Raghav Sharma Nidle Column: ವಾಗ್ದಾನ ನೀಡಿದ್ದಲ್ಲಿ ಅದನ್ನು ಈಡೇರಿಸುವುದು ಕರ್ತವ್ಯವಲ್ಲವೇ ?
ಇಂತಿಪ್ಪ ಶಿವಕುಮಾರ್, 2023ರ ಚುನಾವಣೆಯಲ್ಲೂ ಪಕ್ಷದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ್ದ ರಿಂದಲೇ, ಎರಡೂವರೆ ವರ್ಷಗಳ ಹಿಂದೆ ವಾಗ್ದಾನ ಮಾಡಿದಂತೆ, ‘ನನ್ನ ಕೆಲಸಕ್ಕೆ ನ್ಯಾಯ ಕೊಡಿ, ವಚನಭ್ರಷ್ಟರಾಗಬೇಡಿ. ನಮ್ಮ ಸಮುದಾಯ ಹಾಗೂ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗ ಬೇಡಿ’ ಎಂದು ದಿಲ್ಲಿ ದೊರೆಗಳ ಕರ್ತವ್ಯಪ್ರಜ್ಞೆಯನ್ನು ಜಾಗೃತಗೊಳಿಸುತ್ತಾ, ತಮ್ಮ ಪಟ್ಟಾಭಿಷೇಕದ ಸಮಯ ನಿಗದಿ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ.
-
ಜನಪಥ
ಕರ್ನಾಟಕದಲ್ಲಿನ ಈಗಿನ ರಾಜಕೀಯ ಪ್ರಹಸನಗಳು ಹಿಂದೆ ಪಂಜಾಬ್, ಛತ್ತೀಸ್‌ಗಢ ಮತ್ತು ರಾಜಸ್ಥಾನಗಳಲ್ಲಿ ಕೂಡ ನಡೆದು, ಆ ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರ ವನ್ನು ಕಳೆದುಕೊಂಡಿತು ಎಂಬುದನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಛತ್ತೀಸ್‌ಗಢದಲ್ಲಿ ಒಬಿಸಿ ಸಮುದಾಯದ ಭೂಪೇಶ್ ಬಗೇಲ್ ಅವರನ್ನು ಸಿಎಂ ಆಗಿ ಆಯ್ಕೆ ಮಾಡುವ ಮುನ್ನ ಮೇಲ್ವರ್ಗದ ರಜಪೂತ ಸಮುದಾಯದ ಟಿ.ಎಸ್.ಸಿಂಗ್‌ದೇವ್ ಆ ಸ್ಥಾನಕ್ಕಾಗಿ ಪ್ರಬಲ ಲಾಬಿ ಮಾಡಿದ್ದರು ಎಂಬುದಿಲ್ಲಿ ಸ್ಮರಣಾರ್ಹ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಈಗ ೬೩ ವರ್ಷ. ಈ ಸರಕಾರದ ಅವಧಿ ಮುಗಿಯುವಾಗ ಅವರ ವಯಸ್ಸು ೬೫ಕ್ಕೇರಲಿದೆ. ಅಭಿವೃದ್ಧಿ ಕೆಲಸದಲ್ಲಿ ಹಿಂದೆ ಬಿದ್ದಿರುವ ಸರಕಾರವನ್ನು ಜನರು ಮುಂದಿನ ಚುನಾವಣೆಯಲ್ಲಿ ಮರು ಆಯ್ಕೆ ಮಾಡುತ್ತಾರೆ ಎಂಬ ಭರವಸೆ ಅವರಲ್ಲಿ, ಬೆಂಬಲಿಗ ರಲ್ಲಿ ಸದ್ಯಕ್ಕಂತೂ ಕಾಣುತ್ತಿಲ್ಲ.
ಅಲ್ಲದೆ, ಕರ್ನಾಟಕದ ಮತದಾರ ಪ್ರತಿ ಚುನಾವಣೆಯಲ್ಲೂ ಸರಕಾರದ ಬದಲಾವಣೆಯನ್ನೇ ಬಯಸಿದ್ದಾನೆ. ಹೀಗಿದ್ದಾಗ, 2028ರ ಚುನಾವಣೆ ಸೋತರೆ, ಮತ್ತೈದು ವರ್ಷ ವಿಪಕ್ಷದಲ್ಲಿದ್ದುಕೊಂಡೇ ಬೆಂಚು ಬಿಸಿ ಮಾಡಬೇಕು. ಆ ೫ ವರ್ಷಗಳ ನಂತರ ಡಿಕೆಶಿಗೆ ವಯಸ್ಸು ೭೦ ಆಗಿರುತ್ತದೆ. ಆಗ ಸಿಎಂ ಸ್ಥಾನಕ್ಕೆ ಬೇರೆಯವರು ತಯಾರಾಗಿರುತ್ತಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿದ್ದಾಗಲೇ ಸಿಎಂ ಸ್ಥಾನ ದಕ್ಕಿಸಿಕೊಳ್ಳಲು ಸಾಧ್ಯವಾಗದ ತನಗೆ, ೭೦ರ ವಯಸ್ಸಲ್ಲಿ ಖಂಡಿತಾ ಸಾಧ್ಯವಾಗದು ಎನ್ನುವುದು ಶಿವಕುಮಾರ್‌ರಿಗೆ ಗೊತ್ತಿಲ್ಲದೇನಿಲ್ಲ. ಹೀಗಾಗಿ, ಮುಖ್ಯಮಂತ್ರಿಯಾದರೆ ಈಗಲೇ ಆಗಬೇಕು ಎಂದುಕೊಂಡಿರುವ ಅವರು, ಶತಾಯಗತಾಯ ಪ್ರಯತ್ನ ಮುಂದುವರಿಸಿದ್ದಾರೆ.
2023ರಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ, ‘ಎರಡೂವರೆ ವರ್ಷಗಳ ನಂತರ ನಿಮಗೆ ಸೂಕ್ತ ಸ್ಥಾನಮಾನ ನೀಡುತ್ತೇವೆ’ ಎಂದು ಸೋನಿಯಾ ಗಾಂಧಿ ಸಮ್ಮುಖದಲ್ಲಿ ವಾಗ್ದಾನ ನೀಡಲಾಗಿತ್ತು. ಇದನ್ನೇ ಅಸ್ತ್ರವನ್ನಾಗಿಟ್ಟುಕೊಂಡಿರುವ ಶಿವಕುಮಾರ್, ‘ಕೊಟ್ಟ ಮಾತನ್ನು ಉಳಿಸಿಕೊಳ್ಳಿ’ ಎಂಬ ಸ್ಪಷ್ಟ ಸಂದೇಶವನ್ನು ಸಾಮಾಜಿಕ ಜಾಲತಾಣದ ಮೂಲಕ ದಿಲ್ಲಿಗೆ ರವಾನಿಸಿಯಾಗಿದೆ. ಎಂದಿನಂತೆ ಶಿವಕುಮಾರ್ ಬೆನ್ನಿಗೆ ನಿಂತಿರುವ ಸೋದರ ಡಿ.ಕೆ.ಸುರೇಶ್, ತೆರೆಮರೆಯ ಶಾಸಕರು-ಸಚಿವರು ಹಾಗೂ ದಿಲ್ಲಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಯತ್ನದಲ್ಲಿದ್ದಾರೆ.
ಇದನ್ನೂ ಓದಿ: Raghav Sharma Nidle Column: ಮೇಕೆದಾಟು ತೀರ್ಪಿನ ಬಗ್ಗೆ ಸಂಭ್ರಮ ಪಡುವಂಥದ್ದೇನಿದೆ ?
ಇವೆಲ್ಲದರ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನವೆಂಬರ್ 24ರಂದು ದೇಶದ ಒಬಿಸಿ ಸಮುದಾಯಗಳನ್ನು ಸೆಳೆಯುವ ಕುರಿತ ತಮ್ಮ ಕಾರ್ಯಕ್ರಮಗಳ ಭಾಗವಾಗಿ, ರಾಜಸ್ಥಾನ ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್, ಕರ್ನಾಟಕದ ಬಿ.ಕೆ. ಹರಿಪ್ರಸಾದ್, ಮಾಣಿಕ್ಕಂ ಟ್ಯಾಗೋರ್, ಅಜಯ್ ಕುಮಾರ್ ಲಲ್ಲು, ಪೊನ್ನಂ ಪ್ರಭಾಕರ್, ವಿಜಯ್ ವಡೆತ್ತಿವಾರ್ ಮತ್ತು ಸುಭಾಷಿಣಿ ಯಾದವ್ ಜತೆಗೆ ಸುಮಾರು ೧ ಗಂಟೆ ಸಭೆ ನಡೆಸಿದ್ದಾರೆ. ಒಬಿಸಿ ಸಮುದಾಯದ ಸಬಲೀಕರಣಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ.
ಕಾಂಗ್ರೆಸ್‌ನ ಇತರ ಹಿಂದುಳಿದ ವರ್ಗಗಳ (ಒಬಿಸಿ) ವಿಭಾಗದ ಮುಖ್ಯಸ್ಥರಾಗಿರುವ ಅನಿಲ್ ಜೈಹಿಂದ್ ಅವರು, ತಮ್ಮ ವಿಭಾಗದಿಂದ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಮತ್ತು ಸಂಪರ್ಕ ಉಪಕ್ರಮಗಳ ಕುರಿತು ರಾಹುಲ್‌ಗೆ ವಿವರಣೆ ನೀಡಿದ್ದಾರೆ.
ರಾಷ್ಟ್ರವ್ಯಾಪಿ ಕಾಂಗ್ರೆಸ್ ಪಕ್ಷದ ರಾಜಕೀಯ ಪ್ರಾಬಲ್ಯದ ಪುನರ್‌ಸ್ಥಾಪನೆ ಮಾಡಬೇಕೆಂದರೆ ಒಬಿಸಿ ಸಮುದಾಯದ ವಿಶ್ವಾಸ ಗಳಿಸುವುದು ಅತಿಮುಖ್ಯ ಎಂದು ನಂಬಿರುವ ರಾಹುಲ್ ಗಾಂಧಿ, ಅಧಿಕಾರ ಶಾಹಿಯಲ್ಲೂ ಇತರೆ ಹಿಂದುಳಿದ ವರ್ಗಗಳು (ಒಬಿಸಿಗಳು) ಕಡಿಮೆ ಪ್ರಾತಿನಿಧ್ಯ ಹೊಂದಿವೆ ಎಂದಿರುವುದು ಚರ್ಚೆಗೆ ಗ್ರಾಸವಾಗಿತ್ತು.
ಕೇಂದ್ರ ಸರಕಾರದ ಪ್ರಮುಖ ಹುದ್ದೆಗಳಲ್ಲಿ ಒಬಿಸಿ ಅಧಿಕಾರಿಗಳ ಸಂಖ್ಯೆ ಕಡಿಮೆ ಎಂಬ ತಮ್ಮ ವಾದಕ್ಕೆ ಅವರು ಅಂಕಿ-ಅಂಶಗಳನ್ನೂ ಮುಂದಿಟ್ಟಿದ್ದರು. ಅಧಿಕಾರಶಾಹಿಯಲ್ಲಿ ಜಾತಿ ನೋಡುವ ರಾಹುಲ್ ರದ್ದು ಸಂಕೀರ್ಣ ಮನಸ್ಥಿತಿ ಎಂದು ಬಿಜೆಪಿ ಟೀಕಿಸಿದರೂ ಆ ಬಗ್ಗೆ ರಾಹುಲ್ ತಲೆಕೆಡಿಸಿ ಕೊಂಡಿರಲಿಲ್ಲ.
ಒಬಿಸಿ ಪ್ರಾತಿನಿಧ್ಯದ ಕೊರತೆಯ ಪರಿಹಾರಕ್ಕೆಂದೇ ರಾಷ್ಟ್ರವ್ಯಾಪಿ ಜಾತಿ ಜನಗಣತಿ ನಡೆಸಬೇಕೆಂದು ಪ್ರಬಲವಾಗಿ ಪ್ರತಿಪಾದಿಸಿದವರು ರಾಹುಲ್. ಜಾತಿ ಜನಗಣತಿಯ ಮುಖ್ಯ ಉದ್ದೇಶ ಜಾತಿಗಳ ಜನಸಂಖ್ಯೆ ಎಣಿಕೆ ಮಾತ್ರವಲ್ಲ. ಬದಲಿಗೆ, ಸಮುದಾಯಗಳಿಗೆ ಪೂರಕವಾದ ನೀತಿಗಳ ರಚನೆಗೆ ಮಾಹಿತಿ ನೀಡುವುದು ಮತ್ತು ದೇಶದಲ್ಲಿ ಸವಲತ್ತು-ಅವಕಾಶಗಳನ್ನು ಸಮಾನವಾಗಿ ಹಂಚುವುದೇ ಆಗಿದೆ ಎಂದಿದ್ದರು.
ತೆಲಂಗಾಣ ಕಾಂಗ್ರೆಸ್ ಸರಕಾರದ ಜಾತಿ ಜನಗಣತಿಯನ್ನು ಶ್ಲಾಘಿಸಿದ್ದ ಅವರು ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರಾಷ್ಟ್ರವ್ಯಾಪಿ ಇದನ್ನು ಮಾಡುತ್ತೇವೆ ಎಂದು ಘೋಷಿಸಿದ್ದರು. ರಾಹುಲ್ ಗಾಂಧಿಯವರ ಚಿಂತನೆಗಳಿಗೆ ಪೂರಕವಾಗಿ ಸಿದ್ದರಾಮಯ್ಯ ಕೂಡ ಜಾತಿಗಣತಿ ಪರ ಅನೇಕ ಬಾರಿ ಧ್ವನಿ ಎತ್ತಿzರೆ. ಇಬ್ಬರ ಚಿಂತನೆಗಳಿಗೂ ತಾಳೆಯಾಗಿರುವುದರಿಂದಲೇ, ಸಿದ್ದರಾಮಯ್ಯರ ಬಗ್ಗೆ ರಾಹುಲ್‌ಗೆ ವಿಶೇಷ ಒಲವು-ಗೌರವ ಇದೆ. ಅದು ಗುಟ್ಟಿನ ವಿಷಯವೇನಲ್ಲ.
ಕರ್ನಾಟಕದಲ್ಲಿ ಒಬಿಸಿ ವ್ಯಾಪ್ತಿಯ ಕುರುಬ ಸಮುದಾಯದ ಸಿದ್ದರಾಮಯ್ಯರನ್ನು ಉದಾ ಹರಣೆಯಾಗಿಟ್ಟುಕೊಂಡೇ ಅನೇಕ ಭಾಷಣಗಳನ್ನು ಮಾಡಿರುವ ರಾಹುಲ್ ಗಾಂಧಿ, ಸಿದ್ದರಾಮಯ್ಯ ರಂಥ ಒಬಿಸಿ ನಾಯಕರು ನಮಗೆ ವಿವಿಧ ರಾಜ್ಯಗಳಲ್ಲಿ ಬೇಕಾಗಿದ್ದಾರೆ ಎನ್ನುತ್ತಾ ಈ ಸಮುದಾಯ ಗಳ ಮನಸ್ಸನ್ನು ಗೆಲ್ಲಲು ಅವರ ವರ್ಚಸ್ಸನ್ನೇ ಬಳಸಿಕೊಂಡಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಅಲ್ಲಿ ನಡೆಸಿದ್ದ ಮತಾಧಿಕಾರ ಯಾತ್ರೆಗೂ ಸಿದ್ದರಾಮಯ್ಯರನ್ನು ರಾಹುಲ್ ಕರೆಸಿಕೊಂಡಿದ್ದರು. ಪರಿಸ್ಥಿತಿ ಹೀಗಿರುವಾಗ, ರಾಹುಲ್ ಗಾಂಧಿ ಯಾವ ಕಾರಣ ನೀಡಿ, ‘ಸಿಎಂ ಸ್ಥಾನದಿಂದ ನೀವು ಕೆಳಗಿಳಿಯಿರಿ ಸಿದ್ದರಾಮಯ್ಯನವರೇ’ ಎಂದು ರಾಜೀನಾಮೆ ಪಡೆದುಕೊಂಡಾರು? ಬಿಹಾರದಲ್ಲಿ ಮಹಾಘಟಬಂಧನದ ಸಿಎಂ ಅಭ್ಯರ್ಥಿಯಾಗಿದ್ದ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಒಬಿಸಿ ಸಮುದಾಯದವರು.
ಅಲ್ಲಿ ಮಹಾಘಟಬಂಧನ ಗೆದ್ದು ಅಧಿಕಾರಕ್ಕೆ ಬರುತ್ತಿದ್ದರೆ ಒಬಿಸಿ ನಾಯಕನೊಬ್ಬನ ಪ್ರತಿಷ್ಠಾಪನೆಗೆ ಕಾಂಗ್ರೆಸ್ ಕೂಡ ಕಾರಣ ಎಂದು ವಾದಿಸಬಹುದಿತ್ತು. ಆದರೆ, ಲೆಕ್ಕಾಚಾರಗಳೆಲ್ಲವೂ ಉಲ್ಟಾ ಹೊಡೆದವು. ಹಾಗೆ ನೋಡಿದರೆ, ಬಿಹಾರದಲ್ಲಿ ಮಹಾಘಟಬಂಧನ ಸೋತಿದ್ದರಿಂದ ಕರ್ನಾಟಕ ದಲ್ಲಿ ಸಿಎಂ ಸಿದ್ದರಾಮಯ್ಯರ ಕುರ್ಚಿ ಮತ್ತಷ್ಟು ಗಟ್ಟಿಯಾಯಿತು.
ಮಹಾಮೈತ್ರಿ ಗೆಲ್ಲುತ್ತಿದ್ದರೆ ತಮ್ಮನ್ನು ಸಿಎಂ ಮಾಡಿ ಎಂಬ ಡಿ.ಕೆ.ಶಿವಕುಮಾರ್ ಪ್ರತಿಪಾದನೆಗೆ ಮತ್ತಷ್ಟು ಬಲ ಸಿಗುತ್ತಿತ್ತು. ಹೀಗಾಗಿ, ಬಿಹಾರ ಫಲಿತಾಂಶ ಸಿದ್ದರಾಮಯ್ಯರ ಬೆಂಬಲಿಗರಿಗೆ ವರವಾದರೆ, ಡಿ.ಕೆ.ಶಿವಕುಮಾರ್ ಪಾಲಿಗೆ ಶಾಪವಾಗಿ ಪರಿಣಮಿಸಿತು!
ಅದೇನೇ ಇದ್ದರೂ, ಡಿ.ಕೆ.ಶಿವಕುಮಾರ್ ಅವರ ಉದಾತ್ತ ಪಕ್ಷನಿಷ್ಠೆಯನ್ನು ಕಡೆಗಣಿಸಲು ಸಾಧ್ಯ ವಿದೆಯೇ? ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಕೇಂದ್ರ ಸರಕಾರದ ಅಧೀನದಲ್ಲಿರುವ ಇ.ಡಿ (ಜಾರಿ ನಿರ್ದೇಶನಾಲಯ), ಸಿಬಿಐ ತನಿಖಾ ಸಂಸ್ಥೆಗಳು ತಮ್ಮ ವಿರುದ್ಧ ಸಮರ ಸಾರಿ ೫೫ ದಿನಗಳ ಕಾಲ ದೆಹಲಿಯ ತಿಹಾರ್ ಜೈಲಿಗಟ್ಟಿದರೂ, ಧೃತಿಗೆಡದೆ ಕಾಂಗ್ರೆಸ್ ಪಕ್ಷದೊಂದಿಗೇ ಅವರು ಇದ್ದರು.
ತನಿಖಾ ಸಂಸ್ಥೆಗಳಿಂದ ರೇಡ್ ಆಗುತ್ತದೆ ಎಂಬ ಸುಳಿವು ಸಿಕ್ಕ ಕೂಡಲೇ ಬಿಜೆಪಿ ಸೇರಿಕೊಂಡು ರಕ್ಷಣೆಯ ಹಾದಿ ಕಂಡುಕೊಂಡ ಹಲವು ರಾಜಕಾರಣಿಗಳ ಮಧ್ಯೆ, ಡಿ.ಕೆ. ಶಿವಕುಮಾರ್ ಭಿನ್ನರಾಗಿ ಕಾಣಿಸಿಕೊಳ್ಳುವುದು ಇದೇ ಕಾರಣಕ್ಕೆ. 2024ರ ಫೆಬ್ರವರಿ ತಿಂಗಳಲ್ಲಿ ಹಿಮಾಚಲ ಪ್ರದೇಶ ಕಾಂಗ್ರೆಸ್ ಪತನಗೊಳ್ಳುವ ಅಂಚಿನಲ್ಲಿದ್ದಾಗ ಅಲ್ಲಿನ ಪರಿಸ್ಥಿತಿಯನ್ನು ನಿಭಾಯಿಸುವ ಟಾಸ್ಕ್ ಅನ್ನು ಡಿ.ಕೆ. ಶಿವಕುಮಾರ್‌ಗೆ ನೀಡಲಾಗಿತ್ತು ಮತ್ತು ಅದರಲ್ಲಿ ಅವರು ಯಶಸ್ವಿಯಾಗಿದ್ದರು ಕೂಡ.
ಉತ್ತರ ಭಾರತದ ಮಾಧ್ಯಮಗಳಲ್ಲಿ ಹಾಗೂ ಅಲ್ಲಿನ ರಾಜಕಾರಣಿಗಳ ನಡುವೆ ‘ಟ್ರಬಲ್ ಶೂಟರ್’ ಎಂದೇ ಖ್ಯಾತರಾಗಿರುವ ಶಿವಕುಮಾರ್, ಕಾಂಗ್ರೆಸ್ ಅನ್ನು ಸಂಕಷ್ಟದಿಂದ ಪಾರು ಮಾಡುವ ನಾಯಕ ಎಂದೇ ಗುರುತಿಸಿಕೊಂಡಿದ್ದಾರೆ. 2017ರಲ್ಲಿ ಸೋನಿಯಾ ಗಾಂಧಿ ಆಪ್ತ, ಗುಜರಾತಿನ ಅಹ್ಮದ್ ಪಟೇಲ್ ಅವರು ರಾಜ್ಯಸಭೆ ಚುನಾವಣೆ ಗೆದ್ದು ಸಂಸತ್ ಮರುಪ್ರವೇಶ ಮಾಡಿದ್ದರ ಹಿಂದೆ ಡಿ.ಕೆ.ಶಿವಕುಮಾರ್ ಪಾತ್ರವಿದ್ದುದನ್ನು ಅಲ್ಲಗಳೆಯಲಾದೀತೆ? ಗುಜರಾತ್ ರಾಜ್ಯ ಕಾಂಗ್ರೆಸ್‌ನಲ್ಲಿನ ಬಂಡಾಯದ ನಡುವೆ ರಾಜ್ಯಸಭೆಗೆ ಐದನೇ ಬಾರಿಗೆ ಆಯ್ಕೆಯಾಗಲು ಅಹ್ಮದ್ ಪಟೇಲ್ ಅವರಿಗೆ ೪೪ ಶಾಸಕರ ಬೆಂಬಲ ಬೇಕಿತ್ತು.
ಅದಕ್ಕೂ ಮುನ್ನ ಗುಜರಾತ್ ಕಾಂಗ್ರೆಸ್ಸಿನ ೬ ಶಾಸಕರು ರಾಜೀನಾಮೆ ನೀಡಿದ್ದರು ಮತ್ತು ೮ ಮಂದಿ ಬಂಡಾಯವೆದ್ದಿದ್ದರು. ಇದು ಅಹ್ಮದ್ ಪಟೇಲ್‌ರ ರಾಜ್ಯಸಭೆಯ ಹಾದಿಯನ್ನು ಸಂಕೀರ್ಣ ಗೊಳಿಸಿತ್ತು. ಗುಜರಾತ್ ವಿಧಾನಸಭೆಯ ಬಲ 176ಕ್ಕೆ ಇಳಿದಿದ್ದರಿಂದ ಕಾಂಗ್ರೆಸ್‌ಗೆ ಉಳಿದ ಶಾಸಕ ರನ್ನು ರಕ್ಷಿಸಿಡುವುದು ಅನಿವಾರ್ಯವಾಗಿತ್ತು.
ಆಗ ಕರ್ನಾಟಕದಲ್ಲಿ ಇಂಧನ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಈ ಶಾಸಕರನ್ನು ಬೆಂಗಳೂರಿನ ಬಳಿಯ ರೆಸಾರ್ಟ್‌ನಲ್ಲಿ ತಂದಿರಿಸಿದರು. ಶಾಸಕರು ಮತದಾನಕ್ಕೆ ಮುನ್ನ ಬಿಜೆಪಿಗೆ ಪಕ್ಷಾಂತರ ಮಾಡುವುದನ್ನು ತಪ್ಪಿಸಲು, ಶಿವಕುಮಾರ್ ಮೇಲ್ವಿಚಾರಣೆಯ ಕಾರ್ಯಯೋಜನೆ ನಡೆದಿತ್ತು. ಅಂತಿಮವಾಗಿ ಅಹ್ಮದ್ ಪಟೇಲ್ ಗೆದ್ದರು. ಅವರ ಗೆಲುವು ಕೇಂದ್ರ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು.
ಅಕ್ಷರಶಃ ಯುದ್ಧವಾಗಿ ರೂಪುಗೊಂಡಿದ್ದ ಈ ಚುನಾವಣೆ ಮತ್ತು ಪಟೇಲ್‌ರ ಗೆಲುವು ಶಿವಕುಮಾರ್‌ಗೆ ರಾಷ್ಟ್ರಮಟ್ಟದಲ್ಲಿ ಭಾರಿ ವರ್ಚಸ್ಸು ತಂದುಕೊಟ್ಟಿತ್ತು ಮತ್ತು ಶಿವಕುಮಾರ್‌ರನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಲು ದಿಲ್ಲಿ ನಾಯಕರಿಗೆ ಪ್ರೇರಣೆಯಾಗಿತ್ತು.
ಪಟೇಲ್ ಗೆಲುವಿನ ಬೆನ್ನ ಅಕ್ರಮ ಆಸ್ತಿ ಸಂಪಾದನೆ ಕೇಸಲ್ಲಿ ಶಿವಕುಮಾರ್ ಮೇಲೆ ಐಟಿ, ಇ.ಡಿ, ಸಿಬಿಐ ತನಿಖಾ ತಂಡಗಳಿಂದ ರೇಡ್‌ಗಳಾಗಿ, ನಂತರ ಜೈಲು ಸೇರಿದ್ದರು. ವಿಚಾರಣೆಗಾಗಿ ಜೈಲಿನ ಬಸ್ಸಿನಿಂದಿಳಿದು, ದಿಲ್ಲಿಯ ರೌಸ್ ಅವೆನ್ಯೂ ಕೋರ್ಟ್ ಹಾಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಶಿವಕುಮಾರ್ ರನ್ನು ನೋಡಿದಾಗ, ಕರ್ನಾಟಕ ಕಾಂಗ್ರೆಸ್‌ನ ಬಲಶಾಲಿ ನಾಯಕ ಇವರೇನಾ? ಎಂದೆನಿಸುತ್ತಿತ್ತು.
ಕುಸಿದು ಹೋದಂತಿದ್ದ ಮುಖಭಾವ ಅವರ ಅಂದಿನ ಸಂಕಷ್ಟಕರ ಪರಿಸ್ಥಿತಿಗೆ ಕನ್ನಡಿ ಹಿಡಿದಿತ್ತು. ತಮ್ಮ ಜೈಲುವಾಸವನ್ನು ಸ್ವಪಕ್ಷೀಯರೇ ಸಂಭ್ರಮಿಸುತ್ತಿದ್ದಾರೆ ಎನ್ನುವುದು ಅವರಲ್ಲಿ ಮತ್ತಷ್ಟು ಬೇಸರ ತರಿಸಿತ್ತು. ಹಾಗಂತ ಇದು ರಾಜಕಾರಣದ ಕಟುವಾಸ್ತವ ಎನ್ನುವುದೂ ಗೊತ್ತಿತ್ತು. ಇವೆಲ್ಲದರ ನಡುವೆ, ಸೋನಿಯಾ ಗಾಂಧಿಯವರು ತಿಹಾರ್ ಜೈಲಿಗೆ ಹೋಗಿ ಸಾಂತ್ವನ ಹೇಳಿದ್ದು, ಅವರಿಗೆ ‘ಬೂಸ್ಟರ್ ಡೋಸ್’ ನೀಡಿದಂತಾಗಿತ್ತು.
ಜೈಲಿನಿಂದ ಹೊರಬಂದಿದ್ದ ಶಿವಕುಮಾರ್‌ಗೆ ಕರ್ನಾಟಕದಲ್ಲಿ ಪಕ್ಷದ ಸಾರಥ್ಯವನ್ನು ಸೋನಿಯಾ ಗಾಂಧಿ ಅವರು ಅತ್ಯಂತ ಪ್ರೀತ್ಯಾದರಗಳಿಂದ ನೀಡಿದ್ದರು. ಇಂತಿಪ್ಪ ಶಿವಕುಮಾರ್, 2023ರ ಚುನಾವಣೆಯಲ್ಲೂ ಪಕ್ಷದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ್ದರಿಂದಲೇ, ಎರಡೂವರೆ ವರ್ಷ ಗಳ ಹಿಂದೆ ವಾಗ್ದಾನ ಮಾಡಿದಂತೆ, ‘ನನ್ನ ಕೆಲಸಕ್ಕೆ ನ್ಯಾಯ ಕೊಡಿ, ವಚನಭ್ರಷ್ಟರಾಗಬೇಡಿ. ನಮ್ಮ ಸಮುದಾಯ ಹಾಗೂ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಬೇಡಿ’ ಎಂದು ದಿಲ್ಲಿ ದೊರೆಗಳ ಕರ್ತವ್ಯಪ್ರಜ್ಞೆಯನ್ನು ಜಾಗೃತಗೊಳಿಸುತ್ತಾ, ತಮ್ಮ ಪಟ್ಟಾಭಿಷೇಕದ ಸಮಯ ನಿಗದಿ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ.
ಆದರೆ, 2023ರಲ್ಲಿ ಶಿವಕುಮಾರ್‌ಗೆ ವಾಗ್ದಾನ ನೀಡಿದ್ದಾಗ, ‘ಎರಡೂವರೆ ವರ್ಷಗಳ ನಂತರ ನೀವು ಶಿವಕುಮಾರ್‌ಗೆ ಅಧಿಕಾರ ಹಸ್ತಾಂತರ ಮಾಡಬೇಕು’ ಎಂದು ಸಿದ್ದರಾಮಯ್ಯರಿಗೆ ತಿಳಿಸಲಾಗಿತ್ತೇ? ಎನ್ನುವುದನ್ನು ಹೈಕಮಾಂಡೇ ಬಹಿರಂಗಪಡಿಸಬೇಕು. ವಾಗ್ದಾನ ಮಾಡಿದ್ದು ನಿಜವೇ ಆಗಿದ್ದರೆ ಅದನ್ನು ಈಡೇರಿಸಬೇಕು. ಇಲ್ಲವಾದಲ್ಲಿ, ಅಂಥ ಒಪ್ಪಂದವೇ ನಡೆದಿಲ್ಲ ಎನ್ನುವ ಸ್ಪಷ್ಟನೆ ಯನ್ನಾದರೂ ನೀಡಬೇಕಲ್ಲವೇ? ಆದರೆ, ಹಲ್ಲು ಕಿತ್ತ ಹಾವಿನಂತಿರುವ ದುರ್ಬಲ ಹೈಕಮಾಂಡ್, ಇವ್ಯಾವುದನ್ನೂ ಮಾಡದಿರುವುದೇ ಕಾಂಗ್ರೆಸ್‌ನ ಆಂತರಿಕ ಬಿಕ್ಕಟ್ಟಿನ ಗಾಯಕ್ಕೆ ಬರೆ ಎಳೆಯುತ್ತಿದೆ.
ಈಗ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಪ್ರಹಸನಗಳು ಹಿಂದೆ ಪಂಜಾಬ್, ಛತ್ತೀಸ್‌ಗಢ ಮತ್ತು ರಾಜಸ್ಥಾನಗಳಲ್ಲಿ ಕೂಡ ನಡೆದು, ಆ ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದು ಕೊಂಡಿರುವುದನ್ನು ನೆನಪಿಸಿಕೊಳ್ಳುವುದು ಪ್ರಸ್ತುತ. ಛತ್ತೀಸ್‌ಗಢದಲ್ಲಿ ಒಬಿಸಿ ಸಮುದಾಯದ ಭೂಪೇಶ್ ಬಗೇಲ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವ ಮುನ್ನ ಮೇಲ್ವರ್ಗದ ರಜಪೂತ ಸಮುದಾಯದ ಟಿ.ಎಸ್.ಸಿಂಗ್‌ದೇವ್ ಸಿಎಂ ಸ್ಥಾನಕ್ಕಾಗಿ ಪ್ರಬಲ ಲಾಬಿ ಮಾಡಿದ್ದರು.
ಆಗ, ಎರಡೂವರೆ ವರ್ಷಗಳ ನಂತರ ಸೂಕ್ತ ಸ್ಥಾನಮಾನದ ಭರವಸೆ ನೀಡಿ ಅವರನ್ನು ಸಮಾಧಾನ ಪಡಿಸಲಾಗಿತ್ತು. ಆದರೆ, ಟಿ.ಎಸ್. ಸಿಂಗ್ ದೇವ್‌ಗೆ ನೀಡಿದ್ದ ವಾಗ್ದಾನವನ್ನು ಹೈಕಮಾಂಡ್ ಉಳಿಸಿ ಕೊಳ್ಳಲಿಲ್ಲ. ಬದಲಿಗೆ ಚುನಾವಣೆಗೆ ೬ ತಿಂಗಳು ಬಾಕಿ ಇರುವಾಗಲೇ ಅವರನ್ನು ಉಪ ಮುಖ್ಯಮಂತ್ರಿ ಯನ್ನಾಗಿ ನೇಮಕ ಮಾಡಲಾಯ್ತು.
ಆದರೆ, ಕಾಲ ಮೀರಿತ್ತು ಮತ್ತು ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ನೆಲಕಚ್ಚಿತ್ತು. ಈ ೩ ರಾಜ್ಯಗಳ ಕಹಿನೆನಪುಗಳಿಂದಾಗಿಯೇ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ವಿಚಾರ ಎನ್ನುವುದು ಕೈ ಹೈಕಮಾಂಡಿಗೆ ಕತ್ತಿ ಅಲಗಿನ ಮೇಲಿನ ನಡಿಗೆಯಂತಾಗಿದೆ. ಇಲ್ಲಿ ಯಾರ ಪರ ನಿರ್ಧಾರ ತೆಗೆದುಕೊಂಡರೂ ಪರಿಣಾಮ ನೆಟ್ಟಗಿರುವ ಲಕ್ಷಣಗಳಂತೂ ಇಲ್ಲ.
(ಲೇಖಕರು ಹಿರಿಯ ಪತ್ರಕರ್ತರು)