ಪರಮಾಚಾರ್ಯರ ಬಗೆ ಗೌರವ, ತ್ರಿಮತಸ್ಥರ ಸಾಮರಸ್ಯ ಉಳಿಯಲಿ
ಒಂದು ಅವಹೇಳನಕಾರಿ ಹೇಳಿಕೆ ದೇವಾಲಯದೊಳಗೆ ನಡೆದರೂ ಅವಹೇಳನವೇ; ಮನೆಯೊಳಗೆ ನಡೆದರೂ ಅವಹೇಳನವೇ. ಸ್ಥಳವು ಹೇಳಿಕೆಯ ನೈತಿಕತೆಯನ್ನು ನಿರ್ಧರಿಸುವುದಿಲ್ಲ. ಅದು ಸಭಾಂಗಣದ ನಾಲ್ಕು ಗೋಡೆಗಳೊಳಗೆ ಉಳಿದಿದ್ದರೆ ಇಂದು ಈ ಚರ್ಚೆಯೇ ನಡೆಯುತ್ತಿರ ಲಿಲ್ಲ. ಆದರೆ ವಿಷಯ ಸಾರ್ವಜನಿಕ ವಲಯಕ್ಕೆ ಬಂದ ನಂತರ, ಅದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ವರನ್ನು ಅನ್ಯರು ಎಂದು ತಳ್ಳಿಹಾಕುವುದು ಸಮಂಜಸವಲ್ಲ.
-
ಪ್ರತಿಕ್ರಿಯೆ
ಶ್ರೀನಿವಾಸ ಎಸ್.ಎಲ್., ಬೆಂಗಳೂರು
ನಾನು ಶ್ರೀವೈಷ್ಣವ ಸಂಪ್ರದಾಯದವನಾಗಿದ್ದರೂ, ಆದಿ ಶಂಕರಾಚಾರ್ಯರು, ಶ್ರೀ ರಾಮಾನುಜಾ ಚಾರ್ಯರು ಹಾಗೂ ಶ್ರೀ ಮಧ್ವಾಚಾರ್ಯರನ್ನು ಸಮಾನ ಗೌರವದಿಂದ ಕಾಣುತ್ತೇನೆ. ಆದ್ದರಿಂದ ಈ ಬರಹವು ಯಾವುದೇ ಒಂದು ಸಂಪ್ರದಾಯದ ಪರವಾಗಿಯೂ ಅಲ್ಲ. ಪರಸ್ಪರ ಗೌರವ, ಸಾಮರಸ್ಯ ಹಾಗೂ ಹಿಂದೂ ತ್ರಿಮತಸ್ಥರ ಸೌಹಾರ್ದದ ಪರವಾಗಿದೆ, ಕಡೆಗೆ ಮನುಷ್ಯತ್ವದ ಪರವಾಗಿದೆ. ಉಡುಪಿಯ ರಾಜಾಂಗಣದಲ್ಲಿ ನಡೆದ ಘಟನೆಯ ಬಗ್ಗೆ ಸಮರ್ಥಿಸಿಕೊಂಡು ಬರೆದ ಕೆಲವರ ಲೇಖನಗಳನ್ನು ಓದಿದ ನಂತರ ಈ ಪ್ರತಿಕ್ರಿಯೆ ಯನ್ನು ಬರೆಯಬೇಕೆನಿಸಿತು.
ಸಮರ್ಥಿಸುವವರು ಮಂಡಿಸುವ ಕೆಲವು ವಿಚಾರಗಳು ಚಿಂತನೆಗೆ ಅರ್ಹವೆಂದು ನನಗನಿಸಿತು. ಪ್ರತಿಯೊಂದು ಸಂಪ್ರದಾಯಕ್ಕೂ ತನ್ನ ಧಾರ್ಮಿಕ ಆಚರಣೆ, ಪರಂಪರೆ ಹಾಗೂ ಮಠದ ಆಡಳಿತ ವನ್ನು ಸ್ವತಂತ್ರವಾಗಿ ನಿರ್ವಹಿಸುವ ಹಕ್ಕಿದೆ. ಇದನ್ನು ಯಾರೂ ಪ್ರಶ್ನಿಸುವುದಿಲ್ಲ. ಆದರೆ ಆ ಸ್ವಾಯತ್ತತೆ ಎಂಬ ತತ್ವವನ್ನು ಪರಸ್ಪರ ಗೌರವದ ಪ್ರಶ್ನೆಗೂ ವಿಸ್ತರಿಸಬಹುದೇ ಎಂಬುದೇ ಇಲ್ಲಿ ಉದ್ಭವಿಸುವ ಪ್ರಶ್ನೆ. ಘಟನೆ ಮಠದ ಸಭಾಂಗಣದಲ್ಲಿ ನಡೆದದ್ದರಿಂದ ಅದು ಆಂತರಿಕ ವಿಷಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇದನ್ನೂ ಓದಿ: Dr Vijay Darda Column: ಬಿಲಾವಲ್ʼಗೆ ಏಕೆ ಚಡಪಡಿಕೆ? ಹಳೆಯದು ಮರೆತುಹೋಯ್ತೆ ?
ಆದರೆ ನನ್ನ ವಿನಮ್ರ ಪ್ರಶ್ನೆ ಏನೆಂದರೆ- ಸ್ಥಳವೇ ಮುಖ್ಯವೇ, ಅಥವಾ ಮಾತಿನ ಸ್ವರೂಪ ಮುಖ್ಯ ವೇ? ಒಂದು ಅವಹೇಳನಕಾರಿ ಹೇಳಿಕೆ ದೇವಾಲಯದೊಳಗೆ ನಡೆದರೂ ಅವಹೇಳನವೇ; ಮನೆಯೊ ಳಗೆ ನಡೆದರೂ ಅವಹೇಳನವೇ. ಸ್ಥಳವು ಹೇಳಿಕೆಯ ನೈತಿಕತೆಯನ್ನು ನಿರ್ಧರಿಸುವುದಿಲ್ಲ. ಅದು ಸಭಾಂಗಣದ ನಾಲ್ಕು ಗೋಡೆಗಳೊಳಗೆ ಉಳಿದಿದ್ದರೆ ಇಂದು ಈ ಚರ್ಚೆಯೇ ನಡೆಯುತ್ತಿರಲಿಲ್ಲ. ಆದರೆ ವಿಷಯ ಸಾರ್ವಜನಿಕ ವಲಯಕ್ಕೆ ಬಂದ ನಂತರ, ಅದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ವರನ್ನು ಅನ್ಯರು ಎಂದು ತಳ್ಳಿಹಾಕುವುದು ಸಮಂಜಸವಲ್ಲ.
ಸ್ಥಳ ಬದಲಾಗುವುದರಿಂದ ಮಾತಿನ ಪರಿಣಾಮ ಬದಲಾಗುವುದಿಲ್ಲ; ಸಂಪ್ರದಾಯ ಬದಲಾಗುವು ದರಿಂದ ಪರಮಗುರುಗಳ ಗೌರವವೂ ಬದಲಾಗಬಾರದು. ಇಲ್ಲಿ ಕೇಳಬೇಕಾದ ಪ್ರಶ್ನೆ ಅತ್ಯಂತ ಸರಳವಾಗಿದೆ. ನಾಳೆ ಯಾವುದಾ ದರೂ ಶ್ರೀವೈಷ್ಣವ ಅಥವಾ ಸ್ಮಾರ್ತ ವ್ಯಕ್ತಿ ಶ್ರೀ ಮಧ್ವಾಚಾರ್ಯರ ಕುರಿತು ಅವಹೇಳನಕಾರಿ ಮಾತುಗಳನ್ನಾಡಿ, ನಂತರ ಇದು ನಮ್ಮ ಆಂತರಿಕ ವಿಷಯ; ಮಾಧ್ವರು ಮಾತನಾಡಬಾರದು ಎಂದರೆ ಅವರು ಅದನ್ನು ಒಪ್ಪುತ್ತಾರೆಯೇ? ಖಂಡಿತ ಇಲ್ಲ!
ಹಾಗಿದ್ದರೆ ಇದೇ ತರ್ಕವನ್ನು ಇಂತಹ ಸಂದರ್ಭದಲ್ಲೂ ಹೇಗೆ ಒಪ್ಪಬಹುದು? ಒಂದೇ ವಿಷಯಕ್ಕೆ ಎರಡು ಮಾನದಂಡಗಳು ಇರಲಾರವು. ಪರಸ್ಪರ ಗೌರವ ಏಕಮುಖವಾಗಿರಲು ಸಾಧ್ಯವಿಲ್ಲ. ಶ್ರೀ ಮಧ್ವಾಚಾರ್ಯರಿಗೆ ನಾವು ಗೌರವವನ್ನು ನಿರೀಕ್ಷಿಸುವಂತೆಯೇ, ಅದೇ ಗೌರವ ಆದಿ ಶಂಕರಾ ಚಾರ್ಯರಿಗೂ ಹಾಗೂ ಶ್ರೀ ರಾಮಾನುಜಾಚಾರ್ಯರಿಗೂ ದೊರೆಯಬೇಕು. ಇದೇ ರೀತಿ, ಇತರ ಸಂಪ್ರದಾಯಗಳ ಅನುಯಾಯಿಗಳೂ ಶ್ರೀ ಮಧ್ವಾಚಾರ್ಯರ ಬಗ್ಗೆ ಅದೇ ಗೌರವವನ್ನು ಪಾಲಿಸ ಬೇಕು.
ಇದೇ ನಿಜವಾದ ಧಾರ್ಮಿಕ ಪ್ರೌಢಿಮೆ. ಇದು ತತ್ತ್ವದ ಪ್ರಶ್ನೆಯಲ್ಲ. ಇದು ಸಂಸ್ಕಾರದ ಪ್ರಶ್ನೆ. ಆದಿ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯರು ಹಾಗೂ ಶ್ರೀ ಮಧ್ವಾಚಾರ್ಯರು ವಿಭಿನ್ನ ತತ್ತ್ವ ಗಳನ್ನು ಪ್ರತಿಪಾದಿಸಿದರು. ಅವರ ನಡುವೆ ತತ್ತ್ವಭೇದಗಳಿದ್ದವು. ಆ ಭಿನ್ನಾಭಿಪ್ರಾಯಗಳು ಭಾರತೀಯ ದಾರ್ಶನಿಕ ಪರಂಪರೆಯನ್ನು ಶ್ರೀಮಂತಗೊಳಿಸಿವೆ. ಆದರೆ ತತ್ತ್ವವನ್ನು ವಿಮರ್ಶಿಸುವು ದಕ್ಕೂ, ಪರಮಾ ಚಾರ್ಯರನ್ನು ಅವಹೇಳನ ಮಾಡುವುದಕ್ಕೂ ಮೂಲಭೂತ ವ್ಯತ್ಯಾಸವಿದೆ. ತತ್ತ್ವವನ್ನು ಖಂಡಿಸ ಬಹುದು, ವಾದಿಸಬಹುದು, ಪ್ರತಿವಾದ ಮಾಡಬಹುದು. ಆದರೆ ಪರಮಗುರು ಗಳ ಕುರಿತು ಅವಹೇ ಳನಕಾರಿ ಭಾಷೆ ಬಳಸುವುದು ಯಾವ ಸಂಪ್ರದಾಯದ ಘನತೆಯನ್ನೂ ಹೆಚ್ಚಿಸುವುದಿಲ್ಲ.
ಇನ್ನೊಂದು ಪ್ರಮುಖ ವಿಚಾರವನ್ನು ಸ್ಪಷ್ಟಪಡಿಸಬೇಕು. ಸಾರ್ವಜನಿ ಕವಾಗಿ ವಿಷಯ ಚರ್ಚೆಗೆ ಬಂದ ನಂತರ ಅದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದನ್ನು ಹಸ್ತಕ್ಷೇಪ ಎಂದು ಕರೆಯುವುದು ಸರಿಯಲ್ಲ. ಮಠದ ಆಡಳಿತದಲ್ಲಿ ಮಧ್ಯಪ್ರವೇಶ ಮಾಡುವುದು ಹಸ್ತಕ್ಷೇಪ. ಆದರೆ ಪರಸ್ಪರ ಗೌರವದ ಪ್ರಶ್ನೆಯನ್ನು ಎತ್ತುವುದು, ಅವಹೇಳನವನ್ನು ಖಂಡಿ ಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕೂ ಹೌದು, ಹೊಣೆಗಾರಿಕೆಯೂ ಹೌದು.
ಆದ್ದರಿಂದ ಟೀಕೆ ಮತ್ತು ಹಸ್ತಕ್ಷೇಪ ಎಂಬ ಎರಡು ವಿಭಿನ್ನ ಸಂಗತಿಗಳನ್ನು ಒಂದೇ ಎಂದು ಬಿಂಬಿಸುವುದು ನ್ಯಾಯಸಮ್ಮತವಲ್ಲ. ಕರ್ನಾಟಕದ ತ್ರಿಮತಸ್ಥರ ಪರಂಪರೆ ಶತಮಾನಗಳಿಂದ ಪರಸ್ಪರ ಗೌರವದ ಅಡಿಪಾಯದ ಮೇಲೆ ಬೆಳೆದಿದೆ. ಅನೇಕ ಕುಟುಂಬಗಳಲ್ಲಿ ಆದಿ ಶಂಕರಾ ಚಾರ್ಯರು, ಶ್ರೀ ರಾಮಾನುಜಾ ಚಾರ್ಯರು ಹಾಗೂ ಶ್ರೀ ಮಧ್ವಾಚಾರ್ಯರ ಬಗ್ಗೆ ಸಮಾನ ಭಕ್ತಿ ಕಾಣಬಹುದು. ತತ್ತ್ವದಲ್ಲಿ ಭಿನ್ನತೆ ಇದ್ದರೂ ಮನಸ್ಸಿನಲ್ಲಿ ದ್ವೇಷ ಇರಲಿಲ್ಲ. ಇದೇ ನಮ್ಮ ಸಂಸ್ಕೃತಿ ಯ ವೈಶಿಷ್ಟ್ಯ.
ಯಾವುದೇ ಒಂದು ಘಟನೆಯನ್ನು ನೆಪ ಮಾಡಿಕೊಂಡು ಇದು ನಮ್ಮದು-ಅದು ನಿಮ್ಮದು ಎಂಬ ವಿಭಜನಾ ಮನೋಭಾವವನ್ನು ಬೆಳೆಸುವುದು ಸಮಾಜಕ್ಕೂ, ಧರ್ಮಕ್ಕೂ, ಮುಂದಿನ ಪೀಳಿಗೆಗೂ ಒಳಿತಲ್ಲ. ಸ್ವಾಯ ತ್ತತೆ ಎಂದರೆ ಉತ್ತರದಾಯಿತ್ವದಿಂದ ಮುಕ್ತಿಯಲ್ಲ. ಪರಮಗುರುಗಳ ಬಗ್ಗೆ ಗೌರವವು ಸಂಪ್ರದಾಯದ ಗಡಿಯೊಳಗೆ ಸೀಮಿತವಾಗಿರಬಾರದು; ಅದು ಹಿಂದೂ ಸಮಾಜದ ಸಾಮಾನ್ಯ ಸಂಸ್ಕಾರವಾಗಿರಬೇಕು.
ನಾವು ಮೊದಲು ತ್ರಿಮತಸ್ಥರಲ್ಲ; ಮೊದಲು ಹಿಂದೂಗಳು. ನಮ್ಮ ಆಚಾರ್ಯರು ಮೂರು ವಿಭಿನ್ನ ಮಾರ್ಗಗಳನ್ನು ತೋರಿಸಿದ್ದಾರೆ- ಮೂರು ಶತ್ರು ಶಿಬಿರಗಳನ್ನು ನಿರ್ಮಿಸಿಲ್ಲ. ತತ್ತ್ವಭೇದಗಳು ಇರಲಿ; ವೈಮನಸ್ಸು ಬೇಡ. ವಾದ ಇರಲಿ; ಅವಹೇಳನ ಬೇಡ. ಪರಸ್ಪರ ಗೌರವ ಉಳಿಯಲಿ. ತ್ರಿಮತಸ್ಥರ ಸಾಮರಸ್ಯ ಉಳಿಯಲಿ. ಅದೇ ನಮ್ಮ ಆಚಾರ್ಯರಿಗೆ ನಾವು ಸಲ್ಲಿಸಬಹುದಾದ ನಿಜವಾದ ಗೌರವ.