Marilinga Gowda Mali Patil Column: ಗುರುವೆಂದರೆ ಲಘುವಲ್ಲ, ಒತ್ತಡ ತಂತ್ರ ತರವಲ್ಲ
ಶಿಕ್ಷಕರು ಪಾಠ ಹೇಳುವವರು ಮಾತ್ರ ಅಲ್ಲ, ಅವರು ಸಮಾಜದ ನಿರ್ಮಾಪಕರು, ಸಂಸ್ಕೃತಿಯ ಸಂರಕ್ಷಕರು, ಮತ್ತು ಭವಿಷ್ಯದ ಶಿಲ್ಪಿಗಳು. ಒಂದು ರಾಷ್ಟ್ರದ ಪ್ರಗತಿ ಅದರ ಶಿಕ್ಷಕರ ಗುಣಮಟ್ಟ ದಿಂದಲೇ ನಿರ್ಧರಿತವಾಗುತ್ತದೆ ಎಂಬುದು ಶಾಶ್ವತ ಸತ್ಯ. ಇಂಥ ಶಿಕ್ಷಕರು ಪಾಠ ಮಾಡುವುದರ ಬದಲಾಗಿ ಗಣತಿ ಹೆಸರಿನಲ್ಲಿ ಮನೆ ಮನೆ ತಿರುಗುವಂತಾಗಿದೆ.

-

ಕಳಕಳಿ
ಮರಿಲಿಂಗಗೌಡ ಮಾಲಿ ಪಾಟೀಲ್
ಬೆಂಗಳೂರಿನಂಥ ನಗರಗಳಲ್ಲಿ ಮನೆ ಮನೆಗಳಿಗೆ ಹೋಗುವುದು ಸುಲಭವಾಗಿರಬಹುದು. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಹೋಗಿ ನೋಡಿದರೆ, ಶಿಕ್ಷಕರಿಗೆ ನೀಡಲಾದ ಗಣತಿ ಕಾರ್ಯವು ‘ಶಿಕ್ಷೆ’ಯಾಗಿದೆ ಎಂಬುದರಲ್ಲಿ ಅತಿಶಯೋಕ್ತಿ ಇಲ್ಲ. ಗುಡ್ಡಗಳನ್ನು ಹತ್ತಿ ಇಳಿಯಬೇಕು, ಒಂದು ಮನೆಗೂ ಇನ್ನೊಂದು ಮನೆಗೂ ಕಿಲೋಮೀಟರ್‌ಗಳಷ್ಟು ಅಂತರ ವಿದೆ.
ಪ್ರಸ್ತುತ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ವಿಷಯ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಗಣತಿ. ಆದರೆ ಜನಸಾಮಾನ್ಯರ ದೃಷ್ಟಿಯಲ್ಲಿ ಅದು ಜಾತಿಗಣತಿ. ಯಾರು ಎಷ್ಟೇ ಹೇಳಿದರೂ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಗಣತಿಯೆಂದು ಹೇಳುವವರ ಸಂಖ್ಯೆ ಕಡಿಮೆಯೇ ಇದೆ. ಮಾಹಿತಿ ನೀಡುವುದು ಕಡ್ಡಾಯವಲ್ಲ ಎಂದು ಗಣತಿಗೆ ಸಹಕರಿಸದವರ ಸಂಖ್ಯೆಯೂ ಸಾಕಷ್ಟಿದೆ. ಮಾಹಿತಿ ನೀಡಬೇಡಿ ಎಂದು ಬಹಿರಂಗವಾಗಿ ಕರೆ ಕೊಡುವವರು ಹೆಚ್ಚಾಗುತ್ತಿದ್ದಂತೆ ಗಣತಿ ಮಾಡುವವರನ್ನು ತಾತ್ಸಾರ ದಿಂದ ಕಾಣುವುದೂ ಸರ್ವೇಸಾಮಾನ್ಯವಾಗುತ್ತಿದೆ.
ಇದರಿಂದ ನೇರವಾಗಿ ತೊಂದರೆ ಅನುಭವಿಸುತ್ತಿರುವವರು ಗಣತಿ ಮಾಡುವವರು ಅರ್ಥಾತ್ ಶಿಕ್ಷಕರು. ಶಿಕ್ಷಕರಂತೂ ಇದನ್ನು ಅಕ್ಷರಶಃ ‘ಶಿಕ್ಷೆ’ ಎಂದು ಭಾವಿಸುವಂತಾಗಿದೆ. ಭಾರತೀಯ ಪರಂಪರೆಯಲ್ಲಿ ಶಿಕ್ಷಕರಿಗೆ ಅತ್ಯುನ್ನತ ಸ್ಥಾನ ನೀಡಲಾಗಿದೆ. ಗುರುವನ್ನು ದೇವರ ಸ್ಥಾನಕ್ಕೇರಿಸ ಲಾಗಿದೆ.
ಪೋಷಕರು ಜೀವನ ನೀಡಿದರೆ, ಗುರುಗಳು ಜೀವನದ ಅರ್ಥವನ್ನು ಕಲಿಸುತ್ತಾರೆ. ಪ್ರಾಚೀನ ಗುರುಕುಲ ವ್ಯವಸ್ಥೆಯಲ್ಲಿ ಗುರುಗಳು ತಮ್ಮ ಶಿಷ್ಯರನ್ನು ಕೇವಲ ವಿದ್ಯಾಭ್ಯಾಸದ ಅಲ್ಲದೆ, ಆಚಾರ-ವಿಚಾರ, ಧರ್ಮ-ನೈತಿಕತೆ, ಶೌರ್ಯ ಹಾಗೂ ಸೇವಾಭಾವಗಳಲ್ಲಿ ತೊಡಗಿಸುತ್ತಿದ್ದರು.
ಇದನ್ನೂ ಓದಿ: Marilinga Gowda Mali Patil Column: ಮಾಹಿತಿ ಹಕ್ಕು ಕಾಯಿದೆ ಎಂದರೆ ಭ್ರಷ್ಟರಿಗೆ ಭಯವೇಕೆ...?
ಅಂಥ ಗುರು-ಶಿಷ್ಯ ಸಂಬಂಧವು ಮಾನವ ಜೀವನದ ಅತ್ಯಂತ ಪವಿತ್ರ ಸಂಬಂಧಗಳಲ್ಲಿ ಒಂದು. ಇಂದಿನ ದಿನಗಳಲ್ಲಿ ಆ ಸಂಬಂಧದ ಮಾದರಿ ಬದಲಾಗಿದ್ದರೂ, ಅದರ ಅಂತರಂಗ ಮೌಲ್ಯಗಳು ಶಾಶ್ವತವಾಗಿವೆ. ಮಾನವನ ಜೀವನದಲ್ಲಿ ಜ್ಞಾನವೇ ಅತ್ಯಂತ ಅಮೂಲ್ಯವಾದ ಸಂಪತ್ತಾಗಿದೆ. ಈ ಜ್ಞಾನವನ್ನು ವ್ಯಕ್ತಿಗೆ ನೀಡುವವರು ಶಿಕ್ಷಕರು.
ಶಿಕ್ಷಕರು ಪಾಠ ಹೇಳುವವರು ಮಾತ್ರ ಅಲ್ಲ, ಅವರು ಸಮಾಜದ ನಿರ್ಮಾಪಕರು, ಸಂಸ್ಕೃತಿಯ ಸಂರಕ್ಷಕರು, ಮತ್ತು ಭವಿಷ್ಯದ ಶಿಲ್ಪಿಗಳು. ಒಂದು ರಾಷ್ಟ್ರದ ಪ್ರಗತಿ ಅದರ ಶಿಕ್ಷಕರ ಗುಣಮಟ್ಟ ದಿಂದಲೇ ನಿರ್ಧರಿತವಾಗುತ್ತದೆ ಎಂಬುದು ಶಾಶ್ವತ ಸತ್ಯ. ಇಂಥ ಶಿಕ್ಷಕರು ಪಾಠ ಮಾಡುವುದರ ಬದಲಾಗಿ ಗಣತಿ ಹೆಸರಿನಲ್ಲಿ ಮನೆ ಮನೆ ತಿರುಗುವಂತಾಗಿದೆ.
ಬೆಂಗಳೂರಿನಂಥ ನಗರಗಳಲ್ಲಿ ಮನೆ ಮನೆಗಳಿಗೆ ಹೋಗುವುದು ಸುಲಭವಾಗಿರಬಹುದು. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಹೋಗಿ ನೋಡಿದರೆ, ಶಿಕ್ಷಕರಿಗೆ ನೀಡಲಾದ ಗಣತಿ ಕಾರ್ಯವು ‘ಶಿಕ್ಷೆ’ ಯಾಗಿದೆ ಎಂಬುದರಲ್ಲಿ ಅತಿಶಯೋಕ್ತಿ ಇಲ್ಲ ಎಂಬುದು ಅರಿವಾಗುತ್ತದೆ. ಗುಡ್ಡಗಳನ್ನು ಹತ್ತಿ ಇಳಿಯಬೇಕು, ಒಂದು ಮನೆಗೂ ಇನ್ನೊಂದು ಮನೆಗೂ ಕಿಲೋಮೀಟರ್‌ಗಳಷ್ಟು ಅಂತರವಿದೆ.
ಸಾರಿಗೆ ಸೌಲಭ್ಯ ಸರಿಯಾಗಿಲ್ಲದ ಸ್ಥಳಗಳಲ್ಲಿ ನಡೆದೇ ಕ್ರಮಿಸಬೇಕು. ಹಲವು ಪ್ರಶ್ನೆಗಳನ್ನು ಕೇಳು ವಾಗ ‘ಅದೆ ನಿಮಗ್ಯಾಕೆ’ ಎಂಬ ಪ್ರಶ್ನೆಯನ್ನೂ ಎದುರಿಸಬೇಕು. ಒಂದು ಮನೆಯ ಗಣತಿ ಕಾರ್ಯ ಮುಗಿಯುವಷ್ಟರಲ್ಲಿ ‘ಹಮ್ಮಯ್ಯ’ ಎಂಬ ಉದ್ಗಾರ ತಾನೇತಾನಾಗಿ ಹೊರಹೊಮ್ಮುತ್ತದೆ. ಶಾಲೆ ಯಲ್ಲಿ ಪಾಠ ಮಾಡಿ ಮಕ್ಕಳ ಮನಸ್ಸನ್ನು ಅರಳಿಸಬೇಕಾದ ಶಿಕ್ಷಕರು ಬಿಸಿಲು, ಮಳೆ ಎನ್ನದೆ ಮನೆ ಮನೆಗೆ ತಿರುಗಬೇಕಾಗಿದೆ.
ಹಿಂದುಳಿದ ವರ್ಗಗಳ ಆಯೋಗವು ಗಣತಿಯ ಪ್ರಶ್ನಾವಳಿಗಳನ್ನು ತಯಾರಿಸುವಾಗ ಸರಿಯಾದ ಪೂರ್ವಸಿದ್ಧತೆ ಮಾಡಿಲ್ಲದುದರ ಪರಿಣಾಮವನ್ನೂ ಶಿಕ್ಷಕರು ಎದುರಿಸಬೇಕಾಗಿದೆ. ಅಷ್ಟೊಂದು ಪ್ರಶ್ನೆಗಳು ಅನಗತ್ಯ ಎಂದು ಸ್ವತಃ ಡಿಸಿಎಂ ಡಿ.ಕೆ.ಶಿವಕುಮಾರ್‌ರವರೇ ಬಹಿರಂಗವಾಗಿ ಹೇಳಿದ ಬಳಿಕ ಜನರೂ ಅದೇ ಪ್ರಶ್ನೆಯನ್ನು ಕೇಳತೊಡಗಿದ್ದಾರೆ.
ಕೆಲವು ಜನರಂತೂ ‘ಉತ್ತರಿಸುವುದಿಲ್ಲ’ ಎಂದೂ ನೇರವಾಗಿ ಹೇಳುವುದಿಲ್ಲ. ಉತ್ತರಿಸುತ್ತಾರೆ, ಆದರೆ ನಿಮಗ್ಯಾಕೆ ಎನ್ನುತ್ತಾರೆ. ಹಾಗೆಂದು ನಿರಾಕರಿಸುತ್ತಾರಾ ಎಂದರೆ ಅದೂ ಇಲ್ಲ. ಮುಖವನ್ನು ಗಡಿಗೆ ಗಾತ್ರ ಮಾಡಿಕೊಂಡು ಮುನಿಸಿನ ಮಾಹಿತಿಯನ್ನೂ ನೀಡುತ್ತಾರೆ. ಪ್ರಶ್ನೆಗಳನ್ನು ಕೇಳಬೇಕಾದ ಶಿಕ್ಷಕರೇ ಕೇಳಬೇಕೋ ಬೇಡವೋ ಎಂದು ಕಂಗಾಲಾಗುತ್ತಾರೆ. ಇಲ್ಲಿ ಗುರು ಲಘು ಆಗುತ್ತಾನೆ.
ಉದಾಹರಣೆಗೆ ‘ಮದುವೆ ಆಗಿ ಎಷ್ಟು ವರ್ಷ ಆಯ್ತು?’ ಎಂದು ಗಣತಿದಾರ ಕೇಳಿದಾಗ ‘ಯಾಕೆ?’ ಎನ್ನುವುದೇ ಪ್ರಥಮ ಪ್ರತಿಕ್ರಿಯೆ. ವಾಸ್ತವವಾಗಿ ಈ ಪ್ರಶ್ನೆಯನ್ನು ಇಟ್ಟಿದ್ದಕ್ಕೆ ಕಾರಣವಿದೆ. ಯಾವ ವಯಸ್ಸಿನಲ್ಲಿ ಮದುವೆ ಆಯಿತು ಎನ್ನುವುದು ಸಾಮಾಜಿಕ ಸ್ಥಿತಿಗತಿಗಳ ಮೇಲೆ ಆಧಾರವಾಗಿದೆ. ಈ ಬಗ್ಗೆ ಆಡಳಿತ ಸೂತ್ರ ಹಿಡಿದವರು ಜಾಹೀರಾತುಗಳ ಮೂಲಕ ಜನರಿಗೆ ಮಾಹಿತಿ ನೀಡಬಹುದಿತ್ತು.
ಕಳೆದ ಬಾರಿಯ ಕಾಂತರಾಜು ವರದಿ ಸಹ 50ಕ್ಕೂ ಅಧಿಕ ಪ್ರಶ್ನೆಗಳನ್ನು ಒಳಗೊಂಡ ಸಮೀಕ್ಷೆ ಆಗಿತ್ತು. ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳನ್ನು ಅರಿಯಬೇಕಿದ್ದರೆ ಇಷ್ಟೆ ಪ್ರಶ್ನೆಗಳು ಅಗತ್ಯ ಎಂದು ಜನರಿಗೆ ಮನವರಿಕೆ ಮಾಡಿ ನಂತರವೇ ಗಣತಿ ಆರಂಭಿಸಬಹುದಿತ್ತು. ಯಾವ ಪ್ರಶ್ನೆಗಳು ಅಗತ್ಯ, ಯಾವುದು ಅನಗತ್ಯ ಎಂದು ತಜ್ಞರ ಸಮಿತಿಯ ಮುಂದೆ ಚರ್ಚಿಸಿ ಅನಗತ್ಯ ಎನಿಸುವ ಪ್ರಶ್ನೆಗಳನ್ನು ಕೈಬಿಡಬಹುದಿತ್ತು.
ಆಗ, ಅಷ್ಟೊಂದು ಪ್ರಶ್ನೆಗಳು ಯಾಕೆ ಎಂಬುದಾಗಿ ಸ್ವತಃ ಉಪಮುಖ್ಯಮಂತ್ರಿಗಳು ಕೇಳುವ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಇಷ್ಟೆಲ್ಲದರ ಮಧ್ಯೆ ಶಿಕ್ಷಕರು ಮನೆ ಮನೆಗೆ ತಿರುಗಿ ಗಣತಿ ಕಾರ್ಯದಲ್ಲಿ ತೊಡಗಿಕೊಳ್ಳಬೇಕಿದೆ. ಜನರ ತಾತ್ಸಾರ ಮಾತ್ರವೇ ಅಲ್ಲ, ಇತರ ಸಮಸ್ಯೆಗಳನ್ನು ಎದುರಿಸಬೇಕಿದೆ. ಶಿಕ್ಷಕರಿಗೆ ನಾಯಿ ಕಚ್ಚಿದ ಘಟನೆಗಳೂ ನಡೆದಿವೆ. ಪೋಷಕರು ಶಿಕ್ಷಕರನ್ನು ಒರಟಾಗಿ ನಡೆಸಿಕೊಂಡಿ ರುವುದೂ ಇದೆ. ಇಂಥ ಘಟನೆಗಳನ್ನು ನೋಡಿದ ಪುಟ್ಟ ಮಕ್ಕಳು ಶಿಕ್ಷಕರನ್ನು ಗೌರವಿಸುವುದು ಸಾಧ್ಯವೆ? ಎಲ್ಲಾ ಶಿಕ್ಷಕರಿಗೂ ಗಣತಿ ಕಾರ್ಯವನ್ನು ಕಡ್ಡಾಯ ಮಾಡಿರುವುದು ಇನ್ನೊಂದು ಅನುಚಿತ ನಡೆ. ಈ ಕೆಲಸವನ್ನು ನಿರಾಕರಿಸಿದ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳುವ ಬೆದರಿಕೆ ಹುಟ್ಟಿಸಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಾಗಿದೆ.
ವಯಸ್ಸಾದವರು, ಕಾಯಿಲೆ ಪೀಡಿತರು ಉಸಿರೆತ್ತದೆ ಮನೆ ಮನೆಗೆ ತಿರುಗಬೇಕಿದೆ. ತುಮಕೂರಿನಲ್ಲಿ ಗೂಗಲ್ ಮ್ಯಾಪ್ ಆಧರಿಸಿ ಗಣತಿಗೆ ಹೋದ ಶಿಕ್ಷಕರೊಬ್ಬರು ಮಣ್ಣಿನ ರಸ್ತೆಯಲ್ಲಿ ಬೈಕ್ ಚಲಾಯಿಸುವಾಗ ಬಿದ್ದು ಕೈ ಮೂಳೆ ಮುರಿದುಕೊಂಡ ಘಟನೆ ಜರುಗಿದೆ. ನಾಯಿ ಕಚ್ಚಬಹುದು ಎಂಬ ಆತಂಕದಲ್ಲಿ ಜೋರಾಗಿ ಬೈಕ್ ಚಲಾಯಿಸಿ ಆಕ್ಸಿಡೆಂಟ್ ಆದ ಘಟನೆಯೂ ವರದಿಯಾಗಿದೆ.
ಇದೆಲ್ಲದರ ಬದಲು ಶಿಕ್ಷಕರಿಗೆ ಗೌರವಧನ ಹೆಚ್ಚು ಮಾಡಿ ಯಾರು ಆಸಕ್ತರೋ ಅವರಿಂದ ಮಾತ್ರ ಕೆಲಸ ಮಾಡಿಸಬಹುದಿತ್ತಲ್ಲ. ಇಷ್ಟ ಇರಲಿ, ಇಲ್ಲದಿರಲಿ ಹೇಳಿದ ಕೆಲಸ ಮಾಡಲೇಬೇಕು ಎನ್ನುವುದು ಸರ್ವಾಽಕಾರಿ ಧೋರಣೆ ಅಲ್ಲವೆ? ಪ್ರಜಾಪ್ರಭುತ್ವ ವ್ಯವಸ್ಥೆಯೊಂದರಲ್ಲಿ ಇಂಥ ಮನೋಸ್ಥಿತಿ ಸರಿಯೆ? ಶಿಕ್ಷಕರನ್ನು ಹೊರತುಪಡಿಸಿ ಗಣತಿ ನಡೆಸುವುದು ಸಾಧ್ಯವೇ ಇಲ್ಲವೆ? ನಿರುದ್ಯೋಗಿ ವಿದ್ಯಾ
ವಂತರು ನಮ್ಮಲ್ಲಿ ಸಾಕಷ್ಟಿದ್ದು ಅವರಿಗೆ ಈ ಜವಾಬ್ದಾರಿ ವಹಿಸಬಹುದಿತ್ತಲ್ಲವೆ? ಯಾಕೆ ಈ ಮಾತು ಎಂದರೆ, ಗಣತಿ ಅಂದುಕೊಂಡ ಸಮಯದಲ್ಲಿ ಮುಗಿಯದೆ, ಅದರ ಮುಂದುವರಿಕೆಗಾಗಿ ಶಾಲೆಗಳಿಗೆ ರಜಾ ಮುಂದುವರಿಸಲಾಗಿದೆ. ಇದರಿಂದ ಸಕಾಲದಲ್ಲಿ ಪಾಠ ಪ್ರವಚನಗಳನ್ನು ಮುಗಿಸುವುದು ಸಾಧ್ಯವಿಲ್ಲ.
ಅಧ್ಯಾಪಕರು ಸಮಯದ ಒತ್ತಡದಿಂದ ಸರಿಯಾಗಿ ಪಾಠ ಮಾಡದೆ, ಅದು ವಿದ್ಯಾರ್ಥಿಗಳಿಗೆ ಅರ್ಥ ವಾಗದೇ ವಿದ್ಯಾರ್ಥಿ, ಅಧ್ಯಾಪಕ, ಪೋಷಕರಿಗೆ ಎಲ್ಲರಿಗೂ ತೊಂದರೆ. ಅಥವಾ ಈಗ ರಜಾ ಮುಂದು ವರಿಸಲಾಗಿದೆ ಎಂಬ ಕಾರಣಕ್ಕೆ ಹಬ್ಬದ ಸಂದರ್ಭದಲ್ಲಿಯೇ ರಜಾ ಕಟ್ ಮಾಡಿ ಜನವಿರೋಧಿ ಸರಕಾರ ಎಂಬ ಹಣೆಪಟ್ಟಿ ಹಚ್ಚಲ್ಪಟ್ಟರೂ ಆಶ್ಚರ್ಯವಿಲ್ಲ.
ಒಟ್ಟಿನಲ್ಲಿ ಒಂದು ತಪ್ಪು, ಸರಣಿ ತಪ್ಪುಗಳಿಗೆ ಅವಕಾಶ ಮಾಡಿಕೊಡುವಂತೆ, ಸರಿಯಾದ ಪೂರ್ವಸಿದ್ಧತೆ ಇಲ್ಲದ ಗಣತಿಕಾರ್ಯ ಇನ್ನಷ್ಟು ಸಮಸ್ಯೆಗಳಿಗೆ ದಾರಿ ಮಾಡಿಕೊಡಲಿದೆ. ಶಿಕ್ಷಕರಿಗೆ ಇಷ್ಟೆ ಸಮಸ್ಯೆಗಳಿದ್ದರೂ ಶಿಕ್ಷಕರ ಕ್ಷೇತ್ರದಿಂದ ಪ್ರತಿನಿಧಿಸಿ ಗೆದ್ದ ಜನಪ್ರತಿನಿಧಿಗಳು ಅವರ ಬವಣೆಗಳ ಬಗ್ಗೆ ಗಮನಹರಿಸಿಲ್ಲ.
ಶಿಕ್ಷಣ ಸಚಿವರೂ ಶಿಕ್ಷಕರ ಬಗ್ಗೆ ಸಹಾನುಭೂತಿ ತೋರಿಸುವ ಬದಲು ಗಣತಿಯನ್ನೇ ಬೆಂಬಲಿಸು ತ್ತಿದ್ದಾರೆ. ಒಟ್ಟಿನಲ್ಲಿ ಶಿಕ್ಷಕರ ಗೋಳು ಕೇಳೋರಿಲ್ಲ. ಇಷ್ಟೆ ಕಷ್ಟಪಟ್ಟು ಮಾಡಿದ ಗಣತಿ ಅಂಗೀಕಾರ ವಾಗುತ್ತದೆ ಎನ್ನುವ ಗ್ಯಾರಂಟಿ ಇಲ್ಲ. ಯಾಕೆಂದರೆ ಮಾಹಿತಿ ಕೊಡಲು ನಿರಾಕರಿಸುವವರ ಸಂಖ್ಯೆ ದೊಡ್ಡದಿದೆ. ಅರೆಬರೆ ಮಾಹಿತಿ ತೆಗೆದುಕೊಂಡು ಪ್ರಯೋಜನವಾದರೂ ಏನು ಎಂಬ ಕಾರಣಕ್ಕೆ ಈ ಗಣತಿಯ ಮಾಹಿತಿಯನ್ನು ನಿರಾಕರಿಸಿದರೂ ಆಶ್ಚರ್ಯವಿಲ್ಲ.
ಈ ಮೊದಲು ಬಂದ ಕಾಂತರಾಜ್ ವರದಿಯಲ್ಲಿ ಬಹಳಷ್ಟು ಪ್ರಶ್ನೆಗಳನ್ನು ಕೇಳಿ ಮಾಹಿತಿ ಸಂಗ್ರಹಿಸ ಲಾಗಿತ್ತು. ಆದರೆ ಅಲ್ಲಿರುವ ಮಾಹಿತಿ ಹಳೆಯದು ಎಂಬ ಕಾರಣಕ್ಕೆ ಆ ವರದಿಯನ್ನು ಮೂಲೆಗಿರಿಸ ಲಾಗಿದೆ. ಹೀಗಿರುವಾಗ ಈ ಬಾರಿ ಸ್ವತಃ ಉಪಮುಖ್ಯಮಂತ್ರಿಗಳು ಪ್ರಶ್ನಾವಳಿಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವರು ಗಣತಿ ನಿರ್ವಹಿಸುವವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಮಾಹಿತಿ ನೀಡುವುದು ಕಡ್ಡಾಯವಲ್ಲ ಎಂದು ಸಾರ್ವಜನಿಕವಾಗಿ ಕರೆಕೊಟ್ಟ ಘಟನೆಗಳೂ ನಡೆದಿವೆ. ‘ಮಾಹಿತಿ ನಿರಾಕರಿಸಲಾಗಿದೆ’ ಎಂಬ ಮಾಹಿತಿಯೇ ಗಣತಿಯಲ್ಲಿ ಹೆಚ್ಚಿದ್ದರೆ ಈ ಗಣತಿಯನ್ನು ಪಕ್ಕಕ್ಕಿಡುವ ಸಾಧ್ಯತೆಗಳಿವೆ. ಹಾಗಿದ್ದರೆ ಇಷ್ಟೆ ವ್ಯರ್ಥ ಕಸರತ್ತು ನಡೆಸಿದ್ದರ ಪರಿಣಾಮವೇನು? ಇನ್ನೊಂದು ಗಣತಿ ಮಾಡ್ತಾರಾ? ಇಂಥ ಗಣತಿಗಳನ್ನು ನಡೆಸುವ ಮುನ್ನ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳ ಬೇಕು.
ಆಪ್‌ನಲ್ಲಿರುವ ಪ್ರಶ್ನಾವಳಿಗಳ ಪುಸ್ತಕವನ್ನು ಹಂಚಲು ಸಿದ್ಧತೆ ಮಾಡಲಾಗಿತ್ತು. ಯಾರ ಮೂಲಕ ಹಂಚಬೇಕೆಂದು ನಿರ್ಧರಿಸಲಾಗಿತ್ತೋ ಅವರು ಲಭ್ಯವಿಲ್ಲ ಎಂಬ ಕಾರಣ ಕೇಳಿ ಬಂದಿದೆ. ಕೆಲವು ಕಡೆ ವಿತರಿಸಿದ್ದೂ ಹೌದು. ಆದರೆ ಒಟ್ಟಾರೆಯಾಗಿ ಜನರನ್ನು ತಲುಪಲು ಸಾಧ್ಯವಾಗಿಲ್ಲ. ಇದೆಲ್ಲವನ್ನೂ ಮಾಡಲು ಸಮಯ ಬೇಕು.
ಆದರೆ ಕೇಂದ್ರ ಸರಕಾರ ಗಣತಿ ನಡೆಸಲಿದೆ ಎನ್ನುವ ಕಾರಣಕ್ಕೆ ತರಾತುರಿಗೆ ಬಿದ್ದು ತುರ್ತಾಗಿ ಗಣತಿ ನಡೆಸಲಾಗಿದೆ. ಗಣತಿಯ ಸಂದರ್ಭದಲ್ಲಿ ಯಾವೆ ಪ್ರಶ್ನೆಗಳನ್ನು ಕೇಳುತ್ತಾರೆ, ಆ ಪ್ರಶ್ನೆಗಳನ್ನು ಕೇಳಲು ಕಾರಣವೇನು? ಆ ಮಾಹಿತಿಯನ್ನು ತೆಗೆದುಕೊಳ್ಳುವುದರ ಪರಿಣಾಮವೇನು? ಎಂಬುದನ್ನು ಜನರಿಗೆ ಮನದಟ್ಟು ಮಾಡಿ ಜನರೇ ಸ್ವಯಂಪ್ರೇರಣೆಯಿಂದ ಗಣತಿದಾರ ಕೇಳುವ ಎಲ್ಲಾ ಪ್ರಶ್ನೆ ಗಳಿಗೆ ಉತ್ತರಿಸುವಂತೆ ಮಾಡಬಹುದಿತ್ತು.
ಇಂದು ಇಲೆಕ್ಟ್ರಾನಿಕ್ ಮಾಧ್ಯಮಗಳಿವೆ, ವಾರ್ತಾ ಪತ್ರಿಕೆಗಳಿವೆ, ಸಾಮಾಜಿಕ ಜಾಲತಾಣಗಳಿವೆ. ಈ ಮಾಧ್ಯಮಗಳಲ್ಲಿ ಚರ್ಚಿಸಿ ಅಗತ್ಯ ಪ್ರಶ್ನೆಗಳನ್ನು ಮಾತ್ರವೇ ಗಣತಿಯ ಸಂದರ್ಭದಲ್ಲಿ ಕೇಳಬೇಕು ಮತ್ತು ಪ್ರತಿ ಪ್ರಶ್ನೆಗೂ ಉತ್ತರಿಸುವುದು ಸಾಮಾಜಿಕ ಮತ್ತು ವೈಯಕ್ತಿಕ ಹಿತದೃಷ್ಟಿಯಿಂದ ಅನಿವಾರ್ಯ ಎಂಬ ಅರಿವನ್ನು ಜನರಲ್ಲಿ ಮೂಡಿಸಿದ ಬಳಿಕವೇ ಗಣತಿಯಂಥ ಕಾರ್ಯಕ್ರಮಕ್ಕೆ ಕೈಹಾಕಬೇಕಿತ್ತು.
ಇಂದಿನ ಸಮಾಜದಲ್ಲಿ ಶಿಕ್ಷಕರು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ತಾಂತ್ರಿಕ ಬದಲಾವಣೆಗಳು, ಪೋಷಕರ ಅತಿಯಾದ ನಿರೀಕ್ಷೆಗಳು, ಸಾಮಾಜಿಕ ಒತ್ತಡಗಳು, ಮತ್ತು ಶಿಕ್ಷಣದ ವ್ಯಾಪಾರೀಕರಣ- ಇವೆಲ್ಲವೂ ಶಿಕ್ಷಕರ ಕೆಲಸವನ್ನು ಸವಾಲಾಗಿಸಿದೆ. ಆದರೆ ಈ ಎಲ್ಲ ಸವಾಲುಗಳ ನಡುವೆಯೂ ತಮ್ಮ ಸೇವೆಯನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುವ ಶಿಕ್ಷಕರು ಸಮಾಜಕ್ಕೆ ನಿಜವಾದ ಆಶಾಕಿರಣಗಳು.
ಅವರು ತ್ಯಾಗ, ಶ್ರದ್ಧೆ ಮತ್ತು ನಿಷ್ಠೆಯಿಂದ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಾರೆ. ಭಾರತದ ಇತಿಹಾಸದಲ್ಲಿ ಅನೇಕ ಮಹಾನ್ ಶಿಕ್ಷಕರಿzರೆ. ಇವರು ಶಿಕ್ಷಣದ ಮಹತ್ವವನ್ನು ತಮ್ಮ ಜೀವನದ ಮೂಲಕ ತೋರಿಸಿದ್ದಾರೆ. ಇವರು ಶಿಕ್ಷಕ ವೃತ್ತಿಯನ್ನು ಕೇವಲ ಉದ್ಯೋಗವಲ್ಲ, ಸೇವೆಯ ಧರ್ಮ ವೆಂದು ಪರಿಗಣಿಸಿದ್ದರು.
ಒಬ್ಬ ಉತ್ತಮ ಶಿಕ್ಷಕನು ಕೇವಲ ಪಾಠ ಹೇಳುವುದಲ್ಲದೆ ವಿದ್ಯಾರ್ಥಿಗಳ ಮನಸ್ಸನ್ನು ಅರಿಯುತ್ತಾನೆ. ಅವನೊಳಗೆ ಸಹಾನುಭೂತಿ, ಧೈರ್ಯ, ಸಹನೆ ಮತ್ತು ಪ್ರಾಮಾಣಿಕತೆ ಇರಬೇಕು. ಅವರು ತಮ್ಮ ಕಾರ್ಯದ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾಗಿರಬೇಕು. ಒಟ್ಟಾರೆಯಾಗಿ ಶಿಕ್ಷಕರು ಸಮಾಜದ ಅತಿ ಮುಖ್ಯ ಕಂಬಗಳು. ಅವರಿಲ್ಲದೆ ಶಿಕ್ಷಣ ಸಾಧ್ಯವಿಲ್ಲ, ಶಿಕ್ಷಣವಿಲ್ಲದೆ ಅಭಿವೃದ್ಧಿ ಸಾಧ್ಯವಿಲ್ಲ. ರಾಷ್ಟ್ರದ ಪ್ರಗತಿಯ ಶಿಲ್ಪಿಗಳು ಶಿಕ್ಷಕರು.
ಅವರ ಗೌರವವನ್ನು ಕೇವಲ ಒಂದು ದಿನದ ಆಚರಣೆಯ ಮೂಲಕವಲ್ಲ, ಅವರ ಸೇವೆಯನ್ನು ಕೃತಜ್ಞತೆಯಿಂದ ಗುರುತಿಸುವ ಮೂಲಕ ನಾವು ತೋರಿಸಬೇಕು. ಅವರು ನೀಡಿದ ಜ್ಞಾನ, ಮಾರ್ಗ ದರ್ಶನ ಮತ್ತು ಮೌಲ್ಯಗಳೇ ನಮ್ಮ ಜೀವನದ ದಾರಿದೀಪಗಳು. ಆದ್ದರಿಂದ ಶಿಕ್ಷಕರು ರಾಷ್ಟ್ರದ ಆತ್ಮ ಎನ್ನುವುದು ಅತಿಶಯೋಕ್ತಿಯಲ್ಲ.
ಸಾರವಾಗಿ ಹೇಳುವುದಾದರೆ, ಸಮಾಜದ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಅನನ್ಯ. ಅವರ ಕೈಯಲ್ಲಿ ಮುಂದಿನ ಪೀಳಿಗೆಯ ಭವಿಷ್ಯವಿದೆ. ಅವರು ಬಿತ್ತುವ eನಬೀಜಗಳು ಒಂದು ದಿನ ರಾಷ್ಟ್ರದ ಬೆಳಕಾ ಗುತ್ತವೆ. ಇಂಥ ಶಿಕ್ಷಕರನ್ನು ಹೆದರಿಸಿ ಬೆದರಿಸಿ, ಒತ್ತಡ ತಂತ್ರದ ಹಾದಿ ಹಿಡಿದು ಬಿಸಿಲು-ಮಳೆಯಲ್ಲಿ ಮನೆ ಮನೆ ತಿರುಗುವಂತೆ ಮಾಡಲಾಗಿದೆ.
ಗಣತಿ ಅಂದಾಕ್ಷಣ ಶಿಕ್ಷಕರ ಹೆಸರೇ ಯಾಕೆ ಬರುತ್ತದೋ ಗೊತ್ತಿಲ್ಲ. ಸಮಾಜವನ್ನು ರೂಪುಗೊಳಿ ಸುವ ಶಿಕ್ಷಕರಿಗೆ ಗಣತಿಗಳನ್ನು ಕಡ್ಡಾಯ ಮಾಡುವುದು ತರವಲ್ಲ. ಆಗಿದ್ದು ಆಗಿದೆ. ಅದನ್ನು ತಿದ್ದುವುದು ಸಾಧ್ಯವಿಲ್ಲ. ಆಡಳಿತ ಸೂತ್ರ ಹಿಡಿದವರು ಮುಂದಿನ ಬಾರಿಯಾದರೂ ವಿವೇಕದಿಂದ ವರ್ತಿಸಲಿ.
(ಲೇಖಕರು ಸಾಮಾಜಿಕ ಹೋರಾಟಗಾರರು)