Roopa Gururaj Column: ನಾಲ್ಕು ಮೇಣದ ಬತ್ತಿಗಳು
ಮುಂದೆ ಬರುವ ಸಮಾಜ ಹೇಗಿರುತ್ತದೋ ಎಂದು ತಲೆ ಕೆಡಿಸಿಕೊಳ್ಳುವ ಬದಲು ಸಮಾಜಕ್ಕೆ ನಮ್ಮ ಕೈಲಾದ ಸಹಾಯ ಮಾಡೋಣ. ನಮ್ಮ ಮನೆಯಿಂದಲೇ ಒಳ್ಳೆಯ ನಾಗರಿಕರನ್ನು ಸಮಾಜಕ್ಕೆ ಉಡುಗೊರೆಯಾಗಿ ನೀಡೋಣ. ಪ್ರತಿಯೊಬ್ಬರೂ ಹೀಗೆ ಯೋಚಿಸಿದಾಗ ಭವಿಷ್ಯದಲ್ಲಿ ಖಂಡಿತ ಒಳ್ಳೆಯ ಸಮಾಜ ನಿರ್ಮಾಣವಾಗುತ್ತದೆ


ಒಂದೊಳ್ಳೆ ಮಾತು
rgururaj628@gmail.com
ನಾಲ್ಕು ಉರಿಯುತ್ತಿದ್ದ ಮೇಣದ ಬತ್ತಿಗಳಿದ್ದವು. ಒಂದು ಕತ್ತಲ ಕೋಣೆಯೊಳಗೆ ಕಾಲ ಕಳೆಯಲು ಮಾತಾಡಿಕೊಳ್ಳುತ್ತಿದ್ದವು. ತಮ್ಮ ತಮ್ಮೊಳಗೇ ಮಾತುಕತೆಯ ಮಧ್ಯೆ ಶುರುವಾಯಿತೊಂದು ಚರ್ಚೆ. ಏನಾಗಿದೆ ಈ ಜಗದ ಜನಕೆ. ಅದರಲ್ಲಿ ಒಂದು ಹೇಳಿತು ಮಿಕ್ಕ ಮೂರಕ್ಕೆ. ನಾನು ಇರುವುದಿಲ್ಲ ಇಲ್ಲಿ. ಬೆಲೆಯೇ ಇಲ್ಲ ನನಗೆ ಈ ಜಗದಲ್ಲಿ. ಬರೀ ದ್ವೇಷ, ಜಗಳ ಅಸಹನೆ, ಜಾತಿ ಕಲಹ, ಈ ಮನುಜ ರಲ್ಲಿ. ಇವರಿಗೇಕೆ ನಾನು ಬೆಳಕು ನೀಡಲಿ ಎಂದು ಹೇಳಿ ಅದು ಆರಿತು. ಅದರ ಹೆಸರು ಶಾಂತಿ.
ಇನ್ನೊಂದು ಹೇಳಿತು. “ಹೌದು ಹೌದು, ಶಾಂತಿ ಹೇಳಿದಷ್ಟೇ ಅಲ್ಲಾ, ಇನ್ನೂ ಇರುವುದು. ಜನರಲ್ಲಿ ಪರಸ್ಪರ ನಂಬಿಕೆ ಉಳಿದಿಲ್ಲ.ಅಪನಂಬಿಕೆಯೇ ಎಲ್ಲಾ. ನನ್ನ ಅವಶ್ಯಕತೆ ಅವರಿಗೆ ಇಲ್ಲ. ನಿನ್ನಂತೆ ನಾನು ಆರಿ ಹೋಗುವೆ’ ಎಂದು ಹೇಳಿ ನಂದಿ ಹೋಯಿತು. ಅದರ ಹೆಸರು ನಂಬಿಕೆ. ಮೂಲೆ ಯಲ್ಲಿದ್ದ ಮೂರನೇಯದು ಶುರು ಮಾಡಿತು.
ನೀವಿಬ್ಬರು ಹೇಳಿದ್ದು ಸರಿಯಾಗಿದೆ. ಅದಲ್ಲದೇ, ಯಾರಲ್ಲೂ ಪ್ರೇಮವಿಲ್ಲ, ಪ್ರೀತಿ ಇಲ್ಲ, ವಿಶ್ವಾಸ ವಿಲ್ಲ. ಬರೀ ಸ್ವಾರ್ಥಿಗಳು ಧನಗಾಹಿಗಳು. ಶಾಂತಿ, ನಂಬಿಕೆ ನೀವಿಲ್ಲದೇ ಮೇಲೆ, ನಾನೇಕೆ ಇರಬೇಕು ಇಲ್ಲಿ. ನಾನು ಸೇರುವೇ ನಿಮ್ಮಜೊತೆಯಲ್ಲಿ ಎಂದು ಅದು ಆರಿತು. ಅದರ ಹೆಸರು ಪ್ರೀತಿ.
ಇದನ್ನೂ ಓದಿ: Roopa Gururaj Column: ಓಶೋ ಹೇಳಿದ ದಾರಿ ತಪ್ಪಿದವರ ಕಥೆ
ಆ ವೇಳೆಗೆ ಪುಟ್ಟ ಪಾಪ ನೊಂದು ಬಂದಿತು ಆ ಕೊಠಡಿಗೆ. ಮೂರು ಮೇಣದ ಬತ್ತಿ ನಂದಿ ಹೋದು ದಕ್ಕೆ ಅಳು ಬಂದಿತು ಅದಕೆ. ನಾಲ್ಕನೇಯ ಬತ್ತಿ ಹೇಳಿತು : ಅಳಬೇಡ ಕೂಸು. ನಾನು ಇನ್ನೂ ಆರಿಲ್ಲ. ಆರಿ ಹೋದ ಮೂರನ್ನೂ ಮತ್ತೆ ಹತ್ತಿಸಬಹುದಲ್ಲ. ನಾಲ್ಕು ದಿಕ್ಕಿಗೂ ಬೆಳಕನ್ನು ಪಸರಿಸ ಬಹುದಲ್ಲ ಎಂದು ಹೇಳಿತು.
ಪುಟ್ಟ ಪಾಪ ಆರಿ ಹೋದ ಮೇಣದ ಬತ್ತಿಗಳನ್ನು, ನಾಲ್ಕನೇಯ ಬತ್ತಿಯಿಂದ ಪುನಃ ಹಚ್ಚಿತು. ಬೆಳಕು ಎಲ್ಲಾ ಕಡೆ ಹಂಚಿಕೆಯಾಯಿತು. ಕಂದನಿಗೆ ಸಂತಸವಾಯಿತು. ಆ ನಾಲ್ಕನೇಯ ಮೇಣದ ಬತ್ತಿಯ ಹೆಸರು ಭರವಸೆ. ಜೀವನದಲ್ಲಿ ಎಲ್ಲಾ ಕಳೆದು ಹೋದರೂ ಇರಲಿ ಭರವಸೆ. ಕಳೆದು ಹೋದದ್ದನ್ನು ಮತ್ತೆ ಪಡೆಯುವೇ ಎನ್ನುವ ಭರವಸೆ.
ಇತ್ತೀಚೆಗೆ ಕಣ್ಣು ಹಾಯಿಸಿ ನೋಡಿದರೆ ಪ್ರಪಂಚದಲ್ಲೆಲ್ಲಾ ನಮಗೆ ಕಾಣುವುದು ದುಃಖದ ವಿಷಯ ಗಳೆ. ಅಕಾಲ ಮೃತ್ಯು, ನಯವಂಚನೆ, ಪೋಷಕರೇ ಮಕ್ಕಳನ್ನು ಅನಾಥರನ್ನಾಗಿಸಿ ಹೊರಟು ಬಿಡುವುದು, ಮಕ್ಕಳಿಂದ ತಂದೆ ತಾಯಿಯ ಹತ್ಯೆ ಇಂತಹ ವಿಷಯಗಳನ್ನು ಅರಗಿಸಿ ಕೊಳ್ಳುವುದು ಬಹಳ ಕಷ್ಟ. ನಮ್ಮ ಸಮಾಜ ಎತ್ತ ಸಾಗುತ್ತಿದೆ? ಇಲ್ಲಿ ಮುಂಬರುವ ವರ್ಷಗಳಲ್ಲಿ ನಮ್ಮ ಮಕ್ಕಳು ಏನೆಲ್ಲ ನೋಡಬೇಕಾಗಬಹುದು? ಎನ್ನುವ ಆತಂಕ ಕಾಡುವುದು ಸಹಜ.
ಆದರೆ ಬದುಕಿನಲ್ಲಿ ಕೆಟ್ಟ ಸುದ್ದಿಗಳು ಹರಡುವಷ್ಟು ಸುದ್ದಿಯಾಗುವಷ್ಟು ಒಳ್ಳೆಯ ವಿಷಯಗಳು ಸುದ್ದಿಯಾಗುವುದಿಲ್ಲ. ಕೆಟ್ಟತನ ಕೆಟ್ಟ ವಿಷಯಗಳು ಹೇಗೆ ತುಂಬಿವೆಯೋ, ಒಳ್ಳೆತನದ ಒಳ್ಳೆ ಮನುಷ್ಯರು ಸಹ ನಮ್ಮ ಸುತ್ತಲೇ ಇದ್ದಾರೆ. ನಾವು ಏನನ್ನು ಗುರುತಿಸುತ್ತೇವೆ ಅದೇ ನಮಗೆ ಕಾಣುತ್ತಾ ಹೋಗುತ್ತದೆ. ಆದ್ದರಿಂದ ದೈನಂದಿನ ಬದುಕಿನಲ್ಲಿ ಆದಷ್ಟು ಒಳ್ಳೆಯ ವಿಷಯಗಳನ್ನು ಗುರುತಿಸಿ ಅವುಗಳನ್ನೇ ಹೆಚ್ಚು ಬರಮಾಡಿಕೊಳ್ಳೋಣ.
ಹೊರಗಿನ ಪರಿಸ್ಥಿತಿ ಏನೇ ಇದ್ದರೂ ನಮ್ಮ ಮನೆಯಲ್ಲಿ ಒಳ್ಳೆಯ ವಾತಾವರಣ ನಿರ್ಮಿಸೋಣ. ಸದ್ವಿಚಾರಗಳನ್ನು ಯೋಚಿಸುತ್ತಾ ಮಕ್ಕಳೊಡನೆ ಒಳ್ಳೆಯ ಚರ್ಚೆಗಳನ್ನು ಮಾಡುತ್ತಾ, ಅವರ ಮನಸ್ಸಿನಲ್ಲಿ ಸಕಾರಾತ್ಮಕ ಯೋಚನೆಗಳನ್ನು ತುಂಬಿದಾಗ ಅವರು ಕೂಡ ಜವಾಬ್ದಾರಿಯುತ ನಾಗಕರಾಗಿ ಬೆಳೆಯುತ್ತಾರೆ.
ಮುಂದೆ ಬರುವ ಸಮಾಜ ಹೇಗಿರುತ್ತದೋ ಎಂದು ತಲೆ ಕೆಡಿಸಿಕೊಳ್ಳುವ ಬದಲು ಸಮಾಜಕ್ಕೆ ನಮ್ಮ ಕೈಲಾದ ಸಹಾಯ ಮಾಡೋಣ. ನಮ್ಮ ಮನೆಯಿಂದಲೇ ಒಳ್ಳೆಯ ನಾಗರಿಕರನ್ನು ಸಮಾಜಕ್ಕೆ ಉಡುಗೊರೆಯಾಗಿ ನೀಡೋಣ. ಪ್ರತಿಯೊಬ್ಬರೂ ಹೀಗೆ ಯೋಚಿಸಿದಾಗ ಭವಿಷ್ಯದಲ್ಲಿ ಖಂಡಿತ ಒಳ್ಳೆಯ ಸಮಾಜ ನಿರ್ಮಾಣವಾಗುತ್ತದೆ. ನಮ್ಮ ಇಂದಿನ ಒಳ್ಳೆಯ ಆಲೋಚನೆಗಳು ಕೆಲಸಗಳು ನಾಳೆಗೆ ಅಡಿಪಾಯ. ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಸಾಗದು ಕೆಲಸವು ಮುಂದೆ.