Dr Ammanjaya Suresh Column: ಕಾಯಕ-ದಾಸೋಹದಿಂದ ಜಾಗೃತಿ ಮೂಡಿಸಿದ ನುಲಿಯ ಚಂದಯ್ಯ
ಇಂದು (ಆಗಸ್ಟ್ 9) ಇಂಥ ಮಹಾನ್ ಕಾಯಕಯೋಗಿಯ 918ನೇ ಜಯಂತ್ಯುತ್ಸವವನ್ನು ಆಚರಿಸ ಲಾಗುತ್ತಿದೆ. ಕಾಯಕದ ಹಿನ್ನೆಲೆಯಲ್ಲಿ ಹೇಳಬೇಕಾದರೆ ನುಲಿಯ ಚಂದಯ್ಯನವರು ಕೊರಮ ಸಮಾಜಕ್ಕೆ ಸೇರಿದವರು. ಅಲೆಮಾರಿ ಸಮುದಾಯಕ್ಕೆ ಸೇರಿದ ಈ ಜನಾಂಗವನ್ನು ಪ್ರಾದೇಶಿಕವಾಗಿ ಕೊರವ, ಕೊರವರ್, ಕೊರಚ, ಕೊರಚರ್, ಕುಂಚಿಕೊರವ, ಭಜಂತ್ರಿ, ವಾಜಂತ್ರಿ ಎಂಬ ಹೆಸರುಗಳಿಂದ ಕರೆಯ ಲಾಗುತ್ತದೆ.


ತನ್ನಿಮಿತ್ತ
ಡಾ.ಅಮ್ಮಸಂದ್ರ ಸುರೇಶ್
ನುಲಿಯ ಚಂದಯ್ಯನವರು ಮತ್ತು ಮಡಿವಾಳ ಮಾಚಿದೇವರು ಸೇರಿದಂತೆ ಹಲವರು ಕಲ್ಯಾಣದಲ್ಲಿ ನಡೆದಂಥ ಅಭೂತಪೂರ್ವ ಶರಣ ಚಳವಳಿಯಲ್ಲಿ ಪಾಲ್ಗೊಂಡರು; ಕಾಯಕ ವನ್ನೇ ನಂಬಿ ಬದುಕಿದ ಆಯ್ದಕ್ಕಿ ಮಾರಯ್ಯನವರದ್ದು ಒಂದು ಎತ್ತರವಾದರೆ, “ಕಾಡಿನ ಸೊಪ್ಪಾಯಿತ್ತಾದಡೂ ಕಾಯಕದಿಂದ ಬಂದುದು ಲಿಂಗಾರ್ಪಿತ" ಎಂದು ಬಾಳಿ ಬದುಕಿ ದಾರಿ ತೋರಿದ ನುಲಿಯಚಂದಯ್ಯನವರದ್ದು ಮತ್ತೊಂದು ಎತ್ತರ
"ಕೆರೆಯ ಹಿನ್ನಿರ ದಡದಲ್ಲಿ ಬೆಳೆದ ಸೊಗಸಾದ ಹುಲ್ಲು ತಂದು ಹಗ್ಗ ಹೊಸೆದು (ನೂಲುವ ವೃತ್ತಿ), ಅದನ್ನು ಮಾರಿ ಬಂದ ಹಣದಿಂದ ಕಲ್ಯಾಣದಲ್ಲಿ ‘ಜಂಗಮ ದಾಸೋಹ’ ನಡೆಸುತ್ತಿದ್ದ ನುಲಿಯ ಚಂದಯ್ಯ ಒಬ್ಬ ಕಾಯಕಯೋಗಿ. ಶೂನ್ಯಸಂಪಾದನೆ ಮತ್ತು ಪುರಾಣಗಳಲ್ಲಿ ಈತನ ಕಾಯಕ ನಿಷ್ಠೆಯ ಕಥೆ ವರ್ಣಿತವಾಗಿದೆ. ಅಲೆಮಾರಿ ಸಮುದಾಯವಾದ ಕುಳುವ ಜನಾಂಗದವರು ನುಲಿಯ ಚಂದಯ್ಯನನ್ನು ತಮ್ಮ ಮೂಲಪುರುಷನೆಂದು ಒಪ್ಪಿ ಅಪ್ಪಿಕೊಂಡಿದ್ದಾರೆ.
ಇಂದು (ಆಗಸ್ಟ್ 9) ಇಂಥ ಮಹಾನ್ ಕಾಯಕಯೋಗಿಯ 918ನೇ ಜಯಂತ್ಯುತ್ಸವವನ್ನು ಆಚರಿಸ ಲಾಗುತ್ತಿದೆ. ಕಾಯಕದ ಹಿನ್ನೆಲೆಯಲ್ಲಿ ಹೇಳಬೇಕಾದರೆ ನುಲಿಯ ಚಂದಯ್ಯನವರು ಕೊರಮ ಸಮಾಜಕ್ಕೆ ಸೇರಿದವರು. ಅಲೆಮಾರಿ ಸಮುದಾಯಕ್ಕೆ ಸೇರಿದ ಈ ಜನಾಂಗವನ್ನು ಪ್ರಾದೇಶಿಕವಾಗಿ ಕೊರವ, ಕೊರವರ್, ಕೊರಚ, ಕೊರಚರ್, ಕುಂಚಿಕೊರವ, ಭಜಂತ್ರಿ, ವಾಜಂತ್ರಿ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ.
ಇವರು ತಮಿಳು ಭಾಷೆಯನ್ನು ಹೋಲುವ ಕುಳವ (ಕುಳಿರ್) ಭಾಷೆಯನ್ನು ಆಡುವುದರಿಂದ ಪ್ರಮುಖವಾಗಿ ಕುಳವ ಸಮಾಜದವರೆಂದು ಗುರುತಿಸಿಕೊಳ್ಳಬಯಸುತ್ತಾರೆ. ಸಾತಪಾಡಿ (ಜಾದವ), ಕಾವಾಡಿ (ಮಾನೆ), ಮೇನ್ಪಾಡಿ (ಮಾನ್ಪಡೆ), ಮೇಂಡ್ರಗುತ್ತಿ ಇವು ಇವರಲ್ಲಿನ ಪ್ರಮುಖವಾದ ನಾಲ್ಕು ಬೆಡಗುಗಳು. ಬಿದಿರು ಬುಟ್ಟಿ, ಚಂದ್ರಿಕೆ, ಬಿದಿರಿನ ಆಲಂಕಾರಿಕ ಉತ್ಪನ್ನಗಳು, ತಟಿಗೆ (ತಟ್ಟಿ), ಈಚಲು ಬುಟ್ಟಿ, ಹೆಣಿಕೆ, ಪೊರಕೆ, ಚಾಪೆ, ಗಿಲಕಿ ತಯಾರಿಸುವುದು, ಮೆದೆ ಹುಲ್ಲಿನಿಂದ ಕಣ್ಣಿ, ಹಗ್ಗ ತಯಾರಿಸುವುದು, ಬಾಜಾಭಜಂತ್ರಿ, ಮಂಗಳವಾದ್ಯ (ಸನಾದಿ) ನುಡಿಸುವುದು, ಕಣಿ ಹೇಳುವುದು, ಮೋಡಿ ಆಟ, ಕೋಲೆ ಬಸವ, ತೊಟ್ಟಿಲು, ಏಣಿ, ಮೊರ ತಯಾರಿಸುವುದು, ಚಿಂದಿ ಆಯುವುದು, ಹಂದಿ ಸಾಕಾಣಿಕೆ, ತಲೆಕೂದಲು ಸಂಗ್ರಹಿಸುವುದು, ಹಚ್ಚೆ ಹಾಕುವುದು, ಪಾತ್ರೆ, ಬಟ್ಟೆ, ಬೀದಿ ಬದಿ ಬಾಚಣಿಕೆ, ಕನ್ನಡಿ, ಬೀಗ ಮುಂತಾದ ಸ್ಟೇಷನರಿ ವಸ್ತುಗಳ ಮಾರಾಟ ಮಾಡುವುದು ಸೇರಿದಂತೆ ವಿವಿಧ ವೃತ್ತಿಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿರುವ ಈ ಸಮುದಾಯದ ಜನರು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಹಿಂದುಳಿದಿದ್ದಾರೆ.

ಕ್ರಿ.ಶ.1107ರಲ್ಲಿ ಬಿಜಾಪುರ ಜಿಲ್ಲೆಯ ಹಿರೆ ಶಿವಣಗಿ ಗ್ರಾಮದಲ್ಲಿ ಜನಿಸಿದ ನುಲಿಯ ಚಂದಯ್ಯ ನವರು ಬಸವಣ್ಣನವರ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಕ್ರಿ.ಶ.1160ರಲ್ಲಿ ಕಲ್ಯಾಣದ ಶಿವಾನುಭವ ಮಂಟಪವನ್ನು ಸೇರಿಕೊಂಡು ಚಂದೇಶ್ವರಲಿಂಗ ಎಂಬ ಅಂಕಿತನಾಮದೊಂದಿಗೆ ವಚನಗಳನ್ನು ಬರೆಯುತ್ತಿದ್ದರು.
ಇದುವರೆಗೂ ಅವರ 48ಕ್ಕೂ ಹೆಚ್ಚು ವಚನಗಳು ದೊರೆತಿವೆ. ಜಂಗಮ, ದಾಸೋಹ ಮತ್ತು ಕಾಯ ಕನಿಷ್ಠೆ ಚಂದಯ್ಯನವರ ವಚನಗಳ ಸಾರ. ಬಸವಣ್ಣನವರ ಸಮಕಾಲೀನರಾಗಿದ್ದ ನುಲಿಯ ಚಂದಯ್ಯನವರು ಕಾಯಕ ಮತ್ತು ದಾಸೋಹದ ಮೂಲಕ ಸಮಾಜದಲ್ಲಿ ಜಾಗೃತಿಯನ್ನು ಉಂಟುಮಾಡಿದವರಲ್ಲಿ ಪ್ರಮುಖರು.
12ನೇ ಶತಮಾನದಲ್ಲಿ ಯಾವುದೇ ಯಂತ್ರಗಳಿರಲಿಲ್ಲ. ಯಾವುದೇ ಔದ್ಯೋಗಿಕ ಕ್ರಾಂತಿಯೂ ನಡೆಯಲಿಲ್ಲ. ಪ್ರತಿಯೊಬ್ಬ ಕಾಯಕಜೀವಿ ಸ್ವತಂತ್ರವಾಗಿ ವಸ್ತುಗಳನ್ನು ಉತ್ಪಾದನೆ ಮಾಡುತ್ತಿದ್ದರು ಅಥವಾ ಆ ವೃತ್ತಿಯಲ್ಲಿ ತೊಡಗಿರುತ್ತಿದ್ದರು. ಹೀಗಾಗಿ ಕಾಯಕಜೀವಿಗಳು ಒಂದು ವರ್ಗವಾಗಿ ರೂಪುಗೊಳ್ಳುವ ಯಾವುದೇ ಸಾಧ್ಯತೆ ಇರಲಿಲ್ಲ. ಕಂಬಾರರು, ಕುಂಬಾರರು, ಸುಣಗಾರರು, ಬಣಗಾರರು, ಅಕ್ಕಸಾಲಿಗರು, ಬಡಿಗರು, ಮಡಿವಾಳರು ಮುಂತಾದ ಕಾಯಕಜೀವಿಗಳು ಜಾತಿ ಗುಂಪುಗಳಾಗಿ ಬದುಕುತ್ತಿದ್ದರು.
ಇದನ್ನೂ ಓದಿ: Arun Joshi Column: ದೇಶ ರಕ್ಷಣೆ: ಅಹಿಂಸೆ ಎಂಬ ಭ್ರಮೆಗೆ ತಿಲಾಂಜಲಿ
ಔದ್ಯೋಗಿಕ ಕ್ರಾಂತಿಯಂಥ ವಾತಾವರಣವಿಲ್ಲದೆ ದುಡಿಯುವ ವರ್ಗ ಒಂದಾಗಲು ಸಾಧ್ಯವಿಲ್ಲ. ಅದರಲ್ಲೂ ಭಾರತದಂಥ, ಜಾತಿ-ಉಪಜಾತಿಗಳಿಂದ ತುಂಬಿದ ದೇಶದಲ್ಲಿ ಆ ರೀತಿಯ ಕನಸು ಕಾಣಲು ಕೂಡ ಸಾಧ್ಯವಿಲ್ಲ! ಇಂಥ ಕಠಿಣ ಪರಿಸ್ಥಿತಿಯಲ್ಲಿ ಬಸವಣ್ಣನವರು ಕಾಯಕಜೀವಿಗಳ ಜಾತಿ ಸಂಕರವಾಗಿಸಿ ಅವರನ್ನು ಒಂದು ವರ್ಗವಾಗಿ ರೂಪಿಸಿ ಶರಣಸಂಕುಲವೆಂಬ ನವಸಮಾಜ ನಿರ್ಮಾಣ ಮಾಡಿದ್ದು ವಿಶ್ವದ ಇತಿಹಾಸದಲ್ಲಿ ಚರಿತ್ರಾರ್ಹ ದಾಖಲೆಯಾಗಿದೆ.
ಕಾಯಕಕ್ಕೆ ಅಂಟಿದ ಜಾತಿಯ ವಿಷವನ್ನು ತೆಗೆದು ಹಾಕಿದ ಬಸವಣ್ಣನವರು, ಸಮಗಾರಿಕೆ, ಕಂಬಾರಿಕೆ, ಕುಂಬಾರಿಕೆ ಮುಂತಾದವು ಜಾತಿಗಳಲ್ಲ, ಕಾಯಕಗಳು ಎಂಬುದನ್ನು ಎತ್ತಿ ತೋರಿಸಿ ದರು. ಎಲ್ಲಾ ಕಾಯಕಗಳು ಮತ್ತು ಸೇವೆಗಳಿಗೆ ಸಮಾನ ಸ್ಥಾನ ಕಲ್ಪಿಸಿದರು. ಮನುವಾದಿ ಚಾತು ರ್ವರ್ಣ ಪದ್ಧತಿಯಲ್ಲಿ ಕಟ್ಟಕಡೆಯವರಾದ ಶೂದ್ರರು ಮತ್ತು ಅತಿಶೂದ್ರರು ಬಸವಣ್ಣನವರ ಮಾನವವಾದಿ ಪದ್ಧತಿಯಲ್ಲಿ ಮೊದಲಿಗರಾದರು. ಕಟ್ಟಕಡೆಯ ಮನುಷ್ಯರನ್ನು ಮೊಟ್ಟಮೊದಲ ಬಾರಿಗೆ ಗುರುತಿಸಿದ ಬಸವಣ್ಣನವರು ತೆಗೆದುಕೊಂಡ ಕ್ರಮಗಳು ಎಲ್ಲ ತೆರನಾದ ಕಾಯಕಜೀವಿಗಳಿಗೆ ಒಪ್ಪಿಗೆಯಾಗಿತ್ತು.
ಈ ಜಗತ್ತಿಗೆ ಅವಶ್ಯವಾದ ಯಾವ ಕೆಲಸವೂ ಕಡಿಮೆಯದ್ದಲ್ಲ ಎಂಬುದರ ಅರಿವಿನೊಂದಿಗೆ ‘ಒಬ್ಬನೇ ಸೃಷ್ಟಿಕರ್ತ, ಒಂದೇ ಸೃಷ್ಟಿ ಮತ್ತು ಒಂದೇ ಮಾನವಕುಲ ಇರುವಾಗ ವರ್ಗಗಳು, ಜಾತಿಗಳು, ವರ್ಣಗಳು ಮತ್ತು ಅಸ್ಪಶ್ಯತೆ ಮಾನವ ನಿರ್ಮಿತ’ ಎಂಬ ಬಸವವಾದಕ್ಕೆ ಸಕಲ ಜನಸಮುದಾಯ ಸ್ಪಂದಿಸಿತು. ಈ ವಾದವು ನಿಜವಾದ ಅರ್ಥದಲ್ಲಿ ತುಳಿತಕ್ಕೆ ಒಳಗಾದ ಎಲ್ಲಾ ಕಾಯಕಜೀವಿಗಳ ಮನದಾಳದ ಅನಿಸಿಕೆಯೇ ಆಗಿತ್ತು.
ಕನ್ನಡ ನಾಡಿನಲ್ಲಿ 12ನೇ ಶತಮಾನದಲ್ಲಿ ಸಂಭವಿಸಿದ ವಚನ ಚಳವಳಿಗೆ ಅತ್ಯಂತ ಮಹತ್ವವಿದೆ. ದಲಿತರು, ಹಿಂದುಳಿದವರು, ಮಹಿಳೆಯರು ಹೀಗೆ ಒಟ್ಟಾರೆ ದುಡಿಯುವ ಬಡಜನರನ್ನು ಈ ಚಳವಳಿ ಕಾಯಕ ಸಿದ್ಧಾಂತದ ಮೂಲಕ ಎತ್ತಿಹಿಡಿಯಿತು. ಕೆಳಜಾತಿ, ಕೆಳವರ್ಗದವರನ್ನು ಶೋಷಿಸುವ ಮನುವಾದಿ ವ್ಯವಸ್ಥೆಯನ್ನು ಖಂಡಿಸಿದ ವಚನ ಚಳವಳಿ ವರ್ಗವು, ವರ್ಣ, ಜಾತಿ, ಮತ್ತು ಲಿಂಗಭೇದದ ಸಮಾಜದಲ್ಲಿ ಲಕ್ಷಗಟ್ಟಲೆ ದುಡಿಯುವ ಜನರನ್ನು ಬಸವಪಥದಲ್ಲಿ ಮುನ್ನಡೆಸಿ ಹೊಸ ವ್ಯವಸ್ಥೆಗೆ ನಾಂದಿ ಹಾಡಿತು.
ಅಲ್ಲಮ, ಸಿದ್ಧರಾಮ, ಮಡಿವಾಳ ಮಾಚಿದೇವ, ಅಂಬಿಗರ ಚೌಡಯ್ಯ, ಅಕ್ಕಮಹಾದೇವಿಯಂಥ ಸಹಸ್ರಾರು ಜ್ಞಾನಿಗಳ ಜತೆ ಧೀರರು, ಸ್ಪಷ್ಟವಾದಿಗಳು ಮತ್ತು ಜ್ಞಾನಿಗಳು ಆಗಿದ್ದಂಥ ನುಲಿಯ ಚಂದಯ್ಯನವರು ಕೂಡ ಬಂದು ಸೇರಿಕೊಂಡಿದ್ದರು. ನುಲಿಯ ಚಂದಯ್ಯನವರು ಇತರ ಕಾಯಕಜೀವಿಗಳ ಜತೆ ಕಲ್ಯಾಣದಲ್ಲಿ ಇದ್ದ ಸಂದರ್ಭದಲ್ಲಿ ದುಡಿಯುವ ವರ್ಗದ ನಾಯಕತ್ವದಲ್ಲಿ ನವಸಮಾಜ ವೊಂದರ ನಿರ್ಮಾಣ ಮಾಡಬೇಕೆಂಬ ನಿಟ್ಟಿನಲ್ಲಿ ರೂಪುರೇಷೆಗಳನ್ನು ರಚಿಸುವಲ್ಲಿ ಬಸವಣ್ಣನವರು ತಲ್ಲೀನರಾಗಿದ್ದರು.
ಇಂಥ ಸಂದರ್ಭದಲ್ಲಿ ನುಲಿಯ ಚಂದಯ್ಯನವರು ಮತ್ತು ಮಡಿವಾಳ ಮಾಚಿದೇವರು ಸೇರಿದಂತೆ ಹಲವರು ಕಲ್ಯಾಣದಲ್ಲಿ ನಡೆದಂಥ ಅಭೂತಪೂರ್ವ ಶರಣ ಚಳವಳಿಯಲ್ಲಿ ಪಾಲ್ಗೊಂಡರು; ಕಾಯಕವನ್ನೇ ನಂಬಿ ಬದುಕಿದ ಆಯ್ದಕ್ಕಿ ಮಾರಯ್ಯನವರದ್ದು ಒಂದು ಎತ್ತರವಾದರೆ, “ಕಾಡಿನ ಸೊಪ್ಪಾಯಿತ್ತಾದಡೂ ಕಾಯಕದಿಂದ ಬಂದುದು ಲಿಂಗಾರ್ಪಿತ" ಎಂದು ಬಾಳಿ ಬದುಕಿ ದಾರಿ ತೋರಿದ ನುಲಿಯಚಂದಯ್ಯನವರದ್ದು ಮತ್ತೊಂದು ಎತ್ತರ.
ಒಮ್ಮೆ ಹುಲ್ಲು ಕೊಯ್ಯುತ್ತಿರುವಾಗ ನುಲಿಯ ಚಂದಯ್ಯನವರ ಇಷ್ಟಲಿಂಗವು ಕೆಳಕ್ಕೆ ಬಿದ್ದು ಉರುಳಿಹೋಯಿತು. ಚಂದಯ್ಯ ಅದನ್ನು ಅದರ ಪಾಡಿಗೆ ಬಿಟ್ಟು, ಕೆಲಸ ಮುಗಿಯುತ್ತಲೆ ಮನೆಗೆ ಹಿಂದಿರುಗಿದರು. ಲಿಂಗವು ಬೇಡಿಕೊಂಡರೂ ಅದನ್ನು ಧರಿಸಲಿಲ್ಲ. ಆಗ ಅದು ಚರಮೂರ್ತಿ ರೂಪದಿಂದ ಆತನನ್ನೆ ಹಿಂಬಾಲಿಸಿದಾಗ ತನ್ನ ಕಾಯಕವನ್ನು ಕೈಗೊಳ್ಳುವಂತಿದ್ದರೆ ಮಾತ್ರ ತನ್ನನ್ನು ಹಿಂಬಾಲಿಸಬೇಕೆಂದು ಆಜ್ಞೆ ಮಾಡಿದರು.
ಆತನ ಆಜ್ಞೆಯಂತೆ ಚರಮೂರ್ತಿರೂಪದ ಪರಶಿವನು ಹಗ್ಗವನ್ನು ಹೊಸೆಯುವ ಕೆಲಸಕ್ಕೆ ಮುಂದಾಗುತ್ತನೆ. ಒಮ್ಮೆ ಅಪ್ಪ ಬಸವಣ್ಣನವರ ಮನೆಗೆ ಹೋಗಿ ಹಗ್ಗ ಮಾರಾಟ ಮಾಡಿ ಸಾವಿರ ಹೊನ್ನನ್ನು ತಂದಾಗ ಚಂದಯ್ಯನವರು ಅದನ್ನು ಸ್ವೀಕರಿಸದೆ ಕೋಪಗೊಂಡು ‘ಒಂದು ಹಗ್ಗಕ್ಕೆ ಯಾರೋ ಸಾವಿರ ಹೊನ್ನು ಕೊಟ್ಟರೆಂದು ಅದನ್ನು ಹೊತ್ತು ತರಲು ನಿನಗೆ ಬುದ್ಧಿ ಕೆಟ್ಟಿದೆಯೆ ಲಿಂಗಯ್ಯ?’ ಎಂದು ಹೇಳುವ ಮೂಲಕ ಕಾಯಕಕ್ಕೆ ಸಮನಾದ ಕೂಲಿಯನ್ನು ಪಡೆಯಬೇಕಲ್ಲದೆ ದುರಾಸೆ ಪಡಬಾರದು ಎಂಬ ಕಾಯಕ ನಿಷ್ಠೆಯನ್ನು ಮೆರೆಯುತ್ತಾರೆ.
ಈ ಉಲ್ಲೇಖನವನ್ನು ಶೂನ್ಯ ಸಂಪಾದನೆಯಲ್ಲಿ ಕಾಣಬಹುದು. ಗುರು, ಲಿಂಗ, ಜಂಗಮ ಎಲ್ಲರಿಗೂ ಕಾಯಕ ಕಡ್ಡಾಯ. ಭಾವಶುದ್ಧವಾಗಿ ಮಾಡುವುದೇ ನಿಜವಾದ ಕಾಯಕ ಎಂಬ ಕಾಯಕ ಮೌಲ್ಯವನ್ನು ಪ್ರತಿಪಾದಿಸುವ ಮಾತುಗಳಲ್ಲಿ ನುಲಿಯ ಚಂದಯ್ಯನವರ ಕಾಯಕದ ಪರಿಕಲ್ಪನೆ ಸ್ಪಷ್ಟವಾಗಿ ಕಾಣುತ್ತದೆ.
ಸಮಗಾರ ಹರಳಯ್ಯನ ಮಗ ಶೀಲವಂತ ಹಾಗೂ ಬ್ರಾಹ್ಮಣ ಜಾತಿಗೆ ಸೇರಿದ ಮಧುವರಸನ ಮಗಳು ಲಾವಣ್ಯಳ ಅಂತರ್ಜಾತಿ ವಿವಾಹದ ನಂತರ ಕಲ್ಯಾಣದಲ್ಲಿ ದೊಡ್ಡ ಗಲಭೆ ಉಂಟಾಗುತ್ತದೆ. ಹಲವು ಶರಣರ ಕಗ್ಗೊಲೆಗಳು ನಡೆಯುತ್ತವೆ. ಉಳಿದ ಶರಣರು ಉಳವಿಯ ಕಡೆ ಧಾವಿಸುತ್ತಾರೆ. ಅಲ್ಲಿ ಚನ್ನಬಸವಣ್ಣನವರ ಮರಣದ ನಂತರ ನುಲಿಯ ಚಂದಯ್ಯ, ಅಕ್ಕನಾಗಮ್ಮ, ರುದ್ರಮುನಿ ಸೇರಿದಂತೆ ಹಲವು ಶರಣರು ಶಿವಮೊಗ್ಗ ಜೆಲ್ಲೆಯ ಗೋಣಿಬೀಡಿಗೆ ಬರುತ್ತಾರೆ.
ಕಲ್ಯಾಣದ ಕ್ರಾಂತಿಯ ನಂತರ ವಚನದ ಕಟ್ಟುಗಳನ್ನು ರಕ್ಷಣೆ ಮಾಡುವಲ್ಲಿ ನುಲಿಯ ಚಂದಯ್ಯ ನವರ ಪಾತ್ರ ಅಮೋಘವಾದುದು. ಚಂದಯ್ಯನವರು ವೀರಗುಣಗಳನ್ನು ಹೊಂದಿದ 16 ಗಣಗಳಲ್ಲಿ ಒಬ್ಬರಾಗಿದ್ದಾರೆ ಎಂಬ ವಿಚಾರ ಪಾಲ್ಕುರಿಕೆ ಸೋಮನಾಥನ ‘ಬಸವ ಪುರಾಣ’ದಲ್ಲಿ ಉಲ್ಲೇಖ ವಾಗಿದೆ. ಈ 16 ಗಣಗಳಿಗೆ ಷೋಡಷರು ಎಂದು ಕರೆಯುತ್ತಾರೆ. ಹೊನ್ನಯ್ಯ, ಪಾಂಡ್ಯ ನಾಯಕ, ಗುಡ್ಡವ್ವೆ, ಕಿನ್ನರಿಯ ಬ್ರಹ್ಮಯ್ಯ, ಕೇತಲದೇವಿ, ಚಂದಯ್ಯ, ಬೀರದೇವಯ್ಯ, ಬಿಜ್ಜಯ್ಯ, ಕಂದುಲಿಗೆ ನಾಗಿದೇವಯ್ಯ, ಕಾಳವ್ವೆ, ಪಡಿಹಾರಿ ಸೋಮಿದೇವ, ಚಿಕ್ಕುಲಿಗೆ ನಾಗಯ್ಯ, ಸಿನನಾಥ, ದೇವರಬಾ ಚಯ್ಯ, ಹೂವಿನ ಬಾಚಿದೇವಿ ಮತ್ತು ಬಾಚಲದೇವಿ ಎಂಬುವವರು ಷೋಡಶಗಣಗಳು ಎಂದು ಪಾಲ್ಕುರಿಕೆ ಸೋಮನಾಥ ಉಲ್ಲೇಖಿಸಿದ್ದಾನೆ.
ನುಲಿಯ ಚಂದಯ್ಯನವರು 12ನೇ ಶತಮಾನದ 770 ಅಮರಗಣಗಳಲ್ಲಿ ಒಬ್ಬರಾಗಿದ್ದಾರೆ. ಧರಣಿ ಯೊಳು ಷೋಡಷ ಗಣಂಗಳ ನಿರತವೀರತೆಗೊಲಿದು ಬ್ರಹ್ಮೇಶ್ವರನು ನೆಲೆಗೊಂಡಿದ್ದನಲ್ಲಾ ಪೀಠಮಧ್ಯದಲ್ಲಿ" ಎಂದು ಭೀಮಕವಿ ಬಸವಪುರಾಣದಲ್ಲಿ ವರ್ಣಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ರಾಮಗಿರಿ ಸಮೀಪದ ಪದ್ಮಾವತಿ ಗ್ರಾಮದಲ್ಲಿ ಸುಮಾರು ಕ್ರಿ.ಶ.೧೧೮೨ರಲ್ಲಿ ಲಿಂಗೈಕ್ಯರಾದ ನುಲಿಯ ಚಂದಯ್ಯನವರು ಕಾಯಕ, ದಾಸೋಹ, ತತ್ವನಿಷ್ಠೆ ಹಾಗೂ ತಮ್ಮ ಅಮೂಲ್ಯ ವಚನಗಳ ಮೂಲಕ ಜಗತ್ತಿಗೆ ಅರಿವಿನ ಬೆಳಕನ್ನು ನೀಡಿದರು.
(ಲೇಖಕರು ಹಿರಿಯ ಪತ್ರಕರ್ತರು)