ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ಸಾವಿತ್ರಿ ಬುದ್ಧಿವಂತಿಕೆಯಿಂದ, ಪತಿಯ ಮೃತ್ಯುವನ್ನೇ ಗೆದ್ದ ಕಥೆ

ಕಾಡಿನಲ್ಲಿ ಕಟ್ಟಿಗೆ ಕತ್ತರಿಸುತ್ತಿದ್ದಾಗ ಸತ್ಯವಾನನು ಸಾವಿತ್ರಿಯ ಮಡಿಲ ಪ್ರಾಣಬಿಟ್ಟನು. ಸಾಕ್ಷಾತ್ ಮೃತ್ಯುದೇವತೆಯಾದ ಯಮಧರ್ಮರಾಯನು ಸತ್ಯವಾನನ ಪ್ರಾಣವನ್ನು ತೆಗೆದು ಕೊಂಡು ದಕ್ಷಿಣಾಭಿಮುಖವಾಗಿ ಸಾಗತೊಡಗಿದನು. ಸಾಮಾನ್ಯ ಮಾನವರಿಗೆ ಯಮನನ್ನು ನೋಡುವುದೇ ಅಸಾಧ್ಯ, ಇನ್ನು ಅವನನ್ನು ಹಿಂಬಾಲಿಸುವುದು ದೂರದ ಮಾತು. ಆದರೆ ಸಾವಿತ್ರಿ ಯಮನನ್ನೇ ಹಿಂಬಾಲಿಸಿದಳು.

ಸಾವಿತ್ರಿ ಬುದ್ಧಿವಂತಿಕೆಯಿಂದ, ಪತಿಯ ಮೃತ್ಯುವನ್ನೇ ಗೆದ್ದ ಕಥೆ

-

ಒಂದೊಳ್ಳೆ ಮಾತು

ಮದ್ರ ದೇಶದ ರಾಜ ಅಶ್ವಪತಿಯ ಮಗಳಾದ ಸಾವಿತ್ರಿ, ಸಾಕ್ಷಾತ್ ಸೂರ್ಯದೇವನ ವರ ಪ್ರಸಾದದಿಂದ ಹುಟ್ಟಿದವಳು. ಅವಳು ಸೌಂದರ್ಯವತಿ ಮಾತ್ರವಲ್ಲ, ಮಹಾನ್ ಜ್ಞಾನಿ ಯೂ ಹೌದು. ಅವಳು ತನ್ನ ಪತಿಯಾಗಿ ಆರಿಸಿಕೊಂಡದ್ದು ದೇಶಭ್ರಷ್ಟನಾದ ದ್ಯುಮತ್ಸೇ ನನ ಮಗ ಸತ್ಯವಾನನನ್ನು.

ಸತ್ಯವಾನನು ಸಕಲ ಗುಣಸಂಪನ್ನನಾಗಿದ್ದರೂ, ಅವನ ಆಯಸ್ಸು ಕೇವಲ ಇನ್ನು ಒಂದು ವರ್ಷ ಮಾತ್ರ ಎಂಬ ಕಟು ಸತ್ಯ ಸಾವಿತ್ರಿಗೆ ತಿಳಿದಿತ್ತು. ಆದರೂ ಅವಳು ಧೃತಿಗೆಡದೆ ಅವನನ್ನೇ ವರಿಸಿದಳು. ಸತ್ಯವಾನನ ಆಯಸ್ಸು ಮುಗಿಯುವ ದಿನ ಬಂದೇ ಬಿಟ್ಟಿತು.

ಕಾಡಿನಲ್ಲಿ ಕಟ್ಟಿಗೆ ಕತ್ತರಿಸುತ್ತಿದ್ದಾಗ ಸತ್ಯವಾನನು ಸಾವಿತ್ರಿಯ ಮಡಿಲ ಪ್ರಾಣಬಿಟ್ಟನು. ಸಾಕ್ಷಾತ್ ಮೃತ್ಯುದೇವತೆಯಾದ ಯಮಧರ್ಮರಾಯನು ಸತ್ಯವಾನನ ಪ್ರಾಣವನ್ನು ತೆಗೆದುಕೊಂಡು ದಕ್ಷಿಣಾಭಿಮುಖವಾಗಿ ಸಾಗತೊಡಗಿದನು. ಸಾಮಾನ್ಯ ಮಾನವರಿಗೆ ಯಮನನ್ನು ನೋಡುವುದೇ ಅಸಾಧ್ಯ, ಇನ್ನು ಅವನನ್ನು ಹಿಂಬಾಲಿಸುವುದು ದೂರದ ಮಾತು. ಆದರೆ ಸಾವಿತ್ರಿ ಯಮನನ್ನೇ ಹಿಂಬಾಲಿಸಿದಳು.

ಇದನ್ನೂ ಓದಿ: Roopa Gururaj Column: ಯದುವಂಶದ ನಾಶಕ್ಕೆ ಕಾರಣವಾದ ಗಾಂಧಾರಿಯ ಶಾಪ

ಅವಳನ್ನು ತಡೆದ ಯಮ, ಸಾವಿತ್ರಿ, ನಿನ್ನ ಪತಿಯ ಆಯಸ್ಸು ಮುಗಿದಿದೆ, ಇನ್ನು ನೀನು ಎಷ್ಟು ಹಿಂಬಾಲಿಸಿದರು ಪ್ರಯೋಜನವಿಲ್ಲ ಮರಳಿ ಹೋಗು ಎಂದನು. ಆಗ ಸಾವಿತ್ರಿ ಧರ್ಮರಾಜನೇ, ಎಲ್ಲಿ ಪತಿ ಹೋಗುತ್ತಾನೋ ಅಲ್ಲಿ ಪತ್ನಿಯೂ ಹೋಗುವುದು ಧರ್ಮ.

ಸಾಧು-ಸಜ್ಜನರ ಸ್ನೇಹವು ಒಮ್ಮೆ ಉಂಟಾದರೂ ಅದು ವ್ಯರ್ಥವಾಗುವುದಿಲ್ಲ. ನಿಮ್ಮಂತಹ ಧರ್ಮಪ್ರಭುಗಳ ದರ್ಶನವೇ ಒಂದು ಪುಣ್ಯ. ಇಂತಹ ಶ್ರೇಷ್ಠರನ್ನು ಹಿಂಬಾಲಿಸುವುದು ನನಗೆ ಆಯಾಸವೆನಿಸುವುದಿಲ್ಲ ಎಂದಳು ದೃಢವಾಗಿ. ಸಾವಿತ್ರಿಯ ಮಾತುಗಳಲ್ಲಿನ ಧರ್ಮದ ಆಳ ಮತ್ತು ತರ್ಕವನ್ನು ಕಂಡು ಮೆಚ್ಚಿದ ಯಮ, ಸತ್ಯವಾನನ ಪ್ರಾಣ ವೊಂದನ್ನು ಬಿಟ್ಟು ನಿನಗೆ ಬೇಕಾದ ಮೂರು ವರಗಳನ್ನು ಕೇಳು ಎನ್ನುತ್ತಾನೆ.

ಸಾವಿತ್ರಿ ಜಾಣತನದಿಂದ ಮೊದಲನೆಯದಾಗಿ, ತನ್ನ ಮಾವನಿಗೆ ಕಳೆದು ಹೋದ ಕಣ್ಣಿನ ದೃಷ್ಟಿ ಮತ್ತು ರಾಜ್ಯ ಮರಳಿ ಸಿಗಲಿ ಎಂದಳು. ಎರಡನೆಯದಾಗಿ, ತನ್ನ ತಂದೆಗೆ ಪುತ್ರ ಸಂತಾನವಾಗಲಿ ಎಂದು ಕೇಳಿದಳು. ಯಮ ತಥಾಸ್ತು ಎಂದು ಹೇಳಿ ಮುಂದೆ ಸಾಗಿದರೂ ಸಾವಿತ್ರಿ ಬಿಡಲಿಲ್ಲ. ಅವಳು ಮೃತ್ಯುವಿನ ರಹಸ್ಯ ಮತ್ತು ಧರ್ಮದ ಸಾರವನ್ನು ಕುರಿತು ಯಮನೊಂದಿಗೆ ಅದ್ಭುತವಾಗಿ ಮಾತನಾಡಿದಳು.

ಅವಳ ಜ್ಞಾನಕ್ಕೆ ಮಾರುಹೋದ ಯಮ, ಮತ್ತೊಂದು ವರ ಕೇಳು ಎಂದನು. ಆಗ ಸಾವಿತ್ರಿ ಮಹಾಪ್ರಭು, ನನಗೆ ನೂರು ಮಂದಿ ಪುತ್ರರು ಜನಿಸುವಂತೆ ವರ ನೀಡಿ ಎಂದಳು. ಯಮ ಧರ್ಮರಾಯನು ಯೋಚಿಸದೆ ತಥಾಸ್ತು ಎಂದುಬಿಡುತ್ತಾನೆ. ವರ ನೀಡಿದ ಮರುಕ್ಷಣವೇ ಸಾವಿತ್ರಿ ನಸುನಗುತ್ತಾ ಕೇಳುತ್ತಾಳೆ: ಧರ್ಮರಾಜರೇ, ನೀವು ಸತ್ಯವಂತರು.

ನಿಮ್ಮ ವರ ಸುಳ್ಳಾಗಬಾರದು. ಪತಿ ಇಲ್ಲದೆ ನಾನು ತಾಯಿಯಾಗುವುದು ಹೇಗೆ ಸಾಧ್ಯ? ಆದ್ದರಿಂದ ನನ್ನ ಪತಿಯ ಪ್ರಾಣವನ್ನು ಮರಳಿ ನೀಡುವುದು ನಿಮ್ಮ ಧರ್ಮವಲ್ಲವೇ? ಯಮಧರ್ಮರಾಯನು ಬೆರಗಾದನು. ಆಕೆ ಕೇವಲ ಪ್ರಾರ್ಥಿಸಲಿಲ್ಲ, ಬದಲಾಗಿ ತನ್ನ ಬುದ್ಧಿವಂತಿಕೆಯಿಂದ ಯಮನನ್ನೇ ಧರ್ಮಸಂಕಟಕ್ಕೆ ಸಿಲುಕಿಸಿ ಜಯಗಳಿಸಿದಳು. ಸಾವಿತ್ರಿಯ ತರ್ಕಕ್ಕೆ ಸೋತ ಯಮ ಸತ್ಯವಾನನ ಪ್ರಾಣವನ್ನು ಮರಳಿ ನೀಡಿದನು.

ಈ ಕಥೆಯು ನಾವು ದೃಢ ಸಂಕಲ್ಪದಿಂದ ನಮ್ಮವರಿಗೆ ಜೊತೆಯಾಗಿ ನಿಂತರೆ ಮೃತ್ಯುವೂ ಸೋಲಬಲ್ಲದು ಎಂಬ ಆತ್ಮವಿಶ್ವಾಸವನ್ನು ನೀಡುತ್ತದೆ. ಇದು ಕೇವಲ ಭಾವನಾತ್ಮಕ ಕಥೆಯಲ್ಲ, ಇದು ಬೌದ್ಧಿಕ ಯುದ್ಧ. ಎಂತಹ ಸಂಕಷ್ಟದ ಸಂದರ್ಭದಲ್ಲಿ ಕೂಡ ನಾವು ನಮ್ಮ ಜಾಗೃತ ಮನಸ್ಥಿತಿಯನ್ನು ಉಪಯೋಗಿಸಿದರೆ ಅಸಾಧ್ಯವಾದುದನ್ನು ಸಾಧ್ಯವಾಗಿ ಸುವ ‘ಮಹಾಪ್ರಜ್ಞೆ ನಮ್ಮಲ್ಲಿ ಇರುತ್ತದೆ ’.

ಈ ಕಥೆ ವಿಶೇಷವಾಗಿ ಮಹಿಳೆಯರಲ್ಲಿರುವ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಮತ್ತು ತಾರ್ಕಿಕ ಬುದ್ಧಿವಂತಿಕೆಯನ್ನು ಜಗತ್ತಿಗೆ ಸಾರುತ್ತದೆ. ನಮ್ಮ ಮನೆಯ ಹೆಣ್ಣುಮಕ್ಕಳು ಹೀಗೆ ಎಂತದ್ದೇ ಸಂಕಷ್ಟದ ಸಂದರ್ಭದಲ್ಲಿ ಅದನ್ನು ಜಾಣ್ಮೆಯಿಂದ ನಿಭಾಯಿಸುವುದನ್ನು ಕಲಿಯಬೇಕು. ಒಬ್ಬ ಹೆಣ್ಣುಮಗಳು ಹೀಗೆ ಎಂತದ್ದೇ ಸಂದರ್ಭದಲ್ಲಿ ಪತಿಗೆ ಬೆಂಬಲವಾಗಿ ನಿಂತಾಗ ಅವನು ಜೀವನದಲ್ಲಿ ಸೋಲಲು ಸಾಧ್ಯವೇ ಇಲ್ಲ.