ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gururaj Gantihole Column: ಸಾಂಸ್ಥಿಕ ಸೋಗಿನಲ್ಲಿ ಸಂಘಟಿತ ಮತಾಂತರ

ಮಹಾರಾಷ್ಟ್ರದ ನಾಸಿಕ್‌ನ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಇಎಸ್) ನಂತಹ ಪ್ರತಿಷ್ಠಿತ ಕಾರ್ಪೊರೇಟ್ ಸಂಸ್ಥೆಯ ಆವರಣದಲ್ಲಿ ನಡೆದಿದೆ ಎನ್ನಲಾದ ಬಲವಂತದ ಮತಾಂತರ ಮತ್ತು ಕಿರುಕುಳದ ಘಟನೆಗಳು ಕೇವಲ ಒಂದು ಅಪರಾಧವಲ್ಲ, ಇದು ನಮ್ಮ ದೇಶದ ಆಂತರಿಕ ಭದ್ರತೆ ಮತ್ತು ಸಾಮಾಜಿಕ ಸ್ವಾಸ್ಥ್ಯಕ್ಕೆ ಎದುರಾಗಿರುವ ದೊಡ್ಡ ಸವಾಲು.

Gururaj Gantihole Column: ಸಾಂಸ್ಥಿಕ ಸೋಗಿನಲ್ಲಿ ಸಂಘಟಿತ ಮತಾಂತರ

-

ಗಂಟಾಘೋಷ

ಭಾರತವು ಇಂದು ಜಾಗತಿಕವಾಗಿ ‘ವಿಶ್ವಗುರು’ ಆಗುವತ್ತ ದಾಪುಗಾಲು ಹಾಕುತ್ತಿದೆ. ತಂತ್ರಜ್ಞಾನ, ಆರ್ಥಿಕತೆ ಮತ್ತು ಬಾಹ್ಯಾಕಾಶ ಸಂಶೋಧನೆಯಲ್ಲಿ ನಾವು ಮುಂಚೂಣಿ ಯಲ್ಲಿದ್ದೇವೆ. ಆದರೆ, ಇಷ್ಟೆಲ್ಲಾ ಪ್ರಗತಿಯ ನಡುವೆಯೂ ನಮ್ಮ ಸಮಾಜದ ಆಳದಲ್ಲಿ ಅತ್ಯಂತ ಭಯಾನಕವಾದ, ವ್ಯವಸ್ಥಿತವಾದ ಒಂದು ‘ಸಾಂಸ್ಕೃತಿಕ ಕ್ಯಾನ್ಸರ್’ ಹರಡುತ್ತಿದೆ.

ಮಹಾರಾಷ್ಟ್ರದ ನಾಸಿಕ್‌ನ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಇಎಸ್) ನಂತಹ ಪ್ರತಿಷ್ಠಿತ ಕಾರ್ಪೊರೇಟ್ ಸಂಸ್ಥೆಯ ಆವರಣದಲ್ಲಿ ನಡೆದಿದೆ ಎನ್ನಲಾದ ಬಲವಂತದ ಮತಾಂತರ ಮತ್ತು ಕಿರುಕುಳದ ಘಟನೆಗಳು ಕೇವಲ ಒಂದು ಅಪರಾಧವಲ್ಲ, ಇದು ನಮ್ಮ ದೇಶದ ಆಂತರಿಕ ಭದ್ರತೆ ಮತ್ತು ಸಾಮಾಜಿಕ ಸ್ವಾಸ್ಥ್ಯಕ್ಕೆ ಎದುರಾಗಿರುವ ದೊಡ್ಡ ಸವಾಲು.

ಈ ಆಯ್ದ ವ್ಯವಸ್ಥಿತ ದೌರ್ಜನ್ಯದ ಹಿಂದೆ ಆಡಳಿತಾತ್ಮಕ ಅಧಿಕಾರ ಮತ್ತು ಕಾರ್ಪೋರೇಟ್ ವ್ಯವಸ್ಥೆಯನ್ನು ಅತ್ಯಂತ ಚಾಣಾಕ್ಷತನದಿಂದ ಬಳಸಿಕೊಳ್ಳಲಾಗಿದೆ. ಆರೋಪಿಗಳು ತಮ್ಮ ಧಾರ್ಮಿಕ ಅಜೆಂಡಾವನ್ನು ಅವರು ಹೊಂದಿದ್ದ ಉನ್ನತ ಹುದ್ದೆಗಳನ್ನು ಅಸ್ತ್ರವನ್ನಾಗಿ ಬಳಸಿ ಮುಂದುವರೆಸುತ್ತಿದ್ದರು ಎನ್ನಲಾಗುತ್ತಿದೆ.

ಅವರು ಸಂತ್ರಸ್ತ ಮಹಿಳೆಯರ ಉದ್ಯೋಗದ ಭವಿಷ್ಯದ ಮೇಲೆ ಭಯ ಹುಟ್ಟಿಸಿ ಕಿರುಕುಳ ನೀಡಿರುವುದು ಶೋಚನೀಯ. ದೈನಂದಿನ ಕೆಲಸದ ಅವಧಿಯಲ್ಲಿ ಮಹಿಳೆಯರನ್ನು ಪ್ರತ್ಯೇಕವಾಗಿ ಕರೆಸಿ, ಅವರ ಮೇಲೆ ಮಾನಸಿಕ ಒತ್ತಡ ಹೇರುವುದು, ಪರ್ಫಾರ್ಮೆನ್ಸ್ ರೇಟಿಂಗ್‌ನಲ್ಲಿ ತಾರತಮ್ಯ ಮಾಡುವ ಬೆದರಿಕೆ ಹಾಕುವುದು ಮತ್ತು ಕೆಲಸದಿಂದ ತೆಗೆದು‌ ಹಾಕುವ ಭೀತಿಯನ್ನು ಒಡ್ಡುವ ಮೂಲಕ ಅವರನ್ನು ಅಸಹಾಯಕ ಸ್ಥಿತಿಗೆ ತಳ್ಳಲಾಗಿತ್ತು ಎಂದು ಸಂತ್ರಸ್ತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: Gururaj Gantihole Column: ಆಟಿಸಂ ಲೋಕದೊಳಗೊಂದು ಮೌನ ಪಯಣ !

ಈ ಸಂಘಟಿತ ಗುಂಪು ಆಫೀಸ್‌ನ ನಿಯಮಗಳಿಗಿಂತ ಹೆಚ್ಚಾಗಿ ತಮ್ಮ ಧಾರ್ಮಿಕ ಸಿದ್ಧಾಂತ ಗಳನ್ನೇ ಅಲ್ಲಿನ ಅಘೋಷಿತ ಕಾನೂನನ್ನಾಗಿ ಮಾಡಿಕೊಂಡಿದ್ದರು. ಇಲ್ಲಿ ‘ಅಧಿಕಾರ’ವು ಕೇವಲ ಆಡಳಿತಕ್ಕೆ ಸೀಮಿತವಾಗದೆ, ವ್ಯವಸ್ಥಿತ ಕೋಮುವಾದಿ ಹುನ್ನಾರಕ್ಕೆ ದಾರಿ ಯಾಗಿತ್ತು.

ಉದ್ಯೋಗದ ಅವಶ್ಯಕತೆಯಿರುವ ಮತ್ತು ಬಲಿಷ್ಠ ಬೆಂಬಲವಿಲ್ಲದ ಮಹಿಳೆಯರನ್ನು ಗುರಿ ಯಾಗಿಸಿಕೊಂಡು, ಅವರ ಆರ್ಥಿಕ ಭದ್ರತೆಯನ್ನೇ ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿತ್ತು. ಇದು ಕೇವಲ ವೈಯಕ್ತಿಕ ಕಿರುಕುಳವಲ್ಲ, ಬದಲಿಗೆ ಒಬ್ಬ ವ್ಯಕ್ತಿಯ ಜೀವನೋಪಾಯದ ಮಾರ್ಗವನ್ನೇ ಬಳಸಿಕೊಂಡು ಅವರ ನಂಬಿಕೆ ಮತ್ತು ಧರ್ಮವನ್ನು ಕಿತ್ತುಕೊಳ್ಳುವ ಕೃತ್ಯವು ಅಕ್ಷಮ್ಯ ಅಪರಾಧವಾಗಿದೆ.

ಪ್ರತಿಷ್ಠಿತ ಸಂಸ್ಥೆಯೊಂದು ನೀಡಿದ ಅಧಿಕಾರವನ್ನು ಇಂತಹ ನೀಚ ಕೃತ್ಯಕ್ಕೆ ಬಳಸಿ ಕೊಂಡಿದ್ದು, ಆಧುನಿಕ ಕಾರ್ಪೊರೇಟ್ ಜಗತ್ತಿನಲ್ಲಿ ಈ ರೀತಿಯ ಸಂಘಟಿತ ದಿಗ್ಭ್ರಮೆ ಮೂಡಿಸುವಂತಿದೆ. ಇದು ಅಧಿಕಾರದ ದುರುಪಯೋಗ ಮಾತ್ರವಲ್ಲದೆ, ಒಂದು ಸಮುದಾಯದ ಅಸ್ತಿತ್ವದ ಮೇಲಿನ ವ್ಯವಸ್ಥಿತ ಪ್ರಹಾರವಾಗಿದೆ.

ಮತಾಂತರವು ಕೇವಲ ಧರ್ಮ ಬದಲಾವಣೆಯಲ್ಲ, ಅದು ರಾಷ್ಟ್ರಾಂತರಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಅನೇಕ ಮಹನೀಯರು ಹೇಳಿದ್ದಾರೆ. ಈ ಹಿಂದೆಯೆ ಈ ಬಗ್ಗೆ ನಮ್ಮ ದೇಶದ ಉನ್ನತ ನ್ಯಾಯಾಲಯಗಳು ನೀಡಿರುವ ತೀರ್ಪುಗಳನ್ನು ನಾವು ಗಮನಿಸ ಬೇಕು. ಬಲವಂತದ ಮತಾಂತರ ರಾಷ್ಟ್ರೀಯ ಭದ್ರತೆಗೆ ಬೆದರಿಕೆ (2022) ಎಂದು ಸುಪ್ರೀಮ್ ಕೋರ್ಟ್ ನೀಡಿರುವ ಇತ್ತೀಚಿನ ಈ ತೀರ್ಪು ಅತ್ಯಂತ ಪ್ರಮುಖವಾದುದು.

ಸುಪ್ರೀಂ ಕೋರ್ಟ್ ಮತಾಂತರದ ಗಂಭೀರತೆಯನ್ನು ರಾಷ್ಟ್ರೀಯ ಭದ್ರತೆಯ ದೃಷ್ಟಿಕೋನ ದಲ್ಲಿ ವಿಶ್ಲೇಷಿಸಿದೆ. ಅಶ್ವಿನಿ ಕುಮಾರ್ ಉಪಾಧ್ಯಾಯ ವರ್ಸಸ್ ಯೂನಿಯನ್ ಆಫ್‌ ಇಂಡಿಯಾ ಪ್ರಕರಣದಲ್ಲಿ ಬಲವಂತದ ಮತಾಂತರವು ಅತ್ಯಂತ ಗಂಭೀರ ವಿಷಯ ವಾಗಿದ್ದು, ಇದು ರಾಷ್ಟ್ರದ ಭದ್ರತೆ ಮತ್ತು ಪ್ರಜೆಗಳ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರಬಹುದು ಎಂದು ನ್ಯಾಯಪೀಠವು ಅಭಿಪ್ರಾಯ ಪಟ್ಟಿದೆ.

ಹಾಗೆಯೇ ಕೇಂದ್ರ ಸರಕಾರವು ಇದನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಮೂರ್ತಿ ಎಮ್.ಆರ್.ಶಾ ಅವರ ಪೀಠವು ನಿರ್ದೇಶಿಸಿದೆ. ರೇವ್ ಸ್ಟಾನಿಸ್ಲಾಸ್ ವರ್ಸಸ್ ಮಧ್ಯಪ್ರದೇಶ ಸರಕಾರದ (1977) ಪ್ರಕರಣವು ಮತಾಂತರದ ಕುರಿತು ಇರುವ ಅತ್ಯಂತ ಹಳೆಯ ಮತ್ತು ಲ್ಯಾಂಡ್‌ಮಾರ್ಕ್ ತೀರ್ಪಾಗಿದೆ.

ಸಂವಿಧಾನದ ವಿಧಿ 25ರ ಅಡಿಯಲ್ಲಿ ‘ಧರ್ಮ ಪ್ರಸಾರ’ ಮಾಡುವ ಹಕ್ಕಿದೆಯೇ ಹೊರತು ‘ಮತಾಂತರ ಮಾಡುವ ಮೂಲಭೂತ ಹಕ್ಕಿಲ್ಲ’ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಮತಾಂತರವನ್ನು ಪ್ರತಿಬಂಽಸುವ ರಾಜ್ಯ ಸರಕಾರಗಳ ಕಾಯ್ದೆಗಳು ಸಾಂವಿಧಾನಿಕವಾಗಿ ಸರಿಯಾಗಿವೆ ಎಂದು ಈ ತೀರ್ಪು ಎತ್ತಿಹಿಡಿದಿದೆ.

ಕೇರಳದ ಹಾದಿಯಾ ಪ್ರಕರಣವು (ಶಫಿನ್ ಜಹಾನ್ ವರ್ಸಸ್ ಅಶೋಕನ್ ಕೆ.ಎಂ., 2017-18) ಸಂಘಟಿತ ಮತಾಂತರ ಮತ್ತು ಅದರಲ್ಲಿ ಭಯೋತ್ಪಾದನಾ ಸಂಘಟನೆಗಳ ಪಾತ್ರದ ಬಗ್ಗೆ ತನಿಖೆಗೆ ಆದೇಶಿಸಿದ ಪ್ರಸಿದ್ಧ ಪ್ರಕರಣವಾಗಿದೆ. ಕೇರಳ ಹೈಕೋರ್ಟ್ ಈ ಮದುವೆ ಯನ್ನು ‘ಸಂಘಟಿತ ಮತಾಂತರದ ಹುನ್ನಾರ’ ಎಂದು ಕರೆದು ರದ್ದುಗೊಳಿಸಿತ್ತು. ನಂತರ ಸುಪ್ರೀಂ ಕೋರ್ಟ್ ವೈಯಕ್ತಿಕ ಆಯ್ಕೆಯನ್ನು ಎತ್ತಿಹಿಡಿದರೂ, ಎನ್‌ಐಎ (ಘೆಐಅ) ತನಿಖೆಗೆ ಆದೇಶಿಸಿತ್ತು.

ಕೆಲವು ಸಂಘಟನೆಗಳು ವ್ಯವಸ್ಥಿತವಾಗಿ ಹಿಂದೂ ಹುಡುಗಿಯರನ್ನು ಗುರಿಯಾಗಿಸಿಕೊಂಡು ಮತಾಂತರ ಮಾಡುತ್ತಿವೆ ಎಂಬ ಆಘಾತಕಾರಿ ಅಂಶಗಳನ್ನು ಎನ್‌ಐಎ ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು. ಹಾಗೆಯೇ ಪಿಎಫ್‌ʼಐ ಸಂಸ್ಥೆಯನ್ನು ಬ್ಯಾನ್ ಮಾಡಲು ಶಿಫಾರಸು ಮಾಡಿತ್ತು.

ಈ ಪ್ರಕರಣಗಳೇ ವ್ಯವಸ್ಥಿತ ಸಂಚುಗಳ ಸಾಕ್ಷ್ಯವಾಗಿವೆ. ಇಲ್ಲಿ ಗಮನಿಸಬೇಕಾದ ಅಂಶ ವೆಂದರೆ ಪ್ರತಿ ಅಂತರ್ ಧರ್ಮೀಯ ಪ್ರೇಮ ಪ್ರಕರಣಗಳು ಲವ್ ಜಿಹಾದ್ ಪ್ರಕರಣ ಆಗದೇ ಇರಬಹುದು. ಆದರೆ ಕೆಲವು ಪ್ರಕರಣಗಳಲ್ಲಿ ಸಂಘಟನೆಗಳು ಈ ಜಿಹಾದ್‌ನಲ್ಲಿ ತೊಡಗಿಸಿ ಕೊಂಡಿರುವುದನ್ನು ಮಾತ್ರ ನಿರ್ಲಕ್ಷಿಸುವುದು ಸಾಂಸ್ಕೃತಿಕ ಆತ್ಮಹತ್ಯೆ ಆಗುವುದರಲ್ಲಿ ಸಂದೇಹವಿಲ್ಲ.

ನಾಸಿಕ್ ಪ್ರಕರಣ: ಸುಶಿಕ್ಷಿತರ ಸೋಗಿನಲ್ಲಿ ‘ಕಾರ್ಪೊರೇಟ್ ಜಿಹಾದ್’?

ನಾಸಿಕ್‌ನ ಟಿಸಿಎಸ್ ಪ್ರಕರಣದಲ್ಲಿ ಕೇಳಿ ಬಂದಿರುವ ಅಂಶಗಳು ಬೆಚ್ಚಿಬೀಳಿಸುವಂತಿವೆ. ಒಂಬತ್ತಕ್ಕೂ ಹೆಚ್ಚು ಎಫ್ಐಆರ್‌ಗಳು ದಾಖಲಾಗಿದ್ದು, ವಿಶೇಷ ತನಿಖಾ ದಳ ಕಾರ್ಯಾ ಚರಣೆ ನಡೆಸುತ್ತಿದೆ. ‌

ಆರೋಪಿಗಳು ಉನ್ನತ ಶಿಕ್ಷಣ ಪಡೆದವರು ಮತ್ತು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡು ವವರು. ಇಲ್ಲಿ ಪ್ರಶ್ನೆ ಏನೆಂದರೆ, ಶಿಕ್ಷಣವು ಮನುಷ್ಯನನ್ನು ಸಂಸ್ಕಾರವಂತನನ್ನಾಗಿ ಮಾಡ ಬೇಕಲ್ಲವೇ? ಆದರೆ ಇಲ್ಲಿ ಅದೇ ಶಿಕ್ಷಣವನ್ನು ತನ್ನ ಸಹೋದ್ಯೋಗಿಗಳ ಮೇಲೆ ಒತ್ತಡ ಹೇರಲು, ಅವರ ಧರ್ಮವನ್ನು ಅವಹೇಳನ ಮಾಡಲು ಮತ್ತು ಅವರನ್ನು ಇಸ್ಲಾಂಗೆ ಮತಾಂತರಿಸಲು ಅಸವಾಗಿ ಬಳಸಲಾಗಿದೆ ಎಂದು ಆರೋಪಿಸಲಾಗಿದೆ.

ಬಲಿಪಶುಗಳಾದ ಮಹಿಳೆಯರ ಮೇಲೆ ದೈಹಿಕ ಹಲ್ಲೆ ಮತ್ತು ಮಾನಸಿಕ ಕಿರುಕುಳದಂತಹ ಗಂಭೀರ ಆರೋಪಗಳಿವೆ. ಇದು ಕೇವಲ ಒಬ್ಬ ವ್ಯಕ್ತಿ ಮಾಡಿದ ಕೆಲಸವಲ್ಲ; ಇದರ ಹಿಂದೆ ಒಂದು ವ್ಯವಸ್ಥಿತ ಜಾಲವಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಇಂತಹ ಘಟನೆಗಳನ್ನು ನಾವು ‘ಲವ್ ಜಿಹಾದ್’ ಅಥವಾ ‘ಕಾರ್ಪೊರೇಟ್ ಕಿರುಕುಳ’ ಎಂದು ಕರೆದು ಸುಮ್ಮನಾಗಬಾರದು.

ಇದು ಭಾರತೀಯ ಸಂವಿಧಾನವು ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ಪ್ರಹಾರ. ಇಂದು ಚರ್ಚಿಸುತ್ತಿರುವುದು ಕೇವಲ ಆ ಘಟನೆಯ ಬಗ್ಗೆಯಲ್ಲ, ಬದಲಿಗೆ ಆ ಘಟನೆಯ ಬಗ್ಗೆ ನಮ್ಮ ದೇಶದ ‘ಸೋ ಕಾಲ್ಡ್ ಜಾತ್ಯತೀತರು’ ಮತ್ತು ಎಡಪಂಥೀಯ ಬುದ್ಧಿಜೀವಿಗಳು ವಹಿಸಿರುವ ವಜ್ರಲೇಪಿತ ಮೌನದ ಬಗ್ಗೆ.‌

ಭಗವದ್ಗೀತೆಯ ಪಾಠ: ಹಿರಿಯರ ಮೌನವೇ ವಿನಾಶಕ್ಕೆ ನಾಂದಿ

ಕುರುಕ್ಷೇತ್ರದ ಯುದ್ಧಕ್ಕೆ ಕೇವಲ ದುರ್ಯೋಧನನ ಹಠ ಅಥವಾ ಶಕುನಿಯ ಕುತಂತ್ರ ಮಾತ್ರ ಕಾರಣವಲ್ಲ. ಬದಲಿಗೆ ಆ ಸಮಯದಲ್ಲಿ ಅಧಿಕಾರದಲ್ಲಿದ್ದ ಹಿರಿಯರಾದ ಧೃತ ರಾಷ್ಟ್ರ ಮತ್ತು ಅಪ್ರತಿಮ ವೀರನಾಗಿದ್ದರೂ ಅಧರ್ಮದ ಪರವಾಗಿ ಮೌನಕ್ಕೆ ಶರಣಾದ ಭೀಷ್ಮಾಚಾರ್ಯರ ಮೌನವೇ ಆ ಮಹಾಯುದ್ಧಕ್ಕೆ ಮೂಲ ಕಾರಣ.

ದ್ರೌಪದಿಯ ವಸಾಪಹರಣದಂತಹ ಅತಿ ಘೋರ ಅಧರ್ಮವು ರಾಜಸಭೆಯ ನಡೆಯು ತ್ತಿದ್ದಾಗ, ಧೃತರಾಷ್ಟ್ರನು ತನ್ನ ಪುತ್ರ ವ್ಯಾಮೋಹದಿಂದ ಕಣ್ಣಿದ್ದೂ ಕುರುಡನಾದನು, ಭೀಷ್ಮರು ತನ್ನ ಪ್ರತಿಜ್ಞೆಯ ಹೆಸರಿನಲ್ಲಿ ಮೌನಕ್ಕೆ ಶರಣಾದರು.

ಇಂದಿನ ಭಾರತದ ಪರಿಸ್ಥಿತಿಯೂ ಹಾಗೆಯೇ ಇದೆ. ನಾಸಿಕ್ʼನಲ್ಲಿ ಹಿಂದೂ ಮಹಿಳೆಯರ ಮೇಲೆ ಸಂಘಟಿತವಾಗಿ ಧಾರ್ಮಿಕ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಗಳು ಕೇಳಿ ಬರುತ್ತಿರುವಾಗ, ಇಂದಿನ ಆಧುನಿಕ ‘ಧೃತರಾಷ್ಟ್ರ’ರಾದ ಕಾಂಗ್ರೆಸ್ ನಾಯಕರು ಮತ್ತು ‘ಭೀಷ್ಮ’ರಂತೆ ನಟಿಸುವ ಎಡಪಂಥೀಯರು ಮೌನವಾಗಿದ್ದಾರೆ.

ಅಧರ್ಮವನ್ನು ನೋಡಿಯೂ ಮೌನವಾಗಿರುವುದು ಅಧರ್ಮ ಮಾಡುವುದಕ್ಕಿಂತಲೂ ಹೆಚ್ಚು ಅಪಾಯಕಾರಿ ಎಂದು ಗೀತೆಯು ನಮಗೆ ಬೋಧಿಸುತ್ತದೆ. ಅನ್ಯಾಯವನ್ನು ಸಹಿಸಿ ಕೊಳ್ಳುವುದು ಅನ್ಯಾಯ ಮಾಡುವುದಕ್ಕೆ ಸಮಾನ. ಈ ಮೌನವೇ ನಾಳೆ ಸಮಾಜದಲ್ಲಿ ಬಿರುಕನ್ನು ಹುಟ್ಟಿಸಿ ನಾಗರಿಕ ಸಂಘರ್ಷಕ್ಕೆ ದಾರಿ ಮಾಡಿಕೊಡಬಹುದು.

ಎಡಪಂಥೀಯರ ಮತ್ತು ಕಾಂಗ್ರೆಸ್‌ನ ದ್ವಂದ್ವ ನೀತಿ

ನಾಸಿಕ್‌ನಲ್ಲಿ ಮಹಿಳೆಯರ ಮೇಲೆ ಶೋಷಣೆಯಾದಾಗ ಬಾಯಿ ಮುಚ್ಚಿಕೊಂಡಿರುವ ಕಾಂಗ್ರೆಸ್ ಸರಕಾರ ಮತ್ತು ಅದರ ಮಿತ್ರಪಕ್ಷಗಳು, ಕರ್ನಾಟಕದಲ್ಲಿ ಯಾರೋ ಒಬ್ಬ ಆರೋಪಿಯನ್ನು ಬಂಧಿಸಿದರೆ ‘ಸಂವಿಧಾನ ಅಪಾಯದಲ್ಲಿದೆ’ ಎಂದು ಬೀದಿಗೆ ಇಳಿಯು ತ್ತವೆ.

ಇವರ ‘ಜಾತ್ಯತೀತತೆ’ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿದೆಯೇ? ಹಿಂದೂ ಮಹಿಳೆಯರು ಸಂತ್ರಸ್ತರಾದಾಗ ಇವರ ನಾಲಿಗೆ ಏಕೆ ಎದ್ದೇಳುವುದಿಲ್ಲ? ಸಂತ್ರಸ್ತರನ್ನೇ ದೂಷಿಸುವುದು ಅಥವಾ ಇಂತಹ ಘಟನೆಗಳನ್ನು ಸಣ್ಣ-ಪುಟ್ಟ ವೈಯಕ್ತಿಕ ಘರ್ಷಣೆ ಎಂದು ಕಡೆಗಣಿಸುವುದು ಅಪರಾಧಿಗಳಿಗೆ ಹೆಚ್ಚಿನ ಶಕ್ತಿ ನೀಡಿದಂತಾಗುತ್ತದೆ. ಈ ಅತಿಯಾದ ಮುಸ್ಲಿಂ ತುಷ್ಟೀಕರಣದ ರಾಜಕಾರಣವು ಹಿಂದೂ ಮತ್ತು ಮುಸ್ಲಿಮರ ನಡುವೆ ಅನಗತ್ಯ ಬಿರುಕನ್ನು ಸೃಷ್ಟಿಸುತ್ತಿದೆ.

ಇವರ ಈ ಆಯ್ದ ಮೌನ ಕೇವಲ ಅಚಾತುರ್ಯವಲ್ಲ, ಬದಲಿಗೆ ಇದು ವ್ಯವಸ್ಥಿತವಾದ ರಾಜಕೀಯ ತಂತ್ರಗಾರಿಕೆಯಾಗಿದೆ. ತನ್ನನ್ನು ತಾನು ‘ಸಂವಿಧಾನದ ರಕ್ಷಕ’ ಎಂದು ಕರೆದು ಕೊಳ್ಳುವ ವರ್ಗವು, ಅಪರಾಧಿಯು ಯಾರು ಮತ್ತು ಬಲಿಪಶು ಯಾರು ಎಂಬುದನ್ನು ನೋಡಿ ತನ್ನ ಧ್ವನಿಯ ಮಟ್ಟವನ್ನು ನಿರ್ಧರಿಸುತ್ತದೆ. ಒಂದು ನಿರ್ದಿಷ್ಟ ಸಮುದಾಯಕ್ಕೆ ಸಂಬಂಧಿಸಿದ ಸಣ್ಣ ಘಟನೆಯನ್ನೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸುವ ಈ ಶಕ್ತಿಗಳು, ಹಿಂದೂ ಹೆಣ್ಣುಮಕ್ಕಳ ಮೇಲೆ ಸಾಂಸ್ಥಿಕ ಮಟ್ಟದಲ್ಲಿ ದೌರ್ಜನ್ಯ ಮತ್ತು ಮತಾಂತರದ ಹುನ್ನಾರ ನಡೆದಾಗ ‘ವೈಯಕ್ತಿಕ ಸ್ವಾತಂತ್ರ್ಯ’ದ ಸೋಗಿನಲ್ಲಿ ನುಣುಚಿ ಕೊಳ್ಳುತ್ತವೆ. ಈ ರೀತಿಯ ಇಬ್ಬಂದಿ ನೀತಿಯು ಸಂವಿಧಾನದ ಆಶಯಗಳಿಗೆ ಮಾಡುವ ಅಪಚಾರವಾಗಿದೆ. ನ್ಯಾಯದ ಅಳತೆಗೋಲು ಧರ್ಮದ ಆಧಾರದ ಮೇಲೆ ಬದಲಾದಾಗ, ಅದು ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತದೆ.

ಇದಲ್ಲದೆ, ಈ ಶಕ್ತಿಗಳು ಸೃಷ್ಟಿಸುತ್ತಿರುವ ‘ಅಪರಾಧಿಗಳ ಓಲೈಕೆ’ಯ ವಾತಾವರಣವು ಸಮಾಜದಲ್ಲಿ ಸೌಹಾರ್ದತೆಯನ್ನು ಹಾಳು ಮಾಡುತ್ತಿದೆ. ಸಂತ್ರಸ್ತ ಹಿಂದೂ ಮಹಿಳೆಯರ ನೋವಿಗೆ ಸ್ಪಂದಿಸುವ ಬದಲು, ಘಟನೆಯನ್ನು ಮುಚ್ಚಿಹಾಕುವ ಅಥವಾ ತಿರುಚುವ ಇವರ ಪ್ರಯತ್ನವು ಸಮಾಜದ ಬಹುಸಂಖ್ಯಾತರಲ್ಲಿ ತೀವ್ರ ಅಸಮಾಧಾನ ಮತ್ತು ಅಭದ್ರತೆಯನ್ನು ಮೂಡಿಸುತ್ತಿದೆ.

ಅಲ್ಪಸಂಖ್ಯಾತರ ಮತಬ್ಯಾಂಕ್‌ಗಾಗಿ ಬಹುಸಂಖ್ಯಾತರ ಹಿತಾಸಕ್ತಿ ಮತ್ತು ಸುರಕ್ಷತೆಯನ್ನು ಬಲಿಗೊಡುವುದು ಯಾವ ರೀತಿಯ ಜಾತ್ಯತೀತತೆ? ಇಂತಹ ಅಪಾಯಕಾರಿ ತುಷ್ಟೀಕರಣದ ರಾಜಕಾರಣವು ಕೇವಲ ರಾಜಕೀಯ ಲಾಭಕ್ಕಾಗಿ ಸಮಾಜದ ಶಾಂತಿಯನ್ನು ಹರಾಜು ಹಾಕುತ್ತಿದ್ದು, ಇದನ್ನು ವಿರೋಧಿಸುವುದು ಪ್ರತಿಯೊಬ್ಬ ದೇಶಭಕ್ತನ ಕರ್ತವ್ಯವಾಗಿದೆ. ನೈಜ ಜಾತ್ಯತೀತತೆ ಎಂದರೆ ಎಲ್ಲರಿಗೂ ಸಮಾನ ನ್ಯಾಯವೇ ಹೊರತು, ಒಂದು ಸಮುದಾಯದ ಅಧರ್ಮಕ್ಕೆ ನೀಡುವ ಮೌನ ಸಹಮತಿಯಲ್ಲ.

ರಾಷ್ಟ್ರದ ನಿಲುವು ಏನಾಗಬೇಕು?

ನಾವು ಇಂದು ನಿರ್ಣಾಯಕ ಘಟ್ಟದಲ್ಲಿದ್ದೇವೆ. ಇಂತಹ ಸಂಘಟಿತ ಅಪರಾಧಗಳನ್ನು ಕೇವಲ ಪೊಲೀಸರು ಮಾತ್ರ ತಡೆಯಲು ಸಾಧ್ಯವಿಲ್ಲ. ಸಮಾಜವಾಗಿ ನಾವು ಧ್ವನಿ ಎತ್ತಬೇಕು. ಯಾವುದೇ ಶಿಕ್ಷಣ ಸಂಸ್ಥೆ ಅಥವಾ ಕಂಪನಿಯ ಆವರಣದಲ್ಲಿ ಇಂತಹ ಧಾರ್ಮಿಕ ಒತ್ತಡದ ಘಟನೆಗಳು ನಡೆದರೆ ಆ ಸಂಸ್ಥೆಯ ಮೇಲೆ ಕಠಿಣ ಕ್ರಮವಾಗಬೇಕು. ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ನಾವು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ. ಆದರೆ ಇದರ ಅನುಷ್ಠಾನದಲ್ಲಿ ಯಾವುದೇ ರಾಜಿ ಇರಬಾರದು.

ಸಾರ್ವಜನಿಕ ಜಾಗೃತಿ ಅಗತ್ಯ. ಇಂತಹ ಘಟನೆಗಳ ಬಗ್ಗೆ ಮೌನವಾಗಿರುವುದು ಭವಿಷ್ಯ ದಲ್ಲಿ ನಮ್ಮ ಮಕ್ಕಳ ಭವಿಷ್ಯಕ್ಕೆ ನಾವೇ ಕೊಳ್ಳಿ ಇಟ್ಟಂತೆ. ಮೌನವು ಯಾವಾಗಲೂ ಸುಮ್ಮನಿರುವುದಲ್ಲ, ಅದು ಅಧರ್ಮಕ್ಕೆ ನೀಡುವ ಸಮ್ಮತಿ. ಧೃತರಾಷ್ಟ್ರನ ಮೌನ ಕುರು ಕ್ಷೇತ್ರಕ್ಕೆ ಕಾರಣವಾದರೆ, ಇಂದಿನ ರಾಜಕೀಯ ನಾಯಕರ ಮೌನವು ನಾಳಿನ ಸಮಾಜದ ಶಾಂತಿಯನ್ನು ಹಾಳುಮಾಡಲಿದೆ.

ಸಂಘಟಿತವಾಗಿ ನಡೆಯುವ ಈ ಧಾರ್ಮಿಕ ದೌರ್ಜನ್ಯಗಳ ವಿರುದ್ಧ ನಾವು ಇಂದು ಎದ್ದು ನಿಲ್ಲದಿದ್ದರೆ, ಇತಿಹಾಸವು ನಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ. ನಾವು ಸೌಹಾರ್ದತೆ ಯನ್ನು ಬಯಸುತ್ತೇವೆ, ಆದರೆ ಅದು ಶೋಷಣೆಯ ಬಲಿಪೀಠದ ಮೇಲೆ ಅಲ್ಲ. ಮಹಿಳೆಯರ ಗೌರವ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸುವುದು ನಮ್ಮ ಆದ್ಯತೆ. ನಾಸಿಕ್‌ನ ಪ್ರಕರಣವು ನಮಗೆಲ್ಲರಿಗೂ ಒಂದು ಎಚ್ಚರಿಕೆಯ ಗಂಟೆ. ಆ ಧ್ವನಿಯನ್ನು ನಾವು ಕೇಳಿಸಿಕೊಳ್ಳೋಣ ಮತ್ತು ಅಧರ್ಮದ ವಿರುದ್ಧ ಧ್ವನಿ ಎತ್ತೋಣ.