ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Niranjan Patil Column: ಮುಕ್ತ ಅಭಿವ್ಯಕ್ತಿಯೇ ಬಸವಣ್ಣನವರ ಆಶಯ

ಸಮಾಜದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸುವ ಅವಕಾಶ ಇರಬೇಕು. ಪ್ರಶ್ನಿಸುವವರ ಧ್ವನಿಯನ್ನು ಹತ್ತಿಕ್ಕಬಾರದು. ಭಿನ್ನಾಭಿಪ್ರಾಯ ಹೊಂದಿರುವವರನ್ನು ಶತ್ರುಗಳಂತೆ ನೋಡಬಾರದು. ವ್ಯಕ್ತಿಯ ಮಾತು ಮತ್ತು ಆಲೋಚನೆಗಳಿಗೆ ಗೌರವ ನೀಡಬೇಕು. ಇವೆಲ್ಲವೂ ಆಧುನಿಕ ಪ್ರಜಾಪ್ರಭುತ್ವದ ಪ್ರಮುಖ ಆಶಯಗಳು. ಆದರೆ ಇಂತಹ ವಿಚಾರಗಳ ಬಗ್ಗೆ ಹಲವು ಶತಮಾನಗಳ ಹಿಂದೆಯೇ ಕನ್ನಡ ನೆಲದಲ್ಲಿ ಚಿಂತನೆ ನಡೆದಿತ್ತು. ಆ ಚಿಂತನೆಯ ಪ್ರಮುಖ ಧ್ವನಿಗಳಲ್ಲಿ ಬಸವಣ್ಣನವರು ಒಬ್ಬರು.

ಮುಕ್ತ ಅಭಿವ್ಯಕ್ತಿಯೇ ಬಸವಣ್ಣನವರ ಆಶಯ

-

Profile
Ashok Nayak Nov 25, 2026 4:14 PM

ಶರಣಧರ್ಮ

ನಿರಂಜನ ಪಾಟೀಲ

ಸಮಾಜದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸುವ ಅವಕಾಶ ಇರಬೇಕು. ಪ್ರಶ್ನಿಸುವವರ ಧ್ವನಿಯನ್ನು ಹತ್ತಿಕ್ಕಬಾರದು. ಭಿನ್ನಾಭಿಪ್ರಾಯ ಹೊಂದಿರುವವರನ್ನು ಶತ್ರುಗಳಂತೆ ನೋಡಬಾರದು. ವ್ಯಕ್ತಿಯ ಮಾತು ಮತ್ತು ಆಲೋಚನೆಗಳಿಗೆ ಗೌರವ ನೀಡಬೇಕು. ಇವೆಲ್ಲವೂ ಆಧುನಿಕ ಪ್ರಜಾಪ್ರಭುತ್ವದ ಪ್ರಮುಖ ಆಶಯಗಳು. ಆದರೆ ಇಂತಹ ವಿಚಾರಗಳ ಬಗ್ಗೆ ಹಲವು ಶತಮಾನಗಳ ಹಿಂದೆಯೇ ಕನ್ನಡ ನೆಲದಲ್ಲಿ ಚಿಂತನೆ ನಡೆದಿತ್ತು. ಆ ಚಿಂತನೆಯ ಪ್ರಮುಖ ಧ್ವನಿಗಳಲ್ಲಿ ಬಸವಣ್ಣನವರು ಒಬ್ಬರು.

ಬಸವಣ್ಣನವರ ಈ ಆಶಯ ಅರಿತರೆ, ರವಿ ಹಂಜ್ ಅವರ ನಿಲುವನ್ನು ಪ್ರಕಟಿಸಿದ್ದಕ್ಕಾಗಿ ‘ವಿಶ್ವವಾಣಿ’ ಯನ್ನು ದೂಷಿಸುವುದು ನಿಂತೀತು. 12ನೇ ಶತಮಾನದಲ್ಲಿ ಬಸವಣ್ಣನವರು ಆರಂಭಿಸಿದ ಶರಣ ಚಳವಳಿ ಕೇವಲ ಧಾರ್ಮಿಕ ಸುಧಾರಣೆಗೆ ಸೀಮಿತವಾಗಿರಲಿಲ್ಲ. ಅದು ಸಾಮಾಜಿಕ ಸಮಾನತೆ, ವೈಯಕ್ತಿಕ ಸ್ವಾತಂತ್ರ್ಯ, ಕಾಯಕದ ಗೌರವ, ಜಾತಿ ವ್ಯವಸ್ಥೆಯ ವಿರೋಧ ಮತ್ತು ಮನುಷ್ಯನ ಆತ್ಮಗೌರವದ ಪರವಾಗಿ ಧ್ವನಿ ಎತ್ತಿದ ಚಳವಳಿಯಾಗಿತ್ತು. ಈ ಚಳವಳಿಯ ಮತ್ತೊಂದು ಮಹತ್ವದ ಆಯಾಮವೆಂದರೆ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಮತ್ತು ಸ್ಥಾಪಿತ ನಂಬಿಕೆಗಳನ್ನು ಪ್ರಶ್ನಿಸುವ ಮನೋಭಾವ.

ಇದನ್ನೂ ಓದಿ: Roopa Gururaj Column: ಪಂಚತಂತ್ರ ಕಥೆಗಳು: ಬ್ರಾಹ್ಮಣನ ಶ್ರೀಮಂತನಾಗುವ ಹಗಲುಗನಸು

ಅಂದು ಸಮಾಜದಲ್ಲಿ ಧರ್ಮ, ಜಾತಿ ಮತ್ತು ಸಂಪ್ರದಾಯಗಳ ಹೆಸರಿನಲ್ಲಿ ಅನೇಕ ನಿರ್ಬಂಧ ಗಳಿದ್ದವು. ಯಾರು ಮಾತನಾಡಬೇಕು, ಯಾರು ಧಾರ್ಮಿಕ ವಿಚಾರಗಳನ್ನು ಚರ್ಚಿಸಬೇಕು, ಯಾರಿಗೆ eನ ಪಡೆಯುವ ಹಕ್ಕಿದೆ ಎಂಬುದನ್ನೂ ಸಾಮಾಜಿಕ ವ್ಯವಸ್ಥೆಯೇ ನಿರ್ಧರಿಸುತ್ತಿತ್ತು. ಇಂತಹ ಸಂದರ್ಭದಲ್ಲಿ ಸಾಮಾನ್ಯ ಜನರು, ಮಹಿಳೆಯರು ಮತ್ತು ಕೆಳವರ್ಗದವರಿಗೂ ತಮ್ಮ ಅನುಭವ, ಆಲೋಚನೆ ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅವಕಾಶ ಕಲ್ಪಿಸಿದ್ದು ಶರಣ ಚಳವಳಿಯ ವಿಶೇಷತೆ.

ಅನುಭವ ಮಂಟಪ: ಬಸವಣ್ಣನವರ ಈ ಆಶಯಕ್ಕೆ ಅತ್ಯಂತ ಮಹತ್ವದ ಉದಾಹರಣೆಯಾಗಿ ಅನುಭವ ಮಂಟಪವನ್ನು ನೋಡಬಹುದು. ಕಲ್ಯಾಣದಲ್ಲಿ ರೂಪುಗೊಂಡ ಈ ಚಿಂತನಾ ವೇದಿಕೆ ಯಲ್ಲಿ ವಿವಿಧ ಜಾತಿ, ವೃತ್ತಿ ಮತ್ತು ಸಾಮಾಜಿಕ ಹಿನ್ನೆಲೆಯ ಶರಣರು ಒಟ್ಟಿಗೆ ಸೇರಿ ತಮ್ಮ ಅನುಭವ ಗಳನ್ನು ಹಂಚಿಕೊಳ್ಳುತ್ತಿದ್ದರು. ಧರ್ಮ, ಆಧ್ಯಾತ್ಮ, ಸಮಾಜ, ನೈತಿಕತೆ, ಸಮಾನತೆ ಮತ್ತು ಬದುಕಿನ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಚರ್ಚೆಯಲ್ಲಿ ಭಾಗವಹಿಸಲು ಒಬ್ಬ ವ್ಯಕ್ತಿ ಉನ್ನತ ಜಾತಿ ಯಲ್ಲಿ ಹುಟ್ಟಿರಬೇಕು, ದೊಡ್ಡ ವಿದ್ವಾಂಸನಾಗಿರಬೇಕು ಅಥವಾ ಸಮಾಜದಲ್ಲಿ ಅಧಿಕಾರ ಹೊಂದಿರಬೇಕು ಎಂಬ ನಿರ್ಬಂಧ ಇರಲಿಲ್ಲ. ಕಾಯಕದ ಮೂಲಕ ಬದುಕುತ್ತಿದ್ದ ಸಾಮಾನ್ಯ ಜನರೂ ತಮ್ಮ ಅನುಭವಗಳನ್ನು ಹೇಳಿಕೊಳ್ಳುವ ಅವಕಾಶ ಪಡೆದಿದ್ದರು. ಅಲ್ಲಮಪ್ರಭು, ಅಕ್ಕಮಹಾದೇವಿ, ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯ, ಆಯ್ದಕ್ಕಿ ಲಕ್ಕಮ್ಮ ಸೇರಿದಂತೆ ಅನೇಕ ಶರಣರು ತಮ್ಮದೇ ಆದ ಚಿಂತನೆಗಳನ್ನು ಅಭಿವ್ಯಕ್ತಪಡಿಸಿದರು. ಮಹಿಳೆಯರೂ ಈ ಚರ್ಚೆಗಳಲ್ಲಿ ಪಾಲ್ಗೊಂಡಿದ್ದು ವಿಶೇಷ.

ಅಕ್ಕಮಹಾದೇವಿಯವರ ವಿಚಾರಧಾರೆ ಇದಕ್ಕೆ ಉತ್ತಮ ಉದಾಹರಣೆ. ಮಹಿಳೆಯ ಸ್ವಾತಂತ್ರ್ಯ, ದೇಹದ ಮೇಲಿನ ಹಕ್ಕು, ವೈಯಕ್ತಿಕ ಆಯ್ಕೆ ಮತ್ತು ಆಧ್ಯಾತ್ಮಿಕ ಅನುಭವಗಳ ಬಗ್ಗೆ ಅವರು ಯಾರ ಮುಲಾಜೂ ಇಲ್ಲದೆ ಮಾತನಾಡಿದರು. ಅವರ ವಚನಗಳಲ್ಲಿ ಅಂದಿನ ಸಮಾಜದ ಕಟ್ಟುಪಾಡುಗಳ ವಿರುದ್ಧದ ದಿಟ್ಟ ಪ್ರತಿರೋಧವನ್ನು ಕಾಣಬಹುದು. ಅಂದರೆ, ಸಮಾಜದಲ್ಲಿ ಎಲ್ಲರೂ ಒಂದೇ ರೀತಿಯಲ್ಲಿ ಯೋಚಿಸಬೇಕು ಅಥವಾ ಒಂದೇ ರೀತಿಯ ಅಭಿಪ್ರಾಯ ಹೊಂದಿರಬೇಕು ಎಂಬ ಒತ್ತಾಯ ಶರಣ ಚಳವಳಿಯ ಆಶಯವಾಗಿರಲಿಲ್ಲ.

ಪ್ರತಿಯೊಬ್ಬರ ಅನುಭವಕ್ಕೂ, ಆಲೋಚನೆಗೂ ಅಭಿವ್ಯಕ್ತಿಗೂ ಅವಕಾಶ ಕಲ್ಪಿಸುವುದು ಅದರ ಪ್ರಮುಖ ಲಕ್ಷಣವಾಗಿತ್ತು. ಮುಕ್ತ ಅಭಿವ್ಯಕ್ತಿಯ ಮಾದರಿ: ಬಸವಣ್ಣನವರು ಮತ್ತು ಇತರ ಶರಣರು ವಚನಗಳ ಮೂಲಕ ತಮ್ಮ ವಿಚಾರಗಳನ್ನು ಜನರ ಮುಂದಿಟ್ಟರು. ಈ ವಚನಗಳ ವಿಶೇಷತೆ ಯೆಂದರೆ ಅವು ಸಂಸ್ಕೃತದಂತಹ ಪಾಂಡಿತ್ಯಪೂರ್ಣ ಭಾಷೆಯ ಬದಲು ಜನಸಾಮಾನ್ಯರಿಗೆ ಅರ್ಥವಾಗುವ ಸರಳ ಕನ್ನಡದಲ್ಲಿದ್ದವು. ಯಾವುದೇ ಸಮಾಜದಲ್ಲಿ ಪ್ರಗತಿಪರ ಬದಲಾವಣೆಗಳು ಸಂಭವಿಸಬೇಕಾದರೆ ಪ್ರಶ್ನಿಸುವ ಮನೋಭಾವ ಇರಬೇಕು. ಒಂದು ವಿಚಾರವನ್ನು ಕೇವಲ ಹಿರಿಯರು ಹೇಳಿದ್ದಾರೆ, ಧರ್ಮಗ್ರಂಥದಲ್ಲಿದೆ ಅಥವಾ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂಬ ಕಾರಣಕ್ಕೆ ಒಪ್ಪಿಕೊಳ್ಳಬೇಕಿಲ್ಲ.

ಬಸವಣ್ಣನವರ ವಚನಗಳಲ್ಲಿ ಇಂತಹ ಪ್ರಶ್ನಿಸುವ ಮನೋಭಾವ ಸ್ಪಷ್ಟವಾಗಿ ಕಾಣುತ್ತದೆ. ಜಾತಿ ವ್ಯವಸ್ಥೆಯನ್ನು ಅವರು ಪ್ರಶ್ನಿಸಿದರು. ಕಾಯಕದ ಆಧಾರದಲ್ಲಿ ಮನುಷ್ಯರನ್ನು ಮೇಲಿನವರು, ಕೆಳಗಿನವರು ಎಂದು ವಿಭಜಿಸುವುದನ್ನು ವಿರೋಧಿಸಿದರು. ಧಾರ್ಮಿಕ ಆಚರಣೆಗಳಿಗಿಂತ ನೈತಿಕ ಬದುಕಿಗೆ ಮಹತ್ವ ನೀಡಿದರು. ಈ ವಿಚಾರಗಳು ಆ ಕಾಲದ ಪ್ರಬಲ ಸಾಮಾಜಿಕ ವ್ಯವಸ್ಥೆಗೆ ಸವಾಲಾಗಿದ್ದವು.

ಇಂತಹ ಪ್ರಶ್ನೆಗಳನ್ನು ಸಾರ್ವಜನಿಕವಾಗಿ ಎತ್ತುವುದು ಸುಲಭದ ಕೆಲಸವಾಗಿರಲಿಲ್ಲ. ಆದರೂ ಶರಣರು ತಮ್ಮ ವಿಚಾರಗಳನ್ನು ವಚನಗಳ ಮೂಲಕ ನಿರ್ಭೀತಿಯಿಂದ ವ್ಯಕ್ತಪಡಿಸಿದರು. ಬಸವಣ್ಣನವರ ಮುಕ್ತ ಅಭಿವ್ಯಕ್ತಿಯ ಆಶಯ, ಭಯವಿಲ್ಲದೆ ತನ್ನ ಅಭಿಪ್ರಾಯವನ್ನು ಹೇಳುವ, ಪ್ರಶ್ನಿಸುವ ಮತ್ತು ಭಿನ್ನಮತ ವ್ಯಕ್ತಪಡಿಸುವ ಅವಕಾಶ. ಒಬ್ಬರ ಅಭಿಪ್ರಾಯವನ್ನು ಮತ್ತೊಬ್ಬರು ಒಪ್ಪಲೇಬೇಕು ಎಂಬ ನಿಯಮವೂ ಇರಬಾರದು. ವಿಚಾರಕ್ಕೆ ವಿಚಾರದಿಂದ ಉತ್ತರ ನೀಡಬೇಕು. ಟೀಕೆಗೆ ಪ್ರತಿಯಾಗಿ ಟೀಕೆ ಇರಬಹುದು. ಆದರೆ ವ್ಯಕ್ತಿಯನ್ನು ಅವಮಾನಿಸುವುದು, ಬೆದರಿಸುವುದು ಅಥವಾ ಆತನ ಧ್ವನಿಯನ್ನು ಹತ್ತಿಕ್ಕುವುದು ಆರೋಗ್ಯಕರ ಚರ್ಚೆಯ ಲಕ್ಷಣವಲ್ಲ.

ಬಸವ ಮಂಟಪ’ ಕೃತಿಯ ಹಿನ್ನೆಲೆಯಲ್ಲಿ ಎದ್ದಿರುವ ವಿವಾದವನ್ನು ಈ ದೃಷ್ಟಿಯಿಂದ ನೋಡಬೇಕು. ಇಲ್ಲಿ ಕೃತಿಕಾರರ ಆಶಯ ಏನೇ ಇರಬಹುದು. ಅದನ್ನು ಪ್ರಕಟಿಸಲು ಅವಕಾಶ ಕೊಟ್ಟ ಮಾಧ್ಯಮ, ಮಾಧ್ಯಮದ ಸಂಪಾದಕರು ದೋಷಿಗಳು ಎಂಬ ಅಭಿಪ್ರಾಯದಲ್ಲಿಯೇ ದೋಷವಿದೆ. ಮುಕ್ತ ಅಭಿಪ್ರಾಯಕ್ಕೆ ಅವಕಾಶ ನೀಡುವುದು ಬಸವಣ್ಣನವರ ಆಶಯ ಕೂಡ ಆಗಿತ್ತು. ಆದ್ದರಿಂದ, ಬರಹ ಪ್ರಕಟಣೆಗೆ ಜಾಗ ನೀಡಿದ ಸಂಪಾದಕರು ದೋಷಿಯಾಗಲು ಸಾಧ್ಯ ವಿಲ್ಲ. ಮುಕ್ತ ಅಭಿವ್ಯಕ್ತಿ ಎಂದರೆ ಇತರರು ಮಾತನಾಡುವುದನ್ನು ಕೇಳುವ ತಾಳ್ಮೆ ಮತ್ತು ಅವರ ಭಿನ್ನಾಭಿಪ್ರಾಯವನ್ನು ಗೌರವಿಸುವ ಮನೋಭಾವವೂ ಹೌದು.