Roopa Gururaj Column: ಬಲಿಪಾಡ್ಯಮಿಯ ವೈಶಿಷ್ಟ್ಯ
ಬಲಿಯ ನೂರನೇ ಅಶ್ವಮೇಧ ಯಾಗ ಮುಕ್ತಾಯ ಹಂತದಲ್ಲಿದ್ದಾಗ ವಾಮನ ರೂಪಿ ಪರಮಾತ್ಮನು ಯಾಗಮಂಟಪ ಪ್ರವೇಶಿಸಿದನು. ಅತಿ ಸುಂದರ ಬ್ರಹ್ಮಚಾರಿಯ ದರ್ಶನದಿಂದ ಪುಳಕಿತನಾದ ಬಲಿಯು ಅವನಿಗೆ ನಮಸ್ಕರಿಸಿ, ಪಾದಪ್ರಕ್ಷಾಲನೆ ಮಾಡಿ, ನಿನಗೆ ಏನು ಬೇಕೆಂದು ಕೇಳಿದನು.
-
ರೂಪಾ ಗುರುರಾಜ್
Oct 22, 2025 7:16 AM
ಒಂದೊಳ್ಳೆ ಮಾತು
ಕಶ್ಯಪ ದಿತಿಗಳ ವಂಶದಲ್ಲಿ ಹುಟ್ಟಿದ ಪ್ರಹ್ಲಾದರಾಜರ ಮೊಮ್ಮಗನೇ ಈ ಬಲಿಚಕ್ರವರ್ತಿ. ಹಿರಣ್ಯ ಕಶಿಪುವಿನ ಮಗ ಪ್ರಹ್ಲಾದರಾಜರು, ಅವರ ಮಗ ವಿರೋಚನ ಮತ್ತು ಮೊಮ್ಮಗನೇ ಬಲಿಚಕ್ರವರ್ತಿ. ಬಲಿಯ ಮಗ ಬಾಣಾಸುರ. ಬಲಿಯ ನಿಜವಾದ ಹೆಸರು ಇಂದ್ರಸೇನ. ಇವನು ದೈತ್ಯಕುಲದಲ್ಲಿ ಹುಟ್ಟಿದ್ದರೂ ತನ್ನ ಆಡಳಿತದಲ್ಲಿ ಧರ್ಮನಿಷ್ಠೆ ತೋರುತ್ತಿದ್ದ ಮತ್ತು ದಾನದಲ್ಲಿ ಎಂದೂ ಹಿಂಜರಿಯುತ್ತಿರಲಿಲ್ಲ.
ಸಮುದ್ರಮಥನ ಕಾಲದಲ್ಲಿ ದೈತ್ಯರ ಗುಂಪಿನ ನಾಯಕನಾಗಿದ್ದವನು ಈ ಬಲಿಚಕ್ರವರ್ತಿಯೇ. ಮುಂದಿನ ಸಾವರ್ಣಿ ಮನ್ವಂತರದಲ್ಲಿ ಇಂದ್ರಪದವಿಗೆ ಬರುವವನು ಈ ಬಲಿಯೇ. ಬಲಿಚಕ್ರವರ್ತಿ ದೈತ್ಯನಾಗಿದ್ದರೂ ಸಾತ್ವಿಕ ಸ್ವಭಾವದವನಾಗಿದ್ದ. ಕೆಲವೊಮ್ಮೆ ಅವನಲ್ಲಿ ಅಸುರಾವೇಶವಿರುತ್ತಿತ್ತು. ಬಲಿ ತನ್ನ ಅಸುರಾವೇಶದಲ್ಲಿ ಪರಮಾತ್ಮನ ಅವಹೇಳನ ಮಾಡಿದ್ದನ್ನು ಸಹಿಸದ ಪ್ರಹ್ಲಾದರಾಜ ಹೀಗೆ ಶಪಿಸಿದ್ದ- ‘ನಿನ್ನ ಸಮಸ್ತ ಸಾಮ್ರಾಜ್ಯ ನಾಶವಾಗಲಿ’. ಆಗ ಪಶ್ಚಾತ್ತಾಪವಾಗಿ ಕ್ಷಮೆ ಯಾಚಿಸಿದ್ದ.
ತನ್ನ ತಾತನ ಶಾಪವು ಅವನ ಅವನತಿಗೆ ಕಾರಣವಾಯಿತು ಬಲಿಚಕ್ರವರ್ತಿಯು ಇಡೀ ವಿಶ್ವವನ್ನೇ ತನ್ನ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಿ, ಇಂದ್ರಲೋಕವನ್ನೂ ಆಕ್ರಮಿಸಿ, ಇಂದ್ರನನ್ನು ಕೆಳಗಿಳಿಸಿದನು.
ಇದನ್ನೂ ಓದಿ: Roopa Gururaj Column: ಧನತ್ರಯೋದಶಿಯ ಮಹತ್ವ
ತಾನೇ ಇಂದ್ರನಾಗಲು ಉದ್ಯುಕ್ತನಾಗಿ, 100 ಅಶ್ವಮೇಧ ಯಾಗವನ್ನು ಮಾಡಲು ಆರಂಭಿಸಿ, 99 ಯಾಗವನ್ನು ಪೂರೈಸಿದನು. 100ನೇ ಯಾಗವನ್ನು ದೈತ್ಯಗುರು ಶುಕ್ರಾಚಾರ್ಯರ ನೇತೃತ್ವದಲ್ಲಿ ಆರಂಭಿಸಿದನು. ಆಗ ಇಂದ್ರನಾಗಿದ್ದ ಪುರಂದರನೆಂಬುವವನು ತನ್ನ ಹುದ್ದೆ ಕಳೆದುಕೊಳ್ಳುವ ಭೀತಿಯಿಂದ ಶ್ರೀಹರಿಯನ್ನು ಪ್ರಾರ್ಥಿಸಿದನು.
ಅದೇ ಸಂದರ್ಭದಲ್ಲಿ ಅದಿತಿಯೂ ಪರಮಾತ್ಮನನ್ನು, ತನ್ನ ಮಗನಾದ ಪುರಂದರನಿಗೆ ಇಂದ್ರಪದವಿ ಯನ್ನು ಉಳಿಸಿಕೊಡಲು ಪ್ರಾರ್ಥಿಸಿ, ಕಠಿಣ ವ್ರತಗಳ ಮಾಡಲು, ಅವರ ಪ್ರಾರ್ಥನೆಯಂತೆ, ದೇವತೆಗಳ ಪ್ರಾರ್ಥನೆಯಂತೆ, ದುಷ್ಟ ಬಲಿಯ ನಿಗ್ರಹಿಸಲು ಕಶ್ಯಪ ಅದಿತಿಗಳ ಮಗನಾಗಿ ಭಾದ್ರಪದ ಶುದ್ಧ ದ್ವಾದಶಿಯಂದು ಶ್ರವಣ ನಕ್ಷತ್ರದಲ್ಲಿ ಅಭಿಜಿನ್ ಮುಹೂರ್ತದಲ್ಲಿ ಪರಮಾತ್ಮ ಜನಿಸಿದನು.
ಬಲಿಯ ನೂರನೇ ಅಶ್ವಮೇಧ ಯಾಗ ಮುಕ್ತಾಯ ಹಂತದಲ್ಲಿದ್ದಾಗ ವಾಮನ ರೂಪಿ ಪರಮಾತ್ಮನು ಯಾಗಮಂಟಪ ಪ್ರವೇಶಿಸಿದನು. ಅತಿ ಸುಂದರ ಬ್ರಹ್ಮಚಾರಿಯ ದರ್ಶನದಿಂದ ಪುಳಕಿತನಾದ ಬಲಿಯು ಅವನಿಗೆ ನಮಸ್ಕರಿಸಿ, ಪಾದಪ್ರಕ್ಷಾಲನೆ ಮಾಡಿ, ನಿನಗೆ ಏನು ಬೇಕೆಂದು ಕೇಳಿದನು.
ವಾಮನನಾದರೋ ‘ನನಗೆ ಏನೂ ಬೇಡ, ಕೇವಲ ನನ್ನ ಮೂರು ಹೆಜ್ಜೆಯಷ್ಟು ಭೂಮಿಯನ್ನು ನೀಡಿದರೆ ಸಾಕು’ ಎನಲು, ಗುರು ಶುಕ್ರಾಚಾರ್ಯರು ಎಚ್ಚರಿಸಿದರೂ ಕೇಳದೆ ಆ ಮೂರು ಹೆಜ್ಜೆ ಭೂಮಿಯನ್ನು ನೀಡಲು ಉದ್ಯುಕ್ತನಾದನು ಬಲಿ. ತನ್ನ ಮೊದಲ ಹೆಜ್ಜೆಯಿಂದ ಪರಮಾತ್ಮನು ಇಡೀ ಭೂಲೋಕವನ್ನೇ ಆಕ್ರಮಿಸಿ, ತನ್ನ ಎರಡನೇ ಹೆಜ್ಜೆಯಿಂದ ತ್ರಿವಿಕ್ರಮನಾಗಿ ಬೆಳೆದು, ಆಕಾಶ ವನ್ನೂ ಆಕ್ರಮಿಸಿ, ಮೂರನೇ ಹೆಜ್ಜೆ ಎಲ್ಲಿಡಲೆಂದು ಪ್ರಶ್ನಿಸಿದಾಗ, ತನ್ನ ತಲೆಯನ್ನೇ ತೋರಿದ ಬಲಿಚಕ್ರವರ್ತಿ.
ಬ್ರಹ್ಮದೇವರಿಂದ ಪ್ರಾರ್ಥಿತನಾದ ಪರಮಾತ್ಮನು ತನ್ನ ಪಾದಕಮಲವನ್ನು ಬಲಿಯ ತಲೆಯ ಮೇಲಿಟ್ಟು, ಅವನನ್ನು ಪಾತಾಳ ಲೋಕಕ್ಕೆ ತಳ್ಳಿ, ಅಲ್ಲಿ ತನ್ನದೇ ಒಂದು ರೂಪದಿಂದ- ಉಪೇಂದ್ರ ರೂಪದಿಂದ ಈಗಲೂ ಬಲಿಯ ಮನೆ ಕಾಯುತಿಹನು, ಮತ್ತು ಅವನಿಗೆ ಮುಂದಿನ ಮನ್ವಂತರದಲ್ಲಿ ನೀನೇ ಇಂದ್ರನಾಗೆಂದು ಅನುಗ್ರಹಿಸಿದನು. ಬಲಿಯ ಪ್ರಾರ್ಥನೆಯಂತೆ ಈ ದಿನವನ್ನು ಅವನ ಹೆಸರಿನಿಂದ ಪ್ರಖ್ಯಾತಿಗೊಳಿಸಿ ಅನುಗ್ರಹಿಸಿದ ವಾಮನರೂಪಿ ಹರಿ. ಈ ದಿನದಂದು ವಿಶೇಷ ಕಾರ್ಯಗಳಿಗೆ ಮುಹೂರ್ತವನ್ನು ನೋಡಬೇಕಾಗಿಲ್ಲ ಎನ್ನುತ್ತಾರೆ.
ಸ್ವಯಂಸಿದ್ಧ ಮೂರೂವರೆ ಮುಹೂರ್ತಗಳಲ್ಲಿ ಅರ್ಧ ಮುಹೂರ್ತ ಬಲಿಪಾಡ್ಯಮಿಯೆಂದು ಪ್ರಸಿದ್ಧ. ಉಳಿದ ಮೂರು ಮುಹೂರ್ತಗಳು ವಿಜಯದಶಮಿ, ಅಕ್ಷಯತೃತೀಯ, ಮತ್ತು ಯುಗಾದಿ. ಬಲಿಪಾಡ್ಯಮಿಯಂದು ಅರ್ಧದಿನದವರೆಗೂ ಸ್ವಯಂಸಿದ್ಧ ಮುಹೂರ್ತವಾಗಿದ್ದು, ಈ ದಿನದಂದು ತೈಲಾಭ್ಯಂಜನವನ್ನು ಮಾಡಿ ದೀಪದಾನ, ಗೋದಾನ, ವಸದಾನ, ಮಂಗಳವಸಗಳ ದಾನ ಮಾಡಿದರೆ ವಾಮನ ರೂಪಿ ಪರಮಾತ್ಮನು ಸುಪ್ರೀತನಾಗುತ್ತಾನೆ ಎನ್ನುತ್ತದೆ ಪುರಾಣ.
ಈ ದಿನ ದೀಪಪ್ರಜ್ವಲವನ್ನು ಮಾಡುವುದರಿಂದ ಲಕ್ಷ್ಮೀದೇವಿಯು ಸುಪ್ರೀತಳಾಗಿ ಸ್ಥಿರವಾಗಿ ನೆಲೆಸುತ್ತಾಳೆ. ಬಲಿಪಾಡ್ಯಮಿ ದಿನವೇ ಶ್ರೀಕೃಷ್ಣನು ಗೋವರ್ಧನ ಗಿರಿಯನ್ನು ಎತ್ತಿದ್ದನಂತೆ. ಆದ್ದರಿಂದ ಈ ದಿನದಂದು ಗೋವರ್ಧನ ಪೂಜೆಯನ್ನು, ಗೋವುಗಳ ಪೂಜೆಯನ್ನೂ ಮಾಡುವ ಸಂಪ್ರದಾಯವಿದೆ.
ಗೋವರ್ಧನ ಗಿರಿಗೆ ಹೋಗಿ ಪೂಜೆ ಮಾಡಲು ಎಲ್ಲರಿಗೂ ಅಸಾಧ್ಯವಾದ್ದರಿಂದ, ಅದರ ಪ್ರತೀಕವಾಗಿ ಗೋವಿನ ಸಗಣಿಯಿಂದ ಮನೆಯ ಹೊಸ್ತಿಲು ಸಾರಿಸಿ, ಸಗಣಿಯಿಂದ ಗಿರಿಯ ರೀತಿ ಮಾಡಿ ಅದರ ಮೇಲೆ ತುಳಸಿ, ಗರಿಕೆ, ಹೂವುಗಳಿಂದ ಪೂಜಿಸಿ ಸುತ್ತಲೂ ಹಸು-ಕರು ಚಿತ್ರವನ್ನು ಬರೆದು ಪೂಜಿ ಸುವ ಸಂಪ್ರದಾಯವೂ ಇದೆ.
ಸನಾತನ ಧರ್ಮದ ಇಂಥ ಆಚರಣೆಗಳನ್ನು ಮನಗಂಡು ನಮ್ಮ ಜೀವನದ ಭಾಗವಾಗಿಸಿ ಕೊಳ್ಳೋಣ. ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.