Vinayak V Bhat Column: ಕಂಡವರೆಲ್ಲ ಮಾತಾಡುವಾಗ ಖಾವಂದರದೇಕೆ ಮೌನ ?
ಅಪರಾಧಿಯು ಧರ್ಮಸ್ಥಳ ದೇವಾಲಯದ ಪ್ರಮುಖರೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಆಕೆಯ ಕುಟುಂಬ ಆರೋಪಿಸಿತ್ತಾದರೂ, ಸಿಬಿಐ ವಿಶೇಷ ನ್ಯಾಯಾಲಯವು ಪ್ರತಿವಾದಿಯ ವಿರುದ್ಧ ಯಾವುದೇ ಪುರಾವೆಗಳಿಲ್ಲದ ಕಾರಣ ಪ್ರಕರಣವನ್ನು ಖುಲಾಸೆಗೊಳಿಸಿತ್ತು. ಮುಂದೆ, ನೊಂದವರ ಕುಟುಂಬವು ಮತ್ತೊಂದು ಸಿಬಿಐ ತನಿಖೆಯನ್ನು ಕೇಳಿತ್ತು, ಆದರೆ ಕರ್ನಾಟಕ ಹೈಕೋರ್ಟ್ ಅವರ ಮನವಿಯನ್ನು ತಿರಸ್ಕರಿಸಿತ್ತು.

-

ವಿದ್ಯಮಾನ
vinayakavbhat@autoaxle.com
2012ರಲ್ಲಿ ದಕ್ಷಿಣ ಕನ್ನಡದ ಉಜಿರೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸೌಜನ್ಯಾ ಎಂಬಾಕೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈಯ ಲಾಗಿತ್ತು ಎನ್ನಲಾಗುವ ಘಟನೆಯಿಂದ ಪ್ರಾರಂಭವಾದ ಕಥೆ ಇದು. ಫೆಬ್ರವರಿ 2025ರಲ್ಲಿ ಕನ್ನಡ ಯುಟ್ಯೂಬ್ ಕಂಟೆಂಟ್ ಕ್ರಿಯೇಟರ್ ಸಮೀರ್ ಎಂಬಾತ ಒಂದು ವಿಡಿಯೋ ನಿರ್ಮಿಸಿ ಹಂಚಿದ ಬಳಿಕ, ಸೌಜನ್ಯಾಳ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣ ಮತ್ತೆ ಮುನ್ನೆಲೆಗೆ ಬಂತು ಮತ್ತು ಧರ್ಮಸ್ಥಳದ ವಿರುದ್ಧ ರಾಜ್ಯಾದ್ಯಂತ ವಿಪರೀತ ಜನಾಭಿಪ್ರಾಯಕ್ಕೆ ಕಾರಣವಾಯ್ತು.
ಸಮೀರನ ಈ ವಿಡಿಯೋವನ್ನು ಕೋಟ್ಯಂತರ ಜನ ವೀಕ್ಷಣೆ ಮಾಡಿ ಪರ-ವಿರೋಧ ಅನಿಸಿಕೆಗಳನ್ನು ಹಂಚಿಕೊಂಡರು. ರಾಷ್ಟ್ರಮಟ್ಟದ ಮಾಧ್ಯಮಗಳಷ್ಟೇ ಅಲ್ಲದೇ, ವಿದೇಶಿ ಮಾಧ್ಯಮಗಳೂ ಈ ಸುದ್ದಿಯನ್ನು ಬಹುವಾಗಿ ಚರ್ಚಿಸಿದವು. ಸೌಜನ್ಯಾ ಪ್ರಕರಣವನ್ನು ಹಿಂದೆ ಕರ್ನಾಟಕದ ಅಪರಾಧ ತನಿಖಾ ದಳ ಮತ್ತು ಕೇಂದ್ರ ತನಿಖಾ ದಳಗಳು ತನಿಖೆ ನಡೆಸಿದ್ದವು.
ಅಪರಾಧಿಯು ಧರ್ಮಸ್ಥಳ ದೇವಾಲಯದ ಪ್ರಮುಖರೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಆಕೆಯ ಕುಟುಂಬ ಆರೋಪಿಸಿತ್ತಾದರೂ, ಸಿಬಿಐ ವಿಶೇಷ ನ್ಯಾಯಾಲಯವು ಪ್ರತಿವಾದಿಯ ವಿರುದ್ಧ ಯಾವುದೇ ಪುರಾವೆಗಳಿಲ್ಲದ ಕಾರಣ ಪ್ರಕರಣವನ್ನು ಖುಲಾಸೆಗೊಳಿಸಿತ್ತು. ಮುಂದೆ, ನೊಂದವರ ಕುಟುಂಬವು ಮತ್ತೊಂದು ಸಿಬಿಐ ತನಿಖೆಯನ್ನು ಕೇಳಿತ್ತು, ಆದರೆ ಕರ್ನಾಟಕ ಹೈಕೋರ್ಟ್ ಅವರ ಮನವಿಯನ್ನು ತಿರಸ್ಕರಿಸಿತ್ತು.
ಇದನ್ನೂ ಓದಿ: Vinayaka V Bhat Column: ಹೆಮ್ಮೆಯ ಕನ್ನಡತಿ ಬಾನು ಮುಷ್ತಾಕ್ ಅವರಿಗೆ ಕಳಕಳಿಯ ಪತ್ರ
ಅಂತೂ, ಸೌಜನ್ಯಾ ಹತ್ಯೆಯೂ ಸೇರಿ ಧರ್ಮಸ್ಥಳದಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿತು. ಯುಟ್ಯೂಬ್, ಇಂಟರ್ನೆಟ್, ಟಿವಿ, ಪತ್ರಿಕೆ ಹೀಗೆ ಎಲ್ಲಿ ನೋಡಿದ್ರೂ ಇದೇ ಸುದ್ದಿ. ಇದಕ್ಕೆ ಕಾರಣ ಓರ್ವ ನಿಗೂಢ ದೂರುದಾರ ಮುಸುಕಿನ ಮನುಷ್ಯ. ಆತ ನೀಡಿದ ದೂರಿನಿಂದ ಶುರುವಾದ ಈ ಸದ್ದು, ಎಸ್‌ಐಟಿ ತನಿಖೆಯಾಗುವಲ್ಲಿಯಿಂದ ಹಿಡಿದು ಸುಪ್ರೀಂ ಕೋರ್ಟ್ ಕದ ತಟ್ಟುವವರೆಗೆ ಮುಂದುವರಿಯಿತು.
ಧರ್ಮಸ್ಥಳ ಗ್ರಾಮದಲ್ಲಿ ಅತ್ಯಾಚಾರ, ಕೊಲೆ, ನಾಪತ್ತೆ ಪ್ರಕರಣಗಳು ಹಿಂದೆಯೂ ವರದಿ ಯಾಗಿದ್ದವು. ಇದರಲ್ಲಿ ಕೆಲವು ಪ್ರಕರಣಗಳಲ್ಲಿ ಆರೋಪಿಗಳಿಗೆ ಖುಲಾಸೆಯಾಗಿದ್ದರೆ, ಇನ್ನು ಕೆಲವು ಕೇಸ್‌ನಲ್ಲಿ ಯಾರು ಆರೋಪಿಗಳು ಎಂಬುದೇ ಇಲ್ಲಿಯವರೆಗೂ ಪತ್ತೆಯಾಗಿರಲಿಲ್ಲ. ಈಗ ಮುಖ್ಯ ದೂರುದಾರನನ್ನು, ನೂರಕ್ಕೂ ಹೆಚ್ಚು ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರ ಶವಗಳನ್ನು ಹೂಳಲು ಒತ್ತಾಯಿಸಲಾಯಿತು,
ಅವರಲ್ಲಿ ಅನೇಕರು ಲೈಂಗಿಕ ಹಿಂಸೆಯ ಚಿಹ್ನೆಗಳನ್ನು ಹೊಂದಿದ್ದರು ಎಂದು ಆರೋಪಿಸಿದರು. ಆಗ 2025ರಲ್ಲಿ ಸಲ್ಲಿಸಿದ ಮತ್ತೊಂದು ದೂರಿನಲ್ಲಿ, ಸ್ಥಳೀಯರೊಬ್ಬರು ಹದಿನೈದು ವರ್ಷಗಳ ಹಿಂದೆ ಶವವನ್ನು ಸಮಾಧಿ ಮಾಡುವುದನ್ನು ತಾವು ಗಮನಿಸಿರುವುದಾಗಿ ತಿಳಿಸಿದರು. ಅಂಥ ಪ್ರಕರಣಗಳೆಲ್ಲ ಇದೀಗ ಈ ದೂರುದಾರನಿಂದಾಗಿ ಮತ್ತೆ ಮುನ್ನೆಲೆಗೆ ಬಂದಿವೆ.
ಇನ್ನು ಧರ್ಮಸ್ಥಳದ ನೇತ್ರಾವತಿ ನದಿ ದಡದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವುದಾಗಿ ದೂರುದಾರ ಆರೋಪಿಸಿರುವುದರಿಂದ, ಎಸ್‌ಐಟಿ ತಂಡ ಆತ ಹೇಳಿದಲ್ಲ ಉತ್ಖನನ ನಡೆಸಿತು. ನೂರಾರು ಶವ ಹೂತಿದ್ದಾಗಿ ದೂರುದಾರ ಹೇಳಿದ್ದನಾದರೂ ಉತ್ಖನನದ ವೇಳೆ ಯಾವುದೇ ರೀತಿಯ ಪುರಾವೆಗಳು ಮಾತ್ರ ಪತ್ತೆಯಾಗಲಿಲ್ಲ.

ದೂರುದಾರರು ಗುರುತಿಸಿದ ಹದಿಮೂರೂ ಸ್ಥಳಗಳಲ್ಲಿ ಉತ್ಖನನ ಮಾಡಲಾಗಿದೆ. ಹನ್ನೊಂದು ಸ್ಥಳಗಳಲ್ಲಿ ಯಾವುದೇ ಮಾನವ ಅವಶೇಷಗಳು ಕಂಡುಬಂದಿಲ್ಲ, ಅವುಗಳಲ್ಲಿ ಒಂದರಲ್ಲಿ ಭಾಗಶಃ ಅಸ್ಥಿಪಂಜರ ಸಿಕ್ಕಿದೆ ಮತ್ತು ಇನ್ನೊಂದು ಸ್ಥಳದಲ್ಲಿ ಮಾನವ ತಲೆಬುರುಡೆ ಮತ್ತು ಮೂಳೆಗಳು ಕಂಡುಬಂದಿವೆ, ಅದೂ ಪುರುಷರದ್ದು ಎನ್ನುವುದು ತಿಳಿದುಬಂತು. ಸುಳ್ಳು ಸಾಕ್ಷಿ ಹೇಳಿದ್ದಕ್ಕಾಗಿ, ದೂರುದಾರ ಮುಸುಕಿನ ಮನುಷ್ಯನನ್ನು ಬಂಧಿಸಲಾಯಿತು ಮತ್ತು ಅವರ ಗುರುತು ಬಹಿರಂಗ ಪಡಿಸಲಾಯಿತು.
ಆದಾಗ್ಯೂ, ತನಿಖೆ ಮಾತ್ರ ಮುಂದುವರಿಯುತ್ತಿದೆ ಮತ್ತು ದೇವಾಲಯಕ್ಕೆ ಭೇಟಿ ನೀಡಿದ ಯಾತ್ರಿಕರ ಕಣ್ಮರೆಯ ಬಗ್ಗೆ ಕರ್ನಾಟಕ ಮತ್ತು ನೆರೆಯ ರಾಜ್ಯಗಳಲ್ಲಿ ದಾಖಲಾಗಿರುವ ಎಫ್ ಐಆರ್‌ಗಳನ್ನೂ ಪರಿಶೀಲಿಸಲಾಗುವುದು ಎಂದು ಎಸ್ಐಟಿ ಹೇಳುತ್ತಿದೆ. ಹಾಗಂತ, ಈ ಹೊಸ ಬುರುಡೆ ಪುರಾಣದ ಮಧ್ಯೆ, ಸೌಜನ್ಯಾ ಪರ ಹೋರಾಟ ಇನ್ನೂ ನಿಂತಿರಲಿಲ್ಲ,
ಆ ಪ್ರಕರಣಕ್ಕೆ ಪೂರಕವಾಗಿ ಈ ಎಲ್ಲ ಹೊಸ ಪ್ರಕರಣಗಳನ್ನು ಹೊಂದಿಸುವ ಹುನ್ನಾರ ನಡೆಯಿತು ಅಷ್ಟೆ. ಇವೆಲ್ಲದರ ನಡುವೆ, 2003ರಲ್ಲಿ ಕಾಲೇಜು ಪ್ರವಾಸದ ಸಮಯದಲ್ಲಿ ಕಾಣೆಯಾಗಿದ್ದಾಳೆ ಎಂದು ನಂಬಿಸಲಾಗುವ ಅನನ್ಯಾ ಭಟ್ ಎನ್ನುವವರ ತಾಯಿ ಎಂದು ಹೇಳಿಕೊಳ್ಳುವರೊಬ್ಬರು, ಬಲಿ ಪಶುಗಳಾದ ಅನೇಕ ಹೆಣ್ಣುಮಕ್ಕಳಲ್ಲಿ ತನ್ನ ಮಗಳು ಕೂಡ ಇರಬಹುದೆಂದು ಭಾವಿಸಿರುವು ದಾಗಿ ಹೇಳಿದರು.
ಇದರ ನಡುವೆ, ಹಿಂದೂ ಧಾರ್ಮಿಕತೆಯ ಅತ್ಯಂತ ನಂಬಿಕೆಯ ಜಾಗವಾದ ಧರ್ಮಸ್ಥಳದ ವಿರುದ್ಧ ಬೇಕಂತಲೆ ಷಡ್ಯಂತ್ರ ನಡೆಸಿದೆ ಎಂದು ಭಕ್ತರು ಕೋಪಗೊಳ್ಳುತ್ತಿರುವ ಮಧ್ಯೆ, ಡಾ. ವೀರೇಂದ್ರ ಹೆಗ್ಗಡೆ ಞಯವರನ್ನು ಮೋದಿಯವರ ಸರಕಾರ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ ಮೇಲೆ, ಅನ್ಯಪಕ್ಷಗಳು ಅದರಲ್ಲೂ ಕಾಂಗ್ರೆಸ್ಸು ಅವರ ಬಗ್ಗೆ ಸ್ವಲ್ಪ ಬೇರೆಯದೇ ಧೋರಣೆಯನ್ನು ತಾಳಿದೆ ಎಂದು ಜನ ಮಾತಾಡಿಕೊಳ್ಳುತ್ತಿರುವಾಗ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಮಾತನಾಡಿ, ಸದ್ದು ಮಾಡುತ್ತಿರುವುದು ಒಂದು ಖಾಲಿ ಡಬ್ಬ, ಅದರಲ್ಲಿ ಏನೂ ಇಲ್ಲ, ಇದರ ಹಿಂದೆ ದೊಡ್ಡದೊಂದು ಷಡ್ಯಂತ್ರವಿದೆ, ಯಾರು ಷಡ್ಯಂತ್ರ ಮಾಡಿದ್ದಾರೆ ಎಂದು ನಾನು ಈಗ ಹೇಳುವು ದಿಲ್ಲ.
ಬಹಳ ದೊಡ್ಡ ಯೋಜನೆ ಮಾಡಿ ಹೆಗ್ಗಡೆಯವರ ಚಾರಿತ್ರ್ಯದ ಮೇಲೆ ಕಪ್ಪು ಚುಕ್ಕೆ ಮೂಡಿಸಲು ನೋಡುತ್ತಿzರೆ. ಯಾರನ್ನೋ ತೇಜೋವಧೆ ಮಾಡಿ, ನೂರಾರು ವರ್ಷದಿಂದ ಬಂದ ಪರಂಪರೆ ಯನ್ನು ಹಾಳು ಮಾಡಲು ಹೊರಟಿದ್ದಾರೆ ಎನ್ನುವ ಸ್ಫೋಟಕ ಹೇಳಿಕೆ ನೀಡಿ ಸುಮ್ಮನಾಗಿಬಿಟ್ಟರು.
ದೂರುದಾರನೊಬ್ಬ ನ್ಯಾಯಾಲಯಕ್ಕೆ ಹೋಗಿ ಹೇಳಿಕೆ ಕೊಟ್ಟಿದ್ದಾನೆ. ಹೀಗಾಗಿ ಸರಕಾರ ವಿಶೇಷ ತನಿಖಾ ತಂಡವನ್ನು ರಚಿಸಬೇಕಾಯಿತು. ಅದಲ್ಲದಿದ್ದರೆ, ನಾವೂ ಧರ್ಮಸ್ಥಳದ ಬಗ್ಗೆ ಅತ್ಯಂತ ಶೃದ್ಧೆಯನ್ನು ಹೊಂದಿದವರೇ ಇದ್ದೇವೆ ಎಂದು ಸ್ಪಷ್ಟನೆ ನೀಡುವ ಪ್ರಯತ್ನವನ್ನು ಸರಕಾರ ಮಾಡಿತು.
ನಾವು ತನಿಖೆಗೆ ಆದೇಶ ನೀಡಿರುವುದರಿಂದಲೇ ಧರ್ಮಸ್ಥಳ ಕಳಂಕಮುಕ್ತವಾದಂತಾಗುತ್ತದೆ, ಈ ಮೂಲಕ, ಸರಕಾರವು ಧರ್ಮಸ್ಥಳಕ್ಕೆ ಉಪಕಾರವನ್ನೇ ಮಾಡಿದೆ ಎಂದು ಅನೇಕ ಮಂತ್ರಿಗಳು ನುಡಿಮುತ್ತುಗಳನ್ನು ಉದುರಿಸಿದರು. ಹಾಗೆ ನೋಡಿದರೆ, ತನಿಖೆಗೆ ಆದೇಶಿಸುವ ಸರಕಾರದ ಕ್ರಮ ಸರಿಯಾದದ್ದೇ ಆಗಿದೆ. ಬಿಜೆಪಿಯವರು ಏನೇ ಹೇಳಲಿ, ಧರ್ಮಸ್ಥಳವಾಗಲಿ ಅಥವಾ ಇನ್ನಾವುದೇ ಸ್ಥಳವಾಗಲಿ,
ಒಂದು ಧಾರ್ಮಿಕ ಕ್ಷೇತ್ರದ ಮೇಲೆ ಸರಣಿ ಅತ್ಯಾಚಾರ, ಕೊಲೆ ಮುಂತಾದ ಗಂಭೀರವಾದ ಆಪಾದನೆ ಬಂದಾಗ, ಸರಕಾರ ತನಿಖೆ ಮಾಡದಿದ್ದರೆ ತಪ್ಪಾಗುತ್ತದೆ. ಮುಸುಕಿನ ಮನುಷ್ಯನ ಜತೆಗಿನ ಉತ್ಖನನ ಪ್ರಾರಂಭವಾದಾಗ, ಬಿಜೆಪಿಯವರನ್ನೂ ಸೇರಿ ಬಹಳಜನ, ‘ದೂರುದಾರನ ಮಾತಿನಲ್ಲಿ ಸತ್ಯ ವಿದ್ದರೂ ಇರಬಹುದು’ ಎನ್ನುವ ಭಾವನೆಯಿಂದ, ಧರ್ಮಸ್ಥಳವನ್ನ ಸಂಶಯದಿಂದಲೇ ನೋಡುತ್ತಿದ್ದರು.
ಉತ್ಖನನದಲ್ಲಿ ಏನೂ ಸಿಗಲಿಲ್ಲವೆಂದು ತಿಳಿದ ಕೂಡಲೇ ‘ಧರ್ಮಸ್ಥಳ ಚಲೋ’ ಪ್ರಾರಂಭವಾಯಿತು. ಹಾಗಾಗಿ, ಬಿಜೆಪಿಯವರ ಧರ್ಮಸ್ಥಳ ಯಾತ್ರೆಯಲ್ಲಿ ಪ್ರಾಮಾಣಿಕತೆ ಕಾಣಿಸಲಿಲ್ಲ, ರಾಜಕೀಯ ಲಾಭ ಪಡೆಯುವ ಹುನ್ನಾರ ಮಾತ್ರ ಎದ್ದುಕಾಣಿಸಿತು. ಇರಲಿ, ಸರಕಾರ ಧರ್ಮಸ್ಥಳದ ವಿಷಯದಲ್ಲಿ ತೋರಿದ ನಿಷ್ಪಕ್ಷಪಾತದ ಧೋರಣೆಯನ್ನು, ಮುಂದೆ ಮಸೀದಿ ಚರ್ಚುಗಳ ವಿಷಯ ಬಂದಾಗಲೂ ತೆಗೆದುಕೊಳ್ಳಬೇಕಷ್ಟೆ. ಅಂತೂ ಈಗ ಧರ್ಮಸ್ಥಳ ರಹಸ್ಯ ಸಮಾಧಿ ಪ್ರಕರಣ ಅಂತಿಮ ಘಟ್ಟಕ್ಕೆ ತಲುಪಿದಂತೆ ಗೋಚರಿಸುತ್ತಿದೆ.
ಸುಳ್ಳುಗಳು ಒಂದಾದ ಮೇಲೆ ಒಂದರಂತೆ ಬಯಲಾಗುತ್ತಿರುವಂತೆ ಭಾಸವಾಗುತ್ತಿದೆ. ಧರ್ಮಸ್ಥಳಕ್ಕೆ ಬಹಳ ದೊಡ್ಡ ಇತಿಹಾಸವಿದೆ, ಸತ್ಯಕ್ಕೆ, ಕಟ್ಟುನಿಟ್ಟಿನ ಧಾರ್ಮಿಕ ನಡಾವಳಿಗಳಿಗೆ ಧರ್ಮಸ್ಥಳಕ್ಕೆ ಸಮನಾದ ಇನ್ನೊಂದು ಕ್ಷೇತ್ರವಿಲ್ಲವೆಂತಲೇ ಹೇಳಬಹುದು. ಮೂಲತಃ ಜೈನ ಧರ್ಮೀಯರಾದ ಹೆಗ್ಗಡೆಯವರ ಕುಟುಂಬ, ತಲೆಮಾರಿನಿಂದ ಕ್ಷೇತ್ರದ ಪಾವಿತ್ರ್ಯವನ್ನು ಹಾಗೇ ಉಳಿಸಿಕೊಂಡು ಬಂದವರಿದ್ದಾರೆ.
ತಮ್ಮ ಪೂರ್ವಜರು ಗಳಿಸಿದ ಕೀರ್ತಿಯನ್ನು ಡಾ.ವೀರೇಂದ್ರ ಹೆಗ್ಗಡೆಯವರು ಇನ್ನೂ ಹೆಚ್ಚಿಸಿದ್ದಾ ರೆಯೇ ಹೊರತು ಅದಕ್ಕೆ ಕುಂದುಂಟಾಗಲು ಬಿಡಲಿಲ್ಲ ಎನ್ನಬಹುದು. ಧರ್ಮಸ್ಥಳದ ಹೆಸರು ಹೇಳಲೂ ಆಸ್ತಿಕರು ಅಂಜುತ್ತಿದ್ದ ಕಾಲವಿತ್ತು, ‘ಹೊಳೆಯಿಂದಾಚೆಗಿನ ಕ್ಷೇತ್ರ’ವೆಂತಲೇ ಜನ ಮಾತನಾಡುತ್ತಿದ್ದರೇ ವಿನಾ, ‘ಧರ್ಮಸ್ಥಳ’ ಎನ್ನುತ್ತಿರಲಿಲ್ಲ.
ಕಳ್ಳತನ, ಆಸ್ತಿಯ ಕುರಿತ ದಾಯಾದಿ-ಕಲಹ ಮುಂತಾದ ಪ್ರಕರಣಗಳಿಗೆ ಅಲ್ಲಿ ಪರಿಹಾರ ದೊರಕು ತ್ತಿತ್ತು. ಕಾಲಾನಂತರದಲ್ಲಿ, ಸಣ್ಣ ಸಣ್ಣ ಪ್ರಕರಣಗಳ ಅಥವಾ ರಾಜಕೀಯ ಆರೋಪ ಪ್ರತ್ಯಾರೋಪ ಗಳಿಗೆ ಸಂಬಂಧಿಸಿದ ಆಣೆ ಪ್ರಮಾಣಗಳಿಗೂ ಧರ್ಮಸ್ಥಳದ ಹೆಸರು ತೆಗೆದುಕೊಳ್ಳುವ ಮಟ್ಟಕ್ಕೆ ಬಂತು.
ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿಯವರ ಆಣೆಯ ಪ್ರಕರಣವಂತೂ ಪ್ರಸಿದ್ಧವಾದದ್ದಾಗಿದೆ. ಆಮೇಲೆ ಇಬ್ಬರೂ ಪ್ರತ್ಯೇಕವಾಗಿ ಧರ್ಮಸ್ಥಳಕ್ಕೆ ಹೋಗಿ, ಕ್ಷೇತ್ರದ ಹೆಸರು ಹೇಳಿರುವುದರಿಂದ ತಪ್ಪುಕಾಣಿಕೆ ಸಲ್ಲಿಸಿ ಬಂದಿರುವುದನ್ನು ಇಲ್ಲಿ ನೆನಪಿಸಿಕೊಳ್ಳ ಬಹುದು. ಈ ಎಲ್ಲ ಕಾರಣಗಳಿಗಾಗಿ, ಧರ್ಮಸ್ಥಳದ ಕುರಿತು ಸಾಮಾನ್ಯರಿಗೆ ಭಕ್ತಿಯ ಜತೆಗೆ ಒಂದು ತರಹದ ಭಯವೂ ಇತ್ತು.
ಇನ್ನು ದಾನ-ಧರ್ಮದ ವಿಷಯ ಬಂದರಂತೂ, ಲಾಗಾಯ್ತಿನಿಂದ ಧರ್ಮಸ್ಥಳದ ಆಡಳಿತ, ಇತರ ಧಾರ್ಮಿಕ ಸಂಸ್ಥೆಗಳಿಗೆ ಮಾದರಿಯಾಗುವಂತೆ ನಡೆದುಕೊಂಡು ಬಂದಿದೆ. ಬಹಳ ಕಾಲದಿಂದಲೂ, ಬಂದ ಭಕ್ತರುಗಳಿಗೆ ಅನ್ನಸಂತರ್ಪಣೆ ನಡೆಸುತ್ತಿರುವ ಸಾಧನೆಯಂತೂ ಬಹಳ ದೊಡ್ಡ ಸಂಗತಿಯೇ ಆಗಿದೆ. ಧರ್ಮಸ್ಥಳಕ್ಕೆ ದೊಡ್ಡ ಹೆಸರು ತಂದುಕೊಟ್ಟಿದ್ದೇ ಈ ಅನ್ನದಾನವೆಂತಲೂ ಹೇಳಬಹುದು.
ಸಮಾಜ ಸೇವೆಯಲ್ಲಿಯೂ ಸದಾ ಮುಂಚೂಣಿಯ ಸ್ಥಾನದಲ್ಲಿ ಧರ್ಮಸ್ಥಳ ನಿಂತಿದೆ. ಕರ್ನಾಟಕ ದಾದ್ಯಂತ ಸಾವಿರಾರು ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯದಲ್ಲಿ ಧರ್ಮಸ್ಥಳ ಮತ್ತು ಹೆಗ್ಗಡೆಯವರು ದೊಡ್ಡ ಪ್ರಮಾಣದ ಸಹಾಯ ಮಾಡಿದ್ದಾರೆ. ಇನ್ನು ಶಿಕ್ಷಣ ಸಂಸ್ಥೆಗಳ ಕುರಿತು ಮಾತನಾಡುವುದಾದರೆ, ಒಂದು ಸರಕಾರವೂ ಮಾಡಲು ಸಾಧ್ಯವಾಗದಷ್ಟು ಅನ್ಯಾಸದೃಶವಾದ ಸಾಧನೆಯನ್ನು ಧರ್ಮಸ್ಥಳ ಮಾಡಿ ತೋರಿಸಿದೆ.
ಹೆಗ್ಗಡೆಯವರ ಕುಟುಂಬವೇನು ಅವರ ಮನೆಯಿಂದ ತಂದು ಈ ಎಲ್ಲ ಕಾರ್ಯಗಳನ್ನು ಮಾಡಿ ದೆಯೇ? ಭಕ್ತರಿಂದ ನಿತ್ಯ ಹರಿದು ಬರುವ ಕಾಣಿಕೆಗಳಿಂದಲ್ಲವೇ ಅಲ್ಲಿ ದಾನ- ಧರ್ಮ ನಡೆಯುತ್ತಿರು ವುದು? ಅದರಲ್ಲಿ ಹೆಗ್ಗಡೆಯವರ ಕುಟುಂಬದ ದೊಡ್ಡತನವೇನಿದೆ? ಎಂದು ಕೇಳುವವರೂ ಇದ್ದಾರೆ.
ಕೆಲವರು ಮೈಸೂರಿನ ಮಹಾರಾಜರ ಕುಟುಂಬದ ಕುರಿತೂ ಇದೇ ರೀತಿಯ ಆಕ್ಷೇಪವೆತ್ತಿದ್ದನ್ನು ನಾವು ಹಿಂದೆ ನೋಡಿದ್ದೇವೆ. ಜನರ ತೆರಿಗೆಯ ಹಣದಿಂದಲ್ಲವೇ ಅರಸರು ಮೈಸೂರು ರಾಜ್ಯವನ್ನು ಅಭಿವೃದ್ಧಿಪಡಿಸಿದ್ದು? ಕನ್ನಂಬಾಡಿ ಕಟ್ಟಿದ್ದು? ಎಂತೆಲ್ಲ ಮಾತನಾಡಿದವರಿದ್ದಾರೆ. ಇಂದಿನ ಕಾಲದಲ್ಲಿ, ಒಂದು ಸರಕಾರದ ಖಜಾನೆಯಲ್ಲಿ, ಮೈಸೂರು ಮಹಾರಾಜರ ಖಜಾನೆಯಲ್ಲಿ ಅಥವಾ ಧರ್ಮಸ್ಥಳದಲ್ಲಿ ಇರುವುದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಸಂಪನ್ಮೂಲವಿರುವಾಗ, ಧರ್ಮಸ್ಥಳ ಮಾಡಿ ತೋರಿಸಿದ ಸಮಾಜ ಸೇವೆಯ ಕೆಲಸವನ್ನು ಅಥವಾ ಆ ಕಾಲದ ಮೈಸೂರು ಸಂಸ್ಥಾನ ಮಾಡಿ ತೋರಿಸಿದ ಅಭಿವೃದ್ಧಿಯನ್ನು ಯಾಕೆ ಮಾಡಲಾಗುತ್ತಿಲ್ಲ? ಎಂದು ಪ್ರತಿಯಾಗಿ ನಾವೂ ಕೇಳಬಹುದು,
ಇರಲಿ. ಇಂಥ ಖ್ಯಾತಿವೆತ್ತ ಧರ್ಮಸ್ಥಳದ ಬಗ್ಗೆ, ಅಲ್ಲಿನ ಜನಪ್ರಿಯ ಧರ್ಮಾಧಿಕಾರಿ ಹೆಗ್ಗಡೆಯವರ ಬಗ್ಗೆ ಹಾದಿಬೀದಿಯಲ್ಲಿ ಹೋಗುವ ಪುಂಡ ಪೋಕರಿಗಳು, ಯುಟ್ಯೂಬರ್‌ಗಳು ಬಾಯಿಗೆ ಬಂದಂತೆ ಮಾತನಾಡುವುದನ್ನು ನೋಡುವಾಗ ಯಾರಿಗಾದರೂ ಮನಸ್ಸಿಗೆ ನೋವಾಗದಿರದು. ಸಾಕ್ಷಿಯಿಲ್ಲ ಪುರಾವೆಗಳಿಲ್ಲ, ಆದರೂ ಕರ್ನಾಟಕದ ಸಮೀರನಿಂದ ಹಿಡಿದು ಕೇರಳದ ಮುನಾ-ನವರೆಗೆ, ತಿಮರೋಡಿಯಿಂದ ಹಿಡಿದು ಮಟ್ಟೆಣ್ಣನವರವರೆಗೆ ಎಲ್ಲರೂ ಮಾತಾಡುವವರೇ ಆಗಿ ಬಿಟ್ಟರು.
ಹೆಗ್ಗಡೆಯವರ ಕುರಿತು ಅವರುಗಳು ಮಾತಾಡುವ ಭಾಷೆಯನ್ನು ಗಮನಿಸಬೇಕು, ಕ್ಷೇತ್ರದಲ್ಲಿ ನಡೆಯುವ ಸಾಮೂಹಿಕ ವಿವಾಹದ ಕುರಿತು ಎಷ್ಟು ಕೆಟ್ಟ ಭಾಷೆಯನ್ನು ಬಳಸಿದ್ದಾರೆಂದರೆ, ಅದನ್ನು ನಾವು ಕೇಳುವುದಕ್ಕೂ ಮುಜುಗರವಾಗುತ್ತದೆ.
ತಮ್ಮ ಮತ್ತು ತಮ್ಮ ಕುಟುಂಬದವರ ಕುರಿತು ಇಷ್ಟೆ ಸುಳ್ಳು ಆರೋಪ-ಆಪಾದನೆಗಳು ಬರುತ್ತಿರು ವಾಗ, ಕಂಡ ಕಂಡವರು ಕೆಟ್ಟ ಭಾಷೆಯಲ್ಲಿ ನಾಲಗೆ ಹರಿಬಿಡುತ್ತಿರುವ ಹೊತ್ತಿನಲ್ಲಿ, ಡಾ.ವೀರೇಂದ್ರ ಹೆಗ್ಗಡೆಯವರು ಮಾತ್ರ ಇವತ್ತಿನವರೆಗೆ ಗಟ್ಟಿಧ್ವನಿಯಿಂದ ಒಂದೂ ಮಾತನಾಡದಿ ರುವುದು ಸೋಜಿಗವೇ ಆಗಿದೆ. ಹೆಗ್ಗಡೆಯವರು ಮಾತಾಡಬೇಕಿತ್ತು, ಪ್ರತಿರೋಧವೊಡ್ಡಬೇಕಿತ್ತು ಎಂದು ನನಗಂತೂ ಅನಿಸುತ್ತಿದೆ. ಮಾತಾಡಬೇಕು ಎಂದರೆ, ಹೆಗ್ಗಡೆಯವರು ಕಂಡಕಂಡ ಟಿ.ವಿ.ಯಲ್ಲಿ ಬಂದು ಕುಳಿತುಕೊಳ್ಳಬೇಕು ಅಂತಲ್ಲ, ಸೋಷಿಯಲ್ ಮೀಡಿಯಾಗಳಲ್ಲಿ ರೀಲ್ ಮಾಡ ಬೇಕು ಅಂತಲ್ಲ. ಈ ದೇಶದಲ್ಲಿ ಕಾನೂನು ಇನ್ನೂ ತನ್ನ ಪ್ರಭಾವವನ್ನು ಉಳಿಸಿಕೊಂಡಿರುವಾಗ, ಸಣ್ಣ ಸಣ್ಣ ವಿಷಯಗಳಿಗೂ ಜನ ನ್ಯಾಯಾಲಯದ ಮೊರೆಹೋಗುತ್ತಿರುವಾಗ, ಹೆಗ್ಗಡೆಯವರು ಇಂಥವರ ವಿರುದ್ಧ ಕನಿಷ್ಠ ಮಾನನಷ್ಟ ಮೊಕದ್ದಮೆಯನ್ನಾದರೂ ದಾಖಲಿಸಬಹುದಿತ್ತು ಎಂದು ಯಾರಿಗಾದರೂ ಅನಿಸಿದರೆ ತಪ್ಪಲ್ಲ.
ಹೆಗ್ಗಡೆಯವರು ಈ ಸುಳ್ಳಿನ ಸರದಾರರ ಮೇಲೆ ಬಹಳ ಹಿಂದೆಯೇ ಕಾನೂನಾತ್ಮಕ ಕ್ರಮಗಳನ್ನು ಕೈಗೊಂಡಿದ್ದರೆ, ಹಾದಿಬೀದಿಯಲ್ಲಿ ಮಾತನಾಡಿ ಧರ್ಮಸ್ಥಳದ ಮರ್ಯಾದೆ ಕುಂದಿಸುತ್ತಿರುವವರು ಇಂದು ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲವೇನೋ ಎನ್ನುವುದು ಧರ್ಮಸ್ಥಳದ ಮೇಲೆ ಶ್ರದ್ಧೆಯಿರುವ ಭಕ್ತರ ಅಭಿಪ್ರಾಯವಾಗಿದೆ. ಈ ಬುರುಡೆ ಪ್ರಕರಣ ಅನಾವರಣವಾದಂದಿನಿಂದ, ಸ್ವಾಮೀಜಿಗಳು, ಹಿಂದೂ ಹೋರಾಟಗಾರರಷ್ಟೇ ಅಲ್ಲದೇ, ಕರ್ನಾಟಕದ ಎಲ್ಲ ಪ್ರಮುಖ ಮಾಧ್ಯಮಗಳು, ಮಹಿಳಾ ಹೋರಾಟಗಾರರು ಹಾಗೂ ಜೈನ ಮುನಿಗಳಷ್ಟೇ ಅಲ್ಲದೇ, ಸಮಸ್ತ ಜೈನ ಸಮುದಾಯ ಹೆಗ್ಗಡೆ ಯವರಿಗೆ ಬೆಂಬಲವಾಗಿ ನಿಂತು ಸಾರ್ವಜನಿಕವಾಗಿ ಮಾತನಾಡುತ್ತಿರುವಾಗ, ಹೆಗ್ಗಡೆಯವರು ಮಾತ್ರ, ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪ ಸ್ವಾಮಿಯೇ ಎಲ್ಲವನ್ನೂ ನೋಡಿಕೊಳ್ಳುತ್ತಾನೆ, ಎಸ್‌ಐಟಿ ತನಿಖೆ ಜಾರಿಯಲ್ಲಿರುವುದರಿಂದ ಹೆಚ್ಚು ಮಾತನಾಡುವುದು ಸರಿಯಲ್ಲ ಎನ್ನುತ್ತಾ ನಿರ್ಲಿಪ್ತವಾಗಿ ಇದ್ದುಬಿಟ್ಟಿದ್ದಾರೆ ಅನಿಸುತ್ತಿದೆ.
ದೇವರ ಮೇಲಿನ ಹೆಗ್ಗಡೆಯವರ ವಿಶ್ವಾಸ ಪ್ರಶ್ನಾತೀತವಾದದ್ದೇ, ಅದರ ಬಗ್ಗೆ ಯಾರದ್ದೂ ಎರಡು ಮಾತಿಲ್ಲ. ಆದರೆ, ಧರ್ಮಸ್ಥಳದ ಹಾಗೂ ಹೆಗ್ಗಡೆಯವರ ಮೇಲೆ ಭಕ್ತಿ-ಭಾವನೆ ಇಟ್ಟುಕೊಂಡಿರುವ ಭಕ್ತರ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಸಲುವಾಗಿಯಾದರೂ ಹೆಗ್ಗಡೆಯವರು ಮಾತಾಡಬೇಕಿದೆ, ಸುಳ್ಳು ಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು ಸಮರ ಸಾರಲು ಅವರು ಈಗಲಾದರೂ ಮನಸ್ಸು ಮಾಡಬೇಕಿದೆ.
ಹೆಗ್ಗಡೆಯವರು ಹಾಗೆ ಮಾಡದಿದ್ದರೆ, ಧರ್ಮಸ್ಥಳದ ಏನೋ ಸಮಸ್ಯೆ ಇದೆ ಎನ್ನುವ ಭಾವನೆ ಸಾಮಾನ್ಯ ಜನರಲ್ಲಿ ಮೂಡುವಂತಾಗಿಬಿಡುತ್ತದೆಯೇನೋ ಎನ್ನುವ ಕಳಕಳಿ ನನ್ನಂಥವರದ್ದು ಅಷ್ಟೆ. ನಿರ್ಧಾರವನ್ನು ಹೆಗ್ಗಡೆಯವರೇ ತೆಗೆದುಕೊಳ್ಳಬೇಕಿದೆ.