ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Kiran Upadhyay Column: ಸುಳ್ಳೇ ಸುಳ್ಳು...ಈ ಯುದ್ಧದಲ್ಲಿ ಸುಳ್ಳೇ ಸುಳ್ಳು...

70ರ ದಶಕದ ಅಂತ್ಯದಲ್ಲಿ ಇರಾನಿ ನಲ್ಲಿ ಇಸ್ಲಾಮಿಕ್ ಕ್ರಾಂತಿ ಆರಂಭವಾಗಿ ರಾಜಕೀಯ ಬದಲಾವಣೆಗಳಾದ ನಂತರ ಪರಿಸ್ಥಿತಿ ಬೇರೆಯಾಗತೊಡಗಿತು. ಇತ್ತೀಚೆಗೆ ವೆನಿಜುವೆಲಾ ಅಧ್ಯಕ್ಷ ರನ್ನು ಅಪಹರಿಸಿದ ಕಾರಣ ಮತ್ತು ರೀತಿ, ಮೊನ್ನೆಯಷ್ಟೇ ನೀಡಿದ ‘ಇರಾನಿನ ಹೊಸ ನಾಯಕ ನನ್ನು ಆರಿಸಲು ನಾವು ಸಹಾಯ ಮಾಡುತ್ತೇವೆ’ ಎಂಬ ಅರ್ಥದ ಹೇಳಿಕೆ ಇತ್ಯಾದಿಗಳು ಯುದ್ಧದ ಕಾರಣ ಬೇರೆಯದೇ ಎಂದು ಹೇಳುತ್ತವೆ.

ಸುಳ್ಳೇ ಸುಳ್ಳು...ಈ ಯುದ್ಧದಲ್ಲಿ ಸುಳ್ಳೇ ಸುಳ್ಳು...

-

ವಿದೇಶವಾಸಿ

‘ವಿಶ್ವದ ಅತಿ ಅತ್ತರದ ಕಟ್ಟಡ, ದುಬೈನ ಪ್ರತಿಷ್ಠೆಯ ಸಂಕೇತವಾದ ಬುರ್ಜ್ ಖಲೀಫಾ ಇರಾನಿನ ಕ್ಷಿಪಣಿ ದಾಳಿಗೆ ಪುಡಿಪುಡಿಯಾಗಿದೆ’, ‘ದುಬೈನ ಹೆಸರಾಂತ ಫೇರ್‌ಮೌಂಟ್ ಹೋಟೆಲ್ ಮೇಲೆ ದಾಳಿ ನಡೆದಿದ್ದು, ಬೆಂಕಿಯಲ್ಲಿ ಸುಟ್ಟು ಬೂದಿಯಾಗಿದೆ’, ‘ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಮಿಸೈಲ್ ಅಟ್ಯಾಕ್ ಆಗಿದ್ದು, ವಿಮಾನ ನಿಲ್ದಾಣ ಸಂಪೂರ್ಣ ಧ್ವಂಸವಾಗಿದೆ’, ‘ಬಹ್ರೈನ್, ಕತಾರ್, ಕುವೈತ್, ಅಬುಧಾಬಿಯಲ್ಲಿರುವ ಅಮೆರಿಕದ ವಾಯುನೆಲೆಗಳ ಮೇಲೆಯೂ ಇರಾನ್ ದಾಳಿಮಾಡಿದ್ದು, ಸಾಕಷ್ಟು ಸಾವು ನೋವುಗಳಾಗಿವೆ’, ‘ಕೊಲ್ಲಿ ರಾಷ್ಟ್ರಗಳಲ್ಲಿರುವ ಜನರೆಲ್ಲ ಭಯಭೀತರಾಗಿದ್ದಾರೆ’, ‘ಸಾವಿರಾರು ಜನ ಊಟಕ್ಕೆ, ತಿಂಡಿಗೆ, ಉಳಿಯಲು ಗತಿಯಿಲ್ಲದೆ ಪರದಾಡುತ್ತಿದ್ದಾರೆ’, ‘ಆಯಾ ದೇಶದಲ್ಲಿರುವ ಭಾರತೀಯ ದೂತಾವಾಸಗಳು ಸಹಾಯ ಮಾಡುತ್ತಿವೆ ಯಾ ಮಾಡುತ್ತಿಲ್ಲ’.

ಅಬ್ಬಾ! ಕಳೆದ ಒಂದು ವಾರದಿಂದ ಎಂತೆಂಥಾ ಸುದ್ದಿಗಳ ಸರಮಾಲೆ... ಇವುಗಳಲ್ಲಿ ಬಹುತೇಕ ಸುದ್ದಿಗಳು ‘ಸುಳ್ಳೇ ಸುಳ್ಳು... ಈ ಯುದ್ಧದಲ್ಲಿ, ಸುಳ್ಳೇ ಸುಳ್ಳು...’ ಕಳೆದ ಒಂದು ವಾರದಿಂದ ಎಲ್ಲಿ ನೋಡಿದರೂ ಇಂಥದ್ದೇ ಸುದ್ದಿ.

ಟಿ-20 ವರ್ಲ್ಡ್‌ ಕಪ್ ಮಾತ್ರ ಒಂದು ಹಂತದವರೆಗೆ ಸುದ್ದಿ ಮಾಡಿದ್ದು ಬಿಟ್ಟರೆ, ಕರ್ನಾಟಕ ದಲ್ಲಿ ಬಜೆಟ್ ವಿಷಯವೂ ಈ ವರ್ಷ ಅಷ್ಟು ಚರ್ಚೆಯಾಗಲಿಲ್ಲ. ಅಗುವುದಾದರೂ ಹೇಗೆ? ಯುದ್ಧದ ವಿಷಯಕ್ಕೆ ಬಂದಷ್ಟು ಟಿಆರ್‌ಪಿ ಬಜೆಟ್‌ಗೆ ಬರುವುದಿಲ್ಲ.

ಬಜೆಟ್ ಎಂದರೆ ಜನರ ಮನದಲ್ಲಿ ಭೀತಿಯು ಹುಟ್ಟುವುದಿಲ್ಲ. ಅದರ ಬದಲು ಯುದ್ಧ ಅನ್ನಿ, ನೀವು ಸತ್ಯವನ್ನೇ ಹೇಳಬೇಕೆಂದಿಲ್ಲ, ಸುಳ್ಳು ಹೇಳಿದರೂ ಆದಿತು, ಒಂದನ್ನು ಹತ್ತು ಮಾಡಿ ಹೇಳಿದರೂ ಆದಿತು. ಒಟ್ಟು ಜನರಲ್ಲಿ ಆತಂಕ ಮೂಡಬೇಕು, ಜನರು ಹೆಚ್ಚು ಹೆಚ್ಚು ಅದರ ಬಗ್ಗೆ ಕುತೂಹಲ ಇಟ್ಟುಕೊಳ್ಳುವಂತಾಗಬೇಕು, ನಮ್ಮ ಸುದ್ದಿವಾಹಿನಿಯ ಇದು ಮೊದಲ ಬಾರಿಗೆ ವರದಿಯಾಗಿದೆ ಎಂದಾಗಬೇಕು, ಅದರಿಂದ ಟಿಆರ್‌ಪಿ ಹೆಚ್ಚಬೇಕು, ಅಷ್ಟೇ.

ಕಳೆದ 15 ದಿನ ನಾನು ದುಬೈನಲ್ಲಿದ್ದೆ. ಫೆಬ್ರವರಿ 28ನೇ ತಾರೀಕಿನಂದು ಇಸ್ರೇಲ್ ಮತ್ತು ಅಮೆರಿಕ ಸೇರಿ ಇರಾನ್ ಮೇಲೆ ಬಾಂಬ್ ದಾಳಿ ನಡೆಸಿದವು. ಅದೇ ದಿನ ರಾತ್ರಿ ಇರಾನ್ ಕೊಲ್ಲಿ ರಾಷ್ಟ್ರಗಳಲ್ಲಿರುವ ಅಮೆರಿಕದ ಸೇನಾನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಲು ಪ್ರಯತ್ನಿಸಿತು. ಅಂದು ಮೊದಲ ಬಾರಿ ಬಹುತೇಕ ಕೊಲ್ಲಿ ರಾಷ್ಟ್ರಗಳಲ್ಲಿ ಸೈರನ್ (ಎಚ್ಚರಿಕೆ ಯ ಗಂಟೆ) ಸದ್ದು ಮಾಡಿತ್ತು.

ಇದನ್ನೂ ಓದಿ: Kiran Upadhyay Column: ಒಲುಮೆ ಸಿಹಿಯ ಉಂಡು, ಬಯಕೆ ಸಿರಿಯ ಕಂಡು...

‘ಎಲ್ಲರೂ ಸುರಕ್ಷಿತವಾದ ಸ್ಥಳಕ್ಕೆ ತೆರಳಿ, ಕಿಟಕಿಯ ಬಳಿ ಅಥವಾ ಬಾಲ್ಕನಿಯಲ್ಲಿ ನಿಲ್ಲಬೇಡಿ’ ಇತ್ಯಾದಿ ಸಂದೇಶವೂ ಬಂದಿತ್ತು. ಅಲ್ಲಿಂದ ಇಲ್ಲಿಯವರೆಗೆ ಒಮಾನ್ ದೇಶ ವೊಂದನ್ನು ಹೊರತುಪಡಿಸಿ ಉಳಿದ 5 ಕೊಲ್ಲಿ ರಾಷ್ಟ್ರಗಳಾದ ಯುಎಇ, ಕುವೈತ್, ಬಹ್ರೈನ್, ಸೌದಿ ಅರೇಬಿಯಾ, ಕತಾರ್ ದೇಶಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆದದ್ದು ನಿಜ.

ಅದರಲ್ಲೂ ಕುವೈತ್, ಬಹ್ರೈನ್ ಮತ್ತು ಕತಾರ್ ಮೇಲೆ ಸ್ವಲ್ಪ ಹೆಚ್ಚೇ ದಾಳಿಗಳಾಗಿವೆ. ಏಕೆಂದರೆ ಅವು ಇರಾನಿಗೆ ಹತ್ತಿರದಲ್ಲಿರುವ ದೇಶಗಳು. ಅದರ ನಂತರದ ದಾಳಿಗಳಲ್ಲಿ, ಯುಎಇಯ ಅಬುಧಾಬಿ ಮತ್ತು ಫುಜೈರಾದಲ್ಲಿ ದಾಳಿಗಳು ನಡೆದಿವೆ. ಅವು ಕೂಡ ಸಮುದ್ರ ತಟದಲ್ಲಿ ಇರುವ ನಗರಗಳು, ಜತೆಗೆ ಬಂದರುಗಳು ಇರುವ ನಗರಗಳು.

ಉಳಿದಂತೆ, ಸೌದಿ ಅರೇಬಿಯಾದ ತೈಲ ಸಂಸ್ಕರಣ ಕೇಂದ್ರದ ಮೇಲೆ ನಡೆದ ದಾಳಿಯಿಂದ ಸೌದಿ ಅರೇಬಿಯಾಕ್ಕೆ ಆರ್ಥಿಕವಾಗಿ ನಷ್ಟವಾದದ್ದು ಹೌದು. ಈ ನಡುವೆ ಕತಾರ್, ಕುವೈತ್ ಮತ್ತು ಬಹ್ರೈನ್‌ನ ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿಲ್ಲ. ಅವುಗಳ ಪೈಕಿ ಬಹ್ರೈನ್ ಮತ್ತು ಕುವೈತ್ ವಿಮಾನ ನಿಲ್ದಾಣಗಳು ಮೊದಲನೆಯ ದಿನದ ದಾಳಿಯಲ್ಲಿ ಸ್ವಲ್ಪ ಹಾನಿಗೆ ಒಳಗಾಗಿವೆ.

ಇದರೊಂದಿಗೆ ದುಬೈ ವಿಮಾನ ನಿಲ್ದಾಣದ ಒಂದು ಭಾಗವೂ ದಾಳಿಯಲ್ಲಿ ಜಖಂ ಗೊಂಡಿದೆ. ಆದರೆ ಇದ್ಯಾವುದೂ ನೇರವಾಗಿ ಕ್ಷಿಪಣಿ ದಾಳಿಗೆ ಒಳಗಾದವಲ್ಲ. ಯುದ್ಧ ಆರಂಭವಾದಾಗಿನಿಂದ ಇದುವರೆಗೆ ಇರಾನ್ ಪ್ರತಿ ದೇಶದ ಮೇಲೂ ಏನಿಲ್ಲವೆಂದರೂ 500ಕ್ಕೂ ಹೆಚ್ಚು ಕ್ಷಿಪಣಿ ದಾಳಿ ನಡೆಸಿದೆ. ಆದರೆ ಅವುಗಳಲ್ಲಿ ಒಂದೋ-ಎರಡೋ ಕ್ಷಿಪಣಿ ಗಳು ಅಮೆರಿಕದ ಸೇನಾನೆಲೆಯ ಮೇಲೆ ಬಿದ್ದದ್ದು ಬಿಟ್ಟರೆ, ಉಳಿದವನ್ನೆಲ್ಲ ಆಕಾಶದಲ್ಲಿಯೇ ಪ್ರತಿರೋಧ ಒಡ್ಡಿ ಕತ್ತರಿಸಿ ಹಾಕಲಾಗಿದೆ. ಹಾಗೆ ತುಂಡಾದ ಕ್ಷಿಪಣಿಗಳ ಕೆಲವು ಲೋಹದ ಚೂರುಗಳು ಜನರ ಮೇಲೆ ಅಥವಾ ಕಟ್ಟಡದ ಮೇಲೆ ಬಿದ್ದು ಸ್ವಲ್ಪ ಹಾನಿಯಾಗಿದ್ದೂ ಹೌದು.

ಇದಿಷ್ಟು ಸತ್ಯ ಬಿಟ್ಟರೆ, ಸುದ್ದಿವಾಹಿನಿಗಳಲ್ಲಿ ಬರುವಷ್ಟು ಅಥವಾ ಸ್ವಯಂಘೋಷಿತ ಸೋಷಿಯಲ್ ಮೀಡಿಯಾ ಇನ್-ಯೆನ್ಸರ್’ ಅಲ್ಲ, ‘ಕಂಟೆಂಟ್ ಕ್ರಿಯೇಟರ್’ಗಳು ಹೇಳುವ ಷ್ಟಂತೂ ಖಂಡಿತ ಆಗಲಿಲ್ಲ. ಸ್ಥಳದಲ್ಲಿರದೆ, ಕಣ್ಣಾರೆ ನೋಡದೆ, 3000 ಕಿಲೋಮೀಟರ್ ದೂರದಲ್ಲಿ ನಡೆಯುತ್ತಿರುವುದನ್ನು ತಾವೇ ನೋಡಿದವರಂತೆ ಹೇಳಿದರೆ ಅದರಲ್ಲಿ ಎಷ್ಟು ಸತ್ಯವಿದ್ದೀತು? ಜನರನ್ನು ತಮ್ಮ ಕಡೆ ಸೆಳೆಯಬೇಕೆಂಬ ಕಾರಣಕ್ಕೆ, ಯಾರಿಂದಲೋ ಕೇಳಿದ, ಎಲ್ಲಿಯೋ ನೋಡಿದ ಸುದ್ದಿಗೆ ರೆಕ್ಕೆ ಪುಕ್ಕ ಸೇರಿಸಿ ರಂಜನೀಯ ವಾಗಿ ಹೇಳಬೇಕು ಎಂದರೆ ಸುಳ್ಳು ಸೇರಿಸಬೇಕು ಅಲ್ಲವೇ? ಹಾಗೆ ನೋಡಿದರೆ, ಈ ಯುದ್ಧದ ವಿಷಯದಲ್ಲಿ ಇವಷ್ಟೇ ಸುಳ್ಳಲ್ಲ.

ಅಸಲಿಗೆ ಈ ಯುದ್ಧ ಆರಂಭವಾದದ್ದೇ ಸುಳ್ಳಿನ ಬುನಾದಿಯ ಮೇಲೆ. ಯುದ್ಧ ಆರಂಭಿಸು ವಾಗ ಅಮೆರಿಕ ನೀಡಿದ ಕಾರಣ, ‘ಇರಾನ್ ಪರಮಾಣು ಬಾಂಬ್ ತಯಾರಿಸುತ್ತಿದೆ, ಅದಕ್ಕಾಗಿ ಹೆಚ್ಚಿನ ಯುರೇನಿಯಮ್ ಅನ್ನು ಶೇಖರಿಸುತ್ತಿದೆ, ಇದು ವಿಶ್ವಕ್ಕೇ ಮಾರಕ’ ಎನ್ನುವುದಾಗಿ.

ಈ ಕಾರಣ ಸುಳ್ಳು ಎನ್ನುವುದು ಯಾರಿಗಾದರೂ ಅರ್ಥವಾಗುತ್ತದೆ. ಏಕೆಂದರೆ ವಿಶ್ವದಲ್ಲಿ ಪರಮಾಣು ಶಕ್ತಿಯ ಉತ್ಪಾದನೆಯಲ್ಲಿ ತೊಡಗಿಕೊಂಡ ದೇಶ ಇರಾನ್ ಮಾತ್ರವಲ್ಲ. ಅಲ್ಲದೇ, ಒಂದು ಕಾಲದಲ್ಲಿ ಅಮೆರಿಕವೇ ಇರಾನಿಗೆ ಯುರೇನಿಯಮ್ ಅನ್ನು ನೀಡುತ್ತಿತ್ತು. ಅಷ್ಟೇ ಅಲ್ಲ, 1950ರ ದಶಕದಲ್ಲಿ ಪರಮಾಣು ಶಕ್ತಿಯ ತಂತ್ರಜ್ಞಾನ, ರಿಯಾಕ್ಟರ್‌ಗಳನ್ನೂ ನೀಡಿತ್ತು.

ಆಗ ಅಮೆರಿಕ ಮತ್ತು ಇರಾನ್ ಮಿತ್ರದೇಶಗಳಾಗಿದ್ದವು. 70ರ ದಶಕದ ಅಂತ್ಯದಲ್ಲಿ ಇರಾನಿ ನಲ್ಲಿ ಇಸ್ಲಾಮಿಕ್ ಕ್ರಾಂತಿ ಆರಂಭವಾಗಿ ರಾಜಕೀಯ ಬದಲಾವಣೆಗಳಾದ ನಂತರ ಪರಿಸ್ಥಿತಿ ಬೇರೆಯಾಗತೊಡಗಿತು. ಇತ್ತೀಚೆಗೆ ವೆನಿಜುವೆಲಾ ಅಧ್ಯಕ್ಷರನ್ನು ಅಪಹರಿಸಿದ ಕಾರಣ ಮತ್ತು ರೀತಿ, ಮೊನ್ನೆಯಷ್ಟೇ ನೀಡಿದ ‘ಇರಾನಿನ ಹೊಸ ನಾಯಕನನ್ನು ಆರಿಸಲು ನಾವು ಸಹಾಯ ಮಾಡುತ್ತೇವೆ’ ಎಂಬ ಅರ್ಥದ ಹೇಳಿಕೆ ಇತ್ಯಾದಿಗಳು ಯುದ್ಧದ ಕಾರಣ ಬೇರೆಯದೇ ಎಂದು ಹೇಳುತ್ತವೆ.

ಇನ್ನು ಯುದ್ಧ ನಡೆಯುವಾಗ ಹೊರಬರುವ ಅಂಕಿ-ಅಂಶಗಳ ಸತ್ಯಾಸತ್ಯತೆಯ ಬಗ್ಗೆ ಎಷ್ಟು ಭರವಸೆ ಇಡಬೇಕು ಎಂದು ಯಾರನ್ನೂ ಕೇಳುವಂತಿಲ್ಲ. ಪ್ರತಿಯೊಂದು ಯುದ್ದ ಮುಗಿಯುವವರೆಗೂ ಎರಡೂ ಪಡೆಗಳು ತಾವೇ ಮೇಲುಗೈ ಸಾಧಿಸಿದ್ದೇವೆ ಎಂದು ಹೇಳಿ ಕೊಳ್ಳುತ್ತಿರುತ್ತವೆ.

ಶರಣಾಗುವ ತಂಡವೂ ಒಂದು ಕ್ಷಣ ಮೊದಲಿನವರೆಗೂ ತಾನೇ ಗೆಲ್ಲುವುದು ಎಂದು ಹೇಳುತ್ತದೆ, ಬಿಡಿ. ಈ ಯುದ್ಧದಲ್ಲಿ ಹೊರಬಂದ ಇನ್ನೊಂದು ದೊಡ್ದ ಸುಳ್ಳು ಯಾವುದು ಗೊತ್ತೇ? ಇರಾನ್ ಅಧ್ಯಕ್ಷ ತನ್ನ ಸುತ್ತಲಿನ ದೇಶಗಳ ಮೇಲೆ ದಾಳಿ ನಡೆಸಿದ್ದಕ್ಕೆ ಕ್ಷಮೆ ಯಾಚಿಸುತ್ತೇನೆ, ಇನ್ನು ಮುಂದೆ ಪಕ್ಕದ ದೇಶಗಳ ಮೇಲೆ ದಾಳಿ ನಡೆಸುವುದಿಲ್ಲ ಎಂದು ಹೇಳಿದ್ದು. ಅವರು ಹೇಳಿಕೆ ನೀಡಿ ಇನ್ನೂ ಎರಡು ಗಂಟೆಯೂ ಕಳೆದಿರಲಿಲ್ಲ, ಆಗಲೇ ದುಬೈ, ಬಹ್ರೈನ್, ಅಬುಧಾಬಿಯ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ನಡೆದಿದ್ದವು, ಇನ್ನೂ ನಡೆಯುತ್ತಲೇ ಇದೆ.

ಯಾಕೆ ಹೀಗಾಗುತ್ತಿದೆ ಎಂದು ಹುಡುಕಿದರೆ ಸಿಗುವುದು ಎರಡು ಕಾರಣ. ಒಂದು, ಸರ್ವಾಧಿ ಕಾರಿಯೊಂದಿಗೆ ಸುಮಾರು 40 ಪ್ರಮುಖ ನಾಯಕರನ್ನು ಕಳೆದುಕೊಂಡು, ಸರಿಯಾದ ನಾಯಕರಿಲ್ಲದ ಸೇನೆಯ ತುಕಡಿಗಳು ತಮ್ಮ ಬಳಿ ಇರುವ ಡ್ರೋನ್ ಮತ್ತು ಕ್ಷಿಪಣಿಗಳನ್ನು ತಮ್ಮಿಷ್ಟದಂತೆ ಹಾರಿಸುತ್ತಿರುವುದು; ಎರಡು, ಇಂಥ ಒಂದು ಹೇಳಿಕೆ ನೀಡಿ, ಇತರ ರಾಷ್ಟ್ರ ಗಳು ನಿರಾಳವಾಗಿರುವಾಗ ಅವರ ಮೇಲೆ ಎರಗಿ ಹೆಚ್ಚಿನ ಹಾನಿ ಮಾಡುವುದು. ಇದರ ಹೊರತಾಗಿ ಇನ್ನಾವ ಕಾರಣವೂ ಕಾಣುವುದಿಲ್ಲ.

ಸುಳ್ಳಿನ ಸರಮಾಲೆ ಇಲ್ಲಿಗೇ ಮುಗಿಯುವುದಿಲ್ಲ. ಕೆಲವು ಟ್ರಾವೆಲ್ ಏಜೆಂಟ್‌ಗಳು ಈ ಸಂದರ್ಭದ ಲಾಭ ಪಡೆಯಲು ಮುಂದಾದಂತೆ ಕಾಣುತ್ತಿದೆ. ಕಳೆದ ಕೆಲವು ದಿನಗಳಿಂದ, ದುಬೈ, ಬಹ್ರೈನ್, ಕತಾರ್ ದೇಶಗಳಲ್ಲಿ ಹೊಸ ಯೋಜನೆಗಳು ಹುಟ್ಟಿಕೊಂಡಿವೆ.

ಬಹ್ರೈನ್, ಕತಾರ್ ದೇಶಗಳಲ್ಲಿ ವಿಮಾನ ನಿಲ್ದಾಣ ಬಂದ್ ಆಗಿರುವುದರಿಂದ ಅಲ್ಲಿರುವವ ರನ್ನು ಸೌದಿ ಅರೇಬಿಯಾದ ವಿಸಾ ಮಾಡಿಸಿ, ಬಸ್ಸಿನಲ್ಲಿ ಕರೆತಂದು ಅಲ್ಲಿಂದ ವಿಮಾನದಲ್ಲಿ ಕಳಿಸಿಕೊಡುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಅದೇ ರೀತಿ ಯುಎಇಯಲ್ಲಿ ಇರುವವ ರನ್ನು ಒಮಾನ್ ದೇಶದ ರಾಜಧಾನಿ ಮಸ್ಕತ್‌ಗೆ ಕೊಂಡೊಯ್ದು, ಅಲ್ಲಿಂದ ಮುಂದೆ ವಿಮಾನದಲ್ಲಿ ಕಳಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

ಅದಕ್ಕಾಗಿ ಸ್ವಲ್ಪ ಹೆಚ್ಚಿನ ಹಣವನ್ನು ಪಡೆಯಲಾಗುತ್ತದೆ. ಇದಕ್ಕೆ ಜನರೂ ಮುಗಿ ಬೀಳುತ್ತಿದ್ದಾರೆ. ಕಾರಣ, ಅದೇ ಸುಳ್ಳು ಸುದ್ದಿ. ಎಲ್ಲ ವಿಮಾನಗಳು ರದ್ದಾಗಿವೆ, ಹಾರುವ ಕೆಲವೇ ವಿಮಾನಗಳಲ್ಲಿ, ಬದಲಾವಣೆಗೆ ಕಾದು ಸಿಲುಕಿಕೊಂಡವರನ್ನು ಮಾತ್ರ ಕರೆದೊಯ್ಯಲಾಗುತ್ತಿದೆ, ಇತ್ಯಾದಿ.

ನಿಜ ಹೇಳಬೇಕೆಂದರೆ ಯುದ್ಧ ಆರಂಭವಾದ ಹೊಸತರಲ್ಲಿ ಒಂದೆರಡು ದಿನ ಈ ರೀತಿಯ ಸಮಸ್ಯೆಗಳು ಎದುರಾಗಿದ್ದು ಹೌದು. ಆದರೆ ಕೆಲವರು ಅದನ್ನೇ ವ್ಯಾಪಾರವನ್ನಾಗಿಸಿ ಕೊಂಡರು ಎಂದೆನಿಸುತ್ತದೆ. ಕಳೆದ ನಾಲ್ಕೈದು ದಿನದಿಂದ ಯುಎಇಯಲ್ಲಿರುವ ಎಲ್ಲ 5 ಪ್ರಮುಖ ವಿಮಾನ ನಿಲ್ದಾಣಗಳೂ ಕಾರ್ಯನಿರ್ವಹಿಸುತ್ತಿವೆ.

ಭಾರತಕ್ಕೆ ಸಂಬಂಧಿಸಿದ ಉದಾಹರಣೆ ಹೇಳುವುದಾದರೆ, ದುಬೈನಿಂದ ಎಮಿರೇಟ್ಸ್, ಅಬುಧಾಬಿಯಿಂದ ಇತಿಹಾದ್, ಶಾರ್ಜಾದಿಂದ ಏರ್ ಅರೇಬಿಯಾ, ಫುಜೈರಾದಿಂದ ಸ್ಪೈಸ್ ಜೆಟ್, ರಸ್ ಅಲ್ ಖೈಮಾದಿಂದ ಇಂಡಿಗೋ ವಿಮಾನಗಳು ಭಾರತಕ್ಕೆ ಜನರನ್ನು ಹೊತ್ತು ತರುತ್ತಿವೆ. ಅವುಗಳಲ್ಲಿ ಕೆಲವು ಆಸನಗಳು ಖಾಲಿಯೂ ಬರುತ್ತಿವೆ.

ಕೆಲವು ಏರ್‌ಲೈನ್ಸ್‌ಗಳ ಬೆಲೆಯಂತೂ ಸಾಮಾನ್ಯ ದಿನಗಳಲ್ಲಿ ಇರುವುದಕ್ಕಿಂತಲೂ ಕಡಿಮೆ ಇದೆ. ಇದಕ್ಕೂ ಒಂದು ಉದಾಹರಣೆ ಕೊಡುತ್ತೇನೆ, ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ಬೆಂಗಳೂರಿಗೆ ಬರಬೇಕು ಎಂದರೆ, ಅವರದ್ದೇ ವೆಬ್‌ಸೈಟ್‌ನಲ್ಲಿ 25000ಕ್ಕೂ ಕಮ್ಮಿ ಬೆಲೆಯಲ್ಲಿ ಟಿಕೆಟ್ ಸಿಗುತ್ತದೆ. ಅದೇ ಟಿಕೆಟನ್ನು ಬೇರೆ ಪ್ರಯಾಣದ ಏಜೆಂಟ್‌ಗಳ ಬಳಿ ಖರೀದಿಸುವುದಾದರೆ, ಅಥವಾ ಬೇರೆ ವೆಬ್‌ಸೈಟ್‌ನಲ್ಲಿ ಖರೀದಿಸುವುದಾದರೆ, ಹೆಚ್ಚು ಕಮ್ಮಿ ಒಂದು ಲಕ್ಷ ರುಪಾಯಿ ಬೆಲೆ ಎಂದು ಕೇಳಿಬರುತ್ತದೆ.

ಅಲ್ಲಿಗೆ ಪ್ರಯಾಣದ ಏಜೆನ್ಸಿಯವರದ್ದೋ ಅಥವಾ ಇನ್ಯಾರದ್ದೋ ಕೈವಾಡ ಇದೆ ಎನ್ನುವ ಅನುಮಾನ ಬರುತ್ತದೆ. ವಿಮಾನ ಹಾರುತ್ತಿಲ್ಲ, ಟಿಕೆಟ್ ಸಿಗುತ್ತಿಲ್ಲ, ಇನ್ನೂ ಸಾಕಷ್ಟು ಜನ ಸಿಲುಕಿಕೊಂಡಿzರೆ ಇತ್ಯಾದಿ ಆತಂಕ ಸೃಷ್ಟಿಸುವಲ್ಲಿ ಕೆಲವರು ಸಫಲರಾಗಿದ್ದಾರೆ. ಆಶ್ಚರ್ಯ ಎಂದರೆ ಪ್ರವಾಸಿಗರೂ ಅದನ್ನು ನಂಬುತ್ತಿದ್ದಾರೆ. ಆದರೆ ಬಹುತೇಕ ಸ್ಥಳೀಯರು, ಅಂದರೆ ಉದ್ಯೋಗಕ್ಕಾಗಿ ಕೊಲ್ಲಿ ರಾಷ್ಟ್ರಗಳಿಗೆ ಬಂದವರನ್ನು ಕೇಳಿ ನೋಡಿ, ಶೇ.90ಕ್ಕೂ ಹೆಚ್ಚು ಜನ ತಮ್ಮ ದೇಶಕ್ಕೆ ಹೋಗದೇ, ಇದ್ದಲ್ಲಿಯೇ ಉಳಿದು ಕೆಲಸ ಮಾಡುವ ಮನಃಸ್ಥಿತಿಯಲ್ಲಿದ್ದಾರೆ.

ಇನ್ನು 6 ಕೊಲ್ಲಿ ರಾಷ್ಟ್ರಗಳಲ್ಲಿರುವ ಭಾರತೀಯರನ್ನೇ ತುರ್ತಾಗಿ ಹಿಂದೆ ಕರೆಸಿಕೊಳ್ಳಬೇಕು ಅಂದುಕೊಂಡರೆ ಸುಲಭದ ಕೆಲಸವೇ ಅಲ್ಲ. ಸುಮ್ಮನೇ ಒಂದು ಲೆಕ್ಕ ನೋಡಿ, ಕೊಲ್ಲಿ ದೇಶಗಳಲ್ಲಿ ಸುಮಾರು ಒಂದು ಕೋಟಿ ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಅವರನ್ನೆಲ್ಲ ಕರೆ ತರಬೇಕು ಎಂದರೆ ಹೇಗೆ? ಒಂದು ಹಡಗಿನಲ್ಲಿ ಹೆಚ್ಚೆಂದರೆ ಒಂಬತ್ತರಿಂದ ಹತ್ತು ಸಾವಿರ ಜನ, ಒಂದು ವಿಮಾನದಲ್ಲಿ ಸರಾಸರಿ 250-300 ಜನ. ಈ ಲೆಕ್ಕದಲ್ಲಿ ಎಷ್ಟು ವಿಮಾನ, ಎಷ್ಟು ಹಡಗು ಬೇಕು ಎಂದು ಲೆಕ್ಕ ಹಾಕಿ.

ಇದರಲ್ಲಿ ಇನ್ನೂ ಅಕ್ಕಪಕ್ಕದ ದೇಶಗಳಾದ ಜೋರ್ಡನ್, ಇರಾಕ್, ಲೆಬನಾನ್, ಟರ್ಕಿ, ಅಝರ್ ಬೈಜಾನ್‌ನಂಥ ದೇಶಗಳಲ್ಲಿರುವ ಭಾರತೀಯರ ಲೆಕ್ಕವಿಲ್ಲ, ಈ ದೇಶಗಳನ್ನೆಲ್ಲ ಯಾಕೆ ಹೇಳುತ್ತಿದ್ದೇನೆ ಎಂದರೆ, ಇರಾನ್ ಈ ಎಲ್ಲ ದೇಶಗಳ ಮೇಲೂ ದಾಳಿ ಮಾಡಿದೆ. ದಿನ ಕಳೆದಂತೆ ಇನ್ನೂ ಯಾವೆಲ್ಲ ಸುಳ್ಳು ಸುದ್ದಿಗಳು ಹುಟ್ಟಿಕೊಳ್ಳುತ್ತವೆಯೋ ಗೊತ್ತಿಲ್ಲ.

ಹಾಗಾದರೆ ಸಾಮಾನ್ಯ ಜನರು, ಪ್ರಯಾಣಿಕರು ಏನು ಮಾಡಬೇಕು? ಎಲ್ಲಕ್ಕಿಂತ ಮುಖ್ಯ ವಾಗಿ ಸಂಕಷ್ಟದ ಸಮಯದಲ್ಲಿ ತಾಳ್ಮೆಯಿಂದ ಇರಬೇಕು. ಯಾವುದೇ ಕಡೆ ಯುದ್ಧ ಆರಂಭ ವಾದಾಗ ಆರಂಭಿಕ ಆತಂಕಗಳು ಸಹಜ. ಬರೀ ಜನರಿಗಷ್ಟೇ ಅಲ್ಲ, ಆಡಳಿತ ವರ್ಗಕ್ಕೂ ಅದು ಅನ್ವಯ. ಏಕೆಂದರೆ ಮುಂದಿನ ನಡೆಗಳು ಹೇಗಿರಬೇಕು, ಮುಂದೆ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ನಿರ್ಣಯ ಕೈಗೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ.

ಯುದ್ಧ ಬಿಡಿ, ಮನೆಯಲ್ಲಿಯೇ ಯಾರದ್ದಾದರೂ ಸಾವಾದರೂ ಒಂದು ರೀತಿಯ ಆತಂಕ ಇರುತ್ತದೆ. ಆಕಸ್ಮಿಕವಾಗಿ ಆದ ಬದಲಾವಣೆಗೆ ಹೊಂದಿಕೊಳ್ಳುವುದು ಹೇಗೆ ಎಂದು ದಿಕ್ಕು ತೋಚದಂತಾಗಿರುತ್ತದೆ. ಅಂದಾಗ ಒಂದು ದೇಶದಲ್ಲಿರುವ ಜನರಿಗೆ ಯಾವ ರೀತಿಯ ಸೌಕರ್ಯಗಳನ್ನು ಒದಗಿಸಿಕೊಡಬೇಕು, ಅವರನ್ನು ಹೇಗೆ ಸುರಕ್ಷಿತವಾಗಿ ಇಡಬೇಕು, ದೇಶದ ಆಸ್ತಿಯನ್ನು, ವ್ಯವಸ್ಥೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ನಿರ್ಣಯಿಸುವು ದಕ್ಕೆ, ಅದಕ್ಕೆ ತಕ್ಕ ಬದಲಾವಣೆ ಮಾಡಿಕೊಳ್ಳುವುದಕ್ಕೆ, ಪರವಾನಗಿ ಪಡೆಯುವುದಕ್ಕೆ, ಎಲ್ಲದಕ್ಕೂ ಸ್ವಲ್ಪ ಸಮಯ ಬೇಕಾಗುತ್ತದೆ. ಆ ಬದಲಾವಣೆಗೆ ಹೊಂದಿಕೊಳ್ಳಲು ಜನರಿಗೂ ಸ್ವಲ್ಪ ಸಮಯ ಬೇಕಾಗುತ್ತದೆ. ಯಾರಿಗಾದರೂ ಸಮಯ ಬೇಡ ಎಂದರೆ, ಅದು ದೂರದಲ್ಲಿ ಕುಳಿತ ಯುಟ್ಯೂಬರ್‌ಗಳಿಗೆ ಮತ್ತು ಕೆಲವು ಸುದ್ದಿ ವಾಹಿನಿಗಳಿಗೆ ಮಾತ್ರ.

ಇನ್ನು, ಜನರಿಗೆ ಒಂದು ಸಲಹೆ- ಇಂಥ ಸುದ್ದಿ ವಾಹಿನಿಗಳನ್ನು, ರೀಲ್ ಹೀರೋಗಳನ್ನು ದೂರವಿಡಿ. ಸರಕಾರದ, ಏರ್‌ಲೈನ್ಸ್‌ನ, ಸಂಘ ಸಂಸ್ಥೆಗಳ ಅಧಿಕೃತ ವೆಬ್ಸೈಟ್, ಎಕ್ಸ್ (ಟ್ವಿಟರ್) ಗಳಲ್ಲಿ ಬರುವ ಸುದ್ದಿಯನ್ನಷ್ಟೇ ನಂಬಿ. ಅವರಿಗೂ ಗೊತ್ತಿಲ್ಲದ ಸುದ್ದಿ ರೀಲ್ಸ ಮಾಡುವವರಿಗೆ ಗೊತ್ತಿರುತ್ತದೆ ಎಂಬ ನಂಬಿಕೆ ಬೇಡ.