Harish Kera Column: ದೇವರ ವರ, ಕಾಡುಮಾವಿನ ಮರ !
ಸಣ್ಣಗಾತ್ರದ ಕಾಟು ಮಾವು ಆಗಿದ್ದರೆ, ಕನಿಷ್ಠ ನೂರು ಇರತಕ್ಕದ್ದು. ತೊಳೆದಿರಲೇ ಬೇಕೆಂದಿಲ್ಲ. ಮೊದಲು ತೊಟ್ಟು ಮುರಿಯುವ ಕೆಲಸ. ಮಾವಿನ ಕಾಯಿಯ ತೊಟ್ಟು ಮುರಿಯುವಾಗ ಅದರಿಂದ ಬೆಳ್ಳಗಿನ ಸೊನೆ ಸಿರ್ರನೆ ಉಕ್ಕಿ ಹಾರುತ್ತದೆ. ಉಪ್ಪಿನಕಾಯಿಗೆ ಮಿಡಿ ಆಯುವವರಿಗೆ ಈ ವಿಚಾರ ಚೆನ್ನಾಗಿ ಗೊತ್ತು. ಹಣ್ಣು ಆ ವಿಚಾರದಲ್ಲಿ ಸಾಧು. ಮತ್ತೆ ಮಾವಿನ ಹಣ್ಣಿನಲ್ಲಿ ತೊಟ್ಟು ಮತ್ತು ಓಟೆ ಮಾತ್ರವೇ ತ್ಯಾಜ್ಯ.
-
ಕಾಡುದಾರಿ
ಒಂದು ಹಣ್ಣು ತಿಂದರೆ ಸಾಕೆ? ಹಣ್ಣಿನ ರುಚಿ ನಿಮ್ಮನ್ನು ಸಂಪೂರ್ಣ ಆವರಿಸಿಕೊಳ್ಳ ಬೇಕೆಂದರೆ ಹತ್ತಾದರೂ ತಿನ್ನಬೇಕು. ಕಾಟುಮಾವು ಕನಿಷ್ಠ ಇಪ್ಪತ್ತು. ಹಣ್ಣಿನ ರಸ ಕೈಯನ್ನೆಲ್ಲ ಒದ್ದೆಯಾಗಿಸಿ, ಮಣಿಕಟ್ಟನ್ನು ಹಾದು, ಮೊಣಕೈಯವರೆಗೂ ಇಳಿಯ ಬೇಕು. ಆಗ ಕೈಯನ್ನು ಮೊಣಕೈಯಿಂದ ಅಂಗೈವರೆಗೂ ಸು...ರ್ರನೆ ಆಗಾಗ ನೆಕ್ಕಿಕೊಳ್ಳಬೇಕು.
ನಡುಬೇಸಿಗೆಯಲ್ಲಿ ಮಲೆನಾಡಿನ ಗದ್ದೆ ಬದು, ತೋಟದ ಬದಿ, ಹೊಳೆಯಂಚು, ಕಾಡಿನ ನಡುವೆ ಬೆಳೆದು ಉದ್ದ ಉದ್ದಕ್ಕೆ ನಿಂತ ಕಾಡುಮಾವಿನ ಮರದ ಕೆಳಗೆ ನಿಂತೋ ಕುಳಿತೋ ಧ್ಯಾನ ಮಾಡುವ ಸುಖ ನಿಮಗೆ ಗೊತ್ತೆ? ಈ ಧ್ಯಾನದಲ್ಲಿ ಯಾವ ದೇವರೂ ಸುಂದರಿಯೂ ಇರುವುದಿಲ್ಲ.
ಬದಲು ಪುಷ್ಕಳವಾಗಿ ಬೆಳೆದು, ಅಲ್ಲಲ್ಲಿ ತುಸು ಹಳದಿ ಬಣ್ಣಕ್ಕೆ ತಿರುಗಿದ ಗಾಢ ಹಸಿರಿನ ಮಾವು ಮೇಲಿನಿಂದ ತೊಟ್ಟು ಕಳಚಿ ಯಾವಾಗ ಧರೆಗೆ ಉದುರುತ್ತದೆ ಎಂಬುದೊಂದೇ. ಕತ್ತೆತ್ತಿದರೆ, ಆಕಾಶದವರೆಗೂ ಬೆಳೆದು ನಿಂತ ಆ ಮರದಲ್ಲಿ ಹಣ್ಣುಗಳೇ ಕಾಣಿಸವು. ಆದರೆ, ಜೋರಾಗಿ ಗಾಳಿ ಬೀಸಿದಾಗೊಮ್ಮೆ ಫಟ್-ಫಟ್ ಎಂದು ನೆಲಕ್ಕುದುರುವ ಈ ಹಣ್ಣುಗಳ ತೊಟ್ಟಿನಲ್ಲಿ ಆಗತಾನೆ ಬಿಟ್ಟ ಸೊನೆ ಹನಿಯಾಗಿರುತ್ತದೆ. ಅದಕ್ಕೆ ಅದರದೇ ಸೆಳೆಯುವ ಪರಿಮಳ.
ಈ ಹಣ್ಣನ್ನು ತಿನ್ನುವ ಬಗೆ ವಿಧವಿಧ. ಹಾಗೇ ತೊಟ್ಟು ಕಚ್ಚಿ ತುಂಡು ಮಾಡಿ ಎಸೆದು, ತುಟಿ ದುಂಡಗೆ ಮಾಡಿ ಒಳಗಿನ ತಿರುಳನ್ನು ಹೀರಿ ಬಾಯಿಗೆ ತುಂಬಿಸಿಕೊಳ್ಳುವುದು ಉತ್ತಮ. ಸಿಪ್ಪೆಯನ್ನು ಹಲ್ಲಿನಿಂದ ಎಳೆದು ಬಿಡಿಸಿ ಅದಕ್ಕೆ ಅಂಟಿಕೊಂಡಿರುವ ತಿರುಳನ್ನು ಸೀಪಿ, ನಂತರ ಗೊರಟನ್ನು ಆಮೂಲಾಗ್ರವಾಗಿ ಸೀಪುವುದು ಮಧ್ಯಮ.
ಚೂರಿಯಿಂದ ಕತ್ತರಿಸಿ ಹೋಳು ಮಾಡಿ ತಿನ್ನುವುದು ಅಧಮ. ಮೊನ್ನೆ ಯಾರದೋ ಮನೆಗೆ ಹೋಗಿದ್ದೆ. ನೀಟಾಗಿ ಕತ್ತರಿಸಿದ್ದ ಮಾವಿನ ಹೋಳುಗಳನ್ನು ತಟ್ಟೆಯಲ್ಲಿಟ್ಟು ತಂದು ‘ಒಳ್ಳೆ ರಸಪುರಿ ಮಾರಾಯರೆ, ತಿನ್ನಿ’ ಎಂದು ಮುಂದಿಟ್ಟರು. ಆಯತ ಮತ್ತು ಚೌಕಾಕಾರದ ಆ ತುಂಡುಗಳ ಜತೆಗೆ ಫೋರ್ಕು. ಅವರ ಮಕ್ಕಳು ನಾಜೂಕಾಗಿ ಹೋಳನ್ನು ಫೋರ್ಕಿನಲ್ಲಿ ಎತ್ತಿಕೊಂಡು ತುಟಿಗಳಿಗೆ ತಾಗದಂತೆ ಬಾಯಿಗೆಸೆದುಕೊಂಡು ಎದ್ದು ಹೋದರು. ಅದನ್ನು ನೋಡಿ ಬದುಕಿನ ಮೇಲೆಯೇ ಜಿಗುಪ್ಸೆ ಉಕ್ಕಿ ಬಂತು.
ಇದನ್ನೂ ಓದಿ: Harish Kera Column: ವ್ಯರ್ಥನಂದನದಲ್ಲಿ ಕ್ರೂರ ಏಪ್ರಿಲ್ ಮಾಸ
ಮಾವಿನ ಹಣ್ಣನ್ನು ಹೀಗೂ ತಿನ್ನುವ ಪಾಖಂಡಿಗಳುಂಟೇ? ಪಪ್ಪಾಯಿಯನ್ನು ಹೀಗೆ ತಿಂದರೆ ಸಮ. ಉಳಿದ ಹಣ್ಣುಗಳ ಕತೆ ಏನೇ ಇರಲಿ. ಮಾವಿನ ಹಣ್ಣನ್ನು ತಿನ್ನಬೇಕಾದ ರೀತಿಯೇ ಬೇರೆ. ಚಮಚ, ಫೋರ್ಕುಗಳನ್ನು ಇದರ ಜತೆ ಜೋಡಿಸುವುದು ಹೀನಾಯ. ಮಾವು ಯಾವುದೇ ಜಾತಿಯದಾಗಿರಲಿ, ಅದನ್ನು ಬುಟ್ಟಿಯಲ್ಲಿಯೇ ತಂದಿಡಬೇಕು.
ಸಣ್ಣಗಾತ್ರದ ಕಾಟು ಮಾವು ಆಗಿದ್ದರೆ, ಕನಿಷ್ಠ ನೂರು ಇರತಕ್ಕದ್ದು. ತೊಳೆದಿರಲೇ ಬೇಕೆಂದಿಲ್ಲ. ಮೊದಲು ತೊಟ್ಟು ಮುರಿಯುವ ಕೆಲಸ. ಮಾವಿನ ಕಾಯಿಯ ತೊಟ್ಟು ಮುರಿಯುವಾಗ ಅದರಿಂದ ಬೆಳ್ಳಗಿನ ಸೊನೆ ಸಿರ್ರನೆ ಉಕ್ಕಿ ಹಾರುತ್ತದೆ. ಉಪ್ಪಿನಕಾಯಿಗೆ ಮಿಡಿ ಆಯುವವರಿಗೆ ಈ ವಿಚಾರ ಚೆನ್ನಾಗಿ ಗೊತ್ತು. ಹಣ್ಣು ಆ ವಿಚಾರದಲ್ಲಿ ಸಾಧು. ಮತ್ತೆ ಮಾವಿನ ಹಣ್ಣಿನಲ್ಲಿ ತೊಟ್ಟು ಮತ್ತು ಓಟೆ ಮಾತ್ರವೇ ತ್ಯಾಜ್ಯ.
ಉಳಿದದ್ದೆಲ್ಲ ಭೋಜ್ಯ.ಗೊರಟು ಅಲಿಯಾಸ್ ಸಿಪ್ಪೆಯಲ್ಲಿ ತಿರುಳನ್ನು ಬಿಡುವವನು ಪಾಪಿ. ಗೊರಟನ್ನು ಚೀಪಿ ಕಚ್ಚಿ ಹೀರಿ ಓಟೆಯನ್ನು ದಿಟ್ಟಿಸಬೇಕು. ಆಗ ಅದು ‘ನಿನ್ನ ದಮ್ಮಯ್ಯ, ಇನ್ನು ಸಾಕು ಮಾರಾಯ ಬಿಡು’ ಎಂದು ಅಂಗಲಾಚಿದರೆ ಅದಕ್ಕೆ ಬಿಡುಗಡೆ ಕೊಡಬಹುದು ಎಂದರ್ಥ. ಆಗಲೂ ಹಾಗೇ ಅದನ್ನು ಬಿಸಾಡುವಂತಿಲ್ಲ.
ನಿಮ್ಮ ತಮ್ಮನೋ ತಂಗಿಯೋ ಹತ್ತಿರದಲ್ಲಿದ್ದರೆ ಅವರನ್ನು ಕರೆದು, ಅವರು ‘ಓ’ ಎಂದರೆ, ‘ಹಾಗಿದ್ದರೆ ಓಟೆ ಜತೆ ಓಡು’ ಎಂದು ಅದನ್ನು ದೂರ ಬಿಸಾಕಿ ಅವರನ್ನು ‘ಕೊರಂಟು’ ಮಾಡುವ ಸೀನು ಸೃಷ್ಟಿಸಬೇಕು. ಅಲ್ಲಿಗೆ ಆಮ್ರಾಸ್ವಾದನದ ಒಂದು ಅಧ್ಯಾಯ ಸಂಪೂರ್ಣ.
ಅಂದ ಹಾಗೆ ಓಟೆಯನ್ನು ಒಡೆದರೆ ಒಳಗೆ ಇರುವ ಬಿಳಿಯ ಭಾಗಕ್ಕೆ ಮಲೆನಾಡಿನಲ್ಲಿ ‘ಕೋಗಿಲೆ’ ಎನ್ನುತ್ತಾರೆ. ಯಾಕೆ ಆ ಹೆಸರೋ ತಿಳಿಯದು. ಒಂದು ಹಣ್ಣು ತಿಂದರೆ ಸಾಕೆ? ಹಣ್ಣಿನ ರುಚಿ ನಿಮ್ಮನ್ನು ಸಂಪೂರ್ಣ ಆವರಿಸಿಕೊಳ್ಳಬೇಕೆಂದರೆ ಹತ್ತಾದರೂ ತಿನ್ನಬೇಕು. ಕಾಟುಮಾವು ಕನಿಷ್ಠ ಇಪ್ಪತ್ತು.
ಹಣ್ಣಿನ ರಸ ಕೈಯನ್ನೆಲ್ಲ ಒದ್ದೆಯಾಗಿಸಿ, ಮಣಿಕಟ್ಟನ್ನು ಹಾದು, ಮೊಣಕೈಯವರೆಗೂ ಇಳಿಯಬೇಕು. ಆಗ ಕೈಯನ್ನು ಮೊಣಕೈಯಿಂದ ಅಂಗೈವರೆಗೂ ಸು...ರ್ರನೆ ಆಗಾಗ ನೆಕ್ಕಿ ಕೊಳ್ಳಬೇಕು. ಹಣ್ಣೆಲ್ಲ ತಿಂದಾದ ನಂತರ ಹಲ್ಲುಗಳೆಡೆಯಲ್ಲಿ ಸಿಕ್ಕಿಕೊಂಡ ನಾರನ್ನು ಬಿಡಿಸುವ ಕಾರ್ಯಕ್ರಮ. ಸಾಮಾನ್ಯವಾಗಿ ಒಂದು ಕಂಬಳಿ ಹೆಣೆಯುವಷ್ಟು ನಾರು ಅಲ್ಲಿ ಸಿಕ್ಕಿಕೊಂಡಿದ್ದರೆ ಮಾತ್ರ ನೀವು ಮಾವು ತಿನ್ನುವುದರಲ್ಲಿ ಪಂಟರ್ ಎಂದರ್ಥ.
ಹಾಗೆ ಹಣ್ಣು ಮುಕ್ಕುತ್ತಿದ್ದ ಬಾಲ್ಯದ ಮುಂಜಾನೆಗಳು ನೆನಪಾಗುತ್ತವೆ. ಯಾವತ್ತೂ ಎಂಟು ಗಂಟೆಗೆ ಮುನ್ನ ಎದ್ದೇಳದ ನಮ್ಮನ್ನು ಬೇಸಿಗೆಯಲ್ಲಿ ಬೇಗನೆ ಏಳಿಸಲು ದೊಡ್ಡವರು ಕಂಡುಕೊಂಡ ಉಪಾಯ: ‘ಜೀರಿಗೆ ಮಾವಿನ ಹಣ್ಣು ಆಚೆ ಮನೆಯವ್ರ ಪಾಲಾಯ್ತಾ ಅಂತ!’ ಹಾಸಿಗೆಯಿಂದ ಚಂಗನೆ ನೆಗೆದು ಎರಡೇ ಗುತ್ತಿನಲ್ಲಿ ಮಾವಿನ ಮರದ ಬುಡಕ್ಕೆ ಧಾವಿಸು ತ್ತಿದ್ದೆವು.
ಹಿಂದಿನ ರಾತ್ರಿ ಚೆನ್ನಾಗಿ ಗಾಳಿ ಬೀಸಿದ್ದರೆ ಮರದಡಿ ರಂಗೋಲಿ ಹಾಕಿದಂತೆ ಹಣ್ಣುಗಳು. ಅದು ಇನ್ನೊಬ್ಬರ ಪಾಲಾಗುವ ಮುನ್ನವೇ ಹೆಕ್ಕಿಕೊಳ್ಳಬೇಕು. ಕೆಲವೊಮ್ಮೆ ಮಾವಿನ ಮರದಡಿಯೇ ಮೂರನೇ ಮಹಾಯುದ್ಧ. ಮಕ್ಕಳು ಬೆಳಗ್ಗೆದ್ದು ಕಾಡುಬಿದ್ದರೆ ಸಂಜೆಯ ವರೆಗೂ ಮಾವಿನಹಣ್ಣುಗಳೇ ನಮ್ಮ ಜೀವ ಪೊರೆಯುತ್ತಿದ್ದವು.
ಈಗಲೂ ಹಾಗೇ ತಿನ್ನುವ ಆಸೆಯಾಗುತ್ತದೆ. ಬೈಬಲ್ ಮನುಷ್ಯನ ಸೃಷ್ಟಿಯ ಬಗ್ಗೆ ಹೇಳುವ ಈ ಕತೆ ನಿಮಗೆ ಗೊತ್ತಿರಬಹುದು-ದೇವರು ಮೊದಲು ಆದಂನನ್ನೂ ಆಮೇಲೆ ಈವ್‌ಳನ್ನೂ ಸೃಷ್ಟಿಸಿದ. ಬಳಿಕ ಮರವೊಂದನ್ನು ತೋರಿಸಿ, ಅದರಲ್ಲಿರುವುದು ನಿಷೇಧಿತ ಫಲವೆಂದೂ ಅದನ್ನು ತಿನ್ನಬಾರದೆಂದೂ ಹೇಳಿ, ಅವರನ್ನು ದೇವರ ಉದ್ಯಾನದಲ್ಲಿ ಆಡಲು ಬಿಟ್ಟ. ಆದರೆ ಆದಂ ಮತ್ತು ಈವ್ ಅದನ್ನು ದೇವರ ಕಣ್ಣು ತಪ್ಪಿಸಿ ತಿಂದೇ ಬಿಟ್ಟರು.
ಮುಗ್ಧತೆಯ ಸಾಕಾರಮೂರ್ತಿಗಳಾಗಿದ್ದ ಅವರಿಗೆ ಆ ಮೊದಲು ಪ್ರಣಯದ ಅರಿವಿರಲಿಲ್ಲ. ಹಣ್ಣು ತಿಂದದ್ದೇ, ನಾಚಿಕೆ, ಪ್ರೇಮ, ಕಾಮ ಮುಂತಾದ ಮನುಷ್ಯ ಸಹಜ ಭಾವಗಳು ಹುಟ್ಟಿ ಕೊಂಡವು. ಸೃಷ್ಟಿ ಮೊದಲಾಯಿತು.
ಬೈಬಲ್ ಹೇಳುವ ಈ ಆದಿಫಲ ಯಾವುದಿರಬಹುದು ಎಂಬ ಅನುಮಾನ ನನ್ನನ್ನು ಪದೇ ಪದೆ ಕಾಡಿದೆ. ಇತ್ತೀಚೆಗೆ ಆ ಸಂಶಯ ಪರಿಹಾರವಾಯ್ತು. ನಮ್ಮ ಪರಿಚಯದ ಆಯುರ್ವೇದ ವೈದ್ಯರೊಬ್ಬರು ಒಂದು ಶ್ಲೋಕವನ್ನು ಉಲ್ಲೇಖಿಸಿ ಅದರ ಅರ್ಥವನ್ನು ಹೀಗೆ ವಿವರಿಸಿದರು: ‘ಪಕ್ವಂ ತು ಮಧುರಂ ವೃಷ್ಯಂ ಸ್ನಿಗ್ಧ ಹೃದ್ಯಂ ಬಲಪ್ರದಂ, ಗುರು ವಾತಹರಮ್ ರುಚ್ಯಂ ವರ್ಣ್ಯಂ ಶೀತಮಪಿತ್ತಲಮ- ಮಾವಿನ ಹಣ್ಣು ಎಷ್ಟು ಒಳ್ಳೇದು ಗೊತ್ತಾ? ಚೆನ್ನಾಗಿ ಹಣ್ಣಾದ ಮಾವು ಮಧುರ ಅಂದ್ರೆ ರುಚಿಕರ, ಸ್ನಿಗ್ಧ ಅಂದ್ರೆ ರಸವತ್ತಾ ದದ್ದು, ಹೃದ್ಯ ಅಂದ್ರೆ ಹೃದಯಕ್ಕೊಳ್ಳೇದು, ರುಚಿ ಮತ್ತು ವರ್ಣವನ್ನು ಉದ್ದೀಪಿಸು ವಂಥದ್ದು, ಬಲಪ್ರದ ಮತ್ತು ವಾತಹರ, ಶೀತವೂ ಅಲ್ಲ ಪಿತ್ತವೂ ಅಲ್ಲದ್ದು. ವೃಷ್ಯ ಅಂದ್ರೆಂತದು ಗೊತ್ತುಂಟ? ವೀರ್ಯವೃದ್ಧಿ ಮಾಡುವಂಥದ್ದು ಅಂತ!’ ಮಾವಿನ ಈ ‘ವೃಷ್ಯ’ ಗುಣದ ಪರಿಣಾಮವೇ ಆದಂ ಮತ್ತು ಈವ್‌ರ ಪ್ರಣಯಪ್ರಸಂಗ ಶುರುವಾಗಲು ಕಾರಣ ಎಂದು ನಾನು ಊಹಿಸುತ್ತೇನೆ.
ಉರ್ದು ಕವಿ ಮಿರ್ಜಾ ಗಾಲಿಬ್‌ನ ಮಾವು ಪ್ರೇಮ ಜನಜನಿತ. ಇವನು ರಾಶಿ-ರಾಶಿ ಮಾವಿನ ಹಣ್ಣು ಸವಿಯುತ್ತಿದ್ದ. ಒಮ್ಮೆ ಈತ ಗೆಳೆಯ ರಜಿಯುದ್ದೀನ್ ಖಾನ್ ಜತೆ ಮನೆ ಮುಂದೆ ಕುಳಿತಿದ್ದ. ಬೀದಿಯಲ್ಲಿ ಮಾವಿನ ಹಣ್ಣಿಗೆ ಗೊರಟು, ಸಿಪ್ಪೆ ಬಿದ್ದಿದ್ದವು. ಅಂದು ಕತ್ತೆ ಅಡ್ಡಾಡುತ್ತ ಬಂತು. ಮಾವಿನ ಹಣ್ಣನ್ನು ಮೂಸಿ, ತಿನ್ನದೆ ಹಾಗೇ ಹೋಯಿತು. ಅದನ್ನು ನೋಡಿ, ಗಾಲಿಬ್‌ನನ್ನು ಚುಡಾಯಿಸಲೆಂದು ರಜಿಯುದ್ದೀನ್ ಖಾನ್ ಹೇಳಿದ: ‘ನೋಡು ಗಾಲಿಬ್, ಕತ್ತೆ ಕೂಡ ಮಾವಿನ ಹಣ್ಣು ತಿನ್ನಲ್ಲ!’ ಥಟ್ಟಂತ ಬಂತು ಗಾಲಿಬ್‌ನ ಉತ್ತರ: ‘ಹೌದು, ಕತ್ತೆಗಳು ಮಾತ್ರ ಮಾವಿನ ಹಣ್ಣು ತಿನ್ನಲ್ಲ.’ ಮಾವಿನ ಹಣ್ಣನ್ನು ತಿನ್ನದವರು, ಅದನ್ನು ದ್ವೇಷಿಸುವವರು ಈ ಪ್ರಸಂಗ ಓದಿ ಆತ್ಮಾವಲೋಕನ ಮಾಡಿಕೊಳ್ಳಬೇಕು.
ಮಾವು ಎಂದ ಕೂಡಲೆ ಮನಸ್ಸು ಕಾಳಿದಾಸನ ಮೇಘದೂತಕ್ಕೇ ಮೊರೆ ಹೋಗುತ್ತದೆ. ಆತನ ಪದ್ಯವನ್ನು ದ.ರಾ.ಬೇಂದ್ರೆಯವರು ಹೀಗೆ ಪುನರ್ ಸೃಷ್ಟಿಸುತ್ತಾರೆ: ‘ತೊಳೆದ ತುರುಬು ಕಪ್ಪಾದ ನೀನು/ ಗಿರಿಶಿಖರದಲ್ಲಿ ತೇಲೆ/ ಆಷಾಢ ಮಾವು ಸುರಿದಾವು ಗೊಂಚ ಲಲಿ/ ಬೆಟ್ಟದೆದೆಯ ಮೇಲೆ/ ಅಮರ ಮಿಥುನಗಳ ಪ್ರಣಯದೃಷ್ಟಿ/ ಅರಳರಳುವಂತೆ ಆಗೆ/ ಮಲೆಯ ತುದಿಯು ಕಪ್ಪಾಗಿ/ ತೋರುವದು ನೆಲದ ಮೊಲೆಯ ಹಾಗೆ!’ ಆಮ್ರಕೂಟ ಬೆಟ್ಟದ ಮೇಲುಗಡೆ ತಂಗುವ ಮೋಡ, ಬೆಟ್ಟದ ತಪ್ಪಲ ತುಂಬಾ ಹಬ್ಬಿರುವ ಫಲಭರಿತ ಮಾವಿನ ತೋಪಿನ ಹಿನ್ನೆಲೆಯಲ್ಲಿ, ಆಕಾಶದಿಂದ ನೋಡುತ್ತಿರುವ ಅಮರಮಿಥುನಕ್ಕೆ ಕಾಣಿಸುವುದು ಹಾಗಂತೆ.
ಈ ಸಾಲುಗಳನ್ನು ಓದಿದಾಗ ಅದರ ಉಪಮಾ ಸಾಮರ್ಥ್ಯ, ಚಿತ್ರಕ ಶಕ್ತಿಯನ್ನು ಕಂಡು ರೋಮಾಂಚನವಾಗದೆ ಇರದು. ಈ ಮೈನವಿರಿನ ನಿತ್ಯನೂತನತೆ ಬರಿಯ ಕಾಳಿದಾಸ ನಲ್ಲಿಲ್ಲ, ಬೇಂದ್ರೆ ಯಲ್ಲಿಲ್ಲ, ಮಾವು ಎಂಬ ಮಾಂತ್ರಿಕ ಫಲದಲ್ಲಿಯೂ ಇದೆ ಅನ್ನಿಸುವು ದುಂಟು.
ನಾವು ಹೆಮ್ಮೆ ಪಡಬಹುದಾದ್ದು ಏನೆಂದರೆ, ಮಾವು ನಮ್ಮ ಸ್ವಂತದ್ದು ಎಂಬುದು. ನಾವು ಜಗತ್ತಿಗೆ ಸೊನ್ನೆ ಕೊಟ್ಟಂತೆ ಮಾವನ್ನೂ ಕೊಟ್ಟೆವು. ಅದಕ್ಕೆ ಇದರ ಹೆಸರು ಸಸ್ಯಶಾಸ್ತ್ರೀಯ ಹೆಸರು ‘ಮ್ಯಾಂಜಿ ಫೆರಾ ಇಂಡಿಕಾ.’ ಇಂದಿಗೂ ಜಗತ್ತಿನ ಮಾವು ಉತ್ಪಾದನೆಯಲ್ಲಿ ಅರ್ಧ ಭಾಗ ಭಾರತದ್ದೆ. ಮೊದಲು ಇಲ್ಲಿ ಕಾಡು ಮಾವಿನ ಹಣ್ಣಿನ ವೈವಿಧ್ಯವಿತ್ತು.
ಮೊಘಲರು ಮತ್ತು ವಿದೇಶೀಯರು ಇಲ್ಲಿನ ಮಾವಿಗೆ ನಾನಾ ಬಗೆಯ ಕಸಿಯನ್ನು ಮಾಡಿ ದೊಡ್ಡ ಜಾತಿಯ ವೈವಿಧ್ಯಮಯ ಹಣ್ಣುಗಳನ್ನು ಸೃಷ್ಟಿಸಿದರು. ಕಾಡು ಮಾವುಗಳು ಮಾಯವಾದವು. ಆದರೆ ಒಳ್ಳೆಯ ಮಿಡಿ ಉಪ್ಪಿನಕಾಯಿಗೆ ಈಗಲೂ ಸಣ್ಣ ಕಾಡು ಮಾವೇ ಬೇಕು. ಅಪ್ಪೆ ಮಿಡಿಯೂ ಒಂದು ಬಗೆಯ ಕಾಡುಮಾವು. ಧನಿಯಾ, ಜೀರಿಗೆ- ಹೀಗೆ ಅದರ ಪರಿಮಳಕ್ಕನುಸರಿಸಿ ನಾನಾ ಹೆಸರುಗಳು.
ಹೊಸ ತಲೆಮಾರಿಗೆ ಬಹುಶಃ ಕಾಡುಮಾವು ಸವಿದು ಗೊತ್ತೇ ಇಲ್ಲ ಎನ್ನಬಹುದೋ ಏನೋ. ಯಾಕೆಂದರೆ ಪೇಟೆಯಲ್ಲಿ ಆಲೋನ್ಸೋ, ರಸಪುರಿ, ಬಾದಾಮಿ ಮೊದಲಾದ ರುಚಿಕರ ಕಸಿ ಹಣ್ಣುಗಳು ಸಿಗುತ್ತವೆ. ಕತ್ತರಿಸಿ ತಿನ್ನಲು ಸುಲಭ, ನೋಡಲೂ ಚಂದ. ಇದರ ನಡುವೆ, ಕಾಡಿನ ಬೆಳೆಯುವ ಮರದ ಹಣ್ಣುಗಳು ಹೇಗೆ ತಾನೆ ಸ್ಥಾನ ಪಡೆಯಬೇಕು. ಅದು ಕಾಡು ಪ್ರಾಣಿಗಳಿಗೇ ಇರಲಿ, ಪರವಾಗಿಲ್ಲ.
ಆದರೆ ನಮಗೂ ಆಗಾಗ ಸಿಗಲಿ. ಆಕಾಶದೆತ್ತರಕ್ಕೆ ಬೆಳೆಯುವ ಕಾಡುಮಾವಿನ ಮರದಿಂದ ಹಣ್ಣನ್ನು ಕೊಯ್ಯುವುದು ಬಲುಕಷ್ಟ. ಅದು ಕರುಣಿಸಿ ಬೀಳಿಸಿದಾಗ ಮಾತ್ರ ನಮಗೆ ಫಲಪ್ರಾಪ್ತಿ. ಆ ದೃಷ್ಟಿಯಿಂದ ಅದು ದೇವರ ಹಾಗೆ.