ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Shashidhara Halady Column: ಬೇಸಿಗೆಯ ಬಿಸಿಲಿನಲ್ಲಿ ಮಕ್ಕಳೇಕೆ ಕಾಡಲ್ಲಿ ಸುತ್ತುತ್ತಿದ್ದರು ?

ನಮ್ಮ ಹಳ್ಳಿ ಮನೆ ಇದ್ದದ್ದು, ಒಂದು ಗದ್ದೆ ಬೈಲಿನ ತುದಿಯಲ್ಲಿ; ಆ ಗದ್ದೆ ಬೈಲಿನ ಇಕ್ಕೆಲಗಳಲ್ಲೂ, ಬೇರೆ ಲ್ಲಾ ಜಾಗದಲ್ಲೂ ಇದ್ದದ್ದು ಹಾಡಿ ಅಥವಾ ಹಕ್ಕಲು, ಅಂದರೆ, ತೀರಾ ದಟ್ಟವಾಗಿಲ್ಲದ ಕಾಡು. ಇಂತಹ, ಹದವಾಗಿ ಬೆಳೆದ ಮರಗಿಡಗಳಿಂದ, ಪೊದೆಗಳಿಂದ ತುಂಬಿದ ಹಾಡಿ ಅಥವಾ ಹಕ್ಕಲಿನಲ್ಲಿ ನಾವು ಮಕ್ಕಳು ಓಡಾಡುವುದು ಸುಲಭ; ದಟ್ಟ ಕಾಡಿನ ನಿಗೂಢತೆ, ಅಪಾಯಸಂಭಾವ್ಯತೆಗಳು ಇಲ್ಲಿ ತೀರಾ ಕಡಿಮೆ.

ಬೇಸಿಗೆಯ ಬಿಸಿಲಿನಲ್ಲಿ ಮಕ್ಕಳೇಕೆ ಕಾಡಲ್ಲಿ ಸುತ್ತುತ್ತಿದ್ದರು ?

-

ಶಶಾಂಕಣ

ಹಾಡಿ ಹಕ್ಕಲುಗಳ ಕಾಡು ಮರಗಿಡಗಳ ನಡುವೆಯೇ, ಬೃಹದಾಕಾರವಾಗಿ ಬೆಳೆದು ನಿಂತಿ ರುವ ಕಾಟುಮಾವಿನ ಮರಗಳ ಮಜಲೇ ಭಿನ್ನ. ಒಂದೊಂದು ಮರದಲ್ಲೂ ಸಾವಿರಾರು ಪುಟ್ಟ ಪುಟ್ಟ ಹಣ್ಣುಗಳು; ಒಂದೊಂದು ಮರದ ಹಣ್ಣಿನ ರುಚಿಯೂ ವಿಭಿನ್ನ. ಮಕ್ಕಳಿಗೆ ಹೆಬ್ಬಲಸಿನ ಹಣ್ಣಿನ ರುಚಿ ಹತ್ತಿದರೆ, ಮತ್ತೊಮ್ಮೆ ಅದನ್ನು ತಿನ್ನಲು ಕಾಯುತ್ತಾ ಕುಳಿತಿರು ತ್ತಾರೆ. ಬಲಿತ ಹಣ್ಣನ್ನು ತಂದು, ಮನೆ ಎದುರಿನ ಹುಲ್ಲುಕುತ್ರಿಯ ಬುಡದಲ್ಲಿಟ್ಟು, ಒಂದೆರಡು ದಿನಗಳಲ್ಲಿ ಅದು ಹಣ್ಣಾದಾಗ ತಿನ್ನುವುದು, ಬೇಸಗೆಯಲ್ಲಿ ಶಾಲಾ ಮಕ್ಕಳ ನೆಚ್ಚಿನ ಹವ್ಯಾಸ.

ಮೊದಲೆಲ್ಲಾ ಇದನ್ನು ಯೋಚಿಸಿದಾಗ ಬಹಳ ಆಶ್ಚರ್ಯವೂ ಆಗುತ್ತಿತ್ತು, ವಿಸ್ಮಯವೂ ಎನಿಸು ತ್ತಿತ್ತು. ಈಗ ಅದಕ್ಕೆ ಉತ್ತರ ಸುಮಾರಾಗಿ ಹೊಳೆದಿದೆ ಎಂದುಕೊಂಡಿದ್ದೇವೆ. ಇವೆಲ್ಲಾ ಪ್ರಕೃತಿಯ ನಿಯಮಗಳು ಎಂಬುದೇ ಆ ಸರಳ ಉತ್ತರ. ಪ್ರಶ್ನೆ ಏನೆಂದರೆ, ಬೇಸಗೆಯ ತಿಂಗಳುಗಳಲ್ಲೇ ಏಕೆ ನಾನಾ ರೀತಿಯ ಹಣ್ಣುಗಳು ಮಾಗುತ್ತವೆ? ಈ ವಿದ್ಯಮಾನವನ್ನು ಸ್ಪಷ್ಟವಾಗಿ ಗುರುತಿಸಲು, ಫ್ರಿಜ್ ಸಾರ್ವತ್ರಿಕವಾಗುವ ಕಾಲಕ್ಕಿಂತ ತುಸು ಹಿಂದೆ ಹೋಗಬೇಕು; ಕೃತಕವಾಗಿ ಹಣ್ಣು ಮಾಡುವ ತಂತ್ರವು ಸಾರ್ವತ್ರಿಕವಾಗುವ ಕಾಲಕ್ಕಿಂತ ಮುಂಚೆ ಹೋಗಬೇಕು; ತ್ವರಿತವಾಗಿ ಒಂದೂರಿನಿಂದ ಇನ್ನೊಂದೂರಿಗೆ ಹಣ್ಣುಗಳನ್ನು ಸಾಗಿಸುವ ಸಂವಹನ ವ್ಯವಸ್ಥೆ ದೃಢಗೊಳ್ಳುವದಕ್ಕಿಂತ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳಬೇಕು; ನಗರದ ಯಾಂತ್ರಿಕ ಬದುಕಿನಿಂದ ಬಿಡುಗಡೆಗೊಂಡು ಹಳ್ಳಿಯ ಸರಳ ದಿನಚರಿಯನ್ನು ನೆನಪಿಸಿಕೊಳ್ಳಬೇಕು.

ಸರಕಾರಿ ಶಾಲೆಯಲ್ಲಿ ಓದುತ್ತಿದ್ದ ನಮಗೆ, ಮಾರ್ಚ್ ಕೊನೆಯ ವಾರಕ್ಕಾಗಲೇ ಪರೀಕ್ಷೆಗಳು ಮುಗಿದು ರಜೆಗಳು ಶುರು; ನಂತರ ಜೂನ್ 1ರಂದೇ ಶಾಲೆಯತ್ತ ಪಾಠಗಳತ್ತ ಮುಖ ಮಾಡುತ್ತಿದ್ದ ದಿನಗಳು. ನಮ್ಮೂರಲ್ಲಿ ಮಾರ್ಚ್‌ನಿಂದ ಮೇ ಕೊನೆಯ ವಾರದ ತನಕ ಬಿರುಸಾದ ಬೇಸಗೆ, ಬೆವರು ಸುರಿವ ಬೇಗೆ!

ಸುಮಾರು ಎರಡು ತಿಂಗಳು ಪೂರ್ತಿ ರಜಾ ಇರುತ್ತಿತ್ತು; ಅಷ್ಟೂ ದಿನಗಳಲ್ಲಿ, ಪಾಠಗಳ, ಟ್ಯೂಷನ್ ಕ್ಲಾಸಿನ, ಮುಂದಿನ ಅದ್ಯಾವುದೋ ಎಂಟ್ರೆನ್ಸ್ ಪರೀಕ್ಷೆಯ ಅಥವಾ ಬೇಸಗೆ ಶಿಬಿರದ ಗೊಡವೆ ಇಲ್ಲದೇ, ನಮ್ಮಷ್ಟಕ್ಕೆ ನಾವು ಸುತ್ತಾಡುವ ಸ್ವಾತಂತ್ರ್ಯ. ಅದೇ ಸಮಯದಲ್ಲಿ ನಮ್ಮ ಬಾಯಿ ರುಚಿ ತಣಿಸುತ್ತಾ, ಬಿಸಿಲಿನ ಬೇಗೆ ತುಸು ತಂಪು ನೀಡುತ್ತಾ, ಬಣ್ಣ ಬಣ್ಣಗಳಿಂದ ಕಾಣಿಸಿಕೊಳ್ಳುತ್ತಿದ್ದವು ಆ ಹಣ್ಣುಗಳು!

ನಮ್ಮ ಹಳ್ಳಿ ಮನೆ ಇದ್ದದ್ದು, ಒಂದು ಗದ್ದೆ ಬೈಲಿನ ತುದಿಯಲ್ಲಿ; ಆ ಗದ್ದೆ ಬೈಲಿನ ಇಕ್ಕೆಲಗಳಲ್ಲೂ, ಬೇರೆಲ್ಲಾ ಜಾಗದಲ್ಲೂ ಇದ್ದದ್ದು ಹಾಡಿ ಅಥವಾ ಹಕ್ಕಲು, ಅಂದರೆ, ತೀರಾ ದಟ್ಟವಾಗಿಲ್ಲದ ಕಾಡು. ಇಂತಹ, ಹದವಾಗಿ ಬೆಳೆದ ಮರಗಿಡಗಳಿಂದ, ಪೊದೆಗಳಿಂದ ತುಂಬಿದ ಹಾಡಿ ಅಥವಾ ಹಕ್ಕಲಿನಲ್ಲಿ ನಾವು ಮಕ್ಕಳು ಓಡಾಡುವುದು ಸುಲಭ; ದಟ್ಟ ಕಾಡಿನ ನಿಗೂಢತೆ, ಅಪಾಯಸಂಭಾವ್ಯತೆಗಳು ಇಲ್ಲಿ ತೀರಾ ಕಡಿಮೆ.

ಇದನ್ನೂ ಓದಿ: Shashidhara Halady Column: ಕಾಡಿನಲ್ಲಿ ಕಳೆದುಹೋಗುವ ಅಪೂರ್ವ ಅನುಭವ !

ಆದ್ದರಿಂದಲೇ, ಬೇಸಗೆಯ ರಜಾ ದಿನಗಳಲ್ಲಿ ಪ್ರತಿ ದಿನ ಎಂಬಂತೆ ಹಾಡಿ ಹಕ್ಕಲುಗಳಲ್ಲಿ ಓಡಾಡು ತ್ತಿದ್ದೆವು; ಸುತ್ತಾಡುತ್ತಿದ್ದೆವು. ಆಗ ನಮ್ಮ ಕಣ್ಣಿಗೆ ಬೀಳುವ ಹಣ್ಣುಗಳು, ಮೈಮನಗಳನ್ನು ತಣಿಸುತ್ತಿದ್ದ ಪರಿ ಬೆರಗುಹುಟ್ಟಿಸುವಂತಹದ್ದು. ಆ ಹಣ್ಣುಗಳಲ್ಲೂ ಅದೆಷ್ಟು ವೈವಿಧ್ಯ!

ಬೇಸಗೆಯಲ್ಲಿ ನಮ್ಮ ಹಳ್ಳಿ ಮನೆಯ ಸುತ್ತಲೂ ನಾನು ರುಚಿಕಂಡ ಹಣ್ಣುಗಳ ಕುರಿತು ಬರೆಯು ವಾಗ, ಯಾವುದಕ್ಕೆ ಮೊದಲ ಸ್ಥಾನ ನೀಡಬೇಕು ಎಂದು ನಿರ್ಧರಿಸಲು ಕಷ್ಟಸಾಧ್ಯವಾಗಿಸು ವಂತಿತ್ತು, ಆ ವೈವಿಧ್ಯ. ನಮ್ಮ ಮನೆಯ ಹಿಂಭಾಗದಲ್ಲಿ ಸಣ್ಣ ಗುಡ್ಡದಂತೆ ಮೇಲೇರಿ ಹೋಗಿದ್ದ ದರೆಯ ನಡುವಿನ ಅಂಕುಡೊಂಕು ದಾರಿಯನ್ನೇರಿ ಹೋದರೆ, ಸಾಲಾಗಿ ಹಕ್ಕಲುಗಳು ಸಿಗುತ್ತಿದ್ದವು.

ಕೆಳಭಾಗದಲ್ಲಿದ್ದ ಗದ್ದೆ ಬೈಲಿಗೆ ಅನುಗುಣವಾಗಿದ್ದ ಆ ಹಕ್ಕಲುಗಳು, ಬೇರೆ ಬೇರೆ ಕೃಷಿಕರ ಒಡೆತನ ದಲ್ಲಿದ್ದವು. ಆದರೆ, ಅಲ್ಲಿ ಸಿಗುವ ಕಾಡು ಹಣ್ಣುಗಳನ್ನು ಮಕ್ಕಳು ಆರಿಸಿ, ಕೊಯ್ದು ತಿನ್ನಲು ಯಾವುದೇ ನಿರ್ಬಂಧಗಳಿರಲಿಲ್ಲ; ಹಳ್ಳಿಯ ಮಕ್ಕಳು ಯಾರ ಹಾಡಿಯಲ್ಲಾದರೂ, ಹಕ್ಕಲಲ್ಲಾದರೂ ಓಡಾಡಬಹುದಿತ್ತು, ಅಲ್ಲಿನ ಹಣ್ಣುಗಳನ್ನು ತಿನ್ನಬಹುದಿತ್ತು.

ಅಂತಹ ಹಕ್ಕಲಿನ ಮರಗಳ ಪೈಕಿ ತುಸು ಅನನ್ಯ, ವಿಶಿಷ್ಟ ಎಂದರೆ ಮುರಿನ ಹಣ್ಣಿನ ಮರ. ಅಲ್ಲಿ ಆರೆಂಟು ಮುರಿನ ಹಣ್ಣಿನ ಮರಗಳಿದ್ದವು; ಕೆಲವು ಮರಗಳಲ್ಲಿ ಹೇರಳ ಕಾಯಿ, ಹಣ್ಣುಗಳು. ಅದೇಕೋ, ಒಂದೊಂದು ಮರಗಳಲ್ಲಿ ಕಾಯಿಗಳೂ ಕಡಿಮೆ. ಇದು ಸಹ ಪ್ರಕೃತಿಯ ನಿಯಮ ತಾನೆ. ಜಾಸ್ತಿ ಹಣ್ಣುಗಳಿರುವ ಮುರಿನ ಮರ ಏರಿ, ಕೆಲವು ಕೊಂಬೆಗಳನ್ನು ಅಲುಗಾಡಿಸಿದಾಗ, ಉದುರಿ ಬೀಳುತ್ತಿದ್ದವು ಕೆಂಪನೆಯ ಮುರಿನ ಹಣ್ಣು; ಲಿಂಬೆ ಹಣ್ಣಿನ ಗಾತ್ರ, ದಟ್ಟ ಕೆಂಪನೆಯ ತಿರುಳು, ಅದಕ್ಕೂ ಹೆಚ್ಚು ಕೆಂಪಗಾಗಿದ್ದ ಸಿಪ್ಪೆ; ಒಳಗಿನ ಮೆದುವಾದ ತಿರುಳನ್ನು ತಿಂದಾಗ, ಬೇಸಗೆಯ ದಾಹ ಮಾಯ; ಆ ಮರಗಳಲ್ಲಿ ಕಾಯಿಗಳು ಪೂರ್ತಿ ಹಣ್ಣಾಗಲು ಮೂರ‍್ನಾಲ್ಕು ವಾರಗಳೇ ಬೇಕಾಗುತ್ತಿತ್ತು; ಪ್ರತಿದಿನವೆಂಬಂತೆ ನಾಲ್ಕಾರು ಮುರಿನ ಹಣ್ಣನ್ನು ತಿನ್ನುತ್ತಿದ್ದ ನಮ್ಮನ್ನು ಕಂಡು ಮನೆಯ ಹಿರಿಯರು ಹೇಳುತ್ತಿದ್ದರು: ‘ಮಕ್ಕಳೇ, ಪ್ರತಿ ದಿನ ತಿನ್ನಬೇಡಿ, ಆ ಹಣ್ಣಿನಲ್ಲಿ ಅದೆಂತಹದೋ ಗುಣ ಉಂಟು.

ಸ್ವಲ್ಪ ಮಾತ್ರ ತಿನ್ನಬೇಕು’. ಮುರಿನ ಹಣ್ಣಿನಲ್ಲಿ ಔಷಧಿಯ ಗುಣಗಳಿವೆ ಎಂದು ನಮಗೆ ಆಗ ತಿಳಿದಿರಲಿಲ್ಲ; ಪಟ್ಟಣದ ಸಂಪರ್ಕ ಬಂದ ನಂತರ ಗೊತ್ತಾಯಿತು, ಮುರಿನ ಹಣ್ಣಿಗೆ ಇನ್ನೊಂದು ಹೆಸರೇ ‘ಕೋಕಂ’! ಆ ಹಣ್ಣಿನ ಸಿಪ್ಪೆಯನ್ನು ಒಣಗಿಸಿಟ್ಟುಕೊಂಡರೆ, ಮುಂದಿನ ನಾಲ್ಕಾರು ತಿಂಗಳುಗಳ ಕಾಲ ಅದರಿಂದ ತಿಳಿಸಾರು ಮಾಡಬಹುದು ಮತ್ತು ಪಿತ್ತ ಜಾಸ್ತಿಯಾದವರಿಗೆ ಅದೊಂದು ಉತ್ತಮ ಔಷಧ ಎಂಬ ನಂಬಿಕೆ ಚಾಲ್ತಿಯಲ್ಲಿದೆ. ಕೋಕಂ ಜ್ಯೂಸ್ ಮಾಡಿ ಕೊಡುವ ಪದ್ಧತಿಯೂ ಇದೆ.

ಹಾಡಿ ಹಕ್ಕಲುಗಳ ಕಾಡು ಮರಗಿಡಗಳ ನಡುವೆಯೇ, ಬೃಹದಾಕಾರವಾಗಿ ಬೆಳೆದು ನಿಂತಿರುವ ಕಾಟುಮಾವಿನ ಮರಗಳ ಮಜಲೇ ಇನ್ನೊಂದು ಮಟ್ಟ. ಒಂದೊಂದು ಮರದಲ್ಲೂ ಸಾವಿರಾರು ಪುಟ್ಟ ಪುಟ್ಟ ಹಣ್ಣುಗಳು; ಒಂದೊಂದು ಮರದ ಹಣ್ಣಿನ ರುಚಿಯೂ ವಿಭಿನ್ನ. ಈ ಕಾಟು ಮಾವಿನ ಹಣ್ಣುಗಳು ಮಾಗಲು, ಮಾಗಿ ಮರದಿಂದ ನೆಲಕ್ಕೆ ಬೀಳಲು, ಹಾಗೆ ಬಿದ್ದ ಹಣ್ಣುಗಳನ್ನು ಆರಿಸಿ ತಿನ್ನಲು ಏಪ್ರಿಲ್ ತಿಂಗಳೇ ಬರಬೇಕು!

ಶಾಲೆ ಮಕ್ಕಳಿಗೆ ರಜಾ ಕಾಲ, ಅವರ ಬಾಯಿಗೆ ಮಾವಿನ ಹಣ್ಣುಗಳ ಸಮಾರಾಧನೆ! ನಮ್ಮ ಹಳ್ಳಿಯನ್ನೇ ಆವರಿಸಿರುವ ಕಾಡು ಪ್ರದೇಶದಲ್ಲಿ ಹಲವಾರು ಕಾಟು ಮಾವಿನ ಮರಗಳಿದ್ದವು; ಆ ಮರಗಳ ಕಡೆಗೆ ಪ್ರತಿ ದಿನ ಒಂದು ಬೀಟ್ ಹಾಕುವುದು ಮಕ್ಕಳ ಕೆಲಸ; ಕೆಳಗೆ ಬಿದ್ದಿದ್ದ ನಾಲ್ಕಾರು ಣ್ಣುಗಳನ್ನು, ಅಲ್ಲೇ ಕಚ್ಚಿ ತಿಂದು ಓಟೆಯನ್ನು ಎಸೆದು ‘ಗೊರಟಿನ ಬೆನ್ನರೆ ಓಡು!’ ಎಂದು ಸಂಗಾತಿ ಮಕ್ಕಳಿಗೆ ಹಾಸ್ಯ ಮಾಡಿ, ಕೈಯನ್ನು ಚಡ್ಡಿಗೆ ಒರೆಸಿಕೊಂಡು ಮನೆಗೆ ಬರುವುದು ಬೇಸಗೆಯ ದಿನಚರಿಯ ಅವಿಭಾಜ್ಯ ಅಂಗ.

ಈ ಹಣ್ಣುಗಳ ರುಚಿಯೂ ವಿಭಿನ್ನ, ಅನನ್ಯ; ಒಂದು ಮರದ ಹಣ್ಣಿನ ರುಚಿ ಇನ್ನೊಂದಕ್ಕಿಲ್ಲ. ಲಿಂಬೆ ಹಣ್ಣಿನ ಗಾತ್ರವಿರುವ ಈ ಹಣ್ಣುಗಳಲ್ಲಿ, ಥೇಟ್ ರಸಪೂರಿ ಹಣ್ಣಿನ ರುಚಿ ಇರುವ ತಳಿಗಳೂ ಇವೆ! ಕೆಲವು ಮರಗಳ ಹಣ್ಣುಗಳು ಹುಳಿ; ಅದೆಷ್ಟು ಹುಳಿ ಎಂದರೆ, ಮಕ್ಕಳು ಬಿಡಿ, ಮಂಗಗಳೂ ಅದನ್ನು ತಿನ್ನಲಾರವು!

ಅಂತಹ ಹಣ್ಣುಗಳು ನೆಲದ ಮೇಲೆ ಬಿದ್ದು ಕೊಳೆತುಹೋಗುವುದು ಮಾಮೂಲು; ಬಲು ಉತ್ಸಾಹಿ ಗಳಲ್ಲಿ ಕೆಲವರು ಅವುಗಳನ್ನು ಆಯ್ದು, ರಸ ಮಾಡಿ, ಒಣಗಿಸಿ ‘ಹಣ್‌ಚೆಟ್’ ಮಾಡುತ್ತಿದ್ದುದುಂಟು. ಈಚಿನ ಒಂದೆರಡು ದಶಕಗಳಲ್ಲಿ, ಅಂತಹ ಹಳೆಯ ಮಾವಿನ ಮರಗಳು ನಾನಾ ಕಾರಣಗಳಿಂದ ನಾಶವಾಗಿರುವುದರಿಂದ, ಇಂದಿನ ನಮ್ಮೂರಿನ ಮಕ್ಕಳಿಗೆ ಪ್ರತಿ ದಿನ ಕಾಟು ಮಾವಿನ ಹಣ್ಣುಗಳ ರುಚಿ ನೋಡುವ ಭಾಗ್ಯ ವಿಲ್ಲವೆಂದೇ ಹೇಳಬಹುದು.

ನಮ್ಮ ಹಳ್ಳಿಮನೆಗೆ ತೀರಾ ಹತ್ತಿರದಲ್ಲೇ, ಹಕ್ಕಲಿನ ಅಂಚಿನಲ್ಲಿದ್ದ ಇನ್ನೊಂದು ಬೇಸಗೆ ಹಣ್ಣೆಂದರೆ, ಹೆಬ್ಬಲಸು. ನಾಡಿಗೆಲ್ಲ ಬಿರುಬೇಸಗೆ ಬೀಳಬೇಕು, ಹೆಬ್ಬಲಸು ಹಣ್ಣು ಮರದಿಂದ ಕೆಳಗೆ ಬೀಳಬೇಕು! ಹೆಬ್ಬಲಸಿನ ಮರಗಳು ಸಾಮಾನ್ಯವಾಗಿ, ಬಹು ಎತ್ತರವಾಗಿ, ಬೃಹದಾಕಾರವಾಗಿ ಬೆಳೆಯುತ್ತಿದ್ದವು. ನಮ್ಮ ಮನೆಸುತ್ತಲೂ ಆರೆಂಟು ಹೆಬ್ಬಲಸಿನ ಮರಗಳಿದ್ದವು.

ಅವುಗಳಲ್ಲಿ ಎರಡು ಮರಗಳು ಭಾರೀ ಗಾತ್ರದವು; ಅವುಗಳ ಹಣ್ಣಿನ ರುಚಿ ಸಹ ಅಷ್ಟೇ ಅಪ್ರತಿಮ. ಆ ಎತ್ತರವಾದ ಮರದಿಂದ ಹೆಬ್ಬಲಸಿನ ಕಾಯಿಗಳನ್ನು ಕೊಯ್ಯುವ ಮಹಾ ಸಾಹಸಿಗಳೂ ನಮ್ಮ ಹಳ್ಳಿಯಲ್ಲಿದ್ದರು! ಕಾಡಿನಲ್ಲಿ ಸಿಗುವ ಸಪೂರವಾದ ಬಿಳಲನ್ನು ಒಂದಕ್ಕೊಂದು ಜೋಡಿಸಿ, ನಲವತ್ತು ಅಡಿ ಉದ್ದ ಮಾಡಿಕೊಂಡು, ಅದನ್ನು ಹಿಡಿದು ಆ ಎತ್ತರದ ಮರವೇರಿ, ಒಂದೊಂದೇ ಹಣ್ಣನ್ನು ಬಿಳಲಿನ ತುದಿಗೆ ಕಟ್ಟಿ, ಕೆಳಗೆ ನಿಂತದ್ದವರಿಗೆ ಕಳುಹಿಸುತ್ತಿದ್ದ, ಆ ಮಹಾ ಸಾಹಸಿ!

ಬಲಿತ, ಬಣ್ಣಕ್ಕೆ ತಿರುಗಿದ ಆ ಕಾಯಿಯನ್ನು ಅದೇ ದಿನ ಅಥವಾ ಮರುದಿನ ತಿಂದರೆ ಬಲು ರುಚಿ. ಆ ಹಣ್ಣುಗಳು ನೆಲಕ್ಕೆ ಬಿದ್ದರೆ, ಪೂರ್ತಿ ಅಪ್ಪಚ್ಚಿಯಾಗಿಬಿಡುತ್ತವೆ. ಹೆಬ್ಬಲಸು ಹಣ್ಣಿನ, ಬಂಗಾರದ ವರ್ಣದ ತೊಳೆಗಳ ಗಾತ್ರ ಮಾತ್ರ ಚಿಕ್ಕದು; ಒಂದು ಹಣ್ಣಿನಲ್ಲಿ ಇಪ್ಪತ್ತರಿಂದ ಐವತ್ತು ತೊಳೆಗಳಿರು ತ್ತವೆ.

ಒಂದೊಂದೇ ತೊಳೆಯನ್ನು ಬಾಯಿಗೆ ಹಾಕಿ ಕೊಂಡು, ತಿಂದು, ಅದರೊಳಗಿನ ಬೀಜವನ್ನು ಉಗಿ ಯುವ ಕ್ರಮ. ಮಕ್ಕಳಿಗೆ ಹೆಬ್ಬಲಸಿನ ಹಣ್ಣಿನ ರುಚಿ ಹತ್ತಿದರೆ, ಮತ್ತೊಮ್ಮೆ ಅದನ್ನು ತಿನ್ನಲು ಕಾಯುತ್ತಾ ಕುಳಿತಿರುತ್ತಾರೆ. ಬಲಿತ ಹಣ್ಣನ್ನು ತಂದು, ಮನೆ ಎದುರಿನ ಹುಲ್ಲುಕುತ್ರಿಯ ಬುಡ ದಲ್ಲಿಟ್ಟು, ಒಂದೆರಡು ದಿನಗಳಲ್ಲಿ ಅದು ಹಣ್ಣಾದಾಗ ತಿನ್ನುವುದು, ಬೇಸಗೆಯಲ್ಲಿ ಶಾಲಾ ಮಕ್ಕಳ ನೆಚ್ಚಿನ ಹವ್ಯಾಸ. ಹಲಸಿನ ಮರಕ್ಕೂ ಹೆಬ್ಬಲಿಸಿಗೂ ಹತ್ತಿರದ ಸಂಬಂಧ; ಹಲಸಿನ ರೀತಿಯೇ, ಹೆಬ್ಬಲಸಿನ ಮರದ ಕಾಂಡಗಳು ಬಲು ಗಟ್ಟಿ, ಪೀಠೋಪಕರಣಗಳನ್ನು ತಯಾರಿಸಲು ಪ್ರಶಸ್ತ; ಆದ್ದರಿಂದಲೇ ಇರಬೇಕು, ಬೃಹದಾಕಾರದ ಹೆಬ್ಬಲಸಿನ ಮರಗಳು ಒಂದೊಂ ದಾಗಿ ಗರಗಸಕ್ಕೆ ಬಲಿಯಾಗಿ, ಮೇಜು, ಕುರ್ಚಿ, ಹಲಗೆಗಳಾಗಿ ಬಹುಬೇಗನೆ ಪರಿವರ್ತನೆಗೊಂಡವು; ಈಗ ನಮ್ಮ ಹಳ್ಳಿಯಲ್ಲಿ ರುಚಿಕರ ಹಣ್ಣು ಬಿಡುವ ಬೃಹದಾಕಾರದ ಹೆಬ್ಬಲಸಿನ ಮರಗಳಿಲ್ಲ.

ಸಣ್ಣ ಗಾತ್ರದ ಮರಗಳ ಹಣ್ಣು ಅಷ್ಟೊಂದು ರುಚಿಯಲ್ಲ ಎನ್ನುತ್ತಾರೆ. ಬೇಸಗೆಯಲ್ಲಿ ನಮ್ಮ ಹಳ್ಳಿಯ ಕಾಡುಗಳಲ್ಲಿ ಹಣ್ಣು ನೀಡುವ ಹಲವು ಸಸ್ಯಗಳಿವೆ; ಬನ್ನೇರಳೆ, ಬುಕ್ಕಿ, ಕಿಸ್ಕಾರ, ಚೀಂಪಿ, ಬೆಳಮಾರು, ಕಾರಿ, ಕಾಕಿ, ದಾರು ಹುಳಿ, ಗರ‍್ಚನ ಹಣ್ಣು, ಬೇಸಗೆ ಮುಗಿಯುವ ಹೊತ್ತಿಗೆ ಹಣ್ಣಾಗುವ ಕಾಡು ನೇರಳೆ, ಸಳ್ಳೆ (ಚಳ್ಳೆ).. ಹೀಗೆ. ಇವುಗಳಲ್ಲಿ ಕಿಸ್ಕಾರ (ಇಕ್ಸೋರಾ) ಗಿಡಗಳು ಬೇಸಗೆ ಮಾತ್ರವಲ್ಲ, ಇತರ ಕಾಲದಲ್ಲೂ ಕೆಂಪನೆಯ ಹಣ್ಣುಗಳನ್ನು ಬಿಡುತ್ತವೆ; ಆದರೆ ಗಾತ್ರದಲ್ಲಿ ಬಹು ಚಿಕ್ಕವು; ಶೇಂಗಾ ಬೀಜದಷ್ಟು ಚಿಕ್ಕದಿರುವ ಕಿಸ್ಕಾರ ಹಣ್ಣುಗಳನ್ನು ಕೊಯ್ದು ತಿನ್ನುವುದು ಮಕ್ಕಳ ಹವ್ಯಾಸ ವಾದರೂ, ಅದರಿಂದ ದಾಹವೂ ನೀಗದು, ಹೊಟ್ಟೆಯೂ ತುಂಬದು.

ಅದರ ರೀತಿಯೇ, ಬೆಳಮಾರು, ಬುಕ್ಕಿ, ಗರ‍್ಚ, ಚೀಂಪಿ ಇತ್ಯಾದಿ. ಗರ‍್ಚನ ಹಣ್ಣು ಮತ್ತು ಚೀಂಪಿ ಹಣ್ಣುಗಳನ್ನು ಪೇಟೆಯ ದ್ರಾಕ್ಷಿಗೆ ಹೋಲಿಸಬಹುದು, ರುಚಿಯಲ್ಲಿ ಮತ್ತು ಗಾತ್ರದಲ್ಲಿ. ಕಾಡಿನ ಅಂಚಿನಲ್ಲಿ ಬೆಳೆಯುವ, ಆದರೆ ಕಾಡುಮರವಲ್ಲದ, ಆದರೆ ಉತ್ತಮ ಹಣ್ಣು ನೀಡುವ ನಮ್ಮೂರಿನ ಒಂದು ಮರವನ್ನು ನೆನಪಿಸಿಕೊಳ್ಳಲೇಬೇಕು; ಇದೊಂದು ವಾಣಿಜ್ಯಕ ಮೌಲ್ಯದ ಮರವಾಗಿದ್ದರಿಂದ, ಇದು ಕಾಡು ಪ್ರಭೇದದ ಮರವಲ್ಲ; ಜತೆಗೆ, ನಮ್ಮೂರಲ್ಲಿ ಇಂದು ಕಾಣುವ ಇಂತಹ ಮರಗಳ ಮೂಲ ಆಫ್ರಿಕಾ!

ಇದರ ಹಣ್ಣನ್ನು ಮಕ್ಕಳು ತಿನ್ನುವುದುಂಟು; ಅದರ ಬೀಜಕ್ಕೆ ವಾಣಿಜ್ಯಕ ಮೌಲ್ಯವಿದೆ. ಇದೇ ಗೋಡಂಬಿ. ನಮ್ಮೂರಲ್ಲಿ ಇದನ್ನು ‘ಗೇರು ಮರ’ ಅಥವಾ ‘ಗ್ವಾಯ್ ಮರ’ ಎನ್ನುವುದುಂಟು. ನಮ್ಮಲ್ಲಿನ ಕಾಡುಗಳಲ್ಲಿರುವ ಗುಡ್ಡೆಗೇರು ಎಂಬ ಪ್ರಭೇದದ ಮರಕ್ಕೆ ಹೋಲಿಸಿಕೊಂಡು ಗೇರು ಮರ ಎಂದು ಇದನ್ನು ಕರೆದರು; ಗೋವಾ ಪ್ರದೇಶದಿಂದ ವಲಸೆ ಬಂದ ಸಸ್ಯವಾಗಿದ್ದರಿಂದಾಗಿ, ಗ್ವಾಯ್ ಮರ ಎಂದೂ ಕರೆದರು.

ಇದರ ಹಣ್ಣುಗಳು ಸಾಕಷ್ಟು ವರ್ಣಮಯ; ಕೆಂಪು ಮತ್ತು ಹಳದಿ ಬಣ್ಣದ ಹಣ್ಣುಗಳಲ್ಲಿ ಸಾಕಷ್ಟು ರಸವಿದೆ; ದೊಡ್ಡ ಗಾತ್ರದ ಗೋಡಂಬಿ ಹಣ್ಣಿನಿಂದ ಒಂದು ಲೋಟ ರಸ ತೆಗೆಯಬಹುದು! ಆದರೆ, ಗೋಡಂಬಿ ಹಣ್ಣನ್ನು ತಿಂದರೆ, ಗಂಟಲು ತುಸು ಕೆರೆಯುತ್ತದೆ; ತುಸು ಸಿಹಿ, ತುಸು ಒಗರು ಮತ್ತು ಗಂಟಲು ಕೆರೆತಮಾಡುವ ರುಚಿ ಹೊಂದಿದ ಈ ಹಣ್ಣನ್ನು ಅಂದಿನ ಮಕ್ಕಳು ಖುಷಿಯಿಂದ ತಿನ್ನುತ್ತಿದ್ದರು; ಆದರೆ, ಈಗಿನ ತಲೆಮಾರಿನ ಮಕ್ಕಳು ಗೋಡಂಬಿ ಹಣ್ಣನ್ನು ತಿನ್ನುವುದು ಕಡಿಮೆ. ಗೋಡಂಬಿ ಬೀಜವನ್ನಾದರೆ, ಹುರಿದು ಕೊಟ್ಟರೆ ತಿಂದಾರು!

ನಮ್ಮ ಮನೆಯ ಹಿಂಭಾಗದಲ್ಲಿ, ಮುರಿನ ಹಣ್ಣು ಇದ್ದ ಹಕ್ಕಲಿನಲ್ಲೇ ಹತ್ತಾರು ಗ್ವಾಯ್ ಮರಗಳಿ ದ್ದವು. ಅವುಗಳಲ್ಲಿ, ಒಂದು ಮರದಲ್ಲಿ ಪ್ರತಿದಿನ ನೂರಾರು ಹಣ್ಣುಗಳು ಬಿಡುತ್ತಿದ್ದವು; ಏಪ್ರಿಲ್, ಮೇ ತಿಂಗಳುಗಳಲ್ಲಿ ಪ್ರತಿ ದಿನ ಅಥವಾ ಎರಡು ದಿನಕ್ಕೊಮ್ಮೆ, ಬಿದಿರಿನ ಕೊಕ್ಕೆ ಬಳಸಿ ಅದರ ಹಣ್ಣುಗಳನ್ನು ಕಿತ್ತು, ಬುಟ್ಟಿಯಲ್ಲಿ ತುಂಬಿ ಮನೆಗೆ ತಂದು, ಹಣ್ಣನ್ನು ಬೀಜದಿಂದ ಬೇರ್ಪಡಿಸಿ, ಬೀಜವನ್ನು ಬಿಸಿಲಿಗೆ ಒಣಗಿಸುವುದು ಶಾಲಾ ಮಕ್ಕಳ ಕೆಲಸ.

ಒಂದೆರಡು ಹಣ್ಣನ್ನು ಬಾಯಲ್ಲಿ ಕಚ್ಚಿ, ರಸ ಹೀರಿ, ಉಳಿದ ಭಾಗವನ್ನು ಬಿಸಾಡುತ್ತಿದ್ದವು. ಜಾಸ್ತಿ ಹಣ್ಣಿದ್ದರೆ, ಜಾನುವಾರುಗಳಿಗೆ ಹಾಕುತ್ತಿದ್ದೆವು. ಇದೇ ಹಣ್ಣುಗಳನ್ನು ಬಳಸಿ ಗೋವಾದಲ್ಲಿ -ನ್ನಿ ತಯಾರಿಸುವರಂತೆ. ನಮ್ಮೂರಲ್ಲಿ ಹಿಂದೆ ಇದ್ದ, ಅಂತಹ ಮೌಲ್ಯವರ್ಧನೆಯ ಪದ್ಧತಿ ಈಗ ಮರೆತು ಹೋಗಿದೆ.

ಇಷ್ಟೊಂದು ಬಗೆಯ ಹಣ್ಣುಗಳು ಮನೆಯ ಸುತ್ತಲಿನ ಕಾಡು ಪ್ರದೇಶದಲ್ಲಿ ಬೇಸಗೆಯಲ್ಲಿ ದೊರ ಕುತ್ತಿದ್ದುರಿಂದ, ಶಾಲೆಯ ರಜಾ ದಿನಗಳಲ್ಲಿ, ಸಮಯ ಕಳೆಯಲು ಅಷ್ಟೊಂದು ಕಷ್ಟವಾಗುತ್ತಿರಲಿಲ್ಲ ಎಂದು, ಹೇಳಿದರೆ, ಇಂದಿನ ಮಕ್ಕಳು ನಂಬಲು ತಯಾರಿಲ್ಲ. ಏಕೆಂದರೆ, ಇಂತಹ ವೈವಿಧ್ಯಮಯ ಹಣ್ಣುಗಳನ್ನು ಹುಡುಕಿಕೊಂಡು ಹೋಗಿ, ಕಿತ್ತು ತಿನ್ನಲು ಸರಕಾರಿ ಶಾಲೆಯ ಮಕ್ಕಳಿಂದ ಮಾತ್ರ ಸಾಧ್ಯ, ಎರಡು ತಿಂಗಳು ರಜಾ ಪಡೆಯುವ ಶಾಲಾ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ!