Rangaswamy Mookanahalli Column: ಮನಸ್ಥಿತಿ ಬದಲಾಗದೆ ಭಾರತ ಸ್ವಚ್ಛವಾಗುವುದಿಲ್ಲ!
ಕಾಂಬೋಡಿಯದಲ್ಲಿ ಕಸವೇ ಇಲ್ಲವೇ ಎನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಎದ್ದಿರುತ್ತದೆ. ಅಂದು, ಇಂದು ಬಡಾವಣೆಗಳಲ್ಲಿ ಸ್ವಚ್ಛತೆಯಿಲ್ಲ. ಆದರೆ ಮೆಜಾರಿಟಿ ಸ್ವಚ್ಛವಾಗಿದೆ. ನಮ್ಮಲ್ಲಿ ಅಂದು ಇಂದು ಏರಿಯಾ ಸ್ವಚ್ಛವಾಗಿದೆ. ಮೆಜಾರಿಟಿ ಕೆಟ್ಟದಾಗಿ ಇಟ್ಟು ಕೊಂಡಿದ್ದೇವೆ. ಈಗ ನಿಮ್ಮಲ್ಲಿ ಇನ್ನೊಂದು ಪ್ರಶ್ನೆಯೂ ಎದ್ದಿರುತ್ತದೆ
-
ವಿಶ್ವರಂಗ
ನಾವೇಕೆ ಹೀಗೆ? ಎನ್ನುವ ಪ್ರಶ್ನೆ ಇವತ್ತು ನಿನ್ನೆಯದಲ್ಲ. ಈ ಪ್ರಶ್ನೆ ಶುರುವಾಗಿ ನಾಲ್ಕು ದಶಕವಾಗಿದೆ. ಸ್ವಲ್ಪ ಬುದ್ಧಿ ತಿಳಿಯುವುದಕ್ಕೆ ಶುರುವಾದಾಗಿನಿಂದ ಈ ಪ್ರಶ್ನೆ ಸದಾ ಮರುಕಳಿಸುತ್ತಿದೆ. ಉತ್ತರ ಮಾತ್ರ ಇನ್ನೂ ಸಿಕ್ಕಿಲ್ಲ. ಕಳೆದ ವಾರ ಗೆಳೆಯರೊಂದಿಗೆ ಕಾಂಬೋಡಿಯಾ ದೇಶಕ್ಕೆ ಹೋಗುವ ಅವಕಾಶವಾಗಿತ್ತು. ಕಾಂಬೋಡಿಯಾ ದೇಶವನ್ನು ಭಾರತದೊಂದಿಗೆ ಹೋಲಿಸುವಂತಿಲ್ಲ. ಅದೊಂದು ಪುಟಾಣಿ ದೇಶ. ವಿಸ್ತೀರ್ಣದಲ್ಲಿ ಕರ್ನಾಟಕ ರಾಜ್ಯಕ್ಕಿಂತ ಸ್ವಲ್ಪ ಚಿಕ್ಕದು. ಆದರೆ ಜನಸಂಖ್ಯೆ ಲೆಕ್ಕಾಚಾರದಲ್ಲಿ ಜಾರ್ಖಂಡ್ ರಾಜ್ಯಕ್ಕೆ ಇದು ಸಮವಾಗಿದೆ. ಇಲ್ಲಿನ ಜನಸಂಖ್ಯೆ ಸರಿಸುಮಾರು 1.8 ಕೋಟಿ. ಲೆಕ್ಕಾಚಾರದ ದೃಷ್ಟಿಯಲ್ಲಿ ಹೇಳಿಕೊಳ್ಳುವಂತಹ ಸಿರಿವಂತ ದೇಶ ವೇನೂ ಅಲ್ಲ.
ಹೇಳಿಕೊಳ್ಳುವಂತಹ ಅವಕಾಶಗಳು ಕೂಡ ಜನರ ಮುಂದಿಲ್ಲ. ಹೇಗೋ ಜೀವನ ಸಾಗಿಸಲು ಅಡ್ಡಿ ಯಿಲ್ಲ ಎನ್ನವಷ್ಟರ ಮಟ್ಟಿಗೆ ದೇಶ ನಡೆಯುತ್ತಿದೆ. ಜನರು ಕೂಡ ತೃಪ್ತ ಮನೋಭಾವದವರು. ಅಲ್ಲಿ ಇಳಿದ ತಕ್ಷಣ ಮನಸ್ಸಿನಲ್ಲಿ ದಶಕಗಳಿಂದ ಕಾಡುವ ಪ್ರಶ್ನೆ ನಾವೇಕೆ ಹೀಗೆ? ಎನ್ನುವುದು ಮತ್ತೆ ಕಾಡಲು ಶುರುವಾಯ್ತು. ಅಲ್ಲಿ ಬಡತನವಿದೆ, ಹೇಳಿಕೊಳ್ಳುವ ಅವಕಾಶಗಳಿಲ್ಲ, ಆದರೆ ಜನ ಸ್ವಚ್ಛತೆ ಯನ್ನು ಕಾಪಾಡಿಕೊಳ್ಳುತ್ತಾರೆ. ಸಮಾಜದ ಸ್ವಚ್ಛತೆ ಬಗ್ಗೆ ಅವರಿಗೆ ಕಾಳಜಿಯಿದೆ. ರಸ್ತೆ ಬದಿಯಲ್ಲಿ ಹಣ್ಣು ಮಾರುವವರು ಕೂಡ ಕೈಗೆ ಗ್ಲೋ ಹಾಕಿಕೊಂಡಿರುತ್ತಾರೆ. ಸಿಪ್ಪೆ, ಕವರು ಇತ್ಯಾದಿ ರಸ್ತೆಗೆ ಹಾಕುವುದಿಲ್ಲ, ಎಲ್ಲವೂ ಅವರು ಹೊತ್ತು ತರುವ ಕಸದ ಬುಟ್ಟಿಯಲ್ಲಿ ಹಾಕಿಕೊಳ್ಳುತ್ತಾರೆ. ಅಪ್ಪಿ ತಪ್ಪಿ ಕೆಳಕ್ಕೆ ಕಸ ಬಿದ್ದರೆ ಚೂರೂ ಬೇಸರ ತೋರಿಸದೆ ಅದನ್ನು ಎತ್ತಿ ಕಸದ ಬುಟ್ಟಿಗೆ ಹಾಕುತ್ತಾರೆ.
ಇಲ್ಲಿಯವರೆಗೆ ನಾನು ನೋಡಿದ ದೇಶಗಳ ಸಂಖ್ಯೆ ಎಪ್ಪತ್ತಾಯ್ತು. ಸ್ವಚ್ಛತೆ ಎನ್ನುವುದು ಸಿರಿತನ-ಬಡತನದ ಮೇಲೆ ನಿರ್ಭರವಾಗಿಲ್ಲ ಎನ್ನುವುದು ಮತ್ತೊಮ್ಮೆ ಮನದಟ್ಟಾಯ್ತು. ಅದು ಮನಸ್ಥಿತಿ. ನಮ್ಮ ದೇಶದಲ್ಲಿ ಜನರ ಮನಸ್ಥಿತಿ ಬದಲಾಗುವುದು ಯಾವಾಗ? ನಾವು ಸ್ವಚ್ಛ ಸಮಾಜವಾಗುವುದು ಯಾವಾಗ? ಎನ್ನುವ ಪ್ರಶ್ನೆಗೆ ಉತ್ತರ ಯಾವಾಗ ಸಿಗುತ್ತದೆ ಎನ್ನುವುದು ಕೂಡ ಗೊತ್ತಿಲ್ಲ.
ಇದನ್ನೂ ಓದಿ: Rangaswamy Mookanahally Column: ನಾವೇ ಸೃಷ್ಟಿಸಿಕೊಂಡ ಖೆಡ್ಡಾದಿಂದ ಹೊರಬರಲು ಸಾಧ್ಯವಿಲ್ಲವೆ?
ಕಾಂಬೋಡಿಯದಲ್ಲಿ ಕಸವೇ ಇಲ್ಲವೇ ಎನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಎದ್ದಿರುತ್ತದೆ. ಅಂದು, ಇಂದು ಬಡಾವಣೆಗಳಲ್ಲಿ ಸ್ವಚ್ಛತೆಯಿಲ್ಲ. ಆದರೆ ಮೆಜಾರಿಟಿ ಸ್ವಚ್ಛವಾಗಿದೆ. ನಮ್ಮಲ್ಲಿ ಅಂದು ಇಂದು ಏರಿಯಾ ಸ್ವಚ್ಛವಾಗಿದೆ. ಮೆಜಾರಿಟಿ ಕೆಟ್ಟದಾಗಿ ಇಟ್ಟು ಕೊಂಡಿದ್ದೇವೆ. ಈಗ ನಿಮ್ಮಲ್ಲಿ ಇನ್ನೊಂದು ಪ್ರಶ್ನೆಯೂ ಎದ್ದಿರುತ್ತದೆ. ಜಪಾನ್, ಸಿಂಗಾಪುರ, ಕಾಂಬೋಡಿಯಾ, ದುಬೈ, ಯೂರೋಪಿನ ದೇಶಗಳ ಬಗ್ಗೆ ಹೇಳಿದಾಗೆ ಅಲ್ಲಿ ಜನಸಂಖ್ಯೆ ಕಡಿಮೆ, ಪುಟ್ಟ ದೇಶ, ಅವುಗಳನ್ನು ನಿಯಂತ್ರಿಸುವುದು ಬಹಳ ಸುಲಭ, ಇತ್ಯಾದಿ ಸಬೂಬು ಹೇಳಿ, ನಮ್ಮ ದೇಶ ಸ್ವಚ್ಛವಿಲ್ಲದಿರುವುದಕ್ಕೆ ನಾವೇ ಕಾರಣ ಕೊಟ್ಟುಕೊಂಡು, ಮನಸ್ಸಿಗೆ ಸಮಜಾಯಿಷಿ ಹೇಳಿಕೊಳ್ಳುವುದು ಸಾಮಾನ್ಯವಾಗಿದೆ.
ಆದರೆ ನಮ್ಮ ನೆರೆ ರಾಷ್ಟ್ರ ಚೀನಾವನ್ನು ಒಮ್ಮೆ ನೋಡಿಕೊಂಡು ಬನ್ನಿ ಪ್ಲೀಸ್. ಜನಸಂಖ್ಯೆ, ವಿಸ್ತೀರ್ಣ ಎರಡರಲ್ಲೂ ಭಾರತಕ್ಕೆ ಸರಿಸಾಟಿ ಎನ್ನುವಂತಿರುವ ಚೀನಾ, ಪಾಶ್ಚಾತ್ಯ ದೇಶಗಳು ನಿಬ್ಬೆರ ಗಾಗಿ ನೋಡುವಷ್ಟು ಸ್ವಚ್ಛವಾಗಿದೆ. ಕೆಲವು ನಗರಗಳು ಮಾತ್ರ ಚೆನ್ನಾಗಿದೆ, ಚೀನಾ ಬಹಳಷ್ಟು ಪ್ರದೇಶಗಳನ್ನು ಜನರಿಗೆ ತೋರಿಸುತ್ತಿಲ್ಲ ಇತ್ಯಾದಿ ಮಾತುಗಳು ಕೂಡ ಬರುತ್ತವೆ. ಆದರೆ ಗಮನಿಸಿ ಚೀನಾ ಯಾವುದನ್ನು ಜಗತ್ತಿಗೆ ತೋರಿಸುತ್ತಿದೆ ಅಷ್ಟು ಚೆನ್ನಾಗಿದೆ ಎನ್ನುವುದನ್ನು ಒಪ್ಪಿಕೊಳ್ಳಲು ಅಡ್ಡಿಯಿಲ್ಲವಷ್ಟೆ ? ನಾವು ಮೊದಲಿಗೆ ಅಷ್ಟನ್ನು ಮಾಡೋಣ ಅಲ್ಲವೇ? ಚೀನಾ ಭಾರತವನ್ನು ಐವತ್ತು ವರ್ಷ ಹಿಂದಕ್ಕಿಕ್ಕಿ ಮುಂದೆ ಹೋಗಿದೆ. ಪಾಶ್ಚಾತ್ಯ ದೇಶಗಳು ಕೂಡ ಚೀನಾಗಿಂತ ಕನಿಷ್ಠ ಎರಡು ದಶಕ ಹಿಂದಿವೆ.
ನಮ್ಮದು ಸೋಗಲಾಡಿ ಸಮಾಜ ಎನ್ನುವುದನ್ನು ನಾನು ದಶಕಗಳಿಂದ ಹೇಳುತ್ತಾ ಬಂದಿದ್ದೇನೆ. ನಾವು ನಮ್ಮ ನೆಲವನ್ನು ಮಾತೆ ಎನ್ನುತ್ತೇವೆ, ಹೆಣ್ಣನ್ನು ದೇವತೆ ಎನ್ನುತ್ತೇವೆ, ಗೋವನ್ನು ಮಾತೆ ಎನ್ನುತ್ತೇವೆ, ಆದರೆ ಅವುಗಳಿಗೆ ನಾವು ಕೊಡುತ್ತಿರುವ ಗೌರವವೆಷ್ಟು? ನಮ್ಮ ಇಷ್ಟ ದೇವರುಗಳ ಪಟವನ್ನು ರಸ್ತೆಯಲ್ಲಿ, ಯಾವುದೋ ಮರದ ಬುಡದಲ್ಲಿ ಬಿಸಾಕಿ ಹೋಗುತ್ತೇವೆ. ನಾನು ಹೆಸರು ಹೇಳಲು ಹೋಗುವುದಿಲ್ಲ, ಕೆಲವು ಪ್ರಸಿದ್ಧ ದೇವಾಲಯಗಳಿರುವ ಊರುಗಳಲ್ಲಿ ಕಾಲಿಡಲು ಯೋಚಿಸಬೇಕು ಅಷ್ಟು ಗಲೀಜು ತಾಂಡವ ವಾಡುತ್ತಿದೆ. ದೇವರ ಹೆಸರು ಹೇಳುವ ನಾವು ಶುಚಿಯಾಗಿ ಇಟ್ಟುಕೊಳ್ಳದೆ ಇರುವುದು ಆ ದೈವಕ್ಕೆ ಮಾಡಿದ ಅವಮಾನ ಎಂದೇಕೆ ಅಂದು ಕೊಳ್ಳುವುದಿಲ್ಲ. ದೇವರ ಹೆಸರು ಹೇಳಿ ಏಕೆ ನಾವು ಶುಚಿತ್ವವನ್ನು ಕಾಪಾಡಲು ಸಾಧ್ಯವಿಲ್ಲ?
ಇವತ್ತಿಗೆ ಎರಡು ಅಥವಾ ಮೂರು ದಶಕದ ಹಿಂದಿನ ಭಾರತವಾಗಿ ನಾವು ಉಳಿದಿಲ್ಲ. ಆರ್ಥಿಕವಾಗಿ ಭಾರತ ಬಲಿಷ್ಠವಾಗಿದೆ. ಆದರೆ ಮನಸ್ಥಿತಿ? ಶುಚಿತ್ವದ ಬಗ್ಗೆ ನಮ್ಮ ಮನಸ್ಥಿತಿ ಮಾತ್ರ ಬದಲಾಗಿಲ್ಲ. ನಿಜ ಹೇಳಬೇಕೆಂದರೆ ಇನ್ನಷ್ಟು ಕೆಟ್ಟದಾಗಿದೆ. ಐಷಾರಾಮಿ ಕಾರುಗಳಲ್ಲಿ ಪ್ರಯಾಣ ಮಾಡುತ್ತಾ ಕಿಟಕಿಯ ಗ್ಲಾಸು ಇಳಿಸಿ ಚಿ ಖಾಲಿ ಕವರು ಇತ್ಯಾದಿ ಎಸೆದು ಹೋಗುತ್ತಾರೆ. ನಿಜವಾಗಿ ಸ್ವಚ್ಛತೆ ಬಗ್ಗೆ ಕಾಳಜಿಯೇ ನಮ್ಮ ಸಮಾಜದಲ್ಲಿಲ್ಲ. ಭಾರತ ಮಾತ್ರ ಹೀಗೆ ಅಂತಲ್ಲ.
ಇವತ್ತು ನಾವು ನೋಡುತ್ತಿರುವ ಜಗಮಗಿಸುವ ಮಲೇಷ್ಯಾ ದೇಶದ ರಸ್ತೆಗಳಲ್ಲಿ ಥೇಟ್ ನಮ್ಮಲ್ಲಿರು ವಂತೆ ಕಸದ ರಾಶಿ ಇರುತ್ತಿತ್ತು. ಅದು ಕೊಳೆತು ನಾರುತ್ತಿತ್ತು. ಲಂಡನ್ ನಗರದಲ್ಲಿರುವ ಥೇಮ್ಸ್ ನದಿ ಥೇಟ್ ನಮ್ಮ ವೃಷಭಾವತಿ ನದಿಯಂತೆ ವಾಸನೆ ಹೊಡೆಯುತ್ತಿತ್ತು, ಅಷ್ಟು ಬದಲಿಸಲಾಗದ ಮಟ್ಟಿಗೆ ಅದು ಗಬ್ಬೆದ್ದು ಹೋಗಿತ್ತು. ಇವತ್ತಿಗೆ ಥೇಸ್ ನದಿಯ ದಂಡೆಯಲ್ಲಿ ಜನ ಕುಳಿತು ಹರಟೆ ಹೊಡೆಯು ತ್ತಾರೆ. ನಾನು ಪ್ರಥಮವಾಗಿ 99ರಲ್ಲಿ ದುಬೈ ತಲುಪಿದಾಗ ಅದು ಇವತ್ತಿನ ಪ್ರಜ್ವಲತೆಯನ್ನು ಗಳಿಸಿಕೊಂಡಿರಲಿಲ್ಲ ನಿಜ, ಆದರೆ ಜನ ರಸ್ತೆಯಲ್ಲಿ ಉಗುಳುವುದಕ್ಕೆ ಹೆದರುತ್ತಿದ್ದರು. ಅಂದಿಗೆ ರಸ್ತೆಯಲ್ಲಿ ಉಗುಳಿದರೆ ಮೂವತ್ತು ಧಿರಾಮ್ ದಂಡ ವಿಧಿಸಲಾಗುತ್ತಿತ್ತು. ಇದೇ ಭಾರತೀಯರು ದುಬೈನಲ್ಲಿ ಉಗುಳುವುದಕ್ಕೆ, ಸಿಗ್ನಲ್ ಜಂಪ್ ಮಾಡುವುದಕ್ಕೆ ಹೆದರುತ್ತಾರೆ. ದಂಡದ ಭಯ.
ಇನ್ನು ಯೂರೋಪಿನಲ್ಲಿ ಕೂಡ ಜನ ಗಲೀಜು ಮಾಡುವುದಿಲ್ಲ ಅಂತೇನಿಲ್ಲ. ಭಾನುವಾರದ ಸಂತೆ, ಬುಧವಾರದ ಸಂತೆ, ಕಳ್ಳ ಸಂತೆ, ಸೆಕೆಂಡ್ ಹ್ಯಾಂಡ್ ಸಂತೆ ಹೀಗೆ ಎಲ್ಲಾ ರೀತಿಯ ಮಾರುಕಟ್ಟೆಗಳು ಅಲ್ಲೂ ಇವೆ. ಅ ಮಾರುಕಟ್ಟೆ ಮುಗಿಯುವ ವೇಳೆಗೆ ಗಲೀಜು ಮಯವಾಗಿರುತ್ತದೆ. ಆದರೆ ಮಾರು ಕಟ್ಟೆ ಮುಗಿದ ಒಂದು ತಾಸಿನಲ್ಲಿ ಅಲ್ಲಿ ಮಾರುಕಟ್ಟೆಯಿತ್ತು ಎಂದು ಹೇಳಲು ಆಗದಷ್ಟರ ಮಟ್ಟಿಗೆ ಪೌರ ಕಾರ್ಮಿಕರು ಸ್ವಚ್ಛಗೊಳಿಸಿ ಹೋಗುತ್ತಾರೆ. ಇನ್ನು ಜಪಾನಿನ ಕಥೆ ಬೇರೆ ಮಟ್ಟದ್ದು! ಅಲ್ಲೂ ನಿಮಗೆ ರಸ್ತೆಯಲ್ಲಿ ಕಸದ ಬುಟ್ಟಿ ಕಾಣುವುದೇ ಇಲ್ಲ! ಹೌದು ನಗರದಲ್ಲಿ ಕಸದ ಬುಟ್ಟಿಗಳೇ ಇಲ್ಲ. ಪ್ರವಾಸಿಗರು ಕೂಡ ತಮ್ಮ ಕಸವನ್ನು ತಾವೇ ಕವರಿನಲ್ಲಿ ಹಾಕಿಕೊಂಡು ಬ್ಯಾಗಿನಲ್ಲಿ ಇಟ್ಟುಕೊಂಡು ಹೋಗಬೇಕು. ತಮ್ಮ ಹೋಟೆಲ್ ಅಥವಾ ಎಲ್ಲಿ ಉಳಿದುಕೊಂಡಿರುತ್ತಾರೆ ಅಲ್ಲಿರುವ ಕಸದ ಬುಟ್ಟಿಯಲ್ಲಿ ಹಾಕಬೇಕು.
ಜನ ಸಾಮಾನ್ಯ ಜಗತ್ತಿನೆಡೆ ಸೇಮ್ ಕಣ್ರೀ. ಅವನಿಗೆ ಲೋಕಜ್ಞಾನ ಕಡಿಮೆ. ಗಲೀಜು ಮಾಡುವುದು, ಅನ್ನಿಸಿದ್ದು ತಕ್ಷಣ ಹೇಳುವುದು, ಮಾಡುವುದು, ಹೆಚ್ಚು ಚಿಂತಿಸದೆ ತನ್ನ ಸ್ವಸುಖಕ್ಕೆ ಮಾತ್ರ ಪ್ರಾಮು ಖ್ಯತೆ ಕೊಡುವುದು ಸಾಮಾನ್ಯ, ಸಹಜ. ಆದರೆ ಒಂದು ವ್ಯವಸ್ಥೆ, ಭದ್ರವಾದ ವ್ಯವಸ್ಥೆ ಕಟ್ಟಿರುವ ಕಾರಣ ಮತ್ತು ವ್ಯವಸ್ಥೆ ಮುರಿದರೆ ಬೀಳುವ ದಂಡದ ಭಯದ ಕಾರಣ ವ್ಯವಸ್ಥೆಯನ್ನು ಅವರು ಮುರಿಯುವುದಿಲ್ಲ. ಇದರ ಜೊತೆಗೆ ಸಮಾಜದಲ್ಲಿ ಸೃಷ್ಟಿಯಾಗುವ ಗಲೀಜನ್ನು ಸ್ವಚ್ಛ ಗೊಳಿಸುವ ವ್ಯವಸ್ಥೆ ಚೆನ್ನಾಗಿ ಮಾಡಿದ್ದಾರೆ. ಅಲ್ಲಿನ ಪೌರ ಕಾರ್ಮಿಕರು ಎಂಟು ತಾಸು ಎಂದರೆ ಎಂಟು ತಾಸು ಕಸ ಗುಡಿಸುತ್ತಾರೆ. ರಸ್ತೆಯನ್ನು ಸ್ವಚ್ಛಗೊಳಿಸುತ್ತಲೇ ಇರುತ್ತಾರೆ. ನಮ್ಮಲ್ಲಿ? ಬೆಳಗಿನ ಒಂದೆರಡು ತಾಸಿನ ನಂತರ ಅವರು ಕಣ್ಣಿಗೆ ಬೀಳುವುದೇ ಇಲ್ಲ. ಅದೆಷ್ಟೋ ಬಡಾವಣೆಗಳಲ್ಲಿ ದಿನದಲ್ಲಿ ಒಂದೆರಡು ತಾಸು ಅವರನ್ನು ನೋಡುವ ಪುಣ್ಯವೂ ಇಲ್ಲ.
ರಸ್ತೆಯ ಇಕ್ಕೆಲಗಳಲ್ಲಿ ಹಳೆ ಮನೆ ಕೆಡವಿದ ಇಟ್ಟಿಗೆಗಳು, ಕೋಳಿ ಫಾರ್ಮ್‌ನ ಸತ್ತ ಕೋಳಿಗಳು, ಪುಕ್ಕಗಳು, ಮನೆಯಿಂದ ಸಂಗ್ರಹಿಸಿ ತೆಗೆದುಕೊಂಡು ಹೋದ ಕಸ ಇತ್ಯಾದಿಗಳನ್ನು ಸುರಿದು ಹೋಗು ತ್ತಾರೆ. ಯಾರಿಗೂ ಏನೂ ಅನ್ನಿಸುವುದೇ ಇಲ್ಲ. ಎಲ್ಲರಿಗೂ ಅವರವರ ಬದುಕನ್ನು ಕಟ್ಟಿಕೊಳ್ಳುವ ಧಾವಂತ. ಹೋರಾಡೋಣ ಎಂದರೆ ಯಾರ ವಿರುದ್ಧ ಹೋರಾಡುವುದು? ಕಸದ ಮಾಫಿಯಾ, ಧಮಕಿ ಜೊತೆಗೆ ನಮ್ಮ ಸಮಾಜದಲ್ಲಿನ ನಾಗರಿಕರ ‘ನಿನಗ್ಯಾಕೆ ಬೇಕು ಇಲ್ಲದ ಉಸಾಬರಿ?’ ಎನ್ನುವ ಸಲಹೆಗಳು ಹೋರಾಡುವ ಮನಸ್ಸಿದ್ದವರನ್ನು ಸುಮ್ಮನಾಗಿಸಿ ಬಿಡುತ್ತದೆ.
ಇದು ಒಬ್ಬ ನಾಗರಿಕನ ಕೆಲಸವಲ್ಲ. ಇದು ಸಂಘಟಿತರಾಗಿ ನಾವೆಲ್ಲರೂ ಮಾಡುವ, ಮಾಡಬೇಕಾದ ಕೆಲಸ. ಸೋಶಿಯಲ್ ಮೀಡಿಯಾದಲ್ಲಿ ಅಬ್ಬರಿಸಲು ನಮಗೆ ವೇಳೆ ಇರುತ್ತೆ. ಇಂತಹ ಸಂಘಟನೆ ಯಲ್ಲಿ ಪಾಲ್ಗೊಳ್ಳಲು ಸಮಯವೇ ಇರುವುದಿಲ್ಲ. ಎಲ್ಲರಿಗೂ ಸ್ವಚ್ಛ, ಶುಚಿಯಾದ ಸಮಾಜ ಬೇಕು. ಸ್ವಚ್ಛ ಭಾರತ ಅಭಿಯಾನ ಎಂದ ತಕ್ಷಣ ಅದೊಂದು ಗಿಮಿಕ್ ಎನ್ನುತ್ತೇವೆ. ಸ್ವಚ್ಛತೆ ಎನ್ನುವುದು ಜೀವನಶೈಲಿ ಆಗಬೇಕು. ಅದು ತೋರ್ಪಡಿಕೆಗೆ ಎರಡು ದಿನ ಮಾಡುವ ವಿಚಾರವಲ್ಲ.
ನಾರ್ದಿಕ್ ದೇಶಗಳಾದ ಸ್ವೀಡನ್, ಡೆನ್ಮಾರ್ಕ್, ಫಿನ್ಲ್ಯಾಂಡ್ ದೇಶಗಳಲ್ಲಿ ಕಸವನ್ನು ಬಳಸಿಕೊಂಡು ಅದರಿಂದ ವಿದ್ಯುತ್ ಉತ್ಪಾದನೆ ಮಾಡುತ್ತಾರೆ. ಯಾವುದೆ ಪುನರ್‌ಬಳಕೆ ಮಾಡಿಕೊಳ್ಳಬಹುದು ಅವೆಲ್ಲವನ್ನೂ ಪುನರ್ ಬಳಕೆಗೆ ಯೋಗ್ಯವಾಗುವಂತೆ ಬದಲಿಸುವ ರಿಸೈಕಲ್ ಯೂನಿಟ್‌ಗಳಿವೆ. ದೊಡ್ಡ ದೊಡ್ಡ ಮಾಲುಗಳಲ್ಲಿ ಬಾಟಲ್, ಪ್ಲಾಸ್ಟಿಕ್, ಬ್ಯಾಟರಿ ಮತ್ತಿತರ ತ್ಯಾಜ್ಯಗಳನ್ನು ನಿಗದಿತ ಸ್ಥಳದಲ್ಲಿ ಡೆಪಾಸಿಟ್ ಮಾಡಿದರೆ ಒಂದಷ್ಟು ಹಣವನ್ನು ಕೊಡುತ್ತಾರೆ.
ಅಂತಹ ಕೆಲಸವನ್ನು ಇಲ್ಲೂ ಮಾಡಬೇಕು. ಆಯಾ ನಗರದ ದೊಡ್ಡ ಉದ್ಯಮಿಗಳು ಮತ್ತು ಕಾರ್ಪೊರೇಶನ್ ಅಧಿಕಾರಿಗಳು ಕುಳಿತು ಚರ್ಚಿಸಿ ಸಂಸ್ಕರಣಾ ಘಟಕಗಳನ್ನು ತೆರೆಯಬೇಕು. ಪ್ರಮಾಣ ಮಾಡಿ ಹೇಳುತ್ತಿದ್ದೇನೆ. ರಸ್ತೆಯ ಎರಡೂ ಬದಿಯಲ್ಲಿ ಬಿದ್ದಿರುವುದು ಕೇವಲ ಕಸವಲ್ಲ. ಅದು ಹಣ. ಸರಿಯಾಗಿ ಅದನ್ನು ಬಳಸಿಕೊಂಡರೆ ವರ್ಷದಲ್ಲಿ ಕೋಟಿ ಗಟ್ಟಲೆ ಹಣವನ್ನು ಸಂಪಾದಿಸಬಹುದು.
ಏನೂ ಮಾಡದೆ ನಾವು ಕೋಟಿಗಟ್ಟಲೆ ಸಂಪಾದಿಸುತ್ತಿದ್ದೇವೆ ಎನ್ನುವ ಅಽಕಾರಿಗಳು, ಮನಸ್ಥಿತಿ ಬದಲಾಗದ ಹೊರತು ಭಾರತ ಸ್ವಚ್ಛವಾಗುವುದಿಲ್ಲ. ಪ್ರಾಥಮಿಕ ಶಾಲೆಗಳಲ್ಲಿ ಸ್ವಚ್ಛತೆ ಬಗ್ಗೆ ಅಭಿಯಾನ ಶುರುವಾಗಬೇಕು. ಗಲೀಜು ಎಂದರೆ ಅದೊಂದು ಅಪರಾಧ ಎನ್ನುವ ಭಾವನೆ ಸಮಾಜದಲ್ಲಿ ಬರಬೇಕು. ಮಕ್ಕಳ ಮನಸ್ಸಿನಲ್ಲಿ ನಾನು, ನನ್ನೂರು, ನನ್ನ ರಾಜ್ಯ, ನನ್ನ ದೇಶ ಎನ್ನುವ ಸ್ವಾಭಿಮಾನ, ಹೆಮ್ಮೆ ಹುಟ್ಟಿಸುವ ಕೆಲಸವಾಗಬೇಕು. ಸರಕಾರ ಸ್ವಚ್ಛತೆಯನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಬೇಕು.
ಸ್ವಚ್ಛತೆ ಕಾಪಾಡಲು ಹೆಚ್ಚು ಪೌರ ಕಾರ್ಮಿಕರನ್ನು ನೇಮಿಸಬೇಕು. ಅವರು ಸರಿಯಾಗಿ ಕೆಲಸ ಮಾಡುತ್ತಿರುವುದಕ್ಕೆ ಹೊಣೆಗಾರಿಕೆ ವಿಧಿಸಬೇಕು. ಹಾಗೆ ನಾಗರಿಕರು ಕೂಡ ಗಲೀಜು ಮಾಡದಂತೆ ಎಚ್ಚರಿಕೆಯನ್ನು ವಿಧಿಸಬೇಕು. ತಪ್ಪಿದ್ದಲ್ಲಿ ಅದಕ್ಕೆ ದಂಡವನ್ನು ವಿಧಿಸಬೇಕು. ಸೋಶಿಯಲ್ ಪಾಯಿಂಟ್ ಸಿಸ್ಟಮ್ ತರಬೇಕು. ಯಾರು ಹೆಚ್ಚು ನಿಯಮವನ್ನು ಮುರಿಯುತ್ತಾರೆ ಅಂತಹವರಿಗೆ ಸಾಮಾಜಿಕ ಛೀಮಾರಿ ಹಾಕುವ ವ್ಯವಸ್ಥೆ ತರಬೇಕು. ಅಂತಹವರಿಂದ ಕಸ ಗುಡಿಸುವ, ಸ್ವಚ್ಛಗೊಳಿ ಸುವ ಕೆಲಸವನ್ನು ಮಾಡಿಸಬೇಕು. ಕಾರಿನಿಂದ, ಬಸ್ಸಿನಿಂದ ಉಗಿಯುವುದು, ರಸ್ತೆಯಲ್ಲಿ ಉಗಿಯು ವುದು ಶಿಕ್ಷಾರ್ಹ ಅಪರಾಧ ಎಂದು ಘೋಷಿಸಬೇಕು.
ರಸ್ತೆಯಲ್ಲಿ ಹಸು, ಎಮ್ಮೆ, ನಾಯಿ ಓಡಾಡದಂತೆ ಕಾನೂನು ತರಬೇಕು. ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವುದು, ಅ ಬದುಕುವುದು ತಪ್ಪು ಎನ್ನಬೇಕು. ನಗರದ ಸ್ವಚ್ಛತೆ ಎನ್ನುವುದು ಕೇವಲ ಸರಕಾರದ ಕೆಲಸ ಮಾತ್ರವಲ್ಲ, ನಾಗರಿಕರ ಕೆಲಸವೂ ಹೌದು. ಆದರೆ ಓಡಾಟಕ್ಕೆ ಎಂದು ಇರುವ ರಸ್ತೆಯಲ್ಲಿ ಬಹಳ ವರ್ಷದಿಂದ ವ್ಯಾಪಾರ ಮಾಡುತ್ತಾ ಬದುಕು ಕಟ್ಟಿಕೊಂಡಿzರೆ ಎಂದು ಅವರನ್ನು ಅಲ್ಲಿಂದ ಖಾಲಿ ಮಾಡಿಸಿ, ಓಡಾಟಕ್ಕೆ ಅನುಕೂಲ ಮಾಡಿಕೊಡುವುದರ ಬಗ್ಗೆಯೂ ಡಿಬೇಟ್ ಮಾಡುವ ನಮ್ಮ ಸಮಾಜದಿಂದ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ?