ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Rangaswamy Mookanahalli Column: ವಲಸಿಗರ ಬದುಕು ಸುಲಭವಲ್ಲ!

ಮನುಷ್ಯನ ಇತಿಹಾಸವನ್ನು ತೆರೆದು ನೋಡಿದರೂ ಅದರಲ್ಲಿ ಪ್ರಮುಖವಾಗಿ ಕಾಣುವುದು ವಲಸೆ ! ಹೌದು ಇವತ್ತಿನ ಸಮಾಜ ನಿರ್ಮಾಣ ಆಗುವುದಕ್ಕೆ ಮುಂಚೆ ಮಣ್ಣಿನ ಫಲವತ್ತತೆ ಮತ್ತು ನೀರಿನ ಕುರುಹು ಇದ್ದ ಕಡೆ ಮನುಷ್ಯ ವಲಸೆ ಹೋಗುತ್ತಿದ್ದ. ಅಲ್ಲಿ ನೆಲೆಸಲು ಶುರು ಮಾಡಿದ. ನಿಧಾನವಾಗಿ ಇವತ್ತಿನ ಸಮಾಜವನ್ನು ಕಟ್ಟಿಕೊಂಡ. ವಲಸೆ ಎನ್ನುವುದಕ್ಕೆ ಕಾನೂನು, ಕಾಯ್ದೆ ಎಲ್ಲವೂ ಬಂದವು.

ವಲಸಿಗರ ಬದುಕು ಸುಲಭವಲ್ಲ!

-

ವಿಶ್ವರಂಗ

ವಲಸೆ ಎನ್ನುವುದು ಪ್ರಕೃತಿ ಸಹಜ. ಪ್ರಾಣಿ, ಪಕ್ಷಿಗಳು ಹವಾಮಾನಕ್ಕೆ ತಕ್ಕಂತೆ ನೂರಾರು, ಕೆಲವೊಮ್ಮೆ ಸಾವಿರಾರು ಮೈಲಿ ವಲಸೆ ಹೋಗುವುದನ್ನು ನಾವು ಕಂಡಿದ್ದೇವೆ. ವಾತಾವರಣ ಬದಲಾದಾಗ, ಇನ್ನು ಇಲ್ಲಿ ವಾಸಿಸಲು ಸಾಧ್ಯವಿಲ್ಲ ಎಂದಾಗ ಕೂಡ ಸಂಪೂರ್ಣವಾಗಿ ಬೇರೆ ಜಾಗಕ್ಕೆ ಅವು ವಲಸೆ ಹೋಗುತ್ತವೆ. ಅವುಗಳ ಜೀವನ ಅಷ್ಟರ ಮಟ್ಟಿಗೆ ಸರಾಗ. ಏಕೆಂದರೆ ಅವುಗಳನ್ನು ಯಾರೂ ನಿನ್ನ ಮೂಲ ಯಾವುದು? ಯಾವ ದೇಶದವನು/ಳು ಎಂದು ಕೇಳುವುದಿಲ್ಲ. ಹೊಸದಾಗಿ ಹೋದ ಜಾಗದಲ್ಲಿ ಅದಾಗಲೇ ಝಂಡಾ ಹೂಡಿರುವ ಜೀವಿಗಳ ಜೊತೆಗೆ ಒಂದಷ್ಟು ಸಂಘರ್ಷ ಮಾತ್ರ ಅವುಗಳಿಗೂ ಉಂಟು. ಹೀಗಾಗಿ ವಲಸೆ ಎನ್ನುವುದು ಎಲ್ಲಾ ಪ್ರಾಣಿಗಳ ಜೀವನದಲ್ಲೂ ಸಂಘರ್ಷವನ್ನು ಉಂಟು ಮಾಡೇಮಾಡುತ್ತದೆ.

ಮನುಷ್ಯನ ಇತಿಹಾಸವನ್ನು ತೆರೆದು ನೋಡಿದರೂ ಅದರಲ್ಲಿ ಪ್ರಮುಖವಾಗಿ ಕಾಣುವುದು ವಲಸೆ ! ಹೌದು ಇವತ್ತಿನ ಸಮಾಜ ನಿರ್ಮಾಣ ಆಗುವುದಕ್ಕೆ ಮುಂಚೆ ಮಣ್ಣಿನ ಫಲವತ್ತತೆ ಮತ್ತು ನೀರಿನ ಕುರುಹು ಇದ್ದ ಕಡೆ ಮನುಷ್ಯ ವಲಸೆ ಹೋಗುತ್ತಿದ್ದ. ಅಲ್ಲಿ ನೆಲೆಸಲು ಶುರು ಮಾಡಿದ. ನಿಧಾನವಾಗಿ ಇವತ್ತಿನ ಸಮಾಜವನ್ನು ಕಟ್ಟಿಕೊಂಡ. ವಲಸೆ ಎನ್ನುವುದಕ್ಕೆ ಕಾನೂನು, ಕಾಯ್ದೆ ಎಲ್ಲವೂ ಬಂದವು.

ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಹೋಗುವುದು ಕೂಡ ವಲಸೆಯ ರೂಪವೇ ಆಗಿದೆ. ಅಂದರೆ ಒಂದೇ ರಾಜ್ಯದ ಇತರ ಪ್ರದೇಶಗಳಿಗೆ ಹೋದರೆ ಅದೂ ಕೂಡ ವಲಸೆ ಎನ್ನಿಸಿಕೊಳ್ಳುತ್ತದೆ. ನೀವು ಎಲ್ಲಿಯವರು? ಮೂಲ ಯಾವುದು? ಎಂದು ಕೇಳುವುದು ಸಹಜ. ನಾನು ಮೈಸೂರಿಗೆ ಬಂದು ಐದು ವರ್ಷವಾಯ್ತು. ಬೆಂಗಳೂರಿನ ಕನ್ನಡಕ್ಕೂ, ಮೈಸೂರಿನ ಕನ್ನಡಕ್ಕೂ ಅಂತಹ ವ್ಯತ್ಯಾಸ ವೇನೂ ಇಲ್ಲ. ಇಲ್ಲಿನ ರೀತಿ ನೀತಿ, ರಿವಾಜುಗಳು ನನಗೆ ಹೊಸತೇನೂ ಅಲ್ಲ. ಹೀಗಿದ್ದೂ ಜನ ನೀವು ಯಾವ ಕಡೆಯವರು? ಮೈಸೂರಿನವರೇನಾ? ಎಂದು ಕೇಳುವುದು ಮಾತ್ರ ನಿಂತಿಲ್ಲ. ಅದು ನಿಲ್ಲುವುದೂ ಇಲ್ಲ. ಏಕೆಂದರೆ ಅದು ಮನುಷ್ಯನ ಮೂಲಭೂತ ಗುಣ.

ಇದನ್ನೂ ಓದಿ: Rangaswamy Mookanahalli Column: ಬೆಂಬಲಿಸುವುದು ಎಂದರೆ ಕಷ್ಟವಿಲ್ಲದಂತೆ ಮಾಡುವುದಲ್ಲ!

ಇನ್ನು ಒಂದು ರಾಜ್ಯವನ್ನು ಬಿಟ್ಟು ಇನ್ನೊಂದು ರಾಜ್ಯಕ್ಕೆ ಹೋಗುವುದು ಕೂಡ ವಲಸೆಯೇ ಆಗಿದೆ. ಬೇರೆ ರಾಜ್ಯಕ್ಕೆ ಹೋದ ತಕ್ಷಣ ಎದುರಾಗುವುದು ಭಾಷೆಯ ಸಮಸ್ಯೆ. ಅದರ ಜೊತೆಗೆ ಸಣ್ಣ ಪುಟ್ಟ ಆಚಾರ, ವಿಚಾರಗಳ ಭೇದ ಕೂಡ ಎದುರಾಗುತ್ತದೆ. ಆಹಾರ ಇನ್ನೊಂದು ಸಮಸ್ಯೆಯನ್ನೇ ಸೃಷ್ಟಿ ಮಾಡುತ್ತದೆ. 1998ರಲ್ಲಿ ಕೇರಳಕ್ಕೆ ಆಡಿಟ್ ಮೇಲೆ ಹೋಗಿದ್ದೆ. ಅಲ್ಲಿನ ಅನ್ನವನ್ನು ತಿನ್ನಲಾಗದೆ ಒದ್ದಾಡಿದ ನೆನಪು ಇಂದಿಗೂ ಹಸಿರಾಗಿದೆ. ಅಲ್ಲಿ ಅಪ್ಪಟ ಸಸ್ಯಾಹಾರಿ ಹೋಟೆಲುಗಳನ್ನು ಹುಡುಕಲು ಪರದಾಡಿದ್ದು ಕೂಡ ನೆನಪಿದೆ.

ಅಲ್ಲಿನ ಬಿಸಿಲು, ಸೆಖೆ ಕಟ್ಟಿಕೊಟ್ಟ ಅನುಭವ ಬೇರೆ ರೀತಿಯದು. ಕೇವಲ ಪ್ರವಾಸಿಗರಾಗಿ ಅಥವಾ ಕೆಲಸದ ಮೇಲೆ ಒಂದೆರಡು ವಾರ ಹೋದಾಗ ಎದುರಾಗುವ ತೊಂದರೆಗಳ ಪಟ್ಟಿಗಿಂತ, ಅಲ್ಲಿ ನೆಲಸಲು ಹೋದಾಗ ಎದುರಾಗುವ ಸಮಸ್ಯೆಗಳ ಪಟ್ಟಿ ಇನ್ನೂ ದೊಡ್ಡದು. ಅಲ್ಲಿನ ಸಮಾಜ ನಮ್ಮನ್ನು ಅಷ್ಟು ಬೇಗ ಒಪ್ಪಿಕೊಳ್ಳುವುದಿಲ್ಲ. ಗುಮಾನಿಯ ಕಣ್ಣುಗಳಿಂದ ನೋಡುತ್ತಿರುತ್ತದೆ. ಸ್ವಲ್ಪ ಸಮಾಜದಲ್ಲಿನ ಬದುಕಿನಲ್ಲಿ ಬದಲಾದರೂ ಸಾಕು ಮೊದಲು ಟಾರ್ಗೆಟ್ ಆಗುವವರು ವಲಸಿಗರು!

ಅಲ್ಲಿ ನೆಲಸಿ ಮೂವತ್ತು, ನಲವತ್ತು, ಐವತ್ತು ವರ್ಷವಾಗಿದ್ದರೂ ಅವರನ್ನು ವಲಸಿಗರು ಎಂದೇ ನೋಡಲಾಗುತ್ತದೆ. ಮಾರ್ವಾಡಿ, ಗುಜರಾತಿ, ಸಿಂಧಿ ವ್ಯಾಪಾರಿ ಕುಟುಂಬಗಳು ಕರ್ನಾಟಕ ದಲ್ಲಿ ನೆಲೆನಿಂತು ಅದೆಷ್ಟೇ ವರ್ಷವಾಗಿದ್ದರೂ ನಾವು ಅವರನ್ನು ಹೊರಗಿನವರು ಎನ್ನುವ ದೃಷ್ಟಿಯ ನೋಡುತ್ತೇವೆ. ರಾಜ್ಯದ ಆಧಾರದ ಮೇಲೆ, ಭಾಷೆಯ ಆಧಾರದ ಮೇಲೆ ಅವರನ್ನು ಹೆಸರಿಸುತ್ತೇವೆ. ನಾವು ಮಾತ್ರ ಹೀಗಲ್ಲ, ನಾವು ಬೇರೆ ರಾಜ್ಯಗಳಿಗೆ ಹೋದರೆ ನಮಗೂ ಅದೇ ಟ್ರೀಟ್ಮೆಂಟ್ ಸಿಗುತ್ತದೆ. ಸರಳವಾಗಿ ಹೇಳಬೇಕಂದರೆ ವಲಸೆ ಎನ್ನುವುದು ಸುಲಭವಲ್ಲ.

ನಮ್ಮದೇ ದೇಶದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ವಲಸೆ ಹೋದರೆ ಇಷ್ಟೆ ಸಮಸ್ಯೆ ಎದುರಿಸಬೇಕಾಗುತ್ತದೆ. ಇನ್ನು ಒಂದು ದೇಶವನ್ನು ಬಿಟ್ಟು ಇನ್ನೊಂದು ದೇಶಕ್ಕೆ ವಲಸೆ ಹೋಗುವುದು ಸುಲಭದ ಮಾತಲ್ಲ. ಎಲ್ಲಕ್ಕೂ ಮೊದಲಿಗೆ ಭಾಷೆಯ ತೊಡಕು ಎದುರಾಗುತ್ತದೆ. ಹವಾಮಾನ, ಅಲ್ಲಿನ ಸಂಸ್ಕೃತಿ, ಜನ, ಕಾಸ್ಟ್ ಆಫ್ ಲಿವಿಂಗ್, ವರ್ಕ್ ಕಲ್ಚರ್! ಓಹ್ ಪಟ್ಟಿ ದೊಡ್ಡದು. ‌

71 R

ಎಲ್ಲಕ್ಕೂ ಒಗ್ಗಿಕೊಂಡರೂ ಹತ್ತಾರು ವರ್ಷ ಅಲ್ಲಿದ್ದರೂ ಕೊನೆಯವರೆಗೂ ಎದುರಿಗೆ ಸಿಕ್ಕ ಅಲ್ಲಿನ ಜನ ನೀನು ಯಾವ ದೇಶದವನು ಎನ್ನುವ ಪ್ರಶ್ನೆಯನ್ನು ಕೇಳದೆ ಬಿಡುವುದಿಲ್ಲ. ನಾನು ಸ್ಪೇನ್ ದೇಶಕ್ಕೆ ಹೋಗಿ, ಅಲ್ಲಿನ ಭಾಷೆ ಕಲಿತು, ಅವರಲ್ಲಿ ಒಬ್ಬನಾಗಿ ಬೆರೆತು, ಅಲ್ಲಿನ ಪೌರತ್ವವನ್ನು ಪಡೆದುಕೊಂಡೆ. ಅಂದರೆ ಅಲ್ಲಿನ ಪ್ರಜೆಗೆ ಸಿಗುವ ಎಲ್ಲಾ ಸವಲತ್ತು ನನಗೂ ಸಿಗುತ್ತಿತ್ತು. ಆತನಿಗೆ ಇರುವ ಅಧಿಕಾರ, ಹೊಣೆಗಾರಿಕೆ ಎಲ್ಲವೂ ನನಗೂ ಸಿಕ್ಕವು. -ನಿನಲ್ಲಿ ಮಾತಾಡಿದಾಗ ಸಹಜವಾಗಿ ಮಾತಾಡುತ್ತಿದ್ದ ಜನ ಎದುರಿಗೆ ಕಂಡಾಗ ನೀನು ಯಾವ ದೇಶದವನು ಎಂದು ಕೇಳುತ್ತಿದ್ದರು.

ನಾನು ಇಲ್ಲಿಯವನೇ ಕಣ್ರೀ, ಕಳೆದ ಇಪ್ಪತ್ತು ವರ್ಷದಿಂದ ಇದು ನನ್ನ ಮನೆ ಎಂದು ಹೇಳಿದರೂ ಅದೆ ಓಕೆ, ಮೂಲತಃ ಎಲ್ಲಿಯವನು? ಎನ್ನುವ ಪ್ರಶ್ನೆ ಮಾತ್ರ ಖಾಯಂ ಆಗಿರುತ್ತಿತ್ತು. ಸ್ಪೇನಿಗೆ ಹೋಗಿ ಒಂದೆರಡು ವರ್ಷವಾಗಿತ್ತು, ನನ್ನ ಸಹೋದ್ಯೋಗಿ ಗೆಳೆಯನೊಬ್ಬ, ‘ರಂಗ ಈಗ ನಿನ್ನ ಭಾರತ ದಲ್ಲಿರುವ ಕುಟುಂಬ ಹೊಟ್ಟೆ ತುಂಬಾ ಊಟ ಮಾಡುತ್ತಿದೆ ಅಲ್ವಾ? ನೀನು ಖುಷಿಯಾಗಿದ್ದೀಯ ಅಲ್ವಾ?’ ಎನ್ನುವ ಪ್ರಶ್ನೆಯನ್ನು ಕೇಳಿದ್ದರು. ನಾನು ಹೊಟ್ಟೆಗಾಗಿ ದೇಶ ಬಿಟ್ಟು ಬರಲಿಲ್ಲ, ಇನ್ನಷ್ಟು ಉತ್ತಮ ಬದುಕು ಹುಡಿಕಿಕೊಂಡು ಇಲ್ಲಿಗೆ ಬಂದೆ ಎಂದರೆ ಅವರು ನಂಬಲು ಸಿದ್ಧರಿರಲಿಲ್ಲ.

ಏಕೆಂದರೆ ಪೂರ್ಣ ಯೂರೋಪಿನಲ್ಲಿ ವಲಸೆ ಹೋಗುವುದು ಎಂದರೆ ಇದ್ದ ಜಾಗದಲ್ಲಿ ಅನ್ನ ಹುಟ್ಟದೆ ಇದ್ದಾಗ ಮಾತ್ರ ಎನ್ನುವ ನಂಬಿಕೆಯಿದೆ. ಇವತ್ತಿಗೂ ಯೂರೋಪಿನಲ್ಲಿ ಹುಟ್ಟಿದ ಊರಿನ ಬದುಕಿ, ಕೊನೆಗೆ ಅ ಮಣ್ಣಾಗುವವರ ಸಂಖ್ಯೆ ದೊಡ್ಡದಿದೆ. ಅವರ ಪಾಲಿಗೆ ವಲಸೆ ಎನ್ನುವುದು ದಾರುಣ ಸಮಸ್ಯೆ ಎದುರಾದಾಗ ಅನ್ಯ ಮಾರ್ಗವಿಲ್ಲದೆ ಮಾಡಬೇಕಾದ ಅನಿವಾರ್ಯ ಕರ್ಮ!

ಬೇರೆ ದೇಶಗಳಿಗೆ ವಲಸೆ ಹೋಗುವುದನ್ನು ಭಾರತದಲ್ಲಿ ‘ಯಶಸ್ಸು’ , ‘ಯಶಸ್ವಿ’ ಎನ್ನುವಂತೆ ಬಿಂಬಿಸುತ್ತಾರೆ. ಅಲ್ಲಿನ ನೋವು, ಒಂಟಿತನ, ವಲಸಿಗನ ಹಣೆಪಟ್ಟಿ ಹೊತ್ತು ಜೀವನ ಪೂರ್ತಿ ಕಳೆಯಬೇಕಾದ ಸನ್ನಿವೇಶವನ್ನು ಒಮ್ಮೆ ಊಹಿಸಿಕೊಳ್ಳಿ. ಯಶಸ್ಸಿನ ಪರಿಭಾಷೆ ಬದಲಾಗದಿದ್ದರೆ ಆಗ ಕೇಳಿ.

ಸ್ಪೇನ್ ಮತ್ತೊಮ್ಮೆ ವಲಸೆ ವಿಚಾರವಾಗಿ ಸುದ್ದಿಯಲ್ಲಿದೆ. ಇದು ಜಾಗತಿಕ ಸುದ್ದಿಯಾದ ಕಾರಣ ಭಾರತಕ್ಕೂ ತಲುಪಿದೆ. ಹೀಗಾಗಿ ಇದರ ಬಗ್ಗೆ ನಾಲ್ಕು ಸಾಲು ಬರೆಯುವುದು ಸ್ಪೇನ್ ಪ್ರಜೆಯಾಗಿ, ಮೂಲತಃ ಭಾರತೀಯ ನಾಗಿ ನನ್ನ ಕರ್ತವ್ಯ ಎನ್ನುವ ಕಾರಣಕ್ಕೆ ಈ ಸಾಲುಗಳು ಜನ್ಮ ಪಡೆದು ಕೊಂಡಿವೆ.

ನಿಮಗೆ ಒಂದು ವಿಚಾರ ಹೇಳುತ್ತೇನೆ. ಯೂರೋಪಿಗೆ ಅದರಲ್ಲೂ ಸ್ಪೇನ್ ಮತ್ತು ಪೋರ್ಚುಗಲ್ ದೇಶಕ್ಕೆ ಅನ್ಯ ದೇಶಗಳಿಂದ ಬರುವ ಇಲ್ಲೀಗಲ್ ವಲಸೆ ಅಂದರೆ ವೀಸಾ ಪಡೆದುಕೊಳ್ಳದೇ ವಾಮ ಮಾರ್ಗದಿಂದ ವಲಸೆ ಬರುವವರ ಸಂಖ್ಯೆ ಸದಾ ಇದ್ದೇ ಇತ್ತು. ಸ್ಪೇನ್ ದೇಶ ಪಕ್ಕದ ಮೊರಕ್ಕೋ ದೇಶದೊಂದಿಗೆ ಸಮುದ್ರದ ಸರಹದ್ದು ಹಂಚಿಕೊಂಡಿದೆ. ಕೇವಲ 14 ಕಿಲೋಮೀಟರ್ ಈಜಿದರೆ ಮೊರಕ್ಕೋ ಇಂದ ಸ್ಪೇನ್ ನೆಲದಲ್ಲಿ ಕಾಲಿಡಬಹುದು. ಸ್ಪೇನ್ ದೇಶದಲ್ಲಿದ್ದ ಅಷ್ಟೂ ವರ್ಷವೂ ಜನ ಸೂಟ್‌ಕೇಸಿನಲ್ಲಿ ಮುದುಡಿ ಕುಳಿತು, ಲಾರಿಯ ಕೆಳಭಾಗದಲ್ಲಿ ಅವಿತುಕೊಂಡು, ಕಂಟೈನರ್ ಡಬ್ಬಗಳಲ್ಲಿ ವಸ್ತುಗಳ ಜೊತೆಗೆ, ಹೇಗೆ ಸ್ಪೇನಿಗೆ ಬರಲು ಹೊಸ ಹೊಸ ದಾರಿಯನ್ನು ಕಂಡುಕೊಳ್ಳು ತ್ತಿದ್ದಾರೆ ಎನ್ನುವುದನ್ನು ನ್ಯೂಸ್‌ನಲ್ಲಿ ಕಂಡಿದ್ದೇನೆ.

ಹ್ಯೂಮನ್ ಟ್ರಾಫಿಕಿಂಗ್ ಎನ್ನುವುದು ದೊಡ್ಡ ದಂಧೆ. ಕೆಲವರು ಹಣ ಕೊಟ್ಟು ಹೇಗಾದರೂ ಸ್ಪೇನ್ ತಲುಪಿಸಿ ಎನ್ನುತ್ತಾರೆ. ಕೆಲವರನ್ನು ಕದ್ದು ತರುತ್ತಾರೆ. ಇಲ್ಲಿನ ನೆಲಕ್ಕೆ ಕಾಲಿಟ್ಟ ಮೇಲೆ ಮಾತ್ರ ವಲಸಿಗರಿಗೆ ಅರಿವಾಗುವುದು ಬೆಂಕಿಯಿಂದ ಬಾಣಲೆಗೆ ಬಿದ್ದಿದ್ದೇವೆ ಎನ್ನುವುದು. ಅಲ್ಲಿಯವರೆಗೂ ಅವರೊಂದು ಭ್ರಾಮಕ ಜಗತ್ತಿನಲ್ಲಿರುತ್ತಾರೆ. ಸಮುದ್ರಕ್ಕೆ ಧುಮುಕಿ ಈಜುತ್ತಾ ಸ್ಪೇನಿಗೆ ಬರುವುದು ಖರ್ಚಿಲ್ಲದ ಬಾಬತ್ತು. ಹೀಗಾಗಿ ಬಹಳಷ್ಟು ಜನ ಈ ದಾರಿಯನ್ನು ಕೂಡ ಅಪ್ಪಿಕೊಳ್ಳುತ್ತಾರೆ.

ಇವರಲ್ಲಿ 95 ಪ್ರತಿಶತ ಜನ ಸ್ಪೇನಿನ ನೆಲ ಮುಟ್ಟುವುದಿಲ್ಲ. ನೀರಿನಲ್ಲಿ ಅವರ ಬದುಕು ಅಂತ್ಯ ವಾಗುತ್ತದೆ. ಈ ಬಾರಿ ಸ್ಪಾನ್ನ್ ಹೈಕೋರ್ಟ್ ನೀರಿನಲ್ಲಿ ಈಜುವಾಗ ಮಧ್ಯದಲ್ಲಿ ಅವರ ಮೇಲೆ ಅಟ್ಯಾಕ್ ಮಾಡಬಾರದು. ಅವರನ್ನು ಸ್ಪೇನಿನ ನೆಲಕ್ಕೆ ಬರಲು ಬಿಡಬೇಕು. ನಂತರ ಬಂಧಿಸಿ ಅವರನ್ನು ಮರಳಿ ಅವರ ದೇಶಕ್ಕೆ ಕಳಿಸುವ ಪ್ರಯತ್ನ ಮಾಡಬೇಕು ಎನ್ನುವ ಮಹತ್ವದ ತೀರ್ಪು ನೀಡಿದೆ. ಕೇಳುವುದಿನ್ನೇನು? ಜೀವ ಭಯ ಇದ್ದಾಗಲೇ ಯೋಚನೆ ಮಾಡದೇ ನೀರಿಗೆ ಧುಮುಕುತ್ತಿದ್ದ ಜನ ಈಗ ಅಟ್ಯಾಕ್ ಮಾಡುವುದಿಲ್ಲ ಎನ್ನುವ ಅಭಯ ಸಿಕ್ಕ ಮೇಲೆ ಹಿಂಡುಹಿಂಡಾಗಿ ನೀರಿಗೆ ಧುಮುಕುತ್ತಿದ್ದಾರೆ.

ನಿಮಗೆ ಇನ್ನೊಂದು ವಿಚಾರ ಹೇಳುತ್ತೇನೆ. ಸ್ಪೇನ್ ಸೋಷಿಯಲಿ ದೇಶ. ಇವತ್ತಿಗೆ ಇರುವುದು ಮಿಶ್ರ ಸರಕಾರ. ಅದರಲ್ಲೂ ಎಡ, ಮಧ್ಯ ಎಡ ಚಿಂತಕರು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಹೀಗಾಗಿ ಅವರ ನೀತಿಗಳು ಸದಾ ಹೀಗೆ ಇರುತ್ತವೆ. ಎಲ್ಲರೂ ಸಮಾನರು, ಎಲ್ಲರಿಗೂ ಬದುಕುವ ಹಕ್ಕಿದೆ ಎನ್ನುವ ಸಮಾಜವಾದಿ ಸಿದ್ಧಾಂತ ಕೇಳಲು ಬಹಳ ಚೆನ್ನಾಗಿರುತ್ತದೆ. ಒಳಗೆ ಬರುವ ವಲಸಿಗರು ಆ ರೀತಿ ಯೋಚಿಸುವುದಿಲ್ಲ. ಅವರಿಗೆ ಹೇಗಾದರೂ ಸರಿ ಬದುಕು ಕಟ್ಟಿಕೊಳ್ಳಬೇಕು ಎನ್ನುವ ದರ್ದು ಇರುತ್ತದೆ. ಅವರಿಗೆ ನೆಲದ ಕಾನೂನಿನ ಭಯವೇ ಇರುವುದಿಲ್ಲ.

ಪ್ರಥಮವಾಗಿ ಆ ನೆಲಕ್ಕೆ ಕಾಲಿಟ್ಟಿರುವುದೇ ಕಾನೂನು ಮುರಿಯುವುದರ ಮೂಲಕ, ವೀಸಾ ಪಡೆದುಕೊಳ್ಳದೇ ಅನ್ಯ ಮಾರ್ಗದ ಮೂಲಕ ಕಾಲಿಟ್ಟಿರುತ್ತಾರೆ. ಹೀಗಾಗಿ ಅವರಿಗೆ ಯಾವ ರೀತಿ ರಿವಾಜುಗಳ ಅಡ್ಡಿ ಆತಂಕ ಇರುವುದಿಲ್ಲ. ಎಲ್ಲಿಯವರೆಗೆ ವಲಸೆ ಎನ್ನುವುದು ಕಾನೂನಿನ ಪರಿಧಿಯಲ್ಲಿ ಆಗುತ್ತದೆ ಅಲ್ಲಿಯವರೆಗೂ ದೊಡ್ಡ ಮಟ್ಟದ ಸಮಸ್ಯೆ ಇರುವುದಿಲ್ಲ. ಅಂದು ಇಂದು ಜನಾಂಗೀಯ ಕಲಹವನ್ನು ತಪ್ಪಿಸಲಾಗುವುದಿಲ್ಲ ಎನ್ನುವುದು ಕೂಡ ಸತ್ಯ.

ಆದರೆ ವಲಸೆ ಎನ್ನುವುದು ಅನಿಯಂತ್ರಿತವಾದಾಗ ಅದು ಬಹಳಷ್ಟು ದೊಡ್ಡ ಸಮಸ್ಯೆಯನ್ನು ಹೊತ್ತು ತರುತ್ತದೆ. ಸ್ಪೇನ್ ಇದೀಗ ಅಂತಹ ದೊಡ್ಡ ಸಮಸ್ಯೆಯ ಸುಳಿಯಲ್ಲಿ ಸಿಲುಕಿದೆ. ತಾನೇ ತೆಗೆದುಕೊಂಡ ನಿರ್ಧಾರದ ಫಲಿತಾಂಶವದು. ಸ್ಪೇನ್ ದೇಶದ ಪಕ್ಕದ ದೇಶ ಇಟಲಿಯಲ್ಲಿ ಅಧಿಕಾರದಲ್ಲಿರುವುದು ರಾಷ್ಟ್ರೀಯ ವಿಚಾರವಾದಿಗಳು. ಅವರು ಸ್ಪೇನ್ ದೇಶದ ಸರಹದ್ದು ಮುಚ್ಚಿದ್ದಾರೆ. ಸ್ಪೇನ್‌ಗೆ ಬಂದ ಮೊರಕನ್ ವಲಸಿಗರು ಅಲ್ಲಿಂದ ಇಟಲಿಗೆ ನುಸುಳುತ್ತಾರೆ ಎನ್ನುವ ಕಾರಣಕ್ಕೆ ಬಾರ್ಡರ್ ಮುಚ್ಚಿದ್ದಾರೆ.

ಮೆಕ್ಸಿಕೋ ಇಂದ ಅಮೇರಿಕಾಕ್ಕೆ, ವೆನಿಜುವೆಲಾ ಇಂದ ಬೊಲಿವಿಯಾಕ್ಕೆ, ಸಬ್ ಸಹರಿಯನ್ ದೇಶಗಳಿಂದ ಯೂರೋಪಿಗೆ, ಬಾಂಗ್ಲಾದಿಂದ, ನೇಪಾಳದಿಂದ ಭಾರತಕ್ಕೆ ಬರುವ ಕಾನೂನು ಬಾಹಿರ ವಲಸೆ ಸಮಸ್ಯೆಯನ್ನು ಸೃಷ್ಟಿಸುತ್ತಿದೆ. ವಲಸೆ ಎನ್ನುವುದು ಹೊಲಸು ಎನ್ನುವ ಮಟ್ಟಕ್ಕೆ ಇದು ಬದಲಾಗಿದೆ. ಯಾವುದೇ ದೇಶದಲ್ಲಿ ನುರಿತ ಕೆಲಸಗಾರರ ಕೊರತೆ ಉಂಟಾದಾಗ ಅಲ್ಲಿಗೆ ಕಾನೂನಿನ ಪ್ರಕಾರ ವಲಸೆ ಹೋಗುವುದು, ಅಲ್ಲಿ ಬದುಕು ಕಟ್ಟಿಕೊಳ್ಳುವುದು ತಪ್ಪಲ್ಲ.

ಹೀಗೆ ಕಾನೂನಿನ ಪ್ರಕಾರ ವಲಸೆ ಹೋಗಿರುವ ಜನರಿಗೆ ಕೂಡ ಈ ರೀತಿಯ ವಾಮ ಮಾರ್ಗದಿಂದ ಬಂದ ವಲಸಿಗರಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತದೆ. ಅಲ್ಲಿನ ಮೂಲ ನಾಗರಿಕರಿಗೆ ಎಲ್ಲಾ ವಲಸಿಗರು ನಮ್ಮ ಸಮಾಜವನ್ನು ಹಾಳು ಮಾಡಲು ಬಂದವರು, ನಮ್ಮ ಸಂಪನ್ಮೂಲಗಳ ಮೇಲೆ ಹಕ್ಕು ಸ್ಥಾಪಿಸಲು ಬಂದವರು ಎನ್ನುವ ದ್ವೇಷ ಭಾವ ಉಂಟಾಗಿದೆ. ಅಮೇರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ದೇಶಗಳಲ್ಲಿ ರೇಸಿಸಂ ಯಾವ ಮಟ್ಟದಲ್ಲಿದೆ ಎನ್ನುವುದು ಇವತ್ತಿಗೆ ಎಲ್ಲರಿಗೂ ಗೊತ್ತಿದೆ. ಆ ಸಾಲಿಗೆ ನನ್ನ ಸ್ಪೇನ್ ಸೇರದಿರಲಿ ಎನ್ನುವ ಪ್ರಾರ್ಥನೆ ನನ್ನದು.