Harish Kera Column: ಹೊರಗೆ ಬಿಸಿಗಾಳಿ, ಒಳಗೆ ಹಿಮಕೆನೆಯ ತಂಗಾಳಿ
ಪೇಟೆಗೆ ಹೋಗುವ ಸಂದರ್ಭದಲ್ಲಿ ಅಂದಿನ ನಮ್ಮ ದೊಡ್ಡ ನಿರೀಕ್ಷೆಗಳು ಎರಡು- ಹೋಟೆಲ್ ಮಸಾಲೆ ದೋಸೆ ಮತ್ತು ಐಸ್‌ಕ್ರೀಂ. ದೊಡ್ಡವರಿಗೂ ಇದರಲ್ಲಿ ಹೆಚ್ಚಿನ ವ್ಯತಾಸವಿಲ್ಲ. ಸ್ಥಿತಿವಂತರ ಮನೆಗಳ ಫ್ರಿಜ್‌ಗಳಲ್ಲಿ ಐಸ್‌ಕ್ರೀಂ ಫ್ಯಾಮಿಲಿ ಪ್ಯಾಕ್‌ಗಳು ಜಾಗ ಕಂಡುಕೊಂಡಿರಬಹುದು. ಆದರೆ ಬೇಸಿಗೆಯ ಕಾದ ಹಗಲುಗಳಲ್ಲಿ ಹೊರ ಹೋದಾಗ, ಬೆವರು ಸುರಿಯುತ್ತಿರುವಾಗ ಒಂದು ತಾಜಾ ತಂಪುಕೆನೆಯನ್ನು ನಿರೀಕ್ಷಿಸುವ ಸೊಗಸೇ ಬೇರೆ. ಅದು ಅಪ್ಪಟ ಮನುಷ್ಯ ಗುಣ.
-
ಕಾಡುದಾರಿ
ಮಧ್ಯಾಹ್ನ ಒಂದು ಗಂಟೆಯ ಶಾಲೆಯ ಬೆಲ್ಲು ಬಾರಿಸುತ್ತಿದೆ. ಹೊರಗೆ ಬೇಸಿಗೆಯ ಧಗೆ ಸುರಿಯು ತ್ತಿದೆ. ಎಲ್ಲ ಮಕ್ಕಳೂ ಜಗುಲಿಯಲ್ಲಿ ಬುತ್ತಿ ಬಿಚ್ಚಿ ಊಟ ಮಾಡುತ್ತಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಸುಳ್ಯದ ಕಡೆಯಿಂದ ರಸ್ತೆಯಲ್ಲಿ ಕಿಣಿಕಿಣಿ ಸೈಕಲ್ ಬೆಲ್ ಕೇಳಿಸುತ್ತದೆ. ಶಬ್ದದ ಹಿಂದಿನಿಂದ ಸೈಕಲ್ಲ ನ್ನೇರಿದ ಪಾಯಸ್ ಕಾಣಿಸಿಕೊಳ್ಳುತ್ತಾನೆ. ಅವನು ಇದೀಗ ತಾನೆ ಸೈಕಲ್ಲಿನ ಹಿಂದಿನ ಭಾಗದಲ್ಲಿ ಕೂರಿಸಿದ ಮರದ ಪೆಟ್ಟಿಗೆಯೊಳಗೆ, ಥರ್ಮೋಕೋಲ್‌ನ ಆವರಣದಲ್ಲಿ ತುಂಬಿಸಿದ ತಂಪು ಸಂಗತಿ ಯೊಂದನ್ನು ಹೊತ್ತು ತಂದಿದ್ದಾನೆ.
ಮಕ್ಕಳು ಅವನ ಸುತ್ತ ಮುಕುರಿಕೊಳ್ಳುತ್ತಿರುವಂತೆಯೇ ಜಾದೂಗಾರನಂತೆ ಕೋನ್ ಹೊರತೆಗೆದು ಅದಕ್ಕೆ ವೆನಿ ಐಸ್ ಕ್ರೀಂ ತುಂಬತೊಡಗುತ್ತಾನೆ. ಅವನ ಬಳಿ ಇರುವುದು ಅದೊಂದೇ. ಆ ಶುಭ್ರ ಶ್ವೇತ ಹಿಮತಿಂಡಿ ಮಕ್ಕಳ ನಾಲಿಗೆಯಲ್ಲಿ ಸಜ್ಜನರ ಮನಸ್ಸಿನಂತೆ ಕರಗುತ್ತಿದೆ. ಹೋಂವರ್ಕ್ ಮಾಡಿರದ ಚಿಂತೆಯನ್ನೆಲ್ಲ ಒಂದು ಕೋನ್ ನಿವಾಳಿಸಿದೆ.
ಪಾಯಸ್ ಮುಂದಿನ ಶಾಲೆಗೆ ಹೋಗುತ್ತಾನೆ. ಬಹುಶಃ ಎಲ್ಲ ಶಾಲೆಗಳೂ ಇಂಥ ಒಬ್ಬನಲ್ಲ ಒಬ್ಬ ಪಾಯಸನನ್ನು ಕಂಡಿವೆ. ವರ್ಷಗಳು ಕಳೆದಿವೆ. ಪಾಯಸ್ ಈಗ ಇದ್ದಾನೋ ಇಲ್ಲವೋ ಗೊತ್ತಿಲ್ಲ. ಊರೂರಲ್ಲೂ ಐಸ್‌ಕ್ರೀಂ ಪಾರ್ಲರ್‌ಗಳಿವೆ. ಮೊದಲಿನಂತೆ ತಾಲೂಕು ಕೇಂದ್ರದಿಂದ ಐಸ್‌ಕ್ರೀಂ ತುಂಬಿಕೊಂಡು ಬರಬೇಕಿಲ್ಲ. ಆದರೆ ಬೇಸಿಗೆಯಲ್ಲಿ ಪೇಟೆಗೆ ಹೋಗುವುದು ಎಂದರೆ ಒಂದು ಐಸ್ ಕ್ರೀಂ ಸವಿಯುವುದು ಎಂಬ ನಿರೀಕ್ಷೆಯಿಂದಲೇ ಎಲ್ಲ ಹಳ್ಳಿ ಮಕ್ಕಳ ಕಣ್ಣುಗಳು ಅರಳಿಕೊಂಡಿರು ತ್ತವೆ.
ಇದನ್ನೂ ಓದಿ: Harish Kera Column: ದೇವರ ವರ, ಕಾಡುಮಾವಿನ ಮರ !
ಪೇಟೆಗೆ ಹೋಗುವ ಸಂದರ್ಭದಲ್ಲಿ ಅಂದಿನ ನಮ್ಮ ದೊಡ್ಡ ನಿರೀಕ್ಷೆಗಳು ಎರಡು- ಹೋಟೆಲ್ ಮಸಾಲೆ ದೋಸೆ ಮತ್ತು ಐಸ್‌ಕ್ರೀಂ. ದೊಡ್ಡವರಿಗೂ ಇದರಲ್ಲಿ ಹೆಚ್ಚಿನ ವ್ಯತಾಸವಿಲ್ಲ. ಸ್ಥಿತಿವಂತರ ಮನೆಗಳ ಫ್ರಿಜ್‌ಗಳಲ್ಲಿ ಐಸ್‌ಕ್ರೀಂ ಫ್ಯಾಮಿಲಿ ಪ್ಯಾಕ್‌ಗಳು ಜಾಗ ಕಂಡುಕೊಂಡಿರಬಹುದು. ಆದರೆ ಬೇಸಿಗೆಯ ಕಾದ ಹಗಲುಗಳಲ್ಲಿ ಹೊರ ಹೋದಾಗ, ಬೆವರು ಸುರಿಯುತ್ತಿರುವಾಗ ಒಂದು ತಾಜಾ ತಂಪುಕೆನೆಯನ್ನು ನಿರೀಕ್ಷಿಸುವ ಸೊಗಸೇ ಬೇರೆ. ಅದು ಅಪ್ಪಟ ಮನುಷ್ಯ ಗುಣ.
ಮಳೆ ಕಚ್ಚಿಕೊಳ್ಳುವ ಮುನ್ನವೇ ಐಸ್‌ಕ್ರೀಂ ಬಗ್ಗೆ ಬರೆಯಬೇಕು ಎಂದು ಕೂತಾಗ, ಏನೆಲ್ಲ ಹೊಳೆಯುತ್ತಿವೆ. ವಿಟ್ಲದ ಸಣ್ಣದೊಂದು ಐಸ್‌ಕ್ರೀಂ ಪಾರ್ಲರಿನಲ್ಲಿ ಅವಳೊಂದಿಗೆ ಮೊದಲ ಗಡ್‌ಬಡ್ ಹಂಚಿಕೊಂಡದ್ದು ನೆನಪಾಗುತ್ತಿದೆ. ಸುರಿವ ಮಳೆಯಲ್ಲೂ ಡಿಸೆಂಬರಿನ ಥಂಡಿಯಲ್ಲೂ ಐಸ್ಕ್ರೀಮ್ ಸವಿದು ಚಿಲ್ ಆಗುವ ಹುಡುಗಿಯರು ಕಣ್ಣು ಮುಂದೆ ಬರುತ್ತಿದ್ದಾರೆ.
ಮೊದಲ ಪ್ರೀತಿಯ ಹಾಗೆ ಮೊದಲ ಮಿಲ್ಕ ಶೇಕ್, ಮೊದಲ ಕ್ಯೂಬ್, ಮೊದಲ ಕ್ರೀಮಿ ಕಾಫಿ, ಮೊದಲ ಗುವಾವಾ ಸ್ಲೈಸ್ ವಿದ್ ಚಿಲ್ಲಿ, ಸಂಡೇ, ಗೆಲಾಟೋ, ಸಾಫ್ಟಿ, ಫಾಲೂದಾ, ದಿಲ್ಕುಶ್. ಮತ್ತು ಎಷ್ಟೊಂದು ಫ್ಲೇವರ್‌ಗಳು- ಚಿಕ್ಕುವಿನಿಂದ ಚಾಕೊಲೇಟ್‌ವರೆಗೆ. ಈಗ ವೆನಿ ಎಂಬ ಕ್ಲಾಸಿಕ್ ರುಚಿ ಯನ್ನು ಬಯಸುವವರೇ ಇಲ್ಲವೋ ಅಥವಾ ಇತರ ಫ್ಲೇವರ್‌ಗಳು ಅದರ ಮೇಲೆ ಸವಾರಿ ಮಾಡಿವೆ ಯೋ. ನೋಡುತ್ತ ಐಸ್ ಕ್ರೀಂ ಎಂಬುದು ನಮ್ಮ ಭಾವಕೋಶದ ಭಾಗವಾಗಿದೆ ಎಂದು ಮನ ದಟ್ಟಾಗುತ್ತಿದೆ. ಹಾಗೇ ಒಮ್ಮೆ ಅರುಣಾಚಲದ ಸ್ಕಂದಾಶ್ರಮ ಬೆಟ್ಟ ಹತ್ತಿ ಬಿಸಿಲ ಧಗೆಯಲ್ಲಿ ದಣಿದು ಬೆವರಿ ಕೆಳಗಿಳಿದು ಬಂದು ಸವಿದ ಐಸ್ಕ್ರೀಮ್.
ಬೆಟ್ಟದ ಮೇಲಿನ ಮೌನ- ಧ್ಯಾನವೂ ಐಸ್ಕ್ರೀಮ್ ನೀಡಿದ ದೈಹಿಕ ತಂಪೂ ಒಂದೇ ಎಂದಂತಾಗಿ, ಐಹಿಕವೂ ಅಲೌಕಿಕವೂ ಬೇರೆಯಲ್ಲ ಎಂಬಂತೆ ಕಾಣಿಸಿತ್ತು. ಕರಾವಳಿಯ ಸೆಕೆಗೂ ಐಸ್ಕ್ರೀಮ್‌ಗೂ ಅವಿನಾಭಾವ. ಅದಕ್ಕೇ ಮಂಗಳೂರಿಗೆ ಐಸ್‌ಕ್ರೀಂ ಕ್ಯಾಪಿಟಲ್ ಆಫ್ ಇಂಡಿಯಾ ಎಂದು ಕರೆಯು ವುದು. ಮಂಗಳೂರು- ಉಡುಪಿಗಳಲ್ಲಿ ಒಂದು ತಂಪು ಹಿಮಕೆನೆ ಸವಿಯದೇ ಒಂದು ಹಗಲು ಕಳೆಯುವುದು ಏಪ್ರಿಲ್- ಮೇ ತಿಂಗಳುಗಳಲ್ಲಿ ಅಸಾಧ್ಯ. ಅದರಲ್ಲೂ ಮಂಗಳೂರು!
ಅದು ದೇಶದ ಅನೇಕ ವೈವಿಧ್ಯಮಯ ಐಸ್‌ಕ್ರೀಂ ಕಂಪನಿಗಳ ತವರೂರು. ಮುಖ್ಯವಾಗಿ ಐಡಿಯಲ, ಹಾಂಗ್ಯೋ. ದೇಶಾದ್ಯಂತ ಹೆಸರು ಮಾಡಿದ ಪೋಲಾರ್ ಬೇರ್, ನ್ಯಾಚುರಲ್ಸ್ ಐಸ್‌ಕ್ರೀಂ ಕಂಪನಿಗಳ ಮೂಲಪು ರುಷರೂ ದಕ್ಷಿಣ ಕನ್ನಡದವರೇ. ಅದೇಕೋ ಐಸ್ಕ್ರೀಂಗೂ ಮಂಗಳೂರಿಗೂ ಬಿಡದ ನಂಟು. ಮಂಗಳೂರಿಗೆ ಹೋದವನು ಅಲ್ಲಿನ ಲಾಲ್‌ಬಾಗ್ ನಲ್ಲಿರುವ ಪಬ್ಬಾಸ್ ಪಾರ್ಲರ್‌ಗೆ ಒಂದು ವಿಸಿಟ್ ಹಾಕದೇ ಹಿಂತಿರುಗುವ ರೂಢಿಯಿಲ್ಲ.
ಬೆಂಗಳೂರಿಗೆ ಇಲ್ಲಿನದೇ ಆದ ಕಾರ್ನರ್ ಹೌಸ್‌ನ ಅಪ್ಪಟ ನಂಟು ಇದೆ. ಬಾಸ್ಕಿನ್ ರಾಬಿ, ಮಿಲಾ ನೋ, ಹಾಗೆನ್ ಡಾಝ್‌ಗಳು ಬೇರೆ ಕಡೆಯಿಂದ ಬಂದು ತಳವೂರಿವೆ. ಇನ್ನು ಅಮುಲ್ ಅಂತೂ ದೇಶವಿಡೀ ಹಬ್ಬಿದ ತನ್ನ ಜಾಲದಲ್ಲಿ ಕರ್ನಾಟಕವನ್ನೂ ಸೆಳೆಯದೆ ಬಿಟ್ಟಿಲ್ಲ. ಆದರೆ ನಿಮಗೊಂದು ವಿಷಯ ಗೊತ್ತೆ? ನೀವು ಅಮುಲ್ ಐಸ್‌ಕ್ರೀಂ ಪ್ರಿಯರೇ ಇರಬಹುದು- ಆದರೆ ಅದನ್ನು ತಯಾರಿಸು ವುದು ನಮ್ಮ ಕನ್ನಡದ ಮಣ್ಣಿನ ಕೆಎಂಎಫ್ ಅಲಿಯಾಸ್ ನಂದಿನಿ.
ಬೆಂಗಳೂರು, ಬಳ್ಳಾರಿ, ಹಾಸನದ ಕೆಎಂಎಫ್ ಪ್ಲಾಂಟ್‌ಗಳಲ್ಲಿ ತಯಾರಾಗುವ ನಮ್ಮ ಕನ್ನಡದ ನೆಲದ ಹಾಲಿನ ಐಸ್‌ಕ್ರೀಂ ಉತ್ಪನ್ನಗಳು ಅಮುಲ್ ಬ್ರಾಂಡ್‌ನ ರ‍್ಯಾಪರ್ ಅಂಟಿಸಿಕೊಂಡು ಬರು ತ್ತವೆ. ಹೀಗೆ ದಿನವೊಂದಕ್ಕೆ ಅಮುಲ್‌ಗೆ ನಂದಿನಿ ನೀಡುವ ಐಸ್‌ಕ್ರೀಂ ಪ್ರಮಾಣ 15000 ಲೀಟರ್. ಅದಿರಲಿ. ಐಸ್‌ಕ್ರೀಂ ಎರಡನೇ ಮಹಾಯುದ್ಧದಲ್ಲಿ ಮಹತ್ವದ ಪಾತ್ರ ವಹಿಸಿದ ಕತೆ ನಿಮಗೆ ಗೊತ್ತೆ? ದ್ವಿತೀಯ ವಿಶ್ವಯುದ್ಧದ ಸಮಯದಲ್ಲಿ, ಯುರೋಪ್- ಪೆಸಿಫಿಕ್ ಸಮುದ್ರದ ಹಲವು ಕಡೆ ಸೆಟಲ್ ಆಗಿ ಹೋರಾಡುತ್ತಿದ್ದ ಅಮೆರಿಕದ ಸೈನಿಕರಿಗೆ ಬಹು ಬೇಗ ಹೋಂ ಸಿಕ್‌ನೆಸ್ ಬಂದು ಬಿಡುತ್ತಿತ್ತು.
ಜೊತೆಗೆ 1914ರಲ್ಲಿ ನೌಕಾಪಡೆಯ ಹಡಗುಗಳಲ್ಲಿ ಮದ್ಯಪಾನ ನಿಷೇಧಿಸಿದ ನಂತರ ಇನ್ನಷ್ಟು ಒಂಟಿತನ, ಖಿನ್ನತೆ, ಕಿರಿಕಿರಿ. ಇದನ್ನು ಹೋಗಲಾಡಿಸಿ, ಅವರ ಮನೋಬಲ ಹೆಚ್ಚಿಸಲು ಅಮೆರಿಕ ದೊಡ್ಡ ದೊಡ್ಡ ನೌಕೆಗಳಲ್ಲಿ ಲಕ್ಷಗಟ್ಟಲೆ ಟನ್ ಐಸ್ ಕ್ರೀಂ ಕಳಿಸಲಾರಂಭಿಸಿತು. ನೌಕಾಪಡೆ ವಿಶೇಷ ಐಸ್ ಕ್ರೀಂ ಬಾರ್ಜ್‌ಗಳನ್ನು ಕೂಡ ನಿರ್ಮಿಸಿತು. ಅವು ಸಮುದ್ರ ಮಧ್ಯದಲ್ಲಿ ದಿನಕ್ಕೆ 1500 ಗ್ಯಾಲನ್ ಐಸ್ ಕ್ರೀಂ ತಯಾರಿಸುತ್ತಿದ್ದವು. ಅದನ್ನು ಟಾಪ್ ಸೀಕ್ರೆಟ್ ಲಾಜಿಸ್ಟಿಕ್ ಆದ್ಯತೆಯಾಗಿ ನೋಡಲಾ ಯಿತು.
ಅಮೆರಿಕ ಸೇನೆಯ ಲಾಜಿಸ್ಟಿಕ್ ವ್ಯವಸ್ಥೆ ಬಹಳ ಬಲವಾಗಿತ್ತು. ಹೀಗಾಗಿ ಇತರ ಶತ್ರು ರಾಷ್ಟ್ರಗಳಿಗಿಂತ ವಿಭಿನ್ನವಾಗಿ ಅವರು ಪೆಸಿಫಿಕ್ ಯುದ್ಧಭೂಮಿಗೆ ದೊಡ್ಡ ಪ್ರಮಾಣದಲ್ಲಿ ಐಸ್‌ಕ್ರೀಂ ಸರಬರಾಜು ಮಾಡಬಹುದಾಗಿತ್ತು. ಜಪಾನ್‌ನ ಉಪಾಧ್ಯಕ್ಷ ಅಡ್ಮಿರಲ್ ತಕಾಜಿರೋ ಓನಿಶಿ ಇದರಿಂದ ಗಾಬರಿ ಬಿದ್ದಿದ್ದ. ಅಮೆರಿಕದ ಸೈನಿಕರಿಗೆ ಲಭ್ಯವಾಗುತ್ತಿದ್ದ ಅಪಾರ ಐಸ್‌ಕ್ರೀಂ ಬಗ್ಗೆ ತಿಳಿದರೆ ತನ್ನ ಸೈನಿಕರ ಹೋರಾಟ ಮನೋಭಾವ ಕುಗ್ಗುತ್ತದೆ ಎಂದು ನಂಬಿದ್ದ.
ಇನ್ನೊಂದು ವಿಶೇಷ ಅಂದರೆ ಅಮೆರಿಕದ ವಾಯುಸೇನೆ, ಐಸ್‌ಕ್ರೀಂ ತಯಾರಿಸಲು ವಿಚಿತ್ರ ವಿಧಾನ ವೊಂದನ್ನು ಆವಿಷ್ಕರಿಸಿತ್ತು. ಸಮರ ವಿಮಾನಗಳ ಪೈಲಟ್‌ಗಳು ಕ್ಯಾನ್ ಮಾಡಿದ ಹಾಲು ಮತ್ತು ಕೋಕೋ ಪುಡಿ ಮಿಶ್ರಣವನ್ನು ವಿಮಾನಕ್ಕೆ ಜೋಡಿಸಿದ ಪಾತ್ರೆಯಲ್ಲಿ ಇಟ್ಟುಕೊಂಡು ಎತ್ತರದ ಪ್ರದೇಶದಲ್ಲಿ ಹಾರಾಡುತ್ತಿದ್ದರು. ಅಲ್ಲಿನ ಚಳಿ ಮತ್ತು ಕಂಪನಗಳಿಂದ ಅದು ಐಸ್‌ಕ್ರೀಂ ಆಗಿ ಬಿಡುತ್ತಿತ್ತು.
ಇದನ್ನು ಏರ್ ಚರ್ನ್ಡ್ ಐಸ್‌ಕ್ರೀಂ ಎನ್ನಲಾಗುತ್ತಿತ್ತು. ಗಡ್‌ಬಡ್ ಎಂಬ ವಿಶೇಷ ಐಸ್ಕ್ರೀಮನ್ನು ಸವಿಯದವರು ಯಾರೂ ಇಲ್ಲ ಅನ್ನಬಹುದು. ಇದು ಹುಟ್ಟಿಕೊಂಡದ್ದು ಒನ್ಸ್ ಎಗೇನ್ ನಮ್ಮ ಹೆಮ್ಮೆಯ ಕರಾವಳಿಯಲ್ಲಿ. ಇದರ ಇತಿಹಾಸ ಸುಮಾರು ಅರುವತ್ತರ ದಶಕಕ್ಕೆ ಹೋಗುತ್ತದೆ.
ಉಡುಪಿಯ ಡಯಾನಾ ರೆಸ್ಟಾರೆಂಟ್‌ನಲ್ಲಿ, ಗಡಿಬಿಡಿಯಿಂದ ಇದನ್ನು ಸೃಷ್ಟಿ ಮಾಡಿ ಗ್ರಾಹಕರಿಗೆ ಕೊಡಲಾಯಿತು. ಹಾಗಾಗಿ ಇದು ಗಡ್‌ಬಡ್ ಆಯಿತು ಎಂಬುದೊಂದು ಕತೆ. ಇದನ್ನು ಮುಂದೆ ಐಡಿಯಲ್ ಐಸ್‌ಕ್ರೀಂನ ಪ್ರಭಾಕರ ಕಾಮತರು ಜನಪ್ರಿಯಗೊಳಿಸಿದರು. ಇದನ್ನು ಮನೆಯಲ್ಲೂ ಮಾಡಿಕೊಳ್ಳಬಹುದು.
ಮೂರು ಫ್ಲೇವರ್‌ನ ಐಸ್ ಕ್ರೀಂಗಳಿರಬೇಕು- ಪಿಸ್ತಾ, ವೆನಿಲ್ಲಾ ಹಾಗೂ ಸ್ಟ್ರಾಬೆರಿ. ದೊಡ್ಡದೊಂದು ಗ್ಲಾಸ್ ಲೋಟದಲ್ಲಿ ಮೊದಲು ಪಿಸ್ತಾ ಐಸ್‌ಕ್ರೀಂ ಹಾಕಿಕೊಂಡು, ಅದರ ಮೇಲೆ ಬೇಕಾದಷ್ಟು ಜೆಲ್ಲಿ ಸುರಿದು, ಅದರ ಮೇಲೆ ನಿಮಗೆ ಬೇಕಾದ ಹಣ್ಣಿನ ಚೂರುಗಳನ್ನು ಸೇರಿಸಿ. ಮೇಲಿನಿಂದ ಸ್ಟ್ರಾಬೆರಿ ಐಸ್‌ಕ್ರೀಂ ತುಂಬಿಕೊಂಡು, ಅದರ ಮೇಲೆ ಒಣಹಣ್ಣುಗಳನ್ನು ಸೇರಿಸಿಕೊಂಡು, ಅದರ ಮೇಲೆ ವೆನಿ ಐಸ್‌ಕ್ರೀಂ ಹಾಗೂ ಮೇಲಿನಿಂದ ಒಂದು ಚೆರ್ರಿ. ಇಷ್ಟಿದ್ದರೆ ಮುಗಿಯಿತು.
ಒಂದೇ ಐಸ್‌ಕ್ರೀಂನಲ್ಲಿ ಹಲವು ಬಗೆಯ ಫ್ಲೇವರ್ʼಗಳನ್ನು ಸವಿಯುವ ಈ ಐಡಿಯಾ ಬಹುಬೇಗ ಜನಪ್ರಿಯವಾಯಿತು. ಗಡ್‌ಬಡ್ ಸವಿಯುವುದು ಎಂದರೆ ಗಡಿಬಿಡಿಯ ಸಂಗತಿಯಲ್ಲ. ಅದು ವಿವಾಹ ಭೋಜನದಂತೆ ಬಹು ಮನೋಮಗ್ನವಾಗಿ, ನಿಧಾನವಾಗಿ ನಡೆಸಬೇಕಾದ ಖಾದ್ಯಕ್ರಿಯೆ.
ಎಪ್ಪತ್ತು ಎಂಬತ್ತರ ದಶಕದಲ್ಲಿ ಕರಾವಳಿಯ ಮಂದಿ ಮುಂಬಯಿ, ಬೆಂಗಳೂರು ಮತ್ತಿತರೆಡೆಗೆ ಹೋಗಿ ಐಸ್‌ಕ್ರೀಂ ಕ್ರಾಂತಿಯೆಬ್ಬಿಸಿದರು. ಐಡಿಯಲ್‌ನ ಪ್ರಭಾಕರ ಕಾಮತರನ್ನು ‘ಐಸ್ಕ್ರೀಂ ಮ್ಯಾನ್ ಆಫ್ ಇಂಡಿಯಾ’ ಎಂದೂ ಕರೆಯಲಾಗುತ್ತದೆ.
ಹಣ್ಣಿನ ಫ್ಲೇವರ್ ಏನೋ ಸರಿ, ಆದರೆ ನೈಜಹಣ್ಣುಗಳನ್ನೇ ಐಸ್ಕ್ರೀಂನಲ್ಲಿ ನೀಡಿದರೆ ಹೇಗೆ ಎಂಬ ಐಡಿಯಾವನ್ನು ವರ್ಕೌಟ್ ಮಾಡಿದ ಮಂಗಳೂರಿನ ರಘುನಂದನ ಕಾಮತ್ ಅವರು ಮುಂಬಯಿ ಯ ಜುಹೂನಲ್ಲಿ ಹುಟ್ಟುಹಾಕಿದ ನ್ಯಾಚುರಲ್ಸ ಬ್ರಾಂಡ್ ಈಗ ಹೆಸರುವಾಸಿ. ಪೋಲಾರ್ ಬೇರ್ ಸ್ಥಾಪಿಸಿದ ಕಿಶೋರ್ ರೈ ಕೂಡ ದಕ್ಷಿಣ ಕನ್ನಡದವರು. ಇದಲ್ಲದೇ ನೂರಾರು ಬ್ರಾಂಡ್‌ಗಳಿವೆ. ಪ್ರತಿಯೊಂದಕ್ಕೂ ಅದರದೇ ಸ್ಥಾನಮಾನ.
ಬೆಂಗಳೂರಿನ ಈ ಸಲದ ಬೇಸಿಗೆಯಂತೂ ಅಕ್ಷರಶಃ ಬೆವರಿಳಿಸುವಂತೆಯೇ ಇತ್ತು. ಪರಿಣಾಮ ಐಸ್‌ಕ್ರೀಂ ವ್ಯಾಪಾರದಲ್ಲಿಯೂ ಭರಪೂರ ಏರಿಕೆಯಾಯ್ತು. ಸಮ್ಮರ್ ಟ್ರೆಂಡ್ಸ್ ವರದಿ ಪ್ರಕಾರ, ಈ ವರ್ಷ ಐಸ್‌ಕ್ರೀಂ ಬಳಕೆಯಲ್ಲಿ ಬೆಂಗಳೂರು ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ.
ಭಾರತದಲ್ಲಿನ ಒಟ್ಟು ಐಸ್‌ಕ್ರೀಂ ಬೇಡಿಕೆಯಲ್ಲಿ ಸುಮಾರು 14% ಬೆಂಗಳೂರು ಒಂದೇ ಕಡೆ ಇದೆ. ಮಾರಾಟದ ದೃಷ್ಟಿಯಿಂದ ಇದೇ ಈಗ ಹೊಸ ಐಸ್‌ಕ್ರೀಂ ರಾಜಧಾನಿ. ಇತರ ಅತ್ಯಧಿಕ ಬೇಡಿಕೆಯ ನಗರಗಳು ಮುಂಬೈ, ಹೈದರಾಬಾದ್, ಚೆನ್ನೆ ಮತ್ತು ಪುಣೆ. ಆದರೆ ಐಸ್ ಕ್ರೀಂ ಸಂಸ್ಕೃತಿ, -ವರ್‌ಗಳ ಆಧಿಕ್ಯ, ಐಸ್‌ಕ್ರೀಂ ಬ್ರಾಂಡ್‌ಗಳ ಸಾಮ್ರಾಜ್ಯ, ಸೃಷ್ಟಿಕರ್ತರು ಇದನ್ನೆಲ್ಲ ಗಮನಿಸಿದರೆ ಮಂಗಳೂರಿನ ಸ್ಥಾನ ಅಬಾಧಿತ.
ಬೆಂಗಳೂರಿನ ಕಾರ್ನರ್ ಹೌಸ್‌ಗೆ ನೀವು ಹೋದರೆ ಅಲ್ಲಿ ಐಸ್‌ಕ್ರೀಂ ಸವಿಯಲು ಬಂದ ಬ್ರಿಟನ್‌ನ ಮಾಜಿ ಪ್ರಧಾನಿ, ಅವರ ಪತ್ನಿ, ಅವರ ಅತ್ತೆ- ಮಾವನನ್ನೂ ಕಂಡರೆ ಆಶ್ಚರ್ಯವಿಲ್ಲ. ಧಗೆಯ ದಿನಗಳಲ್ಲಿ ಮೈಯೆಲ್ಲ ಕುದಿಯುತ್ತಿರುವಾಗ, ನಾಲಿಗೆಯ ಮೇಲೆ ತಂಪಿನ ತೆರೆ ಹರಿಸಿ, ಜೀವಚೈತನ್ಯ ಹೊಮ್ಮಿಸುವ ಮಂಜುಕೆನೆಯ ಸ್ವಾದವೇ ಮೋದ. ಅದು ನರಮನುಷ್ಯರು ನಮ್ಮಂತೆಯೇ ತುಸು ಆನಂದಪಡಲಿ ಎಂದು ದೇವರು ನೀಡಿದ ಅಮೃತದ ತುಣುಕು, ಸ್ವರ್ಗದ ಇಣುಕು.