Vishweshwar Bhat Column: ಅಂದು ʼಕಳ್ಳರ ದೇಶʼ, ಇಂದು ಹೃದಯಗಳನ್ನು ಕದಿಯುವ ಸುಂದರ ದೇಶ !
ಆರಂಭದ ದಶಕಗಳಲ್ಲಿ ಆಸ್ಟ್ರೇಲಿಯನ್ನರಿಗೆ ತಮ್ಮ ಈ ‘ಅಪರಾಧಿ ಮೂಲ’ದ (Convict Stain) ಬಗ್ಗೆ ಒಂದು ರೀತಿಯ ಕೀಳರಿಮೆ ಮತ್ತು ಅವಮಾನದ ಭಾವನೆಯಿತ್ತು. ತಮ್ಮ ಪೂರ್ವಜರು ಕಳ್ಳರಾಗಿದ್ದರು ಎಂಬ ಸತ್ಯವನ್ನು ಅನೇಕ ಕುಟುಂಬಗಳು ಗುಟ್ಟಾಗಿ ಇಡುತ್ತಿದ್ದವು. ಆದರೆ ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಈ ಮನೋಭಾವ ಸಂಪೂರ್ಣವಾಗಿ ಬದಲಾಯಿತು. ಇಂದು ಆಸ್ಟ್ರೇಲಿಯನ್ನರು ತಮ್ಮ ಪೂರ್ವಜರು ಅಪರಾಧಿಗಳಾಗಿದ್ದರು ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತಾರೆ.
-
ಇದೇ ಅಂತರಂಗ ಸುದ್ದಿ
ಅನೇಕರಿಗೆ ಗೊತ್ತಿರಲಿಕ್ಕಿಲ್ಲ, ಆಸ್ಟ್ರೇಲಿಯಾವನ್ನು ‘ಅಪರಾಧಿಗಳ ನಾಡು’ (Land of Convicts) ಅಂತಾರೆ. ಹಾಗೆಂದು ಆಸ್ಟ್ರೇಲಿಯನ್ನರೇ ತಮಾಷೆಯಾಗಿ ಹೇಳಿಕೊಳ್ಳುತ್ತಾರೆ. ಹಾಗೆ ಕರೆಯುವುದರ ಹಿಂದೆ ಒಂದು ಕುತೂಹಲಕಾರಿ ಮತ್ತು ನೋವಿನ ಚರಿತ್ರೆಯಿದೆ. ಇಂದು ಜಗತ್ತಿನ ಅತ್ಯಂತ ಶ್ರೀಮಂತ, ಸುರಕ್ಷಿತ ಮತ್ತು ಶಿಸ್ತುಬದ್ಧ ದೇಶಗಳಲ್ಲಿ ಒಂದಾಗಿರುವ ಆಸ್ಟ್ರೇಲಿಯಾ, ಒಂದು ಕಾಲದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಅಪರಾಧಿಗಳನ್ನು ತಂದು ಸುರಿಯುವ ಬಯಲು ಜೈಲಾಗಿತ್ತು.
ಹದಿನೆಂಟನೇ ಶತಮಾನದ ಅಂತ್ಯದಲ್ಲಿ ಬ್ರಿಟನ್ನಲ್ಲಿ ಕೈಗಾರಿಕಾ ಕ್ರಾಂತಿ ಸಂಭವಿಸಿದಾಗ, ಹಳ್ಳಿಗಳಿಂದ ನಗರಗಳಿಗೆ ವಲಸೆ ಬಂದವರ ಸಂಖ್ಯೆ ಹೆಚ್ಚಾಗಿ ಬಡತನ, ನಿರುದ್ಯೋಗ ಮತ್ತು ಹಸಿವು ತಾಂಡವ ವಾಡುತ್ತಿತ್ತು. ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ಕಳ್ಳತನ ಮಾಡುವವರ ಸಂಖ್ಯೆ ಮಿತಿಮೀರಿ, ಬ್ರಿಟನ್ನ ಜೈಲುಗಳೆಲ್ಲ ತುಂಬಿ ತುಳುಕಲಾರಂಭಿಸಿದವು. ಈ ಜೈಲುಗಳ ಒತ್ತಡವನ್ನು ಕಡಿಮೆ ಮಾಡಲು ಬ್ರಿಟಿಷ್ ಸರಕಾರ ಕಂಡುಕೊಂಡ ಉಪಾಯವೇ ಅಪರಾಧಿಗಳನ್ನು ದೂರದ ಅeತ ಭೂಮಿಗೆ ಗಡಿಪಾರು ಮಾಡುವುದು.
ಮೊದಲಿಗೆ ಬ್ರಿಟನ್ ತನ್ನ ಅಪರಾಧಿಗಳನ್ನು ಅಮೆರಿಕದ ವಸಾಹತುಗಳಿಗೆ ಕಳುಹಿಸುತ್ತಿತ್ತು. ಆದರೆ 1776ರಲ್ಲಿ ಅಮೆರಿಕ ಸ್ವಾತಂತ್ರ್ಯ ಘೋಷಿಸಿಕೊಂಡ ನಂತರ, ಬ್ರಿಟಿಷ್ ಕೈದಿಗಳನ್ನು ಸ್ವೀಕರಿಸಲು ನಿರಾಕರಿಸಿತು. ಇದರಿಂದ ಕಂಗಾಲಾದ ಬ್ರಿಟಿಷ್ ಸರಕಾರಕ್ಕೆ ಕಣ್ಣಿಗೆ ಬಿದ್ದಿದ್ದೇ ಕ್ಯಾಪ್ಟನ್ ಜೇಮ್ಸ್ ಕುಕ್ 1770ರಲ್ಲಿ ಪತ್ತೆ ಹಚ್ಚಿದ್ದ ಆಸ್ಟ್ರೇಲಿಯಾ ಖಂಡ.
ಇದನ್ನೂ ಓದಿ: Vishweshwar Bhat Column: ‘ಪದಾರ್ಥ ಚಿಂತಾಮಣಿ’ ಕುರಿತು
ಸಾವಿರಾರು ಮೈಲಿ ದೂರದಲ್ಲಿದ್ದ, ನಾಲ್ಕೂ ಕಡೆ ಸಮುದ್ರದಿಂದ ಆವೃತವಾಗಿದ್ದ ಈ ವಿಶಾಲ ಭೂಭಾಗವು ತಪ್ಪಿಸಿಕೊಂಡು ಹೋಗಲು ಅಸಾಧ್ಯವಾದ ನೈಸರ್ಗಿಕ ಕಾರಾಗೃಹದಂತೆ ಬ್ರಿಟಿಷರಿಗೆ ಕಂಡಿತು. ಹೀಗಾಗಿ 1788ರ ಜನವರಿ 26ರಂದು ಹನ್ನೊಂದು ಹಡಗುಗಳ ‘ಫಸ್ಟ್ ಫ್ಲೀಟ್’ (First Fleet) ಮೂಲಕ ಸುಮಾರು 750ಕ್ಕೂ ಹೆಚ್ಚು ಅಪರಾಧಿಗಳನ್ನು ಸಿಡ್ನಿಯ ಬೊಟಾನಿ ಬೇ ತೀರಕ್ಕೆ ಕರೆತರ ಲಾಯಿತು. ಇದೇ ಆಧುನಿಕ ಆಸ್ಟ್ರೇಲಿಯಾದ ವಸಾಹತುಶಾಹಿ ಇತಿಹಾಸದ ಆರಂಭವಾಯಿತು. ಈ ಅಪರಾಧಿಗಳನ್ನು ಕಳ್ಳರು ಎಂದು ಕರೆದರೂ, ಇವರಲ್ಲಿ ಹೆಚ್ಚಿನವರು ಭಯಾನಕ ಕೊಲೆಗಡುಕರೋ ಅಥವಾ ದರೋಡೆಕೋರರೋ ಆಗಿರಲಿಲ್ಲ ಎಂಬುದು ಗಮನಾರ್ಹ.
ಅಂದಿನ ಬ್ರಿಟಿಷ್ ಕಾನೂನು ವ್ಯವಸ್ಥೆ ಎಷ್ಟು ಕಠಿಣವಾಗಿತ್ತೆಂದರೆ, ಒಂದು ತುಂಡು ಬ್ರೆಡ್ ಕದ್ದಿದ್ದಕ್ಕೆ, ಒಂದು ಕರವಸ್ತ್ರ ಅಥವಾ ಕೋಳಿಮರಿ ಕದ್ದಿದ್ದಕ್ಕೂ ಏಳು ವರ್ಷಗಳಿಂದ ಹದಿನಾಲ್ಕು ವರ್ಷಗಳವರೆಗೆ ಆಸ್ಟ್ರೇಲಿಯಾಕ್ಕೆ ಗಡಿಪಾರು ಮಾಡುವ ಶಿಕ್ಷೆ ವಿಧಿಸಲಾಗುತ್ತಿತ್ತು. ಬಡತನದಿಂದ ಕಂಗೆಟ್ಟಿದ್ದ ಸಾಮಾನ್ಯ ಕೂಲಿ ಕಾರ್ಮಿಕರು, ನಿರುದ್ಯೋಗಿ ಯುವಕರು ಮತ್ತು ಸಣ್ಣಪುಟ್ಟ ತಪ್ಪು ಮಾಡಿದ ಮಹಿಳೆಯರೇ ಈ ಹಡಗುಗಳಲ್ಲಿ ತುಂಬಿದ್ದರು. ಹೀಗೆ ಹೊಟ್ಟೆಪಾಡಿನ ಅನಿವಾರ್ಯತೆಗೆ ಬಲಿಯಾಗಿ ಕಳ್ಳತನದ ಹಣೆಪಟ್ಟಿ ಹೊತ್ತವರೇ ಆಸ್ಟ್ರೇಲಿಯಾದ ಮೊದಲ ವಸಾಹತುಗಾರರಾದರು.
ಆಸ್ಟ್ರೇಲಿಯಾಕ್ಕೆ ಬಂದಿಳಿದ ಈ ಕೈದಿಗಳ ಜೀವನ ಅತ್ಯಂತ ಕಠಿಣವಾಗಿತ್ತು. ಅಪರಿಚಿತ ಹವಾಮಾನ, ಬರಡು ಭೂಮಿ ಮತ್ತು ಆಹಾರದ ಕೊರತೆಯ ನಡುವೆ ಇವರು ಬದುಕುಳಿಯಲು ಹೋರಾಡಬೇಕಾ ಯಿತು. ಬ್ರಿಟಿಷ್ ಅಧಿಕಾರಿಗಳು ಇವರನ್ನು ಜೀತದಾಳುಗಳಂತೆ ದುಡಿಸಿಕೊಂಡರು. ಕಾಡುಗಳನ್ನು ಕಡಿದು ರಸ್ತೆಗಳನ್ನು ನಿರ್ಮಿಸುವುದು, ಸೇತುವೆಗಳನ್ನು ಕಟ್ಟುವುದು, ಕಲ್ಲು ಒಡೆಯುವುದು ಮತ್ತು ಸರಕಾರಿ ಕಟ್ಟಡಗಳನ್ನು ನಿರ್ಮಿಸುವುದು ಇವರ ನಿತ್ಯದ ಕೆಲಸವಾಗಿತ್ತು.
ತಪ್ಪು ಮಾಡಿದವರಿಗೆ ಚಾಟಿಯೇಟು ಮತ್ತು ಕಬ್ಬಿಣದ ಸರಪಳಿಗಳ ಕಠಿಣ ಶಿಕ್ಷೆ ಕಾದಿತ್ತು. ಒಂದು ರೀತಿಯಲ್ಲಿ ಆಧುನಿಕ ಆಸ್ಟ್ರೇಲಿಯಾದ ಮೂಲಸೌಕರ್ಯದ ಅಡಿಪಾಯವೇ ಈ ಕೈದಿಗಳ ಬೆವರು ಮತ್ತು ರಕ್ತದಿಂದ ನಿರ್ಮಾಣವಾಯಿತು. ಆದರೆ ಬ್ರಿಟಿಷ್ ಸರಕಾರದ ನೀತಿಯಲ್ಲಿ ಒಂದು ವಿಶೇಷ ವಾದ ಮಾನವೀಯ ಅಂಶವೂ ಅಡಗಿತ್ತು.
ಒಮ್ಮೆ ಶಿಕ್ಷೆಯ ಅವಧಿ ಮುಗಿದ ನಂತರ ಈ ಕೈದಿಗಳಿಗೆ ‘ಟಿಕೆಟ್ ಆಫ್ ಲೀವ್’ (Ticket of Leave) ಅಥವಾ ಕ್ಷಮಾದಾನ ನೀಡಿ, ಅವರಿಗೆ ಸ್ವಂತವಾಗಿ ಬದುಕಲು ಜಮೀನನ್ನು ನೀಡಲಾಗುತ್ತಿತ್ತು. ಇಂಗ್ಲೆಂಡ್ನಲ್ಲಿ ಕೇವಲ ಬಡ ಕೂಲಿಯಾಗಿ ಬದುಕಬೇಕಿದ್ದ ಈ ವ್ಯಕ್ತಿಗಳು ಆಸ್ಟ್ರೇಲಿಯಾದಲ್ಲಿ ಸ್ವಂತ ಜಮೀನಿನ ಒಡೆಯರಾದರು, ವ್ಯಾಪಾರಿಗಳಾದರು ಮತ್ತು ಉದ್ಯಮಿಗಳಾಗಿ ಬೆಳೆದರು.
ಕಷ್ಟಪಟ್ಟು ದುಡಿದರೆ ಯಾರು ಬೇಕಾದರೂ ಮೇಲೆ ಬರಬಹುದು ಎಂಬ ಹೊಸ ಸಮಾಜದ ನಿರ್ಮಾಣಕ್ಕೆ ಇದು ನಾಂದಿಯಾಯಿತು. ಅಪರಾಧಿಗಳಾಗಿದ್ದವರೇ ಮುಂದೆ ಆಸ್ಟ್ರೇಲಿಯಾದ ಆರ್ಥಿಕತೆಯ ಬೆನ್ನೆಲುಬಾಗಿ ನಿಂತರು. ಆಸ್ಟ್ರೇಲಿಯಾದ ಆರಂಭಿಕ ಆಡಳಿತ ಮತ್ತು ಕಾನೂನು ಸುವ್ಯವಸ್ಥೆಯಲ್ಲೂ ಈ ಕೈದಿಗಳ ಪಾತ್ರ ಅಚ್ಚರಿ ಮೂಡಿಸುವಂತಿದೆ.
ವಸಾಹತು ಆರಂಭವಾದಾಗ ಅಲ್ಲಿ ಕಾನೂನು ಪಾಲನೆಗೆ ಸಾಕಷ್ಟು ಸೈನಿಕರಿರಲಿಲ್ಲ. ಆಗ ಅಂದಿನ ಗವರ್ನರ್ ಆರ್ಥರ್ ಫಿಲಿಪ್, ಕೈದಿಗಳ ಅತ್ಯುತ್ತಮ ನಡತೆ ಹೊಂದಿದ್ದ ಹನ್ನೆರಡು ಜನರನ್ನು ಆಯ್ಕೆ ಮಾಡಿ ಆಸ್ಟ್ರೇಲಿಯಾದ ಮೊದಲ ಪೊಲೀಸ್ ಪಡೆಯನ್ನು ರಚಿಸಿದರು. ಅಂದರೆ ಕಳ್ಳರನ್ನು ಕಾಯಲು ಕಳ್ಳರನ್ನೇ ನೇಮಿಸಲಾಗಿತ್ತು!
ಅಷ್ಟೇ ಅಲ್ಲ, ಶಿಕ್ಷೆ ಮುಗಿಸಿ ಬಿಡುಗಡೆಯಾದ ಅನೇಕ ಮಾಜಿ ಕೈದಿಗಳು ಮುಂದೆ ವಕೀಲರಾಗಿ, ಪತ್ರಕರ್ತ ರಾಗಿ, ಬ್ಯಾಂಕ್ ಸ್ಥಾಪಕರಾಗಿ ಮತ್ತು ರಾಜಕಾರಣಿಗಳಾಗಿಯೂ ಯಶಸ್ಸು ಕಂಡರು. 1788ರಿಂದ 1868ರವರೆಗೆ ಸುಮಾರು ಎಂಭತ್ತು ವರ್ಷಗಳ ಕಾಲ ಈ ಗಡಿಪಾರು ಪದ್ಧತಿ ಮುಂದು ವರಿಯಿತು. ಈ ಅವಧಿಯಲ್ಲಿ ಸುಮಾರು 162000ಕ್ಕೂ ಹೆಚ್ಚು ಬ್ರಿಟಿಷ್ ಮತ್ತು ಐರಿಶ್ ಕೈದಿಗಳನ್ನು ಆಸ್ಟ್ರೇಲಿಯಾಕ್ಕೆ ಸಾಗಿಸಲಾಯಿತು.
ತಾಸ್ಮೇನಿಯಾದ ಪೋರ್ಟ್ ಆರ್ಥರ್ ಮತ್ತು ಸಿಡ್ನಿಯ ಹೈಡ್ ಪಾರ್ಕ್ ಬ್ಯಾರಕ್ಸ್ ಇಂದಿಗೂ ಆ ಕರಾಳ ದಿನಗಳ ಸಾಕ್ಷಿಯಾಗಿ ನಿಂತಿವೆ. ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಲ್ಲಿ ಆಸ್ಟ್ರೇಲಿಯಾದಲ್ಲಿ ಚಿನ್ನದ ಗಣಿಗಳು ಪತ್ತೆಯಾದ ನಂತರ, ಪ್ರಪಂಚದಾದ್ಯಂತದಿಂದ ಸ್ವತಂತ್ರ ವಲಸಿಗರು ಇಲ್ಲಿಗೆ ಹರಿದುಬರಲಾರಂಭಿಸಿದರು. ಆಗ ಸ್ಥಳೀಯರ ವಿರೋಧದಿಂದಾಗಿ ಬ್ರಿಟನ್ ತನ್ನ ಅಪರಾಧಿಗಳನ್ನು ಕಳುಹಿಸುವುದನ್ನು ಅಧಿಕೃತವಾಗಿ ನಿಲ್ಲಿಸಿತು.
ಆರಂಭದ ದಶಕಗಳಲ್ಲಿ ಆಸ್ಟ್ರೇಲಿಯನ್ನರಿಗೆ ತಮ್ಮ ಈ ‘ಅಪರಾಧಿ ಮೂಲ’ದ (Convict Stain) ಬಗ್ಗೆ ಒಂದು ರೀತಿಯ ಕೀಳರಿಮೆ ಮತ್ತು ಅವಮಾನದ ಭಾವನೆಯಿತ್ತು. ತಮ್ಮ ಪೂರ್ವಜರು ಕಳ್ಳರಾಗಿ ದ್ದರು ಎಂಬ ಸತ್ಯವನ್ನು ಅನೇಕ ಕುಟುಂಬಗಳು ಗುಟ್ಟಾಗಿ ಇಡುತ್ತಿದ್ದವು. ಆದರೆ ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಈ ಮನೋಭಾವ ಸಂಪೂರ್ಣವಾಗಿ ಬದಲಾಯಿತು. ಇಂದು ಆಸ್ಟ್ರೇಲಿಯನ್ನರು ತಮ್ಮ ಪೂರ್ವಜರು ಅಪರಾಧಿಗಳಾಗಿದ್ದರು ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತಾರೆ.
ಬ್ರಿಟನ್ನ ಕ್ರೂರವ್ಯವಸ್ಥೆಯ ವಿರುದ್ಧ ಬಂಡೆದ್ದು, ಹೊಸ ಖಂಡದಲ್ಲಿ ಸ್ವಂತ ಶ್ರಮದಿಂದ ಸ್ವರ್ಗವನ್ನು ನಿರ್ಮಿಸಿದ ಸಾಹಸಿಗಳು ನಮ್ಮ ಪೂರ್ವಜರು ಎಂಬ ಹೆಮ್ಮೆ ಅವರಲ್ಲಿದೆ. ಹೀಗೆ ‘ಕಳ್ಳರ ದೇಶ’ ಎಂಬ ಹಣೆಪಟ್ಟಿಯೊಂದಿಗೆ ಶುರುವಾದ ಆಸ್ಟ್ರೇಲಿಯಾದ ಪಯಣ, ಇಂದು ಜಗತ್ತಿಗೆ ಒಂದು ದೊಡ್ಡ ಪಾಠವಾಗಿದೆ. ಮನುಷ್ಯನಿಗೆ ಎರಡನೇ ಅವಕಾಶ ನೀಡಿದರೆ ಆತ ಎಂಥ ಅದ್ಭುತಗಳನ್ನು ಸೃಷ್ಟಿಸಬಲ್ಲ ಎಂಬುದಕ್ಕೆ ಆಸ್ಟ್ರೇಲಿಯಾ ಜೀವಂತ ಉದಾಹರಣೆ. ಅಂದು ಹಸಿವಿಗಾಗಿ ಬ್ರೆಡ್ ಕದ್ದು ಗಡಿಪಾರಾದವರ ವಂಶಸ್ಥರು, ಇಂದು ಜಗತ್ತಿನ ಅತ್ಯಂತ ಪ್ರಾಮಾಣಿಕ, ಕಾನೂನು ಪಾಲಿಸುವ ಮತ್ತು ಸುಸಂಸ್ಕೃತ ಸಮಾಜಗಳಲ್ಲಿ ಒಂದನ್ನು ಕಟ್ಟಿ ಬೆಳೆಸಿದ್ದಾರೆ. ಆದ್ದರಿಂದಲೇ ಆಸ್ಟ್ರೇಲಿಯಾ ವನ್ನು ಕಳ್ಳರ ದೇಶ ಎಂದು ಕರೆಯುವುದು ಕೇವಲ ಒಂದು ಐತಿಹಾಸಿಕ ವ್ಯಂಗ್ಯವಾಗಿಯಷ್ಟೇ ಉಳಿದು, ಅದರ ಯಶೋಗಾಥೆಗೆ ಮತ್ತಷ್ಟು ಮೆರುಗು ನೀಡಿದೆ.
ಇಂದಿನ ಕಾಲದಲ್ಲಿ ನಮ್ಮಲ್ಲಿ ಯಾರಾದರೂ ವೀಸಾ ಅರ್ಜಿ ಹಾಕುವಾಗ, ‘ನಿಮ್ಮ ಮೇಲೆ ಯಾವುದಾದರೂ ಕ್ರಿಮಿನಲ್ ಕೇಸ್ ಇದೆಯೇ?’ ಎಂದು ಆಸ್ಟ್ರೇಲಿಯಾ ರಾಯಭಾರ ಕಚೇರಿ ಕೇಳಿದರೆ, ‘ಅಯ್ಯೋ ಸ್ವಾಮಿ, ನಿಮ್ಮ ದೇಶಕ್ಕೆ ಕಾಲಿಡಲು ಹಿಂದೆಲ್ಲ ಕ್ರಿಮಿನಲ್ ಕೇಸ್ ಇರುವುದೇ ಕಡ್ಡಾಯ ಅರ್ಹತೆಯಾಗಿತ್ತು, ಈಗ ನಿಯಮ ಬದಲಾಯಿಸಿದಿರಾ ಹೇಗೆ?’ ಎಂದು ತಮಾಷೆಯಾಗಿ ಕೇಳುವಂತಾಗಿದೆ!
ಇನ್ನೂರು ವರ್ಷಗಳ ಹಿಂದೆ ಬ್ರಿಟಿಷ್ ನ್ಯಾಯಾಧೀಶರು ಕೋಪಗೊಂಡು, ನಿನ್ನನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸುತ್ತೇನೆ’ ಎಂದರೆ ಅದು ಮರಣದಂಡನೆಗಿಂತ ಭಯಾನಕ ಶಿಕ್ಷೆಯಾಗಿತ್ತು. ಆದರೆ ಇಂದು ಅದೇ ಆಸ್ಟ್ರೇಲಿಯಾಕ್ಕೆ ಹೋಗಲು ಜನರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಐಇಎಲ್ಟಿಎಸ್ (IELTS) ಪರೀಕ್ಷೆ ಬರೆದು, ರಾಯಭಾರ ಕಚೇರಿಯ ಬಾಗಿಲಲ್ಲಿ ಸಾಲುಗಟ್ಟಿ ನಿಲ್ಲುತ್ತಾರೆ.
ಇತಿಹಾಸದ ಚಕ್ರ ಹೇಗೆ ತಿರುಗುತ್ತದೆ ನೋಡಿ, ‘ಅಂದು ಸರಕಾರವೇ ಖರ್ಚು ಮಾಡಿ ಕಳುಹಿಸುತ್ತಿದ್ದ ಊರಿಗೆ, ಇಂದು ಜನರು ಸ್ವಂತ ದುಡ್ಡು ಕೊಟ್ಟು ದಯವಿಟ್ಟು ನಮ್ಮನ್ನು ಒಳಗೆ ಬಿಟ್ಟುಕೊಳ್ಳಿ’ ಎಂದು ಬೇಡಿಕೊಳ್ಳುತ್ತಿದ್ದಾರೆ!
ಇನ್ನು ಆಸ್ಟ್ರೇಲಿಯನ್ನರ ಪ್ರಾಮಾಣಿಕತೆಯ ಮಟ್ಟವನ್ನು ನೋಡಿದರೆ, ಅವರ ಪೂರ್ವಜರು ನಿಜವಾಗಿಯೂ ಕಳ್ಳರಾಗಿದ್ದರೇ ಎಂಬ ಅನುಮಾನ ಬರುವುದು ಸಹಜ. ಅಲ್ಲಿನ ಹಳ್ಳಿಗಳ ರಸ್ತೆಬದಿ ಯಲ್ಲಿ ರೈತರು ತಾವು ಬೆಳೆದ ಹಣ್ಣು, ತರಕಾರಿ ಅಥವಾ ಜೇನುತುಪ್ಪದ ಬಾಟಲಿಗಳನ್ನು ಇಟ್ಟು, ಪಕ್ಕದ ಒಂದು ಚಿಕ್ಕ ಡಬ್ಬಿ ಇಟ್ಟಿರುತ್ತಾರೆ. ಅಲ್ಲಿ ಯಾರೂ ಕಾವಲುಗಾರರಿರುವುದಿಲ್ಲ. ಗ್ರಾಹಕರೇ ತಮಗೆ ಬೇಕಾದ ವಸ್ತುವನ್ನು ತೆಗೆದುಕೊಂಡು, ನಿಗದಿತ ಹಣವನ್ನು ಆ ‘ಆನೆಸ್ಟಿ ಬಾಕ್ಸ್’ ಒಳಗೆ ಹಾಕಿ ಹೋಗುತ್ತಾರೆ.
ಒಂದು ವೇಳೆ ನೂರು ರುಪಾಯಿ ನೋಟು ಹಾಕಿ ಚಿಲ್ಲರೆ ಬೇಕಿದ್ದರೆ, ಆ ಡಬ್ಬಿಯಿಂದಲೇ ತಮಗೆ ಬೇಕಾದಷ್ಟು ಚಿಲ್ಲರೆಯನ್ನು ಎಣಿಸಿಕೊಂಡು ತೆಗೆದುಕೊಳ್ಳುತ್ತಾರೆ! ಅಂದು ಬ್ರೆಡ್ ಕದ್ದು ಗಡಿಪಾರಾದವರ ವಂಶಸ್ಥರು, ಇಂದು ಪಕ್ಕದಲ್ಲಿ ಯಾರೂ ಇಲ್ಲದಿದ್ದರೂ ಒಂದು ರುಪಾಯಿ ಹೆಚ್ಚು ತೆಗೆದುಕೊಳ್ಳದಷ್ಟು ಪ್ರಾಮಾಣಿಕರಾಗಿ ಬೆಳೆದಿರುವುದು ಜಗತ್ತಿನ ಅದ್ಭುತವೇ ಸರಿ. ಹಳೆಯ ಕಾಲದ ಆ ಕಳ್ಳತನದ ರಕ್ತ ಈಗ ಕೇವಲ ಕ್ರೀಡಾ ಮೈದಾನದಲ್ಲಿ ‘ಚೆಂಡು ಕದಿಯುವ’ ಅಥವಾ ಎದುರಾಳಿ ಗಳ ವಿಕೆಟ್ ಕಬಳಿಸುವ ಕಲೆಯಾಗಿ ಬದಲಾಗಿದೆ ಅಷ್ಟೇ!
ಇಂಗ್ಲೆಂಡ್ನವರು ಕ್ರಿಕೆಟ್ ಆಟವನ್ನು ಕಂಡುಹಿಡಿದು, ತಾವು ಗಡಿಪಾರು ಮಾಡಿದ ಕೈದಿಗಳ ಊರಿಗೆ ಆಟ ಕಲಿಸಲು ಹೋದರು. ಆದರೆ ಆ ಕೈದಿಗಳ ವಂಶಸ್ಥರು ಎಂಥ ಚಾಲಾಕಿಗಳೆಂದರೆ, ಗುರುವಿಗೇ ತಿರುಮಂತ್ರ ಹಾಕಿ ಆಶಸ್ (Ashes) ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಹಣ್ಣುಗಾಯಿ ನೀರುಗಾಯಿ ಮಾಡಲಾರಂಭಿಸಿದರು. ಬ್ರಿಟನ್ನ ಜೈಲುಗಳಿಂದ ತಪ್ಪಿಸಿಕೊಂಡು ಬಂದವರಿಗೆ ಮೈದಾನದಲ್ಲಿ ರನ್ ಕದಿಯುವುದು ಮತ್ತು ಎದುರಾಳಿಗಳ ಕೈಯಿಂದ ವಿಶ್ವಕಪ್ ಕಸಿದುಕೊಳ್ಳು ವುದು ನೀರು ಕುಡಿದಷ್ಟೇ ಸುಲಭವಾಗಿಬಿಟ್ಟಿದೆ.
ಆಸ್ಟ್ರೇಲಿಯಾದ ಈ ಇತಿಹಾಸವನ್ನು ನೋಡಿದರೆ, ಕಳ್ಳತನಕ್ಕೂ ಒಂದು ಭವ್ಯವಾದ ಭವಿಷ್ಯವಿದೆ ಎಂಬ ತಮಾಷೆಯ ಸತ್ಯ ಹೊಳೆಯುತ್ತದೆ. ಅಂದು ಲಂಡನ್ ಬೀದಿಗಳಲ್ಲಿ ಸಣ್ಣಪುಟ್ಟ ಜೇಬುಗಳ್ಳತನ ಮಾಡಿದವರೆಲ್ಲ ಸೇರಿ ಇಂದು ಜಗತ್ತಿನ ಅತ್ಯಂತ ಸ್ವಚ್ಛ, ಶಿಸ್ತುಬದ್ಧ ಮತ್ತು ಸುರಕ್ಷಿತ ದೇಶವನ್ನು ಕಟ್ಟಿದ್ದಾರೆ.
ಒಂದು ವೇಳೆ ಅಂದಿನ ಬ್ರಿಟಿಷ್ ಸರಕಾರ ಆ ಕೈದಿಗಳನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸದೇ ಹೋಗಿದ್ದರೆ, ಇಂದು ಕಾಂಗರೂಗಳ ಜತೆ ಸೆಲ್ಫಿ ತೆಗೆದುಕೊಳ್ಳಲು ನಮಗೆ ಇಂಥ ಸುಂದರ ಪ್ರವಾಸಿ ತಾಣವೇ ಸಿಗುತ್ತಿರಲಿಲ್ಲ. ಹೀಗಾಗಿ, ಆಸ್ಟ್ರೇಲಿಯಾವನ್ನು ‘ಕಳ್ಳರ ದೇಶ’ ಎಂದು ಕರೆದರೂ, ಅದು ಹೃದಯಗಳನ್ನು ಕದಿಯುವ ಸುಂದರ ದೇಶವಾಗಿ ಬದಲಾಗಿದೆ ಎನ್ನುವುದೇ ಅತಿ ದೊಡ್ಡ ಹಾಸ್ಯ ಮತ್ತು ಸತ್ಯ!
ಮೇಟ್ಶಿಪ್ ಮತ್ತು ಸಮಾನತೆ
ಆಸ್ಟ್ರೇಲಿಯನ್ನರ ಬಾಯಲ್ಲಿ ಪ್ರತಿ ಎರಡು ನಿಮಿಷಕ್ಕೊಮ್ಮೆ ಉದುರುವ ‘ಎ’ day, Mate!’ ಎಂಬ ಪದವನ್ನು ಕೇಳಿದರೆ, ಈ ದೇಶದಲ್ಲಿ ಯಾರಿಗೂ ಹೆಸರುಗಳೇ ಇಲ್ಲವೇನೋ, ಎಲ್ಲರನ್ನೂ ಮೇಟ್ ಎಂದೇ ಕರೆಯುತ್ತಾರಲ್ಲ’ ಎಂದು ಮೊದಲ ಬಾರಿಗೆ ಹೋದವರಿಗೆ ಅಚ್ಚರಿಯಾಗುವುದು ಸಹಜ. ಆದರೆ ಈ ‘ಮೇಟ್ ಶಿಪ್’ (Mateship) ಎಂಬುದು ಕೇವಲ ಒಂದು ಪದವಲ್ಲ, ಅದು ಇನ್ನೂರು ವರ್ಷಗಳ ಹಿಂದೆ ಬ್ರಿಟಿಷ್ ಜೈಲುಗಳಿಂದ ಗಡಿಪಾರಾಗಿ ಬಂದ ಕೈದಿಗಳು ಸೇರಿ ಕಟ್ಟಿಕೊಂಡ ಒಂದು ಜೀವನ ವಿಧಾನ. ಇಂಗ್ಲೆಂಡ್ನಲ್ಲಿ ಶ್ರೀಮಂತರು, ಲಾರ್ಡ್ಗಳು ಮತ್ತು ಸಾಮಾನ್ಯ ಕೂಲಿ ಕಾರ್ಮಿಕರು ಎಂಬ ಕಠಿಣ ವರ್ಗಬೇಧವಿತ್ತು.
ಶ್ರೀಮಂತರ ಮುಂದೆ ಬಡವರು ತಲೆತಗ್ಗಿಸಿ ನಿಲ್ಲಬೇಕಿತ್ತು. ಆದರೆ ಆಸ್ಟ್ರೇಲಿಯಾಕ್ಕೆ ಬಂದಿಳಿದ ಕೈದಿಗಳಿಗೆ ‘ಇಲ್ಲಿ ಯಾರೂ ಲಾರ್ಡ್ಗಳಿಲ್ಲ, ನಾವೆಲ್ಲರೂ ಒಂದೇ ದೋಣಿಯ ಪ್ರಯಾಣಿಕರು’ ಎಂಬ ಸತ್ಯ ಬೇಗನೆ ಅರ್ಥವಾಯಿತು. ಸುಡುವ ಬಿಸಿಲು, ವಿಷಕಾರಿ ಹಾವುಗಳು ಮತ್ತು ಬ್ರಿಟಿಷ್ ಅಧಿಕಾರಿಗಳ ಚಾಟಿಯೇಟಿನ ನಡುವೆ ಬದುಕುಳಿಯಲು ಅವರಿಗಿದ್ದ ಏಕೈಕ ಅಸ್ತ್ರವೆಂದರೆ ಪಕ್ಕದಲ್ಲಿದ್ದ ಕೈದಿಯ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವುದು. ಅಂದು ಜೈಲಿನ ಸರಪಳಿಗಳ ನಡುವೆ ‘ನನ್ನ ಗೆಳೆಯನನ್ನು ಎಂದಿಗೂ ಅಧಿಕಾರಿಗಳಿಗೆ ಹಿಡಿದುಕೊಡುವುದಿಲ್ಲ’ ಎಂಬ ಅಲಿಖಿತ ಒಪ್ಪಂದದೊಂದಿಗೆ ಹುಟ್ಟಿದ ಸ್ನೇಹವೇ ಇಂದಿನ ‘ಮೇಟ್ಶಿಪ್’ ಆಗಿ ಹೆಮ್ಮರವಾಗಿ ಬೆಳೆದಿದೆ.
ಈ ’ಮೇಟ್ಶಿಪ್’ ಸಂಸ್ಕೃತಿ ಎಷ್ಟು ಆಳವಾಗಿ ಬೇರೂರಿದೆ ಎಂದರೆ, ಆಸ್ಟ್ರೇಲಿಯಾದಲ್ಲಿ ‘ಸರ್’ ಅಥವಾ ‘ಮೇಡಂ’ ಎಂಬ ಗೌರವಸೂಚಕ ಪದಗಳಿಗೆ ಅಕ್ಷರಶಃ ನಿಷೇಧ ಹೇರಿದಂತಿದೆ. ನಮ್ಮಲ್ಲಿ ಯಾರನ್ನಾದರೂ ‘ಸರ್’ ಎಂದು ಕರೆಯದಿದ್ದರೆ ಅವರು ಮುಖ ಊದಿಸಿಕೊಳ್ಳುತ್ತಾರೆ. ಆದರೆ ಆಸ್ಟ್ರೇಲಿಯಾದಲ್ಲಿ ಯಾರನ್ನಾದರೂ ‘ಸರ್’ ಎಂದು ಕರೆದರೆ ಅವರು ‘ನಾನೇನು ನಿನ್ನ ಶಾಲೆಯ ಹೆಡ್ಮಾಸ್ಟರಾ? ನನ್ನ ಹೆಸರು ಹಿಡಿದು ಕರೆಯಪ್ಪಾ ಅಥವಾ ಸುಮ್ಮನೆ ಮೇಟ್ ಅನ್ನು’ ಎಂದು ಮುಜುಗರಪಟ್ಟುಕೊಳ್ಳುತ್ತಾರೆ.
ಕಚೇರಿಗಳಲ್ಲಿ ಕಿರಿಯ ಉದ್ಯೋಗಿಯೊಬ್ಬ ತನ್ನ ಕಂಪನಿಯ ಸಿಇಒ ಅವರನ್ನು ಕೂಡ ಮೊದಲ ಹೆಸರಿನಿಂದಲೇ ಕರೆಯುವುದು ತೀರಾ ಸಾಮಾನ್ಯ. ಅಷ್ಟೇ ಏಕೆ, ದೇಶದ ಪ್ರಧಾನಮಂತ್ರಿ ರಸ್ತೆಯಲ್ಲಿ ಸಿಕ್ಕರೂ ಜನರು ಕೈಕುಲುಕಿ ‘ಹೇಗಿದ್ದೀಯಾ ಮೇಟ್?’ ಎಂದು ಕೇಳುತ್ತಾರೆಯೇ ಹೊರತು, ಅವರ ಮುಂದೆ ಕೈಕಟ್ಟಿ ನಿಲ್ಲುವುದಿಲ್ಲ.
ಅಧಿಕಾರ, ಹುದ್ದೆ ಮತ್ತು ಬ್ಯಾಂಕ್ ಬ್ಯಾಲೆನ್ಸ್ ಏನೇ ಇರಲಿ, ಮನುಷ್ಯರೆಲ್ಲರೂ ಒಂದೇ ಎಂಬ ಈ ಸರಳ ಸೂತ್ರ ಇಲ್ಲಿನ ಗಾಳಿಯ ಬೆರೆತುಹೋಗಿದೆ. ಆಸ್ಟ್ರೇಲಿಯನ್ನರ ಸಮಾನತೆಯ ಸಂಸ್ಕೃತಿಯನ್ನು ಅತ್ಯಂತ ತಮಾಷೆಯಾಗಿ ಮತ್ತು ಸ್ಪಷ್ಟವಾಗಿ ನೋಡಬೇಕೆಂದರೆ, ನೀವು ಅಲ್ಲಿನ ಟ್ಯಾಕ್ಸಿ ಅಥವಾ ಉಬರ್ ಹತ್ತಬೇಕು.
ನಮ್ಮಲ್ಲಿ ನಾವು ಟ್ಯಾಕ್ಸಿ ಹತ್ತಿದ ತಕ್ಷಣ ರಾಜರಂತೆ ಹಿಂದಿನ ಸೀಟಿನಲ್ಲಿ ಹೋಗಿ ಕೂರುತ್ತೇವೆ. ಆದರೆ ಆಸ್ಟ್ರೇಲಿಯಾದಲ್ಲಿ ನೀವು ಒಬ್ಬರೇ ಪ್ರಯಾಣಿಸುತ್ತಿದ್ದು ಹಿಂದಿನ ಸೀಟಿನಲ್ಲಿ ಕುಳಿತರೆ, ಚಾಲಕ ಕನ್ನಡಿಯಿಂದ ನಿಮ್ಮನ್ನು ವಿಚಿತ್ರವಾಗಿ ನೋಡುತ್ತಾನೆ! ‘ನಾನೇನು ನಿನ್ನ ಸೇವಕನಾ? ಬಂದು ನನ್ನ ಪಕ್ಕದ ಮುಂದಿನ ಸೀಟಿನಲ್ಲಿ ಕೂತು ಮಾತಾಡು’ ಎಂಬ ಭಾವನೆ ಆತನದ್ದಾಗಿರುತ್ತದೆ. ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತು, ಆತನ ಕುಟುಂಬ, ಹವಾಮಾನ ಮತ್ತು ಕ್ರಿಕೆಟ್ ಬಗ್ಗೆ ಹರಟೆ ಹೊಡೆಯುತ್ತಾ ಪ್ರಯಾಣಿಸುವುದೇ ಅಲ್ಲಿನ ನಿಜವಾದ ಶಿಷ್ಟಾಚಾರ. ಚಾಲಕನನ್ನು ಕೂಡ ತಮ್ಮ ಸಮಾನನಾದ ‘ಮೇಟ್’ ಎಂದು ಕಾಣುವ ಈ ಗುಣ, ಬ್ರಿಟನ್ನ ವರ್ಗಭೇದದ ವ್ಯವಸ್ಥೆಗೆ ಆಸ್ಟ್ರೇಲಿಯನ್ನರು ಕೊಟ್ಟ ಅತಿ ದೊಡ್ಡ ತಿರುಗೇಟು.
ಈ ಸಮಾನತೆಯ ಜತೆಗೆ ಆಸ್ಟ್ರೇಲಿಯಾದಲ್ಲಿ ‘ಟಾಲ್ ಪಾಪಿ ಸಿಂಡ್ರೋಮ್’ (Tall Poppy Syndrome) ಎಂಬ ಒಂದು ವಿಶಿಷ್ಟ ಸಾಮಾಜಿಕ ಕಾನೂನೂ ಚಾಲ್ತಿಯಲ್ಲಿದೆ. ಹೊಲದಲ್ಲಿ ಉಳಿದ ಗಿಡಗಳಿಗಿಂತ ಎತ್ತರಕ್ಕೆ ಬೆಳೆಯುವ ಗಸಗಸೆ ಗಿಡದ ತಲೆಯನ್ನು ಕತ್ತರಿಸುವಂತೆ, ಸಮಾಜದಲ್ಲಿ ಯಾರಾದರೂ ತಮ್ಮ ಶ್ರೀಮಂತಿಕೆ, ದುಬಾರಿ ಕಾರು ಅಥವಾ ದೊಡ್ಡ ಸಾಧನೆಯ ಬಗ್ಗೆ ಅಹಂಕಾರದಿಂದ ಬೀಗಲು ಶುರುಮಾಡಿದರೆ, ಆಸ್ಟ್ರೇಲಿಯನ್ನರು ಅದನ್ನು ಸುತರಾಂ ಸಹಿಸುವುದಿಲ್ಲ. ನೀವೆಷ್ಟೇ ದೊಡ್ಡ ಕೋಟ್ಯಧಿಪತಿಯಾಗಿದ್ದರೂ, ಸಾರ್ವಜನಿಕವಾಗಿ ಸಾಮಾನ್ಯರಂತೆ ಚಪ್ಪಲಿ ಹಾಕಿಕೊಂಡು, ಸರಳವಾಗಿ ಬದುಕಬೇಕು.
‘ನಾನು ದೊಡ್ಡವನು’ ಎಂದು ತೋರಿಸಿಕೊಳ್ಳಲು ಹೋದರೆ ಜನರು ನಿಮ್ಮನ್ನು ದೂರವಿಡುತ್ತಾರೆ. ಈ ಭಯದಿಂದಲೇ ಅಲ್ಲಿನ ದೊಡ್ಡ ದೊಡ್ಡ ಉದ್ಯಮಿಗಳು ಕೂಡ ವಾರಾಂತ್ಯದಲ್ಲಿ ತಮ್ಮ ಮನೆಯ ಹುಲ್ಲುಹಾಸನ್ನು ತಾವೇ ಕತ್ತರಿಸುತ್ತಾ, ಪಕ್ಕದ ಮನೆಯ ಪ್ಲಂಬರ್ ಜತೆ ಬಿಯರ್ ಹೀರುತ್ತಾ ಹರಟೆ ಹೊಡೆಯುತ್ತಿರುತ್ತಾರೆ.
ಶ್ರಮಕ್ಕೆ ನೀಡುವ ಗೌರವ (Dignity of Labour) ಕೂಡ ಇಲ್ಲಿನ ಸಮಾನತೆಯ ಇನ್ನೊಂದು ಅದ್ಭುತ ಮುಖ. ನಮ್ಮಲ್ಲಿ ವೈಟ್-ಕಾಲರ್ ಉದ್ಯೋಗಿಗಳಿಗೆ ಇರುವಷ್ಟು ಗೌರವ ಮತ್ತು ಸಂಬಳ ಪ್ಲಂಬರ್ಗಳಿಗೆ ಅಥವಾ ಕಾರ್ಪೆಂಟರ್ಗಳಿಗೆ ಇರುವುದಿಲ್ಲ. ಆದರೆ ಆಸ್ಟ್ರೇಲಿಯಾದಲ್ಲಿ ‘ಟ್ರೇಡೀಸ್’ ಎಂದು ಕರೆಯಲಾಗುವ ಪ್ಲಂಬರ್, ಎಲೆಕ್ಟ್ರಿಷಿಯನ್ ಮತ್ತು ಮರಗೆಲಸದವರು ಎಷ್ಟೋ ಬಾರಿ ಸಾಫ್ಟ್ʼವೇರ್ ಎಂಜಿನಿಯರ್ ಗಳಿಗಿಂತಲೂ ಹೆಚ್ಚು ಸಂಪಾದಿಸುತ್ತಾರೆ ಮತ್ತು ಅಷ್ಟೇ ಗೌರವದಿಂದ ಬದುಕುತ್ತಾರೆ. ಅಲ್ಲಿ ಯಾವುದೇ ಕೆಲಸವೂ ಕೀಳಲ್ಲ. ರಸ್ತೆ ಗುಡಿಸುವವನು ಮತ್ತು ಬ್ಯಾಂಕ್ ಮ್ಯಾನೇಜರ್ ಸಂಜೆ ಒಂದೇ ಪಬ್ನಲ್ಲಿ ಅಕ್ಕಪಕ್ಕ ಕುಳಿತು ತಮ್ಮ ‘ಮೇಟ್ಶಿಪ್’ ಆಚರಿಸುತ್ತಾರೆ.
ಪ್ರತಿಯೊಬ್ಬರಿಗೂ ತಮ್ಮ ಸಾಮರ್ಥ್ಯ ತೋರಿಸಲು ನ್ಯಾಯಯುತವಾದ ಅವಕಾಶ ಸಿಗಬೇಕು ಎಂಬ ‘ಫಾರ್ ಗೋ’ (A Fair Go) ತತ್ವವು ಇಡೀ ಸಮಾಜವನ್ನು ಒಂದೇ ತಕ್ಕಡಿಯಲ್ಲಿ ತೂಗುತ್ತದೆ. ಕಷ್ಟದ ಸಮಯ ಬಂದಾಗಲಂತೂ ಈ ‘ಮೇಟ್ಶಿಪ್’ ಪದದ ನಿಜವಾದ ಶಕ್ತಿ ಜಗತ್ತಿಗೆ ಕಾಣಿಸುತ್ತದೆ. ಆಸ್ಟ್ರೇಲಿಯಾದಲ್ಲಿ ಭೀಕರ ಕಾಡ್ಗಿಚ್ಚು ಅಥವಾ ಪ್ರವಾಹ ಸಂಭವಿಸಿದಾಗ, ಸರಕಾರದ ಪರಿಹಾರ ತಂಡಗಳು ಬರುವ ಮುನ್ನವೇ ಸಾವಿರಾರು ಸಾಮಾನ್ಯ ನಾಗರಿಕರು ತಮ್ಮ ಕೆಲಸಗಳಿಗೆ ರಜೆ ಹಾಕಿ ಸ್ವಯಂಸೇವಕರಾಗಿ ನಿಲ್ಲುತ್ತಾರೆ.
ಅಪರಿಚಿತರ ಮನೆಗಳನ್ನು ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಾರೆ. ತಾವು ತಿನ್ನುವ ಬ್ರೆಡ್ ತುಂಡನ್ನು ಪಕ್ಕದವನೊಂದಿಗೆ ಹಂಚಿಕೊಳ್ಳುತ್ತಾರೆ. ಮೊದಲನೇ ಮಹಾಯುದ್ಧದ ಸಮಯದಲ್ಲಿ ಗಲ್ಲಿಪೋಲಿ ಯುದ್ಧಭೂಮಿಯಲ್ಲಿ ಗುಂಡುಗಳ ಮಳೆಯ ನಡುವೆಯೂ ಗಾಯಗೊಂಡ ಗೆಳೆಯನನ್ನು ಹೆಗಲ ಮೇಲೆ ಹೊತ್ತು ತಂದ ಆಸ್ಟ್ರೇಲಿಯನ್ ಸೈನಿಕರ ಅದೇ ತ್ಯಾಗದ ರಕ್ತ ಇಂದಿಗೂ ಇವರ ನರನಾಡಿಗಳಲ್ಲಿ ಹರಿಯುತ್ತಿದೆ.
ವೆಲ್ಕಮ್ ಟು ಕಂಟ್ರಿ
ನಮ್ಮಲ್ಲಿ ಯಾವುದೇ ಸಭೆ ಅಥವಾ ಸಮಾರಂಭ ಶುರುವಾಗುವ ಮುನ್ನ ದೀಪ ಬೆಳಗಿಸುವುದು ಅಥವಾ ಪ್ರಾರ್ಥನೆ ಹಾಡುವುದು ಹೇಗೆ ಕಡ್ಡಾಯವೋ, ಆಸ್ಟ್ರೇಲಿಯಾದಲ್ಲಿ ಮೈಕ್ ಹಿಡಿದ ತಕ್ಷಣ ‘ವೆಲ್ ಕಮ್ ಟು ಕಂಟ್ರಿ’ ಅಥವಾ ‘ಅಕ್ನಾಲೆಡ್ಜ್ಮೆಂಟ್ ಆಫ್ ಕಂಟ್ರಿ’ (Acknowledgement of Country) ಹೇಳುವುದು ಅಷ್ಟೇ ಕಡ್ಡಾಯ!
ಆಸ್ಟ್ರೇಲಿಯಾಕ್ಕೆ ಹೊಸದಾಗಿ ಹೋದವರಿಗೆ, ವಿಮಾನ ನಿಲ್ದಾಣದಲ್ಲಿ ಇಳಿದಾಗಿನಿಂದ ಹಿಡಿದು ಶಾಲೆಯ ವಾರ್ಷಿಕೋತ್ಸವ, ಕ್ರಿಕೆಟ್ ಪಂದ್ಯ, ಕಾರ್ಪೊರೇಟ್ ಮೀಟಿಂಗ್, ಕೊನೆಗೆ ಜೂಮ್ ಕಾಲ್ ಶುರುವಾಗುವ ಮುನ್ನವೂ ಎಲ್ಲರೂ ಗಂಭೀರವಾಗಿ ನಿಂತು, ‘ಈ ಭೂಮಿಯ ಸಾಂಪ್ರದಾಯಿಕ ಮಾಲೀಕರಿಗೆ ನಮ್ಮ ನಮನಗಳು’ ಎಂದು ಹೇಳುವುದನ್ನು ಕೇಳಿದರೆ ‘ಅರೆ, ಇವರು ಪ್ರತಿ ಕಾರ್ಯಕ್ರಮದಲ್ಲೂ ಯಾರಿಗೆ ಆಸ್ತಿ ಪತ್ರ ಬರೆದುಕೊಡುತ್ತಿದ್ದಾರೆ?’ ಎಂದು ತಮಾಷೆಯ ಅನುಮಾನ ಬರುವುದು ಸಹಜ.
ಆದರೆ ಇದರ ಹಿಂದೆ ಅರವತ್ತೈದು ಸಾವಿರ ವರ್ಷಗಳ ಇತಿಹಾಸವನ್ನು ಗೌರವಿಸುವ ಒಂದು ಅದ್ಭುತ ಮತ್ತು ಪ್ರಬುದ್ಧ ಸಂಸ್ಕೃತಿ ಅಡಗಿದೆ. ಮೊದಲಿಗೆ ‘ವೆಲ್ಕಮ್ ಟು ಕಂಟ್ರಿ’ (Welcome to Country) ಬಗ್ಗೆ ನೋಡುವುದಾದರೆ, ಇದನ್ನು ಯಾರು ಬೇಕಾದರೂ ಮಾಡುವಂತಿಲ್ಲ. ಇದಕ್ಕೆ ವಿಶೇಷ ‘ಲೈಸೆನ್ಸ್’ ಅಂದರೆ ಆ ನೆಲದ ಮೂಲನಿವಾಸಿಗಳ (Aboriginal) ಹಿರಿಯರೇ ಆಗಿರಬೇಕು!
ನಮ್ಮಲ್ಲಿ ಮುಖ್ಯ ಅತಿಥಿಗಳು ಬರುವುದು ತಡವಾದರೆ ನಿರೂಪಕರೇ ವೇದಿಕೆ ಹತ್ತಿ ‘ನಾನೇ ಎಲ್ಲರಿಗೂ ಸ್ವಾಗತ ಕೋರುತ್ತೇನೆ’ ಎಂದು ಮೈಕ್ ಕಿತ್ತುಕೊಳ್ಳುತ್ತಾರೆ. ಆದರೆ ಆಸ್ಟ್ರೇಲಿಯಾದಲ್ಲಿ ಹಾಗೆ ಮಾಡುವಂತಿಲ್ಲ. ಆ ಪ್ರದೇಶದ ಸಾಂಪ್ರದಾಯಿಕ ಪಾಲಕರಾದ ಮೂಲನಿವಾಸಿ ಹಿರಿಯರು ಬಂದು, ತಮ್ಮ ಪ್ರಾಚೀನ ಭಾಷೆಯಲ್ಲಿ ಸ್ವಾಗತ ಕೋರಿ, ‘ಡಿಡ್ಜೆರಿಡೂ’ (Didgeridoo) ವಾದ್ಯ ನುಡಿಸಿ, ನೀಲಗಿರಿ ಎಲೆಗಳನ್ನು ಸುಟ್ಟು ಹೊಗೆ ಹರಡುವ ‘ಸ್ಮೋಕಿಂಗ್ ಸೆರಿಮನಿ’ ನಡೆಸಬೇಕು.
ಒಂದು ರೀತಿಯಲ್ಲಿ ‘ನಮ್ಮ ಊರಿಗೆ ಬಂದಿದ್ದೀರಿ, ಒಳ್ಳೆಯದಾಗಲಿ, ಯಾವುದೇ ತೊಂದರೆಯಿಲ್ಲದೆ ಓಡಾಡಿ’ ಎಂದು ಆ ನೆಲದ ನಿಜವಾದ ಯಜಮಾನರು ಕೊಡುವ ಸಾಂಪ್ರದಾಯಿಕ ‘ವೀಸಾ’ ಇದ್ದಂತೆ ಇದು! ಇನ್ನು ಮೂಲನಿವಾಸಿ ಹಿರಿಯರು ಆ ಸಭೆಗೆ ಬರಲು ಸಾಧ್ಯವಾಗದಿದ್ದರೆ ಏನು ಮಾಡುವುದು? ಅದಕ್ಕಾಗಿಯೇ ಆಸ್ಟ್ರೇಲಿಯನ್ನರು ಕಂಡುಕೊಂಡ ಜಾಣ್ಮೆಯ ಉಪಾಯವೇ ‘ಅಕ್ನಾಲೆಡ್ಜ್ಮೆಂಟ್ ಆಫ್ ಕಂಟ್ರಿ’.
ಇದನ್ನು ಯಾರು ಬೇಕಾದರೂ ಮಾಡಬಹುದು-ಪ್ರಧಾನಮಂತ್ರಿಯಿಂದ ಹಿಡಿದು ಶಾಲೆಯ ಪುಟ್ಟ ಮಗುವಿನವರೆಗೆ ಯಾರಾದರೂ ಮೈಕ್ ಹಿಡಿದು, ‘ನಾವು ಇಂದು ನಿಂತಿರುವ ಈ ಭೂಮಿಯ ಮೂಲ ನಿವಾಸಿಗಳಿಗೆ ಮತ್ತು ಅವರ ಹಿಂದಿನ, ಇಂದಿನ, ಮುಂದಿನ ಹಿರಿಯರಿಗೆ ಗೌರವ ಸಲ್ಲಿಸುತ್ತೇವೆ’ ಎಂದು ಹೇಳುತ್ತಾರೆ. ಆಸ್ಟ್ರೇಲಿಯಾದಲ್ಲಿ ಎಷ್ಟರಮಟ್ಟಿಗೆ ಇದು ಅಭ್ಯಾಸವಾಗಿಬಿಟ್ಟಿದೆ ಎಂದರೆ, ಕೆಲವು ಉತ್ಸಾಹಿ ಕಾರ್ಪೊರೇಟ್ ಉದ್ಯೋಗಿಗಳು ಆನ್ಲೈನ್ ಮೀಟಿಂಗ್ಗಳಲ್ಲಿ ಕೂಡ ‘ನನ್ನ ಲ್ಯಾಪ್ ಟಾಪ್ ಇರುವ ಈ ಮೇಜಿನ ಕೆಳಗಿನ ಭೂಮಿಯ ಸಾಂಪ್ರದಾಯಿಕ ಮಾಲೀಕರಿಗೆ ನಮನಗಳು’ ಎನ್ನುವಷ್ಟರ ಮಟ್ಟಿಗೆ ಶ್ರದ್ಧೆ ತೋರಿಸುತ್ತಾರೆ!
ಈ ಸಂಪ್ರದಾಯದ ಹಿಂದಿರುವ ಐತಿಹಾಸಿಕ ತಮಾಷೆ ಮತ್ತು ವ್ಯಂಗ್ಯವನ್ನು ಅರ್ಥಮಾಡಿಕೊಳ್ಳು ವುದು ಬಹಳ ಮುಖ್ಯ. 1788ರಲ್ಲಿ ಬ್ರಿಟಿಷರು ಆಸ್ಟ್ರೇಲಿಯಾಕ್ಕೆ ಬಂದಿಳಿದಾಗ, ಅಲ್ಲಿ ಅರವತ್ತೈದು ಸಾವಿರ ವರ್ಷಗಳಿಂದ ಲಕ್ಷಾಂತರ ಮೂಲನಿವಾಸಿಗಳು ವಾಸವಿದ್ದರೂ ಕಣ್ಣಿಗೆ ಕಾಣದವರಂತೆ ನಟಿಸಿ, ಈ ಖಂಡವನ್ನು ‘ಟೆರಾ ನಲ್ಲಿಯಸ್’ (Terra Nullius) ಅಂದರೆ ಯಾರಿಗೂ ಸೇರದ ಖಾಲಿ ಭೂಮಿ ಎಂದು ಘೋಷಿಸಿ ಕಬಳಿಸಿಬಿಟ್ಟರು! ಅಂದರೆ ಮನೆಯೊಳಗೆ ಯಜಮಾನ ಕುಳಿತಿದ್ದರೂ, ಹೊರಗಿನಿಂದ ಬಂದವರು ‘ಈ ಮನೆ ಖಾಲಿಯಿದೆ, ಇಂದಿನಿಂದ ಇದು ನಮ್ಮದು’ ಎಂದು ಬೋರ್ಡ್ ಹಾಕಿದಂತಿತ್ತು ಆ ಕಥೆ. ಇನ್ನೂರು ವರ್ಷಗಳ ಕಾಲ ಮಾಡಿದ ಆ ದೊಡ್ಡ ತಪ್ಪಿಗೆ ಪ್ರಾಯಶ್ಚಿತ್ತವಾಗಿ, ಇಂದು ಆಸ್ಟ್ರೇಲಿಯನ್ನರು ಪ್ರತಿ ಸಭೆಯಲ್ಲೂ ‘ಕ್ಷಮಿಸಿ, ಈ ಭೂಮಿ ಖಾಲಿ ಇರಲಿಲ್ಲ, ಇದು ನಿಮ್ಮದೇ ತಾಯ್ನಾಡು’ ಎಂದು ಸಾರ್ವಜನಿಕವಾಗಿ ಒಪ್ಪಿಕೊಳ್ಳುತ್ತಿದ್ದಾರೆ.