Gururaj Gantihole Column: ದಯವಿಟ್ಟು ಕ್ಷಮಿಸಿ, ರಾಜ್ಯದಲ್ಲಿ ಸದ್ಯಕ್ಕೆ ಆರೋಗ್ಯ ಸೇವೆ ಲಭ್ಯವಿಲ್ಲ
ಸರಕಾರ ಮತ್ತು ಸೇವಾ ಪೂರೈಕೆದಾರ ಸಂಸ್ಥೆಗಳ ನಡುವಿನ ಗುತ್ತಿಗೆ ವಿವಾದಗಳು ಹಾಗೂ ಆರ್ಥಿಕ ಭಿನ್ನಾಭಿಪ್ರಾಯಗಳಿಂದಾಗಿ ನೂರಾರು ಆಂಬ್ಯುಲೆನ್ಸ್‌ಗಳು ರಸ್ತೆಗೆ ಇಳಿಯದೆ ಗ್ಯಾರೇಜ್ ಸೇರುತ್ತಿವೆ. ತಳಮಟ್ಟದಲ್ಲಿ ತುರ್ತು ಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ಸಕಾಲದಲ್ಲಿ ಈ ಸೇವೆ ಲಭ್ಯ ವಾಗುತ್ತಿಲ್ಲ ಎಂಬುದಕ್ಕೆ ಉಡುಪಿ ಜಿಲ್ಲೆಯ ವಾಸ್ತವ ಸ್ಥಿತಿಯೇ ಸ್ಪಷ್ಟ ನಿದರ್ಶನವಾಗಿದೆ.
-
ಗಂಟಾಘೋಷ
ಒಂದು ಕಾಲದಲ್ಲಿ ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶಗಳ ರೋಗಿಗಳಿಗೆ ಜೀವನಾಡಿಯಾಗಿದ್ದ ಹಾಗೂ ಇಡೀ ಆರೋಗ್ಯ ಕ್ಷೇತ್ರದ ‘ಡ್ರೀಮ್ ಪ್ರಾಜೆಕ್ಟ್’ ಎಂದೇ ಕರೆಸಿಕೊಳ್ಳುತ್ತಿದ್ದ 108 ‘ಆರೋಗ್ಯ ಕವಚ’ ಆಂಬ್ಯುಲೆನ್ಸ್ ಸೇವೆ ಇಂದು ಪ್ರಸ್ತುತ ಸರಕಾರದ ಆಡಳಿತಾತ್ಮಕ ಮಂದಗತಿ ಹಾಗೂ ನಿರ್ಲಕ್ಷ ದಿಂದಾಗಿ ಸಂಪೂರ್ಣವಾಗಿ ಹಳಿ ತಪ್ಪಿದೆ.
ಸರಕಾರ ಮತ್ತು ಸೇವಾ ಪೂರೈಕೆದಾರ ಸಂಸ್ಥೆಗಳ ನಡುವಿನ ಗುತ್ತಿಗೆ ವಿವಾದಗಳು ಹಾಗೂ ಆರ್ಥಿಕ ಭಿನ್ನಾಭಿಪ್ರಾಯಗಳಿಂದಾಗಿ ನೂರಾರು ಆಂಬ್ಯುಲೆನ್ಸ್‌ಗಳು ರಸ್ತೆಗೆ ಇಳಿಯದೆ ಗ್ಯಾರೇಜ್ ಸೇರುತ್ತಿವೆ. ತಳಮಟ್ಟದಲ್ಲಿ ತುರ್ತು ಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ಸಕಾಲದಲ್ಲಿ ಈ ಸೇವೆ ಲಭ್ಯ ವಾಗುತ್ತಿಲ್ಲ ಎಂಬುದಕ್ಕೆ ಉಡುಪಿ ಜಿಲ್ಲೆಯ ವಾಸ್ತವ ಸ್ಥಿತಿಯೇ ಸ್ಪಷ್ಟ ನಿದರ್ಶನವಾಗಿದೆ.
ಉದಾಹರಣೆಗೆ ಉಡುಪಿಯೊಂದರ 18 ಆಂಬ್ಯುಲೆನ್ಸ್‌ಗಳಿವೆ. 8 ಗಂಟೆಗಳ ಪಾಳಿಯಂತೆ ಲೆಕ್ಕ ಹಾಕಿದರೆ, ಒಂದು ಆಂಬ್ಯುಲೆನ್ಸ್‌ಗೆ ಕನಿಷ್ಠ 3 ಚಾಲಕರು ಬೇಕು. ಆ ಪ್ರಕಾರ ಜಿಲ್ಲೆಗೆ ಒಟ್ಟು 54ರಿಂದ 56 ಚಾಲಕರ ಅಗತ್ಯವಿದೆ. ಆದರೆ ಪ್ರಸ್ತುತ ಇರುವುದು ಕೇವಲ 16 ಚಾಲಕರು ಮಾತ್ರ!
ಇದರ ಅರ್ಥ, ದಿನದ 24 ಗಂಟೆಗಳಲ್ಲಿ ಬರೋಬ್ಬರಿ 16 ಗಂಟೆಗಳ ಕಾಲ ಆಂಬ್ಯುಲೆನ್ಸ್ ಓಡಿಸಲು ಚಾಲಕರೇ ಇರುವುದಿಲ್ಲ. ತುರ್ತು ಸಂದರ್ಭದಲ್ಲಿ ರೋಗಿಗಳು ಕರೆ ಮಾಡಿದರೆ, ಕಾಲ್ ಸೆಂಟರ್ ನಿಂದ ಪಕ್ಕದೂರಿನಿಂದ ವಾಹನ ಬರುತ್ತಿದೆ ಎಂಬ ಸಿದ್ಧ ಉತ್ತರ ಸಿಗುತ್ತದೆ. ಆದರೆ ವಾಸ್ತವದಲ್ಲಿ, ವಾಹನವು ರೋಗಿಗಳ ಬಳಿ ಬರುವುದು ಚಾಲಕರು ಲಭ್ಯವಿದ್ದಾಗ ಮಾತ್ರ.
ಚಾಲಕರೇ ಇಲ್ಲದ ಕಾರಣ ವಾಹನಗಳು ಸಮರ್ಪಕವಾಗಿ ಓಡದೆ, ಕಾಗದದ ಮೇಲಿನ ದಾಖಲೆಗಳಲ್ಲಿ ‘ತುರ್ತು ಪ್ರಕರಣಗಳ’ ಸಂಖ್ಯೆ ಕೃತಕವಾಗಿ ಕಡಿಮೆಯಾಗಿ ಕಾಣಿಸುತ್ತಿದೆ. ವಾಹನಗಳು ಓಡದ ಈ ಸುಳ್ಳು ಅಂಕಿ-ಅಂಶಗಳನ್ನೇ ಮುಂದಿಟ್ಟುಕೊಂಡು ಸರಕಾರವು ಹೊಸ ಆಂಬ್ಯುಲೆನ್ಸ್‌ಗಳನ್ನು ಖರೀದಿಸುವುದನ್ನೇ ಕೈಬಿಟ್ಟಿದೆ.
ಇದನ್ನೂ ಓದಿ: Gururaj Gantihole Column: ರಾಜಕೀಯ ನೆಪಗಳಾಚೆಗಿನ ಇಚ್ಛಾಶಕ್ತಿ ಮಾದರಿಗಳು
ನಿಯಮಗಳ ಪ್ರಕಾರ, ಒಂದು ಆಂಬ್ಯುಲೆನ್ಸ್ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಒಟ್ಟು 9 ಸಿಬ್ಬಂದಿ (ತುರ್ತು ವೈದ್ಯಕೀಯ ತಜ್ಞರು, ನರ್ಸ್ ಹಾಗೂ ಚಾಲಕರು ಸೇರಿ) ಇರಬೇಕು. ಆದರೆ ಈಗ ಕೇವಲ ಒಬ್ಬರು ಅಥವಾ ಇಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ, ಈ ವ್ಯವಸ್ಥೆ ಯಲ್ಲಿ ಹಗಲಿರುಳು ಶ್ರಮಿಸುವ ತುರ್ತು ವೈದ್ಯಕೀಯ ಸಿಬ್ಬಂದಿ ಮತ್ತು ಚಾಲಕರಿಗೆ ಸಕಾಲದಲ್ಲಿ ವೇತನ ಪಾವತಿ ಯಾಗುತ್ತಿಲ್ಲ. ಮೂರು-ನಾಲ್ಕು ತಿಂಗಳವರೆಗೆ ಸಂಬಳ ಸಿಗದೆ ಸಿಬ್ಬಂದಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಅನಿವಾರ್ಯವಾಗಿ ಮುಷ್ಕರ ಅಥವಾ ಆಮೆಗತಿಯ ಕೆಲಸದ ಹಾದಿ ಹಿಡಿಯುತ್ತಿzರೆ.
ಅನೇಕ ತಾಲೂಕು ಮತ್ತು ಗ್ರಾಮೀಣ ಕೇಂದ್ರಗಳಲ್ಲಿ ಸಂಚರಿಸುತ್ತಿರುವ ಆಂಬ್ಯುಲೆನ್ಸ್‌ಗಳು ಕನಿಷ್ಠ ಸುರಕ್ಷತಾ ನಿಯಮಗಳಾದ ವಾಹನ ದಕ್ಷತಾ ಪ್ರಮಾಣಪತ್ರ ಹೊಂದಿಲ್ಲ ಹಾಗೂ ಸವೆದುಹೋದ ಟೈರ್‌ಗಳೊಂದಿಗೇ ಅಪಾಯಕಾರಿಯಾಗಿ ಚಲಿಸುತ್ತಿವೆ. ವಾಹನದ ಒಳಗಿರಬೇಕಾದ ಜೀವರಕ್ಷಕ ಔಷಧಗಳು ಮತ್ತು ಉಪಕರಣಗಳ ಕೊರತೆ ಎದ್ದು ಕಾಣುತ್ತಿದೆ. ಅತ್ಯಗತ್ಯ ಜೀವ ರಕ್ಷಕ ಪರಿಕರಗಳಾದ ಆಕ್ಸಿಜನ್ ಸಿಲಿಂಡರ್‌ಗಳು ಮತ್ತು ಕೃತಕ ಉಸಿರಾಟದ ಯಂತ್ರಗಳು ದೀರ್ಘಕಾಲದಿಂದ ದುರಸ್ತಿ ಯಾಗದೆ ಕೇವಲ ಶೋಕೇಸ್ ವಸ್ತುಗಳಾಗಿವೆ. ಇದರಿಂದ ಅಪಘಾತ ಹಾಗೂ ಹೃದಯಾಘಾತದಂತಹ ತುರ್ತು ಸಂದರ್ಭ ಗಳಲ್ಲಿ ರೋಗಿಗಳಿಗೆ ಸಿಗಬೇಕಾದ ಸಕಾಲಿಕ ‘ಗೋಲ್ಡನ್ ಅವರ್’ ಚಿಕಿತ್ಸೆ ಸಂಪೂರ್ಣವಾಗಿ ಮರೀಚಿಕೆಯಾಗಿದೆ.
ಈ ಆಡಳಿತಾತ್ಮಕ ವೈಫಲ್ಯವು ಸಮಾಜದ ಉದಾತ್ತ ಪರಂಪರೆಯೊಂದರ ಮೇಲೂ ಗಂಭೀರ ಪೆಟ್ಟು ನೀಡಿದೆ. ನಮ್ಮ ರಾಜ್ಯದಲ್ಲಿ ದಾನಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಆಂಬ್ಯುಲೆನ್ಸ್ ನೀಡುವುದು ಒಂದು ಶ್ರೇಷ್ಠ ‘ಆಂಬ್ಯುಲೆನ್ಸ್ ದಾನ ಸಂಸ್ಕೃತಿ’ಯಾಗಿತ್ತು. ಆದರೆ 108 ಸೇವೆ ಎಂಬ ಮಹತ್ವಾ ಕಾಂಕ್ಷೆಯ ಯೋಜನೆ ಆರಂಭವಾದ ಬಳಿಕ, ತುರ್ತು ಸೇವೆಯನ್ನು ಸರಕಾರವೇ ಉಚಿತವಾಗಿ ಮತ್ತು ಅತ್ಯುತ್ತಮವಾಗಿ ನಿಭಾಯಿಸುತ್ತದೆ ಎಂಬ ನಂಬಿಕೆಯಿಂದ ಸಾರ್ವಜನಿಕರ ಆಂಬ್ಯುಲೆನ್ಸ್ ದಾನ ಬಹುತೇಕ ನಿಂತುಹೋಯಿತು. ಆದರೆ, ಪ್ರಸ್ತುತ ಸರಕಾರದ ಅವಧಿಯಲ್ಲಿ 108 ಸೇವೆ ಹೀಗೆ ಸಂಪೂರ್ಣವಾಗಿ ವಿಫಲವಾಗಿರುವುದರಿಂದ, ಅತ್ತ ಸರಕಾರದ ಆಂಬ್ಯುಲೆನ್ಸ್‌ಗಳೂ ಬಾರದೆ, ಇತ್ತ ದಾನಿಗಳ ವಾಹನಗಳೂ ಇಲ್ಲದೆ ಜನಸಾಮಾನ್ಯರು ರಸ್ತೆಯ ಪ್ರಾಣ ಕಳೆದುಕೊಳ್ಳುವಂತಹ ದುರಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲಾ ಆಸ್ಪತ್ರೆಗಳಿಗೆ ಭಾರಿ ಒತ್ತಡ
ರಾಜ್ಯದ ಗ್ರಾಮೀಣ ಭಾಗದ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇಂದು ಹಲವು ಕಡೆ ಕೇವಲ ಸಿಮೆಂಟ್ ಕಟ್ಟಡಗಳಾಗಿ ಉಳಿದಿದ್ದು, ತೀವ್ರ ಮಾನವ ಸಂಪನ್ಮೂಲದ ಕೊರತೆಯಿಂದ ಜರ್ಜರಿತಗೊಂಡಿವೆ ಎಂದು ಇಲಾಖಾ ಅಂಕಿ-ಅಂಶಗಳು ಸಾಬೀತು ಪಡಿಸುತ್ತವೆ. ಇಡೀ ರಾಜ್ಯಾದ್ಯಂತ ಸದ್ಯಕ್ಕೆ ಬರೋಬ್ಬರಿ ಎಂಟನೂರಕ್ಕೂ ಹೆಚ್ಚು ಕಾಯಂ ವೈದ್ಯರ ಹುದ್ದೆಗಳು ಮತ್ತು ನೂರಾರು ತಜ್ಞ ವೈದ್ಯರ ಹುದ್ದೆಗಳು ದೀರ್ಘಕಾಲದಿಂದ ಖಾಲಿ ಬಿದ್ದಿರುವು ದರಿಂದ ಹಳ್ಳಿಗಾಡಿನ ಜನರಿಗೆ ಸಾಮಾನ್ಯ ಜ್ವರ, ಕೆಮ್ಮಿಗೂ ಪ್ರಥಮ ಚಿಕಿತ್ಸೆ ಸಕಾಲದಲ್ಲಿ ಸಿಗದಂತಾಗಿದೆ.
ಗ್ರಾಮೀಣ ಕಡ್ಡಾಯ ಸೇವೆಯ ಲೋಪಗಳು, ಕಡಿಮೆ ವೇತನ ಶ್ರೇಣಿ ಮತ್ತು ಮೂಲಸೌಕರ್ಯಗಳ ಕೊರತೆಯಿಂದಾಗಿ ಯುವ ವೈದ್ಯರು ಗ್ರಾಮೀಣ ಭಾಗಗಳಲ್ಲಿ ಸೇವೆ ಸಲ್ಲಿಸಲು ತೀವ್ರ ಹಿಂಜರಿಕೆ ತೋರಿಸುತ್ತಿದ್ದಾರೆ. ಹಳ್ಳಿಗಳಲ್ಲಿನ ವಸತಿ ಸೌಕರ್ಯಗಳ ಅಭಾವ ಮತ್ತು ಆಸ್ಪತ್ರೆಗಳಲ್ಲಿ ಕನಿಷ್ಠ ಭದ್ರತೆಯ ಕೊರತೆಯು ಈ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಇದರ ನೇರ ಪರಿಣಾಮವಾಗಿ, ತಾಲೂಕು ಮಟ್ಟದ ಗುಣಪಡಿಸಬಹುದಾದ ಸಣ್ಣಪುಟ್ಟ ಕಾಯಿಲೆಗಳು, ಮೂಳೆ ಮುರಿತ ಹಾಗೂ ಸಾಮಾನ್ಯ ಹೆರಿಗೆಗಳಿಗೂ ರೋಗಿಗಳು ನೇರವಾಗಿ ರಾಜಧಾನಿ ಬೆಂಗಳೂರಿನ ವಿಕ್ಟೋರಿಯಾ, ವಾಣಿ ವಿಲಾಸ ಅಥವಾ ಬೌರಿಂಗ್ ಆಸ್ಪತ್ರೆಗಳಂತಹ ಬೃಹತ್ ಉನ್ನತ ಮಟ್ಟದ ವಿಶೇಷ ಚಿಕಿತ್ಸಾ ಕೇಂದ್ರಗಳಿಗೆ ಹಾಗೂ ಜಿಲ್ಲಾ ಕೇಂದ್ರಗಳಿಗೆ ಧಾವಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹಳ್ಳಿಗಳಿಂದ ನೂರಾರು ಕಿಲೋಮೀಟರ್ ದೂರ ಪ್ರಯಾಣಿಸಿ ಬರುವ ಬಡ ರೋಗಿ ಗಳಿಗೆ ಇದು ದೈಹಿಕ ಮತ್ತು ಆರ್ಥಿಕವಾಗಿ ಭಾರಿ ಹೊರೆಯಾಗಿ ಪರಿಣಮಿಸಿದೆ.
ಈ ದಿಢೀರ್ ಪ್ರಾದೇಶಿಕ ರೋಗಿಗಳ ಮಹಾಪೂರದಿಂದಾಗಿ ಪ್ರಮುಖ ಸರಕಾರಿ ಆಸ್ಪತ್ರೆಗಳ ಮೇಲಿನ ತಾಂತ್ರಿಕ ಸಾಮರ್ಥ್ಯ, ಹಾಸಿಗೆಗಳ ಲಭ್ಯತೆ ಮತ್ತು ಹೆರಿಗೆ ಕೊಠಡಿಗಳ ಮೇಲಿನ ಒತ್ತಡ ದುಪ್ಪಟ್ಟಾಗಿದೆ. ರಾಜಧಾನಿಯ ವೈದ್ಯರು ದಿನಕ್ಕೆ ಹದಿನೆಂಟು ಗಂಟೆಗಳಿಗೂ ಹೆಚ್ಚು ಕಾಲ ವಿಶ್ರಾಂತಿ ಯಿಲ್ಲದೆ ದುಡಿಯು ತ್ತಿದ್ದರೂ, ರೋಗಿಗಳ ದಟ್ಟಣೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ಸಾಮಾನ್ಯ ರೋಗಿಯೊಬ್ಬರು ತುರ್ತು ಚಿಕಿತ್ಸೆಗಾಗಿ ಗಂಟೆಗಟ್ಟಲೆ ಕಾಯಬೇಕಾದ ಅಥವಾ ಆಸ್ಪತ್ರೆಯ ಕಾರಿಡಾರ್‌ಗಳ ನೆಲದ ಮೇಲೆಯೇ ಮಲಗಿ ದಿನ ತಳ್ಳಬೇಕಾದ ಕರುಣಾಜನಕ ಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರದ ಆರ್ಥಿಕ ಮುಗ್ಗಟ್ಟಿಗೆ ಕೇವಲ ಬಜೆಟ್ ಕೊರತೆಯಷ್ಟೇ ಕಾರಣವಲ್ಲ, ಬದಲಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಯೋಗದ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಯೋಜನೆಯಡಿ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿನ ಆಂತರಿಕ ವೈಫಲ್ಯವೂ ಕಾರಣ ಎಂದು ವಿಶ್ಲೇಷಕರು ವರದಿ ಮಾಡಿದ್ದಾರೆ. ಈ ಯೋಜನೆಯ ನಿಯಮಾವಳಿ ಗಳ ಪ್ರಕಾರ, ಸರಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಜಿಲ್ಲಾ ಆಸ್ಪತ್ರೆಗಳು ಬಡ ರೋಗಿಗಳಿಗೆ ನೀಡುವ ಉಚಿತ ಚಿಕಿತ್ಸೆಯ ಒಟ್ಟು ವೆಚ್ಚವನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಶೇ.100ರಷ್ಟು ಮರುಪಾವತಿ ಪಡೆಯಲು ಪೂರ್ಣ ಅವಕಾಶವಿದೆ.
ಆದರೆ, ವಾಸ್ತವದಲ್ಲಿ ಇಲಾಖೆಯು ಅರ್ಹ ನಿಧಿಯ ಕೇವಲ ಶೇ.60ರಷ್ಟು ಮಾತ್ರ ಮರುಪಾವತಿ ಪಡೆಯುವಲ್ಲಿ ಯಶಸ್ವಿಯಾಗುತ್ತಿದ್ದು, ಉಳಿದ ಶೇ.40ರಷ್ಟು ಕೋಟ್ಯಂತರ ರೂಪಾಯಿಗಳ ಅನುದಾನ ಪ್ರತಿ ವರ್ಷವೂ ನಷ್ಟವಾಗುತ್ತಿದೆ. ಈ ವಿಫಲತೆಗೆ ಕಾರಣ ಕ್ಲೈಮ್ ಪ್ರಕ್ರಿಯೆಗಳನ್ನು ನಿರ್ವಹಿಸಲು ಇಲಾಖೆಯಲ್ಲಿ ಪ್ರತ್ಯೇಕ ದತ್ತಾಂಶ ದಾಖಲಾತಿ ಆಪರೇಟರ್‌ಗಳು ಮತ್ತು ಆಡಳಿತಾ ತ್ಮಕ ಸಿಬ್ಬಂದಿಗಳ ಕೊರತೆ ಇರುವುದು. ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ವೈದ್ಯರೇ ಕಾಗದದ ಕೆಲಸಗಳಲ್ಲಿ ಮುಳುಗಿರುವುದರಿಂದ, ತಾಂತ್ರಿಕ ದೋಷಗಳ ಕಾರಣ ನೀಡಿ ಶೇ.40ರಷ್ಟು ಅರ್ಜಿಗಳು ತಿರಸ್ಕೃತಗೊಳ್ಳುತ್ತಿವೆ.
ಇದಲ್ಲದೆ, ಈ ಯೋಜನೆಯ ಬಿಕ್ಕಟ್ಟು ಕೇವಲ ಸರಕಾರಿ ಆಸ್ಪತ್ರೆಗಳ ಆಡಳಿತಾತ್ಮಕ ಲೋಪ ಗಳಿಗಷ್ಟೇ ಸೀಮಿತವಾಗಿಲ್ಲ. ಇದು ಖಾಸಗಿ ಆಸ್ಪತ್ರೆಗಳ ಮೂಲಕ ಬಡವರಿಗೆ ಸಿಗಬೇಕಿದ್ದ ಉನ್ನತ ಚಿಕಿತ್ಸೆಗೂ ದೊಡ್ಡ ಕಂಟಕವಾಗಿ ಪರಿಣಮಿಸಿದೆ. ಯೋಜನೆಯಡಿ ನೋಂದಾಯಿತವಾಗಿರುವ ಖಾಸಗಿ ಆಸ್ಪತ್ರೆಗಳಿಗೆ ಸರಕಾರವು ನೀಡಬೇಕಾದ ನೂರಾರು ಕೋಟಿ ರೂಪಾಯಿಗಳ ಕ್ಲೈಮ್ ಮೊತ್ತವನ್ನು ಸಕಾಲದಲ್ಲಿ ಬಿಡುಗಡೆ ಮಾಡದೆ ಸತಾಯಿಸುತ್ತಿದೆ.
ಯೋಜನೆಯ ಯಶಸ್ಸಿಗೆ ಮತ್ತೊಂದು ದೊಡ್ಡ ಅಡ್ಡಿಯಾಗಿರುವುದು ಸರಕಾರವು ಶಸ್ತ್ರಚಿಕಿತ್ಸೆ ಮತ್ತು ವಿವಿಧ ಚಿಕಿತ್ಸೆಗಳಿಗಾಗಿ ನಿಗದಿಪಡಿಸಿರುವ ಹಳೆಯ ಹಾಗೂ ಅವಾಸ್ತವಿಕ ಪ್ಯಾಕೇಜ್ ದರಗಳು. ವರ್ಷಗಳ ಹಿಂದೆ ನಿಗದಿಪಡಿಸಲಾದ ಈ ದರಗಳನ್ನು ಪ್ರಸ್ತುತ ಮಾರುಕಟ್ಟೆಯ ವೆಚ್ಚಕ್ಕೆ ತಕ್ಕಂತೆ ಇಲಾಖೆಯು ಇಂದಿಗೂ ಪರಿಷ್ಕರಿಸಿಲ್ಲ. ಆಧುನಿಕ ವೈದ್ಯಕೀಯ ತಂತ್ರಜ್ಞಾನ, ಸುಧಾರಿತ ಶಸ್ತ್ರಚಿಕಿತ್ಸಾ ಉಪಕರಣಗಳು, ಔಷಧಗಳ ಬೆಲೆ ಮತ್ತು ಆಸ್ಪತ್ರೆಗಳ ದೈನಂದಿನ ಸಿಬ್ಬಂದಿ ನಿರ್ವಹಣಾ ವೆಚ್ಚಗಳು ಗಗನಕ್ಕೇರಿದ್ದರೂ, ಸರಕಾರ ಮಾತ್ರ ಹಳೆಯ ದರಪಟ್ಟಿಯನ್ನೇ ಬಲವಂತ ವಾಗಿ ಹೇರುತ್ತಿದೆ.
ವಿವಿಧ ಆರೋಗ್ಯ ಸಂಸ್ಥೆಗಳ ಆಡಿಟ್ ವರದಿಗಳ ಪ್ರಕಾರ, ಸಾಮಾನ್ಯ ರೋಗಿಯೊಬ್ಬರ ಚಿಕಿತ್ಸೆಗೆ ತಗಲುವ ನೈಜ ವೆಚ್ಚಕ್ಕೂ ಮತ್ತು ಈ ಯೋಜನೆಯಡಿ ಸರಕಾರವು ಆಸ್ಪತ್ರೆಗಳಿಗೆ ಮರುಪಾವತಿ ಮಾಡುವ ದರಕ್ಕೂ ಕನಿಷ್ಠ ಎರಡರಿಂದ ನಾಲ್ಕು ಪಟ್ಟು ಭಾರಿ ವ್ಯತ್ಯಾಸವಿದೆ. ಇದರ ನೇರ ಪರಿಣಾಮವಾಗಿ, ಬಡ ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂದೆ ಬರುವ ಮಧ್ಯಮ ಮತ್ತು ಸಣ್ಣ ಪ್ರಮಾಣದ ಖಾಸಗಿ ಆಸ್ಪತ್ರೆಗಳು ತೀವ್ರ ಆರ್ಥಿಕ ನಷ್ಟವನ್ನು ಅನುಭವಿಸುತ್ತಿವೆ. ಈ ಆರ್ಥಿಕ ಅಸಮತೋಲನದಿಂದಾಗಿ ವ್ಯವಸ್ಥೆಯ ಸುಸ್ಥಿರತೆಯೇ ಪ್ರಶ್ನೆಗೊಳಗಾಗಿದ್ದು, ಈ ಸುದೀರ್ಘ ವಿಳಂಬ ನೀತಿಗಳಿಂದ ಬೇಸತ್ತಿರುವ ರಾಜ್ಯದ ಪ್ರಮುಖ ಖಾಸಗಿ ಆಸ್ಪತ್ರೆಗಳು, ತಮ್ಮ ದೈನಂದಿನ ನಿರ್ವಹಣಾ ವೆಚ್ಚವನ್ನು ಭರಿಸಲಾಗದೆ ಈ ಯೋಜನೆಯಡಿ ಬರುವ ಬಡ ರೋಗಿಗಳನ್ನು ದಾಖಲಿಸಿಕೊಳ್ಳಲು ಮತ್ತು ತುರ್ತು ಶಸ್ತ್ರಚಿಕಿತ್ಸೆಗಳನ್ನು ನೀಡಲು ಸ್ಪಷ್ಟವಾಗಿ ನಿರಾಕರಿಸುತ್ತಿವೆ.
ಇದರ ನೇರ ಹೊಡೆತ ಬೀಳುತ್ತಿರುವುದು ಕ್ಯಾನ್ಸರ್, ಹೃದಯರೋಗದಂತಹ ಗಂಭೀರ ಕಾಯಿಲೆ ಗಳಿಂದ ಬಳಲುತ್ತಿರುವ ಬಡವರ ಮೇಲೆ. ಕೈಯಲ್ಲಿ ಸರಕಾರದ ಹೆಲ್ತ್ ಕಾರ್ಡ್ ಇದ್ದರೂ ಸೂಕ್ತ ಚಿಕಿತ್ಸೆ ಸಿಗದೆ ಅವರು ಖಾಸಗಿ ಆಸ್ಪತ್ರೆಗಳ ಮುಂಭಾಗದಿಂದಲೇ ವಾಪಸ್ ಕಳುಹಿಸಲ್ಪಡುತ್ತಿದ್ದಾರೆ. ಅನೇಕ ಆಸ್ಪತ್ರೆಗಳು ಅನಿವಾರ್ಯವಾಗಿ ಯೋಜನೆಯ ಸಹಭಾಗಿತ್ವದಿಂದಲೇ ಹಿಂದೆ ಸರಿಯುತ್ತಿವೆ.
ಇವೆಲ್ಲದರ ನಡುವೆ, ಆಸ್ಪತ್ರೆಯ ಹೊಸ್ತಿಲಿನಲ್ಲಿ ಬಡ ರೋಗಿಗಳನ್ನು ಅತಿ ಹೆಚ್ಚು ಸತಾಯಿಸುತ್ತಿರು ವುದು ಇಲಾಖೆಯು ಜಾರಿಗೆ ತಂದಿರುವ ಕಟ್ಟುನಿಟ್ಟಿನ ಡಿಜಿಟಲ್ ದೃಢೀಕರಣ ಪ್ರಕ್ರಿಯೆಗಳು. ಯೋಜನೆಯಡಿ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುವಾಗ ಆಧಾರ್ ಕಾರ್ಡ್ ಆಧಾರಿತ ದೃಢೀಕರಣ ಕಡ್ಡಾಯವಾಗಿದೆ. ಆದರೆ, ಗ್ರಾಮೀಣ ಭಾಗದ ಬಡ ಜನರಲ್ಲಿ ಅನೇಕರ ಹಳೆಯ ಮೊಬೈಲ್ ಸಂಖ್ಯೆಗಳು ಆಧಾರ್‌ಗೆ ಲಿಂಕ್ ಆಗದೇ ಇರುವುದು ಅಥವಾ ಲಿಂಕ್ ಆಗಿದ್ದರೂ ನೆಟ್ವರ್ಕ್ ಮತ್ತು ಸರ್ವರ್ ಸಮಸ್ಯೆಯಿಂದಾಗಿ ಮೊಬೈಲ್‌ಗೆ ಬರಬೇಕಾದ ಒಂದು ಸಣ್ಣ ಒಟಿಪಿ ಸಕಾಲಕ್ಕೆ ಬಾರದೇ ಇರುವುದು ರೋಗಿಗಳ ಪಾಲಿಗೆ ದೊಡ್ಡ ಶಾಪವಾಗಿ ಪರಿಣಮಿಸಿದೆ.
ಸಾರ್ವಜನಿಕ ಆರೋಗ್ಯ ಕ್ಷೇತ್ರವು ಇಂದು ಎದುರಿಸುತ್ತಿರುವ ಈ ಬಹುಮುಖಿ ಬಿಕ್ಕಟ್ಟು ಕೇವಲ ಹಣಕಾಸಿನ ಕೊರತೆಯದ್ದಲ್ಲ; ಬದಲಿಗೆ ಇದು ಇಲಾಖೆಯ ಆದ್ಯತೆಗಳು ಮತ್ತು ದೂರದೃಷ್ಟಿಯ ಕೊರತೆಯ ಪ್ರಶ್ನೆ ಯಾಗಿದೆ. ಬಜೆಟ್ ಗಾತ್ರಗಳು ಮತ್ತು ಯೋಜನೆಗಳ ಅಂಕಿ-ಅಂಶಗಳು ಕಾಗದದ ಮೇಲೆ ಎಷ್ಟೇ ಆಕರ್ಷಕ ವಾಗಿ ಕಂಡರೂ, ಔಷಧ ಉಗ್ರಾಣಗಳ ನಿಷ್ಕ್ರಿಯತೆ, ಧೂಳು ತಿನ್ನುತ್ತಿರುವ ದುಬಾರಿ ಉಪಕರಣಗಳು ಮತ್ತು ಕೇವಲ ಒಂದು ಒಟಿಪಿಗೋಸ್ಕರ ಆಸ್ಪತ್ರೆಯ ಹೊಸ್ತಿಲಿನಲ್ಲಿ ರೋಗಿ ನರಳುವ ಕಹಿ ವಾಸ್ತವವು ಆಡಳಿತದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.
ಆರೋಗ್ಯವನ್ನು ಕೇವಲ ಒಂದು ಇಲಾಖೆಯನ್ನಾಗಿ ನೋಡದೆ, ನಾಡಿನ ಮಾನವ ಸಂಪನ್ಮೂಲದ ಮೇಲಿನ ಅತ್ಯಗತ್ಯ ಹೂಡಿಕೆಯನ್ನಾಗಿ ಸರಕಾರ ಪರಿಗಣಿಸಬೇಕಿದೆ. ತಂತ್ರeನ ಮತ್ತು ಡಿಜಿಟಲ್ ನಿಯಮಗಳು ಜನರ ಚಿಕಿತ್ಸೆಗೆ ಪೂರಕವಾಗಿರಬೇಕೇ ಹೊರತು, ಅವೇ ರೋಗಿಗಳ ಪಾಲಿಗೆ ಗೋಡೆ ಯಾಗಬಾರದು.