ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Kiran Upadhyay Column: ಅತಾ, ಪತಾ, ಲಾಪತಾ...ಹೀಗಾಯ್ತಾ ರಾಜಪಾಲ್‌ ಯಾದವ್‌ ಕಥೆ ?

‘ಭೂಲ್ ಭುಲಯ್ಯಾ’ ಚಿತ್ರದಲ್ಲಿನ ಅವರ ಅಭಿನಯವಂತೂ ಮರೆಯುವಂತೆಯೇ ಇಲ್ಲ ಅನ್ನಿ. ಕೇವಲ ಹಾಸ್ಯವಷ್ಟೇ ಅಲ್ಲದೆ, ‘ಮೈ ಮಾಧುರಿ ದೀಕ್ಷಿತ್ ಬನನಾ ಚಾಹತೀ ಹೂ’, ‘ಮೈ ಮೆರಿ ಪತ್ನಿ ಔರ್ ವೋ’ ಇತ್ಯಾದಿ ನಾಲ್ಕು-ಐದು ಚಿತ್ರಗಳಲ್ಲಿ ಅವರು ಪ್ರಧಾನ ಭೂಮಿಕೆಯಲ್ಲೂ, ಗಂಭೀರ ಪಾತ್ರದಲ್ಲೂ ಅಭಿನಯಿಸಿದ್ದಿದೆ. ಆದರೆ ಒಂದಂತೂ ಹೇಳಬಲ್ಲೆ, ನಾನು ಕಂಡ ಯಾವ ಸಿನಿಮಾದಲ್ಲೂ ಅವರ ಅಭಿನಯವನ್ನು ತೆಗೆದುಹಾಕುವಂತಿಲ್ಲ.

ಅತಾ, ಪತಾ, ಲಾಪತಾ...ಹೀಗಾಯ್ತಾ ರಾಜಪಾಲ್‌ ಯಾದವ್‌ ಕಥೆ ?

-

ವಿದೇಶವಾಸಿ

ಒಂದಾನೊಂದು ಕಾಲದಲ್ಲಿ ಜನಪ್ರಿಯತೆಯ ಶಿಖರದ ತುತ್ತತುದಿಯಲ್ಲಿದ್ದ ಕೆಲವು ನಟ-ನಟಿಯರ ಅಂತ್ಯ ಕೇಳಿದರೆ ಮೈ ನಡುಗುತ್ತದೆ. ತಮ್ಮ ಹೆಸರಿನ ನೃತ್ಯದ ಛಾಪು ಬಿಟ್ಟು ಹೋದ ಹಾಸ್ಯನಟ ಭಗವಾನ್, ತಾವು ಅಭಿನಯಿಸಿದ ಮೊದಲ ಚಿತ್ರ ‘ಆಶಿಕಿ’ ಯಶಸ್ವಿ ಯಾದ ಬೆನ್ನ ಐವತ್ತು ಹೊಸ ಸಿನಿಮಾದಲ್ಲಿ ಅಭಿನಯಿಸಲು ಸಹಿ ಹಾಕಿದ ರಾಹುಲ್ ರಾಯ, ಇವರೆಲ್ಲರ ಕಥೆ ಬರೆಯಲು ಇನ್ನೊಂದು ಅಂಕಣ ಬೇಕಾದೀತು.

ನಿಮ್ಮ ಕಾಲಘಟ್ಟದಲ್ಲಿ ಹಿಂದಿ ಚಿತ್ರರಂಗದ ಐದು ಉತ್ತಮ ಹಾಸ್ಯನಟರ ಹೆಸರು ಹೇಳಿ ಎಂದರೆ ಯಾರದ್ದೆಲ್ಲ ಹೆಸರು ಹೇಳುತ್ತೀರಿ? ಜೆನ್ ಝೀ, ಅದಕ್ಕೂ ಹಳೆಯ ತಲೆಮಾರಾದ ಮಿಲೇನಿಯಲ್ ಅಥವಾ ಅದಕ್ಕೂ ಹಳೆಯ ಜೆನ್‌ಎಕ್ಸ್, ಈ ಮೂರು ತಲೆಮಾರಿಗೂ ಪ್ರಿಯರಾದ ಹಿಂದಿ ಚಿತ್ರರಂಗದ ಶ್ರೇಷ್ಠ ಕಾಮಿಡಿಯನ್‌ಗಳ ಸಾಲಿನಲ್ಲಿ ಜಾನಿ ಲಿವರ್, ಸತೀಶ್ ಶಾ, ರಝಾಕ್ ಖಾನ್, ರಾಕೇಶ್ ಬೇಡಿ, ಸತೀಶ್ ಕೌಶಿಕ್ ಇತ್ಯಾದಿ ನಟರ ದೊಡ್ಡ ಪಟ್ಟಿಯನ್ನೇ ಕೊಡಬಹುದು. ‌

ಒಂದು ಕಾಲದಲ್ಲಿ ಭಗವಾನ್, ಜಾನಿ ವಾಕರ್, ಮಹಮೂದ್, ದೇವನ್ ವರ್ಮ, ಜಗದೀಪ್, ಕೆಷ್ಟೋ ಮುಖರ್ಜಿ, ಓಮ್ ಪ್ರಕಾಶ್ ಇತ್ಯಾದಿಗಳು ತೆರೆಯ ಮೇಲೆ ಬಂದು ಜನರನ್ನು ನಗಿಸುತ್ತಿದ್ದರು. ಕ್ರಮೇಣ ಖಳನಾಯಕರ ಪಾತ್ರ ಮಾಡುತ್ತಿದ್ದವರೂ ಹಾಸ್ಯಕ್ಕೆ ಇಳಿದರು. ಇನ್ನು ಕೆಲವೊಮ್ಮೆ ಖಳನಾಯಕರ ಪಾತ್ರವೇ ಹಾಸ್ಯಮಯವಾಗಿರುತ್ತಿದ್ದದ್ದೂ ಇದೆ. ಆ ಸಾಲಿನಲ್ಲಿ ಅನುಪಮ್ ಖೇರ್, ಖಾದರ್ ಖಾನ್, ಶಕ್ತಿ ಕಪೂರ್, ಪರೇಶ್ ರಾವಲ್ ಹೀಗೆ ಸಾಕಷ್ಟು ಜನರನ್ನು ಹೆಸರಿಸಬಹುದು.

ನಂತರದ ದಿನಗಳಲ್ಲಿ ಹಾಸ್ಯವೇ ಪ್ರಧಾನವಾದ ಚಿತ್ರಗಳ ಹೊಸ ಟ್ರೆಂಡ್ ಆರಂಭ ವಾಯಿತು. ಅದರಲ್ಲಿ ನಾಯಕ ನಟರೇ ಹಾಸ್ಯಪಾತ್ರಗಳನ್ನೂ ಮಾಡಲು ಆರಂಭಿಸಿದರು. ಗೋವಿಂದಾ, ಅಕ್ಷಯ್ ಕುಮಾರ್, ಸಂಜಯ್ ದತ್, ತುಷಾರ್ ಕಪೂರ್, ಅರ್ಶದ್ ವಾರ್ಸಿ, ರಿತೇಶ್ ದೇಶಮುಖ್ ಹೀಗೆ ಅನೇಕ ನಾಯಕ ನಟರು ಹಾಸ್ಯಕ್ಕೂ ಸೈ ಅನ್ನಿಸಿಕೊಂಡರು.

ಇವರೆಲ್ಲರ ನಡುವೆ ಮರೆಯಲಾಗದ ಒಂದು ಹೆಸರು ‘ರಾಜಪಾಲ್ ಯಾದವ್’ ಎಂದರೆ ಅತಿಶಯೋಕ್ತಿಯಾಗಲಾರದು. ಇಂದಿಗೆ ಸುಮಾರು ಐವತ್ತೈದು ವರ್ಷದ ಹಿಂದೆ ಜನಿಸಿದ ರಾಜಪಾಲ್ ಯಾದವ್, ಕಳೆದ ಎರಡೂವರೆ ದಶಕದಿಂದಲೂ ಹಿಂದಿ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ, ಸಾಕಷ್ಟು ಜನಪ್ರಿಯತೆಯನ್ನೂ ಗಳಿಸಿಕೊಂಡಿದ್ದಾರೆ.

ಇದನ್ನೂ ಓದಿ: Kiran Upadhyay Column: ಮೌನಕ್ರಾಂತಿಯಲ್ಲಿ ತೊಡಗಿಸಿಕೊಂಡ ಡಬ್ಬಾವಾಲಾಗಳು

‘ಏಕ್ ಔರ್ ಏಕ್ ಗ್ಯಾರಾ’, ‘ವಕ್ತ್’, ‘ಮುಜ್ಸೆ ಶಾದಿ ಕರೋಗಿ’, ‘ಗರಮ್ ಮಸಾಲಾ’, ‘ಮಾಲಾ‌ ಮಾಲ್ ವೀಕ್ಲಿ’, ‘ಪಾರ್ಟ್‌ನರ್’, ‘ಫಿರ್ ಹೇರಾಫೇರಿ’, ‘ಚುಪ್ ಚುಪ್ ಕೆ’, ‘ಭಾಗಮ್ ಭಾಗ್’, ‘ಹಂಗಾಮಾ’ ಇತ್ಯಾದಿ ಚಿತ್ರಗಳಲ್ಲಿನ ಅವರ ಪಾತ್ರಗಳು ನೆನಪಿನಲ್ಲಿರುವಂಥವುಗಳು.

‘ಭೂಲ್ ಭುಲಯ್ಯಾ’ ಚಿತ್ರದಲ್ಲಿನ ಅವರ ಅಭಿನಯವಂತೂ ಮರೆಯುವಂತೆಯೇ ಇಲ್ಲ ಅನ್ನಿ. ಕೇವಲ ಹಾಸ್ಯವಷ್ಟೇ ಅಲ್ಲದೆ, ‘ಮೈ ಮಾಧುರಿ ದೀಕ್ಷಿತ್ ಬನನಾ ಚಾಹತೀ ಹೂ’, ‘ಮೈ ಮೆರಿ ಪತ್ನಿ ಔರ್ ವೋ’ ಇತ್ಯಾದಿ ನಾಲ್ಕು-ಐದು ಚಿತ್ರಗಳಲ್ಲಿ ಅವರು ಪ್ರಧಾನ ಭೂಮಿಕೆ ಯಲ್ಲೂ, ಗಂಭೀರ ಪಾತ್ರದಲ್ಲೂ ಅಭಿನಯಿಸಿದ್ದಿದೆ. ಆದರೆ ಒಂದಂತೂ ಹೇಳಬಲ್ಲೆ, ನಾನು ಕಂಡ ಯಾವ ಸಿನಿಮಾದಲ್ಲೂ ಅವರ ಅಭಿನಯವನ್ನು ತೆಗೆದುಹಾಕುವಂತಿಲ್ಲ.

ಅವರು ತೆರೆಯ ಮೇಲೆ ಇದ್ದಷ್ಟೂ ಹೊತ್ತು ಯಾವತ್ತೂ ಮೋಸವಾಗಲಿಲ್ಲ. ನಿಜ ಹೇಳ ಬೇಕೆಂದರೆ, ನನಗೆ ಅವರು ಸಿನಿಮಾದಲ್ಲಿ ಅಭಿನಯಿಸಿದ್ದಕ್ಕಿಂತ ಇಷ್ಟವಾದದ್ದು, ಕಪಿಲ್ ಶರ್ಮಾ ನಡೆಸಿಕೊಡುವ ‘ಕಾಮಿಡಿ ವಿತ್ ಕಪಿಲ್’ ಕಾರ್ಯಕ್ರಮಕ್ಕೆ ಅವರು ಬಂದಾಗ ತೋರಿಸಿದ ಅಭಿನಯ. ಹೊಸಬರು ಚಿತ್ರರಂಗಕ್ಕೆ ಬಂದಾಗ ಮೊದಲ ದಿನ ಹೇಗಿರುತ್ತಾರೆ, ಕ್ರಮೇಣ ಅವರ ನಡೆ-ನುಡಿಗಳಲ್ಲಿ ಯಾವ ರೀತಿಯ ಬದಲಾವಣೆಯಾಗುತ್ತದೆ ಎಂದು ಅವರು ತೋರಿಸಿದ್ದು ಇಂದಿಗೂ ಅಚ್ಚೊತ್ತಿ ಕುಳಿತಿದೆ. ‌

ಆದರೆ ಕಳೆದ ಒಂದು ವಾರದಿಂದ ರಾಜಪಾಲ್ ಯಾದವ್ ಹೆಸರು ಬೇರೆಯದ್ದೇ ಕಾರಣಕ್ಕೆ ಸುದ್ದಿಯಲ್ಲಿದೆ. ಮೊನ್ನೆ ಫೆಬ್ರವರಿ ಐದನೇ ತಾರೀಖಿನಂದು ರಾಜಪಾಲ್ ಯಾದವ್ ನ್ಯಾಯಾಲಯಕ್ಕೆ ಶರಣಾಗತರಾಗಿದ್ದು, ಈಗ ತಿಹಾರ್ ಜೈಲಿನಲ್ಲಿದ್ದಾರೆ. ಅದಕ್ಕೆ ಕಾರಣ, ಚೆಕ್ ಬೌ ಕೇಸ್.

Cheque Bounce Case Delhi High Court orders Rajpal Yadav to surrender

2000ದ ಹೊತ್ತಿಗೆ ಹಿಂದಿ ಚಿತ್ರರಂಗದಲ್ಲಿ ಆಗಲೇ ಹೆಸರು ಮಾಡಿದ್ದ ರಾಜಪಾಲ್ 2010ರಲ್ಲಿ ತಾವೇ ಒಂದು ಚಿತ್ರ ನಿರ್ಮಾಣ ಮಾಡಿ ನಿರ್ದೇಶಿಸಬೇಕು ಅಂದುಕೊಂಡರು. ಅದಕ್ಕಾಗಿ ದೆಹಲಿ ಮೂಲದ ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ʼನ ಮಾಲೀಕರಾದ ಮಾಧವ್ ಅಗರ್ವಾಲ್ ಎಂಬವರಿಂದ ಹಣವನ್ನು ಸಾಲವಾಗಿ ಪಡೆದರು. ಒಂದು ಮೂಲದ ಪ್ರಕಾರ, ಐದು ಕೋಟಿ ರುಪಾಯಿ ಸಾಲ ಪಡೆದಿದ್ದರು ಎಂಬ ಸುದ್ದಿ (ಇನ್ನೊಂದು ಮೂಲದ ಪ್ರಕಾರ, ಇನ್ನೂ ಹೆಚ್ಚು ಹಣವನ್ನು ಪಡೆದಿದ್ದರು, ಅದರಲ್ಲಿ ಒಂದಿಷ್ಟು ತೀರಿಸಿ, ಐದು ಕೋಟಿ ಬಾಕಿ ಉಳಿದಿತ್ತು ಎಂಬ ಮಾತೂ ಇದೆ).

2012ರಲ್ಲಿ ನಿರ್ದೇಶಕರಾಗಿ ತಮ್ಮ ಚೊಚ್ಚಲ ಸಿನಿಮಾವನ್ನು ತೆರೆಗೂ ತಂದರು. ಆದರೆ ‘ಅತಾ ಪತಾ ಲಾಪತಾ’ ಚಿತ್ರ ಗೋತಾ ಹೊಡೆಯಿತು. ಆ ಒಂದು ಚಿತ್ರ ಅವರನ್ನು ತಿಹಾರ್ ಜೈಲಿನ ಕಂಬಿ ಎಣಿಸುವಂತೆ ಮಾಡುತ್ತದೆ ಎಂದು ಬಹುಶಃ ಅಂದು ಅವರು ಊಹಿಸಿರ ಲಿಕ್ಕಿಲ್ಲ. ಆ ಚಿತ್ರದಲ್ಲಿದ್ದ ತಾರಾಗಣವನ್ನು ಒಮ್ಮೆ ನೋಡಬೇಕು.

ಆಶುತೋಷ್ ರಾಣಾ, ವಿಕ್ರಮ್ ಗೋಖಲೆ, ಗೋವಿಂದ್ ನಾಮದೇವ್, ಓಮ್ ಪುರಿ, ಅಸ್ರಾಣಿ, ಮನೋಜ್ ಜೋಶಿ, ವೀರೇಂದ್ರ ಸಕ್ಸೇನಾ, ಮುಶ್ತಾಕ್ ಖಾನ್, ವಿಜಯ್ ರಾಜ್, ದಾರಾ ಸಿಂಗ್ ಎಲ್ಲರೂ ಘಟಾನುಘಟಿಗಳೇ. ಅಂಥದ್ದರಲ್ಲಿ ಚಿತ್ರ ಸೋತಿತು ಅಂದರೆ, ಎಷ್ಟೇ ಒಳ್ಳೆಯ ಕಲಾವಿದರಿದ್ದರೂ, ಚಿತ್ರ ಗೆಲ್ಲುತ್ತದೆ ಎನ್ನುವ ಖಾತ್ರಿ ಇಲ್ಲ ಎನ್ನುವುದಕ್ಕೆ ಉದಾಹರಣೆ ಯಾಯಿತು ಈ ಚಿತ್ರ.

ಆ ಚಿತ್ರಕ್ಕೆ ಹಣ ಪಡೆಯುವಾಗ ಮಾಡಿಕೊಂಡ ಒಪ್ಪಂದದಂತೆ ರಾಜಪಾಲ್ ಐದು ಕೋಟಿ ರುಪಾಯಿಯನ್ನು ಹಿಂತಿರುಗಿಸಬೇಕಾಗಿತ್ತು. 2018ರಲ್ಲಿ ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿತು. ಹಣ ಹಿಂತಿರುಗಿಸುವಂತೆಯೂ ಇಲ್ಲವಾದಲ್ಲಿ ಶಿಕ್ಷೆ ಅನುಭವಿಸುವಂತೆ ಯೂ ನ್ಯಾಯಾಲಯವು ಹೇಳಿ, ಆರು ತಿಂಗಳ ಕಾರಾಗೃಹ ಶಿಕ್ಷೆಯನ್ನೂ ವಿಧಿಸಿತು. ವಿವಾದ ಉಚ್ಚನ್ಯಾಯಾಲದದ ಮೆಟ್ಟಿಲೇರಿತು.

2025ರಲ್ಲಿ ಐದು ಕೋಟಿ ರುಪಾಯಿಗೆ ಬಡ್ಡಿ ಸೇರಿಸಿ ಒಂಬತ್ತು ಕೋಟಿ ಹಿಂತಿರುಗಿಸುವಂತೆ ನ್ಯಾಯಾಲಯ ಆದೇಶಿಸಿತು. ಈ ನಡುವೆ ಪಡೆದ ಹಣ ಹಿಂತಿರುಗಿಸಲು ರಾಜಪಾಲ್ ಚೆಕ್ ನೀಡಿದ್ದರು. ಆದರೆ ಖಾತೆಯಲ್ಲಿ ಅಷ್ಟು ಹಣವಿಲ್ಲದ್ದರಿಂದ ಚೆಕ್ ಮಾನ್ಯವಾಗಲಿಲ್ಲ.

ರಾಜಪಾಲ್ ನ್ಯಾಯಾಧೀಶರ ಮುಂದೆ ನಿಂತು “ಈಗ ನನ್ನ ಬಳಿ ಅಷ್ಟು ಹಣವಿಲ್ಲ, ಇನ್ನೂ ಸ್ವಲ್ಪ ಕಾಲಾವಕಾಶ ಬೇಕು" ಎಂದಾಗ ಅವರನ್ನು ಬಂಧಿಸಲಾಯಿತು. ಇದು ನಡೆದ ಘಟನೆ. ಈ ನಡುವೆ ರಾಜಪಾಲ್ ಎರಡೂವರೆ ಕೋಟಿ ತೀರಿಸಿದ್ದಾರೆ ಎಂದು ಅವರ ಪರ ವಾದಿಸು ತ್ತಿರುವ ವಕೀಲರು ಹೇಳಿದ್ದಾರೆ.

ಒಂದು ವಿಷಯವನ್ನು ಸ್ಪಷ್ಟಪಡಿಸಬೇಕು, ರಾಜಪಾಲ್ ಯಾದವ್ ವಿಚಾರಣೆ ಎದುರಿಸು ತ್ತಿದ್ದಾರೆಯೇ ವಿನಾ ಅಪರಾಧಿ ಎಂದು ಸಾಬೀತಾಗಲಿಲ್ಲ. ಹಾಗೆಯೇ ಇಲ್ಲಿ ಒಂದು ಪ್ರಶ್ನೆ ಯೂ ಮೂಡುವುದು ಸಹಜ. ಇದುವರೆಗೂ ಸುಮಾರು ನೂರ ಐವತ್ತಕ್ಕೂ ಹೆಚ್ಚು ಚಿತ್ರ ಗಳಲ್ಲಿ ನಟಿಸಿದ ಜನಪ್ರಿಯ ನಟನೊಬ್ಬನಿಗೆ ಒಂಬತ್ತು ಕೋಟಿ ಸಾಲ ತೀರಿಸುವುದು ಕಷ್ಟವೇ? ಒಂದು ವರದಿಯ ಪ್ರಕಾರ ರಾಜಪಾಲ್ ನಟಿಸಿದ ಇತ್ತೀಚಿನ ಐದು ಚಿತ್ರಗಳಿಂ ದಲೇ ಎಂಟು ಕೋಟಿ ರುಪಾಯಿ ಸಂಭಾವನೆ ಪಡೆದಿದ್ದಾರಂತೆ.

ಕೆಲವು ವರ್ಷಗಳಿಂದ ಅವರಿಗೆ ಪ್ರತಿ ಸಿನಿಮಾಕ್ಕೆ ಎಪ್ಪತ್ತೈದು ಲಕ್ಷದಿಂದ ಒಂದು ಕೋಟಿ ಯವರೆಗೆ ಸಂಭಾವನೆ ನೀಡಲಾಗುತ್ತಿತ್ತಂತೆ. ಕಳೆದ ನಾಲ್ಕು-ಐದು ವರ್ಷಗಳಲ್ಲಿ ಪ್ರತಿವರ್ಷ ಅವರ ಆದಾಯ ಏಳರಿಂದ ಎಂಟು ಕೋಟಿಯಂತೆ. ಅವರು ಅಭಿನಯಿಸಿದ ಕೊನೆಯ ಚಿತ್ರ, ‘ಭೂಲ್ ಭುಲಯ್ಯಾ ಭಾಗ-3’ಕ್ಕೆ ಅವರಿಗೆ ಮೂರು ಕೋಟಿ ಸಂಭಾವನೆ ನೀಡಲಾಗಿದೆ ಎಂಬ ಸುದ್ದಿಯೂ ಇದೆ.

ಹಾಗಾದರೆ ಅವರು ದುಡಿದ ಹಣವೆಲ್ಲ ಎಲ್ಲಿ ಹೋಯಿತು? ಒಂದು ಅಂದಾಜಿನ ಪ್ರಕಾರ, ರಾಜಪಾಲ್ ಹಿಂದಿ ಚಿತ್ರರಂಗಕ್ಕೆ ಬಂದಾಗಿಂದ ಸುಮಾರು ಎಂಬತ್ತರಿಂದ ತೊಂಬತ್ತು ಕೋಟಿ ದುಡಿದಿದ್ದಾರಂತೆ. ಅದರಲ್ಲಿ ಚಿತ್ರದಲ್ಲಿ ಅಭಿನಯಿಸಿದ್ದು, ಜಾಹೀರಾತಿನಲ್ಲಿ ಭಾಗವಹಿಸಿದ್ದು ಎಲ್ಲವೂ ಸೇರಿದೆ ಎಂದೇ ಇಟ್ಟುಕೊಳ್ಳೋಣ.

ಅದರಲ್ಲಿ ಶೇಕಡಾ ನಲವತ್ತೋ, ಐವತ್ತೋ ಪ್ರತಿಶತ ತೆರಿಗೆ ಕಟ್ಟಿರಬಹುದು ಎಂದೇ ಊಹಿಸಿ ದರೂ, ಐದು ಕೋಟಿ ಸಾಲ ತೀರಿಸಲು ಸಾಧ್ಯವಾಗಲಿಲ್ಲ ಎಂದರೆ ಇದರ ಹಿಂದೆ ಬೇರೆ ಏನಾದರೂ ಕಥೆ ಇದೆಯೇ ಎಂಬ ಅನುಮಾನ ಬರುವುದೂ ಸಹಜ. ಒಂದು ವಿಷಯ ನೆನಪಿರಲಿ, ರಾಜಪಾಲ್ ಮಾಸಿಹೋದ ಹಳೆಯ ನಾಣ್ಯವಲ್ಲ. ಅವರು ಇಂದಿಗೂ ಚಾಲ್ತಿ ಯಲ್ಲಿರುವ ಖಡಕ್ ನೋಟು.

ಕೆಲವು ಕಲಾವಿದರ ಪ್ರಕಾರ, ಒಂದು ಕಾಲದಲ್ಲಿ ರಾಜಪಾಲ್ ಮನೆಯಲ್ಲಿ ಪ್ರತಿನಿತ್ಯ ಇಪ್ಪತ್ತರಿಂದ ಇಪ್ಪತ್ತೈದು ಜನ ಊಟ ಮಾಡುತ್ತಿದ್ದರಂತೆ. ಕೈಯಲ್ಲಿ ಏನೂ ಇಲ್ಲದೇ, ಚಿತ್ರರಂಗದಲ್ಲಿ ಉದ್ಯೋಗ ಅರಸಿ ಬಂದವರು, ಸಹ ಕಲಾವಿದರು, ಚಿತ್ರರಂಗದಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿದ್ದವರಿಗೆಲ್ಲ ಇವರ ಮನೆ ಆಶ್ರಯ ನೀಡುವ ತಾಣವಾಗಿತ್ತಂತೆ. ಅದಕ್ಕಾಗಿ ರಾಜಪಾಲ್ ಯಾವತ್ತೂ ಬೇಸರಪಟ್ಟುಕೊಳ್ಳಲಿಲ್ಲವಂತೆ.

ಕೆಲವರಂತೂ ರಾಜಪಾಲ್ ಮನೆಗೂ, ಧರ್ಮಛತ್ರಕ್ಕೂ ವ್ಯತ್ಯಾಸವಿಲ್ಲ ಎಂದದ್ದೂ ಇದೆ. ಅದೆಲ್ಲವೂ ನಿಜವೇ ಆಗಿರಬಹುದು. ಆದರೆ ಇದ್ಯಾವುದೂ ಪಡೆದ ಹಣ ಹಿಂತಿರುಗಿಸದೇ ಇರುವುದಕ್ಕೆ ಕಾರಣವಾಗುವುದಿಲ್ಲ, ಆಗಲೂಬಾರದು. ಏಕೆಂದರೆ, ಚಿತ್ರ ನಿರ್ಮಾಣದ ಸಂಸ್ಥೆಯಾಗಲಿ, ವ್ಯಕ್ತಿಯಾಗಲಿ, ಕಲಾವಿದರಂತೆ ಅವರೂ ಲಾಭದ ನಿರೀಕ್ಷೆಯಲ್ಲಿಯೇ ಹಣ ವಿನಿಯೋಗಿಸುತ್ತಾರೆಯೇ ವಿನಾ ಧರ್ಮಕ್ಕಲ್ಲ.

ಸತತ ಸೋಲು ಅನುಭವಿಸಿದಾಗ ಸಂಸ್ಥೆಯಾಗಲಿ, ವ್ಯಕ್ತಿಯಾಗಲಿ ಅದರಿಂದ ಹಿಂದೆ ಸರಿಯುತ್ತಾರೆ. ಕೈ ಹಚ್ಚಿದ್ದೆಲ್ಲ ಕಹಿಯೇ ಆದಾಗ ಯಾರು ಮುಂದುವರಿಯುತ್ತಾರೆ ಹೇಳಿ? ಇಲ್ಲಿ, ಸೋಲು-ಗೆಲುವುಗಳಿಗೆ ನಿರ್ಮಾಪಕರೇ ಜವಾಬ್ದಾರಿ ಹೊತ್ತುಕೊಳ್ಳುತ್ತಾರೆಯೇ ವಿನಾ ನಿರ್ದೇಶಕರಾಗಲಿ, ಕಲಾವಿದರಾಗಲಿ ಅಲ್ಲ.

ಇದು ಒಂದು ಕಡೆಯಾದರೆ, ರಾಜಪಾಲ್ ವಿಷಯದಲ್ಲಿ ಹಾಗಲ್ಲ, ಅವರು ತಾವೇ ಸ್ವತಃ ಚಿತ್ರ ನಿರ್ಮಾಪಕರಾಗಬೇಕೆಂದು ಸಾಲ ಪಡೆದವರು. ಅಲ್ಲಿ ಚಿತ್ರ ಗೆಲ್ಲಲಿ, ಸೋಲಲಿ, ಲಾಭವಾಗಲಿ, ಬಿಡಲಿ, ಪಡೆದ ಹಣವನ್ನು ಹಿಂತಿರುಗಿಸಬೇಕು ಎನ್ನುವುದು ಒಪ್ಪಂದ. ಆ ಒಪ್ಪಂದಕ್ಕೆ ಬದ್ಧವಾಗಿಯೇ ರಾಜಪಾಲ್ ಹಣ ಪಡೆದದ್ದು. ಅವರ ಕೈಗೆ ಕೋಳವಾದದ್ದೂ ಅದೇ ಒಪ್ಪಂದ.

ಇಷ್ಟು ವರ್ಷ ಚಿತ್ರರಂಗದಲ್ಲಿದ್ದು, ಅಷ್ಟೊಂದು ಚಿತ್ರಗಳಲ್ಲಿ ಅಭಿನಯಿಸಿ, ಅದೆಷ್ಟೋ ಜನರಿಗೆ ಸಹಾಯ ಮಾಡಿದವರ ಕಷ್ಟ ಕಾಲದಲ್ಲಿ ಸಹಾಯಮಾಡಲು ಯಾರೂ ಇಲ್ಲವೇ? ಅದಕ್ಕೆ ರಾಜಪಾಲ್ ಹೇಳಿದ ಮಾತೇ ಉತ್ತರ, “ಇಲ್ಲಿ ನಮ್ಮವರು ಎನ್ನುವವರು ಯಾರೂ ಇಲ್ಲ.

ಎಲ್ಲರೂ ಅವರವರ ಕೆಲಸದಲ್ಲಿ ನಿರತರು. ಈ ಸಿನಿಮಾ ಜಗತ್ತಿನಲ್ಲಿ ನಾನೊಬ್ಬನೇ ಅಲ್ಲ, ಪ್ರತಿಯೊಬ್ಬನೂ ಏಕಾಂಗಿ". ನಂಬಲು ಕಷ್ಟವಾದರೂ, ಇದು ಕಹಿಸತ್ಯ. ಇದು ಕೇವಲ ಹಿಂದಿ ಚಿತ್ರರಂಗ ಎಂದಲ್ಲ, ಸಿನಿಮಾ ಜಗತ್ತಿಗೇ ಅನ್ವಯವಾಗುವ ಮಾತು.

ಈ ನಡುವೆ ಸೋನು ಸೂದ್, ಸಲ್ಮಾನ್ ಖಾನ್, ಅಜಯ್ ದೇವಗನ್, ವರುಣ್ ಧವನ್ ಮೊದಲಾದವರು ರಾಜಪಾಲ್‌ಗೆ ಸಹಾಯಹಸ್ತ ಚಾಚುವುದಾಗಿ ಹೇಳಿದ್ದಾರೆ. ಆದರೆ ಇವರಲ್ಲಿ ಹೆಚ್ಚಿನವರು ತಮ್ಮ ಮುಂದಿನ ಚಿತ್ರಗಳಲ್ಲಿ ರಾಜಪಾಲ್‌ಗೆ ಒಂದು ಪಾತ್ರ ನೀಡುವುದಾಗಿ ಹೇಳಿದ್ದಾರೆಯೇ ವಿನಾ ತುರ್ತಾಗಿ ಹಣ ನೀಡುತ್ತೇವೆ ಎಂದಂತಿಲ್ಲ.

ಕೆಲವರು ತಮ್ಮ ಸಿನಿಮಾದಲ್ಲಿ ಕೆಲಸ ಮಾಡಲು ಮುಂಗಡ ನೀಡುವುದಾಗಿ ಹೇಳಿದ್ದಾರೆ. ಹರಿಯಾಣದ ವ್ಯಾಪಾರಿ, ರಾವ್ ಇಂದ್ರಜೀತ್ ಯಾದವ್ ಒಂದು ಕೋಟಿ ಹನ್ನೊಂದು ಲಕ್ಷ, ಬಿಹಾರದ ಲಾಲೂಪ್ರಸಾದ್ ಪುತ್ರ ತೇಜ್ ಪ್ರತಾಪ್ ಹನ್ನೊಂದು ಲಕ್ಷ ನೀಡಿದ್ದಾರಂತೆ. ಸೋನು ಸೂದ್ ತಮ್ಮ ಚಿತ್ರದಲ್ಲಿ ಅಭಿನಯಿಸಲು ಮುಂಗಡ ನೀಡಿದ್ದಾರೆ ಎನ್ನಲಾಗುತ್ತಿದೆ ಯಾದರೂ ಏನು, ಎಷ್ಟು ಎಂದು ತಿಳಿದಿಲ್ಲ.

ಏನೇ ಆದರೂ ಕೆಲವರು ರಾಜಪಾಲ್ ಸಹಾಯಕ್ಕೆ ಬಂದಿರುವುದು ಒಳ್ಳೆಯ ಲಕ್ಷಣವೇ. ಆದರೂ ಪ್ರಶ್ನೆ ಹಾಗೆಯೇ ಉಳಿಯುತ್ತದೆ. ರಾಜಪಾಲ್ ಯಾದವ್ ಬಳಿ ಐದು ಕೋಟಿ ರುಪಾಯಿ ಇರಲಿಲ್ಲವೇ? ಬಾಲಿವುಡ್‌ನಲ್ಲಿ ಎರಡು ದಶಕಕ್ಕೂ ಹೆಚ್ಚು ವರ್ಷಗಳ ಕಾಲ ಉತ್ತುಂಗದಲ್ಲಿ ಹಾರುತ್ತಿದ್ದ ಹಕ್ಕಿಯ ರೆಕ್ಕೆ ಹರಿದುಹೋದದ್ದಾದರೂ ಹೇಗೆ?

ಇನ್ನೊಂದು ವಿಷಯ ಏನು ಗೊತ್ತೇ? ಚಿತ್ರರಂಗದಲ್ಲಿ ಇಂಥ ಘಟನೆ ಇದೇ ಮೊದಲಲ್ಲ, ಇದೇ ಕೊನೆಯೂ ಅಲ್ಲ. ಒಂದಾನೊಂದು ಕಾಲದಲ್ಲಿ ಜನಪ್ರಿಯತೆಯ ಶಿಖರದ ತುತ್ತತುದಿ ಯಲ್ಲಿದ್ದ ಕೆಲವು ನಟ-ನಟಿಯರ ಅಂತ್ಯ ಕೇಳಿದರೆ ಮೈ ನಡುಗುತ್ತದೆ. ತಮ್ಮ ಹೆಸರಿನ ನೃತ್ಯದ ಛಾಪು ಬಿಟ್ಟುಹೋದ ಹಾಸ್ಯನಟ ಭಗವಾನ್, ಪೋಷಕ ಪಾತ್ರಕ್ಕೆಂದೇ ಹುಟ್ಟಿ ದಂತಿದ್ದ ಎ.ಕೆ.ಹಾನಗಲ್, ತಾವು ಅಭಿನಯಿಸಿದ ಮೊದಲ ಚಿತ್ರ ‘ಆಶಿಕಿ’ ಯಶಸ್ವಿಯಾದ ಬೆನ್ನ ಐವತ್ತು ಹೊಸ ಸಿನಿಮಾದಲ್ಲಿ ಅಭಿನಯಿಸಲು ಸಹಿ ಹಾಕಿದ ರಾಹುಲ್ ರಾಯ, ಇವರೆಲ್ಲರ ಕಥೆ ಬರೆಯಲು ಇನ್ನೊಂದು ಅಂಕಣ ಬೇಕಾದೀತು. ‌

ಇನ್ನು ಕೆಲವು ನಟಿಯರ ಕಥೆಯಂತೂ ಯಾರಿಗೂ ಬೇಡ. ಇರಲಿ, ಪುನಃ ರಾಜಪಾಲ್ ವಿಷಯಕ್ಕೆ ಬರುವುದಾದರೆ, ಈ ಇಡೀ ಘಟನೆಯಲ್ಲಿ ಯಾರು ಸರಿ, ಯಾರು ತಪ್ಪು? ಒಬ್ಬ ಕಲಾವಿದನಾಗಿ, ತಾನು ನಿರ್ಮಾಪಕನಾಗಬೇಕು, ನಿರ್ದೇಶಕನಾಗಬೇಕು ಎಂದು ಬಯಸುವುದು ತಪ್ಪೇ? ಹಣವನ್ನು ಪಡೆದು ಚಿತ್ರ ನಿರ್ಮಾಣವನ್ನೇ ಮಾಡದಿದ್ದರೆ ತಪ್ಪು ಎನ್ನಬಹುದು.

ಇಲ್ಲಿ ರಾಜಪಾಲ್ ಚಿತ್ರ ನಿರ್ಮಿಸಿದ್ದಾರೆ, ಅದೃಷ್ಟ ಕೈ ಕೊಟ್ಟಿದೆ. ಹಾಗಂತ ಹಣ ನೀಡಿದವ ರದ್ದು ತಪ್ಪೇ? ಅಥವಾ ಅವರಲ್ಲಿ ಮಾನವೀಯತೆ ಇಲ್ಲವೇ? ಸಾಲ ಎಂಬ ಕಾರಣಕ್ಕಾಗಿ ಅವರು ಹಣ ಕೊಟ್ಟದ್ದೇ ವಿನಾ ಲಾಭ-ನಷ್ಟದ ಒಪ್ಪಂದವಿದ್ದರೆ ಅವರು ಹಣವನ್ನು ನೀಡುತ್ತಿರಲಿಲ್ಲವೇನೋ.

ಹಾಗಾಗಿ ಅವರದ್ದೂ ತಪ್ಪು ಎನ್ನಲಾಗುವುದಿಲ್ಲ. ರಾಜಪಾಲ್‌ಗೆ ವಂಚಿಸುವುದೇ ಉದ್ದೇಶ ವಾಗಿತ್ತೇ? ಹಾಗಿದ್ದರೆ ಅವರು ಒಂದು ಪೈಸೆಯನ್ನೂ ತಿರುಗಿ ನೀಡುತ್ತಿರಲಿಲ್ಲ. ಅಲ್ಲದೆ, ನ್ಯಾಯಾಧೀಶರ ಮುಂದೆ ನಿಂತು “ಈಗ ತನ್ನ ಬಳಿ ಹಣವಿಲ್ಲ, ಸ್ವಲ್ಪ ಸಮಯ ಕೊಡಿ" ಎಂದು ಕೇಳುತ್ತಿರಲಿಲ್ಲವೇನೋ? ಒಂದಂತೂ ಸತ್ಯ, ನಾವು ನೋಡುವ ಬಣ್ಣದ ಪರದೆ, ನಾವು ತಿಳಿದಷ್ಟು, ನಮ್ಮ ಕಣ್ಣಿಗೆ ಕಾಣುವಷ್ಟು ವರ್ಣರಂಜಿತವಲ್ಲ. ಬದುಕು ಕೂಡ !