Vinayak V Bhat Column: ಸುಪ್ರಭಾತವು ನಿನಗೆ ಬೆಳಗಾಯಿತೇಳಯ್ಯ
“ಹೆಣ್ಣುಮಕ್ಕಳು ಸೂರ್ಯೋದಯವಾದ ಮೇಲೆ ಏಳುವುದು ದರಿದ್ರ, ನಾನು ಸಾಯದೇ ಇನ್ನೂ ಇರು ವುದೇ ನಿನ್ನನ್ನು ಎಬ್ಬಿಸಲು. ನಾಳೆ ಮದುವೆಯಾಗಿ ಗಂಡನ ಮನೆಗೆ ಹೋದ ಮೇಲೆ ನಿನ್ನ ಅತ್ತೆ ನಿನ್ನನ್ನು ಎಬ್ಬಿಸುವುದಿಲ್ಲ, ಬದಲಿಗೆ ತವರಿನಲ್ಲಿ ಈಕೆಗೆ ಯಾವ ಸಂಸ್ಕಾರ ಕೊಟ್ಟಿದ್ದಾರೆ ಎಂಬ ಮಾತು ನಮ್ಮ ವರೆಗೂ ಬರುತ್ತದೆ. ಕತ್ತೆಗಾದಷ್ಟು ವಯಸ್ಸಾಯ್ತು, ಬೇಗ ಎದ್ದು ಅಮ್ಮನಿಗೇನಾದರೂ ಸಹಾಯ ಮಾಡೋಣ ಎನ್ನುವುದಿಲ್ಲ" ಹೀಗೆ ಅಮ್ಮನ ಸುಪ್ರಭಾತದ ಸುಂಟರಗಾಳಿ.
-
ವಿದ್ಯಮಾನ
ಸುಪ್ರಭಾತದ ಪರಿಕಲ್ಪನೆ ಪ್ರಾರಂಭವಾದದ್ದು ರಾಮಾಯಣದ ಬಾಲಕಾಂಡದ “ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ" ಶ್ಲೋಕದಿಂದಲೇ ಇರಬಹುದು ಅನಿಸುತ್ತದೆ. 14ನೇ ಶತಮಾನದಲ್ಲಿ ರಚಿತವಾದ ಪ್ರಸಿದ್ಧ ಶ್ರೀವೆಂಕಟೇಶ್ವರ ಸುಪ್ರಭಾತವು ಪ್ರಾರಂಭವಾಗು ವುದೂ ಇದೇ ಶ್ಲೋಕದಿಂದಲೇ.
ಬೆಳಗಾಯ್ತು ಏಳಪ್ಪಾ ಎನ್ನುವುದು ಸಾಮಾನ್ಯವಾಗಿ ನಾವು ಗಂಡು ಮಕ್ಕಳು ಮನೆಯಲ್ಲಿ ನಿತ್ಯ ಕೇಳುವ ಸುಪ್ರಭಾತ. “ಎಂಟು ಗಂಟೆಯಾಯಿತು, ನೀನು ಮಾತ್ರ ಇನ್ನೂ ಎದ್ದಿಲ್ಲ, ದಿನದಿಂದ ದಿನಕ್ಕೆ ದುಪ್ಪಾಳ ಆಗ್ತಾ ಇದ್ದೀಯೆ. ಬೆಳಗ್ಗೆ ಸರಿಯಾದ ಸಮಯಕ್ಕೆ ಏಳಲೂ ಆಗದಿದ್ದ ಮೇಲೆ ನೀನು ಜೀವನದಲ್ಲಿ ಉದ್ಧಾರವಾದ ಹಾಗೆಯೇ!
ರಾತ್ರಿ ಎಷ್ತೊತ್ತಾದರೂ ಮಲಗುವುದಿಲ್ಲ, ದಿನಾಲೂ ನೂರು ಸುಪ್ರಭಾತವಾಗದ ಹೊರತು ಏಳುವು ದಿಲ್ಲ, ನನಗೆ ನಿನ್ನನ್ನು ಎಬ್ಬಿಸುವುದನ್ನು ಬಿಟ್ಟು ಬೇರೆ ಕೆಲಸಗಳೂ ಇವೆ. ಬೇಕಾದ್ರೆ ಎದ್ಕೊ, ಬ್ಯಾಡ್ದೇ ಇದ್ರೆ ಇಲ್ಲ" ಹೀಗೆ ಮುಂದುವರಿಯುತ್ತದೆ. ಅಮ್ಮಂದಿರು ಹೆಣ್ಣುಮಕ್ಕಳಿಗೆ ಸುಪ್ರಭಾತ ಹೇಳುವ ವಿಧಾನದಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ ಭಾವ ಮಾತ್ರ ಅದೇ.
“ಹೆಣ್ಣುಮಕ್ಕಳು ಸೂರ್ಯೋದಯವಾದ ಮೇಲೆ ಏಳುವುದು ದರಿದ್ರ, ನಾನು ಸಾಯದೇ ಇನ್ನೂ ಇರುವುದೇ ನಿನ್ನನ್ನು ಎಬ್ಬಿಸಲು. ನಾಳೆ ಮದುವೆಯಾಗಿ ಗಂಡನ ಮನೆಗೆ ಹೋದ ಮೇಲೆ ನಿನ್ನ ಅತ್ತೆ ನಿನ್ನನ್ನು ಎಬ್ಬಿಸುವುದಿಲ್ಲ, ಬದಲಿಗೆ ತವರಿನಲ್ಲಿ ಈಕೆಗೆ ಯಾವ ಸಂಸ್ಕಾರ ಕೊಟ್ಟಿದ್ದಾರೆ ಎಂಬ ಮಾತು ನಮ್ಮವರೆಗೂ ಬರುತ್ತದೆ. ಕತ್ತೆಗಾದಷ್ಟು ವಯಸ್ಸಾಯ್ತು, ಬೇಗ ಎದ್ದು ಅಮ್ಮನಿಗೇನಾದರೂ ಸಹಾಯ ಮಾಡೋಣ ಎನ್ನುವುದಿಲ್ಲ" ಹೀಗೆ ಅಮ್ಮನ ಸುಪ್ರಭಾತದ ಸುಂಟರಗಾಳಿ. ಮಗಳಿಗೆ ಬಯ್ಯುವುದನ್ನು ಕೇಳಿಸಿಕೊಳ್ಳುತ್ತಾ ಹಾಸಿಗೆಯ ಮೇಲೆಯೇ ಎಂಜಾಯ್ ಮಾಡುತ್ತ ಮಲಗಿರುವ ಅಪ್ಪನ ಕಡೆಗೆ ತಿರುಗುವಲ್ಲಿಗೆ ಅಮ್ಮನ ಸುಪ್ರಭಾತ ಸರಣಿಗೆ ಮಂಗಳವಾಗುತ್ತದೆ.
ಇದು ತಾಯಂದಿರಿರುವ ಪ್ರತಿ ಮನೆಯ ಕಥೆ. ಬೆಳಗ್ಗೆ ಬೇಗ ಏಳುವುದು ಎಷ್ಟು ಹಿಂಸೆಯೋ ಅದಕ್ಕಿಂತ ನೂರುಪಟ್ಟು ಹಿಂಸೆ ಮಲಗಿದವರನ್ನು ಎಬ್ಬಿಸುವುದು ಎನ್ನುವುದು ತಾಯಂದಿರ ಅಂಬೋಣ.
ಇದನ್ನೂ ಓದಿ: Vinayaka V Bhat Column: ಸಂಗಮದ ಮಾಘಮೇಳದಲ್ಲೊಂದು ಪಲ್ಲಕ್ಕಿ ಪ್ರಹಸನ
ಮೂಲತಃ ಸುಪ್ರಭಾತ ಅಂದರೆ ನಾವು ಬೆಳಗ್ಗೆ ‘ಗುಡ್ ಮಾರ್ನಿಂಗ್’, ‘ಶುಭೋದಯ’ ಎಂದು ಹೇಳುತ್ತೇವಲ್ಲ ಹಾಗೆ. ದೇವರಿಗೆ ಗುಡ್ ಮಾರ್ನಿಂಗ್ ಹೇಳುವುದು ಅಂದರೆ ಸುಪ್ರಭಾತ ಹಾಡುವುದು. ಅಥವಾ ದೇವರನ್ನು ಹೊಗಳಿ, ಅವನ ಕೀರ್ತಿಗಳನ್ನು ಪಾಡುತ್ತಾ ಭಕ್ತರಕ್ಷಣೆಯ ಕರ್ತವ್ಯಗಳ ನೆನಪು ಮಾಡುತ್ತಾ ಸಕಾರಾತ್ಮಕ ಭಾವದಿಂದ ಅವನನ್ನು ಎಬ್ಬಿಸಿ ಖುಷಿಪಡಿಸುವ ವಿಧಾನವಾಗಿದೆ.
ನಮ್ಮ ದೇಶದಲ್ಲಿ ಅನೇಕ ದೇವಸ್ಥಾನಗಳಲ್ಲಿ ರಾತ್ರಿ ದೇವರಿಗೆ ಲಾಲಿ ಹಾಡಿ ಮಲಗಿಸುವ ಹಾಗೂ ಬೆಳಗ್ಗೆ ಸುಪ್ರಭಾತ ಹಾಡಿ ಎಬ್ಬಿಸುವ ಪರಿಪಾಠ ಇಂದಿಗೂ ಇದೆ. ಸುಪ್ರಭಾತವೂ ಒಂದು ಸೇವೆ ಎನ್ನುವುದು ಮೂಲಭಾವ. ಅದಲ್ಲದಿದ್ದರೆ, ಕಣ್ಣೇ ಮುಚ್ಚದ ದೇವರನ್ನು ಎಬ್ಬಿಸುವುದೆಂದರೇನು ಅಲ್ಲವೇ? ದೇವರನ್ನೂ ನಮ್ಮಂತೆ ಕಂಡು ಅವನನ್ನು ಸೇವಿಸುವುದು ಮೊದಲಿನಿಂದ ಬಂದ ರೂಢಿ.
ದೇವತಾ ಪ್ರತೀಕವನ್ನು ಎಬ್ಬಿಸುವುದು, ಅದಕ್ಕೆ ಸ್ನಾನ ಮಾಡಿಸುವುದು, ಅಲಂಕಾರ ಮಾಡುವುದು, ಆರತಿ ಎತ್ತುವುದು, ಛತ್ರ ಹಿಡಿಯುವುದು, ಚಾಮರ ಬೀಸುವುದು, ನೈವೇದ್ಯ ನೀಡುವುದು ಹಾಗೂ ತಾಂಬೂಲ ಸಮರ್ಪಣೆ ಇವೆಲ್ಲ ಪೂಜೆಯ ಅಥವಾ ಸೇವೆಯ ಭಾಗವಾಗಿ ನಡೆದುಕೊಂಡು ಬಂದ ಪದ್ಧತಿಯಾಗಿದೆ.
ನಮ್ಮಲ್ಲಿ ದೇವತಾ ಪೂಜೆಯ ವಿಷಯದಲ್ಲಿ ‘ಸೋಹಂ (ಸಃ ಅಹಂ) ಭಾವೇನ ಪೂಜಯೇತ್’ ಎನ್ನುವುದನ್ನೇ ಪ್ರಧಾನವಾಗಿ ಹೇಳುತ್ತಾರೆ. ಅವನೇ ನಾನು ಎನ್ನುವ ಭಾವನೆಯಿಂದ ಪೂಜೆ ಮಾಡು ಎನ್ನುವುದು ಆ ವಾಕ್ಯದ ಅರ್ಥ. ಆ ದೃಷ್ಟಿಯಿಂದ ಶಯನ-ಸುಪ್ರಭಾತ ಸೇವೆಗಳು ಹುಟ್ಟಿಕೊಂಡಿರ ಬಹುದೇನೊ!.
ಸೇವೆ ಎನ್ನುವಾಗ ಒಂದು ಸ್ವಾರಸ್ಯಕರ ಕಥೆ ನೆನಪಾಗುತ್ತಿದೆ, ಶ್ರೀರಾಮಚಂದ್ರನ ಪಟ್ಟಾಭಿಷೇಕ ಮಹೋತ್ಸವದಲ್ಲಿ ನನಗೆ ಯಾವ ಸೇವೆಯ ಅವಕಾಶವಿದೆ? ಎನ್ನುವುದು ಭರತ-ಶತ್ರುಘ್ನರಲ್ಲಿ ಆಂಜನೇಯನ ಪ್ರಶ್ನೆಯಾಗಿತ್ತು. ಅದಕ್ಕೆ, “ನೀನು ದೂರ ಪ್ರಯಾಣದಿಂದ ಬಹಳ ದಣಿದಿದ್ದೀ, ಹಾಗಾಗಿ ಏನೂ ಕೆಲಸಕಾರ್ಯ ಮಾಡುವುದು ಬೇಡ, ನಮ್ಮ ಆತಿಥ್ಯವನ್ನು ಸ್ವೀಕರಿಸಿದರೆ ಅಷ್ಟೇ ಸಾಕು" ಎನ್ನುವುದು ಭರತ-ಶತ್ರುಘ್ನರ ಉತ್ತರವಾಗಿತ್ತು.
ಸದಾ ಕ್ರಿಯಾಶೀಲನಾಗಿರುವ ಆಂಜನೇಯನಿಗೆ ಏನೂ ಸೇವೆ ಮಾಡದೇ ಹಾಗೇ ಊಟ ಮಾಡಿ ಹೋಗುವುದು ಏಕೋ ಮನಸ್ಸಿಗೆ ಸರಿಯೆನಿಸಲಿಲ್ಲ. ತಾನೇ ಒಂದು ಉಪಾಯ ಮಾಡಿ ಶ್ರೀರಾಮನ ಅಂತಃಪುರದ ಕೋಣೆಯಲ್ಲಿ ಪಲ್ಲಂಗದ ಮೇಲಿರುವ ಜಾಗವೊಂದರಲ್ಲಿ ಬಂದು ಕುಳಿತ, ಶ್ರೀರಾಮ ಸೀತೆಯೊಡಗೂಡಿ ವಿಶ್ರಾಂತಿಗಾಗಿ ಬಂದ, ಅದೂ ಇದು ಮಾತುಕತೆಗಳು ಅವರೀರ್ವರಲ್ಲಿ ನಡೆಯು ತ್ತಿರುವಾಗ ಶ್ರೀರಾಮನಿಗೆ ನಿದ್ರೆ ಬರುವಂತಾಗಿ ಆಕಳಿಸಲನುವಾಗಿ ಇನ್ನೂ ಬಾಯಿ ತೆರೆಯುವುದರ ಲ್ಲಿದ್ದಾಗ ಮೇಲೆ ಕುಳಿತಿದ್ದ ಆಂಜನೇಯ ಚಿಟಿಕೆ ಹೊಡೆಯಲು ಪ್ರಾರಂಭಿಸಿದ.
ಶಬ್ದ ಎಲ್ಲಿಂದ ಬರುತ್ತಿದೆ ಎಂದು ಶ್ರೀರಾಮನು ಮೇಲೆ ನೋಡಿದರೆ, ಆಂಜನೇಯನು ಪಟ್ಟಗೆ ಕುಳಿತು ಚಿಟಿಕೆ ಹೊಡೆಯುತ್ತಿದ್ದಾನೆ. ಸಾಮಾನ್ಯವಾಗಿ ಯಾರಾದರೂ ಆಕಳಿಸುವಾಗ ಅವರೇ ತಮ್ಮ ಹೆಬ್ಬೆರಳು ಹಾಗೂ ಮಧ್ಯದ ಬೆರಳನ್ನು ಬಾಯಿಯ ಮುಂದೆ ತಂದು ಚಿಟಿಕೆ ಹೊಡೆದು ಶಬ್ದ ಮಾಡುವುದು ವಾಡಿಕೆ.
ಆದರೆ ಇಲ್ಲಿ ಆಕಳಿಸುತ್ತಿರುವವ ಶ್ರೀರಾಮ, ಚಿಟಿಕೆ ಹೊಡೆಯುತ್ತಿರುವವ ಮಾತ್ರ ಆಂಜನೇಯ. ಶ್ರೀರಾಮನು ಅಶ್ಚರ್ಯದಿಂದ, “ಏನಪ್ಪಾ ನೀನು ಇಲ್ಲಿ ಚಿಟಿಕೆ ಹೊಡೆಯುತ್ತಾ ಕುಳಿತಿದ್ದೀಯಾ?" ಎಂದು ಕೇಳಿದಾಗ, “ಮಾಡಲು ಯಾವುದೇ ಸೇವೆ ಉಳಿದಿಲ್ಲ ಎಂದು ನಿನ್ನ ತಮ್ಮಂದಿರು ಹೇಳಿದರು, ಹಾಗಾಗಿ ನೀನು ಆಕಳಿಸುವಾಗ ಚಿಟಿಕೆ ಹೊಡೆಯುವ ಕೆಲಸವನ್ನು ನಾನೇ ಸೃಷ್ಟಿಸಿಕೊಂಡೆ" ಎಂದು ಆಂಜನೇಯ ಹೇಳಿದ್ದನಂತೆ. ಇದು ಕಪೋಲ ಕಲ್ಪಿತವಾದ ಕಥೆಯಾದರೂ ಸ್ವಾರಸ್ಯಕರವೂ ಸೃಜನಾ ತ್ಮಕವೂ ಆದ ಸೇವೆಯ ವಿಷಯ ಇದಾದ್ದರಿಂದ ಈ ‘ಚಿಟಿಕಾ’ ಪ್ರಕರಣ ಇಲ್ಲಿ ಪ್ರಸ್ತುತವೆನಿಸಿತು.
ಗಾನವಿಶಾರದೆ ಎಂ.ಎಸ್. ಸುಬ್ಬುಲಕ್ಷ್ಮಿಯರ ಕುರಿತು ಕೆಲವು ವಾರಗಳ ಹಿಂದೆ ಬರೆಯುವಾಗ ಅವರು ಹಾಡಿ ಜನಪ್ರಿಯಗೊಳಿಸಿದ ಅನ್ನಮಾಚಾರ್ಯರ ಶ್ರೀ ವೆಂಕಟೇಶ್ವರ ಸುಪ್ರಭಾತದ ಬಗ್ಗೆಯೂ ಸ್ವಲ್ಪ ಹೇಳಿದ್ದೆ. ನಮ್ಮ ನೆಬ್ಬೂರು ನಾರಾಯಣ ಭಾಗವತರು ಯಕ್ಷಗಾನ ಶೈಲಿಯಲ್ಲಿ ಹಾಡಿ ಜನಪ್ರಿಯಗೊಳಿಸಿದ ಸುಂದರವಾದ ಸುಪ್ರಭಾತದ ಹಾಡು ‘ರಂಗನಾಯಕ ರಾಜೀವ ಲೋಚನ ರಮಣನೆ ಬೆಳಗಾಯಿತೇಳೆನ್ನುತಾ ಅಂಗನೆ ಲಕುಮಿ ತಾ ಪತಿಯೆನೆಬ್ಬಿಸಿದಳು ಶೃಂಗಾರದ ನಿದ್ರೆ ಸಾಕೆನ್ನುತ’ ಎನ್ನುವ ಪುರಂದರ ದಾಸರ ಸುಪ್ರಭಾತವನ್ನು ಕೇಳುವಾಗ ಈ ಸುಪ್ರಭಾತ ಸ್ತುತಿ ಯ ಬಗ್ಗೆ ಹಾಗೂ ಕನ್ನಡದಲ್ಲಿನ ಸುಪ್ರಭಾತ ಸಾಹಿತ್ಯದ ಬಗ್ಗೆ ಸ್ವಲ್ಪ ಪರಾಂಬರಿಸುವ ಮನಸ್ಸಾಯಿತು.
ಶೃಂಗಾರದ ನಿದ್ರೆ ಸಾಕು ಎಂದು ಶ್ರೀಲಕ್ಷ್ಮಿಯು ತನ್ನ ಪತಿಯನ್ನು ಎಬ್ಬಿಸುವ ಪರಿಯನ್ನು ಈ ಸುಪ್ರಭಾತದ ಹಾಡು ವಿವರಿಸುತ್ತದೆ, “ಪಕ್ಷಿ ಜಾತಿಗಳೆಲ್ಲ ಚಿಲಿಪಿಲಿಗುಟ್ಟುತ್ತ ಸೂಕ್ಷ್ಮದಲಿ ನಿನ್ನನು ಸ್ಮರಿಸುವವೊ ಕೃಷ್ಣ" ಎಂದು ಸ್ವಾಭಾವಿಕವಾಗಿ ಉದಯಕಾಲದಲ್ಲಿ ಚಿಲಿಪಿಲಿಗುಟ್ಟುವ ಹಕ್ಕಿಗಳ ನಿನಾದವು ನಿನ್ನ ಎಚ್ಚರವನ್ನ ಬಯಸಿಯೇ ಆಗಿವೆ ಎನ್ನುತ್ತಾರೆ ದಾಸರು.
“ಪದುಮನಾಭನೆ ನಿನ್ನ ನಾಮಾಮೃತವನ್ನು ಪದುಮಾಕ್ಷಿಯರು ತಮ್ಮ ಮನೆಯೊಳಗೆ ಉದಯ ದೊಳೆದ್ದು ಸವಿದಾಡುತ್ತ ಪಾಡುತ್ತ ದಧಿಯ ಕಡೆವರೇಳು ಮಧುಸೂದನನೆ ಕೃಷ್ಣ" ಹಾಗೂ “ಅರುಣನು ಬಂದು ಉದಯಾಚಲದಲಿ ನಿಂದು ಕಿರಣ ತೋರುವನು ಭಾಸ್ಕರನು ಶ್ರೀಹರಿಯೆ" ಎನ್ನುವ ಸಾಲುಗಳು, ‘ಮಹಿಳೆಯರು ಮನೆಗಳಲ್ಲಿ ನಿನ್ನ ನಾಮವನ್ನು ಹಾಡುತ್ತಾ ಮೊಸರು ಕಡೆಯಲು ಪ್ರಾರಂಭಿಸಿಯಾಯಿತು, ಸೂರ್ಯನು ಬಂದು ಕಿರಣ ಬೀರುತ್ತಿದ್ದಾನೆ, ಹೊತ್ತಾಗಿಬಿಟ್ಟಿದೆ ಏಳು ಶ್ರೀಕೃಷ್ಣಾ’ ಎನ್ನುವ ಭಾವ ಈ ಸಾಲಿನಲ್ಲಿ ಕಾಣುತ್ತದೆ.
ದಾಸರ “ಏಳಯ್ಯಾ ಬೆಳಗಾಯಿತು ಏಳು ಶ್ರೀಗಿರಿವಾಸ ಶ್ರೀವೆಂಕಟೇಶ" ಎನ್ನುವ ಉದಯಕಾಲದ ಇನ್ನೊಂದು ಹಾಡೂ ಪ್ರಖ್ಯಾತವಿದೆ. ಈ ಎಲ್ಲ ಉದಯಕಾಲದ ಸುಪ್ರಭಾತಕ್ಕೆ ಅದರದ್ದೇ ಅದ ಲಯ-ಲಾಲಿತ್ಯವಿದೆ. ಉದಾಹರಣೆಗೆ, “ಅಂಗನಾಮಣಿಯರು ಅಂಗಳದಲಿ ನಿಂತು ರಂಗವಲ್ಲಿಯ ನಿಕ್ಕಿ ಮಂಗಳಾತ್ಮಕ ನಿನ್ನ ನಾಮ ಪಾಡುವರೊ, ಏಳಯ್ಯಾ ಗೋಪಾಲ ಏಳು ಸಜ್ಜನ ಪಾಲ ಏಳಯ್ಯ ಬೆಳಗಾಯಿತು ಏಳು ಶ್ರೀಹರಿಯೇ".
ಇನ್ನೂ ಒಂದು ದಾಸರ ಸುಪ್ರಭಾತ ರಚನೆಯನ್ನು ನೋಡುವುದಾದರೆ, “ದುರಿತ ಕಲಿ ಕರ್ಮವನು ತ್ವರಿತದಲಿ ಕೆಡಿಸುವನು ದುರಿತಾರಿ ಮೇಲುಗಿರಿ ಶಿಖರದಲಿ ನಿಂತಿಹನು, ಪುರಂದರ ವಿಠಲರಾಯ ನೀ ಬೆಳಗಾಯಿತೇಳಯ್ಯ ಪರಿಪರಿಯ ಕೆಲಸಗಳನು ಮಾಡಲುದ್ಯೋಗಿಸಿ ಮರೆತು ನಿದ್ರೆಯ ಗೈವರೆ".
ನಿನಗೆ ಮಾಡಲಿಕ್ಕೆ ಅನೇಕ ಕೆಲಸಗಳಿರುವಾಗ ಅವನ್ನೆಲ್ಲ ಮರೆತು ಯಾರಾದರೂ ಹೀಗೆ ನಿದ್ರೆ ಮಾಡುವುದು ಸರಿಯೇ? ಎನ್ನುತ್ತಾ ಭಗವಂತನಲ್ಲಿಯೇ ಕರ್ತವ್ಯಪ್ರಜ್ಞೆ ಮೂಡಿಸುತ್ತಾರೆ ದಾಸರು. ಹೀಗೆ ಕನ್ನಡದಲ್ಲಿ ಸುಪ್ರಭಾತ ಸಾಹಿತ್ಯವನ್ನು ದಾಸ ಸಾಹಿತ್ಯಗಳಲ್ಲಿ ನಾವು ನೋಡಬಹುದಾಗಿದೆ.
ರಾಜಾ ದಶರಥನನ್ನು ಮನವೊಲಿಸಿ ಬಾಲಕ ಶ್ರೀರಾಮಚಂದ್ರನನ್ನು ಯಜ್ಞ ರಕ್ಷಣೆಗಾಗಿ ಬ್ರಹ್ಮರ್ಷಿ ವಿಶ್ವಾಮಿತ್ರರು ತಮ್ಮ ಜತೆಗೆ ಕರೆದುಕೊಂಡು ಹೋಗುತ್ತಾರೆ, ಅರಣ್ಯಮಾರ್ಗವಾಗಿ ಸಾಗುವಾಗ ರಾತ್ರಿ ಅಎ ಮಲಗಬೇಕಲ್ಲ. ಹಾಗೆ ಹುಲ್ಲು ಹಾಸಿಗೆಯಮೇಲೆ ರಾಮಚಂದ್ರ ಮಲಗಿದ್ದ. ಬೆಳಗಾಗುತ್ತಲಿತ್ತು,
ಪ್ರಯಾಣಾಯಾಸದಿಂದ ಶ್ರೀರಾಮಚಂದ್ರ ಇನ್ನೂ ಮಲಗೇ ಇದ್ದ. ಮಹರ್ಷಿ ವಿಶ್ವಾಮಿತ್ರರ ಚಿತ್ತ ಶ್ರೀರಾಮನತ್ತ ಹರಿಯಿತು. ಅವನ ಸುಂದರವಾದ ಶರೀರವನ್ನು ಅತ್ಯಂತ ಹತ್ತಿರದಿಂದ ನೋಡಿ ವಿಶ್ವಾಮಿತ್ರರಿಗೆ ಒಂದುಕಡೆ ಆನಂದವಾದರೆ, ಇನ್ನೊಂದು ಕಡೆ ರಾಜಭವನದಲ್ಲಿ ಸುಪ್ಪತ್ತಿಗೆಯ ಮೇಲೆ ಮಲಗುತ್ತಿದ್ದ ರಾಜಕುವರನನ್ನು ನೆಲದ ಮೇಲೆ ಮಲಗಿಸಿದಂತಾಯ್ತ ಎನ್ನುವ ಅನುಕಂಪ ಪ್ರeಯೂ ಉಂಟಾಯಿತು.
ಅಂತೂ, ರಾಜಕುಮಾರರಿಗೆ ಸಮುಚಿತವಲ್ಲದ ಹುಲ್ಲು ಸೊಪ್ಪುಗಳ ಹಾಸಿನ ಮೇಲೆ ಪವಡಿಸಿರುವ ಶ್ರೀರಾಮನನ್ನು ಅವರು ಸ್ತುತಿ ಮಾಡಿ ಎಬ್ಬಿಸುವ ಪ್ರಯತ್ನ ಮಾಡುತ್ತಾರೆ- “ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ| ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ||"- ಕೌಸಲ್ಯೆಯ ಸುಪತ್ರನಾದ ರಾಮನೇ, ಎಲೈ ಪುರುಷ ಸಿಂಹನೇ ಪೂರ್ವದಲ್ಲಿ ಸಂಧ್ಯೆ ಪ್ರವರ್ತಿಸುತ್ತಿದೆ, ನಿತ್ಯಾಹ್ನಿಕಗಳನ್ನು ಪೂರೈಸುವ ಸಮಯ ಬಂದಿದೆ ಎದ್ದೇಳಯ್ಯಾ ಎಂದು ತಾಯಿ ಕೌಸಲ್ಯೆಯನ್ನು ಮೊದಲ್ಗೊಂಡು ಶ್ರೀರಾಮನಿಗೆ ಸುಪ್ರಭಾತವನ್ನು ಹಾಡುತ್ತಾರೆ.
ಅವರು ತಾಯಿ ಕೌಸಲ್ಯೆಯನ್ನೇ ಮೊದಲ್ಗೊಂಡು ಶ್ರೀರಾಮನನ್ನು ಸಂಬೋಧಿಸಿದ್ದರ ಹಿಂದಿನ ಮನೋವಿಜ್ಞಾನದ ಮರ್ಮವೇನೋ ತಿಳಿಯದು. ಆದರೆ, ಕರ್ತವ್ಯಪೂರ್ತಿಗಾಗಿ ಮಹರ್ಷಿ ವಿಶ್ವಾ ಮಿತ್ರರಿಂದ ಅಂದು ಎಚ್ಚರಗೊಳಿಸಲ್ಪಟ್ಟ ಶ್ರೀರಾಮ ಮತ್ತೆ ಸರಿಯಾಗಿ ವಿಶ್ರಾಂತಿ ಮಾಡಿದ್ದು, ದುಷ್ಟ ಶಿಕ್ಷಣ ಹಾಗೂ ಶಿಷ್ಟ ರಕ್ಷಣದ ಕಾರ್ಯಗಳನ್ನು ಪೂರೈಸಿ ಅಯೋಧ್ಯೆಗೆ ಹಿಂತಿರುಗಿದ ಬಳಿಕವೇ ಇರಬೇಕು. ವಿಶ್ವಾಮಿತ್ರರ ಸುಪ್ರಭಾತದ ಪ್ರಭಾವ ಅಂಥzಗಿತ್ತೇನೊ!
ಪ್ರಾಯಶಃ ಸುಪ್ರಭಾತದ ಪರಿಕಲ್ಪನೆ ಪ್ರಾರಂಭವಾದದ್ದು ರಾಮಾಯಣದ ಬಾಲಕಾಂಡದ ಈ ಶ್ಲೋಕದಿಂದಲೇ ಇರಬಹುದು ಅನಿಸುತ್ತದೆ. ಹದಿನಾಲ್ಕನೇ ಶತಮಾನದಲ್ಲಿ ರಚಿತವಾದ ಪ್ರಸಿದ್ಧ ಶ್ರೀವೆಂಕಟೇಶ್ವರ ಸುಪ್ರಭಾತವು ಪ್ರಾರಂಭವಾಗುವುದೂ ಇದೇ “ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ" ಎನ್ನುವ ರಾಮಾಯಣದ ಶ್ಲೋಕದಿಂದಲೇ ಆಗಿದೆ.
ಇಂದಿಗೂ ಅನೇಕರಿಗೆ ಇದು ರಾಮಾಯಣದ ಬಾಲಕಾಂಡದ ಶ್ಲೋಕವೆನ್ನುವುದೇ ತಿಳಿದಿಲ್ಲ, ಶ್ರೀವೆಂಕಟೇಶ್ವರ ಸುಪ್ರಭಾತದ ಭಾಗವೆಂದೇ ಭಾವಿಸುತ್ತಾರೆ. ಶ್ರೀವೆಂಕಟೇಶ್ವರ ಸುಪ್ರಭಾತ ಸಾಹಿತ್ಯ ವನ್ನು ನಾಲ್ಕು ಭಾಗದಲ್ಲಿ ವಿಂಗಡಿಸುತ್ತಾರೆ.
“ಶೇಷಾದ್ರಿ ಶೇಖರವಿಭೋ ತವ ಸುಪ್ರಭಾತಂ" ಅಥವಾ “ಶ್ರೀವೆಂಕಟಾಚಲಪತೇ ತವ ಸುಪ್ರಭಾತಂ" ಎನ್ನುವ ಸುಪ್ರಭಾತ ಸ್ತೋತ್ರಗಳು ಮೊದಲ ಭಾಗವಾದರೆ, ಎರಡನೆಯದಾಗಿ “ವಿಜಯೀ ಭವ ವೇಂಕಟ ಶೈಲಪತೇ" ಎನ್ನುವ ಶ್ರೀವೆಂಕಟೇಶ್ವರ ಸ್ತುತಿಯಿದೆ, ಮೂರನೆಯದಾಗಿ “ವೆಂಕಟೇಶ ಚರಣಂ ಶರಣಂ ಪ್ರಪದ್ಯೇ" ಎನ್ನುವ ಪ್ರಪತ್ತಿ ಅಥವಾ ಶರಣಾಗತಿಯ ಪರವಾದ ಶ್ಲೋಕಗಳಿವೆ ಹಾಗೂ ಕೊನೆಯಲ್ಲಿ “ಶ್ರೀ ವೆಂಕಟ ನಿವಾಸಾಯ ಶ್ರೀನಿವಾಸಾಯ ಮಂಗಳಮ" ಎನ್ನುವ ಮಂಗಳಾ ಚರಣದ ಶ್ಲೋಕಗಳು ಬರುತ್ತವೆ (29 ಸುಪ್ರಭಾತ ಶ್ಲೋಕಗಳು, 11 ಸ್ತುತಿಗಳು, 16 ಪ್ರಪತ್ತಿ ಶ್ಲೋಕಗಳು ಮತ್ತು 14 ಮಂಗಳಾಶಾಸನ ಶ್ಲೋಕಗಳು ಒಟ್ಟೂ 70 ಶ್ಲೋಕಗಳು) ವಾಲ್ಮೀಕಿ ಮಹರ್ಷಿ ಗಳು ಮಹರ್ಷಿ ವಿಶ್ವಾಮಿತ್ರರ ಬಾಯಲ್ಲಿ ಸ್ವಾಭಾವಿಕವಾಗಿ ಹೊರಹೊಮ್ಮಿಸಿದ್ದ ‘ಕೌಸಲ್ಯಾ ಸುಪ್ರಜಾ ರಾಮ’ ಎನ್ನುವ ಶ್ರೀರಾಮ ಸುಪ್ರಭಾತವನ್ನು ಬಿಟ್ಟರೆ, 14ನೇ ಶತಮಾನದಲ್ಲಿ ಅಣ್ಣಾ ಚಾರ್ಯರಿಂದ ರಚಿತವಾದ ಶ್ರೀವೆಂಕಟೇಶ್ವರ ಸುಪ್ರಭಾತ ಕೃತಿಯನ್ನು ಅತ್ಯಂತ ಪ್ರಾಚೀನ ಸುಪ್ರಭಾತ ಸಾಹಿತ್ಯ ವೆಂದು ಅಂಗೀಕರಿಸಲಾಗಿದೆ.
ಈ ಸಂಸ್ಕೃತ ಸಾಹಿತ್ಯಕ್ಕೆ ಕನ್ನಡದಲ್ಲೂ ಸೇರಿ ಅನೇಕ ಭಾಷೆಗಳಲ್ಲಿ ಟೀಕೆಗಳೂ ಇವೆ ಎಂದರೆ ನಿಮಗೆ ಅಚ್ಚರಿಯಾಗಬಹುದು (ಟೀಕೆಗಳೆಂದರೆ ವ್ಯಾಖ್ಯಾನಗಳು ಎಂದರ್ಥ). ಈ ಸ್ತೋತ್ರಗಳ ಭಾಷೆ ಸಂಸ್ಕೃತವೇ ಆದರೂ, ಅತ್ಯಂತ ವಿಶಿಷ್ಟವಾದ ಶಬ್ದಗಳ ಬಳಕೆ, ಬಳಕೆಯಾದ ಬೇರೆ ಬೇರೆ ಛಂದಸ್ಸು (ಪ್ರಮುಖವಾಗಿ ವಸಂತತಿಲಕ ಛಂದಸ್ಸನ್ನು ಬಳಸಿದ್ದರೂ ಅಲ್ಲಲ್ಲಿ ಅನುಷ್ಟುಪ್ ಛಂದಸ್ಸಿನ ಬಳಕೆಯೂ ಇದೆ) ಹಾಗೂ ಒಗಟಿನ ರೀತಿಯಲ್ಲಿರುವ ಅವುಗಳ ಜೋಡಣೆಯಿಂದಾಗಿ ಈ ವೆಂಕಟೇಶ ಸುಪ್ರಭಾತವು ಸ್ತೋತ್ರ ರಾಶಿಯಲ್ಲಿನ ಚೂಡಾಮಣಿಯಂತೆ ಇಂದಿಗೂ ಕಂಗೊಳಿಸುತ್ತಿದೆ.
ಅನಾದಿಯಿಂದ ತಿರುಪತಿಯಲ್ಲಿ ಬೆಳಗ್ಗೆ ಸುಪ್ರಭಾತ ಸೇವೆಯ ಸಮಯದಲ್ಲಿ ಈ 70 ಶ್ಲೋಕಗಳನ್ನು ಪಠಿಸಲಾಗುತ್ತಿತ್ತಂತೆ. ಭಾರತರತ್ನ ಎಂ.ಎಸ್.ಸುಬ್ಬುಲಕ್ಷ್ಮಿಯವರು ಸಹ, ತಿರುಪತಿಯಲ್ಲಿ ಪ್ರತಿನಿತ್ಯ ಸುಪ್ರಭಾತ ಹಾಡುತ್ತಿದ್ದ ಶ್ರೀ ಅನಂತಶಯನ ಅಯ್ಯಂಗಾರ್ ಅವರ ಅಭ್ಯಾಸ ಮಾಡಿ ನಂತರ 1963ರಲ್ಲಿ ಧ್ವನಿಮುದ್ರಿಸಿದ್ದರಂತೆ.
ಅಲ್ಲಿಂದ ತಿರುಪತಿಯಲ್ಲಿ ಪ್ರತಿನಿತ್ಯ ಸೂರ್ಯೋದಯಕ್ಕೆ ಮೊಳಗುತ್ತಿರುವ ಧ್ವನಿ ಸುಬ್ಬುಲಕ್ಷ್ಮಿ ಯವರದ್ದೇ ಆಗಿದೆ. ಕೇವಲ ತಿರುಪತಿಯಲ್ಲಷ್ಟೇ ಅಲ್ಲದೇ ಆಕಾಶವಾಣಿಯ ಉಪಕಾರದಿಂದ ಮನೆಮನೆಯಲ್ಲೂ ಅವರ ಸುಪ್ರಭಾತ ಧ್ವನಿ ಇಂದಿಗೂ ಧ್ವನಿಸುತ್ತಿವೆ, ಮೊಸರು ಕಡೆಯುವ ಧ್ವನಿಯೇ ಜೋಗುಳವಾಗಿ ನಿದ್ರಿಸುವ, ಬೆಳಗ್ಗೆ ಅದೇ ಸಪ್ಪಳದಿಂದ ಎಚ್ಚರಗೊಳ್ಳುವ ಶ್ರೀಕೃಷ್ಣನಿಗೂ ‘ವತ್ಸ ಜಾಗ್ರಹಿ ವಿಭಾತಮಾಗತಂ ಜೀವ ಕೃಷ್ಣ ಶರದಾಂ ಶತಂ ಶತಂ’ ಎಂದು ಸುಪ್ರಭಾತ ಹಾಡಿದ್ದಾನೆ ಸುಮಾರು 14ನೇ ಶತಮಾನದ ಲೀಲಾಶುಕ ಎನ್ನುವ ಕವಿ.
ಸುಪ್ರಭಾತಗಳ ಜತೆಗೆ ಬೆಳಗ್ಗೆ ಬೆಳಗ್ಗೆ ಎದ್ದ ಕೂಡಲೇ ಪಠಿಸುವ ಪ್ರಾತಃಸ್ಮರಣೆ ಶ್ಲೋಕಗಳ ದೊಡ್ಡ ಪಟ್ಟಿಯೇ ನಮ್ಮ ವೈದಿಕ ಸಾಹಿತ್ಯದಲ್ಲಿದೆ, ವೇದಸಾಹಿತ್ಯದಲ್ಲಿ ಪ್ರಾತಃಸೂಕ್ತ ಮುಂತಾದ ಮಂತ್ರ ಪುಂಜಗಳಿವೆ. ನಮ್ಮ ಭಾರತೀಯ ಸಂಸ್ಕೃತಿಯೇ ಹಾಗೆ, ಎಲ್ಲವೂ ಭಗವದರ್ಪಿತವಾಗಬೇಕು ಎನ್ನುವ ಮನೋಭಾವದ್ದು.
ಬೆಳಗ್ಗೆ ಎಬ್ಬಿಸಲೊಂದು ಹಾಡು, ಸಂಜೆ ಮಲಗಿಸಲೊಂದು ಲಾಲಿಹಾಡು, ಅಭ್ಯಂಜನಕ್ಕೊಂದು ಹಾಡು, ಮಜ್ಜಿಗೆ ಕಡೆಯುವಾಗಲೊಂದು ಹಾಡು, ರಾಗಿ ಬೀಸುವಾಗ ಹಾಡು, ಅಕ್ಕಿ ತೊಳೆಸು ವಾಗೊಂದು. ಇಷ್ಟೇ ಅಲ್ಲದೇ ಸೋಮವಾರಕ್ಕೆ, ಮಂಗಳವಾರಕ್ಕೆ ಎಂದು ವಾರದ ಪ್ರತಿ ದಿನಕ್ಕೆ ಒಂದೊಂದು ಹಾಡುಗಳೂ ಇವೆ. ಒಟ್ಟಿನಲ್ಲಿ, ಈ ಹಾಡುಗಳು ಹಾಡುವವರ ಹಾಗೂ ಕೇಳುವವರ ಮನಸ್ಸಿಗೂ ಮುದ ನೀಡಿ ಮನೆಯ ಪ್ರಶಾಂತ ವಾತಾವರಣಕ್ಕೆ ಕಳೆಕಟ್ಟುವುದರಲ್ಲಿ ಸಂದೇಹವಿಲ್ಲ.