತ್ತವೆ. ಜತೆಗೆ, ಹಳದಿ ಬಣ್ಣದ ಒಂದೇ ಟೀ-ಶರ್ಟ್ ಅನ್ನು ಇಬ್ಬರು ಅಥವಾ ಮೂವರು ತೊಟ್ಟುಕೊಂಡು ಓಡಾಡುವುದು ಕಾಣಿಸುತ್ತದೆ.
ಮೂರು ಜನರನ್ನು ಒಟ್ಟಿಗೇ ಹಿಡಿದಿಟ್ಟುಕೊಂಡ ಒಂದೇ ಅಂಗಿಯ ಮುಂದುಗಡೆ ಇಂಗ್ಲಿಷ್ ನಲ್ಲಿ, ‘ವಿ ವಿಲ್ ಸ್ಟಿಕ್ ಟುಗೆದರ್’ ಅಥವಾ ಹಿಂದಿಯಲ್ಲಿ ‘ಹಮ್ ಜುಡೇ ರಹೇಂಗೆ’ (ನಾವು ಒಟ್ಟಿಗೇ ಇರುತ್ತೇವೆ) ಎಂಬ ಸಂದೇಶವಿರುತ್ತದೆ. ಅಂಗಿಯ ಹಿಂದೆ, ‘ಫೆವಿಕಾಲ್’ (ಅಂಟು ತಯಾರಿಸುವ ಕಂಪನಿ) ಹೆಸರು ಕಾಣುತ್ತದೆ.
ಇನ್ನು, ಕುಂಭಮೇಳಕ್ಕೆ ಬರುವ ಜನರಲ್ಲಿ ಶೇಕಡ 75ರಷ್ಟು ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರು ಎಂಬುದನ್ನು ಕಂಪನಿಗಳು ಅರ್ಥ ಮಾಡಿಕೊಂಡಿವೆ. ಆದರೆ, ಇಡೀ ಅಮೆರಿ ಕದ ಒಟ್ಟೂ ಜನಸಂಖ್ಯೆಯ ಎರಡು ಪಟ್ಟು ಜನ, ನಮ್ಮ ದೇಶದ ನಲವತ್ತು ಪ್ರತಿಶತ ಜನ ಒಂದೇ ಕಡೆ ಸಿಗುತ್ತಾರೆ ಎಂದರೆ ಯಾರು ಬಿಟ್ಟಾರು? ಯಾಕೆ ಬಿಟ್ಟಾರು? ಆದ್ದರಿಂದ ಇಂದು ದೊಡ್ಡ-ದೊಡ್ಡ ಕಂಪನಿಗಳು ಬಿಲ್‌ಬೋರ್ಡ್‌ನಿಂದ ಕೆಳಗೆ, ಬೀದಿಗೆ ಇಳಿದಿವೆ.
ಮೇಳಕ್ಕೆ ಬಂದು-ಹೋಗುವ ಜನರ ಕೈಗೆಟುಕುವಂತೆ ಆಗಿವೆ. ಕಂಪನಿಗಳು ಕೇವಲ ಜಾಹೀ ರಾತುಗಳಿಗಷ್ಟೇ ಸೀಮಿತವಾಗದೆ, ಬೇರೆ ಬೇರೆ ಬಗೆಯ ಪ್ರಚಾರ ವಿಧಾನ ಮತ್ತು ಸ್ಯಾಂಪಲ್ ನೀಡುವುದಕ್ಕಾಗಿಯೇ ಕೋಟಿಗಟ್ಟಲೆ ಹಣವನ್ನು ಮೀಸಲು ಇಡುತ್ತಿವೆ. ಅಂದ ಹಾಗೆ, ಜಾಹೀರಾತು ನೀಡುವುದರಲ್ಲಿ, ಪ್ರಚಾರ ಕೈಗೊಳ್ಳುವುದರಲ್ಲಿ ಸರಕಾರಗಳೂ ಹಿಂದೆ ಬಿದ್ದಿಲ್ಲ. ಈ ಬಾರಿಯ ಕುಂಭಮೇಳ ಇಷ್ಟು ಯಶಸ್ವಿಯಾಗುವುದಕ್ಕೆ ಪ್ರಚಾರವೂ ಒಂದು ಕಾರಣ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.
ಕೊನೆಯದಾಗಿ, ಕುಂಭಮೇಳದಂಥ ಧಾರ್ಮಿಕ ಕೇಂದ್ರಗಳಲ್ಲಿ ಜಾಹೀರಾತು ನೀಡುವಾಗ ಬಹಳ ಎಚ್ಚರಿಕೆ ಅಗತ್ಯ. ಜಾಹೀರಾತು ಒಳ್ಳೆಯದಾಗಿದ್ದರೆ, ಒಳ್ಳೆಯ ರೀತಿಯಲ್ಲಿ ಏಕಕಾಲ ದಲ್ಲಿ ಕೋಟ್ಯಂತರ ಜನರನ್ನು ತಲುಪುತ್ತದೆ. ಅದೇ ಕೆಟ್ಟದಾಗಿದ್ದು, ಜನರ ಭಾವನೆಯನ್ನು ಘಾಸಿಗೊಳಿಸುವಂತಿದ್ದರೆ? ಜಾಹೀರಾತಿನಿಂದ ವರ್ಷಗಟ್ಟಲೆ ಹೆಸರು ಗಳಿಸಿದ ಕಂಪನಿಯ ಕಥೆ ಹರೋಹರ..!
ಅಲ್ಲದೆ, ಕೆಲವು ಜಾಹೀರಾತು ತಯಾರಿಕೆಯ ಹಿಂದೆ ವರ್ಷಗಳ ಪ್ರಯತ್ನವಿರುತ್ತದೆ. ‘ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ’ ಎಂಬ ಮಾತಿದೆ. ಅದೇರೀತಿ, ‘ಜಾಹೀರಾತಿಗೆ ವರುಷ, ಕುಂಭಕ್ಕೆ ನಿಮಿಷ!’ ಆದರೂ, ಕುಂಭಮೇಳ ಜಾಹೀರಾತಿನ ಮೇಳವೂ ಹೌದು!