Janamejaya Umarji Column: ಸಿದ್ಧಾಂತದ ಹೇರಿಕೆಗೆ ಸರಕಾರಿ ಯಂತ್ರದ ದುರ್ಬಳಕೆ
ಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳನ್ನು ನಿಷೇಧಿಸು ವಂತೆ ಮಂತ್ರಿಗಳೊಬ್ಬರು ಪತ್ರ ಬರೆದರು. ತಕ್ಷಣ ಕಾರ್ಯಪ್ರವೃತ್ತರಾದ ಮುಖ್ಯಮಂತ್ರಿಗಳು ಅದನ್ನು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಕಳುಹಿಸಿಯೂಬಿಟ್ಟರು. ಅದು ಆದೇಶವಾಗಿ ಪ್ರಕಟ ವಾಗಿಯೂ ಬಿಟ್ಟಿತು.
-
Ashok Nayak
Oct 25, 2025 9:47 AM
ಕಳಕಳಿ
ಜನಮೇಜಯ ಉಮರ್ಜಿ
ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ತಮ್ಮ ಸಿದ್ಧಾಂತ ಒಪ್ಪದವರನ್ನು ಆಡಳಿತದ ಕೋಲಿನಿಂದ ಹಣಿಯಲು ಯತ್ನಿಸುವುದು ಅಪಾಯಕಾರಿ. ಸಿದ್ಧಾಂತಪರ ಭೇದಗಳನ್ನು ಎದುರಿಸುವ ಶಕ್ತಿ ವಾದ - ಪ್ರತಿವಾದದಲ್ಲಿರಬೇಕು, ನಿಷೇಧಗಳಲ್ಲಿ ಅಲ್ಲ. ಇಲ್ಲದಿದ್ದರೆ, ಪ್ರಜಾಸತ್ತೆಯ ಹೆಸರಿನಲ್ಲಿ ಸಿದ್ಧಾಂತದ ಆಡಳಿತ ನಡೆಯುತ್ತದೆ. ಅದು ಕೇವಲ ರಾಜಕೀಯ ಜಯವಲ್ಲ, ಭಾರತದ ಸಂವಿಧಾನಾತ್ಮಕ ಮನೋಭಾವದ ಸೋಲು.
ಕಳೆದೊಂದು ವಾರದಿಂದ ಕರ್ನಾಟಕದ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿರುವ ಸುದ್ದಿಗಳೆರಡು. ಮೊದಲನೆಯದು, ಮಂತ್ರಿಗಳೊಬ್ಬರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸುವಂತೆ ಬರೆದ ಪತ್ರ, ಅದಕ್ಕೆ ಸಿಕ್ಕ ಮನ್ನಣೆ ಮತ್ತು ಜಾರಿಯಾದ ವೇಗ. ಎರಡನೆ ಯದು, ಕನೇರಿ ಮಠದ ಕಾಡಸಿದ್ದೇಶ್ವರರು ಇತ್ತೀಚೆಗೆ ಮಹಾರಾಷ್ಟ್ರದ ಜತ್ತ ತಾಲೂಕಿನ ಬೀಳೂರಿ ನಲ್ಲಿ ಆಡಿದ ಮಾತಿಗೆ ವಿಜಯಪುರ ಜಿ ಪ್ರವೇಶ ನಿರ್ಬಂಧ.
ಇವೆರಡೂ ಘಟನೆಗಳಲ್ಲಿ ಸರಕಾರದ ಭಾಗವಾಗಿರುವವರು ತೋರಿದ ಧೋರಣೆ ನೋಡಿದರೆ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿವೆ ಎಂದೆನಿಸದೆ ಇರದು. ಒಂದು ಸಿದ್ಧಾಂತದ ಅಜೆಂಡಾವನ್ನು ಜಾರಿಗೊಳಿಸಲು ಇಡೀ ಸರಕಾರಿ ಯಂತ್ರವನ್ನು ಕೆಲ ಶಕ್ತಿಗಳು ಬಳಸಿಕೊಳ್ಳುತ್ತಿವೆ ಎಂದು ಜನರು ಮಾತನಾಡಿಕೊಳ್ಳುವಂತೆ ಆಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳನ್ನು ನಿಷೇಧಿಸು ವಂತೆ ಮಂತ್ರಿಗಳೊಬ್ಬರು ಪತ್ರ ಬರೆದರು. ತಕ್ಷಣ ಕಾರ್ಯಪ್ರವೃತ್ತರಾದ ಮುಖ್ಯಮಂತ್ರಿಗಳು ಅದನ್ನು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಕಳುಹಿಸಿಯೂಬಿಟ್ಟರು. ಅದು ಆದೇಶವಾಗಿ ಪ್ರಕಟ ವಾಗಿಯೂ ಬಿಟ್ಟಿತು.
ಇದೆಲ್ಲ ಹೆಚ್ಚು ಕಡಿಮೆ ಮೂರ್ನಾಲ್ಕು ದಿನಗಳಲ್ಲಿ ಆಗಿಹೋಯಿತು. ಈ ಆದೇಶವನ್ನು ಬಳಸಿ ಕೊಂಡು ಕಲಬುರಗಿ ಜಿಲ್ಲೆಯಲ್ಲಿ ಸಾಕಷ್ಟು ಕಡೆ ವಿವಿಧ ಕಾರಣಗಳನ್ನು ಹೇಳಿ, ಉತ್ತರಕ್ಕೆ ಅವಕಾಶ ವನ್ನೂ ಕೊಡದೆ, ಪಥ ಸಂಚಲನವನ್ನು ಕೊನೆಯ ಕ್ಷಣದಲ್ಲಿ ನಿಲ್ಲಿಸಲು ಪ್ರಯತ್ನಗಳು ನಡೆದು, ಕೆಲಕಡೆ ಯಶಸ್ವಿಯೂ ಆಗಿದ್ದು ಮಾಧ್ಯಮಗಳಿಂದ ವಿದಿತವಾಗಿದೆ.
ಇದನ್ನೂ ಓದಿ: Janamejaya Umarji Column: ಶೂ ಪುರಾಣದಲ್ಲಿ ಬಯಲಾದ ಕಮ್ಯುನಿಷ್ಟರ ಹಿಪೊಕ್ರಿಸಿ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಾಲಯಗಳನ್ನು ಗುರಿಯಾಗಿಸಿ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಪ್ರತಿಭಟನೆಗಳು ನಡೆದದ್ದೂ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದೇ ಸಂದರ್ಭ ದಲ್ಲಿ ವಿಜಯಪುರ ಶಾಸಕ ಯತ್ನಾಳರೂ ಒಂದು ಪತ್ರ ಬರೆದರು. ರಾಜಕೀಯವಾಗಿ ಅದನ್ನು ಎದುರಿಸಲಾಗುತ್ತಿದೆಯೇ ಹೊರತು, ಸರಕಾರದಿಂದ ಉತ್ತರವೇನೂ ಬಂದಂತಿಲ್ಲ. ಈ ಪತ್ರ ತಟಸ್ಥ ವಾಗಿ ಕುಳಿತಿರುವುದು ಎಲ್ಲಿ? ಉತ್ತರ ಜನರಿಗೆ ಗೊತ್ತಿದೆ.
ಮೊನ್ನೆ ಬಿದ್ದ ಮಳೆಗೆ ಕಲ್ಯಾಣ ಕರ್ನಾಟಕ ತತ್ತರಿಸಿತ್ತು. ಅನ್ನ, ಆಶ್ರಯ, ಪರಿಹಾರಕ್ಕಾಗಿ ಪರದಾಡಿದ ಜನರು ಸರಕಾರದ ವೈಫಲ್ಯಕ್ಕೆ ಹಿಡಿಶಾಪ ಹಾಕುತ್ತಿದ್ದರು. ಅದೇ ಸಮಯದಲ್ಲಿ ಸಂಘದ ಸ್ವಯಂಸೇವಕರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಂತ್ರಸ್ತರ ನೆರವಿಗೆ ಟೊಂಕ ಕಟ್ಟಿ ನಿಂತಿದ್ದರು. ಪಕ್ಕದ ಸೋಲಾಪೂರ ಜಿಲ್ಲೆಯಲ್ಲಿಯ ನೆರೆ ನಿರ್ವಹಣೆಗೂ ನಮ್ಮ ನಿರ್ವಹಣೆಗೂ ವ್ಯತ್ಯಾಸ ಕಾಣುತ್ತಿತ್ತು.
ನೆರೆ ಪರಿಹಾರ ಆದ್ಯತೆ ಯಾಗಿರಬೇಕಾಗಿದ್ದರೂ ಮಂತ್ರಿಗಳು ಸಂಘವನ್ನು ನಿರ್ಬಂಧಿಸಲು ಎಲ್ಲಾ ಶಕ್ತಿ ಹಾಕುತ್ತಿರುವುದು ಏಕೆ? ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಸಂಘದ ಮೇಲಿನ ನಿರ್ಬಂಧವು ಬಿಹಾರ ಚುಣಾವಣೆಯಲ್ಲಿ ಲಾಭ ತಂದರೆ ಅದನ್ನು ಮುಖ್ಯಮಂತ್ರಿಗಳಿಗೆ, ಒಂದೊಮ್ಮೆ ಹಾನಿ ಯಾದರೆ ಅದನ್ನು ಪತ್ರ ಬರೆದ ಮಾನ್ಯ ಮಂತ್ರಿಗಳಿಗೆ ಕಟ್ಟಲು ಯೋಚಿಸಿ, ಇಷ್ಟೊಂದು ತರಾತುರಿ ಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆಯೇ? ಎಂಬಂಥ ಚರ್ಚೆಗಳು ಇನ್ನೊಂದು ಮಗ್ಗುಲಲ್ಲಿ ನಡೆದಿವೆ.
ಈ ನಡುವೆ, ಸಂಘವನ್ನು ನಿರ್ಬಂಧಿಸಲು ಮುಖ್ಯಕಾರಣ ಗಣವೇಷದ ಭಾಗವಾಗಿರುವ ‘ದಂಡ’ ಎಂದು ವಾದಿಸುವುದು ಹಾಸ್ಯಾಸ್ಪದವಾಗಿದೆ. ನಾಳೆ ಇದೇ ಜನರು, ದಂಡ ಹಿಡಿದಿದ್ದಾರೆ ಎಂಬ ಕಾರಣಕ್ಕೆ ಅಹಿಂಸಾವಾದಿ ಮಹಾತ್ಮ ಗಾಂಧಿಯವರನ್ನು ಒಪ್ಪದಿರುವ ಸ್ಥಿತಿಗೆ ಬರಬಹುದು.
ಇನ್ನೊಂದು- ಕನೇರಿ ಶ್ರೀಗಳ ಘಟನೆ. ಈ ಹಿಂದೆ ಹೇಳಿದಂತೆ ‘ಬಸವ ಸಂಸ್ಕೃತಿ ಅಭಿಯಾನ’ ನಡೆದದ್ದೇ ಪ್ರಸ್ತುತ ಕರ್ನಾಟಕದ ಸಾಂಸ್ಕೃತಿಕ ನಾಯಕನನ್ನು ವಿಜೃಂಭಿಸಲು ಮತ್ತು ಅದರ ನೀಲಿನಕ್ಷೆ ತಯಾರಾದದ್ದು ಅಲ್ಲಿಂದಲೇ. ‘ಪ್ರತ್ಯೇಕ ಧರ್ಮ’ ಎಂಬುದು ಧರ್ಮ ವಿಭಜನೆಯ ತಂತ್ರ ಎಂದು ಜನ ಅರ್ಥ ಮಾಡಿಕೊಂಡಾಗ, ‘ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ನಾವು ಹಿಂದೂಗಳು. ನಮ್ಮದು ಜೈನ, ಸಿಖ್ಖರಂತೆ ಸಂವಿಧಾನ ಮಾನ್ಯತೆ ಪಡೆಯುವ ಹೋರಾಟ’ ಎಂತಲೂ, ‘ಏನೇ ಆಗಲಿ ಲಿಂಗಾಯತ- ವೀರಶೈವ ಒಂದು’ ಎಂಬ ಅರಿವು ಜನರಿಗೆ ಬಂದದ್ದರಿಂದ, ಈಗ ಅದಕ್ಕೆ ಬೌದ್ಧ ಧರ್ಮದಂತೆ ‘ಬಸವ ಧರ್ಮ’ ಎಂಬ ಹೊಸ ಹೆಸರು ಇಟ್ಟುಕೊಂಡು, ‘ಶರಣ ಸಂಸ್ಕೃತಿ’ಯಾತ್ರೆಗೆ ಬದಲಾಗಿ ‘ಬಸವ ಸಂಸ್ಕೃತಿ ಅಭಿಯಾನ’ವು ಕಮ್ಯುನಿಸ್ಟರಿಂದ ಕರ್ನಾಟಕದಲ್ಲಿ ನಡೆದು ಮುಗಿಯಿತು.
ಮಾತೆ ಮಹಾದೇವಿಯವರ ಕಾಲದಿಂದಲೂ ಶರಣ ಮೇಳ, ಶರಣ ಸಂಸ್ಕೃತಿ ಇದ್ದದ್ದು ಈಗ ಬದಲಾಯಿತು. ಎಲ್ಲಿಯೂ ಯಡಿಯೂರಪ್ಪ, ಶೆಟ್ಟರ್, ಬೊಮ್ಮಾಯಿಯವರಂಥ ಮಾಜಿ ಮುಖ್ಯ ಮಂತ್ರಿಗಳು, ಸರಕಾರದ ಭಾಗವಾಗಿರುವ ಶಾಮನೂರು, ಖಂಡ್ರೆ, ಸಭಾಪತಿಗಳಾದ ಹೊರಟ್ಟಿ ಅವರಂಥ ಯಾವ ಘಟಾನುಘಟಿ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವ ಕಾರಣ ಸ್ಪಷ್ಟವಿತ್ತು.
ಅಭಿಯಾನದಲ್ಲಿ ಅಲ್ಲಲ್ಲಿ ಜನ ವಿಭಜನೆಯ ವಿರುದ್ಧ ಧ್ವನಿ ಎತ್ತಿದ್ದು ಸುದ್ದಿಯೂ ಆಯಿತು. ಈ ಅಭಿಯಾನದ ಹಿಂದಿನ ಹುನ್ನಾರವನ್ನು ಕನೇರಿಯ ಶ್ರೀಗಳು ಟೀಕಿಸಿದರು. ‘ಇದು ಕರ್ನಾಟಕದ ಪ್ರಸ್ತುತ ಸಾಂಸ್ಕೃತಿಕ ನಾಯಕರ ಕೃಪಾಪೋಷಿತ ಅಭಿಯಾನ’ ಎಂದರು. ಟೀಕಿಸುವ ಭರದಲ್ಲಿ ಆಡುಭಾಷೆಯಲ್ಲಿ ಎರಡು ಪದಗಳನ್ನು ಬಳಸಿಕೊಂಡರು. ಉತ್ತರ ಕರ್ನಾಟಕದ ಜನಭಾಷೆಯಲ್ಲಿ ಅವು ಸಾಮಾನ್ಯ ಶಬ್ದಗಳು. ಆ ಶಬ್ದಗಳು ಕಮ್ಯುನಿಸ್ಟ್ ಮಠಾಧಿಪತಿಗಳ ಒಕ್ಕೂಟಕ್ಕೆ ಆಕ್ರೋಶ ತರಿಸಿದವು. ರಾಜ್ಯದ ೨-೩ ಕಡೆ ಪ್ರತಿಭಟನೆಗಳೂ ನಡೆದವು.
ಬಳಸಿದ ಆ ಶಬ್ದಗಳು ಆಡುಭಾಷೆಯzಗಿದ್ದರೂ ಶೋಭೆಯಲ್ಲ ಎಂದು ಜನರಿಗೆ ಅನ್ನಿಸಿದರೂ, ಅದರ ಹೊರತು ಕನೇರಿ ಶ್ರೀಗಳು ಎತ್ತಿರುವ ಪ್ರಶ್ನೆಗಳಿಗೆ ಕಮ್ಯುನಿಸ್ಟ್ ಮಠಾಧಿಪತಿಗಳು ನೀಡಿದ ಸಮಜಾಯಿಷಿಗಳು ಜನರಿಗೆ ಸಮಂಜಸ ಎನಿಸಲಿಲ್ಲ. ಹೀಗಾಗಿ ಅವರು ಹಮ್ಮಿಕೊಂಡಿದ್ದ ಮಠಾಧಿ ಪತಿಗಳ ಪ್ರತಿಭಟನೆಗಳಿಗೆ ಜನ ಬೆಂಬಲ ಸಿಗಲಿಲ್ಲ.
ಹೊರಗೆ ವೀರಾವೇಷದಿಂದ ಮಾತನಾಡಿದ ನಾಲ್ಕು ಜನ ಹೋರಾಟಗಾರು, ತೆರೆಮರೆಯಲ್ಲಿ ಸರಕಾರಿ ಯಂತ್ರವನ್ನು ಬಳಸಿ ವಿಜಯಪುರ ಜಿಲ್ಲೆಗೆ ಶ್ರೀಗಳನ್ನು ನಿರ್ಬಂಧಿಸಿ ಅದನ್ನು ಬಾಗಲಕೋಟೆಗೂ ವಿಸ್ತರಿಸಿ ತಮ್ಮ ತನು-ಮನವ ಸಂತೈಸಿಕೊಂಡರು. ಗಲಭೆ ನಡೆಯುವ ಕಾರಣಕ್ಕೆ ನಿರ್ಬಂಧ ಎಂದರೆ, ಅವರನ್ನು ಸಮರ್ಥಿಸುವ ಸಭೆ, ಮೆರವಣಿಗೆ ನಡೆದೇ ಇರಲಿಲ್ಲ.
ಅವರ ಸುರಕ್ಷತೆಗೆ ಈ ಕ್ರಮ ಎಂದರೆ, ಗುಪ್ತಚರ ಇಲಾಖೆಗೆ ಯಾರ ಕಾರಣಕ್ಕೆ ಈ ಅಸುರಕ್ಷತೆ ಎಂಬುದು ಗೊತ್ತು ಎಂದಲ್ಲವೇ? ಶ್ರೀ ಕನೇರಿ ಸ್ವಾಮೀಜಿ ಜನಮನದಲ್ಲಿ ಪ್ರಭಾವ ಬೀರಬಲ್ಲ ಅಧ್ಯಾತ್ಮ ನಾಯಕರು, ಅವರಿಗೆ ಲಕ್ಷಾಂತರ ಅನುಯಾಯಿಗಳು ಇದ್ದಾರೆ. ಅವರ ಮಾತು ಕೇಳಲು ಸಾವಿರಾರು ಜನ ಸೇರುತ್ತಾರೆ. ಆದರೆ ಇದೇ ಭಯದಿಂದ, ಸರಕಾರವನ್ನು ಬಳಸಿಕೊಂಡು ಅವರನ್ನು ನಿರ್ಬಂಽಸಲಾಗಿದೆ ಎಂಬ ಜನಾಭಿಪ್ರಾಯವಿದೆ.
ಯತ್ನಾಳರ ಪತ್ರ ನೈಪಥ್ಯಕ್ಕೆ ಸರಿದಂತೆ, ಕಮ್ಯುನಿಸ್ಟ್ ಮಠಾಧಿಪತಿಗಳು, ಪರಮಾತ್ಮ ಶಿವನ ಬಗ್ಗೆ, ತಾಯಿ ಪಾರ್ವತಿ, ಚಾಮುಂಡಿಯರ ಬಗ್ಗೆ, ಗಣಪತಿಯ ಬಗ್ಗೆ ಆಡಿದ ಮಾತುಗಳು ಧಾರ್ಮಿಕ ಭಾವನೆಗೆ ಧಕ್ಕೆ ತರದಂತೆ ಇವೆ ಎಂದುಕೊಂಡು ನೇಪಥ್ಯಕ್ಕೆ ಸರಿದಿವೆ. ಅಂತೆಯೇ ರಾಜ್ಯದ ಪ್ರಸ್ತುತ ಸಾಂಸ್ಕೃತಿಕ ನಾಯಕರು ಈ ದೇಶದ ರಾಷ್ಟ್ರಪತಿಗಳ ಬಗ್ಗೆ ಆಡಿದ ಮಾತುಗಳೂ ಆಡುಭಾಷೆ ಅನಿಸಿಕೊಂಡು ನೇಪಥ್ಯಕೆ ಸರಿದಿವೆ.
ಕಮ್ಯುನಿಸ್ಟ್ ಪರಿಸರ ವ್ಯವಸ್ಥೆ ತನ್ನ ಸಿದ್ಧಾಂತವನ್ನು ಅನುಷ್ಠಾನಗೊಳಿಸಲು ಸರಕಾರಿ ಯಂತ್ರ ವನ್ನು ಹೇಗೆ ಬಳಸಿಕೊಳ್ಳುತ್ತದೆ ಎಂಬುದಕ್ಕೆ ಈ ಘಟನೆಗಳು ನಿದರ್ಶನ. ಪಥ ಸಂಚಲನದಲ್ಲಿ ಭಾಗವಹಿಸಿದಕ್ಕಾಗಿ ಒಬ್ಬ ಸರಕಾರಿ ನೌಕರ ಸಸ್ಪೆಂಡೂ ಆಗಿದ್ದಾನೆ. ಸರಕಾರಿ ನೀತಿಗಳನ್ನು ಸಿದ್ಧಾಂತದ ಆಯುಧವಾಗಿ ಬಳಸುವ ಪ್ರಯತ್ನ ಇದು.
ಕೆಲವು ಜನ ‘ನಿಷ್ಪಕ್ಷಪಾತ ಆಡಳಿತ’ದ ಬದಲಿಗೆ ‘ಸೈದ್ಧಾಂತಿಕ ನಿಯಂತ್ರಣ’ದ ದಿಕ್ಕಿಗೆ ಹೆಜ್ಜೆ ಇಡಲು ಸರಕಾರದ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಭಾರತದ ಕಮ್ಯುನಿಸ್ಟ್ ಚಳವಳಿಗಳು ಸರಕಾರಿ ಸಂಸ್ಥೆಗಳನ್ನು ಸಿದ್ಧಾಂತದ ವಿಸ್ತಾರ ಕೇಂದ್ರಗಳನ್ನಾಗಿ ಬಳಸುವ ನೈಪುಣ್ಯ ಹೊಂದಿದ್ದವು. ಪಶ್ಚಿಮ ಬಂಗಾಳ ಹಾಗೂ ಕೇರಳದ ಮಾದರಿಗಳು ಇದಕ್ಕೆ ಸಾಕ್ಷಿ. ಆಚಿನ್ ವನೈಕ್ ಅವರ ‘ದಿ ಇಂಡಿಯನ್ ಲೆಫ್ಟ್’ ( New Left Review, Issue 159) ಲೇಖನದಲ್ಲಿ ಹೇಳುವಂತೆ, ಪಕ್ಷದ ಯಂತ್ರವೇ ಸರಕಾರದ ಪರ್ಯಾಯ ಆಡಳಿತ ವ್ಯವಸ್ಥೆಯಾಯಿತು.
ಆ ಕಾಲದಲ್ಲಿ ಶಿಕ್ಷಕರ ಸಂಘಗಳು, ಪುರಸಭೆಗಳು, ಸರಕಾರಿ ನೌಕರ ಸಂಘಗಳು ಎಲ್ಲವೂ ಪಕ್ಷದ ಹಸ್ತಚಾಲಿತವಾಗಿದ್ದವು. ಸರಕಾರದ ನಿರ್ಧಾರ ಗಳು ಜನಪರವಾಗಿರಲಿಲ್ಲ; ಅವು ಸಿದ್ಧಾಂತಪರ ವಾಗಿದ್ದವು.
ಇಂದಿನ ಕರ್ನಾಟಕದ ಸ್ಥಿತಿ ಅದೇ ಮಾದರಿಯತ್ತ ಸಾಗುತ್ತಿದೆ. ಕೆಲವು ಎಡಪಂಥೀಯ ಬುದ್ಧಿಜೀವಿ ಗಳ ಜಾಲಗಳು ಹಾಗೂ ರಾಜ್ಯ ಸರಕಾರದ ಒಳಗಿನ ಸಿದ್ಧಾಂತಾನುಯಾಯಿಗಳು ಸಿದ್ಧಾಂತ ಹೇರುವ ಶಸವಾಗಿ ಆಡಳಿತವನ್ನು ಬಳಸುತ್ತಿದ್ದಾರೆ. ಆರೆಸ್ಸೆಸ್ ನಿಷೇಧದ ಯತ್ನವೇ ಆಗಲಿ, ಕನೇರಿ ಶ್ರೀಗಳ ನಿರ್ಬಂಧವೇ ಆಗಲಿ, ಸಿದ್ಧಾಂತ ಹೇರಿಕೆಯಲ್ಲಿ ಸರಕಾರದ ಬಳಕೆಯನ್ನು ತೋರಿಸುತ್ತವೆ. ಈ ಭಯ ಏತಕ್ಕೆ? ಜನಮಾನಸದಿಂದ, ಜನಪ್ರಿಯತೆಯಿಂದ, ಒಂದಾಗುತ್ತಿರುವ ಸಮಾಜದ ಶಕ್ತಿಯಿಂದ. ಆರೆಸ್ಸೆಸ್ ಒಂದು ಶತಮಾನದಿಂದ ಸಮಾಜಸೇವೆ ಮಾಡುತ್ತಿರುವ ಸಂಘಟನೆ. ಕನೇರಿ ಮಠವು ಭಕ್ತಿ ಹಾಗೂ ಸಮಾಜಮುಖಿ ಧಾರ್ಮಿಕ ಕೇಂದ್ರ. ಇವುಗಳ ವಿರುದ್ಧ ಕ್ರಮ ಕೈಗೊಳ್ಳುವುದು ಧರ್ಮ ನಿರಪೇಕ್ಷತೆ ಅಲ್ಲ, ಅದು ಆತ್ಮವಿಶ್ವಾಸದ ಕೊರತೆಯ ರಾಜಕೀಯ. ಸತ್ಯಸಂಧ ಸರಕಾರವು ಯಾವ ಪಕ್ಷಕ್ಕೂ, ಯಾವ ಸಿದ್ಧಾಂತಕ್ಕೂ ಅತಿಯಾದ ಪ್ರೀತಿ ಅಥವಾ ದ್ವೇಷವಿಲ್ಲದೆ ವರ್ತಿಸಬೇಕು. ಆದರೆ ಇಂದಿನ ಕ್ರಮಗಳು ಬೇರೆಯವರನ್ನು ಧಾರ್ಮಿಕ ಪ್ರಚೋದಕರು ಎಂದು ಗುರುತಿಸಿ, ತಮ್ಮ ಪಂಥದವರನ್ನು ಬುದ್ಧಿಜೀವಿಗಳು ಎಂದು ಗೌರವಿಸುವ ಹೊಸ ದ್ವಂದ್ವವನ್ನು ತೋರಿಸುತ್ತಿವೆ.
ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ತಮ್ಮ ಸಿದ್ಧಾಂತ ಒಪ್ಪದವರನ್ನು ಆಡಳಿತದ ಕೋಲಿನಿಂದ ಹಣಿಯಲು ಯತ್ನಿಸುವುದು ಅಪಾಯಕಾರಿ. ಸಿದ್ಧಾಂತಪರ ಭೇದಗಳನ್ನು ಎದುರಿಸುವ ಶಕ್ತಿ ವಾದ-ಪ್ರತಿವಾದದಲ್ಲಿರಬೇಕು, ನಿಷೇಧಗಳಲ್ಲಿ ಅಲ್ಲ. ಇಲ್ಲದಿದ್ದರೆ, ಪ್ರಜಾಸತ್ತೆಯ ಹೆಸರಿನಲ್ಲಿ ಸಿದ್ಧಾಂತದ ಆಡಳಿತ ನಡೆಯುತ್ತದೆ. ಅದು ಕೇವಲ ರಾಜಕೀಯ ಜಯವಲ್ಲ, ಭಾರತದ ಸಂವಿಧಾನಾತ್ಮಕ ಮನೋಭಾವದ ಸೋಲು.
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)