ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಕಾಗದ ಕಲೆಯಾಗಿ ಅರಳುವ ಪರಿ

ಒರಿಗಾಮಿ ಅಂದರೆ ಕಾಗದವನ್ನು ಮಡಿಸಿ ಆಕೃತಿಗಳನ್ನು ಸೃಷ್ಟಿಸುವ ಒಂದು ಸರಳ, ಸುಲಭ, ಸೃಜನಶೀಲ ಕಲೆ. ಇದು ಸುಮಾರು 17ನೇ ಶತಮಾನದಲ್ಲಿ ಜಪಾನಿನಲ್ಲಿ ಕಲೆಯಾಗಿ ಆರಂಭ ವಾಯಿತು. ಆದರೆ ಇದರ ಬೇರುಗಳು ಚೀನಾದಿಂದಲೂ ಬಂದಿರಬಹುದು ಎಂದೂ ನಂಬಲಾಗಿದೆ. ಇತ್ತೀಚಿನ ದಿನಗಳಲ್ಲಿ ಇದು ಜಾಗತಿಕವಾಗಿ ಜನಪ್ರಿಯವಾಗಿ, ಕೇವಲ ಮಕ್ಕಳ ಆಟವಲ್ಲದೇ ಗಣಿತ, ವಿಜ್ಞಾನ, ವೈದ್ಯಕೀಯ ಮತ್ತು ಆಧುನಿಕ ತಂತ್ರಜ್ಞಾನದಲ್ಲಿಯೂ ಉಪಯೋಗವಾಗುತ್ತಿದೆ

ಕಾಗದ ಕಲೆಯಾಗಿ ಅರಳುವ ಪರಿ

ಸಂಪಾದಕರ ಸದ್ಯಶೋಧನೆ

ಜಪಾನಿಯರ ಕೈಗೆ ರದ್ದಿ ಅಥವಾ ಹರಿದು, ಸುಕ್ಕಾದ ಕಾಗದವನ್ನು ಕೊಟ್ಟರೂ ಅವರು ಅದನ್ನೊಂದು ಅದ್ಭುತ ಕಲಾಕೃತಿಯನ್ನಾಗಿ ಮಾಡುತ್ತಾರೆ ಎಂಬ ಮಾತನ್ನು ನಾನು ಅನೇಕ ವರ್ಷಗಳಿಂದ ಕೇಳುತ್ತಾ ಬಂದಿದ್ದೆ. ಜಪಾನಿನಲ್ಲಿದ್ದಾಗ ಇದನ್ನು ಖುದ್ದಾಗಿ ಗಮನಿಸುವ ಅವಕಾಶ ಸಿಕ್ಕಿತು. ಜಪಾನಿಯರು ಒಂದು ಸಾಮಾನ್ಯ ಕಾಗದವನ್ನೂ ಒಂದು ಕಲಾಕೃತಿಯಂತೆ ನೋಡುತ್ತಾರೆ ಎಂಬ ಮಾತಿನಲ್ಲಿ ಉತ್ಪ್ರೇಕ್ಷೆ ಇಲ್ಲ. ಇದನ್ನು ಅವರು ಒರಿಗಾಮಿ ಅಂತ ಕರೆಯುತ್ತಾರೆ. ಅಷ್ಟಕ್ಕೂ ಒರಿಗಾಮಿ ಎಂದರೇನು? ಜಪಾನಿ ಭಾಷೆಯಲ್ಲಿ ‘ಒರಿ’ ಅಂದರೆ ಮಡಿಕೆ ಮತ್ತು ‘ಗಾಮಿ’ ಅಂದರೆ ಕಾಗದ ಎಂದರ್ಥ.

ಒರಿಗಾಮಿ ಅಂದರೆ ಕಾಗದವನ್ನು ಮಡಿಸಿ ಆಕೃತಿಗಳನ್ನು ಸೃಷ್ಟಿಸುವ ಒಂದು ಸರಳ, ಸುಲಭ, ಸೃಜನಶೀಲ ಕಲೆ. ಇದು ಸುಮಾರು 17ನೇ ಶತಮಾನದಲ್ಲಿ ಜಪಾನಿನಲ್ಲಿ ಕಲೆಯಾಗಿ ಆರಂಭ ವಾಯಿತು. ಆದರೆ ಇದರ ಬೇರುಗಳು ಚೀನಾದಿಂದಲೂ ಬಂದಿರಬಹುದು ಎಂದೂ ನಂಬಲಾಗಿದೆ. ಇತ್ತೀಚಿನ ದಿನಗಳಲ್ಲಿ ಇದು ಜಾಗತಿಕವಾಗಿ ಜನಪ್ರಿಯವಾಗಿ, ಕೇವಲ ಮಕ್ಕಳ ಆಟವಲ್ಲದೇ ಗಣಿತ, ವಿಜ್ಞಾನ, ವೈದ್ಯಕೀಯ ಮತ್ತು ಆಧುನಿಕ ತಂತ್ರಜ್ಞಾನದಲ್ಲಿಯೂ ಉಪಯೋಗವಾಗುತ್ತಿದೆ.

ಆರಂಭದಲ್ಲಿ ಕಾಗದ ಬಹಳ ದುಬಾರಿಯಾಗಿದ್ದುದರಿಂದ, ಒರಿಗಾಮಿಯನ್ನು ಧಾರ್ಮಿಕ ವಿಧಿ ವಿಧಾನಗಳಲ್ಲಿ ಮಾತ್ರ ಉಪಯೋಗಿಸುತ್ತಿದ್ದರು. ಉದಾಹರಣೆಗೆ, ಶಿಂಟೋ ಧರ್ಮದ ಪೂಜಾ ವಿಧಾನಗಳಲ್ಲಿ ಕಾಗದಗಳನ್ನು ಮಡಿಸಿ ದೇವರ ಅರ್ಪಣೆಗೆ ಬಳಸಲಾಗುತ್ತಿತ್ತು. ಮಧ್ಯಯುಗದಲ್ಲಿ ಒರಿಗಾಮಿ ಜನಸಾಮಾನ್ಯರ ನಡುವೆ ತಲುಪಿತು.

ಇದನ್ನೂ ಓದಿ: Vinayak V Bhat Column: ಸುಮ್ನ ಇರಲಾರದೇ ಇರುವೆ ಬಿಟ್ಕಂಡಂತಾಯ್ತು !

ಈ ಕಾಲದಲ್ಲಿ ಕಾಗದ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತಿದ್ದರಿಂದ ಇದು ಮಕ್ಕಳ ಆಟ, ಕಲಾತ್ಮಕ ಅಭ್ಯಾಸ ಹಾಗೂ ಉಡುಗೊರೆ ತಯಾರಿಕೆಯಲ್ಲಿ ಬಳಕೆಯಾಗತೊಡಗಿತು. ಒರಿಗಾಮಿ ಕೇವಲ ಕಾಗದ ಮಡಿಸುವ ಕಲೆಯಲ್ಲ. ಇದು ಧೈರ್ಯ, ಶಿಸ್ತು, ಸಹನೆ ಮತ್ತು ತಾಳ್ಮೆಯ ಪಾಠ ಕಲಿಸುವ ಕಲೆಯೂ ಹೌದು.

ಜಪಾನಿ ಸಂಸ್ಕೃತಿಯಲ್ಲಿ ಒರಿಗಾಮಿಯನ್ನು ಜೀವನಚಕ್ರದ ಪ್ರತಿಬಿಂಬ ಎಂಬಂತೆ ಪರಿಗಣಿಸ ಲಾಗಿದೆ. ಅಂದರೆ ಏನೂ ಇಲ್ಲದ ಶೂನ್ಯದಿಂದ (ಸಾದಾ ಕಾಗದ) ಸೃಷ್ಟಿಯ ಅಂತ್ಯವಾಗುವ (ಆಕೃತಿ) ಒಂದು ಪ್ರಕ್ರಿಯೆ ಎಂದು ಭಾವಿಸಲಾಗಿದೆ. ಕಾಗದವನ್ನು ಮಡಿಸುವ ಪ್ರಕ್ರಿಯೆಗಳಲ್ಲಿ ಶ್ರದ್ಧೆ ಮತ್ತು ನಿಖರತೆ ಮುಖ್ಯವಾಗಿವೆ. ಯಾವ ಜೋಡಣೆ ಅಥವಾ ಅಂಟು ವಸ್ತುಗಳನ್ನು ಬಳಸದೆ ಕಲಾತ್ಮಕ ಬಗೆಯನ್ನು ರೂಪಿಸುವುದು ಶುದ್ಧತೆಯ ಸಂಕೇತವಾಗಿದೆ.

ಪ್ರತಿ ಮಡಿಕೆಯೂ ಪರಿಣಾಮಕಾರಿ ಆಗಬೇಕು, ಇಲ್ಲದಿದ್ದರೆ ಅಂತಿಮ ಆಕೃತಿಗೆ ಹಾನಿ ಯಾಗಬಹುದು. ಕಡಿಮೆ ಮಡಿಕೆಗಳಿಂದ ಸರಳ ಆಕೃತಿಗಳನ್ನು ತಯಾರಿಸುವುದರಿಂದ, ಹೆಚ್ಚು ಮಡಿಕೆಗಳು, ತಂತ್ರಜ್ಞಾನ ಆಧಾರಿತ ಮ್ಯಾಥಮೆಟಿಕಲ್ ಮಾದರಿಗಳಿಂದ, ಹಲವು ಕಾಗದದ ತುಂಡುಗಳನ್ನು ಪ್ರತ್ಯೇಕವಾಗಿ ಮಡಿಸಿ, ನಂತರ ಅವುಗಳನ್ನು ಸಂಯೋಜಿಸಿ ಒಂದು ದೊಡ್ಡ ಆಕೃತಿಯನ್ನಾಗಿ ರೂಪಿಸುವ ತನಕ ಒರಿಗಾಮಿಯ ವಿಭಿನ್ನ ಶೈಲಿಗಳು ರೂಪುಗೊಂಡಿವೆ.

ಪಿಂಕಿ ಕ್ರೇನ್ ಹೆಸರಿನಲ್ಲಿ ಪ್ರಸಿದ್ಧವಾದ ಸಾಧನೆ ಮಾಡಿದ ‘ಸಾಡಾಕೋ ಸಸಾಕಿ’ ಎಂಬ ಹಿರೋಷಿಮಾ ಬಾಂಬ್ ಬಾಧಿತ ಬಾಲಕಿ ಸಾವಿರ ಕ್ರೇನ್‌ಗಳ ಕಲಾಕೃತಿ ರಚಿಸಿ ಶಾಂತಿಯ ಸಂದೇಶ ನೀಡಿದ್ದನ್ನು ಮರೆಯುವಂತೆಯೇ ಇಲ್ಲ. ಕಮಲದ ಹೂ, ಗುಲಾಬಿ, ಚೆರ್ರಿ ಬ್ಲಾಸಮ್ ಮುಂತಾದ ಪುಷ್ಪಗಳಿಂದ ಹಿಡಿದು, ಡ್ರಾಗನ್, ಎಲೆ, ಕಾಗೆ, ಸಿಂಹ, ಆನೆ, ಒಂಟೆ ಇತ್ಯಾದಿ ಪ್ರಾಣಿಗಳನ್ನು ಕಾಗದದಲ್ಲಿ ಮಾಡುವ ಜಪಾನಿಯರ ಈ ಕಲೆ ಜಗತ್ತಿನಾದ್ಯಂತ ಪ್ರಸಿದ್ಧ.

ಇತ್ತೀಚಿನ ವರ್ಷಗಳಲ್ಲಿ ಒರಿಗಾಮಿಯನ್ನು ಹಲವಾರು ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಉಪಯೋಗಿಸುತ್ತಿದ್ದಾರೆ. ಅಂತರಿಕ್ಷ ತಂತ್ರeನದಲ್ಲಿ ನಾಸಾ ಉಪಗ್ರಹಗಳ ಸೌರ ಪ್ಯಾನೆಲ್‌ಗಳನ್ನು ಒರಿಗಾಮಿ ತಂತ್ರಜ್ಞಾನದಿಂದ ಮಡಿಸಿ ಸಾಗಿಸಬಹುದು. ಸ್ಟೆಂಟ್‌ಗಳನ್ನು ಒರಿಗಾಮಿ ತಂತ್ರದಿಂದ ಸಂಕುಚಿತ ಸ್ಥಿತಿಯಲ್ಲಿ ಇಟ್ಟು, ದೇಹದೊಳಗೆ ವಿಸ್ತರಿಸುವ ವೈದ್ಯಕೀಯ ಉಪಕರಣಗಳ ತಯಾರಿಕೆ ಯಲ್ಲಿ ಪ್ರಾತ್ಯಕ್ಷಿಕೆಗಳಾಗಿ ಬಳಸಲಾಗುತ್ತಿದೆ.

ಫೋಲ್ಡಿಂಗ್ ತಂತ್ರಗಳನ್ನು ಬಳಸಿಕೊಂಡು, ರೂಪ ಬದಲಾಯಿಸಬಲ್ಲ ರೋಬೊಟ್ ಯಂತ್ರಗಳ ತಯಾರಿಕೆಯಲ್ಲೂ ಉಪಯೋಗಕ್ಕೆ ಬರುತ್ತಿದೆ. ಒರಿಗಾಮಿ ಮಡಿಕೆಗಳು ಜ್ಯಾಮಿತಿಯ ತತ್ವಗಳನ್ನು ಪ್ರತಿಬಿಂಬಿಸುತ್ತವೆ. ಕೆಲವು ರೀತಿಯಲ್ಲಿ, ಈ ಮಡಿಕೆಗಳು ಗಣಿತದ ಸಮಸ್ಯೆಗಳಿಗೆ ಹೊಸದೊಂದು ದಾರಿಯನ್ನೂ ನೀಡುತ್ತವೆ. ಜಪಾನಿನಲ್ಲಿ ಒರಿಗಾಮಿ ಕಲಿಕೆ ಮಕ್ಕಳ ಶಿಕ್ಷಣದ ಅವಿಭಾಜ್ಯ ಅಂಗ ವಾಗಿದೆ. ಇದರಿಂದ ಮಕ್ಕಳು ಕೌಶಲ, ಶಿಸ್ತಿನ ಅಭ್ಯಾಸ ಮತ್ತು ಸೃಜನಶೀಲ ಗುಣವನ್ನು ಕಲಿಯು ತ್ತಾರೆ. ಜಪಾನಿನ ಈ ಶ್ರೇಷ್ಠ ಕಲಾ ಪರಂಪರೆ ಇಂದು ಜಗತ್ತಿಗೆ ಹೊಸ ಪ್ರೇರಣೆಯಾಗಿದೆ.