Vivek Subbareddy Column: ನಾರಿ ಶಕ್ತಿ: ನವ ಭಾರತ ನಿರ್ಮಾಣಕ್ಕೆ ಸೇರಿಸಿಕೊಂಡ ಐತಿಹಾಸಿಕ ಶಾಸನ
ನಾರಿ ಶಕ್ತಿ ವಂದನ ಅಧಿನಿಯಮವು ಭಾರತದ ರಾಜಕೀಯ ಹಾಗೂ ಸಾಂವಿಧಾನಿಕ ವ್ಯವಸ್ಥೆಯ ಪುನರ್‌ನಿರ್ಮಾಣ ಕಾರ್ಯವಾಗಿದೆ. ಇದು ಕೇವಲ ಸಂವಿಧಾನದ ತಿದ್ದುಪಡಿಯಲ್ಲ ಇದೊಂದು ಐತಿಹಾಸಿಕ ಹೆಜ್ಜೆ. ಭಾರತ ಕಳೆದ 75 ವರ್ಷಗಳ ತನ್ನ ಅಸ್ತಿತ್ವದಲ್ಲಿ ತನ್ನ ದೇಶದ ಜನಸಂಖ್ಯೆಯ ಶೇ.50ರಷ್ಟು ಜನರ ರಾಜಕೀಯ ಆಶೋತ್ತರಗಳನ್ನು ನಿರ್ಲಕ್ಷಿಸಿದೆ, ಅವರ ಅವಕಾಶಗಳನ್ನು ಕಿತ್ತು ಕೊಂಡು ಅವಕಾಶವಂಚಿತರನ್ನಾಗಿ ಮಾಡಿದೆ ಎಂಬುದು ಆಶ್ಚರ್ಯದ ಸಂಗತಿಯಾದರೂ ಸತ್ಯ.
-
ಸ್ತ್ರೀಶಕ್ತಿ
ವಿವೇಕ್ ಸುಬ್ಬಾರೆಡ್ಡಿ
ಕಳೆದ 75 ವರ್ಷಗಳಲ್ಲಿ ಭಾರತದ ರಾಜಕೀಯವು ಮಹಿಳೆಯರಿಂದ ಸಾಧ್ಯವಿಲ್ಲದ ಹಣ ಬಲದ ಆಧಾರದಿಂದಲೇ ನಡೆಯುತ್ತಿತ್ತು. ಖ್ಯಾತನಾಮ ಕುಟುಂಬದ ಹಿನ್ನೆಲೆ ಇರುವ ಮಹಿಳೆ ಯರು ಮಾತ್ರವೇ ರಾಜಕೀಯ ಪ್ರವೇಶ ಮಾಡಬಹುದು ಎಂಬ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿತ್ತು. ಶ್ರೀ ನರೇಂದ್ರಮೋದಿಯವರ ಸರಕಾರ 2023ರಲ್ಲಿ ನಾರಿ ಶಕ್ತಿ ವಂದನಾ ಅಧಿನಿಯಮವನ್ನು ಪರಿಚಯಿಸಿತು.
ನಾರಿ ಶಕ್ತಿ ವಂದನ ಅಧಿನಿಯಮವು ಭಾರತದ ರಾಜಕೀಯ ಹಾಗೂ ಸಾಂವಿಧಾನಿಕ ವ್ಯವಸ್ಥೆಯ ಪುನರ್‌ನಿರ್ಮಾಣ ಕಾರ್ಯವಾಗಿದೆ. ಇದು ಕೇವಲ ಸಂವಿಧಾನದ ತಿದ್ದುಪಡಿಯಲ್ಲ ಇದೊಂದು ಐತಿಹಾಸಿಕ ಹೆಜ್ಜೆ. ಭಾರತ ಕಳೆದ 75 ವರ್ಷಗಳ ತನ್ನ ಅಸ್ತಿತ್ವದಲ್ಲಿ ತನ್ನ ದೇಶದ ಜನಸಂಖ್ಯೆಯ ಶೇ.50ರಷ್ಟು ಜನರ ರಾಜಕೀಯ ಆಶೋತ್ತರಗಳನ್ನು ನಿರ್ಲಕ್ಷಿಸಿದೆ, ಅವರ ಅವಕಾಶಗಳನ್ನು ಕಿತ್ತುಕೊಂಡು ಅವಕಾಶವಂಚಿತರನ್ನಾಗಿ ಮಾಡಿದೆ ಎಂಬುದು ಆಶ್ಚರ್ಯದ ಸಂಗತಿಯಾದರೂ ಸತ್ಯ.
ಭಾರತದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರು ತಮ್ಮ ರಾಜಕೀಯ ಅವಕಾಶಗಳನ್ನು ಪಡೆಯಲು ಇದುವರೆಗೂ ಸಾಧ್ಯವಾಗಿಲ್ಲ ಎಂಬುದು ವಿಪರ್ಯಾಸ. ಕಳೆದ 75 ವರ್ಷಗಳಲ್ಲಿ ಭಾರತದ ರಾಜಕೀಯವು ಮಹಿಳೆಯರಿಂದ ಸಾಧ್ಯವಿಲ್ಲದ ಹಣಬಲದ ಆಧಾರದಿಂದಲೇ ನಡೆಯುತ್ತಿತ್ತು ಎಂಬ ಮಾತು ಬಹುತೇಕ ಸತ್ಯವಿರಬಹುದು.
ಹೀಗಾಗಿಯೇ ಸಂಸತ್ತಿಗೆ ಕೇವಲ ಶೇ.5 ರಿಂದ 7ರಷ್ಟು ಮಹಿಳಾ ಸದಸ್ಯರು ಮಾತ್ರ ಆಯ್ಕೆ ಯಾಗುತ್ತಿದ್ದರು. ಅದರಲ್ಲೂ ಕನ್ಹಿಮೋಳಿ, ಡಿಂಪಲ್ ಯಾದವ್ ರೀತಿ ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದ ಮಹಿಳೆಯರೇ ಹೆಚ್ಚಿರುತ್ತಾರೆ. ಖ್ಯಾತನಾಮ ಕುಟುಂಬದ ಹಿನ್ನೆಲೆ ಇರುವ ಮಹಿಳೆಯರು ಮಾತ್ರವೇ ರಾಜಕೀಯ ಪ್ರವೇಶ ಮಾಡಬಹುದು ಎಂಬ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿತ್ತು.
ಇದನ್ನು ಮನಗಂಡ ಶ್ರೀ ನರೇಂದ್ರಮೋದಿಯವರ ಸರಕಾರ 2023ರಲ್ಲಿ ನಾರಿ ಶಕ್ತಿ ವಂದನಾ ಅಧಿ ನಿಯಮವನ್ನು ಪರಿಚಯಿಸಿತು. ಅದರ ಮೂಲಕ ಭಾರತದ ಸಂಸತ್ತಿನಲ್ಲಿ ಮತ್ತು ರಾಜ್ಯ ವಿಧಾನ ಸಭೆಗಳಲ್ಲಿ ಶೇ.33ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ಹಲವು ದಶಕಗಳಿಂದ ಈ ಪ್ರಯತ್ನ ನಡೆದಿದ್ದರೂ ಪುರುಷ ಪ್ರಧಾನ ಮನಸ್ಥಿತಿಗಳು ಆ ಪ್ರಯತ್ನವನ್ನು ಹತ್ತಿಕ್ಕುವಲ್ಲಿ ಸಫಲವಾಗಿದ್ದವು.
ಇದನ್ನೂ ಓದಿ: Surendra Pai Column: ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಪ್ರಥಮ ಭಾಷೆ ಕನ್ನಡ !
ಸ್ತ್ರೀ ಸಬಲೀಕರಣ-ರಚನಾತ್ಮಕ ಬದಲಾವಣೆ: ಈ ಕಾಯಿದೆಯು ಜನಕಲ್ಯಾಣದ ಯೋಜನೆ ಗಳಿಗಿಂತ ವಿಭಿನ್ನವಾಗಿದೆ. ಇದು ಚುನಾವಣೆಗಾಗಿ ಮಾಡಿದ ಯೋಜನಾ ತಂತ್ರವಲ್ಲ ಬದಲಾಗಿ ದೀರ್ಘಕಾಲದಲ್ಲಿ ದೇಶದ ಉದ್ದೇಶವನ್ನು ಈಡೇರಿಸಬಲ್ಲ ದೂರದೃಷ್ಟಿ ಯೋಜನೆ. ಚುನಾವಣೆಗಾಗಿ ನೀಡುವ ಉಚಿತ ಯೋಜನೆಗಳು, ಸಬ್ಸಿಡಿಗಳು, ಅಲ್ಪಾವಧಿಯಲ್ಲಿ ಜನಪ್ರಿಯವಾಗಬಹುದು. ಆದರೆ, ಈ ನಿರ್ಧಾರವು ಭವಿಷ್ಯದಲ್ಲಿ ಇಡೀ ರಾಷ್ಟ್ರದ ಮಹಿಳಾ ಸಮುದಾಯದ ಶಕ್ತಿ, ಬುದ್ಧಿವಂತಿಕೆ ಹಾಗೂ ಸಾಮರ್ಥ್ಯವನ್ನು ಸದ್ಬಳಕೆ ಮಾಡಿಕೊಂಡು ದೇಶ ಕಟ್ಟುವ ಕಾರ್ಯವಾಗಿದೆ.
ಇದು ರಾಜಕೀಯವನ್ನು ನೇರವಾಗಿ ಪ್ರಜಾತಂತ್ರದ ಹಾದಿಯಲ್ಲಿ ನಡೆಸುತ್ತದೆ. ಇದರಿಂದ ಭವಿಷ್ಯ ದಲ್ಲಿ ರಾಜಕೀಯ ಅಧಿಕಾರ ಕೇವಲ ಕೆಲವು ಕುಟುಂಬಗಳ ಮುಷ್ಠಿಯಲ್ಲಿರುವುದಿಲ್ಲ. ಈ ದೇಶದ ಸಾಮಾನ್ಯ ಮಹಿಳೆಯೂ ಇನ್ನುಮುಂದೆ ದೇಶದ ಅಭ್ಯುದಯದಲ್ಲಿ ಭಾಗವಹಿಸಬಹುದು, ದೇಶ ವನ್ನು ಮುನ್ನಡೆಸಬಹುದು, ರಾಷ್ಟ್ರದ ರಾಜಕಾರಣದಲ್ಲಿ ಬದಲಾವಣೆ ತರಬಹುದು.
ಸಮಾನತೆಯ ವಿರೋಧಾಭಾಸ: ಸ್ವಾತಂತ್ರ್ಯ ಭಾರತದ ರಾಜಕೀಯದಲ್ಲಿ ಮಹಿಳೆಯರ ಭಾಗ ವಹಿಸುವಿಕೆಯು ಶೇ.10ಕ್ಕಿಂತ ಕಡಿಮೆ ಇತ್ತು. ಜೂನಿಯರ್ ಮಾರ್ಟಿನ್ ಲೂಥರ್ ಕಿಂಗ್ ಅವರು ಹೇಳಿದಂತೆ ಸಮಾನತೆ ಎಂಬುದು ಸಂವಿಧಾನದ ಹಾಳೆಗಳಿಂದ ಕಾರ್ಯಗತ ರೂಪದ ಹಾಳೆಗೆ ವರ್ಗಾವಣೆಯಾಗಬೇಕಿದೆ. ಈ ಶಾಸನವು ಸಂವಿಧಾನದ ಆಶಯಗಳನ್ನು ವಾಸ್ತವದಲ್ಲಿ ಕಾರ್ಯ ರೂಪಕ್ಕೆ ತರುತ್ತದೆ.
ಮಹಿಳೆಯರು ಹಿಂದುಳಿದದ್ದೇಕೆ?
- ವ್ಯವಸ್ಥೆಯಲ್ಲಿನ ತಡೆಗೋಡೆಗಳು
- ಚುನಾವಣೆಗಳಲ್ಲಿ ಹಣಬಲಕ್ಕೆ ಅತಿಯಾದ ಮಹತ್ವ.
- ಸಮಾಜದ ಪುರುಷ ಪ್ರಧಾನ ಮನಸ್ಥಿತಿ.
- ಪಾರಂಪರಿಕ ಪಾತ್ರಗಳು ಮತ್ತು ಜವಾಬ್ದಾರಿಗಳು.
- ಸಾಂಸ್ಕೃತಿಕ ಹಾಗೂ ರಚನಾತ್ಮಕ ಕಾರಣಗಳು.
ಬೇರೆ ಎಲ್ಲ ಕ್ಷೇತ್ರಗಳಲ್ಲಿಯು ಮಹಿಳೆಯರು ಸಾಧನೆಯ ಹಾದಿಯಲ್ಲಿದ್ದರೂ ಮೇಲಿನ ಕಾರಣ ಗಳಿಂದಾಗಿ ಮಹಿಳೆಯರು ರಾಜಕೀಯದ ಕನಸು ಕಾಣದಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ.
ಯಾವ ಕ್ಷೇತ್ರಗಳಲ್ಲಿ ಪ್ರತಿಭೆ ಮಾನದಂಡವಾಗಿದೆಯೋ ಅಲ್ಲಿ ಮಹಿಳೆಯರ ಪಾತ್ರವನ್ನು ಗಮನಿಸಿ ದರೆ ಐಟಿ ಕ್ಷೇತ್ರದಲ್ಲಿ ಮಹಿಳೆಯರು ಗಣನೀಯ ಸಂಖ್ಯೆಯಲ್ಲಿದ್ದಾರೆ, ವಿಚಾರಣಾ ನ್ಯಾಯಾಲಯ ದಲ್ಲಿ ಶೇ.60ರಷ್ಟು ಮಹಿಳೆಯರು ಆಯ್ಕೆಯಾಗಿದ್ದಾರೆ.
ಗ್ರಾಮೀಣ ಭಾಗದಲ್ಲಿ ಮಹಿಳೆಯರೇ ಕುಟುಂಬದ ಆಧಾರಸ್ಥಂಬಗಳಾಗಿದ್ದು, ದುಡಿಮೆಯಲ್ಲೂ ಹೆಚ್ಚಿನ ಪಾತ್ರ ವಹಿಸುತ್ತಿzರೆ. ಹೀಗೆ ಎಲ್ಲಿ ಅವಕಾಶಗಳಿವೆಯೋ ಅಲ್ಲಿ ಮಹಿಳೆಯರು ಸಾಧಿಸಿ ತೋರಿಸಿದ್ದಾರೆ. ರಾಜಕೀಯ ಈ ಸಾಲಿನಲ್ಲಿ ಕೊನೆಯ ಸ್ಥಾನದಲ್ಲಿದೆ.
ಐತಿಹಾಸಿಕ ತಿದ್ದುಪಡಿ: ಸಂವಿಧಾನದ 128ನೇ ತಿದ್ದುಪಡಿಯು ಈ ಅಸಮಾನತೆಯನ್ನು ಸರಿಪಡಿ ಸುವ ಬಹುದೊಡ್ಡ ಹೆಜ್ಜೆಯಾಗಿದೆ. ಇದು ಮಹಿಳಾ ಮೀಸಲಾತಿಯನ್ನು ಕಡ್ಡಾಯಗೊಳಿಸುವ ಜತೆಗೆ ಪ್ರತೀ ಜನಗಣತಿಯೊಂದಿಗೆ ಮೀಸಲಾತಿಯನ್ನು ಪುನರ್‌ಪರಿಶೀಲಿಸುವ ಅವಕಾಶ ನೀಡುತ್ತದೆ. ಮತ್ತೊಂದು ವಿಷೇಶವೆಂದರೆ ಮುಂದಿನ ಜನಗಣತಿಗೆ ಕಾಯದೇ ಸರಕಾರ 2011ರ ಜನಗಣತಿಯ ಅಂಕಿಅಂಶಗಳ ಆಧಾರದ ಮೀಸಲಾತಿಯನ್ನು ಜಾರಿಗೊಳಿಸಲು ತೀರ್ಮಾನಿಸಿದೆ.
ಪ್ರಜಾಪ್ರಭುತ್ವದ ವಿಸ್ತರಣೆ:
- ಶಕ್ತಿ ಹಾಗೂ ಪ್ರಾತಿನಿಧ್ಯ: ಈ ನಿರ್ಧಾರವು ಸಂಸತ್ತಿನ ಪ್ರತಿನಿಧಿಗಳ ಸಂಖ್ಯೆಯನ್ನು 816ಕ್ಕೆ ಏರಿಸುತ್ತದೆ. ಅದರಲ್ಲಿ 273 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿರುತ್ತವೆ.
- ಮುಖ್ಯಾಂಶಗಳು: ಮಹಿಳಾ ಮೀಸಲಾತಿಯಡಿಯಲ್ಲಿ ಬರುವ ಸ್ಥಾನಗಳಲ್ಲಿ 1/3 ಸ್ಥಾನಗಳು ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಹಿಳೆಯರಿಗೆ ಮೀಸಲಾಗಿರುತ್ತದೆ.
ಇದು ಇತಿಹಾಸದಲ್ಲಿ ಮೂಲೆಗುಂಪಾದ ಸಮುದಾಯಗಳಿಗೆ ತಮ್ಮ ಹಕ್ಕುಗಳನ್ನು ನೀಡುವ ದೊಡ್ಡ ಹೆಜ್ಜೆಯಾಗಿದೆ. ತುಳಿತಕ್ಕೊಳಗಾದ ಸಮುದಾಯಗಳ 90 ಜನ ಮಹಿಳೆಯರನ್ನು ಸಂಸತ್ ಸದಸ್ಯ ರನ್ನಾಗಿ ಮಾಡುವುದು ಪ್ರಜಾಪ್ರಭುತ್ವದ ನಿಜವಾದ ಆಶಯಕ್ಕೆ ಪೂರಕವಾಗಿದೆ. ಇದು ಕೇವಲ ಪ್ರಾತಿನಿಧ್ಯದ ಪ್ರಶ್ನೆಯಾಗಿರದೆ ಮಹಿಳಾ ಸಬಲೀಕರಣದ ಸಾಕಾರವಾಗಿದೆ.
ಧ್ವನಿಯಿಲ್ಲದವರ ಧ್ವನಿ: ದಶಕಗಳಿಂದ ಸಂಸತ್ತಿನಲ್ಲಿ ಹಿಂದುಳಿದ ವರ್ಗಗಳ ಮಹಿಳೆಯರ ಧ್ವನಿಗೆ ಯಾವುದೇ ಸ್ಥಾನವಿಲ್ಲದಂತಿತ್ತು. ಈ ಕೊರತೆಯನ್ನು ಪ್ರಸ್ತುತ ಕಾಯಿದೆ ಸಮರ್ಥವಾಗಿ ತುಂಬಲಿದೆ. ಇನ್ನು ಮುಂದೆ ಮಹಿಳೆಯರು ಕೇವಲ ಧ್ವನಿಯಿಲ್ಲದ ಭಾಗೀದಾರರಂತಿರುವುದಿಲ್ಲ ಬದಲಾಗಿ ಪ್ರತೀ ನಿರ್ಧಾರಗಳಲ್ಲಿಯೂ ಅವರು ಭಾಗವಹಿಸುವ ಜತೆಗೆ ಕಾನೂನು ರಚನೆಯಲ್ಲಿ ಭಾಗಿಯಾಗುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಮಹಿಳೆಯರೂ ಜನನಾಯಕರಾಗುತ್ತಾರೆ.
ನಾರಿ ಶಕ್ತಿಯ ಸಂವರ್ಧನೆ:
ಭಾರತದ ಇತಿಹಾಸದಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮರಂತಹಾ ಹಲವು ಹೆಸರುಗಳು ಸುವರ್ಣಾಕ್ಷರದಲ್ಲಿ ಬರೆದಿಡುವ ಹೆಸರುಗಳಾಗಿವೆ. ಅವರ ಧೈರ್ಯ, ಸಾಹಸ, ಸಾಧನೆ ಅಪಾರವಾಗಿವೆ. ಈಗ ಕೊರತೆಯಾಗಿರುವುದು ಕೇವಲ ಅವಕಾಶ ಮಾತ್ರ. ಸ್ವಾಮಿ ವಿವೇಕಾನಂದರು ಹೇಳುವಂತೆ ಮಹಿಳೆಯರ ಸ್ಥಾನಮಾನ ಸುಧಾರಿಸದೇ ವಿಶ್ವದ ಅಭ್ಯುದಯ ಸಾಧ್ಯವೇ ಇಲ್ಲ. ಈ ಕಾಯಿದೆಯು ಮಹಿಳಾ ಸಬಲೀಕರಣವನ್ನು ಕೇವಲ ಸಾಂಕೇತಿಕವಲ್ಲದೇ ರಚನಾತ್ಮಕ ರೂಪದಲ್ಲಿ ಬರುವಂತೆ ಮಾಡುತ್ತದೆ.
ದಶಕಗಳ ಬದಲಾವಣೆ: ಈ ಕಾಯಿದೆಯ ಪರಿಣಾಮವನ್ನು ಕೆಲವು ವರ್ಷಗಳ ಅವಧಿಯಲ್ಲಿ ಲೆಕ್ಕ ಹಾಕಲು ಸಾಧ್ಯವಿಲ್ಲ. ಇದು ಭಾರತದ ಪ್ರಜಾಪ್ರಭುತ್ವವನ್ನು ದೀರ್ಘಕಾಲದಲ್ಲಿ ಅದರ ಮೂಲ ಆಶಯದಂತೆ ಅಭಿವೃದ್ಧಿ ಪಡಿಸುತ್ತದೆ. ಪ್ರಜಾತಂತ್ರದ ರಚನಾತ್ಮಕ ಬದಲಾವಣೆಯನ್ನು ಸುಸ್ಥಿರ ಗೊಳಿಸುತ್ತದೆ. ಇದು ದೇಶದ 70 ಕೋಟಿ ಮಹಿಳೆಯರನ್ನು ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ತೊಡಗಿಸಿ ಕೊಳ್ಳುವಂತೆ ಮಾಡುತ್ತದೆ. ಇದು ಹಿಂದಿನ ಯಾವ ಕಾಯಿದೆಯೂ ಮಾಡಿರದ ಮಹತ್ವದ ಬದಲಾವಣೆಯಾಗಿದೆ.
ನಾರಿಶಕ್ತಿ ವಂದನಾ ಅಧಿನಿಯಮವು ಕೇವಲ ಒಂದು ಕಾನೂನಾಗಿರದೇ ಒಂದು ಚಳವಳಿಯಾಗಿದೆ. ಇದು ಭಾರತದ ಮಹಿಳೆಯರನ್ನು ಭವಿಷ್ಯದಲ್ಲಿ ಕೇವಲ ಧ್ವನಿಯಿಲ್ಲದ ಭಾಗೀದಾರರಾಗಲು ಬಿಡದೇ ಅವರಿಗೆ ಪ್ರಜಾಪ್ರಭುತ್ವದ ನಿರ್ಧಾರಗಳ ಸಹಭಾಗಿತ್ವ, ನಾಯಕತ್ವ ಹಾಗೂ ರಚನಾತ್ಮಕ ಅಧಿಕಾರ ನೀಡುತ್ತದೆ. ವಿಶ್ವಗುರುವಾಗುವತ್ತ ಸಾಗುತ್ತಿರುವ ಭಾರತದ ಅಭ್ಯುದಯದಲ್ಲಿ ಮಹಿಳೆಯ ರ ಪಾತ್ರವೂ ಸಮಾನವಾಗಿರುತ್ತದೆ.
ಲೇಖಕರು: ಅಧ್ಯಕ್ಷರು, ಬೆಂಗಳೂರು ವಕೀಲರ ಸಂಘ