ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Naveen Sagar Column: ಡಿಕೆಶಿ ಹ್ಯಾಂಡ್‌ಶೇಕ್‌ನ ಸಿಲ್ವರ್ ಜ್ಯುಬಿಲಿ ನೆನಪಲ್ಲಿ...

ಎಸ್.ಎಂ ಕೃಷ್ಣ ಸರಕಾರದಲ್ಲಿ ಅವತ್ತು ಸಹಕಾರ ಸಚಿವ ಆಗಿದ್ರು. ನಿರಂತರವಾಗಿ ಎಲ್ಲ ಪತ್ರಿಕೆ ಓದುತ್ತಿದ್ದೆ. ನ್ಯೂಸ್ ವ್ಯೂಸ್ ಎಲ್ಲವನ್ನೂ ಫಾಲೋ ಮಾಡ್ತಿದ್ದೆ. ಡಿ.ಕೆ ಶಿವಕುಮಾರ್ ಎಂಬ ಯುವ ನಾಯಕ, ಶಾಸಕ, ಮಂತ್ರಿ, ಎಸ್.ಎಂ ಕೃಷ್ಣರ ನೆಚ್ಚಿನ ಶಿಷ್ಯ. ಇಷ್ಟು ತಲೆಯಲ್ಲಿ ಕೂತಿತ್ತು. ಕ್ಲೀನ್ ಶೇವ್, ದಪ್ಪ ಮೀಸೆ.. ಮಟ್ಟಸವಾಗಿ ಕತ್ತರಿಸಲ್ಪಟ್ಟಿದ್ದ ತುಂಬು ತಲೆಕೂದಲು. ನಲವತ್ತರ ಆಸುಪಾಸಲ್ಲಿ ಇದ್ದರು ಅನ್ಸತ್ತೆ ಆಗ. ಒಬ್ಬ ಯಂಗ್ ಎನರ್ಜೆಟಿಕ್ ರಾಜಕಾರಣಿ. ಇರೋವ್ರಲ್ಲಿ ಡಿಫರೆಂಟು ಡೈನಮಿಕ್ಕು ಅಂತ ನನ್ನೊಳಗೊಂದು ಅವರ ಇಮೇಜ್ ಬಿಲ್ಡ್ ಆಗಿದ್ದಂತೂ ಹೌದು.

ಡಿಕೆಶಿ ಹ್ಯಾಂಡ್‌ಶೇಕ್‌ನ ಸಿಲ್ವರ್ ಜ್ಯುಬಿಲಿ ನೆನಪಲ್ಲಿ...

-

ಪದಸಾಗರ

ಇಪ್ಪತ್ತೈದು ವರ್ಷದ ಮೇಲಾಯ್ತಾ ಅಂತ... ಕೆಲಸಕ್ಕಾಗಿ ಅಲೆಯುತ್ತಿದ್ದ ದಿನಗಳಲ್ಲಿ ಅದೊಂದು ದಿನ ಶೂಲೆ ಸರ್ಕಲ್ ಜಂಕ್ಷನ್ ಬಳಿ ನಡೆದು ಬರ್ತಾ ಇದ್ದೆ. ಸ್ಕಾರ್ಪಿಯೋ ಗಾಡಿ ಅಂತ ನೆನಪು... ಸುಮಾರು ನೂರು ಮೀಟರ್ ದೂರದಿಂದಾನೇ ಹಿಂದ್ಗಡೆ ಸೀಟಲ್ಲಿ ಕೂತಿರೋ ವ್ಯಕ್ತಿ ಗುರುತು ಸಿಕ್ಕಿಬಿಟ್ಟಿತು.

ನಾನ್ಯಾಕೆ ಅಷ್ಟೊಂದು ಥ್ರಿಲ್ ಆದೆ ಅಂತ ಈ ಕ್ಷಣಕ್ಕೂ ನಂಗೊತ್ತಿಲ್ಲ... ಸಿಗ್ನಲ್ ಗ್ರೀನ್ ಆಗೋಕೂ ಮೊದ್ಲು ರೀಚ್ ಆಗಿಬಿಡಬೇಕು ಅಂತ ಒಂದೇ ಉಸಿರಿನಲ್ಲಿ ಆ ಗಾಡಿಯತ್ತ ಓಡತೊಡಗಿದೆ. ಇರೋ ಬರೋ ವೆಹಿಕಲ್‌ಗಳನ್ನೆಲ್ಲ ದಾಟಿಕೊಂಡು ಆ ಗಾಡಿ ಹತ್ರ ಹೋಗ್ತಾ ಇದ್ದ ಹಾಗೇ ಕಿಟಕಿಯ ಗಾಜು ಕೆಳಗಿಳಿಯತೊಡಗಿತು..

‘ಹಾಯ್ ಯಂಗ್ ಮ್ಯಾನ್.... ಹೌ ಆರ್ ಯೂ...?’ ಬೇಸ್ ವಾಯ್ಸ್‌ನಲ್ಲಿ ಆ ವ್ಯಕ್ತಿ ಮಾತಾಡ್ತಾ ಹ್ಯಾಂಡ್‌ಶೇಕ್ ಮಾಡೋಕೆ ಕೈ ಚಾಚಿದ್ರು. ನಂಗೆ ಮಾತು ಬರಲಿಲ್ಲ... ‘ಫೈನ್ ಸರ್...’ ಅಂದ್ನೋ ಇಲ್ವೋ ನೆನಪಿಲ್ಲ . ನಮಸ್ಕಾರ, ನಮಸ್ತೆ ಏನೂ ಹೇಳಲಿಲ್ಲ.

ಸಿಗ್ನಲ್ ಗ್ರೀನ್ ಆಗಿಬಿಡ್ತು. ‘ಆಲ್ ದ ಬೆಸ್ಟ್ ಯಂಗ್ ಮ್ಯಾನ್’ ಅಂತ ಹೇಳಿ ಕೈ ಹಿಂತೆಗೆದುಕೊಂಡು ಬೈ ಮಾಡಿ ಹೊರಟೇ ಬಿಟ್ರು. ಸುಮಾರು ಐದು ನಿಮಿಷ ಅ ಪಕ್ಕದ ಫುಟ್‌ಪಾತ್‌ನಲ್ಲಿ ನಿಂತು ‘ಏನಾಯ್ತು ಈಗ’ ಅಂತ ಯೋಚಿಸ್ತಾ ಇದ್ದುಬಿಟ್ಟೆ. ನಾನ್ಯಾಕೆ ಹಾಗೆ ಓಡಿಬಂದೆ..? ಆ ವ್ಯಕ್ತಿ ನಿಜವಾಗ್ಲೂ ಮಾತಾಡಿಸಿದ್ರಾ? ಏನೂ ಅರ್ಥವಾಗಲಿಲ್ಲ.

ಅಂದ ಹಾಗೆ ಆ ವ್ಯಕ್ತಿ ಡಿ.ಕೆ ಶಿವಕುಮಾರ್.

ಇದನ್ನೂ ಓದಿ: Naveen Sagar Column: ಇದ್ದರೆ ಅನಂತ್ ನಾಗ್ ಅಭಿಮಾನಿಯಂತಿರಬೇಕು

ಎಸ್.ಎಂ ಕೃಷ್ಣ ಸರಕಾರದಲ್ಲಿ ಅವತ್ತು ಸಹಕಾರ ಸಚಿವ ಆಗಿದ್ರು. ನಿರಂತರವಾಗಿ ಎಲ್ಲ ಪತ್ರಿಕೆ ಓದುತ್ತಿದ್ದೆ. ನ್ಯೂಸ್ ವ್ಯೂಸ್ ಎಲ್ಲವನ್ನೂ ಫಾಲೋ ಮಾಡ್ತಿದ್ದೆ. ಡಿ.ಕೆ.ಶಿವಕುಮಾರ್ ಎಂಬ ಯುವ ನಾಯಕ, ಶಾಸಕ, ಮಂತ್ರಿ, ಎಸ್.ಎಂ.ಕೃಷ್ಣರ ನೆಚ್ಚಿನ ಶಿಷ್ಯ. ಇಷ್ಟು ತಲೆಯಲ್ಲಿ ಕೂತಿತ್ತು.

ಕ್ಲೀನ್ ಶೇವ್, ದಪ್ಪ ಮೀಸೆ.. ಮಟ್ಟಸವಾಗಿ ಕತ್ತರಿಸಲ್ಪಟ್ಟಿದ್ದ ತುಂಬು ತಲೆಕೂದಲು. ನಲವತ್ತರ ಆಸುಪಾಸಲ್ಲಿ ಇದ್ದರು ಅನ್ಸತ್ತೆ ಆಗ. ಒಬ್ಬ ಯಂಗ್ ಎನರ್ಜೆಟಿಕ್ ರಾಜಕಾರಣಿ. ಇರೋವ್ರಲ್ಲಿ ಡಿಫರೆಂಟು ಡೈನಮಿಕ್ಕು ಅಂತ ನನ್ನೊಳಗೊಂದು ಅವರ ಇಮೇಜ್ ಬಿಲ್ಡ್ ಆಗಿದ್ದಂತೂ ಹೌದು.

ಆ ನಂತರದಲ್ಲಿ ಡಿಕೆಶಿ ವಿರುದ್ಧ ಬಂದ ಆರೋಪಗಳು, ಜೈಲು, ದ್ವೇಷ ರಾಜಕಾರಣದ ಅನುಮಾನ ಮೂಡಿಸುವ ಕೆಲವು ನಡೆಗಳು, ರೆಸಾರ್ಟ್ ರಾಜಕೀಯ, ದೇಶಾದ್ಯಂತ ಮಾಡಲ್ಪಟ್ಟಿರುವ ಆಸ್ತಿ ಬಗ್ಗೆ ಕೇಳಿದ ಸುದ್ದಿಗಳು, ಪೂರ್ವಾಶ್ರಮದ ಕತೆಗಳು. ಮುಸಲ್ಮಾನರನ್ನು ಓಲೈಸುವ ಮಾತುಗಳು, ಸೈದ್ಧಾಂತಿಕ ನಡೆಗಳು ಇವೆಲ್ಲವೂ ಸೇರಿ, ಡಿಕೆಶಿ ಬಗ್ಗೆ ನನ್ನೊಳಗೆ ಸೃಷ್ಟಿಯಾಗಿದ್ದ ಆ ಇಮೇಜ್ ಕೆಡಿಸಿ ಹಾಕಿದವು.

ಆದರೆ ಡಿಕೆಶಿ ತಾಕತ್ತಿನ ಬಗ್ಗೆ ಮಾತ್ರ ಎಂದಿಗೂ ಬೆರಗು ಕಮ್ಮಿಯಾಗಲಿಲ್ಲ. ಆ ವ್ಯಕ್ತಿಯ ಟ್ರಬಲ್ ಶೂಟಿಂಗ್ ಸಾಮರ್ಥ್ಯ, ಎದುರಾಳಿಯನ್ನು ನೆಲಸಮ ಮಾಡುವ ತಂತ್ರಗಾರಿಕೆ, ಧನಬಲ ಇವೆಲ್ಲದರ ಬಗ್ಗೆ ನನಗೆ ಇಂದಿಗೂ ಒಂದು ಭಯ ಮತ್ತು ಬೆರಗು. ಭಯ ಅಂದ್ರೆ ನನಗೇನೋ ಮಾಡ್ತಾರೆ ಅನ್ನೋ ವೈಯಕ್ತಿಕ ಭಯ ಅಲ್ಲ. ಈ ಮನುಷ್ಯ ತನ್ನ ರಾಜಕೀಯ ಜೀವನದಲ್ಲಿ ಗೆಲುವಿಗಾಗಿ ಏನು ಬೇಕಾದ್ರೂ ಮಾಡಬಲ್ಲ ಎಂಬ ಭಯ.

DKS ok

ಮತದಾರನಾಗಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲದಿರಲಿ ಅಂತ ಬಯಸಿದ್ದಾನಾದರೂ, ರಾಜ್ಯ ಬಿಜೆಪಿಯನ್ನು ಯಾವ ಹಾರೈಕೆ, ಪ್ರಾರ್ಥನೆಗಳೂ ಗೆಲ್ಲಿಸಲಾರವು ಎಂಬುದು ಸ್ಪಷ್ಟವಾಗಿತ್ತು. ಬಿಜೆಪಿ ಯನ್ನು ಬೆಂಬಲಿಸಲು ರಾಜ್ಯದಲ್ಲಿ ಯಾವ ಅಂಶವೂ ನನಗೆ ಕಾಣುತ್ತಿರಲಿಲ್ಲ.

ಆದರೆ ಕಾಂಗ್ರೆಸ್ ಕಂಡ ಆ ಜಯದ ಇಂಚಿಂಚು ಶ್ರೇಯಸ್ಸೂ ಡಿಕೆ ಶಿವಕುಮಾರ್‌ಗೆ ಸಲ್ಲಬೇಕು. ಅದರಲ್ಲೂ ಇಂತಿಷ್ಟೇ ಸೀಟು ಗೆಲ್ತೀವಿ ಅಂತ ಹೇಳಿ ಗೆದ್ದು ತೋರಿಸೋಕೆ ಇನ್ಯಾವ ಮಟ್ಟದ ಸ್ಟ್ರಾಟೆಜಿ ಪ್ಲಾನ್ ಮಾಡಿದ್ದಿರಬಹುದು. ಅಲ್ಲಿ ಹಣಬಲ ಕೆಲಸ ಮಾಡಿತ್ತೋ, ತೋಳ್ಬಲ ಕೆಲಸ ಮಾಡಿತ್ತೋ, ಆಮಿಷ-ಆಶ್ವಾಸನೆಗಳು ಕೆಲಸ ಮಾಡಿದ್ದವೋ ಅಥವಾ ಅವೆಲ್ಲವೂ ಸೇರಿ ಗೆಲ್ಲಿಸಿತೋ, ಏನಾದರೂ ಇರಲಿ. ಈ ಗೆಲುವಿನ ಕ್ರೆಡಿಟ್ ಮಾತ್ರ ಡಿ.ಕೆ.ಶಿವಕುಮಾರ್ ಹೊರತಾಗಿ ಮತ್ತೊಬ್ಬರಿಗೆ ನೀಡಲು ಸಾಧ್ಯವೇ ಇಲ್ಲ.

ಮುಖ್ಯಮಂತ್ರಿ ಆಗಬೇಕೆಂಬ ಏಕೈಕ ಗುರಿಯಿಟ್ಟುಕೊಂಡು ಪಕ್ಷಕ್ಕಾಗಿ ಇನ್ನಿಲ್ಲದಂತೆ ದುಡಿದ ಡಿಕೆಶಿ ಬದಲು ಮತ್ತೊಮ್ಮೆ ಸಿದ್ದರಾಮಯ್ಯ ಅವರಿಗೆ ಸಿಎಂ ಪಟ್ಟ ಕಟ್ಟಲಾದಾಗ, ಹೈಕಮಾಂಡ್ ನಿರ್ಧಾರ ಅಚ್ಚರಿಗೊಳಿಸಿತ್ತು. ಹೈಕಮಾಂಡ್‌ನಲ್ಲಿ ನಿಜಕ್ಕೂ ಏನಂತ ತೀರ್ಮಾನವಾಗಿದೆ. 20-20 ಅಂತಾನಾ, ಸಿದ್ದರಾಮಯ್ಯ ಅವರು ದಾಖಲೆ ಸಂಖ್ಯೆಯ ಬಜೆಟ್ ಮಂಡಿಸಿದ ನಂತರ ಪದತ್ಯಾಗ ಅಂತಾನಾ, ಅರಸು ದಾಖಲೆ ಬ್ರೇಕ್ ಮಾಡಿದ ನಂತರ ಅಂತಾನಾ.. ಎಲ್ಲವೂ ಗುಪ್ತವಾಗಿಯೇ ಉಳಿದಿತ್ತು.

ಈ ಸಮಯದಲ್ಲಿ ಡಿಕೆಶಿ ಸಾರ್ವಜನಿಕವಾಗಿ ಮತ್ತು ಮಾಧ್ಯಮಗಳೆದುರು ಈ ವಿಚಾರದ ಬಗ್ಗೆ ನಡೆದು ಕೊಳ್ಳುತ್ತಿದ್ದ ರೀತಿ ಬಹಳ ವಿಶೇಷವಾಗಿತ್ತು. ಯಾವತ್ತಿಗೂ ಭಿನ್ನಮತ, ಅಧಿಕಾರದಾಸೆ, ಅಭದ್ರತಾ ಭಾವ, ಪ್ರದರ್ಶಿಸಲೇ ಇಲ್ಲ. ಒಗ್ಗಟ್ಟಿನ ಮಂತ್ರವನ್ನೇ ಜಪಿಸಿದರು. ಡಿಕೆಶಿಗೊಂದು ಚಾ ಸಿಗಬೇಕು ಎಂದು ವಿರೋಧಿಗಳಿಗೂ ಅನಿಸುವಂತೆ ಅವರ ವರ್ತನೆ ಕಾಣಸಿಕ್ಕಿತು. ಈ ಮನುಷ್ಯನ ಸಿಎಂ ಪಟ್ಟದ ಕನಸು ಕನಸಾಗಿಯೇ ಉಳಿದುಬಿಡುತ್ತದೇನೋ ಅಂತ ಅನಿಸತೊಡಗಿತ್ತು.

ಏತನ್ಮಧ್ಯೆ ಡಿಸಿಎಂ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಡಿಕೆಶಿಯವರ ಸಾರ್ವಜನಿಕ ನಡವಳಿಕೆ ಯಲ್ಲಿ ಆಗಾಗ ಕಾಣುತ್ತಿದ್ದ ಒರಟುತನ, ಒರಟು ಮಾತು, ಇಂಥ ವ್ಯಕ್ತಿ ಸಿಎಂ ಆಗಬಾರದು ಎಂದನಿಸುವಂತೆ ಮಾಡಿದ್ದೂ ನಿಜವೇ. ಅದೇ ಹೊತ್ತಿಗೆ ಹಿಂದೂಧರ್ಮದೆಡೆಗೆ, ದೇವರೆಡೆಗೆ ಅವರಿಗಿರುವ ಭಯಭಕ್ತಿ, ಆರೆಸ್ಸೆಸ್ ಎಡೆಗೆ ದ್ವೇಷ ತೋರದ ನಡೆ ಇವನ್ನೆಲ್ಲ ಕಂಡಾಗ ಮತ್ತೆ ಮನಸೊಳಗೊಂದು ದ್ವಂದ್ವ. ಈ ವ್ಯಕ್ತಿ ನಿಜಕ್ಕೂ ಏನು? ರೈಟ್ ಪರ್ಸನ್ ಇನ್ ರಾಂಗ್ ಪಾರ್ಟಿ ಅನ್ನಬೇಕಾ ಅಂತ!

ಹಾಗಂತ ರಾಜ್ಯ ಬಿಜೆಪಿಯನ್ನು ಕಂಡಾಗ ಅದು ರೈಟ್ ಪಾರ್ಟಿ ಅನಿಸುತ್ತದೆಯಾ? ಅಥವಾ ಸಿದ್ಧಾಂತ/ಧರ್ಮ ಮುಂತಾದ ಕಾರಣಗಳಿಗೆ ಅವರನ್ನು ಇಲ್ಲಿಯವರೆಗೆ ಯಾವ್ಯಾವ ಕಾರಣಕ್ಕೆ ವಿರೋಧಿಸಿದ್ದೇವೆಯೋ ಅವೆಲ್ಲವನ್ನೂ ಮರೆತು ಒಪ್ಪಿಬಿಡಬೇಕಾ? ಮನಸಿನಲ್ಲಿ ಸಾಕಷ್ಟು ವಿಚಾರಗಳ ಗುzಟ.

ಇದರ ಮಧ್ಯೆ ಡಿಕೆಶಿ ಆರೋಗ್ಯದ ಬಗ್ಗೆ ಹಲವಾರು ಬಾರಿ ಯೋಚನೆ ಬಂದದ್ದುಂಟು. ಸುಸ್ತಿನಲ್ಲಿ ತೂರಾಡಿದ ವಿಡಿಯೋಗಳು, ಮಾತಿನಲ್ಲಿ ಕೆಲವೊಮ್ಮೆ ತೊದಲು ಇವನ್ನೆಲ್ಲ ಕಂಡಾಗ, ಕ್ಲೀನ್ ಶೇವ್ ಮಾಡಿ ಟಿಪ್‌ಟಾಪ್ ಆಗಿ ಇರುತ್ತಿದ್ದ ವ್ಯಕ್ತಿ ಬಿಳಿ ಗಡ್ಡ/ಅಸ್ತವ್ಯಸ್ತ ತಲೆಗೂದಲಿನಲ್ಲಿ ಕಾಣಿಸಿಕೊಳ್ಳ ತೊಡಗಿದಾಗ, ಡಿಕೆಶಿ ಆರೋಗ್ಯವಾಗಿದ್ದಾರಾ ಅಂತಲೂ ಪ್ರಶ್ನೆ ಹುಟ್ಟುಕೊಂಡಿತ್ತು. ಡಿಕೆಶಿ ಮುಖ್ಯಮಂತ್ರಿಯಾಗಲು ಇಡೀ ಬ್ರಹ್ಮಾಂಡವೇ ಅಡ್ಡಗಾಲು ಹಾಕಿ ನಿಂತಿದೆಯೇನೋ ಎಂದೆಲ್ಲ ಅನಿಸಿಬಿಟ್ಟಿತ್ತು.

ಕೊನೆಗೂ ಡಿಕೆಶಿಯ ತಾಳ್ಮೆ, ತಪಸ್ಸು, ಪ್ರಯತ್ನ ಎಲ್ಲವೂ ಫಲ ಕೊಟ್ಟಿತು. ಮುಖ್ಯಮಂತ್ರಿಯಾಗಿಯೇ ಬಿಟ್ಟರು. ಸೈದ್ಧಾಂತಿಕ/ರಾಜಕೀಯ ವಿರೋಧಿಗಳಲ್ಲೂ ಸಮಾಧಾನದ ನಿಟ್ಟುಸಿರು. ಕೊನೆಗೂ ಪಟ್ಟ ದಕ್ಕಿತಲ್ಲ ಎಂದು.

ಆದರೆ ಡಿಕೆಶಿ ಮುಖ್ಯಮಂತ್ರಿಯಾದ ನಂತರದ ನಡೆಗಳಿವೆಯಲ್ಲ, ಅವು ನಿಜಕ್ಕೂ ಬಹಳ ಘನತೆವೆತ್ತ ನಡೆಗಳು. ಡಿಕೆಶಿ ಪ್ರತಿಪಕ್ಷದವರನ್ನು, ಜೆಡಿಎಸ್ ಪಕ್ಷದವರನ್ನು, ಹಳೆಯ ಮುಖ್ಯಮಂತ್ರಿಗಳನ್ನು, ಸಂಸದರನ್ನು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಾನು ಪಕ್ಷಕ್ಕೆ ಸೀಮಿತನಲ್ಲ, ರಾಜ್ಯದ ಮುಖ್ಯಮಂತ್ರಿ ಎಂಬ ಸಂದೇಶ ನೀಡಿದ್ದು ನಿಜಕ್ಕೂ ಮೆಚ್ಚಲೇಬೇಕಾದ ಸಂಗತಿ. ಸಿಎಂ ಆದ ನಂತರ ಡಿಕೆಶಿ ರಾಜಕೀಯ ವಿಚಾರಗಳಿಗಿಂತ ಹೆಚ್ಚು ಸುದ್ದಿಯಾಗುತ್ತಿರುವುದು ಅಭಿವೃದ್ಧಿ ವಿಚಾರಗಳಿಗೆ.

ಟನಲ್ - ಓವರ್, ಬಿಡದಿ ಟೌನ್‌ಶಿಪ್ ಸೇರಿದಂತೆ ಹಲವಾರು ವಿರೋಧಗಳನ್ನು ಎದುರಿಸುತ್ತಿರ ಬಹುದು. ಹಣವಿಲ್ಲದ ಬೊಕ್ಕಸದಿಂದಾಗಿ ಹಲವು ಸವಾಲುಗಳು ಬಾಧಿಸುತ್ತಿರಬಹುದು. ಹಾಗಂತ ಎಲ್ಲಿಯೂ ಡಿಕೆಶಿ ಸಂಯಮ ಕಳೆದುಕೊಳ್ಳುತ್ತಿಲ್ಲ. ಪ್ರತಿ ವಿಷಯದಲ್ಲೂ ರಾಜಕೀಯ ಮತ್ತು ಸಿದ್ಧಾಂತ ಅಡ್ಡ ತರುವ ಕೆಲಸ ಮಾಡುತ್ತಿಲ್ಲ. ದೇವೇಗೌಡರ ಪತ್ನಿಯ ನಿಧನದ ಸಂದರ್ಭ ಇರಬಹುದು, ಪ್ರಧಾನಿ ಮೋದಿ ಮೊನ್ನೆ ಮೈಸೂರಿಗೆ ಬಂದ ದಿನ ಡಿಕೆಶಿ ಸಾರ್ವಜನಿಕ ಭಾಷಣ ಮಾಡಿದ ರೀತಿ ಇರಬಹುದು, ಒಬ್ಬ ಮುಖ್ಯಮಂತ್ರಿ ಯಿಂದ ನಿರೀಕ್ಷಿಸುವ ನಡೆಗಳಾಗಿದ್ದವು.

ಕಾನೂನು ಅದರ ಹಾದಿಯಲ್ಲಿ ನಡೆಯಲಿ, ರಾಜಕೀಯಗಳೇನೇ ಇರಲಿ, ಡಿ.ಕೆ ಶಿವಕುಮಾರ್ ಅವರ ಪೂರ್ವಾಶ್ರಮದ ವಿಚಾರಗಳು ಅದೇನಾದರೂ ಇರಲಿ, ಮುಖ್ಯಮಂತ್ರಿಯಾದ ದಿನದಿಂದ ಅವರ ನಡೆನುಡಿ, ರಾಜ್ಯದ ಅಭಿವೃದ್ಧಿ ಕಡೆಗಿನ ತುಡಿತ, ಮುಖ್ಯಮಂತ್ರಿಯಾಗಿ ಛಾಪು ಮೂಡಿಸಬೇಕೆಂಬ ಹಟ ಇವೆಲ್ಲವೂ ಗಮನಾರ್ಹವಾಗಿ ಕಾಣುತ್ತಿವೆ.

ಡಿ.ಕೆ ಶಿವಕುಮಾರ್ ಅವರು ಆರೆಸ್ಸೆಸ್ ಬಗ್ಗೆ ಮೃದುಧೋರಣೆ ತೋರುತ್ತಿರುವುದು, ಮೋದಿಯವರ ಬಗ್ಗೆ ಗೌರವದಿಂದ ಮಾತನಾಡುವುದು, ದೈವಭಕ್ತಿ ಮೆರೆಯುವುದು ಇವೆಲ್ಲವೂ ರಾಜಕೀಯ ತಂತ್ರಗಾರಿಕೆ ಅಂತಲೋ, ಇಡಿ/ಸಿಬಿಐ ಭಯದಿಂದ ಅಂತಲೋ, ಮುಂದೆಂದೋ ಬಿಜೆಪಿ ಸೇರುವ ಸೂಚನೆ ಅಂತಲೋ ಅಂದಾಜಿಸುವುದು ಟಿಪಿಕಲ್ ರಾಜಕೀಯ ವಿಶ್ಲೇಷಣೆ ಅನ್ನಬಹುದು.

ಡಿಕೆಶಿಯ ರಾಜಕೀಯ ಗುರುಗಳು ಎಂದೇ ಗುರುತಿಸಲ್ಪಟ್ಟಿದ್ದ ಮಾಜಿ ಸಿಎಂ ಎಸ್ಸೆಂ ಕೃಷ್ಣ ತಮ್ಮ ಅಂತಿಮ ವರ್ಷಗಳಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಡಿ.ಕೆ ಶಿವಕುಮಾರ್ ಕೂಡ ಮುಂದೆಂದೋ ಕಾಂಗ್ರೆಸ್ ತೊರೆದು ಬಿಜೆಪಿ ಸೇರಬಹುದಾ? ಸ್ವಂತ ಪಕ್ಷ ಮಾಡಿ ಕಾಂಗ್ರೆಸ್ಸಿನಲ್ಲಿರುವ ಮತ್ತು ಬಿಜೆಪಿ, ಜೆಡಿಎಸ್ಸಿನಲ್ಲಿ ರುವ ಸಮಾನ ಮನಸ್ಕರನ್ನು ಸೆಳೆದುಕೊಂಡು ಪ್ರಾದೇಶಿಕ ಪಕ್ಷದ ಸಿಎಂ ಆಗಿ ಹೊರಹೊಮ್ಮಬಹುದಾ? ಯಾವ ಸಾಧ್ಯತೆಯನ್ನೂ ತಳ್ಳಿ ಹಾಕಲಾಗದು. ಡಿ.ಕೆ ಶಿವಕುಮಾರ್ ಹಾಗೊಂದು ವೇಳೆ ಬಿಜೆಪಿ ಸೇರುವು ದಾದರೆ, ಬಿಜೆಪಿ ಸೇರಿಸಿಕೊಳ್ಳುತ್ತದೆಯಾ? ಇದುವರೆಗೂ ಆರೋಪಿಸಿಕೊಂಡು ಬಂದವರನ್ನು ಸೇರಿಸಿಕೊಳ್ಳಲು ನೈತಿಕತೆ ಅಡ್ಡ ಬರುವುದಿಲ್ಲವಾ? ನಾನು ರಾಜಕೀಯ ವರದಿಗಾರನೂ ಅಲ್ಲ, ವಿಶ್ಲೇಷಕನೂ ಅಲ್ಲ.

ಆದರೆ ಪ್ರತಿ ಮತದಾರ ಪ್ರಜೆಯೊಳಗೂ ಇರಬಹುದಾದ ರಾಜಕೀಯ ಪ್ರಜ್ಞೆ ಇವೆಲ್ಲ ಯೋಚನೆಗಳಿಗೆ ದಾರಿ ಮಾಡಿಕೊಟ್ಟಿತಷ್ಟೆ. ನನಗೆ ನೆನಪಿರು ವಂತೆ, ಮಂತ್ರಿಯಾಗಿ ಅವಧಿ ಪೂರೈಸಿದ ನಂತರ ಡಿ.ಕೆ ಶಿವಕುಮಾರ್ ಡಿಗ್ರಿ ಕಾಲೇಜು ಸೇರಿ ಎಕ್ಸಾಮ್ ಕಟ್ಟಿ ಪಾಸ್ ಮಾಡಿ ಪದವಿ ಪಡೆದಿದ್ದರು. ಅದನ್ನು ಸುದ್ದಿ ಪತ್ರಿಕೆಯಲ್ಲಿ ಓದಿದಾಗ ಈ ವ್ಯಕ್ತಿ ವಿಶೇಷವೆನಿಸಿತ್ತು. ಅಂದಿಗೆ, ಅದು ಅಪರೂಪದ ವಿಷಯವೇ. ಮನಸು ಮಾಡಿದ್ದರೆ ವಾಮಮಾರ್ಗದಲ್ಲಿ ಡಿಗ್ರಿ ಸರ್ಟಿಫಿಕೇಟ್ ಪಡೆಯೋದು ಅವರಿಗೇನೂ ಕಷ್ಟವಿರಲಿಲ್ಲ, ಅಂದಿನ ದಿನಗಳಲ್ಲಂತೂ ಗೊತ್ತಾಗುತ್ತಲೂ ಇರಲಿಲ್ಲವೇನೋ!

ಅದಕ್ಕಿಂತ ಹೆಚ್ಚಾಗಿ, ಮಂತ್ರಿಯೇ ಆದ ಮೇಲೆ ಈ ಡಿಗ್ರಿ ಆಗಲೀ ಓದಿನ ಅಗತ್ಯವಾಗಲೀ ಯಾಕೆ ಬೇಕು ಎಂಬುದು ಸಹಜ ಮನಸ್ಥಿತಿ. ಹೀಗಿರುವಾಗ ಡಿಗ್ರಿ, ಮಾಸ್ಟರ್ ಡಿಗ್ರಿ ಮಾಡಿದ್ದು ದೊಡ್ಡ ವಿಚಾರವೇ.

ರಾಜಕೀಯಕ್ಕಾಗಿ ಪಕ್ಷಗಳು ಬಡಿದಾಡಿಕೊಳ್ಳಲಿ, ಜನರು ನಿರೀಕ್ಷೆ ಮಾಡುತ್ತಿರುವ ಆಡಳಿತ ನೀಡಿದರೆ, ಸನ್ನಡತೆ ತೋರಿದರೆ ಜನಸಾಮಾನ್ಯ ಅದನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ. ಈ ದಿಸೆಯಲ್ಲಿ ಡಿ.ಕೆ ಶಿವಕುಮಾರ್ ದಿನೇದಿನೆ ಜನಮನ ಗೆಲ್ಲುತ್ತಿದ್ದಾರೆ.

ಮಾತಿನ ವೈಖರಿಯಲ್ಲಿ ಬದಲಾವಣೆಗಳು ಕಾಣುತ್ತಿವೆ. ಒಂದು ನೀಟ್ ಶೇವ್ ಮಾಡಿ ಡ್ರೆಸ್ಸಿಂಗ್ ಕಡೆ ಒಲವು ತೋರಿದರೆ, ಆಕರ್ಷಕ ಲುಕ್ಕಿನಿಂದಲೂ ಮನಗೆಲ್ಲಬಹುದು. ಸೋಷಿಯಲ್ ಮೀಡಿಯಾದ ಪಿಆರ್ ಪೋಸ್ಟ್‌ʼಗಳನ್ನು ನೋಡಿ ಪಕ್ಕದ ರಾಜ್ಯದ ವಿಜಯ್‌ರನ್ನು ಸೂಪರ್ ಎಂದು ಹೊಗಳುವ ಕರ್ನಾಟಕದ ಮಂದಿ, ಡಿಕೆಶಿ ಅವರೊಂದಿಗೆ ರಾಜಕೀಯ ಭೇದ ಮರೆತು ವಿಶ್ವಾಸ ತೋರಿ, ಕೆಲಸ ಮಾಡೋಕೆ ಅವಕಾಶ ನೀಡಲು ಮನಸು ಮಾಡಬಾರದೇಕೆ? ನಿಜವಾದ ವಿಷಯಗಳನ್ನು ನಿರ್ಲಕ್ಷಿಸಿ ಇಲ್ಲಸಲ್ಲದ ವಿಷಯಗಳಿಗೆ ರಾಜಕೀಯ ಮಾಡಿ, ಪ್ರತಿಭಟನೆ ಮಾಡಿ ಬಿಜೆಪಿ ಇನ್ನಷ್ಟು ಮತ್ತಷ್ಟು ಜನರ ನಂಬಿಕೆ ಕಳೆದುಕೊಳ್ಳುತ್ತಿದೆ.

ಅಸಮರ್ಥ ವಿರೋಧಪಕ್ಷದಿಂದ ಕೇಂದ್ರದಲ್ಲಿ ಬಿಜೆಪಿ ಹೇಗೆ ಗಟ್ಟಿಯಾಯಿತೋ ಹಾಗೆಯೇ ರಾಜ್ಯದಲ್ಲಿ ಅಸಮರ್ಥ ವಿರೋಧ ಪಕ್ಷದಿಂದ ಕಾಂಗ್ರೆಸ್ ಗಟ್ಟಿಯಾಗಿದೆ. ಮೋದಿಯವರ ನಡೆನುಡಿ, ತಂತ್ರಗಾರಿಕೆ, ಪಿಆರ್ ಟ್ರಿಕ್ಸ್, ಎಲ್ಲವನ್ನೂ ಅನುಕರಿಸುತ್ತಿರುವ (ತಪ್ಪೇನಲ್ಲ) ಡಿಕೆಶಿ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಎಲ್ಲ ಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಗುಣಕ್ಕೆ ಮತ್ಸರವಿಲ್ಲ ಎಂಬ ಮಾತಿನಂತೆ ನಾನಂತೂ ಡಿ.ಕೆ ಶಿವಕುಮಾರ್‌ರನ್ನು ಇಷ್ಟಪಡಲಾರಂಭಿಸಿದ್ದೇನೆ.