Raghava Sharma Nidle Column: ನ್ಯಾಯಾಂಗವನ್ನೇ ಹೊಣೆಯಾಗಿಸುವುದು ಪಲಾಯನವಾದವಲ್ಲವೇ ?
ಸುಪ್ರೀಂಕೋರ್ಟ್ ನಲ್ಲಿ ಒಂದು ನ್ಯಾಯಪೀಠದಲ್ಲಿ ಇಬ್ಬರು ನ್ಯಾಯಮೂರ್ತಿಗಳು (ಸಿಜೆಐ ಪೀಠದಲ್ಲಿ ಮೂವರು) ಕೂರುವುದರಿಂದ ನಿತ್ಯಕ್ಕೆ 17 ನ್ಯಾಯಪೀಠಗಳಷ್ಟೇ (ಆರೇಳು ವರ್ಷಗಳ ಹಿಂದೆ 10-12 ಪೀಠಗಳಷ್ಟೇ ಇದ್ದವು) ಕೆಲಸ ಮಾಡುತ್ತವೆ. ದೇಶದ ವಿವಿಧ ರಾಜ್ಯಗಳ ಜನಸಂಖ್ಯೆಯ ಅನುಪಾತದಲ್ಲಿ ಆಯಾ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್‌ಗೆ ನೇಮಕ ಮಾಡಿಕೊಳ್ಳಲು ಕೇಂದ್ರ ಸರಕಾರ ಮತ್ತು ಸುಪ್ರೀಂಕೋರ್ಟ್ ಕೊಲಿಜಿಯಂಗೆ ಇದುವರೆಗೆ ಸಾಧ್ಯವಾಗಿಲ್ಲ.

-

ಜನಪಥ
ರಾಘವ ಶರ್ಮ ನಿಡ್ಲೆ
ಸೆಪ್ಟೆಂಬರ್ 19ರಂದು ನವದೆಹಲಿಯಲ್ಲಿ ನಡೆದ ‘ನ್ಯಾಯ ನಿರ್ಮಾಣ-2025’ ಸಮ್ಮೇಳನದಲ್ಲಿ ಪ್ರಧಾನಮಂತ್ರಿ ಆರ್ಥಿಕ ಸಲಹಾ ಸಮಿತಿಯ ಸದಸ್ಯ ಸಂಜೀವ್ ಸನ್ಯಾಲ್ ಅವರು ಮಾತನಾಡುತ್ತಾ, "2047ರ ಉದ್ದೇಶಿತ ವಿಕಸಿತ ಭಾರತಕ್ಕೆ ನಮ್ಮ ನ್ಯಾಯಾಂಗ ವ್ಯವಸ್ಥೆಯೇ ಬಹುದೊಡ್ಡ ಅಡಚಣೆ ಯಾಗಿ ಬಾಧಿಸುತ್ತಿದೆ" ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸಮ್ಮುಖದ ಗಂಭೀರ ಆರೋಪ ಮಾಡಿದ್ದರು. ಭಾರತೀಯ ನ್ಯಾಯಾಂಗದಲ್ಲಿ ಸಮಸ್ಯೆಗಳು ಬೆಟ್ಟದಷ್ಟಿವೆ ಎನ್ನುವುದನ್ನು ಅನೇಕ ನ್ಯಾಯಮೂರ್ತಿಗಳು ಒಪ್ಪಿಕೊಳ್ಳುತ್ತಾರಾದರೂ, ನ್ಯಾಯಾಂಗವೊಂದನ್ನೇ ಹೊಣೆಗಾರ ನನ್ನಾಗಿ ಮಾಡುವ ಸನ್ಯಾಲ್ ಅಭಿಪ್ರಾಯಗಳ ಬಗ್ಗೆ ಕಾನೂನು ವಲಯದಿಂದ ಟೀಕೆಗಳು ವ್ಯಕ್ತ ವಾದವು. ನ್ಯಾಯಾಂಗದ ವಿಳಂಬ ಕಾರ್ಯವೈಖರಿಯಿಂದ ಬೇಸತ್ತ ಜನರು ಸನ್ಯಾಲ್ ಮಾತಿಗೆ ಮನದೊಳಗೇ ಚಪ್ಪಾಳೆ ತಟ್ಟಿದ್ದರು.
ಈ ನಡುವೆ, ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ (ಎಸ್‌ಸಿಬಿಎ) ಮಾಜಿ ಕಾರ್ಯದರ್ಶಿ ರೋಹಿತ್ ಪಾಂಡೆ ಮತ್ತು ಸುಪ್ರೀಂಕೋರ್ಟ್ ವಕೀಲ ಉಜ್ವಲ್ ಗೌರ್ ಕೇಂದ್ರ ಸರಕಾರದ ಅಟಾರ್ನಿ ಜನರಲ್ ವೆಂಕಟರಮಣಿ ಅವರಿಗೆ ಪತ್ರ ಬರೆದು, ಸನ್ಯಾಲ್ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಬೇಕು ಎಂದು ಒತ್ತಾಯಿಸಿದರು. ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್‌ನ ಹಾಲಿ ಅಧ್ಯಕ್ಷ ವಿಕಾಸ್ ಸಿಂಗ್ ಕೂಡ ಸನ್ಯಾಲ್ ಮಾತುಗಳಿಗೆ ಆಕ್ಷೇಪಿಸಿ, ವಿಕಸಿತ ಭಾರತಕ್ಕೆ ನ್ಯಾಯಾಂಗ ಅಲ್ಲ, ಕೇಂದ್ರ ಸರಕಾರ ಹೇಗೆ ಅಡ್ಡಿ ಉಂಟು ಮಾಡುತ್ತಿದೆ
ಎಂಬುದರ ಬಗ್ಗೆ ತಮ್ಮದೇ ರೀತಿಯಲ್ಲಿ ವಿವರಿಸಿದರು. ನ್ಯಾಯಾಂಗ ವ್ಯವಸ್ಥೆ ಆಮೂಲಾಗ್ರ ಬದಲಾವಣೆಗೆ ತೆರೆದುಕೊಳ್ಳಬೇಕು ಎಂಬ ವಾದದ ಆಯಾಮದಿಂದ ನೋಡಿದಾಗ, ಸಂಜೀವ್ ಸನ್ಯಾಲ್ ಹೇಳಿದ್ದು ಸರಿಯಾಗಿದೆ ಎನಿಸುವುದು ಸಹಜವೇ. ಆದರೆ, ನ್ಯಾಯಾಂಗದ ಸುಧಾರಣೆಯಲ್ಲಿ ಮತ್ತು ನ್ಯಾಯಾಂಗದ ಮೂಲಕ ಆಗಬೇಕಿರುವ ಅಭಿವೃದ್ಧಿಯಲ್ಲಿ ಕೇಂದ್ರ ಸರಕಾರದ್ದೂ ದೊಡ್ಡ ಪಾಲಿದೆ ಎನ್ನುವುದನ್ನು ಸನ್ಯಾಲ್ ಒಪ್ಪಿಕೊಳ್ಳಬೇಕು.
ಸುಪ್ರೀಂಕೋರ್ಟ್, ಹೈಕೋರ್ಟ್ ಮತ್ತು ಕೆಳ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಮತ್ತು ಸಿಬ್ಬಂದಿ ಸಂಖ್ಯೆ ದುಪ್ಪಟ್ಟುಗೊಳಿಸದೆ ಕೇಸುಗಳ ವಿಲೇವಾರಿ ಅಸಾಧ್ಯ. ನೇಮಕಾತಿ ಪ್ರಕ್ರಿಯೆ ತ್ವರಿತಗೊಳಿಸದೆ, ಪರಿಹಾರ ಬೇಕು ಎಂದು ವಾದಿಸಿದರೆ ಇಂಥ ಮಾತುಗಳು ಪರ-ವಿರೋಧ ಚರ್ಚೆಗಳ ಅಂತ್ಯಗೊಳ್ಳುತ್ತವೆ.
ಇದನ್ನೂ ಓದಿ: Raghav Sharma Nidle Column: ಮೋದಿ- ನಿತೀಶರ ಆ 2 ಚಿತ್ರಗಳು
ಸುಪ್ರೀಂಕೋರ್ಟಿನ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಭಾರತದಲ್ಲಿ 28 ರಾಜ್ಯಗಳಿದ್ದು, 8 ಕೇಂದ್ರಾಡಳಿತ ಪ್ರದೇಶಗಳಿವೆ. ಸುಪ್ರೀಂಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಸೇರಿ ನ್ಯಾಯ ಮೂರ್ತಿಗಳ ಸಂಖ್ಯೆ ಇರುವುದು ಬರೀ 34. ಅಂದರೆ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಷ್ಟೂ ನ್ಯಾಯಮೂರ್ತಿಗಳು ಇಲ್ಲಿಲ್ಲ.
ಸುಪ್ರೀಂಕೋರ್ಟ್ ನಲ್ಲಿ ಒಂದು ನ್ಯಾಯಪೀಠದಲ್ಲಿ ಇಬ್ಬರು ನ್ಯಾಯಮೂರ್ತಿಗಳು (ಸಿಜೆಐ ಪೀಠದಲ್ಲಿ ಮೂವರು) ಕೂರುವುದರಿಂದ ನಿತ್ಯಕ್ಕೆ 17 ನ್ಯಾಯಪೀಠಗಳಷ್ಟೇ (ಆರೇಳು ವರ್ಷಗಳ ಹಿಂದೆ 10-12 ಪೀಠಗಳಷ್ಟೇ ಇದ್ದವು) ಕೆಲಸ ಮಾಡುತ್ತವೆ. ದೇಶದ ವಿವಿಧ ರಾಜ್ಯಗಳ ಜನಸಂಖ್ಯೆಯ ಅನುಪಾತದಲ್ಲಿ ಆಯಾ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್‌ಗೆ ನೇಮಕ ಮಾಡಿಕೊಳ್ಳಲು ಕೇಂದ್ರ ಸರಕಾರ ಮತ್ತು ಸುಪ್ರೀಂಕೋರ್ಟ್ ಕೊಲಿಜಿಯಂಗೆ ಇದು ವರೆಗೆ ಸಾಧ್ಯವಾಗಿಲ್ಲ.
ಜತೆಗೆ, ಸುಪ್ರೀಂಕೋರ್ಟ್, ಹೈಕೋರ್ಟ್ ಅಥವಾ ಕೆಳ ನ್ಯಾಯಾಲಯಗಳಲ್ಲಿ ನ್ಯಾಯಾಧೀಶ ರೊಬ್ಬರು ನಿವೃತ್ತಿಯಾದ ಮಾರನೇ ದಿನವೇ ಹೊಸ ನ್ಯಾಯಾಧೀಶರು ಕರ್ತವ್ಯಕ್ಕೆ ಹಾಜರಿರುವ ವ್ಯವಸ್ಥೆ ಈಗಲೂ ಇಲ್ಲ. ನಿವೃತ್ತಿ ಅಥವಾ ವರ್ಗಾವಣೆಯಿಂದ ತೆರವಾಗುವ ಹುದ್ದೆಗಳ ಭರ್ತಿಗೆ ತಿಂಗಳು ಗಟ್ಟಲೆ ಕಾಯಬೇಕಾಗುತ್ತದೆ.
ಆಗ, ಕೇಸುಗಳ ಫೈಲುಗಳಿಗೂ ಧೂಳು ಹಿಡಿಯುತ್ತವೆ. ಅಲ್ಲಿಗೆ ಸಂತ್ರಸ್ತರು ನ್ಯಾಯಾಂಗಕ್ಕೆ ಶಾಪ ಹಾಕುತ್ತಾ, ನ್ಯಾಯಕ್ಕಾಗಿ ಪರಿತಪಿಸಿಕೊಂಡು ಕೂರುತ್ತಾರೆ. ಅದೃಷ್ಟವೋ ಏನೋ ಎಂಬಂತೆ ಸುಪ್ರೀಂಕೋರ್ಟ್‌ನ 34 ನ್ಯಾಯಮೂರ್ತಿ ಹುದ್ದೆಗಳೀಗ ಭರ್ತಿಯಾಗಿವೆ. ಆದರೆ, ಈ ಸಂಖ್ಯೆ ಏನೇನೂ ಸಾಲದು.
ಮೇಲಾಗಿ, ನ್ಯಾಯಮೂರ್ತಿಗಳ ನೇಮಕಾತಿ ವಿಷಯದಲ್ಲಿ ಕೇಂದ್ರ ಸರಕಾರ ಮತ್ತು ಕೊಲಿಜಿಯಂ ಮಧ್ಯೆ ಪರಸ್ಪರ ಒಮ್ಮತ ಮೂಡದಿರುವುದರಿಂದಲೂ ನ್ಯಾಯಮೂರ್ತಿ ನೇಮಕಾತಿ ಪ್ರಕ್ರಿಯೆ ವಿಳಂಬ ವಾಗುತ್ತಲೇ ಇದೆ.
ನ್ಯಾಯಾಂಗದ ಆಮೂಲಾಗ್ರ ಬದಲಾವಣೆಯಲ್ಲಿ ದೇಶದ ಮುಖ್ಯ ನ್ಯಾಯಮೂರ್ತಿಗಳ (ಸಿಜೆಐ) ಪಾತ್ರ ಮಹತ್ವದ್ದಾಗಿರುತ್ತದೆ. ಕೇವಲ ಹಿರಿತನದ ಆಧಾರದಲ್ಲಿ ಸಿಜೆಐ ನೇಮಕ ವಾಗುವುದರಿಂದ 10 ವರ್ಷಗಳ ನಂತರ ಸುಪ್ರೀಂಕೋರ್ಟ್ ಸಿಜೆಐ ಯಾರಾಗಬಲ್ಲರು ಎನ್ನುವುದು ಗೊತ್ತಾಗಿರುತ್ತದೆ.
ಕೆಲವರು ಬರೀ 2 ತಿಂಗಳು, 4 ತಿಂಗಳಿಗೆ ಸಿಜೆಐ ಆಗಿ ನಿವೃತ್ತಿಯಾಗುತ್ತಾರೆ. ಹಾಲಿ ಸಿಜೆಐ ಬಿ.ಆರ್. ಗವಾಯಿ ಅವರ ಅವಧಿ 6 ತಿಂಗಳು ಮಾತ್ರ, ನವೆಂಬರ್‌ನಲ್ಲಿ ನಿವೃತ್ತಿಯಾಗುತ್ತಿದ್ದಾರೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದಲ್ಲಿ ಸುಧಾರಣೆ ತರಬೇಕೆಂಬ ಉದ್ದೇಶ ಹೊಂದಿರುವ ವ್ಯಕ್ತಿಗೆ ಕೇವಲ 6 ತಿಂಗಳ ಅಧಿಕಾರವಧಿ ಇದ್ದರೆ ಅವರಿಂದ ಬದಲಾವಣೆ ನಿರೀಕ್ಷಿಸಲು ಸಾಧ್ಯವೇ? ನಿಯಂತ್ರಣ ಸಾಧಿಸಲೇ ಸಮಯದ ಅಭಾವವಿದ್ದಾಗ ಇಡೀ ವ್ಯವಸ್ಥೆಯ ಮಾರ್ಪಾಡು ಹೇಗೆ ಸಾಧ್ಯ? ಹೀಗಾಗಿ, ಮುಖ್ಯ ನ್ಯಾಯಮೂರ್ತಿ ಸ್ಥಾನದಲ್ಲಿ ಕೂರುವ ವ್ಯಕ್ತಿಗೆ ಕನಿಷ್ಠ 2 ವರ್ಷದ ಸೇವಾವಧಿ ಯಾದರೂ ಇರಬೇಕು. ಇದಕ್ಕಾಗಿ ತಿದ್ದುಪಡಿ ಕಾನೂನನ್ನು ಕೇಂದ್ರ ಸರಕಾರ ಜಾರಿ ಮಾಡಲೇಬೇಕು.
3-4 ತಿಂಗಳಿಗೆ ಸಿಜೆಐ ಬದಲಾಗುತ್ತಿದ್ದರೆ, ಅವರ ಉಸ್ತುವಾರಿಯಲ್ಲಿ ನ್ಯಾಯಾಂಗ ಮೂಲ ಸೌಕರ್ಯ ಸುಧಾರಣೆ ಎನ್ನುವುದು ದೂರದ ಮಾತೇ ಸರಿ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಬೇಸಗೆ ಮತ್ತು ನವರಾತ್ರಿ ರಜೆಗಳ ಬಗ್ಗೆಯೂ ಸನ್ಯಾಲ್ ಆಕ್ಷೇಪ ತೆಗೆದಿದ್ದಾರೆ. ಮೇ ತಿಂಗಳ ಮಧ್ಯಾವಧಿ ಯಿಂದ ಜುಲೈ ಆರಂಭಿಕ ವಾರದ ತನಕ ಸುಪ್ರೀಂಕೋರ್ಟ್‌ಗೆ ಬೇಸಗೆ ರಜೆ. ಈ ರಜೆಗಳಲ್ಲಿ ನ್ಯಾಯಾಂಗ ಕಲಾಪ ನಡೆಸಲು ಹಿಂದೆ 1 ರಜಾಕಾಲೀನ ಪೀಠ ಇರುತ್ತಿತ್ತು.
ಆದರೆ, ಈಗ ಈ ಸಂಖ್ಯೆ 2-3ಕ್ಕೆ ಏರಿದೆ. ರಜಾ ಸಂದರ್ಭದಲ್ಲೂ ಸಾಕಷ್ಟು ಕೇಸ್ ಫೈಲಿಂಗ್ ಇರುವು ದರಿಂದ ವಿಚಾರಣೆಗೆಂದು ಸುಪ್ರೀಂಕೋರ್ಟ್ ಈ ಬದಲಾವಣೆಗಳನ್ನು ಮಾಡಿಕೊಂಡಿದೆ. ಹೀಗಿದ್ದರೂ, ಪೀಠಗಳ ಸಂಖ್ಯೆಗಳನ್ನು ಜಾಸ್ತಿ ಮಾಡಿಕೊಂಡು, ರೊಟೇಷನ್ ಪದ್ಧತಿಯಲ್ಲಿ ನ್ಯಾಯಮೂರ್ತಿಗಳು ಲಭ್ಯರಿರಬೇಕು ಎಂದು ವಕೀಲರೂ ನಿರೀಕ್ಷಿಸುತ್ತಿದ್ದಾರೆ.
ಹಾಗಿದ್ದರೂ, ಎಲ್ಲಾ ನ್ಯಾಯಮೂರ್ತಿಗಳೂ ರಜಾದಿನಗಳಲ್ಲಿ ಪ್ರವಾಸದ ಮೋಜು ಅನುಭವಿಸು ತ್ತಾರೆ ಎನ್ನಲಾಗದು. ಕೆಲ ನ್ಯಾಯಾಧೀಶರು ಪ್ರಕರಣಗಳ ತೀರ್ಪುಗಳನ್ನು ಬರೆಯಲು ರಜೆಗಳನ್ನು ಬಳಸುತ್ತಾರೆ. ಸಾಂವಿಧಾನಿಕ ವಿಚಾರಗಳ ಬಗೆಗಿನ ತೀರ್ಪುಗಳನ್ನು ಬರೆಯಲು ಕಾನೂನಿನ ಆಳವಾದ ಅಧ್ಯಯನ ಅಗತ್ಯ. ಅಲ್ಲದೆ, ವಿಚಾರಣೆ ವೇಳೆ ನ್ಯಾಯಮೂರ್ತಿ ಪ್ರಕರಣ ಆಲಿಸು ತ್ತಾರೆಯೇ ವಿನಾ ಅಲ್ಲಿ ತೀರ್ಪುಗಳನ್ನು ಬರೆಯುವುದಿಲ್ಲ.
ಹೀಗಾಗಿ ತೀರ್ಪು ಬರೆಯುವ ಕಾರ್ಯವನ್ನು ರಜಾದಿನ ಅಥವಾ ನಿತ್ಯದ ಕೆಲಸದ ಅವಧಿ ನಂತರವೇ ಮಾಡಬೇಕಾಗುತ್ತದೆ. ಬೇಸಿಗೆಯಲ್ಲಿ ಹೈಕೋರ್ಟ್‌ಳಿಗೆ ಹೆಚ್ಚೆಂದರೆ 1 ತಿಂಗಳು ರಜೆ ಇರುತ್ತದೆ ಮತ್ತು ಅಲ್ಲಿಯೂ ರಜಾಕಾಲೀನ ಪೀಠಗಳು ಸಕ್ರಿಯವಾಗಿವೆ. ರಜಾಕಾಲೀನ ಪೀಠಗಳು ಜಾಸ್ತಿಯಾಗ ಬೇಕೆಂದರೆ ನ್ಯಾಯಾಧೀಶರ ಸಂಖ್ಯೆ ಕೂಡ ಅಷ್ಟೇ ಪ್ರಮಾಣದಲ್ಲಿ ಹೆಚ್ಚಬೇಕು ಎನ್ನುವುದೂ ಸನ್ಯಾಲ್ ಅವರಿಗೆ ಗೊತ್ತಿಲ್ಲದೇನಿಲ್ಲ.
ಕ್ರಿಮಿನಲ್ ಕೇಸುಗಳಲ್ಲಿ ನ್ಯಾಯಾಧೀಶರು ನ್ಯಾಯಾಲಯದ ಅವಧಿ ನಂತರವೂ ಲಭ್ಯವಿದ್ದು, ಮನೆಗಳ ವಿಚಾರಣೆ ಮಾಡಿ ಆದೇಶ ನೀಡುವುದನ್ನು ನೋಡುತ್ತಿದ್ದೇವೆ. ಡಿಜಿಟಲ್ ನ್ಯಾಯಾಲಯದ ವ್ಯವಸ್ಥೆಗೂ ನ್ಯಾಯಾಂಗ ತೆರೆದುಕೊಂಡಿದೆ. ನಮ್ಮ ನ್ಯಾಯಾಂಗ ಆಮೆಗತಿಯಿಂದ ಹೊರ ಬರುತ್ತಿದೆ. ಆದರೆ, ಸಮಸ್ಯೆ ಇರುವುದು ನ್ಯಾಯಾಧೀಶರ ನ್ಯಾಯ ನಿರ್ವಹಣಾ ಸಾಮರ್ಥ್ಯ ಮತ್ತು ಕೇಸ್ ಮ್ಯಾನೇಜ್ಮೆಂಟ್ ವ್ಯವಸ್ಥೆಯಲ್ಲಿ. ಅದನ್ನು ಸರಿಪಡಿಸುವ ದಾರಿಯನ್ನು ಕೇಂದ್ರ-ನ್ಯಾಯಾಂಗ ಕಂಡುಕೊಳ್ಳಬೇಕು.
ಅಭಿವೃದ್ಧಿಗೆ ನ್ಯಾಯಾಂಗವೇ ಅಡ್ಡಿ ಎಂದು ಕಡ್ಡಿ ಮುರಿದಂತೆ ಹೇಳುವಾಗ ಸಂಜೀವ್ ಸನ್ಯಾಲ್ ಈ ಅಂಶಗಳತ್ತಲೂ ಗಮನಹರಿಸಬೇಕಾಗುತ್ತದೆ ಅಲ್ಲವೇ? ಇರಲಿ. ಅಭಿವೃದ್ಧಿ ಕುಂಠಿತಕ್ಕೆ ನ್ಯಾಯಾಂಗದ ಜತೆ ಕೇಂದ್ರ ಸರಕಾರವೂ ಕಾರಣ ಎನ್ನುವುದಕ್ಕೆ ಕರ್ನಾಟಕದ ನಿದರ್ಶನವೇ ನಮ್ಮ ಕಣ್ಣಮುಂದಿದೆ.
ರಾಜ್ಯದ ಮೂರು ಜಲವ್ಯಾಜ್ಯಗಳ ಶೋಚನೀಯ ಸ್ಥಿತಿಯೇ ಇದಕ್ಕೆ ಜ್ವಲಂತಸಾಕ್ಷಿ. ಕಾವೇರಿ ನದಿಯ ಮೇಕೆದಾಟು ಆಣೆಕಟ್ಟು ಯೋಜನೆಗೆ ಅನುಮತಿ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಎಷ್ಟು ವರ್ಷಗಳಾದವು? ಸಂಸತ್ತು, ಸುಪ್ರೀಂಕೋರ್ಟ್, ಕೇಂದ್ರ ಜಲಶಕ್ತಿ ಸಚಿವಾಲಯಗಳಲ್ಲಿ ಈ ಬಗ್ಗೆ ಚರ್ಚೆಗಳಾಗಿದ್ದು ಬಿಟ್ಟರೆ, ನೈಜವಾಗಿ ಸಾಧಿಸಿದ್ದೇನು? ಯೋಜನೆಗೆ ಅನುಮತಿ ನೀಡಲು ಕೇಂದ್ರ ಸರಕಾರ ವಿಳಂಬ ಧೋರಣೆ ಅನುಸರಿಸುತ್ತಿರುವುದೇಕೆ? ದೇಶಕ್ಕೆ ದೊಡ್ಡ ಪ್ರಮಾಣದಲ್ಲಿ ಆದಾಯ ತಂದು ಕೊಡುತ್ತಿರುವ ಬೆಂಗಳೂರಿನ ಜಲಸಮಸ್ಯೆಗೆ ಮೇಕೆದಾಟು ಯೋಜನೆಯಿಂದ ಪರಿಹಾರ ಸಿಗಲಿದೆ ಎನ್ನುವುದು ಗೊತ್ತಿದ್ದರೂ, ಕೇಂದ್ರ ಸರಕಾರ ತಮಿಳುನಾಡಿಗೆ ಹೆದರಿ ಕೂತಿರುವುದೇಕೆ? ಯೋಜನೆ ಸಾಧ್ಯವೇ ಇಲ್ಲವೇ ಎಂಬ ಸ್ಪಷ್ಟತೆ ಸಿಗದಿರುವುದಕ್ಕೆ ಕಾರಣ ಕರ್ತರು ಯಾರು ಎನ್ನುವು ದನ್ನು ಸುಪ್ರೀಂ ಕೋರ್ಟ್-ಕೇಂದ್ರ ಸರಕಾರ ಎರಡೂ ಅವಲೋಕಿಸಬೇಕು. ಬಹುಶಃ ಕೇಂದ್ರ ತ್ವರಿತ ವಾಗಿ ತನ್ನ ನಿಲುವುಗಳನ್ನು ನೀಡಿದರೆ ತೀರ್ಪು ನೀಡುವುದು ಸುಪ್ರೀಂಕೋರ್ಟ್‌ಗೂ ಅನಿವಾರ್ಯ ವಾಗುತ್ತದೆ.
2018ರಲ್ಲಿ ಮಹದಾಯಿ ನ್ಯಾಯಾಧೀಕರಣದಿಂದ ಮಹದಾಯಿ ತೀರ್ಪು ಪ್ರಕಟಗೊಂಡಿತು. ಮಹದಾಯಿಯಿಂದ ಮಲಪ್ರಭಾಕ್ಕೆ ನೀರು ಪೂರೈಸಲು ಕಳಸಾ-ಬಂಡೂರಿ ನಾಲೆ ನಿರ್ಮಾಣ ಯೋಜನೆಗೆ ನ್ಯಾಯಾಧೀಕರಣ ಅನುಮತಿ ನೀಡಿ 7 ವರ್ಷ ಕಳೆದಿವೆ. ಈ ಭಾಗದ ಸಮಗ್ರ ಅಭಿವೃದ್ಧಿಗೆ ನೀರಾವರಿ ಯೋಜನೆ ಅತ್ಯವಶ್ಯಕ. ಪರಿಸರ ಮತ್ತು ಅರಣ್ಯ ಅನುಮತಿ ನೀಡಿ ಎಂದು ಕರ್ನಾಟಕ ಸರಕಾರ ಹತ್ತಾರು ಮನವಿಗಳನ್ನು ನೀಡಿದ ಮೇಲೂ ಕೇಂದ್ರ ಸರಕಾರವು ಗೋವಾ ಸರಕಾರದ ಒತ್ತಡಕ್ಕೆ ಮಣಿದು ಕೂತಿರುವುದೇಕೆ? ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿ 2010ರಲ್ಲಿ ನ್ಯಾಯಾಧೀಕರಣದ ಐತೀರ್ಪು ಮತ್ತು 2013ರಲ್ಲಿ ಸ್ಪಷ್ಟೀಕರಣ ಕೋರಿ ಸಲ್ಲಿಸಲಾದ ಅರ್ಜಿಗಳ ಮೇಲೆ ತೀರ್ಪು ನೀಡಲಾಯಿತು. ವಿಪರ್ಯಾಸವೆಂದರೆ, ಈ ತೀರ್ಪಿನ ಅಧಿಸೂಚನೆ ಪ್ರಕಟಿಸಲು ಕೇಂದ್ರ ಸರಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ!
ತೆಲಂಗಾಣ, ಆಂಧ್ರಪ್ರದೇಶ ಪ್ರತ್ಯೇಕಗೊಂಡರೂ, ಆ ಎರಡು ರಾಜ್ಯಗಳ ನೀರು ಹಂಚಿಕೆ ಸಮಸ್ಯೆ ಯನ್ನು ಪರಸ್ಪರ ಸರಿಪಡಿಸಿಕೊಳ್ಳಬೇಕೆ ವಿನಾ ಇದರಲ್ಲಿ ಕರ್ನಾಟಕ, ಮಹಾರಾಷ್ಟ್ರದ ಪಾಲು ಇರುವುದಿಲ್ಲ. ಹೀಗಿದ್ದಾಗ, ಅಧಿಸೂಚನೆ ಪ್ರಕಟಿಸಲು ಮೀನ-ಮೇಷ ಏಕೆ? ಹಾಗಾದರೆ ಇಲ್ಲಿ ಅಭಿವೃದ್ಧಿಗೆ ಅಡ್ಡಿಯಾಗಿರುವುದು ಯಾರಿಂದ? ಇಂಥಾ ಸೂಕ್ಷ್ಮ ವಿಷಯಗಳಲ್ಲಿ ಕೇಂದ್ರ ಸರಕಾರದ ವಿಳಂಬ ನೀತಿಗೆ ಪರಿಹಾರ ಎಲ್ಲಿಂದ ಪಡೆದುಕೊಳ್ಳುವುದು? ಬೆಟ್ಟದಷ್ಟು ವಿಸ್ತಾರವಾಗಿರುವ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಒಂದೊಂದು ಕೋರ್ಟುಗಳು ಒಂದೊಂದು ರೀತಿ ಕೆಲಸ ಮಾಡುತ್ತಿವೆ.
ದಕ್ಷತೆ, ಕ್ಷಮತೆ, ಕಾರ್ಯಕುಶಲತೆ, ಪ್ರಾಮಾಣಿಕತೆ, ಪಾರದರ್ಶಕತೆಯ ಕೊರತೆ ಹೆಚ್ಚಿರುವುದೂ ಗಾಯದ ಮೇಲೆ ಬರೆ ಎಳೆಯುತ್ತಿದೆ. ಕೇಸುಗಳ ವಿಲೇವಾರಿಗೆ ಮೂಲಸೌಕರ್ಯದ ವಿಸ್ತರಣೆ ಹಾಗೂ ಸಮರ್ಥ ನ್ಯಾಯಾಧೀಶರ ಸಂಖ್ಯೆ ಹೆಚ್ಚಳವೂ ಅತ್ಯಂತ ಅನಿವಾರ್ಯ. ನ್ಯಾಯಾಂಗ-ಕೇಂದ್ರ ಸರಕಾರ ಎರಡೂ ವ್ಯವಸ್ಥೆಗಳು ಪರಸ್ಪರ ಕೈಜೋಡಿಸಿದ ರಷ್ಟೇ ಪರಿಹಾರ ಸಿಕ್ಕೀತು. ಹಾಗಾಗಿ, ಅಭಿವೃದ್ಧಿಗೆ ನ್ಯಾಯಾಂಗ ವೊಂದರಿಂದಲೇ ಅಡ್ಡಿ ಎನ್ನುವುದು ಪಲಾಯನ ವಾದವಾದೀತು.
(ಲೇಖಕರು ಹಿರಿಯ ಪತ್ರಕರ್ತರು)