Ravi Sajangadde Column: ರಾಜ್ಯ ರಾಜಕೀಯದ ಇಂಟರೆಸ್ಟಿಂಗ್ ಕವಲುಗಳು !
ಕರ್ನಾಟಕ ರಾಜಕಾರಣದಲ್ಲಿ ಇಂಥಾ ಲೋಲುಪತೆಯಿಂದ ಸ್ಥಾನಮಾನ, ಸಚಿವ ಸ್ಥಾನ ಮತ್ತು ಅಧಿಕಾರ ಕಳೆದುಕೊಂಡ ರಾಜಕಾರಣಿಗಳ ಸಂಖ್ಯೆ ದೊಡ್ಡದಿದೆ. ಇಲ್ಲಿನ ರಾಜಕೀಯ ಇತಿಹಾಸವನ್ನು ಗಮನಿಸಿದರೆ, ಸಾರ್ವಜನಿಕ ಜೀವನಕ್ಕೆ ಸಂಬಂಧಿಸಿದ ವಿವಾದಗಳು, ಆರೋಪಗಳು, ಮಾನ ಹಾನಿ ಪ್ರಕರಣಗಳು ಕಾಲಕಾಲಕ್ಕೆ ಹೊಸ ರೂಪದಲ್ಲಿ ಮುನ್ನೆಲೆಗೆ ಬಂದಿರುವುದು ಕಾಣಿಸುತ್ತದೆ.
-
ಡಿಸ್ಗಸ್ಟಿಂಗ್
ರವೀ ಸಜಂಗದ್ದೆ
ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಸಾರ್ವಜನಿಕ ಸೇವೆ, ನೀತಿ, ನಿಯಮ ಮತ್ತು ಕಲ್ಯಾಣ ಕಾರ್ಯಕ್ರಮಗಳ ಆಧಾರದ ಮೇಲೆ ಎದುರಾಗಬೇಕಿದ್ದ ರಾಜಕೀಯ ಸ್ಪರ್ಧೆಯು ಕಾಲಕ್ರಮೇಣ ವ್ಯಕ್ತಿಗತ ತೇಜೋವಧೆ ಹಾಗೂ ನಾಲ್ಕು ಗೋಡೆಗಳ ಮಧ್ಯದ ಖಾಸಗಿ ಜೀವನದ ವಿಷಯಗಳನ್ನೇ ಪ್ರಮುಖ ಅಸವನ್ನಾಗಿ ಮಾಡಿಕೊಳ್ಳುವ ಕಲುಷಿತ ಹಂತ ತಲುಪಿದೆ.
ರಾಜ್ಯ ರಾಜಕಾರಣದಲ್ಲಿ ಕಾಲಕಾಲಕ್ಕೆ ಹಗರಣಗಳು, ಖಾಸಗಿ ವೀಡಿಯೊಗಳು, ಸಿಡಿಗಳು, ಪೆನ್ ಡ್ರೈವ್ಗಳು, ನೀಲಿ ಚಿತ್ರಗಳ ವೀಕ್ಷಣೆ ಮುಂತಾದ ಪ್ರಕರಣಗಳು ಜನರೆದುರು ಬಂದು, ಹಲವಾರು ರಾಜಕೀಯ ನಾಯಕರ ಚಾರಿತ್ರ್ಯಹರಣವಾಗಿ ಸಮಾಜದ ಎದುರು ನಿಜಾರ್ಥದಲ್ಲಿ ಬೆತ್ತಲೆಯಾಗಿ ಮಾನ, ಮರ್ಯಾದೆ, ಓಟು, ಸ್ಥಾನಮಾನ, ಸಚಿವ ಸ್ಥಾನ ಮತ್ತು ರಾಜಕೀಯ ಹಾದಿಯನ್ನೇ ಕಳಕೊಂಡಿದ್ದಾರೆ!
ಅನೇಕರಿಗೆ ಪಕ್ಷದೊಳಗಿನ ಮತ್ತು ವಿರೋಧ ಪಕ್ಷದಲ್ಲಿರುವ ವಿರೋಧಿಗಳನ್ನು ಹಣಿಯಲು ಮತ್ತು ಆ ಮೂಲಕ ತಂತಮ್ಮ ರಾಜಕೀಯದ ದಾರಿ ಸುಗಮ ಮಾಡಲು ಇದು ಪ್ರಮುಖ ಅಸ್ತ್ರ. ಇತ್ತೀಚಿನ ‘ಸ್ಟಿಂಗ್ ಆಪರೇಷನ್’ ಈ ದಿಸೆಯಲ್ಲಿ ಹೊಚ್ಚ ಹೊಸತು! ‘ವೈಯಕ್ತಿಕ ತೇಜೋವಧೆ’ಯ ಕೆಟ್ಟ ಸಂಪ್ರದಾಯದ ಮುಂದುವರಿದ ಭಾಗವಿದು. ಇದರಲ್ಲಿ ಶಾಮೀಲಾದ ಎಲ್ಲರೂ ತಂತಮ್ಮ ವೈಯಕ್ತಿಕ ಲಾಭಕ್ಕಾಗಿ ಹಾತೊರೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ಇದನ್ನೂ ಓದಿ: Ravi Sajangadde Column: ವಿಶ್ವಗುರುವಾಗಿ ಭಾರತ ರೂಪುಗೊಳ್ಳಲು ಬ್ರಿಕ್ಸ್ ಅಡಿಪಾಯ
ಕರ್ನಾಟಕ ರಾಜಕಾರಣದಲ್ಲಿ ಇಂಥಾ ಲೋಲುಪತೆಯಿಂದ ಸ್ಥಾನಮಾನ, ಸಚಿವ ಸ್ಥಾನ ಮತ್ತು ಅಧಿಕಾರ ಕಳೆದುಕೊಂಡ ರಾಜಕಾರಣಿಗಳ ಸಂಖ್ಯೆ ದೊಡ್ಡದಿದೆ. ಇಲ್ಲಿನ ರಾಜಕೀಯ ಇತಿಹಾಸ ವನ್ನು ಗಮನಿಸಿದರೆ, ಸಾರ್ವಜನಿಕ ಜೀವನಕ್ಕೆ ಸಂಬಂಧಿಸಿದ ವಿವಾದಗಳು, ಆರೋಪಗಳು, ಮಾನ ಹಾನಿ ಪ್ರಕರಣಗಳು ಕಾಲಕಾಲಕ್ಕೆ ಹೊಸ ರೂಪದಲ್ಲಿ ಮುನ್ನೆಲೆಗೆ ಬಂದಿರುವುದು ಕಾಣಿಸುತ್ತದೆ.
ಭ್ರಷ್ಟಾಚಾರ, ಅಧಿಕಾರದ ದುರುಪಯೋಗ, ವೈಯಕ್ತಿಕ ನಡೆವಳಿಕೆ, ಖಾಸಗಿ (ಅನೈತಿಕ?) ಸಂಬಂಧಗಳು ಹಾಗೂ ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧದ ಆರೋಪಗಳು ಹಲವು ಸಂದರ್ಭಗಳಲ್ಲಿ ಸಾರ್ವಜನಿಕ ಚರ್ಚೆಯ ಭಾಗವಾಗಿವೆ. ತಂತ್ರಜ್ಞಾನ ಬದಲಾಗುತ್ತಿದ್ದಂತೆ ಇಂತಹ ಆರೋಪಗಳು ಹೊರಬರುವ ಶೈಲಿ-ವಿಧಾನ-ಸಮಯ-ಸಂದರ್ಭ ಹೀಗೆ ಎಲ್ಲವೂ ಬದಲಾಗಿದೆ!
ಒಂದು ಕಾಲದಲ್ಲಿ ಟೇಪ್ಗಳು ಮತ್ತು ಫೋಟೋ ದಾಖಲೆಗಳು ಪ್ರಮುಖವಾಗಿದ್ದರೆ, ನಂತರ ಸಿಡಿಗಳು, ಮೊಬೈಲ್ ವೀಡಿಯೋಗಳು, ಪೆನ್ಡ್ರೈವ್ಗಳು ಮತ್ತು ಈಗ ಸಾಮಾಜಿಕ ಮಾಧ್ಯಮ ಹಾಗೂ ಡಿಜಿಟಲ್ ಸ್ಟಿಂಗ್ ಆಪರೇಷನ್ಗಳು ರಾಜಕೀಯ ಚರ್ಚೆಯ ಪ್ರಮುಖ ಸಾಧನಗಳಾಗಿವೆ. ಇಂತಹ ಪ್ರತಿಯೊಂದು ಬೆಳವಣಿಗೆಯ ಸಂದರ್ಭದಲ್ಲಿ ಎರಡು ಆಯಾಮಗಳನ್ನು ಪ್ರತ್ಯೇಕವಾಗಿ ನೋಡುವ, ವಿಶ್ಲೇಷಿಸುವ ಅಗತ್ಯವಿದೆ.
ಒಂದೆಡೆ, ಅಧಿಕಾರದಲ್ಲಿರುವ ವ್ಯಕ್ತಿಗಳ ಅಕ್ರಮ, ಭ್ರಷ್ಟಾಚಾರ ಅಥವಾ ಸಾರ್ವಜನಿಕ ಹಿತಕ್ಕೆ ಸಂಬಂಧಿಸಿದ ತಪ್ಪುಗಳನ್ನು ಸಾಕ್ಷ್ಯಾಧಾರಗಳೊಂದಿಗೆ ಬಹಿರಂಗಪಡಿಸುವ ತನಿಖಾತ್ಮಕ ವರದಿಗಳು ಮತ್ತು ಸ್ಟಿಂಗ್ ಆಪರೇಷನ್ಗಳು ಸಾರ್ವಜನಿಕ ಹಿತಾಸಕ್ತಿಯ ಕಾರಣಕ್ಕೆ ಮಹತ್ವ ಪಡೆಯುತ್ತವೆ. ಮತ್ತೊಂದೆಡೆ, ಪರಿಶೀಲನೆಯಾಗದ ವೀಡಿಯೋಗಳು, ತಿರುಚಿದ ದೃಶ್ಯಗಳು ಅಥವಾ ಖಾಸಗಿ ಬದುಕಿಗೆ ಸಂಬಂಧಿಸಿದ ಮಾಹಿತಿಯನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿದರೆ ಅದು ವ್ಯಕ್ತಿಯ ಗೌರವಕ್ಕೆ, ಪ್ರಜಾಪ್ರಭುತ್ವದ ಆಶಯಕ್ಕೆ ಮತ್ತು ರಾಜಕೀಯ ಸಂಸ್ಕೃತಿಗೆ ಅಪಾರ ಹಾನಿ ಉಂಟುಮಾಡುವುದು ನಿಸ್ಸಂಶಯ.
ಕರ್ನಾಟಕದಲ್ಲಿ ಕಳೆದ ಹಲವು ದಶಕಗಳಲ್ಲಿ ನಡೆದ ಕೆಲವು ಪ್ರಮುಖ ಘಟನೆಗಳು ಈ ಎರಡೂ ಆಯಾಮಗಳ ಕುರಿತು ಚರ್ಚೆಗೆ ಕಾರಣವಾಗಿವೆ. ಈ ಪ್ರಕರಣಗಳಲ್ಲಿ ಮಾಧ್ಯಮ, ತಂತ್ರಜ್ಞಾನ ಮತ್ತು ರಾಜಕೀಯಗಳ ನಡುವಿನ ಸಂಬಂಧ ಮತ್ತು ಮುಖ್ಯವಾಗಿ ಈ ಪ್ರಕರಣಗಳು ಜಗಜ್ಜಾಹೀರಾದ ‘ಟೈಮಿಂಗ್’ ಹಲವು ಸಂದರ್ಭಗಳಲ್ಲಿ ತೀವ್ರವಾಗಿ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಕರಣಗಳ ಒಂದೇ ರೀತಿಯ, ಶೈಲಿಯ ವಾಸ್ತವಾಂಶಗಳಿವೆ ಎಂದೋ ಅಥವಾ ಸಂಪೂರ್ಣ ಸತ್ಯವಾದ ವಿಷಯ-ವಿಚಾರ ಇದೆ ಎಂದೋ ಹೇಳಲು ಸಾಧ್ಯವಿಲ್ಲ.
ಕೆಲ ಪ್ರಕರಣಗಳಲ್ಲಿ ರಾಜಕೀಯ ಹೊಣೆಗಾರಿಕೆಯ ಹಿನ್ನೆಲೆಯಲ್ಲಿ ಆರೋಪಿತರು ರಾಜೀನಾಮೆ ನೀಡಿದರು; ಕೆಲವು ಪ್ರಕರಣಗಳಲ್ಲಿ ನಂತರದ ತನಿಖೆಯಲ್ಲಿ ಆರೋಪಗಳಿಗೆ ನಿರೀಕ್ಷಿತ ಮಟ್ಟದ ಸಾಕ್ಷ್ಯ ದೊರೆಯಲಿಲ್ಲ; ಇನ್ನು ಕೆಲವು ಪ್ರಕರಣಗಳು ದೀರ್ಘಕಾಲದ ಕಾನೂನು ಪ್ರಕ್ರಿಯೆಯಲ್ಲಿ ಇನ್ನೂ ಇವೆ.
ಹೀಗಾಗಿ ಯಾವುದೇ ವೀಡಿಯೋ, ಆಡಿಯೋ, ಪೆನ್ಡ್ರೈವ್ ಅಥವಾ ಸ್ಟಿಂಗ್ ಆಪರೇಷನ್ ಬಹಿರಂಗ ವಾದ ತಕ್ಷಣವೇ ಅದರಲ್ಲಿರುವ ವಿಚಾರವು ಅಂತಿಮ ಸತ್ಯವೆಂದು ಪರಿಗಣಿಸುವುದು ಸೂಕ್ತವೂ ಅಲ್ಲ, ನ್ಯಾಯಸಮ್ಮತವೂ ಅಲ್ಲ. ಹಾಗೆಂದು ಎಲ್ಲಾ ಆಯಾಮಗಳಲ್ಲಿ ನಿಷ್ಪಕ್ಷಪಾತ ತನಿಖೆ ನಡೆದು ಸತ್ಯಾಂಶ ಹೊರಬೀಳಬೇಕು ಎನ್ನುವುದೂ ಅಷ್ಟೇ ದಿಟ!
ಇತ್ತೀಚೆಗೆ ಮುನ್ನೆಲೆಗೆ ಬಂದಿರುವ ‘ಸ್ಟಿಂಗ್ ಆಪರೇಷನ್ ವಿವಾದ’ ಗಮನ ಸೆಳೆಯುತ್ತಿದೆ ಮತ್ತು ಪ್ರಕರಣ ಇಂಟರೆ‘ಸ್ಟಿಂಗ್’ ಆಗಿದೆ! ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮನ್ನೂ ಒಳಗೊಂಡಂತೆ ಕೆಲವು ಸಚಿವರು ಮತ್ತು ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಷನ್ ನಡೆಸಲು ತೆರೆಮರೆಯಲ್ಲಿ ನಿರಂತರ ಪ್ರಯತ್ನಗಳು ನಡೆಯುತ್ತಿರುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಈ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಪಕ್ಷದ ನಾಯಕರು ಮತ್ತು ಇತರ ರಾಜಕೀಯ ಮುಖಂಡರು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಪ್ರತಿಪಕ್ಷಗಳೂ ಆಡಳಿತ ಪಕ್ಷದ ಮೇಲೆ ಇದೇ ರೀತಿಯ ಆರೋಪಗಳನ್ನು ಮಾಡುತ್ತಿವೆ. ಒಟ್ಟಾರೆ ಈ ವಿಷಯದಲ್ಲಿ ಯಾರು ಯಾರನ್ನು ಕೆಡವಲು ಯತ್ನಿಸುತ್ತಿದ್ದಾರೆ, ಯಾರು ಯಶ ಕಂಡಿದ್ದಾರೆ, ಯಾರು ಅದಾಗಲೇ ಖೆಡ್ಡಾಕ್ಕೆ ಬಿದ್ದಿದ್ದಾರೆ ಎನ್ನುವುದು ’ಮಿಲಿಯನ್ ಡಾಲರ್’ ಪ್ರಶ್ನೆ! ‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದೆ’ ಎಂದು ಹೇಳಲಾದ ವೀಡಿಯೋ ತುಣುಕಿನ ಪ್ರಸಾರವೂ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಅದರ ಸತ್ಯಾಸತ್ಯತೆ, ಮೂಲ ಮತ್ತು ಪ್ರಸಾರದ ಉದ್ದೇಶಗಳ ಕುರಿತು ಕಾನೂನು ಪ್ರಕ್ರಿಯೆ ನಡೆಯುತ್ತಿದೆ.
ವಿಡಿಯೋ ಪ್ರಸಾರ ಮಾಡಿದಂತೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚದಂತೆ ನ್ಯಾಯಾ ಲಯ ಮಧ್ಯಂತರ ಆದೇಶ ಹೊರಡಿಸಿದೆ. ಹೀಗಾಗಿ ಈ ಹಂತದಲ್ಲಿ ಯಾವುದೇ ವ್ಯಕ್ತಿಯ ಪರ-ವಿರುದ್ಧ ‘ಅಂತಿಮ ತೀರ್ಪಿನ ರೀತಿ’ಯಲ್ಲಿ ನಿರ್ಣಯಕ್ಕೆ ಬರುವುದು ಸೂಕ್ತವಲ್ಲ. ಹಾಗೆಂದು ಈ ವಿವಾದವು ಎತ್ತಿರುವ ಮೂಲ ಪ್ರಶ್ನೆ ಮಾತ್ರ ಗಂಭೀರವಾಗಿದೆ - ‘ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್, ಸಿಡಿ ಮತ್ತು ಪೆನ್ಡ್ರೈವ್ಗಳು ಸಾರ್ವಜನಿಕ ಹಿತದ ತನಿಖಾ ಸಾಧನಗಳಾಗಿವೆಯೇ? ಇಂಥಾ ವಿವಾದ, ಅಪವಾದಗಳು ರಾಜಕೀಯ ಪ್ರತಿಸ್ಪರ್ಧಿಗಳನ್ನು ದುರ್ಬಲಗೊಳಿಸುವ ಅಸಗಳಾಗಿವೆಯೇ?’ ಈ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸುವಾಗ ವ್ಯಕ್ತಿಯ ಖಾಸಗಿ ಬದುಕಿಗಿಂತ ಮಿಗಿಲಾಗಿ ಸಾರ್ವಜನಿಕ ಹಿತಾಸಕ್ತಿ, ಸಾಕ್ಷ್ಯದ ವಿಶ್ವಾಸಾರ್ಹತೆ ಮತ್ತು ಕಾನೂನುಬದ್ಧ ತನಿಖೆಯ ಅಂಶವನ್ನು ಗಮನದಲ್ಲಿಟ್ಟುಕೊಂಡು ನೋಡಬೇಕಾಗುತ್ತದೆ.
ಮೂಲ ವಿಡಿಯೋ ಅಥವಾ ದಾಖಲೆ ಎಲ್ಲಿದೆ? ಅದರ ಸಂಪೂರ್ಣ ಸಮಯ- ಸಂದರ್ಭವೇನು? ಅದರಲ್ಲಿ ಯಾವುದೇ ರೀತಿಯ ತಾಂತ್ರಿಕ ತಿರುಚುವಿಕೆ ನಡೆದಿದೆಯೇ? ಅದನ್ನು ಯಾರು ಸಿದ್ಧಪಡಿಸಿದರು? ಯಾರ ಮೂಲಕ ಅದು ಸಾರ್ವಜನಿಕ ವಲಯಕ್ಕೆ ಬಂತು? ಅದರ ಹಿಂದೆ ಯಾವುದೇ ಸಂಘಟಿತ ರಾಜಕೀಯ ಅಥವಾ ಆರ್ಥಿಕ ಉದ್ದೇಶವಿದೆಯೇ? ವರ್ಷಗಳಷ್ಟು ಹಿಂದಿನದು ಎನ್ನಲಾದ ವಿಚಾರ ಈಗ ಮುನ್ನೆಲೆಗೆ ಬಂದುದರ ಹಿಂದಿನ ಹಕೀಕತ್ತು ಏನು? ಎಂಬಿತ್ಯಾದಿ ಪ್ರಶ್ನೆಗಳಿಗೆ ನಿಖರ ಮತ್ತು ವಿವರವಾದ ಉತ್ತರ ಹುಡುಕಿ ತೆಗೆಯುವುದು ಅತ್ಯಗತ್ಯ.
ಇದೇ ಮಾದರಿಯ ಈ ಹಿಂದಿನ ಪ್ರಕರಣಗಳ ಅನುಭವ ಮತ್ತು ತೀರ್ಪುಗಳು ಇಂತಹುದೇ ಎಚ್ಚರಿಕೆಯನ್ನು ನೀಡುತ್ತವೆ! ಆರೋಪಗಳು ರಾಜಕೀಯವಾಗಿ ದೊಡ್ಡ ರೂಪದಲ್ಲಿ ಮತ್ತು ಆ ವ್ಯಕ್ತಿಗೆ ವ್ಯತಿರಿಕ್ತ ಪರಿಣಾಮ ಉಂಟುಮಾಡಬಹುದು. ಆದರೆ ರಾಜಕೀಯ ಪರಿಣಾಮ ಮತ್ತು ಕಾನೂನುಬದ್ಧ ಸತ್ಯಾಸತ್ಯತೆ ಒಂದೇ ವಿಷಯಗಳಲ್ಲ, ಅವೆರಡೂ ವಿಭಿನ್ನ ಮತ್ತು ಬೇರೆ ಬೇರೆ! ಆರೋಪದ ಆಧಾರದ ಮೇಲೆ ತಾನು ನಿರ್ವಹಿಸುವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ರಾಜಕೀಯ ಹೊಣೆಗಾರಿಕೆ ಒಂದೆಡೆಯಾದರೆ, ನ್ಯಾಯಾಲಯದಲ್ಲಿ ಅಪರಾಧ ಸಾಬೀತಾಗುವುದು ಮತ್ತೊಂದು ಸಂಗತಿ.
ಹೀಗಾಗಿ, ಸ್ಟಿಂಗ್ ಆಪರೇಷನ್ ವಿವಾದವನ್ನು ಕೂಡ ಪಕ್ಷಗಳ ರಾಜಕೀಯದ ದೃಷ್ಟಿಕೋನದ ಕನ್ನಡಕ ದಿಂದ ಮಾತ್ರ ನೋಡುವ ಬದಲು, ಡಿಜಿಟಲ್ ಸಾಕ್ಷ್ಯದ ವಿಶ್ವಾಸಾರ್ಹತೆ, ತನಿಖೆಯ ಪಾರದರ್ಶಕತೆ, ಮಾಧ್ಯಮದ ಜವಾಬ್ದಾರಿ ಮತ್ತು ಸಾರ್ವಜನಿಕ ಹಿತಾಸಕ್ತಿ ಎನ್ನುವ ನಾಲ್ಕು ವಿಭಿನ್ನ ಆಯಾಮಗಳಲ್ಲಿ ಪರಿಶೀಲಿಸುವ, ಪರಾಮರ್ಶಿಸುವ, ವಿಶ್ಲೇಷಿಸುವ ಅಗತ್ಯವಿದೆ. ಕರ್ನಾಟಕದ ರಾಜಕೀಯದಲ್ಲಿ ಸಿಡಿ, ಪೆನ್ಡ್ರೈವ್, ವಿಡಿಯೋ ಮತ್ತು ಸ್ಟಿಂಗ್ ಆಪರೇಷನ್ಗಳ ಬಳಕೆ ವ್ಯಾಪಕವಾಗಿ ಜನರೆದುರಿಗೆ ಬರುತ್ತಿರುವ ಮತ್ತು ಅಂಥಾ ಅನಪೇಕ್ಷಿತ ಕೆಟ್ಟ ಚಾಳಿ ಮುಂದು ವರಿಯುತ್ತಿರುವ ಸಂದರ್ಭದಲ್ಲಿ ಅಂತಿಮವಾಗಿ ಜನತೆಗೆ ಬೇಕಾಗಿರುವುದು ಸಂಚಲನಕಾರಿ, ನಾಲ್ಕು ಗೋಡೆಗಳ ನಡುವೆ ನಡೆದ ಖಾಸಗಿ ವಿಚಾರಗಳು, ವಿಡಿಯೋ ಆಡಿಯೋ ಬಹಿರಂಗ ಆಗುವ ಮತ್ತೊಂದು ಸಂಚಲನ ಅಥವಾ ಬ್ರೇಕಿಂಗ್ ನ್ಯೂಸ್ ಖಂಡಿತಾ ಅಲ್ಲ!
ಬದಲಾಗಿ ಇಂಥಾ ರಾಜಕೀಯ ಪ್ರೇರಿತ ಮತ್ತು ರಾಜಕೀಯ ದುರುದ್ದೇಶದಿಂದ ಕೂಡಿದ ವಿಚಾರ ದಲ್ಲಿ ಅವುಗಳ ಸಾಕ್ಷ್ಯಾಧಾರಿತ ಸತ್ಯ, ನಿಷ್ಪಕ್ಷಪಾತ ತನಿಖೆ, ಕೂಲಂಕಷ ವಿಶ್ಲೇಷಣೆ ಮತ್ತು ಕಾನೂನಿನ ಮುಂದೆ ಸಮಾನ ಹೊಣೆಗಾರಿಕೆ ತೋರುವ ಗುರುತರ ಜವಾಬ್ದಾರಿಯು ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ, ವಿವಿಧ ಮಾಧ್ಯಮಗಳು ಮತ್ತು ಒಟ್ಟಾರೆ ಸಮಾಜದ್ದು! ಇಂಥಾ ವಿಚಾರಗಳ ಕುರಿತು ರಾಜಕಾರಣಿಗಳೂ ಸೇರಿದಂತೆ ನಾವೆಲ್ಲರೂ ಹೆಚ್ಚಿನ ಜವಾಬ್ದಾರಿ ಮತ್ತು ಮುತುವರ್ಜಿಯಿಂದ ವರ್ತಿಸಲೇಬೇಕು!
ರಾಜಕೀಯ ಸ್ಪರ್ಧೆ, ಜಿzಜಿದ್ದಿ, ವಿರೋಧ, ಸೇಡನ್ನು ವೈಯಕ್ತಿಕ ಚಾರಿತ್ರ್ಯಹರಣದಿಂದ ವಿಂಗಡಿಸಿ, ದೂರವಿಟ್ಟು, ಪ್ರಜಾಪ್ರಭುತ್ವದ ನಿಜವಾದ ವಿಚಾರಗಳಾದ ಆಡಳಿತ, ನೀತಿ, ಭ್ರಷ್ಟಾಚಾರ ನಿಯಂತ್ರಣ, ಜನಸೇವೆ ಮತ್ತು ಸಾರ್ವಜನಿಕ ಹೊಣೆಗಾರಿಕೆಯತ್ತ ಮರಳಿಸುವ ಗುರುತರ ಹೊಣೆ ನಮ್ಮೆಲ್ಲರ ಮೇಲಿದೆ. ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮ ವಿಚಾರ ಮಂಡನೆ ಗೌರವಯುತವಾಗಿರಲಿ, ಜವಾಬ್ದಾರಿಯುತವಾಗಿರಲಿ ಮತ್ತು ಸತ್ಯವಾಗಿರಲಿ.
ಸಭ್ಯತೆಯ ಎಲ್ಲೆ ಮೀರಿ, ಹದ್ದು ಮೀರಿ ವರ್ತಿಸಿದ ಮತ್ತು ವರ್ತಿಸುತ್ತಿರುವ ರಾಜಕಾರಣಿಗಳಿಗೆ ಇಂಥಾ ಪ್ರಕರಣಗಳು ಎಚ್ಚರಿಕೆಯ ಕರೆಗಂಟೆ. ವೈಯಕ್ತಿಕ ದೂಷಣೆ, ನಿಂದನೆ, ಆರೋಪ-ಪ್ರತ್ಯಾರೋಪ ಇನ್ನೊಬ್ಬರ ಕುರಿತು ಮಾಡುವುದು ಸುಲಭ. ನೀರು ನಿಮ್ಮ ಕಾಲಿನ ಬುಡಕ್ಕೆ ಬಂದಾಗ ನೀವುಗಳೂ ಮರ್ಯಾದೆ ಕಳಕೊಳ್ಳಲಿರುವ ನೆನಪು ಇರಲಿ.
ರಾಜಕಾರಣ, ಸ್ಥಾನಮಾನ, ಅಧಿಕಾರ ಜನರು ನೀಡಿರುವ ಭಿಕ್ಷೆ ಮತ್ತು ಅದು ‘ಸಮಾಜ ಸೇವೆ’ಗೆ ಮಾತ್ರ ಮೀಸಲಾಗಿರಲಿ, ಬದಲಾಗಿ ಅನ್ಯಾನ್ಯ ರೀತಿಯ ವೈಯಕ್ತಿಕ ಆಕಾಂಕ್ಷೆ-ತೀಟೆಗಳನ್ನು ತೀರಿಸಲು ಅಲ್ಲ ಎನ್ನುವ ನೆನಪು ಸದಾ ಜಾಗೃತವಾಗಿರಲಿ.
ಒಟ್ಟಾರೆಯಾಗಿ, ಇಂದಿನ ರಾಜಕಾರಣ-ರಾಜಕೀಯ ಮತ್ತಷ್ಟು ಮಗದಷ್ಟು ಗಬ್ಬೆದ್ದು ಹೋಗಿ ಇಂಟರೆ‘ಸ್ಟಿಂಗ್’ ಹಂತಕ್ಕೆ ಬಂದು ನಿಂತಿದೆ! ‘ಪಿಕ್ಚರ್ ಅಭೀ ಬಾಕೀ ಹೇ...’ ಅಂತನಿಸುತ್ತಿದೆ. ನೋಡೋಣ, ಏನಂತೀರಿ!?