ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Keshav Prasad B Column: ಭಾರತದ ವಿದೇಶ ವ್ಯಾಪಾರ ನೆಟ್‌ ವರ್ಕ್‌ ಈಗ ಸರ್ವವ್ಯಾಪಿ !

ಎಂಬತ್ತರ ದಶಕದ ಕೊನೆಯ ತನಕ ಹೊರ ಜಗತ್ತಿಗೆ ಮುಚ್ಚಿಕೊಂಡಿದ್ದ ಭಾರತದ ಆರ್ಥಿಕತೆ 90ರ ದಶಕದಲ್ಲಿ ಉದಾರೀಕರಣದ ಹೊಸ್ತಿಲು ದಾಟಿತು. ಬಳಿಕ ಸಂಭವಿಸಿದ ಕ್ರಾಂತಿಕಾರಕ ಪರಿವರ್ತನೆ ಯ ಘಟ್ಟಗಳನ್ನು ನಾವು ನೋಡಿದ್ದೇವೆ. ಇದರ ಹಿಂದೆ ಉದಾರೀಕರಣದ ಫಲಶ್ರುತಿ ನಿಸ್ಸಂದೇಹ ವಾಗಿ ಇದ್ದೇ ಇದೆ.

ಭಾರತದ ವಿದೇಶ ವ್ಯಾಪಾರ ನೆಟ್‌ ವರ್ಕ್‌ ಈಗ ಸರ್ವವ್ಯಾಪಿ !

ಮನಿ ಮೈಂಡೆಡ್

ನಮ್ಮ ಕಾಲದಲ್ಲಿ ಸ್ವಂತ ಕಾರು ಬಿಡಿ, ಸೈಕಲ್,‌ ರೇಡಿಯೊ ಖರೀದಿ ಕೂಡ ಪ್ರತಿಷ್ಠೆಯ ಸಂಗತಿ ಯಾಗಿತ್ತು. ಸೈಕಲ್ ಕೊಳ್ಳಲೂ ಲೈಸೆನ್ಸ್ ಬೇಕಾಗುತ್ತಿತ್ತು. ಮನೆಗೊಂದು ಕಾರು, ರೆಫ್ರಿಜರೇಟರ್, ವಾಷಿಂಗ್ ಮಷೀನ್, ಕುಕ್ಕರ್ ಬಂತೆಂದರೆ ಭಾರಿ ವಿಶೇಷ ಮತ್ತು ಹಬ್ಬದ ಸಡಗರ ಇರುತ್ತಿತ್ತು. ಶ್ರೀಮಂತರಾದೆವು ಎಂಬ ಹೆಮ್ಮೆ ಬರುತ್ತಿತ್ತು" ಎನ್ನುತ್ತಾರೆ 50-80ರ ದಶಕದ ಹಳೆಯ ತಲೆಮಾರಿ‌ ನವರು ಅಲ್ಲವೇ? ಈಗ 50-70 ವರ್ಷ ವಯಸ್ಸಿನ ಜನರ ಬಳಿ, ಅವರ ಬಾಲ್ಯದ ದಿನಗಳಲ್ಲಿ ದೇಶದ ಆರ್ಥಿಕ ಸ್ಥಿತಿಗತಿಗಳು ಹೇಗೆ ಇತ್ತು ಎಂಬುದನ್ನು ಕೇಳಿ ನೋಡಿ.

ಈಗಿನ 10-20 ವರ್ಷದ ತರುಣ-ತರುಣಿಯರಿಗೆ ಬಹುಶಃ ಅಶ್ಚರ್ಯವಾದೀತು. ಏಕೆಂದರೆ ಉದಾರೀಕರಣಕ್ಕಿಂತ ಮೊದಲು ಭಾರತದ ಪರಿಸ್ಥಿತಿ ಹೇಗಿತ್ತು ಎಂಬ ಅಂದಾಜು ಅವರಿಗೆ ಗಾಢವಾಗಿ ತಟ್ಟದು. ಆದರೆ ಈಗ ಮಧ್ಯವಯಸ್ಕರಾಗಿರುವವರಿಗೆ ಮತ್ತು ಹಿರಿಯ ನಾಗರಿಕರಿಗೆ ಉದಾರೀಕರಣ ಪೂರ್ವ ಯುಗದ ಪರಿಚಯವೂ ಇದೆ. ಈಗಿನ ಬದಲಾವಣೆಯೂ ಕಣ್ಣಿಗೆ ಕಾಣುತ್ತಿದೆ!

ಅಷ್ಟೇ ಅಲ್ಲ, ಖಾಸಗಿ ವಲಯದ ಉದ್ದಿಮೆಗಳು, ಅವುಗಳು ಸೃಷ್ಟಿಸುವ ಉದ್ಯೋಗಾವಕಾಶಗಳೂ ಆಗ ಇದ್ದಿರಲಿಲ್ಲ. ಅನೇಕ ಮಂದಿಗೆ ಕೃಷಿ-ವ್ಯವಸಾಯ ಮತ್ತು ಸಾಂಪ್ರದಾಯಿಕ ಕಸುಬುಗಳು ಬಿಟ್ಟರೆ ಬೇರೊಂದೂ ಗೊತ್ತಿಲ್ಲ ಎಂಬ ಸ್ಥಿತಿ. ಹೀಗಿದ್ದ ಭಾರತ ಈಗ ಪ್ರಪಂಚದ 4ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ!

ಇದನ್ನೂ ಓದಿ: Keshav Prasad B Column: ಶ್ರೀಮಂತರಾಗಬೇಕೆಂದರೆ ತಾಳ್ಮೆಯೇ ನಿಮ್ಮ ದಿವ್ಯಮಂತ್ರವಾಗಬೇಕು !

ಜರ್ಮನಿಗೆ ಸೆಡ್ಡು ಹೊಡೆಯುತ್ತಿದೆ. ಇನ್ನೆರಡು ವರ್ಷದಲ್ಲಿ ಅಮೆರಿಕ-ಚೀನಾ ಬಿಟ್ಟರೆ ಮೂರನೇ ಸ್ಥಾನಕ್ಕೆ ಏರುವುದು ಕಷ್ಟವೇನಲ್ಲ. 2047ಕ್ಕೆ ಅಭಿವೃದ್ಧಿ ಹೊಂದಿರುವ ದೇಶವಾಗುವ ಮಹತ್ವಾ ಕಾಂಕ್ಷೆ ಅವಾಸ್ತವಿಕ ಎಂದು ಅನ್ನಿಸುವುದಿಲ್ಲ. ಇದು ಹೇಗೆ ಸಾಧ್ಯವಾಯಿತು? ಎನ್ನುವಾಗ ವಿದೇಶಾಂಗ ವ್ಯಾಪಾರ ನೀತಿಗಳು ನೆನಪಾಗದೆ ಇರುವುದಿಲ್ಲ.

“ವ್ಯಾಪಾರ ಮಾಡುವುದರಿಂದ ಯಾವುದೇ ದೇಶ ನಾಶವಾಗಿರುವ ಉದಾಹರಣೆಯೇ ಇಲ್ಲ, ವ್ಯಾಪಾರ ಅನನುಕೂಲ ಎಂಬಂತೆ ತೋರಿದರೂ, ಇದು ಸತ್ಯ" ಎಂದು ಅಮೆರಿಕದ ಖ್ಯಾತ ವಿಜ್ಞಾನಿ, ಮುತ್ಸದ್ದಿ, ಲೇಖಕ ಬೆಂಜಮಿನ್ ಫ್ರಾಂಕ್ಲಿನ್ 1774ರಲ್ಲಿ ಹೇಳಿದ್ದರು. ಎರಡನೇ ವಿಶ್ವಯುದ್ಧ ಮುಕ್ತಾಯವಾದ ಬಳಿಕ, ಯುರೋಪ್ ಮತ್ತು ಉತ್ತರ ಅಮೆರಿಕದಲ್ಲಿ, ರಾಷ್ಟ್ರಗಳ ಮರುನಿರ್ಮಾಣ ಮತ್ತು ಭವಿಷ್ಯದಆರ್ಥಿಕ ಪ್ರಗತಿಗೆ ವ್ಯಾಪಾರದ ಉದಾರೀಕರಣ ಅಗತ್ಯ ಎಂಬ ಆಲೋಚನೆ ಗಟ್ಟಿಯಾಗಿತ್ತು.

ವಿಪರ್ಯಾಸವೆಂದರೆ, ಇದೇ ವೇಳೆ ತೃತೀಯ ಜಗತ್ತಿನ ದೇಶಗಳ ಅಭಿವೃದ್ಧಿಗೆ ಇದರಿಂದ ಯಾವ ಪ್ರಯೋಜನವೂ ಆಗದು ಎಂಬ ನಂಬಿಕೆ ಬೇರೂರಿತ್ತು. ಹೀಗಾಗಿ ಉಭಯ ಬಣಗಳ ಚಿಂತಕರು ಮತ್ತು ನೀತಿ ನಿರೂಪಕರು ಮೊದಲಿಗೆ ಪಾಶ್ಚಿಮಾತ್ಯ ದೇಶಗಳ ವ್ಯಾಪಾರ ನೀತಿಗಳನ್ನು ಗ್ಯಾಟ್ ( GATT) ಒಪ್ಪಂದಗಳ ಅಡಿಯಲ್ಲಿ (ಸುಂಕ ಮತ್ತು ವ್ಯಾಪಾರ ಕುರಿತ ಸಾಮಾನ್ಯ ಒಪ್ಪಂದ- General Agreement on Tariffs and Trade) ಉದಾರೀಕರಣಗೊಳಿಸಲು ಆದ್ಯತೆ ನೀಡಿದರು.

ಎಂಬತ್ತರ ದಶಕದ ಕೊನೆಯ ತನಕ ಹೊರ ಜಗತ್ತಿಗೆ ಮುಚ್ಚಿಕೊಂಡಿದ್ದ ಭಾರತದ ಆರ್ಥಿಕತೆ 90ರ ದಶಕದಲ್ಲಿ ಉದಾರೀಕರಣದ ಹೊಸ್ತಿಲು ದಾಟಿತು. ಬಳಿಕ ಸಂಭವಿಸಿದ ಕ್ರಾಂತಿಕಾರಕ ಪರಿವರ್ತನೆ ಯ ಘಟ್ಟಗಳನ್ನು ನಾವು ನೋಡಿದ್ದೇವೆ. ಇದರ ಹಿಂದೆ ಉದಾರೀಕರಣದ ಫಲಶ್ರುತಿ ನಿಸ್ಸಂದೇಹ ವಾಗಿ ಇದ್ದೇ ಇದೆ. ದೇಶೀಯ ಉದ್ದಿಮೆಗಳು ಹಾಗೂ ಮುಖ್ಯವಾಗಿ ಕೃಷಿ ವಲಯಕ್ಕೆ ಇದರಿಂದ ಸವಾಲುಗಳು ಎದುರಾಗಿದ್ದರೂ, ಕಾಲ ಕಾಲಕ್ಕೆ ಅವುಗಳಿಗೆ ಪ್ರತಿತಂತ್ರವನ್ನೂ, ರಕ್ಷಣಾ ಕವಚ ವನ್ನೂ ಭಾರತ ಅಳವಡಿಸಿಕೊಂಡಿದೆ.

ಮುಕ್ತ ವ್ಯಾಪಾರದ ಪರ ಮತ್ತು ವಿರೋಧ ಚರ್ಚೆಗಳಿಗೂ ದೀರ್ಘ ಇತಿಹಾಸವಿದೆ. ಆದರೆ ಆರಂಭ ದಲ್ಲಿ ‘ಗ್ಯಾಟ್’ ಒಪ್ಪಂದ ಬಳಿಕ ವಿಶ್ವ ವ್ಯಾಪಾರ ಸಂಘಟನೆಯ (ಡಬ್ಲ್ಯುಟಿಒ) ಒಪ್ಪಂದ ಗಳಿಂದ, ನಾನಾ ಬಗೆಯ ಸುಂಕಗಳು ಕಡಿಮೆಯಾಗಿವೆ. ವಿದೇಶಾಂಗ ವ್ಯಾಪಾರಗಳು ಹೆಚ್ಚಾಗಿವೆ. ನಾನಾ ವಲಯಗಳಿಗೆ ವಿದೇಶಿ ಹೂಡಿಕೆಯ ಹರಿವಿನಲ್ಲಿ ಹೆಚ್ಚಳವಾಗಿದೆ.

ಭಾರತದ ಸರಕುಗಳು ಮತ್ತು ಸೇವೆಗಳಿಗೆ ಹೊಸ ಮಾರುಕಟ್ಟೆಗಳು ತೆರೆದಿವೆ. ಇದರ ಪರಿಣಾಮ ದೇಶದ ಆರ್ಥಿಕ ಪ್ರಗತಿಯ ಹೊಸ ಯುಗಾರಂಭವಾಗಿದೆ. ಈ ಕುರಿತ ಇತ್ತೀಚಿನ ಬೆಳವಣಿಗೆಗಳೂ ಸ್ವಾರಸ್ಯಕರ. ಭಾರತದ ವಿದೇಶ ವ್ಯಾಪಾರ ವೇಗವಾಗಿ ವಿಕಸನವಾಗುತ್ತಿದೆ. ಹಲವಾರು ದೇಶಗಳ ಜತೆಗೆ ‘ಫ್ರೀ ಟ್ರೇಡ್ ಅಗ್ರಿಮೆಂಟ್’ (ಎಫ್‌ ಟಿಎ) ಕುರಿತ ಮಾತುಕತೆಗಳು ನಡೆಯುತ್ತಿವೆ.

ಈಗಾಗಲೇ ಇರುವ ಡೀಲ್‌ಗಳು ನವೀಕರಣವಾಗುತ್ತವೆ. 2025ರಲ್ಲಿ ಅಮೆರಿಕ, ಬ್ರಿಟನ್, ಯುರೋಪ್ ಮತ್ತು ಆಸಿಯಾನ್ ರಾಷ್ಟ್ರಗಳ ಜತೆಗೆ ಬಿಸಿನೆಸ್ ಮಾತುಕತೆ ನಡೆಸಲಾಗಿದೆ. ಆಫ್ರಿಕಾ, ಲ್ಯಾಟಿನ್ ಅಮೆರಿಕ, ಅರಬ್ ಕೊಲ್ಲಿ ದೇಶಗಳ ಜತೆಗೆ ಹೊಸ ಡೀಲ್‌ಗಳು ನಡೆಯಲಿವೆ. 2025ರಲ್ಲಿ ಭಾರತವು 13 ಸಕ್ರಿಯವಾದ ಮುಕ್ತ ವ್ಯಾಪಾರ ಒಪ್ಪಂದಗಳನ್ನು ( Free Trade Agreements) ಒಳಗೊಂಡಿದೆ.

ಇವುಗಳು ದ್ವಿಪಕ್ಷೀಯ ಮತ್ತು ಪ್ರಾದೇಶಿಕ ಪಾಲುದಾರಿಕೆಗಳನ್ನು ಬಲಪಡಿಸಲಿವೆ. ಭಾರತವು ತನ್ನ ಆರ್ಥಿಕತೆಯ ವಾಸ್ತವ ಸ್ಥಿತಿಗತಿ ಮತ್ತು ಬೆಳವಣಿಗೆಗೆ ಪೂರಕವಾಗಿ ಸಜ್ಜುಗೊಳ್ಳುತ್ತಿದೆ. ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರ ರಕ್ಷಣೆ ಮತ್ತು ರಾಷ್ಟ್ರೀಯ ಹಿತಾಸಕ್ತಿ ಎರಡರ ಸಮತೋಲನವನ್ನು ಕಾಯ್ದುಕೊಳ್ಳುತ್ತಿದೆ.

ಎಫ್‌ ಟಿಎ ಅಡಿಯಲ್ಲಿ ಎರಡು ಅಥವಾ ಹೆಚ್ಚು ದೇಶಗಳ ನಡುವೆ ವ್ಯವಹಾರ ನಡೆಯುತ್ತದೆ. ವ್ಯಾಪಾರಕ್ಕೆ ಅಡ್ಡಿಯಾಗುವ ಸುಂಕ, ಮೀಸಲು, ನಿರ್ಬಂಧಗಳನ್ನು ತೆರವುಗೊಳಿಸುವುದು ಇದರ ಉದ್ದೇಶ. ಆದ್ಯತಾ ವ್ಯಾಪಾರ ಒಪ್ಪಂದದಲ್ಲಿ ನಿರ್ದಿಷ್ಟ ಸರಕುಗಳ ಮೇಲೆ ಸುಂಕ ಇಳಿಕೆಗೆ ಒಪ್ಪಂದ ಏರ್ಪಡುತ್ತದೆ. ಸಮಗ್ರ ಆರ್ಥಿಕ ಸಹಕಾರದ ಒಡಂಬಡಿಕೆಯ ಅಡಿಯಲ್ಲಿ ಹೂಡಿಕೆ, ಸೇವೆ, ನಿಯಂತ್ರಣದಲ್ಲಿ ಸಹಕಾರ ಇರುತ್ತದೆ. ಇದು ದಕ್ಷಿಣ ಕೊರಿಯಾ ಮತ್ತು ಸಿಂಗಾಪುರದ ನಡುವೆ ಏರ್ಪಟ್ಟಿದೆ. ದ್ವಿಪಕ್ಷೀಯ ಹೂಡಿಕೆ ಒಪ್ಪಂದಗಳಲ್ಲಿ ಉಭಯ ರಾಷ್ಟ್ರಗಳ ನಡುವೆ ರಕ್ಷಣಾತ್ಮಕ ನಿಲುವುಗಳು ಮತ್ತು ಹೂಡಿಕೆಯ ಉತ್ತೇಜನದ ಉದ್ದೇಶವಿರುತ್ತದೆ.

ಭಾರತವು ಯುಎಇ ಮತ್ತು ಉಜ್ಬೆಕಿಸ್ತಾನದ ಜತೆಗೆ ಇದನ್ನು ಮಾಡಿಕೊಂಡಿದೆ. ಪ್ರಾದೇಶಿಕ ಮಟ್ಟದ ಒಡಂಬಡಿಕೆಗಳೂ ಇರುತ್ತವೆ. ಆಸಿಯಾನ್, ಏಷ್ಯಾ-ಪೆಸಿಫಿಕ್ ಟ್ರೇಡ್ ಅಗ್ರಿಮೆಂಟ್‌ಗಳು ಇದಕ್ಕೆ ಉದಾಹರಣೆ. ಇತ್ತೀಚಿನ ಬೆಳವಣಿಗೆಗಳನ್ನು ನೋಡೋಣ.

  1. ಭಾರತ-ಬ್ರಿಟನ್: ಭಾರತ ಮತ್ತು ಬ್ರಿಟನ್ ನಡುವೆ ಮಹತ್ವದ ಮುಕ್ತ ವ್ಯಾಪಾರ ಒಪ್ಪಂದ ಅಂತಿಮವಾಗಿದೆ. ಮೂರು ವರ್ಷಗಳ ಮಾತುಕತೆಯ ಬಳಿಕ 2025ರ ಮೇ 6ಕ್ಕೆ ಎಫ್‌ ಟಿಎಯನ್ನು ಅಂತಿಮಗೊಳಿಸಲಾಯಿತು. ಇದರ ಪರಿಣಾಮ ಭಾರತೀಯ ಕಂಪನಿಗಳು ತೆರಿಗೆ ಇಲ್ಲದೆ ಬ್ರಿಟಿಷ್ ಮಾರುಕಟ್ಟೆಯನ್ನು ಪ್ರವೇಶಿಸಬಹುದು. ಐಟಿ, ಹಣಕಾಸು, ವೃತ್ತಿಪರ ಸೇವೆಗಳು, ಶೈಕ್ಷಣಿಕ ಸೇವೆ ನೀಡುವ ಸಂಸ್ಥೆಗಳಿಗೆ, ಟೆಕ್ಸ್‌ಟೈಲ್ಸ್, ಆಟೋಮೊಬೈಲ್ ಬಿಡಿಭಾಗಗಳು, ಔಷಧಿ, ಜ್ಯುವೆಲ್ಲರಿ ಮತ್ತು ಎಂಜಿನಿಯರಿಂಗ್ ರಫ್ತಿಗೆ ಅನುಕೂಲವಾಗಲಿದೆ.

ಉಭಯ ದೇಶಗಳ ನಡುವೆ ಮಾರಾಟವಾಗುವ ಸರಕುಗಳ ಮೇಲೆ ತೆರಿಗೆಯ ಪ್ರಮಾಣ ಶೇ.90ರ ತನಕ ಕಡಿಮೆಯಾಗಲಿದೆ. ಅದೇ ರೀತಿಯಲ್ಲಿ ಬ್ರಿಟನ್ನಿನ ಮದ್ಯ, ಆಟೊಮೋಟಿವ್, ಲೈಫ್ ಸೈನ್ಸ್, ಅಡ್ವಾನ್ಸ್ಡ್ ಮಾನ್ಯುಫ್ಯಾಕ್ಚರಿಂಗ್ ಉತ್ಪನ್ನಗಳಿಗೆ ಭಾರತೀಯ ಮಾರುಕಟ್ಟೆಯ ಪ್ರವೇಶ ಸುಗಮ‌ ವಾಗಲಿದೆ. 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರ ಇಮ್ಮಡಿಯಾಗುವ ನಿರೀಕ್ಷೆ ಇದೆ.

  1. ಭಾರತ-ಅಮೆರಿಕ: ಭಾರತ ಮತ್ತು ಅಮೆರಿಕ ನಡುವೆ ಶೀಘ್ರದಲ್ಲಿಯೇ ಎಫ್‌ ಟಿಎ ಏರ್ಪಡುವ ನಿರೀಕ್ಷೆ ಇದೆ. ಇದು ಅಮೆರಿಕದ ‘ಸುಂಕ-ಸಮರ’ದ ಪ್ರಭಾವವನ್ನು ತಣ್ಣಗಾಗಿಸಲೂ ಸಹಕಾರಿ ಯಾಗಲಿದೆ. ಭಾರತದ ಟಾಪ್ ರಫ್ತು ತಾಣಗಳಲ್ಲಿ ಅಮೆರಿಕವೂ ಇರುವುದರಿಂದ ಸ್ಥಿರವಾದ ಆರ್ಥಿಕ ಬೆಳವಣಿಗೆಗೆ ಸೂಕ್ತ ಒಪ್ಪಂದ ಇದ್ದರೆ ಉತ್ತಮ.
  2. ಐರೋಪ್ಯ ಒಕ್ಕೂಟ: ಭಾರತ ಮತ್ತು 27 ದೇಶಗಳನ್ನು ಒಳಗೊಂಡಿರುವ ಐರೋಪ್ಯ ಒಕ್ಕೂಟದ ಜತೆಗೆ ವ್ಯವಹಾರ ಕುದುರಿಸಲು 11 ಸುತ್ತಿನ ಮಾತುಕತೆಗಳು ನಡೆದಿದ್ದು ಇವು ಶೀಘ್ರ ಅಂತಿಮ ವಾಗುವ ನಿರೀಕ್ಷೆ ಇದೆ. ಇದರಲ್ಲಿ ಬೌದ್ಧಿಕ ಆಸ್ತಿ ಹಕ್ಕು, ಸರಕಾರದ ಖರೀದಿ ಪ್ರಕ್ರಿಯೆಗಳು, ಸುಂಕ ವಿಚಾರಗಳೂ ಇರಲಿವೆ. ಒಪ್ಪಂದ ಯಶಸ್ವಿಯಾದರೆ ಭಾರತದಿಂದ ಯುರೋಪಿಗೆ ರೆಡಿಮೇಡ್ ಗಾರ್ಮೆಂಟ್ಸ್, ಔಷಧಿ, ಉಕ್ಕು, ಪೆಟ್ರೋಲಿಯಂ ಉತ್ಪನ್ನಗಳು, ಇಲೆಕ್ಟ್ರಿಕಲ್ ಮಷಿನರೀಸ್ ರಫ್ತು ಸುಗಮವಾಗಲಿದೆ.
  3. ಸ್ವಿಜರ್ಲೆಂಡ್: ಸ್ವಿಜರ್ಲೆಂಡ್ ಜತೆಗೆ ಟ್ರೇಡ್ ಆಂಡ್ ಇಕನಾಮಿಕ್ ಪಾರ್ಟ್‌ನರ್‌ಶಿಪ್ ಅಗ್ರಿಮೆಂಟ್ (TEPA) ಸಲುವಾಗಿ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಜೂನ್ 10ರಂದು ಸ್ವಿಜರ್ಲೆಂಡ್‌ಗೆ ಭೇಟಿ ನೀಡಿದ್ದರು. ಇದಕ್ಕೂ ಮುನ್ನ ಯರೋಪ್ ಜತೆಗೆ ಎಫ್‌ ಟಿಎಗೆ ಸಹಿ ಹಾಕಲಾಗಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜೂನ್ 5ರಂದು ಕಿರ್ಗಿಸ್ತಾನ್ ಜತೆಗೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದರು.
  4. ಚಿಲಿ: ಭಾರತ ಮತ್ತು ಚಿಲಿಯ ನಡುವಿನ ವ್ಯಾಪಾರ- ವ್ಯವಹಾರಗಳಿಗೆ ಮಾತುಕತೆ ನಡೆಯು‌ ತ್ತಿದೆ. ಡಿಜಿಟಲ್ ಸೇವೆ, ಹೂಡಿಕೆ, ಎಂಎಸ್‌ಎಂಇ, ಆರೋಗ್ಯ, ಕೃಷಿ, ಹವಾಮಾನ ಬದಲಾವಣೆ, ತಂತ್ರಜ್ಞಾನ, ಕ್ರಿಟಿಕಲ್ ಮಿನರಲ್, ಸಹಕಾರ ವಲಯದಲ್ಲಿ ಒಪ್ಪಂದ ಏರ್ಪಡುವ ನಿರೀಕ್ಷೆ ಇದೆ.
  5. ನ್ಯೂಜಿಲೆಂಡ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ‌ ಎಫ್‌ ಟಿಎ ಕುರಿತ ಮಾತುಕತೆ ಆರಂಭವಾಗಿದೆ. ಹಲವು ವರ್ಷಗಳ ಕಾಲ ಮಾತುಕತೆ ಬಾಕಿಯಾಗಿತ್ತು.

ಇತರ ದೇಶಗಳು: ಭಾರತ ಮತ್ತು ಒಮಾನ್, ಕತಾರ್, ಯುರೋಪಿಯನ್ ಫ್ರೀ ಟ್ರೇಡ್ ಅಸೋಸಿ ಯೇಶನ್ ಜತೆಗೂ ಮಾತುಕತೆ ಪ್ರಗತಿಯಲ್ಲಿದೆ. ಈ ಒಕ್ಕೂಟದಲ್ಲಿ ಐಸ್ಲೆಂಡ್, ನಾರ್ವೆ, ಸ್ವಿಜರ್ಲೆಂಡ್ ಮತ್ತು ಲಿಚೆನ್‌ಸ್ಟೀನ್ ಇವೆ. ಆಸಿಯಾನ್ ಒಕ್ಕೂಟದ ಜತೆಗಿನ ಒಪ್ಪಂದದ ಪರಾಮರ್ಶೆಗೂ ಮಾತುಕತೆ ನಡೆಯುತ್ತಿದೆ. ಭಾರತ-ಗಲ್ಫ್ ಕೋ-ಆಪರೇಷನ್ ಕೌನ್ಸಿಲ್ ಜತೆಗೆ ಕೂಡ ಎಫ್‌ ಟಿಎ ಮಾತುಕತೆ ಚಾಲ್ತಿಯಲ್ಲಿದೆ.

ಈ ಒಕ್ಕೂಟದಲ್ಲಿ ಸೌದಿ ಅರೇಬಿಯಾ, ಯುಎಇ, ಕತಾರ್, ಕುವೈತ್, ಒಮಾನ್ ಮತ್ತು ಬಹ್ರೈನ್ ಇವೆ. ಇಸ್ರೇಲ್ ಜತೆಗೂ ಮಾತುಕತೆ ಪ್ರಗತಿಯಲ್ಲಿದೆ. ತಂತ್ರಜ್ಞಾನ, ರಕ್ಷಣೆ, ಸೈಬರ್ ಸೆಕ್ಯುರಿಟಿ ಕ್ಷೇತ್ರದಲ್ಲಿ ಸಹಕಾರ ನಿರೀಕ್ಷಿಸಲಾಗಿದೆ. ಇವುಗಳಲ್ಲದೆ ಭಾರತವು ತನ್ನ ನೆರೆಹೊರೆಯ ದೇಶಗಳ ಜತೆಗೂ ಎಫ್‌ ಟಿಎ ಮಾಡಿಕೊಂಡಿದೆ.

ಆಗ್ನೇಯ ಏಷ್ಯಾ ವ್ಯಾಪಾರ ಒಪ್ಪಂದವು ಸಾರ್ಕ್ ರಾಷ್ಟ್ರಗಳ ಜತೆಗೆ ಸುಂಕ ಕಡಿತಕ್ಕೆ ಸಹಕಾರಿ ಯಾಗಿದೆ. ಶ್ರೀಲಂಕಾ, ನೇಪಾಳ, ಭೂತಾನ್, ಸಿಂಗಾಪುರ, ಮಲೇಷ್ಯಾ, ಮಾರಿಷಸ್ ಜತೆಗೂ ವ್ಯಾಪಾರ ನಿಯಮಗಳಿವೆ. ಯುದ್ಧ ಮತ್ತು ಕದನ ವಿರಾಮ, ಸುಂಕ ಸಮರ ಮತ್ತು ಮುಕ್ತ ವ್ಯಾಪಾರ ಒಪ್ಪಂದ ಗಳು ಜತೆ ಜತೆಯಲ್ಲಿ ನಡೆಯುತ್ತಿರುವ ಜಮಾನವಿದು!

ಉದಾಹರಣೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗಮನಿಸಿ. ಒಂದೆಡೆ ನಾನಾ ದೇಶಗಳ ವಿರುದ್ಧ ಸುಂಕ ಸಮರ ಸಾರುತ್ತಾರೆ. ಬಳಿಕ‌ ಚೌಕಾಸಿಯ ಆಟ. ಯುದ್ಧೋನ್ಮಾದ-ಕದನ ವಿರಾಮದಲ್ಲೂ ಪ್ರತ್ಯಕ್ಷ. ಬಳಿಕ ಮುಕ್ತ ವ್ಯಾಪಾರಗಳ ಮಾತುಕತೆ, ಚಹಾ ಕೂಟ. ಎಂಥಾ ವೈರಿ ಯಾದರೂ ಡೀಲ್‌ಗೆ ಸೈ! ಆದರೆ ಭಾರತದ್ದು ಇಂಥ ಕುಟಿಲ ನೀತಿಯಲ್ಲ ಬಿಡಿ.