ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shashidhara Halady Column: ಕಾಡಿನಲ್ಲಿ ಬೆಳೆಯುವ ದ್ರಾಕ್ಷಿ ಹಣ್ಣುಗಳು !

ಕಾಡಿನ ಅಂಚಿನಲ್ಲಿ, ಖಾಸಗಿ ದರಕಾಸ್ತಿಗೆ ಹಾಕಿದ ಬೇಲಿಗೆ ಹೊಂದಿಕೊಂಡಂತೆ ಇದ್ದ ಆ ಮರ ತೀರ ಎತ್ತರವಾಗಿಲ್ಲ; ಕೈಗೆಟಕುವಷ್ಟು ಎತ್ತರದಲ್ಲೇ ರೆಂಬೆಕೊಂಬೆಗಳ ಟಿಸಿಲು. ಫೆಬ್ರವರಿ-ಮಾರ್ಚ್ ನಲ್ಲಿ ಅದರಲ್ಲಿ ದಂಡಿಯಾಗಿ ಬಣ್ಣ-ಬಣ್ಣದ ಚೇಂಪಿ ಹಣ್ಣುಗಳ ರಾಶಿ. ಸಂಜೆ ಹೈಸ್ಕೂಲಿನಿಂದ ವಾಪಸಾಗು ವಾಗ, ಆ ಮರಕ್ಕೆ ಒಂದು ಭೇಟಿ ನೀಡಿ, ಆರೆಂಟು ಚೇಂಪಿ ಹಣ್ಣುಗಳನ್ನು ಬಾಯಿಗೆ ಹಾಕಿಕೊಂಡು ನಡೆಯುತ್ತಾ ಮನೆಯತ್ತ ಸಾಗುವ ಕ್ರಮ.

ಕಾಡಿನಲ್ಲಿ ಬೆಳೆಯುವ ದ್ರಾಕ್ಷಿ ಹಣ್ಣುಗಳು !

-

ಶಶಾಂಕಣ

ಈಗ ಬೆಂಗಳೂರಿನಲ್ಲಿರುವ, ಮೂಲತಃ ನಮ್ಮ ಹಳ್ಳಿಯವರಾದ ಅವರು ಹತಾಶೆಯಿಂದ ಹೇಳು ತ್ತಿದ್ದರು: ‘ಹ್ವಾಯ್, ನಾವೆಲ್ಲಾ ಶಾಲೆಗೆ ಹೋಗುವಾಗ ಚೇಂಪಿ ಹಣ್ಣು ಅಂತ ಒಂದು ಹಣ್ಣನ್ನು ತಿಂತಿದ್ದೆವು; ಕಳೆದ ತಿಂಗಳು ಊರಿಗೆ ಹೋಗಿ ನೋಡಿದರೆ, ನಮ್ಮ ಹಕ್ಕಲಿನಲ್ಲಿದ್ದ ಆ ಮರವನ್ನೇ ಕಡಿದುಹಾಕಿದ್ದಾರೆ, ಅಲ್ಲೆಲ್ಲಾ ಬಾಳೆ ತೋಟ ಮಾಡಿದ್ದಾರೆ.

ಚೇಂಪಿ ಹಣ್ಣನ್ನು, ಅದೇ ರೀತಿ ಮುರಿನ ಹಣ್ಣು, ಬೆಳಮಾರು ಹಣ್ಣು ಇವೆಲ್ಲಾ ಹಣ್ಣುಗಳ ರುಚಿಯನ್ನು ಈಗಿನ ಮಕ್ಕಳು ನೋಡುವುದೇ ಬೇಡವೇ?’ ಇಂತಹ ಉದ್ಗಾರಗಳನ್ನು ನೀವೂ ಸಹ ಕೇಳಿಯೇ ಇರುತ್ತೀರಿ!

ನಮ್ಮ ಬಾಲ್ಯಕಾಲದಲ್ಲಿ ಕಂಡ, ಕೇಳಿದ ಅವೆಷ್ಟೋ ಸಂಗತಿಗಳು, ರುಚಿಗಳು, ಒಳ್ಳೊಳ್ಳೆಯ ವಿಚಾರ ಗಳು ಈಗ ಕಣ್ಮರೆಯಾಗಿವೆ, ಕಣ್ಮರೆಯಾಗುವ ಹಂತದಲ್ಲಿವೆ; ಇದಕ್ಕೆ ಕಾರಣಗಳನ್ನು ಹುಡುಕಿದರೆ ಸಿಗಬಹುದು ಸಾವಿರಾರು. ಸಮ್ಮರೈಸ್ ಮಾಡಿ, ಒಂದೇ ಮಾತಿನ ವಿಶ್ಲೇಷಣೆ ನೀಡುವುದಾದರೆ, ‘ಕಾಲ ಬದಲಾಗಿದೆ!’ ನಮ್ಮ ಹಳ್ಳಿಯಲ್ಲಿರುವ ಚೇಂಪಿ ಹಣ್ಣಿನ ವಿಚಾರವನ್ನು ಯಾರಾದರೂ ಪ್ರಸ್ತಾಪ ಮಾಡಿದರೆ, ನನ್ನ ಬಾಯಲ್ಲಿ ನೀರು ಬರುವುದಂತೂ ನಿಜ!

ಏಕೆಂದರೆ, ದ್ರಾಕ್ಷಿಯನ್ನು ಹೋಲುವ ಹಳ್ಳಿಗಾಡಿನ ಹಣ್ಣುಗಳಲ್ಲಿ ಚೇಂಪಿಗೆ ಅಗ್ರಸ್ಥಾನ ನೀಡಬೇಕು. ಈ ಹಣ್ಣಿನ ಗಾತ್ರವೂ ದ್ರಾಕ್ಷಿಯಂತೆಯೇ, ಬಣ್ಣದಲ್ಲಿ ದ್ರಾಕ್ಷಿಗಿಂತಲೂ ಒಂದು ಕೈ ಮಿಗಿಲು, ರುಚಿ ಯಲ್ಲೂ ದ್ರಾಕ್ಷಿಯನ್ನು ಹೋಲುತ್ತದೆ! (ಇದನ್ನು ಚಾಂಪಿ, ಚೀಂಪಿ, ಕಲ್ಲು ಸಂಪಿಗೆ ಹಣ್ಣು ಎಂಬ ಹೆಸರಿನಿಂದಲೂ ಕರೆಯುವುದುಂಟು.

ಇದನ್ನೂ ಓದಿ: Shashidhara Halady Column: ಬೇಸಿಗೆಯ ಬಿಸಿಲಿನಲ್ಲಿ ಮಕ್ಕಳೇಕೆ ಕಾಡಲ್ಲಿ ಸುತ್ತುತ್ತಿದ್ದರು ?

ವೈಜ್ಞಾನಿಕ ಹೆಸರು -ಕಾರ್ಷಿಯಾ ಮೊಂಟಾನಾ). ಪ್ರತಿ ಬೇಸಗೆಯ ಸಮಯದಲ್ಲಿ ಹಣ್ಣಾಗುವ ಈ ಹಣ್ಣನ್ನು ತಿನ್ನುವುದೆಂದರೆ ನಮಗೆಲ್ಲಾ ಬಹಳ ಖುಷಿ. ಮಧ್ಯಮ ಗಾತ್ರದ ಈ ಮರದ ತುಂಬಾ ಅರ್ಧ ಇಂಚು ಉದ್ದನೆಯ ಮುಳ್ಳುಗಳು; ದೊಡ್ಡ ದೊಡ್ಡ ಎಲೆಗಳು; ಅವುಗಳ ಮರೆಯಲ್ಲಿರುವ ಕೆಂಪನೆಯ ಹಣ್ಣುಗಳ ರುಚಿ, ಅಪ್ರತಿಮ. ನಮ್ಮೂರಲ್ಲಿ ಒಂದು ಹಂಚಿನ ಕಾರ್ಖಾನೆ ಇತ್ತು; ಅದರ ಹೊರ ಅಂಚಿನಲ್ಲಿನ ಬೇಲಿಯುದ್ದಕ್ಕೂ ಬೆಳೆದಿದ್ದ ಕುರುಚಲು ಗಿಡಗಳ ಸಾಲಿನ ನಡುವೆ ಒಂದು ಚೇಂಪಿ ಮರ ಇತ್ತು; ಬಿಸಿಲುಗಾಲದಲ್ಲಿ ಅದರಲ್ಲಿ ಹಣ್ಣು ಬಿಟ್ಟಾಗ, ಮಕ್ಕಳಿಗೆಲ್ಲಾ ಖುಷಿ; ಆತ್ಮೀಯ ಗೆಳೆಯರಿಗೆ ಮಾತ್ರ ಹೇಳಿ, ತುಸು ರಹಸ್ಯವಾಗಿ ಆ ಗಿಡದ ಬಳಿ ಹೋಗಿ, ಹಣ್ಣುಗಳನ್ನು ಆಯ್ದು ತಿನ್ನುವ ಕೆಲಸ.

ಎಲ್ಲರಿಗೂ ಹೇಳಿ, ಎಲ್ಲ ಮಕ್ಕಳೂ ಒಮ್ಮೆಗೇ ದಾಂಗುಡಿ ಇಟ್ಟರೆ, ತಮಗೆ ತಿನ್ನಲು ಹೆಚ್ಚು ಹಣ್ಣು ಸಿಗದಲ್ಲಾ ಎಂಬ ತರ್ಕದಿಂದ, ಚೇಂಪಿ ಮರದಲ್ಲಿ ಹಣ್ಣಾದಾಗ ರಹಸ್ಯ ಕಾಪಾಡುವ ಒಂದು ಪದ್ಧತಿ. ಆದರೆ, ತನ್ನಷ್ಟಕ್ಕೇ ಬೆಳೆದ ಕಾಡು ಮರವೊಂದು ದ್ರಾಕ್ಷಿಯ ಸ್ವರೂಪದ, ಅಷ್ಟು ರುಚಿಕರ ಹಣ್ಣು ಗಳು ಬಿಟ್ಟಾಗ, ಅದರ ಸುದ್ದಿ ಜಗಜ್ಜಾಹೀರಾಗದೇ ಇರುತ್ತದಾ? ಇನ್ನೊಂದು ಚೇಂಪಿ ಮರ ಹೈಸ್ಕೂಲಿಗೆ ಹೋಗುವ ದಾರಿಯಲ್ಲಿ ಕಟ್ಟೆಮಕ್ಕಿ ಏರುರಸ್ತೆಯಿಂದ ತುಸು ಮುಂದೆ, ರಸ್ತೆಯಿಂದ ತುಸು ದೂರದಲ್ಲಿತ್ತು.

ಕಾಡಿನ ಅಂಚಿನಲ್ಲಿ, ಖಾಸಗಿ ದರಕಾಸ್ತಿಗೆ ಹಾಕಿದ ಬೇಲಿಗೆ ಹೊಂದಿಕೊಂಡಂತೆ ಇದ್ದ ಆ ಮರ ತೀರ ಎತ್ತರವಾಗಿಲ್ಲ; ಕೈಗೆಟಕುವಷ್ಟು ಎತ್ತರದಲ್ಲೇ ರೆಂಬೆಕೊಂಬೆಗಳ ಟಿಸಿಲು. ಫೆಬ್ರವರಿ-ಮಾರ್ಚ್ ನಲ್ಲಿ ಅದರಲ್ಲಿ ದಂಡಿಯಾಗಿ ಬಣ್ಣ-ಬಣ್ಣದ ಚೇಂಪಿ ಹಣ್ಣುಗಳ ರಾಶಿ. ಸಂಜೆ ಹೈಸ್ಕೂಲಿನಿಂದ ವಾಪಸಾಗುವಾಗ, ಆ ಮರಕ್ಕೆ ಒಂದು ಭೇಟಿ ನೀಡಿ, ಆರೆಂಟು ಚೇಂಪಿ ಹಣ್ಣುಗಳನ್ನು ಬಾಯಿಗೆ ಹಾಕಿಕೊಂಡು ನಡೆಯುತ್ತಾ ಮನೆಯತ್ತ ಸಾಗುವ ಕ್ರಮ.

Screenshot_11

ನಾವು ಮಕ್ಕಳು ಆ ಮರದಲ್ಲಿದ್ದ ಕೆಂಪನೆಯ ಹಣ್ಣುಗಳನ್ನು ಕೊಯ್ಯುವುದನ್ನು ನೋಡಿದರೂ, ಅಲ್ಲೇ ತುಸು ದೂರದಲ್ಲಿರುವ ಮನೆಯವರು ತಕರಾರು ಮಾಡುತ್ತಿರಲಿಲ್ಲ, ಬದಲಾಗಿ, ಶಾಲೆ ಮಕ್ಕಳು ತಾನೆ, ತಿನ್ನಲಿ ಬಿಡಿ ಎಂಬ ಉದಾರತೆ ತೋರುತ್ತಿದ್ದರು. ಈಗಿನ ಮಕ್ಕಳಿಗೆ ಈ ರೀತಿ ಕಾಡುಮರ ವೊಂದರಿಂದ ಹಣ್ಣು ಕೀಳುವ ಅವಕಾಶ ಕಡಿಮೆ; ಏಕೆಂದರೆ, ಅಂದಿನಂತೆ ಇಂದು ಶಾಲಾಮಕ್ಕಳು ನಾಲ್ಕಾರು ಕಿ.ಮೀ. ನಡೆದು ಹೋಗುವುದುಂಟೇ? ನಮ್ಮ ರೀತಿ, ಬೆಳಗ್ಗೆ ಹಾಡಿ ಗುಡ್ಡಗಳ ಮಧ್ಯೆ ಕನಿಷ್ಠ ಮೂರು ಕಿ.ಮೀ., ಸಂಜೆ ಅದೇ ಪ್ರಕೃತಿಯ ನಡುವೆ ಅಷ್ಟೇ ದೂರ ನಡೆದು ಬರುತ್ತಿದ್ದ ನಮಗೆ ಮಾತ್ರ ಇಂತಹ ಅದೃಷ್ಟ!

ಇಂದಿನ ಮಕ್ಕಳು ಮನೆ ಮುಂದೆ ಶಾಲಾ ವಾಹನವನ್ನೇರಿ ಅಥವಾ ಪೋಷಕರ ಸ್ಕೂಟರಿನಲ್ಲಿ ಕುಳಿತು ಶಾಲೆಗೆ ಹೋಗಿ ಬರುವವರಾಗಿದ್ದರಿಂದ, ಪರಿಸರದ ಇಂತಹ ಸಿಹಿ-ಸಿಹಿ ವ್ಯಾಪಾರಗಳನ್ನು ನೋಡಿ ಅನುಭವಿಸುವ ಅದೃಷ್ಟದಿಂದ ವಂಚಿತರಾಗಿದ್ದಾರೆಂದೇ ಹೇಳಬಹುದು.

ನಾವೆಲ್ಲಾ ಗಂಟೆಗಟ್ಟಲೆ ಶಾಲೆ ನಡೆದು ಸಾಗುವವರಾಗಿದ್ದರಿಂದ, ಅಂದು ಗಳಿಸುತ್ತಿದ್ದ ಅಂಕಗಳು ಕಡಿಮೆ! ಇಂದು ವಾಹನದಲ್ಲಿ ವೇಗವಾಗಿ ಸಾಗುವ ಮಕ್ಕಳು ಅಧಿಕ ಅಂಕಗಳನ್ನು ಗಳಿಸಿ, ಸ್ಪರ್ಧಾ ತ್ಮಕ ಬದುಕಿನಲ್ಲಿ ಬೇಗನೆ ಮುಂದೆ ಮುಂದೆ ಸಾಗುತ್ತಿದ್ದಾರೆ. ಅದೇ ಸಮಯದಲ್ಲಿ, ಪರಿಸರದ, ಪ್ರಕೃತಿಯ ಸಹಜ ಒಡನಾಡದಿಂದ ದೂರಾಗುತ್ತಿದ್ದಾರೆ. ಇದೂ ಸಹ ಬದಲಾದ ಕಾಲದ ಒಂದು ವಿದ್ಯಮಾನ ತಾನೆ!

ನಮ್ಮ ಹಳ್ಳಿಮನೆಯು ಮುಖ್ಯ ರಸ್ತೆಯಿಂದ ಮೂರು ಕಿ.ಮೀ., ದೂರವಿದ್ದುದರಿಂದ, ದ್ರಾಕ್ಷಿ, ಸೇಬು ಮೊದಲಾದ ಪೇಟೆಯ ಹಣ್ಣುಗಳನ್ನು ನೋಡುವ ಅವಕಾಶ ನಮಗೆಲ್ಲಾ ತುಸು ಕಡಿಮೆಯೇ. ಆದರೆ, ಕಪ್ಪುದ್ರಾಕ್ಷಿ ಹಣ್ಣನ್ನು ನಾವೆಲ್ಲಾ ಅಂಗಡಿಯಿಂದ ಕೊಂಡುತಂದು, ತಿನ್ನದಿದ್ದರೇನಂತೆ, ಅದನ್ನೇ ಶೇ.95ರಷ್ಟು ಹೋಲುವ ಗರ‍್ಚನ ಹಣ್ಣನ್ನು (ಕವಳೆ ಹಣ್ಣು) ಹೇರಳವಾಗಿ ತಿಂದಿದ್ದೇವೆ!

ನಮ್ಮ ಮನೆ ಎದುರಿನ ಗುಡ್ಡದಲ್ಲಿ ಗರ‍್ಚನ ಗಿಡಗಳು ಹೇರಳವಾಗಿ ಬೆಳೆದಿದ್ದವು. ಅವು ಪೊದೆ ಸ್ವರೂಪದ ಗಿಡಗಳು; ಹಾಗೆಯೇ ಹಲವು ವರ್ಷ ಬಿಟ್ಟರೆ ಮರವಾದರೂ ಆದೀತು. ಆದರೆ, ಗಿಡದ ಮೈ ತುಂಬಾ ದಪ್ಪ ದಪ್ಪನೆಯ ಮುಳ್ಳುಗಳು! ಆದ್ದರಿಂದ, ಮನೆಯ ಸುತ್ತಮುತ್ತ ಅದನ್ನು ಬೆಳೆಸು ತ್ತಿರಲಿಲ್ಲ, ಅಕಸ್ಮಾತ್ ಕಂಡರೂ ಕತ್ತರಿಸಿ ಹಾಕುತ್ತಿದ್ದರು. ಆ ಗಿಡದ ಮೈಮೇಲೆ ಅಷ್ಟು ಮುಳ್ಳು ಗಳೆಂದರೆ, ಅವನ್ನು ಬೆಳೆಸಿ ಮುಳ್ಳಿನ ಜೀವಂತ ಬೇಲಿಯನ್ನೂ ಮಾಡಬಹುದು. ತಿಳಿ ಹಸಿರು ಎಲೆ; ಮಲ್ಲಿಗೆ ಹೂವನ್ನು ಹೋಲುವ ಹೂವುಗಳು. ಆ ಹೂವನ್ನು ಕಿತ್ತು ತಿಂದರೆ, ಹುಳೀಯಾದ ರುಚಿ ಇದೆ!

ಮೈತುಂಬಾ ಮುಳ್ಳುಗಳಿರುವ ಗರ‍್ಚನ ಗಿಡಗಳಲ್ಲಿ ಕಾಯಿಯಾದ ತಕ್ಷಣ, ಹಳ್ಳಿಯವರ ಕಣ್ಣು ಆ ಗಿಡ ಗಳತ್ತ! ಆ ಹುಳಿಯಾದ ಕಾಯಿಯನ್ನು ಕಿತ್ತು ತಿನ್ನುವ ತವಕ ಮಕ್ಕಳಿಗಾದರೆ, ಬುಟ್ಟಿಗಳಲ್ಲಿ ಆ ಕಾಯಿಗಳನ್ನು ಕೊಯ್ದು, ಮನೆಗೆ ಕೊಂಡೊಯ್ದು ಅದರಿಂದ ಉಪ್ಪಿನಕಾಯಿ ತಯಾರಿಸುವ ಆಸೆ ಮಹಿಳೆಯರಿಗೆ. ಸಾಕಷ್ಟು ಹುಳಿ ಇರುವ ಇದರ ಉಪ್ಪಿನ ಕಾಯಿ ರುಚಿಕರ. ಇಷ್ಟೆಲ್ಲಾ ಚಟುವಟಿಕೆ ಆದ ನಂತರ, ಉಳಿದುಕೊಂಡಿರುವ ಕಾಯಿಗಳು, ದ್ರಾಕ್ಷಿ ಗಾತ್ರಕ್ಕೆ ಬಂದಾಗ, ದಟ್ಟ ನೇರಳೆ ಬಣ್ಣ ಪಡೆಯುತ್ತವೆ.

ಆ ಚಂದದ, ಮಿದುವಾದ ಹಣ್ಣನ್ನು ಕಿತ್ತು ತಿಂದರೆ, ದ್ರಾಕ್ಷಿಯದೇ ರುಚಿ; ತುಸು ಹುಳಿ ಜಾಸ್ತಿ. ಕಪ್ಪು ದ್ರಾಕ್ಷಿಯಲ್ಲಿರುವಂತೆ, ಇದರಲ್ಲೂ ಒಂದೆರಡು ಬೀಜಗಳು. ಪೊದೆ ಗಾತ್ರದ ಗಿಡಗಳಾಗಿದ್ದರಿಂದ, ಮಕ್ಕಳಿಗೆ ಕಿತ್ತು ತಿನ್ನಲು ತೊಂದರೆ ಇಲ್ಲ; ಹಸಿರು ಕೊಂಬೆಗಳಲ್ಲಿ, ಮುಳ್ಳುಗಳ ನಡುವೆ ಜೊಂಪೆ ಜೊಂಪೆಯಾಗಿರುವ ಗರ‍್ಚನ ಹಣ್ಣುಗಳನ್ನು ಕೊಯ್ದು ತಿನ್ನುವ ಅವಕಾಶ ದೊರೆತರೆ, ಆ ದಿನ ಮಕ್ಕಳ ಸಂತಸಕ್ಕೆ ಪಾರವೇ ಇಲ್ಲ!

ಜತೆಗೆ, ಗುಡ್ಡಗಾಡಿನಲ್ಲಿ ಬೆಳೆಯುವ ಈ ಹಣ್ಣಿನಲ್ಲಿ ಸಾಕಷ್ಟು ಔಷಧಿಯ ಗುಣಗಳಿರಲೇಬೇಕು, ಅದನ್ನು ತಿನ್ನುವ ಮಕ್ಕಳಿಗೂ ಅವು ದಕ್ಕಿರಲೇ ಬೇಕು. ಈ ಕಾಯಿಯನ್ನು ಕಿತ್ತಾಗ, ಬಿಳಿಯಾದ ರಸ ಒಸರುತ್ತದೆ! ಅದು ಈ ಗಿಡದ ವೈಶಿಷ್ಟ್ಯ. ನಮ್ಮ ಹಳ್ಳಿಯ ಮಹಿಳೆಯರು ಇದರ ಕಾಯಿಯಿಂದ ಉಪ್ಪಿನಕಾಯಿ ತಯಾರಿಸುತ್ತಿದ್ದರಾದರೂ, ವಾಣಿಜ್ಯಕವಾಗಿ ಅದನ್ನು ಬಳಸಿದಂತೆ ಕಾಣಿಸದು; ಆದರೆ, ನಮ್ಮ ರಾಜ್ಯದ ಬೇರೆ ಕೆಲವು ಕಡೆ, ಮಹಾರಾಷ್ಟ್ರ ಮೊದಲಾದ ಪ್ರದೇಶಗಳಲ್ಲಿ ಇದರ ಉಪ್ಪಿನ ಕಾಯಿಯನ್ನು ತಯಾರಿಸಿ ಮಾರುವುದುಂಟು; ಬೇರೆ ಉಪ್ಪಿನಕಾಯಿಯ ಜತೆ ಇದನ್ನು ಬೆರೆಸುವುದೂ ಉಂಟು.

ಗರ‍್ಚನ ಕಾಯಿ ಅಥವಾ ಕವಳೆ ಕಾಯಿಗೆ, ‘ಬ್ರಿಟಿಷ್ ರಾಜ್’ನಲ್ಲಿ ಐತಿಹಾಸಿಕ ಮಹತ್ವ ಇದೆ ಎಂದರೆ ಅಚ್ಚರಿಯಾದೀತು! ಜನಸಾಮಾನ್ಯರಿಗೆ ಅಗತ್ಯವಿರುವ ಉಪ್ಪಿನ ವಿತರಣೆಯನ್ನು ಬ್ರಿಟಿಷರು ನಿಯಂತ್ರಿಸಿ, ಅದರ ಮೇಲೆ ಭಾರೀ ಪ್ರಮಾಣದ ಸುಂಕ ಹೇರಿದ್ದರು; ಜನರು ಉಪ್ಪನ್ನು ಮತ್ತು ಇತರ ವಸ್ತುಗಳನ್ನು ಒಂದು ರಾಜ್ಯದಿಂದಲೋ, ಜಿಲ್ಲೆಯಿಂದಲೋ ಇನ್ನೊಂದು ಪ್ರದೇಶಕ್ಕೆ ಸುಲಭವಾಗಿ ಸಾಗಿಸದೇ ಇರುವಂತೆ ನೋಡಿಕೊಳ್ಳಲು, ಗಸ್ತು ತಿರುಗುವುದರ ಜತೆಯಲ್ಲೇ, ಅವರು ಸುಮಾರು 2500 ಮೈಲು ಉದ್ದದ ಮುಳ್ಳಿನ ಗಿಡಗಳ ಬೇಲಿಯನ್ನು ನಿರ್ಮಿಸಿದ್ದರು; ದಪ್ಪ ದಪ್ಪ ಮುಳ್ಳುಗಳಿರುವ ಗಿಡಗಳನ್ನು ಬೆಳೆಸಿ, ಅದಕ್ಕೆ ನೀರೆರೆದು, ಜೀವಂತ ಮುಳ್ಳು ಬೇಲಿಯನ್ನು ನಿರ್ಮಿಸಿ, ಬಡವರಿಗೆ ಬೇಕಾದ ಉಪ್ಪನ್ನು ದುಲರ್ಭ ಮಾಡಿದ ಕುಖ್ಯಾತಿ ಬ್ರಿಟಿಷರಿಗಿದೆ.

ಅಂತಹ ಜೀವಂತ ಮುಳ್ಳು ಬೇಲಿಯನ್ನು ಬೆಳೆಸಲು, ಕಳ್ಳಿ ಮತ್ತು ಇತರ ಮುಳ್ಳು ಗಿಡಗಳ ಜತೆ, ಪೊದೆಯ ರೀತಿ ಬೆಳೆಯುವ ಗರ‍್ಚನ (ಕ್ಯಾರಿಸ್ಸಾ ಕರಂಡಾಸ್) ಗಿಡಗಳನ್ನು ಉಪಯೋಗಿಸಿದ್ದರು! ಒಂದಿಂಚು ಉದ್ದದ ಗರ‍್ಚನ ಮುಳ್ಳುಗಳು, ದಪ್ಪ ಪೊದೆಯ ರೀತಿ ಬೆಳೆಯುವ ಆ ಗಿಡದ ಸ್ವರೂಪ ಎಲ್ಲವೂ ಆ ಜೀವಂತ ಬೇಲಿಯ ಜೀವಾಳವಾಗಿತ್ತು!

ತುಸು ಕ್ರೂರ ಎನ್ನಬಹುದಾದ ಜೀವಂತ ಮುಳ್ಳುಬೇಲಿಯನ್ನುಸಾವಿರಾರು ಮೈಲು ದೂರ ಬೆಳೆಸುವ ಮೂಲಕ, ಈ ಹುಳಿ ಕಾಯಿಯ ಸಸ್ಯ ವನ್ನು ಭಾರತದಾದ್ಯಂತ ಪ್ರಚುರಪಡಿಸಿದ ಕುಖ್ಯಾತಿ ಬ್ರಿಟಿಷ ರಿಗೆ ಸಲ್ಲಲೇಬೇಕು!

ಅದೇನೇ ಇರಲಿ, ಇಂದಿನ ವಾಣಿಜ್ಯಕ ಪ್ರಪಂಚವನ್ನು ಗಮನಿಸಿದರೆ ಮತ್ತು ಕೃಷಿಕರು ವಾಣಿಜ್ಯ ಉದ್ದೇಶಕ್ಕೆ ಬಳಸಬಹುದಾದ ಗಿಡಗಳನ್ನು ಗಮನಿಸುವುದಾದರೆ, ಚೇಂಪಿ ಹಣ್ಣು ಮತ್ತು ಗರ‍್ಚನ ಹಣ್ಣು ಎರಡಕ್ಕೂ ಅಂತಹ ಅರ್ಹತೆ ಇದೆ. ನೋಡಲು ಮತ್ತು ರುಚಿಯಲ್ಲಿ ದ್ರಾಕ್ಷಿಯನ್ನು ಹೋಲುವ ಈ ಎರಡು ಹಣ್ಣುಗಳನ್ನು ಮಾರ್ಕೆಟಿಂಗ್ ಮಾಡುವ ಅವಕಾಶವಿದೆ. ಆ ಮೂಲಕ, ಗ್ರಾಮೀಣ ಜನರಿಗೆ ಪರ್ಯಾಯ ಆದಾಯ ಕಲ್ಪಿಸುವ ಅವಕಾಶವಿದೆ.

ಇಂತಹದ್ದೇ ಇನ್ನೊಂದು ಹಣ್ಣು ಇಲ್ಲಿ ನೆನಪಾಗುತ್ತದೆ; ಆದರೆ, ರುಚಿಯಲ್ಲಿ ಇದು ದ್ರಾಕ್ಷಿಯ ಹೋಲಿಕೆಗೆ ಬರಲಾರದು. ಆದರೆ, ನಮ್ಮ ಹಳ್ಳಿಯ ಗುಡ್ಡಗಳಲ್ಲಿ ಹೇರಳವಾಗಿ ಬೆಳೆಯುತ್ತಿದೆ. ಅದೇ ಕಾಡು ನೇರಳೆ ಹಣ್ಣು. ಕಡಲೆ ಬೀಜದಷ್ಟು ಗಾತ್ರದ, ದಟ್ಟ ನೇರಳೆ ಬಣ್ಣದ ಈ ಹಣ್ಣುಗಳನ್ನು ತಿಂದರೆ, ನಾಲಗೆಯೂ ನೇರಳೆ ಬಣ್ಣ ತಾಳುತ್ತದೆ.

ಇಂದು ಪೇಟೆಗಳಲ್ಲಿ ‘ಜಾಮುನ್ ಹಣ್ಣು’ ಎಂದು ಪ್ರಸಿದ್ಧವಾಗಿರುವ ದೊಡ್ಡ ಗಾತ್ರದ ನೇರಳೆ ಹಣ್ಣುಗಳಿಗೂ, ಈ ಪುಟಾಣಿ ಕಾಡು ನೇರಳೆಗೂ ಹೋಲಿಕೆ ಇದೆ. ಇವೆರಡೂ ದೂರದ ಸಂಬಂಧಿಗಳು. ನಮ್ಮ ಮನೆ ಯ ಸುತ್ತಲೂ ಇರುವ ಗುಡ್ಡ, ಹಾಡಿ, ಹಕ್ಕಲುಗಳಲ್ಲಿ ನೂರಾರು ನೇರಳೆ ಮರಗಳಿವೆ; ಚಿಕ್ಕ ಗಾತ್ರದ ಈ ಕಾಡು ನೇರಳೆ ಮರಗಳಲ್ಲಿ, ಪ್ರತಿವರ್ಷ ಆಗುವ ಹಣ್ಣುಗಳನ್ನು ಲೆಕ್ಕ ಹಾಕಿದರೆ ಲಕ್ಷ ಮೀರಬಹುದು!

ಪುಟ್ಟ-ಪುಟ್ಟ ಹಣ್ಣುಗಳು, ಪ್ರತಿ ರೆಂಬೆ ಯಲ್ಲೂ ನೂರಾರು. ತುಸು ಸಿಹಿ, ತುಸು ವಗರು ರುಚಿಯ ಈ ಹಣ್ಣುಗಳನ್ನು ಮಕ್ಕಳು ತಿನ್ನಬಹುದು; ಅಷ್ಟೇ ಹೊರತು, ದೊಡ್ಡವರ ಬಾಯಿಗೆ ರುಚಿ ಎನಿಸ ಲಾರದು. ಬೇಸಗೆ ಮುಗಿದು, ಮಳೆ ಗಾಲ ಬರುತ್ತದೆ ಎಂಬ ದಿನಗಳಲ್ಲಿ ಈ ಕಾಡು ನೇರಳೆಗಳು ಹೇರಳವಾಗಿ ಹಣ್ಣಾಗುತ್ತವೆ. ಎಷ್ಟರ ಮಟ್ಟಿಗೆ ಎಂದರೆ, ಮಕ್ಕಳು ಆರಿಸಿ ತಿಂದು, ಹಕ್ಕಿಗಳು, ಅಳಿಲುಗಳು ಆರಿಸಿ ತಿಂದು, ನಂತರವೂ ಉಳಿದ ಲಕ್ಷ ಗಟ್ಟಲೆ ಹಣ್ಣುಗಳು ಮರದ ಅಡಿ ಬಿದ್ದಿರುತ್ತವೆ.

ಔಷಧಿಯ ಗುಣವಿದೆ ಎಂದು ಬಹಳ ಪ್ರಚಾರ ಪಡೆದಿರುವ ದೊಡ್ಡ ಗಾತ್ರದ ನೇರಳೆ ಹಣ್ಣುಗಳು ಈಗ ಪೇಟೆಯಲ್ಲಿ ದುಬಾರಿ ಬೆಲೆಗೆ ಮಾರಾಟವಾಗುವುದನ್ನು ಕಂಡರೆ, ಈ ಕಾಡು ನೇರಳೆಯಲ್ಲೂ ಔಷಧಿಯ ಗುಣ ಇರಲೇಬೇಕು ಎನಿಸುತ್ತದೆ.

ನೇರಳೆ ಸಸ್ಯಗಳಲ್ಲಿ ಹಲವು ಪ್ರಭೇದಗಳಿವೆ, ತಳಿಗಳಿವೆ; ಎಲ್ಲ ನೇರಳೆಯ ಗುಣಗಳನ್ನು, ಔಷಧಿಯ ಗುಣಗಳನ್ನು ಸಂಶೋಧನೆಗೆ ಒಳಪಡಿಸಿ, ಅದರ ವಿವರಗಳನ್ನು ಕೃಷಿಕರಿಗೆ, ಜನ ಸಾಮಾನ್ಯರಿಗೆ ಒದಗಿಸಿದರೆ, ಅವುಗಳ ಬಹೂಪಯೋಗ ಸಾಧ್ಯತೆಯನ್ನು ಗುರುತಿಸಲು ಸಾಧ್ಯ. ನಮ್ಮ ಹಳ್ಳಿಯ ಸುತ್ತ ಮುತ್ತ ದ್ರಾಕ್ಷಿಯನ್ನೇ ಹೋಲುವ ಮೂರು ಹಣ್ಣುಗಳ ವಿವರಗಳನ್ನು ಕಂಡಾಗ, ನಾವು ಹಳ್ಳೀಯಲ್ಲಿದ್ದುಕೊಂಡು, ಸಾಕಷ್ಟು ವೈವಿಧ್ಯಮಯ ಹಣ್ಣುಗಳನ್ನು ಮೆಲ್ಲಿದ್ದೇವೆ ಎಂಬ ಖುಷಿ ಇದೆ.

ಪೇಟೆಯ ಹಣ್ಣುಗಳು ಹಳ್ಳಿಗಳಿಗೆ ಸರಬರಾಜು ಆಗದೇ ಇದ್ದಂತಹ ಕಾಲದಲ್ಲಿ ಬಾಲ್ಯವನ್ನು ಕಳೆದ ನಮ್ಮ ಪೀಳಿಗೆಯವರು, ಮನೆಯ ಸುತ್ತಲಿನ ಪರಿಸರದಲ್ಲೇ ಮಾಗುವ ಹಲವು ಹಣ್ಣುಗಳನ್ನು, ಕಾಯಿಗಳನ್ನು ಕಾಲಕಾಲಕ್ಕೆ ಕಂಡು, ತಿಂದು ಹೊಟ್ಟೆ ತುಂಬಿಸಿಕೊಂಡಿದ್ದಲ್ಲದೇ, ಅಷ್ಟರ ಮಟ್ಟಿಗೆ ಅಂತಹ ಶ್ರೀಮಂತ ರುಚಿಗಳನ್ನು ಅಸ್ವಾದಿಸಿದ್ದೇವೆ ಎಂಬ ತೃಪ್ತಿಯನ್ನೂ ಪಡೆದಿದ್ದೇವೆ ಎಂದು ಹೆಮ್ಮೆ ಪಟ್ಟುಕೊಳ್ಳಬಹುದು! ಅಲ್ಲವೆ?