ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Dr Vijay Darda Column: ಒಂದೆಡೆ ನಾಯಕತ್ವ ಶೂನ್ಯ, ಇನ್ನೊಂದೆಡೆ ದಾಖಲೆ ಅಬ್ಬರ

ಮೋದಿಯವರ ಟೀಕಾಕಾರರು ‘ಅರೇ, ಪಂಡಿತ್ ಜವಹರಲಾಲ್ ನೆಹರು ಅವರು 1947ರಿಂದ ಆರಂಭಿಸಿ 1952ರ ವರೆಗೆ ಅಧಿಕಾರ ನಡೆಸಿದ್ದಾರಲ್ಲ? ಅದು ಮೋದಿಗಿಂತ ದೀರ್ಘ ಅಧಿಕಾರಾ ವಧಿಯಲ್ಲವೇ?’ ಎಂದು ಪ್ರಶ್ನಿಸುತ್ತಿದ್ದಾರೆ. 1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದರೂ ಆ ವರ್ಷ ಸಾರ್ವತ್ರಿಕ ಚುನಾವಣೆಯನ್ನು ನಡೆಸಿರಲಿಲ್ಲ. ಪಂಡಿತ್ ನೆಹರು ಅವರು ನೂತನ ಸ್ವತಂತ್ರ ದೇಶದ ಸರಕಾರದ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಂಡಿದ್ದರೇ ಹೊರತು ಜನರಿಂದ ಚುನಾಯಿತ ರಾಗಿರಲಿಲ್ಲ

ಒಂದೆಡೆ ನಾಯಕತ್ವ ಶೂನ್ಯ, ಇನ್ನೊಂದೆಡೆ ದಾಖಲೆ ಅಬ್ಬರ

-

ಸಂಗತ

ಭಾರತದ ರಾಜಕಾರಣ ಬಹಳ ಅದ್ಭುತ. ಕಳೆದ ವಾರ ಎರಡು ಪ್ರಮುಖ ಘಟನೆಗಳು ಏಕಕಾಲಕ್ಕೆ ಅನಾವರಣಗೊಂಡವು. ನೀವೂ ಅವುಗಳನ್ನು ನೋಡಿದ್ದೀರಿ. ಒಂದೆಡೆ, ಭಾರತದ ಇತಿಹಾಸದಲ್ಲಿ ಅತ್ಯಂತ ಸುದೀರ್ಘ ಅಽಕಾರ ನಡೆಸಿದ ಚುನಾಯಿತ-ಪ್ರಧಾನಿ ಎಂಬ ದಾಖಲೆಯನ್ನು ನರೇಂದ್ರ ಮೋದಿ ನಿರ್ಮಿಸಿದರು. ಅಭಿನಂದನೆಗಳು ಮೋದಿಜೀ! ಇನ್ನೊಂದೆಡೆ, ನಾನು ರಾಹುಲ್ ಗಾಂಧಿ ಯವರಿಗೂ ಅಭಿನಂದನೆ ಸಲ್ಲಿಸಲು ಕಾಯುತ್ತಿದ್ದೆ. ಇಂಡಿಯಾ ಒಕ್ಕೂಟ ಎಂದೇ ಪ್ರಸಿದ್ಧವಾಗಿರುವ ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲಯೆನ್ಸ್‌ನಲ್ಲಿರುವ 25 ರಾಜಕೀಯ ಪಕ್ಷಗಳು ರಾಹುಲ್‌ರನ್ನು ಅಧಿಕೃತವಾಗಿ ತಮ್ಮ ನಾಯಕ ಎಂದು ಘೋಷಿಸುತ್ತವೆ ಎಂದು ಕೊಂಡಿದ್ದೆ. ಆದರೆ ಅದು ಆಗಲಿಲ್ಲ!

ಮೋದಿಯವರ ಟೀಕಾಕಾರರು ‘ಅರೇ, ಪಂಡಿತ್ ಜವಹರಲಾಲ್ ನೆಹರು ಅವರು 1947ರಿಂದ ಆರಂಭಿಸಿ 1952ರ ವರೆಗೆ ಅಧಿಕಾರ ನಡೆಸಿದ್ದಾರಲ್ಲ? ಅದು ಮೋದಿಗಿಂತ ದೀರ್ಘ ಅಧಿಕಾರಾ ವಧಿಯಲ್ಲವೇ?’ ಎಂದು ಪ್ರಶ್ನಿಸುತ್ತಿದ್ದಾರೆ. 1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದರೂ ಆ ವರ್ಷ ಸಾರ್ವತ್ರಿಕ ಚುನಾವಣೆಯನ್ನು ನಡೆಸಿರಲಿಲ್ಲ. ಪಂಡಿತ್ ನೆಹರು ಅವರು ನೂತನ ಸ್ವತಂತ್ರ ದೇಶದ ಸರಕಾರದ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಂಡಿದ್ದರೇ ಹೊರತು ಜನರಿಂದ ಚುನಾಯಿತ ರಾಗಿರಲಿಲ್ಲ. ನಮ್ಮ ದೇಶದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದಿದ್ದು 1952ರಲ್ಲಿ. ಆಗ ನೆಹರು ಮೊದಲ ಬಾರಿ ಚುನಾಯಿತ ಪ್ರಧಾನಿಯಾದರು. ಆದ್ದರಿಂದ ಮೋದಿ ಬೆಂಬಲಿಗರು ತಮ್ಮ ನಾಯಕ ಈ ದೇಶದಲ್ಲಿ ದೀರ್ಘಾವಧಿ ಅಧಿಕಾರ ನಡೆಸಿದ ಚುನಾಯಿತ-ಪ್ರಧಾನಿ ಎಂದು ಹೇಳು ತ್ತಾರೆಯೇ ಹೊರತು ದೀರ್ಘಾವಧಿಯ ಪ್ರಧಾನಿ ಎಂದು ಹೇಳುವುದಿಲ್ಲ. ಇದೂ ಸರಿಯೇ. ಈ ದೃಷ್ಟಿಯಿಂದ ನೋಡಿದಾಗ ವಿರೋಧ ಪಕ್ಷಗಳ ಆಕ್ಷೇಪ ಕೇವಲ ರಾಜಕೀಯ ಹಳಹಳಿಕೆಯಷ್ಟೇ ಆಗುತ್ತದೆ.

ಅಫ್‌ʼಕೋರ್ಸ್, ರಾಜಕಾರಣದಲ್ಲಿ ಇಂತಹ ಚರ್ಚೆ, ವಿವಾದಗಳು ಅತ್ಯಂತ ಸಹಜ. ಪ್ರತಿಯೊಂದು ರಾಜಕೀಯ ಗುಂಪಿಗೂ ತನ್ನದೇ ಆದ ಲೆಕ್ಕಾಚಾರ, ತನ್ನದೇ ಆದ ವಿಶ್ಲೇಷಣೆ, ಇತಿಹಾಸವನ್ನು ತನ್ನದೇ ಆದ ರೀತಿಯಲ್ಲಿ ವ್ಯಾಖ್ಯಾನಿಸುವ ಸ್ವಾತಂತ್ರ್ಯ ಇದ್ದೇ ಇದೆ. ಆದರೆ, ಕೊನೆಯಲ್ಲಿ ಮತದಾನ ಮಾಡುವ ಸಮಯ ಬಂದಾಗ ಜನಸಾಮಾನ್ಯರು ತಮ್ಮದೇ ಆದ ಲೆಕ್ಕಾಚಾರ ಮಾಡಿ ವೋಟು ಹಾಕುತ್ತಾರೆ. ಹೀಗಾಗಿ ಮೋದಿ ದೀರ್ಘಾವಧಿ ಪ್ರಧಾನಿ ಹೌದೋ ಅಲ್ಲವೋ ಎಂಬುದು ಈ ಹಂತದಲ್ಲಿ ಶೈಕ್ಷಣಿಕ ವಿವಾದವಷ್ಟೆ. ಈಗಲೂ ಜನಮಾನಸದಲ್ಲಿ ಮೋದಿಯವರ ಪ್ರಭಾವ ಮೊದಲಿನಂತೆಯೇ ಇದೆ. ನಿಜವಾದ ವಾಸ್ತವ ಇದು. ಜನರು ಮೋದಿಯನ್ನು ಬೆಂಬಲಿಸುತ್ತಾರೆ.

ಇದನ್ನೂ ಓದಿ: Dr Vijay Darda Column: ಧೈರ್ಯವಿದ್ದರೆ ರಾಜನನ್ನು ಕಡೆಗಣಿಸಿ.. ನಿಮ್‌ ಹಣೆಬರಹ !

ಜಗತ್ತಿನ ಬಹುತೇಕ ರಾಷ್ಟ್ರಗಳು ಮೋದಿ ಜೊತೆಗೆ ಒಳ್ಳೆಯ ಸ್ನೇಹ ಹೊಂದಿವೆ. ವಿರೋಧ ಪಕ್ಷಗಳು ಪದೇಪದೆ ಏರಿಕೆಯಾಗುವ ತೈಲ ಬೆಲೆಯಿಂದಾಗುವ ನಷ್ಟ, ಕೃಷಿ ಬಿಕ್ಕಟ್ಟುಗಳು, ಭಾರತದ ಕೃಷಿ ಕ್ಷೇತ್ರದ ಮೇಲೆ ಅಮೆರಿಕದ ಆರ್ಥಿಕ ಒತ್ತಡವೂ ಸೇರಿದಂತೆ ಅಸಂಖ್ಯ ದೇಶಿ ಮತ್ತು ವಿದೇಶಿ ವಿಷಯಗಳನ್ನು ಪ್ರಸ್ತಾಪಿಸಿದರೂ ಮೋದಿಯವರ ಜನಪ್ರಿಯತೆ ಕಡಿಮೆಯಾಗಿಲ್ಲ. ನೀಟ್ ಪರೀಕ್ಷೆ ಯ ವಿಷಯದಲ್ಲಿ ಹುಟ್ಟಿಕೊಂಡ ವಿವಾದ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಜಿರಳೆಗಳು ಕೂಡ ಕುತೂಹಲ ಮೂಡಿಸಿವೆ. ಆದರೂ ಒಟ್ಟಾರೆ ರಾಜಕೀಯ ಚಿತ್ರಣ ಬದಲಾಗದೆ ಹಾಗೇ ಇದೆ. ದೇಶದೊಳಗೂ ಹೊರಗೂ ನರೇಂದ್ರ ಮೋದಿಯವರಲ್ಲಿನ ವಿಶ್ವಾಸ ಮುಕ್ಕಾಗಿಲ್ಲ. ರಾಜಕೀಯ ಟೀಕೆಗಳು ಎಷ್ಟೇ ಜೋರಾಗಿದ್ದರೂ ಕೇವಲ ಟೀಕೆಗಳಿಂದಲೇ ರಾಜಕೀಯ ಬದಲಾವಣೆ ಅಷ್ಟು ಸುಲಭಕ್ಕೆ ಆಗುವುದಿಲ್ಲ.

ಕಳೆದ ಹನ್ನೆರಡು ವರ್ಷಗಳಲ್ಲಿ ಜಗತ್ತಿನಾದ್ಯಂತ ಬೇರೆ ಬೇರೆ ದೇಶಗಳ ನಾಯಕರು ಮೋದಿಯವರಿಗೆ 30ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮಟ್ಟದ ಅತ್ಯುನ್ನತ ಪ್ರಶಸ್ತಿ ಅಥವಾ ನಾಗರಿಕ ಪುರಸ್ಕಾರ ಗಳನ್ನು ಪ್ರದಾನ ಮಾಡಿದ್ದಾರೆ. ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಬಹರೇನ್, ಪ್ಯಾಲೆಸ್ತೀನ್, ಅಫ್ಘಾನಿಸ್ತಾನ, ಈಜಿಪ್ಟ್ ಮತ್ತು ಮಾಲ್ಡೀವ್ಸ್ ಈ ಏಳು ಮುಸ್ಲಿಂ ಬಾಹುಳ್ಯದ ದೇಶಗಳು ಕೂಡ ಮೋದಿಯವರಿಗೆ ತಮ್ಮ ದೇಶದ ಅತ್ಯುನ್ನತ ನಾಗರಿಕ ಗೌರವವನ್ನು ನೀಡಿವೆ. ಈ ಪುರಸ್ಕಾರಗಳೇ ಮೋದಿಯವರ ಅಂತಾರಾಷ್ಟ್ರೀಯ ಮಟ್ಟದ ವ್ಯಕ್ತಿತ್ವ ಮತ್ತು ಪ್ರಭಾವ ವನ್ನು ಎತ್ತಿ ತೋರಿಸುವಂತಿವೆ. ಇದೇ ರೀತಿಯ ರಾಜಕೀಯ ಜನಪ್ರಿಯತೆ ಭಾರತದೊಳಗೂ ಕಾಣಿಸುತ್ತದೆ. ಮಮತಾ ಬ್ಯಾನರ್ಜಿಯಂತಹ ಕಠಿಣ ನಾಯಕರು ಸುದೀರ್ಘ ಕಾಲ ಆಳಿದ ಪಶ್ಚಿಮ ಬಂಗಾಳದಂತಹ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಗೆಲ್ಲುತ್ತದೆ ಅಂದರೆ ಅದು ಮೋದಿಗಿರುವ ಜನಪ್ರಿಯತೆಯ ಪರಿಣಾಮವಲ್ಲದೆ ಬೇರೇನು? ಅಮಿತ್ ಶಾ ತರಹದ ಸಾರಥಿಯನ್ನು ಮೋದಿ ಹೊಂದಿದ್ದಾರೆ ಎಂಬುದನ್ನು ಕೂಡ ಕಡೆಗಣಿಸುವಂತಿಲ್ಲ.

NM

ಇಂತಹ ಅಸಾಮಾನ್ಯ ಚರಿಷ್ಮಾ ಹೊಂದಿರುವ ನಾಯಕನಿಗೆ ಸವಾಲೆಸೆಯಬೇಕು ಅಂದರೆ ವಿರೋಧ ಪಕ್ಷಗಳು ಇನ್ನಷ್ಟು ಪ್ರಾಥಮಿಕ ಸಿದ್ಧತೆಗಳನ್ನು ಮಾಡಿಕೊಳ್ಳುವ ಅಗತ್ಯವಿದೆ. ಮೊದಲಿಗೆ ಇಂಡಿಯಾ ಕೂಟದ 25 ಪಕ್ಷಗಳು ತಮ್ಮೆಲ್ಲರಿಗೂ ಒಪ್ಪಿಗೆಯಾಗುವ ಒಬ್ಬ ನಾಯಕನನ್ನು ಆಯ್ಕೆ ಮಾಡಿಕೊಳ್ಳ ಬೇಕು. ಈ ಒಕ್ಕೂಟ ರಚನೆಯಾಗಿ ಮೂರು ವರ್ಷಗಳೇ ಕಳೆದಿವೆ. 2024ರ ಚುನಾವಣೆಗೂ ಮುನ್ನ ಈ ಒಕ್ಕೂಟವು ಕೆಲ ಸಣ್ಣಪುಟ್ಟ ಸಭೆಗಳನ್ನು ನಡೆಸಿತ್ತು. 2025ರಲ್ಲಿ ಒಂದೇ ಒಂದು ಗಮನಾರ್ಹ ಸಭೆ ನಡೆಸಲಿಲ್ಲ.

ಮೈತ್ರಿಕೂಟ ರಚನೆಯಾಗಿ ಮೂರು ವರ್ಷ ಕಳೆದ ಮೇಲೂ ಯಾರು ಸ್ಟೀರಿಂಗ್ ಹಿಡಿಯಬೇಕು ಎಂಬುದೇ ಇನ್ನೂ ನಿರ್ಧಾರವಾಗಿಲ್ಲ. ಒಕ್ಕೂಟದಲ್ಲಿರುವ ಪ್ರಾದೇಶಿಕ ಪಕ್ಷಗಳಿಗೆ ರಾಜಕೀಯ ವಾಸ್ತವ ಏನೆಂಬುದು ಗೊತ್ತಿದೆ. ತಮ್ಮ ನಡುವೆ ಇಂಡಿಯಾ ಒಕ್ಕೂಟದಲ್ಲಿರುವ ಏಕೈಕ ರಾಷ್ಟ್ರೀಯ ಪಕ್ಷವೆಂದರೆ ಕಾಂಗ್ರೆಸ್ ಎಂಬುದನ್ನು ಅವು ಒಪ್ಪಿಕೊಳ್ಳುತ್ತವೆ. ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ದೇಶಾ ದ್ಯಂತ ರಾಜಕೀಯ ಅಸ್ತಿತ್ವವಿದೆ.

ಈ ಲಾಜಿಕ್‌ನಲ್ಲಿ ನೋಡುವುದಾದರೆ ಸಹಜವಾಗಿಯೇ ರಾಹುಲ್ ಗಾಂಧಿಯವರು ಇಂಡಿಯಾ ಮೈತ್ರಿಕೂಟವನ್ನು ಮುನ್ನಡೆಸಬೇಕು. ಇಂಡಿಯಾ ಒಕ್ಕೂಟದ ಮೈತ್ರಿ ಪಕ್ಷಗಳು ಈಗಾಗಲೇ ಅವರಿಗೆ ಕಿರೀಟ ತೊಡಿಸಿ, ಅಧಿಕೃತವಾಗಿ ಜವಾಬ್ದಾರಿ ನೀಡಿದ್ದರೆ ಇಷ್ಟೊತ್ತಿಗೆ ಅವರು ಪರಿಣಾಮಕಾರಿಯಾದ ರಣತಂತ್ರವನ್ನು ಹೆಣೆಯುವ ಕೆಲಸವನ್ನಾ ದರೂ ಆರಂಭಿಸಿರುತ್ತಿದ್ದರು. ಬೇಕಿದ್ದರೆ ಅವರಿಗೆ ಪರ್ಯಾಯವಾಗಿ ಪ್ರಿಯಾಂಕಾ ಗಾಂಧಿ ಕೂಡ ಇದ್ದಾರೆ. ಆದರೆ, ಯಾರು ನಾಯಕ ಎಂಬುದನ್ನು ಅಧಿಕೃತವಾಗಿ ಘೋಷಿಸದೆ ಇದ್ದರೆ ರಾಜಕೀಯ ಪಕ್ಷಗಳನ್ನೆಲ್ಲ ಒಗ್ಗೂಡಿಸಿ ಮುಂದಕ್ಕೆ ಕರೆದು ಕೊಂಡು ಹೋಗುವ ಕೆಲಸವನ್ನು ಯಾರು ಮಾಡಬೇಕು? ದಿಕ್ಕುದೆಸೆ ಇಲ್ಲದ ಕಾರಣ ಇಂಡಿಯಾ ಕೂಟದ ಮೈತ್ರಿ ಪಕ್ಷಗಳು ನರೇಂದ್ರ ಮೋದಿ ಯವರನ್ನು ಟೀಕಿಸುತ್ತಿವೆಯೇ ಹೊರತು, ಮೋದಿಗೆ ಪರ್ಯಾಯ ನಾಯಕ ಯಾರು ಎಂಬುದನ್ನು ಹೇಳುತ್ತಿಲ್ಲ. ದಿನಕ್ಕೊಂದು ಮಾತನಾಡುತ್ತಿದ್ದರೆ ಮಾಧ್ಯಮಗಳಿಗೆ ನೀವು ಒಂದಷ್ಟು ಹೆಡ್‌ಲೈನ್‌ ಗಳನ್ನು ಒದಗಿಸಬಹುದಷ್ಟೆ, ಆದರೆ ಅದರಿಂದ ರಾಜಕೀಯ ಚಳವಳಿ ರೂಪುಗೊಳ್ಳುವುದಿಲ್ಲ. ಇದೆಲ್ಲ ಗೊತ್ತಿದ್ದರೂ ವಿರೋಧ ಪಕ್ಷಗಳು ಇನ್ನೂ ‘ಸ್ಟ್ಯಾಂಡ್ ಹಾಕಿಕೊಂಡು ಸೈಕಲ್ ತುಳಿಯುವ’ ಕೆಲಸವನ್ನಷ್ಟೇ ಮಾಡುತ್ತಿವೆ. ಗಾಲಿ ತಿರುಗುತ್ತದೆ, ಆದರೆ ಸೈಕಲ್ ಮುಂದೆ ಹೋಗುತ್ತಿಲ್ಲ! ಇಂಡಿಯಾ ಮೈತ್ರಿಕೂಟದಲ್ಲಿರುವ ಪ್ರತಿಯೊಂದು ರಾಜಕೀಯ ಪಕ್ಷದ ನಾಯಕನಿಗೂ ತಾನೇ ಮೈತ್ರಿಕೂಟದ ನಾಯಕನಾಗಬೇಕು ಎಂಬ ಆಸೆಯಿದೆ. ಹೀಗಾಗಿ ಒಬ್ಬರನ್ನೊಬ್ಬರು ಕೆಳಕ್ಕೆಳೆಯುವ ಕೆಲಸವನ್ನೇ ಮಾಡುತ್ತಿದ್ದಾರೆ. ಅದರಿಂದಾಗಿ ಪ್ರಜಾ ಪ್ರಭುತ್ವದ ಮೂಲಭೂತ ಅಗತ್ಯವನ್ನೇ ಅವರಿಂದ ಈಡೇರಿ ಸಲು ಆಗುತ್ತಿಲ್ಲ. ಬಲಿಷ್ಠವಾದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರವಷ್ಟೇ ಗಟ್ಟಿಯಾಗಿದ್ದರೆ ಸಾಲದು, ಅದರ ಜೊತೆಗೆ ವಿರೋಧ ಪಕ್ಷ ಕೂಡ ಗಟ್ಟಿಯಾಗಿ ಇರಬೇಕಾಗುತ್ತದೆ.

ಹೊಸತರ ಸಂಭ್ರಮ, ಹಳತರ ನಿರ್ಲಕ್ಷ್ಯ

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪ್ರತಿ ಸಲ ಭಾರತೀಯ ರೈಲ್ವೆಯ ಹೊಸ ಸಾಧನೆಯನ್ನು ಪ್ರಕಟಿಸಿದಾಗಲೂ ನನಗೆ ಏಕಕಾಲಕ್ಕೆ ಸಂಭ್ರಮ ಮತ್ತು ಬೇಸರ ಎರಡೂ ಆಗುತ್ತದೆ. ನಮ್ಮ ದೇಶದ ರೈಲ್ವೆ ವ್ಯವಸ್ಥೆ ಶರವೇಗದಲ್ಲಿ ಬೆಳೆಯುತ್ತಾ, ಆಧುನಿಕಗೊಳ್ಳುತ್ತಾ, ವಂದೇ ಭಾರತ್‌ನಂತಹ ಐಷಾರಾಮಿ ರೈಲುಗಳು ಹೊಸ ಹೊಸ ಮಾರ್ಗದಲ್ಲಿ ಸಂಚಾರ ಆರಂಭಿಸುತ್ತಾ ಹೋಗುವುದನ್ನು ನೋಡಿದಾಗ ಖುಷಿಯೂ ಹೆಮ್ಮೆಯೂ ಆಗುತ್ತದೆ. ಕಾಶ್ಮೀರದಂತಹ ಕಠಿಣ ಭೂ ರಚನೆಯುಳ್ಳ ದೂರದ ಪ್ರದೇಶಗಳಿಗೂ ರೈಲ್ವೆ ಸಂಪರ್ಕ ಸಾಧ್ಯವಾಗುತ್ತಿದೆ ಎಂಬುದು ಬಹಳ ದೊಡ್ಡ ಸಾಧನೆ ಮತ್ತು ಭಾರತಕ್ಕಿರುವ ಮೂಲಸೌಕರ್ಯ ಸಂಬಂಧಿ ಮಹತ್ವಾಕಾಂಕ್ಷೆಯ ದ್ಯೋತಕ. ಆದರೆ ಈ ಸಾಧನೆಗಳ ನಡುವೆಯೇ ವಿಷಾದವನ್ನು ಹುಟ್ಟುಹಾಕುವ ಸಂಗತಿಯೆಂದರೆ, ಹೊಸ ಹೊಸ ಯೋಜನೆಗಳನ್ನು ಆರಂಭಿಸುವ ಸರಕಾರ ಹಳೆಯ ಯೋಜನೆಗಳನ್ನು ಏಕೆ ಮರೆತುಬಿಡುತ್ತದೆ? ಬಹಳ ದೀರ್ಘಕಾಲದಿಂದ ಬಾಕಿಯಿರುವ ಯೋಜನೆಗಳನ್ನು ಯಾರು ಪೂರ್ಣಗೊಳಿಸಬೇಕು? ಉದಾಹರಣೆಗೆ ವಾರ್ಧಾ-ಯವತ್ಮಾಲ್-ನಾಂದೇಡ್ ರೈಲ್ವೆ ಮಾರ್ಗ. ನಾನು ಕಂಬದಿಂದ ಕಂಬಕ್ಕೆ ಸುತ್ತಿ 2008-09ರಲ್ಲಿ ಈ ಯೋಜನೆಗೆ ಮಂಜೂರಾತಿ ಪಡೆದಿದ್ದೆ. ಆದರೆ 284 ಕಿ.ಮೀ. ಉದ್ದದ ಈ ಮಾರ್ಗ ಇವತ್ತಿಗೂ ಪೂರ್ಣಗೊಂಡಿಲ್ಲ. ಅಶ್ವಿನಿ ವೈಷ್ಣವ್ ಅವರಿಗೆ ಇದು ಗೊತ್ತಿದೆಯೇ?

ಪತ್ರಿಕೋದ್ಯಮದಲ್ಲಿ ಜಿರಳೆಗಳು!

ಇತ್ತೀಚೆಗೆ ಜಿರಳೆ ಹೆಸರು ತುಂಬಾ ಕೇಳಿಬರುತ್ತಿದೆ. ರಾಷ್ಟ್ರ ಮಟ್ಟದಲ್ಲಿ ಕಾಕ್ರೋಚ್‌ಗಳು ಸದ್ದು ಮಾಡುತ್ತಿದ್ದಾರೆ. ಆದರೆ ನಾನು ಈ ಜಿರಳೆಗಳ ಬಗ್ಗೆ ಹೇಳುತ್ತಿಲ್ಲ. ಮಹಾರಾಷ್ಟ್ರದ ಪತ್ರಿಕೋದ್ಯಮ ವನ್ನು ತಿಂದು ಹಾಕುತ್ತಿರುವ ಜಿರಳೆ ಮತ್ತು ಗೆದ್ದಲುಗಳ ಬಗ್ಗೆ ಹೇಳುತ್ತಿದ್ದೇನೆ. ಮಹಾರಾಷ್ಟ್ರದಲ್ಲಿ 5000ದಿಂದ 10000 ಕಾಪಿಗಳನ್ನು ಕೂಡ ಮಾರಾಟ ಮಾಡಲು ಹೆಣಗಾಡುತ್ತಿರುವ ಪತ್ರಿಕೆಗಳು ಸಾಕಷ್ಟಿವೆ. ಆದರೆ ಅವು ತಮ್ಮ ಪ್ರಸಾರವನ್ನು ಲಕ್ಷದ ಲೆಕ್ಕದಲ್ಲಿ ತೋರಿಸುತ್ತವೆ!

ಆ ಸಂಖ್ಯೆಯನ್ನು ಪ್ರಮಾಣೀಕರಿಸುವ ಪ್ರಮಾಣಪತ್ರ ಕೂಡ ಅವುಗಳಿಗೆ ರಿಜಿಸ್ಟ್ರಾರ್ ಆಫ್ ನ್ಯೂಸ್‌‌ ಪೇಪರ್ಸ್ ಫಾರ್ ಇಂಡಿಯಾ (ಆರ್‌ಎನ್‌ಐ)ದಿಂದ ಲಭಿಸಿದೆ. ಅದನ್ನು ತೋರಿಸಿ ಈ ಪತ್ರಿಕೆಗಳು ಸರಕಾರದ ಜಾಹೀರಾತು ಪಡೆಯುತ್ತವೆ. ಅಂದರೆ, ಪ್ರಸಾರವೇ ಇಲ್ಲದ ಪತ್ರಿಕೆಗಳಿಗೆ ತೆರಿಗೆ ಪಾವತಿ ದಾರರ ಹಣ ಜಾಹೀರಾತಿನ ರೂಪದಲ್ಲಿ ಹೋಗುತ್ತಿದೆ. ಈ ಕುರಿತು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಸಾಕಷ್ಟು ದೂರುಗಳು ಸಲ್ಲಿಕೆಯಾಗಿವೆ. ಪ್ರಧಾನ ಮಂತ್ರಿಗಳು ಹಾಗೂ ಗೃಹ ಸಚಿವರ ಕಚೇರಿಗೂ ಸಾಕಷ್ಟು ಪತ್ರಗಳನ್ನು ಕಳುಹಿಸಲಾಗಿದೆ. ಆದರೂ ಇಂತಹ ಪತ್ರಿಕೆಗಳ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ.

ಪರಿಣಾಮ ನಮ್ಮೆಲ್ಲರ ಕಣ್ಮುಂದೆ ಇದೆ. ಈ ರೀತಿಯ ಅಕ್ರಮಗಳಲ್ಲಿ ತೊಡಗಿಕೊಂಡಿರುವ ಜಿರಳೆಗಳು ರಾಜಾರೋಷವಾಗಿ ತಮ್ಮ ದಂಧೆಯನ್ನು ನಡೆಸುತ್ತಿವೆ. ಅವುಗಳಿಗೆ ಇನ್ನಷ್ಟು ಧೈರ್ಯ ಬಂದಿದೆ. ನಮ್ಮ ದೇಶಕ್ಕೆ ಪತ್ರಿಕೆಗಳನ್ನು ಮುದ್ರಿಸುವ ಕಾಗದ ವಿದೇಶಗಳಿಂದ ಬರುತ್ತದೆ. ಹೀಗಾಗಿ ಇದು ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಗಳ ವ್ಯಾಪ್ತಿಗೂ ಬರುತ್ತದೆ. ಇಂತಹ ಪತ್ರಿಕೆಗಳ ದುಷ್ಟ ವ್ಯವಹಾರವನ್ನು ಹತ್ತಿರದಿಂದ ಗಮನಿಸಿದರೆ ಯಾರು ಇವುಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಮತ್ತು ಯಾಕೆ ನೀಡುತ್ತಿದ್ದಾರೆ ಎಂಬ ಪ್ರಶ್ನೆ ನಮ್ಮೊಳಗೆ ಏಳುತ್ತದೆ. ಒಬ್ಬರು ಸರ್ಕಾರಿ ಅಽಕಾರಿಯ ಬಳಿ ನಾನೇ ಈ ಪ್ರಶ್ನೆ ಕೇಳಿದೆ.

ಅವರ ಉತ್ತರ ಆಶ್ಚರ್ಯಕರವಾಗಿತ್ತು. ‘ನಿಮ್ಮದೇ ಕ್ಷೇತ್ರದ ಸಹವರ್ತಿಗಳ ವಿರುದ್ಧ ಯಾಕೆ ದೂರು ಕೊಡುತ್ತೀರಿ? ಎಂದು ಕೇಳಿದರು. ‘ಯಾಕೆ ಅಂದರೆ, ಅವರು ನನ್ನ ಸಹವರ್ತಿಗಳಾಗಿರುವುದರಿಂದ ಅವರೇನು ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ವ್ಯವಸ್ಥೆಯ ಒಳಗಿರುವವರೇ ಇಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಎತ್ತಿ ತೋರಿಸದೆ ಇದ್ದರೆ ಇನ್ನಾರು ಈ ಕೆಲಸ ಮಾಡುತ್ತಾರೆ?’ ಎಂದು ನಾನು ಕೇಳಿದೆ. ಸರ್ಕಾರ ಸಣ್ಣಪುಟ್ಟ ಭ್ರಷ್ಟಾಚಾರಿಗಳು ಹಾಗೂ ಅಕ್ರಮ ದಂಧೆಕೋರರ ಮೇಲೆ ಆಗಾಗ ದಾಳಿ ನಡೆಸುತ್ತದೆ. ಆದರೆ ಪತ್ರಿಕೋದ್ಯಮದ ಒಳಗೆ ನಡೆಯುವ ಇಂತಹ ದಂಧೆಯ ವಿಷಯ ಬಂದಾಗ ಅಽಕಾರಿಗಳು ಏಕೆ ಸುಮ್ಮನಾಗಿಬಿಡುತ್ತಾರೆ? ಪತ್ರಿಕೋದ್ಯಮವೆಂಬುದು ಕೇವಲ ಉದ್ಯಮವಲ್ಲ. ಅದು ಜನರ ನಂಬಿಕೆಯ ಮೇಲೆ ನಿಂತಿರುವ ವ್ಯವಹಾರ. ಪ್ರಜಾಸತ್ತಾತ್ಮಕ ಸಮಾಜದಲ್ಲಿ ಪತ್ರಿಕೆಗಳಿಗೆ ಮಹತ್ವದ ಸ್ಥಾನವಿದೆ. ಅತಿಹೆಚ್ಚು ಜವಾಬ್ದಾರಿ ಹಾಗೂ ಪ್ರಾಮಾಣಿಕತೆ ಯಿಂದ ಕೆಲಸ ಮಾಡಬೇಕಾದ ಕ್ಷೇತ್ರವಿದು. ಇಂತಹ ರಂಗವನ್ನೇ ಜಿರಳೆ ಮತ್ತು ಗೆದ್ದಲುಗಳು ತಿಂದು ಹಾಕುತ್ತಿದ್ದರೆ ಅದು ಕೇವಲ ಉದ್ದಿಮೆಯ ಸಮಸ್ಯೆ ಅಲ್ಲ. ಪತ್ರಿಕೋದ್ಯಮದ ವಿಶ್ವಾಸಾರ್ಹತೆಗೇ ಅದು ಕಪ್ಪು ಚುಕ್ಕೆ. ಇಂತಹ ಕಲೆಗಳು ಶಾಶ್ವತವಾಗಿ ಉಳಿಯಲು ಬಿಡಬಾರದು. ಅವುಗಳನ್ನು ಅಳಿಸಿ ಹಾಕಬೇಕು. ಸರಕಾರ ಇದರ ಬಗ್ಗೆ ಗಮನಹರಿಸಲು ಸಿದ್ಧವಿದೆಯೇ ಎಂಬುದು ಪ್ರಶ್ನೆ.