Vinayaka M Bhat Column: ಒಂದು ಕಾಲದಲ್ಲಿ ಹೋಮ್ ಮಿನಿಸ್ಟ್ರೇ ಸ್ಟ್ರಾಂಗು ಗುರು !
ಲಾಲ್ ಬಹದ್ದೂರ್ ಶಾಸ್ತ್ರೀ, ಪಿ.ವಿ. ನರಸಿಂಹರಾವ್ ಮುಂತಾದವರು ಪ್ರಧಾನಿಯಾಗುವುದಕ್ಕೂ ಮುಂಚೆ ಕ್ರಮವಾಗಿ ನೆಹರು ಹಾಗೂ ರಾಜೀವ್ ಗಾಂಧಿಯವರ ಸಂಪುಟದಲ್ಲಿ ಗೃಹ ಖಾತೆಯನ್ನು ನಿರ್ವಹಿಸುತ್ತಿದ್ದರು. ಇಂದಿರಾ ಸಚಿವ ಸಂಪುಟದಲ್ಲಿ ಗೃಹಮಂತ್ರಿಯಾಗಿದ್ದ ಆರ್.ವೆಂಕಟರಾಮನ್ ಮತ್ತು ಜ್ಞಾನಿ ಜೈಲ್ ಸಿಂಗ್ ಅವರಂತೂ ಮುಂದೆ ರಾಷ್ಟ್ರಪತಿಯಾಗಿದ್ದರು.
-
ವಿದ್ಯಮಾನ
ಪ್ರಿಯಾಂಕ್ ಖರ್ಗೆಯವರು ಸಂಘದ ಹಿಂದೆ ಬೀಳುತ್ತಿರುವುದು ಇದೇನು ಹೊಸತಲ್ಲ ಬಿಡಿ. ಆದರೆ, ಈ ವಿಷಯದಲ್ಲಿ ಹಿಂದೆಯೂ ಪಕ್ಷ ಖರ್ಗೆಯವರ ಜತೆ ನಿಂತಿರಲಿಲ್ಲ, ಈ ಬಾರಿಯೂ ಅವರ ಅತ್ಯುತ್ಸಾಹಕ್ಕೆ ನೀರೆರೆಯುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ, ಸ್ವತಃ ಅವರ ತಂದೆಯವರನ್ನೂ ಸೇರಿ ಕೇಂದ್ರದ ಯಾವ ನಾಯಕರೂ ಇವರಿಗೆ ಧ್ವನಿಗೂಡಿಸಿದಂತೆ ಕಾಣಲಿಲ್ಲ.
ಕೇಂದ್ರ ಅಥವಾ ರಾಜ್ಯ ಸರಕಾರದ ಸಂಪುಟದಲ್ಲಿ ಮೊದಲಿನಿಂದಲೂ ಗೃಹಖಾತೆಗೆ ಬಹಳ ಗೌರವ ವಿದೆ. ಮನೆಯಲ್ಲೂ ಹಾಗೆ ಅಲ್ಲವೇ? ಹೆಂಡತಿಗೆ ‘ಹೋಮ್ ಮಿನಿಸ್ಟರ್’ ಅಂತ ಕರೆಯುವುದು, ಗಂಡನಿಗಲ್ಲ. ತುರ್ತು ಸಂದರ್ಭಗಳಲ್ಲಿ ಹಾಗೂ ಪ್ರಧಾನಮಂತ್ರಿಗಳ ಅನುಪಸ್ಥಿತಿಯಲ್ಲಿ ಗೃಹ ಮಂತ್ರಿಗಳಿಗೆ ಸಂಪುಟ ಸಭೆಯನ್ನು ನಡೆಸುವ ಅಧಿಕಾರವಿರುವುದು. ಅಂದರೆ, ಆ ಖಾತೆ ಎಷ್ಟು ‘ಪವರ್ ಫುಲ್’ ಎನ್ನುವುದು ಅರ್ಥವಾದೀತು.
ಒಂದರ್ಥದಲ್ಲಿ, ಗೃಹ ಖಾತೆಯನ್ನು ಸಂಪುಟದಲ್ಲಿ ಪ್ರಧಾನ ಮಂತ್ರಿಗಳ ಅಥವಾ ಮುಖ್ಯಮಂತ್ರಿಗಳ ನಂತರದ ಸ್ಥಾನ ಅಂತಲೇ ಪರಿಗಣಿಸುವ ಕಾಲವಿತ್ತು. ಹಣಕಾಸು ಹಾಗೂ ರಕ್ಷಣೆಗಿಂತಲೂ ಗೃಹ ಖಾತೆಗಿರುವ ಮರ್ಯಾದೆ ಹೆಚ್ಚು ಅಂತಲೇ ಭಾವಿಸಲಾಗುತ್ತಿತ್ತು.
ಸರ್ದಾರ್ ಪಟೇಲ್ ಅವರು ನಮ್ಮ ದೇಶದ ಮೊದಲ ಗೃಹ ಮಂತ್ರಿಯಾಗಿದ್ದವರು. ಅವರ ನಿಧನದ ನಂತರ, ನೆಹರೂ ಸಂಪುಟದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಗೋವಿಂದ ವಲ್ಲಭ ಪಂತ್, ಸಿ. ರಾಜಗೋಪಾಲಾಚಾರಿ, ಕೈಲಾಶ್ ನಾಥ್ ಕಾಟ್ಜು ಮುಂತಾದ ದಕ್ಷ ಆಡಳಿತಗಾರರು ಈ ಹುದ್ದೆ ಯನ್ನು ನಿರ್ವಹಿಸಿದ್ದಾರೆ.
ಲಾಲ್ ಬಹದ್ದೂರ್ ಶಾಸ್ತ್ರೀ, ಪಿ.ವಿ.ನರಸಿಂಹರಾವ್ ಮುಂತಾದವರು ಪ್ರಧಾನಿಯಾಗುವುದಕ್ಕೂ ಮುಂಚೆ ಕ್ರಮವಾಗಿ ನೆಹರು ಹಾಗೂ ರಾಜೀವ್ ಗಾಂಧಿಯವರ ಸಂಪುಟದಲ್ಲಿ ಗೃಹ ಖಾತೆಯನ್ನು ನಿರ್ವಹಿಸುತ್ತಿದ್ದರು. ಇಂದಿರಾ ಸಚಿವ ಸಂಪುಟದಲ್ಲಿ ಗೃಹಮಂತ್ರಿಯಾಗಿದ್ದ ಆರ್.ವೆಂಕಟರಾಮನ್ ಮತ್ತು ಜ್ಞಾನಿ ಜೈಲ್ ಸಿಂಗ್ ಅವರಂತೂ ಮುಂದೆ ರಾಷ್ಟ್ರಪತಿಯಾಗಿದ್ದರು.
ಇದನ್ನೂ ಓದಿ: Vinayaka M Bhat Column: ಪ್ರಾರ್ಥನೆಗೊಲಿದ ಆಸನ, ಅಂತೂ ಶುರುವಾದ ಶಿವ ಶಾಸನ
ಮುರಾರ್ಜಿ ದೇಸಾಯಿ, ಶ್ರೀಮತಿ ಇಂದಿರಾಗಾಂಧಿ ಮತ್ತು ಚಂದ್ರಶೇಖರವರು ಪ್ರಧಾನಿಯಾಗಿದ್ದಾಗ ಗೃಹಖಾತೆಯನ್ನು ಕೆಲಕಾಲ ತಮ್ಮ ಬಳಿಯೇ ಉಳಿಸಿಕೊಂಡಿದ್ದರು. ಇನ್ನು ಮುಫ್ತಿ ಮೊಹಮ್ಮದ್, ಮುರಳಿ ಮನೋಹರ್ ಜೋಶಿ, ಆಡ್ವಾಣಿ, ರಾಜನಾಥ ಸಿಂಗ್ ಮತ್ತು ಈಗ ಅಮಿತ್ ಶಾ ಅವರು ಕಾಂಗ್ರೆಸ್ಸೇತರ ಸರಕಾರದಲ್ಲಿ ಗೃಹ ಖಾತೆಯನ್ನು ನಿರ್ವಹಿಸಿದ್ದಾರೆ. ಎಂಬಲ್ಲಿಗೆ, ಆ ಖಾತೆ ಎಷ್ಟು ಮಹತ್ವದ್ದಾಗಿತ್ತು ಎನ್ನುವುದು ತಿಳಿದು ಬರುತ್ತದೆ.
ಗೃಹ ವ್ಯವಹಾರಗಳ ಸಚಿವಾಲಯ ಅನೇಕ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತದೆ, ಆಂತರಿಕ ಭದ್ರತೆ, ಗಡಿ ನಿರ್ವಹಣೆ, ಕೇಂದ್ರ-ರಾಜ್ಯ ಸಂಬಂಧಗಳು, ಕೇಂದ್ರಾಡಳಿತ ಪ್ರದೇಶಗಳ ಆಡಳಿತ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ನಿರ್ವಹಣೆ, ವಿಪತ್ತು ನಿರ್ವಹಣೆ ಹಾಗೂ ಗುಪ್ತಚರ ಇಲಾಖೆ ಇತ್ಯಾದಿ. ಭಾರತದ ಸಂವಿಧಾನದ ಏಳನೇ ಶೆಡ್ಯೂಲ್‌ನಲ್ಲಿರುವ ಪಟ್ಟಿಯ ನಮೂದುಗಳ ಪ್ರಕಾರ, ‘ಸಾರ್ವಜನಿಕ ಸುವ್ಯವಸ್ಥೆ’ ಮತ್ತು ‘ಪೊಲೀಸ್’ ರಾಜ್ಯಗಳ ಜವಾಬ್ದಾರಿಗಳಾಗಿದ್ದರೂ, ಸಂವಿಧಾನದ 355ನೇ ಅನುಚ್ಛೇದವು ಪ್ರತಿ ರಾಜ್ಯವನ್ನು ಬಾಹ್ಯ ಆಕ್ರಮಣ ಮತ್ತು ಆಂತರಿಕ ಅಶಾಂತಿಯಿಂದ ರಕ್ಷಿಸಲು ಮತ್ತು ಪ್ರತಿ ರಾಜ್ಯದ ಸರಕಾರವನ್ನು ಸಂವಿಧಾನದ ನಿಬಂಧನೆಗಳಿಗೆ ಅನುಗುಣವಾಗಿ ನಡೆಸುವುದನ್ನು ಖಚಿತ ಪಡಿಸಿಕೊಳ್ಳುವ ಜವಾಬ್ದಾರಿಯನ್ನು ಕೇಂದ್ರಕ್ಕೆ ವಹಿಸುತ್ತದೆ. ಈ ಬಾಧ್ಯತೆಗಳ ಅನುಸರಣೆಯಲ್ಲಿ, ಗೃಹ ವ್ಯವಹಾರಗಳ ಸಚಿವಾಲಯವು ಆಂತರಿಕ ಭದ್ರತಾ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತದೆ, ರಾಜ್ಯಗಳಿಗೆ ಸೂಕ್ತ ಸಲಹೆಗಳನ್ನು ನೀಡುತ್ತದೆ, ಗುಪ್ತಚರ ಮಾಹಿತಿಗಳನ್ನು ಹಂಚಿಕೊಳ್ಳುತ್ತದೆ, ರಾಜ್ಯಗಳ ಸಾಂವಿಧಾನಿಕ ಹಕ್ಕುಗಳನ್ನು ಅತಿಕ್ರಮಿಸದೆ ಭದ್ರತೆ, ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಿ ಕೊಳ್ಳಲು ರಾಜ್ಯ ಸರಕಾರಗಳಿಗೆ ಮಾನವಸಂಪನ್ಮೂಲ ಮತ್ತು ಆರ್ಥಿಕ ಬೆಂಬಲ, ಮಾರ್ಗದರ್ಶನ ಮತ್ತು ಪರಿಣತಿಯನ್ನು ನೀಡುತ್ತದೆ. ಇದು ಕೇಂದ್ರ ಗೃಹ ಇಲಾಖೆಯ ಕಥೆಯಾಯಿತು.
ಇನ್ನು ಇತಿಹಾಸವನ್ನು ನೋಡಿದರೆ, ಕರ್ನಾಟಕ ರಾಜ್ಯದ ಗೃಹ ಖಾತೆಯನ್ನು ನೇರವಾಗಿ ಮುಖ್ಯ ಮಂತ್ರಿಗಳು ಹೊಂದಿರುತ್ತಿದ್ದರು ಅಥವಾ ಪಕ್ಷದ ಹಿರಿಯ, ಅನುಭವಿ ಹಾಗೂ ದಕ್ಷ ನಾಯಕರುಗಳಿಗೆ ಈ ಖಾತೆಯನ್ನು ಹಂಚಿಕೆ ಮಾಡಲಾಗುತ್ತಿತ್ತು ಎನ್ನುವುದು ತಿಳಿದುಬರುತ್ತದೆ.
ಗೃಹ ಖಾತೆ ಅನುದಾನದ ದೃಷ್ಠಿಯಿಂದ ಅಷ್ಟು ದೊಡ್ಡ ಖಾತೆಯಲ್ಲದಿದ್ದರೂ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಹಾಗೂ ಇನ್ನಿತರ ಜವಾಬ್ದಾರಿಯ ಹಿನ್ನೆಲೆಯಲ್ಲಿ ನೋಡುವಾಗ ಅತ್ಯಂತ ಪ್ರಮುಖವಾದದ್ದಾಗಿದೆ. ಹಿಂದೆ ಕಡಿದಾಳ ಮಂಜಪ್ಪ, ಕೆಂಗಲ್ ಹನುಮಂತಯ್ಯ ಹಾಗೂ ಬಿ.ಡಿ. ಜತ್ತಿಯವರನ್ನೂ ಸೇರಿ, ದೇವರಾಜ್ ಅರಸ್, ವೀರೇಂದ್ರ ಪಾಟೀಲ್, ಗುಂಡು ರಾವ್, ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ಎಸ್.ಬಂಗಾರಪ್ಪ ವರೆಗೆ ಬಹುತೇಕ ಮುಖ್ಯಮಂತ್ರಿ ಗಳೇ ಗೃಹಖಾತೆಯನ್ನು ತಮ್ಮ ಬಳಿ ಇಟ್ಟುಕೊಳ್ಳುತ್ತಿದ್ದ ಉದಾಹರಣೆಯಿದೆ.
ಬಹುಶಃ ವೀರಪ್ಪ ಮೊಯ್ಲಿಯವರಿಂದೀಚೆಗೆ ಮುಖ್ಯಮಂತ್ರಿಯನ್ನು ಹೊರತುಪಡಿಸಿ ಅತ್ಯಂತ ಹಿರಿಯ ಹಾಗೂ ಅನುಭವಿ ವ್ಯಕ್ತಿಗೆ ಗೃಹ ಖಾತೆಯನ್ನು ಕೊಡುತ್ತಾ ಬರಲಾಗಿದೆ. ಮಲ್ಲಿಕಾರ್ಜುನ ಖರ್ಗೆಯವರೂ ಎಸ್.ಎಮ್.ಕೃಷ್ಣ ಅವರ ಕಾಲದಲ್ಲಿ ಗೃಹಮಂತ್ರಿಯಾಗಿದ್ದವರೇ. ಅವರ ಕಾಲದ ಡಾ.ರಾಜ್ ಕುಮಾರ್ ಅಪಹರಣವಾಗಿದ್ದು. ಬಹುಶಃ, ತಂದೆ ಹಾಗೂ ಮಗ ಇಬ್ಬರೂ ಒಂದು ರಾಜ್ಯದ ಗೃಹಮಂತ್ರಿ ಯಾಗುತ್ತಿರುವುದು ಇದೇ ಮೊದಲು ಇದ್ದರೂ ಇರಬಹುದು, ಅದು ಹೌದಾದರೆ ದೊಡ್ಡ ಹಾಗೂ ಸಣ್ಣ ಖರ್ಗೆಯವರಿಗೆ ನನ್ನ ಅಭಿನಂದನೆಗಳು. ಹೀಗೆ ಪಿ.ಜಿ.ಆರ್. ಸಿಂಧಿಯಾ, ವಿ.ಎಸ್. ಆಚಾರ್ಯ, ಎಮ್.ಪಿ. ಪ್ರಕಾಶ್ ಮುಂತಾದವರು ರಾಜ್ಯದಲ್ಲಿ ಗೃಹ ಖಾತೆಯನ್ನು ನಿರ್ವಹಿಸಿದ್ದಾರೆ.
ಪೂರ್ವಾನುಭ, ಹಿರಿತನ ಎರಡೂ ಇಲ್ಲದೇ ಗೃಹ ಖಾತೆಯನ್ನು ದಕ್ಕಿಸಿಕೊಂಡವರಲ್ಲಿ ಮೊದಲಿಗರು ಅರಗ ಜ್ಞಾನೇಂದ್ರ ಹಾಗೂ ಪ್ರಿಯಾಂಕ್ ಖರ್ಗೆಯವರು. ಅರಗ ಜ್ಞಾನೇಂದ್ರ ಅವರಂತೂ ಮೊತ್ತ ಮೊದಲ ಬಾರಿಗೆ ಮಂತ್ರಿಯಾದವರು, ನೇರವಾಗಿ ಗೃಹಮಂತ್ರಿಯಾಗಿ ಬಿಟ್ಟರು. ಅನುಭವದ ಕೊರತೆ ಇದ್ದರೂ ಒಂದು ಮಟ್ಟಕ್ಕೆ ಪ್ರಾಮಾಣಿಕವಾಗಿ ಅವರು ಕೆಲಸ ಮಾಡಿದ್ದರು ಎನ್ನುವುದು ಬೇರೇ ಮಾತು.
ಯಾರು ಬೇಕಾದರೂ ಗೃಹ ಮಂತ್ರಿಯಾಗಬಹುದು ಎಂದು ಮೊದಲು ತೋರಿಸಿಕೊಟ್ಟಿದ್ದೇ ಬಿಜೆಪಿ. ಪ್ರಿಯಾಂಕ್ ಖರ್ಗೆಯವರಿಗೆ ಮಹತ್ವದ ಗೃಹಖಾತೆ ನೀಡುವ ಮೂಲಕ ಈಗ ಕಾಂಗ್ರೆಸ್ಸೂ ಅದೇ ದಾರಿಹಿಡಿದ ಹಾಗೆ ಕಾಣುತ್ತಿದೆ. ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಒಲ್ಲದ ಮನಸ್ಸಿನಿಂದಲೇ ಡಾ.ಜಿ.ಪರಮೇಶ್ವರ ಅವರು ಈ ಖಾತೆಯನ್ನು ನಿರ್ವಹಿಸಿದ್ದರು, ಈ ಕುರಿತು ಅನೇಕ ಬಾರಿ ತಮ್ಮ ಅಸಮಧಾನವನ್ನು ಅವರು ಬಹಿರಂಗವಾಗಿ ಹೇಳಿದ್ದೂ ಇದೆ. ಅಂತೂ ಈ ಬಾರಿಯೂ ಯಾರಿಗೂ ಬೇಡದ ಗೃಹ ಖಾತೆ ಯುವಕ ಪ್ರಿಯಾಂಕ್ ಹೆಗಲೇರಿದೆ ಪಾಪ. ಮೊದಲೆಲ್ಲ ಮುಖ್ಯಮಂತ್ರಿಗಳೇ ಇಟ್ಟುಕೊಳ್ಳುತ್ತಿದ್ದ ಗೃಹ ಖಾತೆ, ಈಗ ಯಾರಿಗೂ ಬೇಡದ ಖಾತೆಯಾಗಿದೆ.
ಮುಖ್ಯಮಂತ್ರಿಗಳಿಗೆ ಈಗ ಹಣಾಕಾಸು ಖಾತೆ ಬೇಕಾಗುತ್ತೆ, ಬೆಂಗಳೂರು ಅಭಿವೃದ್ಧಿ ಖಾತೆ ಬೇಕಾಗುತ್ತೆ, ಆದರೆ ಗೃಹ ಖಾತೆ ಮಾತ್ರ ಬೇಡ. ಇನ್ನು ಉಳಿದವರಿಗೆ, ಯಾವ ಖಾತಯಾದರೂ ಸರಿ ಆದರೆ ಗೃಹ ಖಾತೆ ಮಾತ್ರ ಬೇಡ ಅನ್ನುವ ಮಟ್ಟಕ್ಕೆ ಬಂದು ತಲುಪಿಬಿಟ್ಟಿದೆ. ಕಾರಣ ಸರಳ, ಅನುದಾನ ಕಡಿಮೆ, ನಿತ್ಯ ಜನರಿಂದ ಅನ್ನಿಸಿಕೊಳ್ಳುವ ಮತ್ತು ಉತ್ತರ ಹೇಳಬೇಕಾದ ಖಾತೆ ಅದು.
ಗುಪ್ತಚರದಳ ಮುಂತಾದ ಅಧಿಕಾರಿಗಳು ನೇರವಾಗಿ ಮುಖ್ಯಮಂತ್ರಿಗಳನ್ನು ಸಂಪರ್ಕಿಸುತ್ತಾರೆ, ಇನ್ನು ವರ್ಗಾವಣೆಯನ್ನೂ ಮಂತ್ರಿಯಾದವನು ಸ್ವತಂತ್ರವಾಗಿ ಮಾಡುವಂತಿಲ್ಲ. ಶಾಸಕರು, ಸಂಪುಟ ಸಹೋದ್ಯೋಗಿಗಳಿಂದ ಹಿಡಿದು ಮುಖ್ಯಮಂತ್ರಿ ಹಾಗೂ ಹೈಕಮಾಂಡ್‌ವರೆಗೆ ನೂರೇಂಟು ಜನರ ಹಸ್ತಕ್ಷೇಪ ಇರುತ್ತದೆ. ಗ್ಯಾರಂಟಿಗಳ ಯಾವ ಯೋಜನೆಯೂ ಈ ಇಲಾಖೆಗೆ ಸಂಬಂಧಿಸುವು ದಿಲ್ಲ. ತಲೆನೋವು ಮಾತ್ರ ಜಾಸ್ತಿ ಬಿಟ್ಟರೆ ಮತ್ತೇನಿಲ್ಲ.
ಹಾಗಿದ್ದಾಗ ಯಾರಿಗೆ ಬೇಕು ಹೇಳಿ ಗೃಹಖಾತೆ?. ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರಕಾರ ದಲ್ಲಿ ಬಹುತೇಕ ಎಲ್ಲ ಮಂತ್ರಿಗಳು ಒಂದಲ್ಲ ಒಂದು ಕಾರಣಕ್ಕೆ ಕ್ಯಾತೆ ಎತ್ತುತ್ತಲೇ ಇದ್ದಾರೆ, ತಮ್ಮ ಹಿರಿತನಕ್ಕೆ ಬೆಲೆಕೊಟ್ಟು ಸೂಕ್ತ ಇಲಾಖೆಯನ್ನು ಕೊಟ್ಟಿಲ್ಲ ಎನ್ನುವುದು ಅವರ ಪ್ರಮುಖ ದೂರು. ಮಜ ನೋಡಿ!
ಅವರಲ್ಲಿ ಯಾರೂ ತಮ್ಮ ಹಿರಿತನವನ್ನು ಕಡೆಗಣಿಸಿ ಪ್ರಿಯಾಂಕ ಖರ್ಗೆಯವರಿಗೆ ಪ್ರಮುಖ ಗೃಹ ಖಾತೆಯನ್ನು ನೀಡಲಾಗಿದೆ ಎಂದು ದೂರಿದ್ದನ್ನು ಕೇಳಿದ್ದೀರಾ? ಇಲ್ಲವೇ ಇಲ್ಲ. ಅಂತೂ ಆ ಖಾತೆ ನನಗೆ ಬರಲಿಲ್ಲವಲ್ಲ ಎಂದು ಸಮಾಧಾನಪಟ್ಟವರೇ ಹೆಚ್ಚು. ಇವತ್ತು ಯಾವುದೇ ಸರಕಾರದಲ್ಲಿ ಯಾರಿಗೂ ಬೇಡದ ಎರಡು ಹುದ್ದೆಗಳು ಅಂದರೆ ಅದು ವಿಧಾನ ಸಭಾಧ್ಯಕ್ಷರ ಸ್ಥಾನ, ಎರಡನೆಯ ದಾಗಿ ಗೃಹ ಖಾತೆಯಾಗಿದೆ.
ಕೃಷ್ಣ ಭೈರೇಗೌಡರನ್ನೂ ಸೇರಿ ಒಬ್ಬೊಬ್ಬರನ್ನೇ ಮನವೊಲಿಸಿ ಅವರವರ ಖುರ್ಚಿಯಲ್ಲಿ ಕುಳ್ಳಿರಿಸಲು ಮುಖ್ಯಮಂತ್ರಿಗಳು ಹರ ಸಾಹಸ ಪಡುತ್ತಿದ್ದರೆ, ಕೊಟ್ಟ ಖಾತೆಯನ್ನು ಪ್ರೀತಿಯಿಂದ ಒಪ್ಪಿಕೊಂಡು ಮೊದಲ ದಿನದಿಂದಲೇ ಅತ್ಯುತ್ಸಾಹದಿಂದ ಕೆಲಸ ಕ್ಕಿಳಿದವರು ನಮ್ಮ ಗೃಹಮಂತ್ರಿ ಗಳು ಮಾತ್ರ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೋಂದಣಿಯ ಕುರಿತು ಮೋಹನ್ ಭಾಗವತ ರಿಗೆ ಬರೆದ ಪತ್ರದಿಂದಾಗಿ ಉಳಿದೆಲ್ಲ ಮಂತ್ರಿಗಳಿಗಿಂತ ಹೆಚ್ಚು ಸುದ್ದಿಯಲ್ಲಿರುವವರೂ ಅವರೇ.
ಪ್ರಿಯಾಂಕ್ ಖರ್ಗೆಯವರು ಸಂಘದ ಹಿಂದೆ ಬೀಳುತ್ತಿರುವುದು ಇದೇನು ಹೊಸತಲ್ಲ ಬಿಡಿ. ಆದರೆ, ಈ ವಿಷಯದಲ್ಲಿ ಹಿಂದೆಯೂ ಪಕ್ಷ ಖರ್ಗೆಯವರ ಜತೆ ನಿಂತಿರಲಿಲ್ಲ, ಈ ಬಾರಿಯೂ ಅವರ ಅತ್ಯುತ್ಸಾಹಕ್ಕೆ ನೀರೆರೆಯುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ, ಸ್ವತಃ ಅವರ ತಂದೆಯವರನ್ನೂ ಸೇರಿ ಕೇಂದ್ರದ ಯಾವ ನಾಯಕರೂ ಇವರಿಗೆ ಧ್ವನಿಗೂಡಿಸಿದಂತೆ ಕಾಣಲಿಲ್ಲ. ಒಂದು ಕಡೆ, ಗೃಹಮಂತ್ರಿಯಾಗಿ, ಕರ್ನಾಟಕ ಸರಕಾರದ ಪರವಾಗಿ ಮೋಹನ್ ಭಾಗವತರಿಗೆ ಪತ್ರ ಬರೆದಿದ್ದೇನೆ ಎನ್ನುತ್ತಾರೆ ಖರ್ಗೆಯವರು, ಹಾಗೊಮ್ಮೆ ಇವರ ಪತ್ರಕ್ಕೆ ಭಾಗವತರು ಉದಾಸೀನ ಮಾಡಿ ಉತ್ತರಿಸುವ ಗೋಜಿಗೆ ಹೋಗದಿದ್ದರೆ, ಹೋಗುವ ಮರ್ಯಾದೆ ಯಾರದ್ದು? ಆಗುವ ಮುಜುಗರ ಯಾರಿಗೆ? ಸರಕಾರಕ್ಕೆ ಹಾಗೂ ಗೃಹ ಇಲಾಖೆಗೆ ಎನ್ನುವ ವಿವೇಚನೆ ಸಚಿವರಿಗೆ ಇರಬೇಕಾಗಿತ್ತೇನೋ. ಇಂಥ ಪತ್ರಗಳಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ, ನೋಟಿಸ್ ಜಾರಿಮಾಡುವುದು ಗೃಹಮಂತ್ರಿಗಳ ಅಧಿಕಾರದ ವ್ಯಾಪ್ತಿಯಲ್ಲಿ ಬರುವುದಿಲ್ಲ ಎನ್ನುವುದು ಕಾನೂನು ತಜ್ಞರ ಅಭಿಮತ.
ಹೀಗೆ ಪತ್ರ ಬರೆಯುವುದರಿಂದ ಸಂಘದವರು ಹೆದರಿ ಗೃಹಮಂತ್ರಿಗಳಿಗೆ ತಪ್ಪೊಪ್ಪಿಗೆ ಸಲ್ಲಿಸುತ್ತಾರೆ ಎಂದು ನನಗಂತೂ ಅನಿಸುವುದಿಲ್ಲ. ಪತ್ರ ಬರೆಯುವುದಕ್ಕಿಂತ ಮುಂಚೆ ಮುಖ್ಯಮಂತ್ರಿಗಳ ಅಥವಾ ಹಿಂದೆ ಗೃಹಖಾತೆಯನ್ನು ನಿರ್ವಹಿಸಿದ ಅನುಭವವಿರುವ ತಮ್ಮ ತಂದೆಯವರ ಸಲಹೆಯನ್ನಾ ದರೂ ಕೇಳಿದ್ದರೆ ಸಚಿವರಿಗೆ ಮುಜುಗುರ ತಪ್ಪುತ್ತಿತ್ತೇನೋ!
ಪ್ರಿಯಾಂಕ್ ಹೇಳುವ ಹಾಗೆ ನೂರು ವರ್ಷ ಕಳೆದಿರುವ ಸಂಘದ ಅವಧಿಯಲ್ಲಿ ಇಪ್ಪತ್ತೆರಡು ವರ್ಷಗಳು, ಅಂದರೆ 1925 ರಿಂದ 1947ರವರೆಗೆ ಬ್ರಿಟಿಷ್ ಸರಕಾರವಿತ್ತು, ಅಲ್ಲಿಂದ ಇಲ್ಲಿಯ ವರೆಗಿನ ಅವಧಿಯಲ್ಲಿ ಸುಮಾರು 60 ವರ್ಷಗಳಲ್ಲಿ ರಾಜ್ಯ ಹಾಗೂ ರಾಷ್ಟ್ರದಲ್ಲಿ ಕಾಂಗ್ರೆಸ್ ಸರಕಾರವೇ ಇತ್ತು, ಯಾರಿಗೂ ಆಗ ಸಂಘ ಏಕೆ ನೋಂದಣಿ ಮಾಡುತ್ತಿಲ್ಲ ಎನ್ನುವ ಪ್ರಶ್ನೆಯೇ ಉದ್ಭವಿಸಲಿಲ್ಲ.
ಅಂದರೆ, ಹಿಂದೆ ದಶಕಗಳ ಕಾಲ ಕೇಂದ್ರ ಹಾಗೂ ರಾಜ್ಯದಲ್ಲಿದ್ದ ಕಾಂಗ್ರೆಸ್ಸಿನ ಗೃಹಮಂತ್ರಿಗಳು, ಪ್ರಧಾನಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳೆಲ್ಲರೂ ಬುದ್ಧಿಹೀನರಾಗಿದ್ದರು ಅಂದಹಾಗಾಯ್ತು. ಸಂಘ ನೋಂದಾಯಿಸಿಕೊಳ್ಳಬೇಕು ಎನ್ನುವಲ್ಲಿಯಿಂದ ಶುರುವಾದ ಈ ಕಥನ, ಮುಂದೆ ಎಲ್ಲಿಗೋ ಹೋಗಿ, ಮೋಹನ ಭಾಗವತರಿಗೆ ತೆರಿಗೆದಾರರ ದುಡ್ಡಿನಲ್ಲಿ ಏಕೆ ಭದ್ರತೆ ಕೊಡಬೇಕು? ಅವರ ಜೀವಕ್ಕೆ ಅಂಥಾ ಅಪಾಯವೇನಿದೆ? ಎನ್ನುವವರೆಗೆ ಬಂತು. ಅದಕ್ಕೆಲ್ಲ ಸಾಮಾಜಿಕ ಜಾಲತಾಣದಲ್ಲಿ ಒಂದಕ್ಕೆ ಸಾವಿರ ಉತ್ತರಗಳೂ ಬಂತು ಬಿಡಿ, ಕರ್ನಾಟಕದ ತೆರಿಗೆದಾರರ ಹಣವನ್ನು ಕೇರಳದ ಜನರ ಒಳಿತಿಗೆ ವ್ಯಯ ಮಾಡಬಹುದಾದರೆ, ಕರ್ನಾಟಕದ ಜನರನ್ನು ವಂಚಿಸಿ ಬಾಂಗ್ಲಾ ವಲಸಿಗರಿಗೆ, ಕೇರಳದಿಂದ ಬಂದು ಅಕ್ರಮವಾಗಿ ಮನೆಕಟ್ಟಿಕೊಂಡವರಿಗೆ ಶಾಶ್ವತ ಸೂರು ಕೊಡುವುದು ಸರಿ ಅಂತಾದರೆ, ಮೂಲಭೂತವಾದಿಗಳಿಂದ ಪ್ರಾಣಾಪಾಯವನ್ನು ಎದುರಿಸುತ್ತಿರುವ ಭಾಗವತರಂಥಹ ಭಾರತೀಯರಿಗೆ ರಕ್ಷಣೆ ನೀಡುವುದರಲ್ಲಿ ತಪ್ಪೇನಿಲ್ಲ ಅನಿಸುತ್ತದೆ.
ಹಾಗಂತ ಇದನ್ನೆಲ್ಲ ಖರ್ಗೆಯವರು ಪತ್ರದಲ್ಲಿ ಉಲ್ಲೇಖಿಸಿಲ್ಲ ಎನ್ನುವುದು ಇನ್ನೂ ವಿಚಿತ್ರ, ಮಾಧ್ಯಮದ ಮುಂದೆ ಮಾತ್ರ ಕೇಳಲಾದ ಪ್ರಶ್ನೆಗಳಿವು. ‘ಶ್ರೀ ಮೋಹನ್ ಭಾಗವತ್ ಜಿ’ ಅಂತ ಹಸ್ತಾಕ್ಷರದಿಂದಲೇ ಬರೆದು, ನೂರು ವರ್ಷ ಪೂರೈಸಿರುವ ಸಂಘಕ್ಕೆ ಶುಭಾಶಯ ಹೇಳುವ ಮೂಲಕವೇ ಖರ್ಗೆಯವರು ಪತ್ರವನ್ನು ಗೌರವಪೂರ್ಣವಾಗಿ ಪ್ರಾರಂಭಿಸುತ್ತಾರೆ.
ಅಲ್ಲಿಗೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ಪೂರೈಸಿರುವುದಕ್ಕೆ ಅಧಿಕೃತವಾಗಿ ಶುಭಾಶಯ ಹೇಳಿದ ಮೊದಲ ಕಾಂಗ್ರೆಸ್ ಆಡಳಿತವಿರುವ ರಾಜ್ಯ ನಮ್ಮದಾದಂತಾಯಿತು. ಪ್ರತಿಯಾಗಿ, ಶುಭಾಶಯ ತಿಳಿಸಿದ ಕರ್ನಾಟಕ ಸರಕಾರಕ್ಕೆ ಸಂಘ ಧನ್ಯವಾದ ಹೇಳುವುದೊಂದು ಬಾಕಿ ಉಳಿಯಿತು ಅಷ್ಟೇ.
ಮೋಹನ ಭಾಗವತರು ಉತ್ತರ ಕೊಡಲಿ ಅಥವಾ ಉದಾಸೀನ ತೋರಲಿ ಅದು ಅವರಿಗೆ ಬಿಟ್ಟ ವಿಚಾರ. ಸಂಘ ನಡೆಸುವುದರಲ್ಲಿ ನೂರು ವರ್ಷಗಳ ಅನುಭವವಿರುವವರಿಗೆ, ಮೂರು ಬಾರಿ ನಿಷೇಧಗೊಂಡಿದ್ದರೂ ಮತ್ತೆ ಎದ್ದುಬಂದು ಸಮಾಜದಲ್ಲಿ ಪ್ರಸ್ತುತ ಎನಿಸಿಕೊಂಡಿರುವವರಿಗೆ ಏನು ಮಾಡಬೇಕು ಅಥವಾ ಮಾಡಬಾರದು ಎನ್ನುವುದು ಚೆನ್ನಾಗಿ ತಿಳಿದಿರುತ್ತದೆ. ಆದರೆ, ಜವಾಬ್ದಾರಿ ಯುತ ಗೃಹಮಂತ್ರಿಗಳಿಗೆ ಆದ್ಯತೆಯಾಗಿ ಗ್ರಹಿಸಿ ಕೆಲಸ ಮಾಡಲು ಇನ್ನೂ ಅನೇಕ ಜ್ವಲಂತ ಹಾಗೂ ಗಂಭೀರ ಸಮಸ್ಯೆಗಳಿವೆ ಎನ್ನುವುದನ್ನು ಯಾರಾದರೂ ನೆನಪಿಸುವುದೊಳಿತು.
ದಿನದಿಂದ ದಿನಕ್ಕೆ ರಾಜ್ಯವನ್ನು ವ್ಯಾಪಿಸುತ್ತಿರುವ ‘ಡ್ರಗ್ಸ್’ ದಂಧೆಗೆ ಕಡಿವಾಣ ಹಾಕುವುದು, ಪೊಲೀಸ್ ನೇಮಕಾತಿಗೆ ವೇಗ ಒದಗಿಸುವುದು, ಪೊಲೀಸ್ ಇಲಾಖೆಯಲ್ಲಿನ ಲಂಚಗುಳಿತನಕ್ಕೆ ಕಡಿವಾಣ ಹಾಕುವುದು, ನಮ್ಮ ಜೈಲುಗಳ ವ್ಯವಸ್ಥೆಯನ್ನು ಕಟ್ಟುನಿಟ್ಟುಮಾಡುವುದು, ನೆರೆದೇಶ ಗಳಿಂದ ಅನಧಿಕೃತವಾಗಿ ವಲಸೆ ಬಂದು ಕರ್ನಾಟಕವನ್ನು ತವರು ಮನೆಯನ್ನಾಗಿಸುವುದನ್ನು ತಪ್ಪಿಸುವುದು ಮುಂತಾದ ಕೆಲಸಗಳ ಕಡೆಗೆ ಕ್ಷಿಪ್ರವಾಗಿ ಗಮನ ಹರಿಸಬೇಕಾದ ಅಗತ್ಯವಿದೆ. ಈ ಖಾತೆ ಯನ್ನು ನಿರ್ವಹಿಸಲು ಬೇಕಾದ ಅನುಭವದ ಕೊರತೆಯಿದ್ದರೂ ಉತ್ಸಾಹವಿರುವ, ಯುವಕರಾದ ನಮ್ಮ ಗೃಹ ಮಂತ್ರಿಗಳು ಈ ಆದ್ಯತೆಗಳ ಕಡೆಗೆ ಗಮನ ಹರಿಸಿ ದಕ್ಷತೆಯಿಂದ ಕೆಲಸ ಮಾಡಿದರೆ, ಅವರಿಗೂ ಅವರ ಖಾತೆಗೂ ಹಾಗೂ ರಾಜ್ಯ ಸರಕಾರಕ್ಕೂ ಒಳ್ಳೆಯ ಹೆಸರು ಬರಬಹುದಾಗಿದೆ.
ಕಳೆದು ಹೋದ ಗೃಹಖಾತೆಯ ಮಾನ ಮತ್ತೆ ಮರಳಿ ಬರಲು ಸಾಧ್ಯತೆಯಿದೆ. ರಾಜ್ಯದ ಇತಿಹಾಸ ದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಗೃಹಸಚಿವರಾಗಿ ದಾಖಲೆ ಬರೆದ ಪ್ರಿಯಾಂಕ್ ಖರ್ಗೆಯವರಿಗೆ ಆತ್ಮೀಯ ಶುಭಾಶಯಗಳು ಹಾಗೂ ಶುಭ ಹಾರೈಕೆಗಳು.