ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lokesh Kaayarga Column: ಕ್ರೀಡೆಯನ್ನು ಕ್ರೀಡಾಳುಗಳಿಗೆ ಬಿಟ್ಟು ಬಿಡೋಣ

ಒಂದು ವೇಳೆ ಈ ಏಷ್ಯಾ ಕಪ್‌ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇರುತ್ತಿದ್ದರೆ, ರಾಹುಲ್ ದ್ರಾವಿಡ್‌ರಂತಹ ಕೋಚ್ ಮಾರ್ಗದರ್ಶನ ಇರುತ್ತಿದ್ದರೆ, , ಬಾಬರ್ ಆಜಂ ಪಾಕ್ ತಂಡದ ನಾಯಕ ನಾಗಿದ್ದರೆ ದುಬೈ ಕ್ರೀಡಾಂಗಣದಲ್ಲಿ ಕಾವೇರಿದ ವಾತಾವರಣ ಸೃಷ್ಟಿಯಾಗುತ್ತಿರಲಿಲ್ಲ.

ಕ್ರೀಡೆಯನ್ನು ಕ್ರೀಡಾಳುಗಳಿಗೆ ಬಿಟ್ಟು ಬಿಡೋಣ

-

ಲೋಕಮತ

kaayarga@gmail.com

ಮಳೆ ನಿಂತರೂ ಮಳೆ ಹನಿಗಳು ಇನ್ನೂ ನಿಂತಿಲ್ಲ. ಏಷ್ಯಾಕಪ್ ಟೂರ್ನಿಯಲ್ಲಿ ಅಜೇಯ ತಂಡ ವಾಗಿ ಭಾರತ ಚಾಂಪಿಯನ್ ಆಗಿದೆ. ಆದರೆ ಚಾಂಪಿಯನ್‌ಶಿಪ್ ಕುರುಹಾದ ಟ್ರೋಫಿ ಪಾಕಿಸ್ತಾನ ಕ್ರಿಕೆಟ್ ಅಧ್ಯಕ್ಷ ಮತ್ತು ಅಲ್ಲಿನ ವಿದೇಶ ಸಚಿವ ಮೊಹ್ಸಿನ್ ನಖ್ವಿ ಕೈಯಲ್ಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು, ‘ಟ್ರೋಫಿ ವಿಜೇತ ತಂಡದ ಸೊತ್ತು. ಮೊದಲು ಅದನ್ನು ಹಿಂತಿರುಗಿಸಿ’ ಎಂದು ಹೇಳಿದೆ. ಬಹುಮಾನ ವಿತರಣೆ ಸಮಾರಂಭದಲ್ಲಿ ಟ್ರೋಫಿ ಪಡೆಯಲು ನಿರಾಕರಿಸಿದ ಭಾರತದ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿಗೆ ದೂರು ನೀಡಿದೆ.

ಈ ಎಲ್ಲ ಬೆಳವಣಿಗೆಗಳು ಆಟಕ್ಕೆ ಸಂಬಂಧಿಸಿಲ್ಲ. ಆದರೆ ಇವುಗಳನ್ನು ಆಟದ ಭಾಗವಾಗಿಯೇ ಸ್ವೀಕರಿಸಬಹುದು. ಆದರೆ ಈಗ ಎರಡೂ ದೇಶಗಳ ರಾಜಕೀಯ ನಾಯಕರು ಈ ‘ಆಟದಲ್ಲಿ ಭಾಗಿ ಯಾಗಿದ್ದಾರೆ. ಎರಡೂ ಕಡೆಗಳಿಂದ ಆಕ್ರೋಶದ, ಹೀಯಾಳಿಕೆಯ ಹೇಳಿಕೆಗಳು ಹೊರ ಬರುತ್ತಿವೆ. ಇವು ಸಾಲದೆಂಬಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ನಡುವೆ ಟ್ರೋಲ್ ವಾರ್ ಶುರುವಾಗಿದೆ. ಇದು ಖಂಡಿತವಾಗಿಯೂ ಕ್ರೀಡೆಯ ಧ್ಯೇಯವಲ್ಲ. ಕ್ರೀಡಾ ಸ್ಪೂರ್ತಿಯೂ ಅಲ್ಲ.

ಈಗ ಟೀಮ್ ಇಂಡಿಯಾದ ಗೆಲುವನ್ನು ಸಂಭ್ರಮಿಸುವವರು, ಭಾರತದ ಗೆಲುವಿಗಿಂತಲೂ ಪಾಕಿಸ್ತಾನದ ಸೋಲನ್ನು ಹೆಚ್ಚು ಸಂಭ್ರಮಿಸುತ್ತಿದ್ದಾರೆ. ಒಂದು ವೇಳೆ ಭಾರತ ಈ ಪಂದ್ಯವನ್ನು ಸೋತಿದ್ದರೆ ಬರುತ್ತಿದ್ದ ಪ್ರತಿಕ್ರಿಯೆಗಳು ಎಷ್ಟು ಕಠೋರವಾಗಿರುತ್ತಿದ್ದವು ಎಂದು ನಾವು ಊಹಿಸ ಬಹುದು. ಇದೇ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಸೋತಿದ್ದರೆ ಇದು ಆಟದ ಭಾಗವಾಗಿಯೇ ಇರುತ್ತಿತ್ತು. ಸೋಲು-ಗೆಲುವು ಸಹಜ ಎಂದು ನಾವೇ ಸಮಾಧಾನಪಟ್ಟುಕೊಳ್ಳುತ್ತಿದ್ದೆವು. ಆದರೆ ಪಾಕಿಸ್ತಾನ ಎದುರಾಳಿಯಾಗಿದ್ದಾಗ, ನಾವು ಗೆಲ್ಲಲೇಬೇಕು. ಸೋತರೆ ಅದು ದೇಶಕ್ಕಾದ ಅವಮಾನ !

ಇದನ್ನೂ ಓದಿ: Lokesh Kaayarga Column: ‘ಸಹಕಾರ’ದಲ್ಲೂ ಸರಕಾರದ ಕಾರುಬಾರು ಬೇಕೇ ?

ಈ ಮನಸ್ಥಿತಿಗೆ ಕಾರಣವಾದ ಸನ್ನಿವೇಶಗಳನ್ನು ನಾವು ಮರೆಯುವಂತಿಲ್ಲ. ಎರಡೂ ದೇಶಗಳ ಜನಸಾಮಾನ್ಯರು ಈ ರೀತಿಯಲ್ಲಿ ಯೋಚಿಸುವುದರಲ್ಲಿ ಅಚ್ಚರಿಯೂ ಇಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿಯಂತಹ ನಾಯಕ, ಟೀಮ್ ಇಂಡಿಯಾದ ಗೆಲುವನ್ನು, ಸೇನಾ ಕಾರ್ಯಾಚರಣೆ ಯಲ್ಲಿ ಪಾಕಿಸ್ತಾನದ ವಿರುದ್ಧದ ಯಶಸ್ಸಿಗೆ ಹೋಲಿಸಿ ಪೋಸ್ಟ್‌ ಹಾಕಬಾರದಿತ್ತು.

‘ಆಪರೇಷನ್ ಸಿಂದೂರ- ಫಲಿತಾಂಶ ಒಂದೇ - ಭಾರತ ಗೆಲ್ಲುತ್ತದೆ! ನಮ್ಮ ಕ್ರಿಕೆಟಿಗರಿಗೆ ಅಭಿನಂದನೆ ಗಳು’- ಮೋದಿಯವರ ಈ ಪೋಸ್ಟ್‌ ಎರಡೂ ದೇಶಗಳ ಸಂಬಂಧದ ಮೇಲೆ ಬೀರುವ ರಾಜಕೀಯ ಪರಿಣಾಮಗಳು ಏನೇ ಇರಲಿ. ಕ್ರೀಡಾ ಸಂಬಂಧದ ವಿಚಾರದಲ್ಲಿ ಇದು ಕೆಟ್ಟ ನಿದರ್ಶನ. ಮುಂದೊಂದು ದಿನ ಭಾರತ ತಂಡ ಪಾಕ್ ಎದುರು ಸೋತರೆ, ಪಾಕಿಸ್ತಾನವು ‘ಇದು ಭಾರತದ ಮೇಲಿನ ಸೇನಾ ವಿಜಯ’ ಬಣ್ಣಿಸಿದರೆ ಕೇಳಲು ನಾವು ಸಿದ್ಧರಿರಬೇಕು.

ಪ್ರಧಾನಿ ಮೋದಿ ಅವರ ಮಾತಿನಿಂದ ಭಾರತ ತಂಡದ ಆಟಗಾರರು ಇನ್ನಷ್ಟು ಸ್ಫೂರ್ತಿ ಪಡೆದಿ ದ್ದಾರೆ. ‘ದೇಶದ ನಾಯಕರೇ ಮುಂಚೂಣಿಯಲ್ಲಿ ನಿಂತು ಬ್ಯಾಟ್ ಮಾಡಿದಂತೆ ಅನಿಸಿತು, ಅವರು ಸ್ಟ್ರೈಕ್ ತೆಗೆದುಕೊಂಡು ರನ್ ಗಳಿಸಿದಂತೆ ಭಾಸವಾಯಿತು’ ಭಾರತ ತಂಡದ ನಾಯಕ ಸೂರ್ಯ ಕುಮಾರ್ ಯಾದವ್, ಮೋದಿ ಮಾತಿಗೆ ದನಿಗೂಡಿಸಿದ್ದಾರೆ. ಅಂದರೆ ಪಾಕಿಸ್ತಾನ ವಿರುದ್ಧ ಇನ್ನು ಯಾವುದೇ ಕ್ರೀಡಾ ಸ್ಫರ್ಧೆ ಏರ್ಪಟ್ಟರೂ ಅದು ಪರಸ್ಪರರನ್ನು ಹಣಿಯುವ, ಹಳಿಯುವ ಸಮರ ಸ್ವರೂಪವನ್ನು ಪಡೆಯಲಿದೆ. ಕ್ರೀಡಾಂಗಣಗಳು ಸಮರಾಂಗಣಗಳಲ್ಲ. ಇಲ್ಲಿ ಗೆಲುವು, ನಿರ್ದಿಷ್ಟ ಸನ್ನಿವೇಶದಲ್ಲಿ ಆಟಗಾರರ ಪ್ರದರ್ಶನವನ್ನು ಅವಲಂಬಿಸಿದೆ. ಉತ್ತಮ ಪ್ರದರ್ಶನದ ಹೊರತಾ ಗಿಯೂ ತಂಡ ಸೋಲಬಹುದು. ಆದರೆ ಇದೇ ಅಂತಿಮವಲ್ಲ. ಸೈನಿಕರು ತಮ್ಮ ಜೀವ ಪಣಕ್ಕಿಟ್ಟು ತಂದು ಕೊಡುವ ಯುದ್ಧದ ನಿರ್ಣಾಯಕ ಗೆಲುವು ಕ್ರೀಡೆಯ ಗೆಲುವಿಗೆ ಎಂದೂ ಸರಿಸಾಟಿಯಲ್ಲ.

ಕ್ರೀಡೆಯ ಧ್ಯೇಯೋದ್ದೇಶಗಳು ಕೂಡ ಇದಕ್ಕೆ ವಿರುದ್ಧ. ಇಲ್ಲಿ ಎರಡು ತಂಡಗಳು ಪೈಪೋಟಿಗೆ ಬಿದ್ದು ಆಡಬಹುದು. ಆಟದ ಮಧ್ಯೆ ಉಗ್ರಾವತಾರ ತಾಳಬಹುದು. ಆದರೆ ಆಟ ಮುಗಿದ ಬಳಿಕ ಉಭಯ ತಂಡಗಳು ಇಲ್ಲವೇ ಆಟಗಾರರು ಪರಸ್ಪರರ ಉತ್ತಮ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದು ವಾಡಿಕೆ. ಆಟದ ಕಣದಲ್ಲಿ ಬದ್ಧ ಎದುರಾಳಿಗಳಾಗಿ ಹೋರಾಡಿದರೂ ವೈಯಕ್ತಿಕ ವಾಗಿ ಗೆಳೆತನ ಬೆಳೆಸಿಕೊಂಡ ಅದೆಷ್ಟೋ ದೃಷ್ಟಾಂತಗಳು ಇಲ್ಲಿ ಸಿಗುತ್ತವೆ.

ಸಂಬಂಧಗಳನ್ನು ಬೆಸೆಯುವುದು, ಪರಸ್ಪರರ ಬಗ್ಗೆ ಸೌಹಾರ್ದ ಭಾವನೆಗಳನ್ನು ಉತ್ತೇಜಿಸುವುದು ಕ್ರೀಡೆಯ ಉದ್ದೇಶ. ಆದರೆ ಭಾರತ ಮತ್ತು ಪಾಕ್ ನಡುವೆ ಸದ್ಯಕ್ಕೆ ಯಾವುದೇ ಸ್ಪರ್ಧೆ ಏರ್ಪಟ್ಟರೂ ಅಲ್ಲಿ ಶತ್ರುಭಾವವೇ ವಿಜೃಂಭಿಸುವುದು ಖಚಿತ.

ಈ ನಿಟ್ಟಿನಲ್ಲಿ ನಮ್ಮ ದೇಶಕ್ಕೆ ಮೊದಲ ವಿಶ್ವಕಪ್ ತಂದುಕೊಟ್ಟ ಕಪಿಲ್ ದೇವ್ ಅವರ ಮಾತು ಮನನೀಯ. ‘ಒಬ್ಬ ಕ್ರೀಡಾಪಟುವಾಗಿ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡುವುದಷ್ಟೇ ನನ್ನ ಕೆಲಸ. ಕ್ರಿಕೆಟಿಗರ ಗಮನವು ಕೇವಲ ಕ್ರಿಕೆಟ್ ಪ್ರದರ್ಶನದ ಮೇಲಿರಬೇಕು. ಕ್ರೀಡೆಯಿಂದ ರಾಜಕೀಯ ವನ್ನು ದೂರವಿಡಬೇಕು. ಮಾಧ್ಯಮಗಳು ರಾಜಕೀಯದ ಕಡೆಗೆ ಗಮನ ಹರಿಸುವುದರ ಬದಲು ಕ್ರೀಡೆಯ ಕಡೆಗೆ ನೋಡಬೇಕು’- ಕಪಿಲ್ ಅವರ ಈ ಮಾತಿನಲ್ಲಿ ವಿವೇಕವಿದೆ. ‘ಭಾರತದ ಆಟಗಾರರು ಪಾಕಿಸ್ತಾನದ ಆಟಗಾರರೊಂದಿಗೆ ಕೈಕುಲುಕಲು ನಿರಾಕರಿಸಿದ್ದು, ಆಟಗಾರರ ವೈಯಕ್ತಿಕ ಭಾವನೆ ಗಳಿಗೆ ಸಂಬಂಧಿಸಿದ ವಿಚಾರ. ಇದನ್ನು ದೊಡ್ಡ ವಿಷಯ ಮಾಡದೆ ಮುಂದಕ್ಕೆ ಸಾಗಬೇಕು’ ಎಂಬ ಕಪಿಲ್ ಅವರ ಮಾತಿನಲ್ಲಿ ಆಟಗಾರನೊಬ್ಬನ ನಿಜವಾದ ಕಳಕಳಿ ಇದೆ.

ಕ್ರೀಡೆಗೆ ಭಾಷೆ, ಧರ್ಮ ಅಥವಾ ರಾಷ್ಟ್ರೀಯತೆಯ ಹಂಗಿಲ್ಲ. ಕಪಿಲ್, ಗವಾಸ್ಕರ್, ತೆಂಡೂಲ್ಕರ್, ದ್ರಾವಿಡ್, ಧೋನಿ, ವಿರಾಟ್‌ರಂತಹ ದಿಗ್ಗಜ ಆಟಗಾರರನ್ನು ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಗಳೂ ಮೆಚ್ಚಿಕೊಂಡಿದ್ದಾರೆ. ಇವ್ರಾನ್ ಖಾನ್, ವಸೀಮ್ ಅಕ್ರಮ್, ವಕಾರ್ ಯೂನಿಸ್‌ರಂತಹ ಬೌಲರ್‌ ಗಳನ್ನು ಕ್ರಿಕೆಟ್ ಮೆಚ್ಚಿಕೊಳ್ಳದಿರಲು ಸಾಧ್ಯವಿಲ್ಲ. ರಾಜಕೀಯ ಉದ್ವಿಗ್ನತೆಯ ಹೊರತಾಗಿಯೂ, ಉಭಯ ದೇಶಗಳ ಕ್ರೀಡಾಪಟುಗಳ ನಡುವೆ ಮೈದಾನದ ಒಳಗೆ ಮತ್ತು ಹೊರಗೆ ಉತ್ತಮ ಬಾಂಧವ್ಯ ವಿದೆ.

2021ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನವು ಭಾರತವನ್ನು ಸೋಲಿಸಿದ ನಂತರ, ಪಾಕ್ ಆಟಗಾರರು ಭಾರತದ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಸೌಹಾರ್ದಯುತವಾಗಿ ಮಾತನಾಡುವ ಫೋಟೋಗಳು ವೈರಲ್ ಆಗಿದ್ದವು. ಪಾಕಿಸ್ತಾನದ ಕ್ರಿಕೆಟ್ ಬೋರ್ಡ್ ಆ ಸಂದರ್ಭದಲ್ಲಿ ‘ಹತ್ತಾರು ವರ್ಷಗಳ ಈ ಪ್ರತಿಸ್ಪರ್ಧೆಯ ಸೌಂದರ್ಯವು ಸ್ಪರ್ಧೆಯಲ್ಲಿ ಮಾತ್ರವಲ್ಲ, ಪರಸ್ಪರ ಗೌರವದಲ್ಲಿದೆ’ ಎಂದು ಟ್ವೀಟ್ ಮಾಡಿತ್ತು. ಕ್ರೀಡೆಯು ರಾಜಕೀಯಕ್ಕಿಂತ ದೊಡ್ಡದು ಎಂಬುದನ್ನು ಈ ಕ್ಷಣಗಳು ಸಾಬೀತುಪಡಿಸಿವೆ.

ವಿರಾಟ್ ರಂತಹ ದಿಗ್ಗಜ ಆಟಗಾರ ಪಾಕ್‌ನ ಯುವ ಆಟಗಾರನೊಬ್ಬನ ಶೂ ದಾರ ಕಟ್ಟುವುದು ಕೇವಲ ಆ ಸಂದರ್ಭದ ಅಗತ್ಯವಲ್ಲ. ಉಭಯ ದೇಶಗಳ ನಡುವಣ ಉದ್ವಿಗ್ನತೆಯನ್ನು ಕಡಿಮೆ ಮಾಡುವಲ್ಲಿ ಇಂತಹ ನಡೆ ಬಹಳಷ್ಟು ಸಹಕಾರಿಯಾಗುತ್ತದೆ. ಒಂದು ವೇಳೆ ಈ ಏಷ್ಯಾ ಕಪ್‌ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇರುತ್ತಿದ್ದರೆ, ರಾಹುಲ್ ದ್ರಾವಿಡ್‌ರಂತಹ ಕೋಚ್ ಮಾರ್ಗದರ್ಶನ ಇರುತ್ತಿದ್ದರೆ, ಬಾಬರ್ ಆಜಂ ಪಾಕ್ ತಂಡದ ನಾಯಕನಾಗಿದ್ದರೆ ದುಬೈ ಕ್ರೀಡಾಂ ಗಣದಲ್ಲಿ ಕಾವೇರಿದ ವಾತಾವರಣ ಸೃಷ್ಟಿಯಾಗುತ್ತಿರಲಿಲ್ಲ. ವಿರಾಟ್, ಬಾಬರ್ ಆಜಂಗೆ ತಮ್ಮ ಬ್ಯಾಟ್ ಉಡುಗೊರೆಯಾಗಿ ನೀಡಿದ ಘಟನೆ ಉಭಯ ಆಟಗಾರರ ನಡುವಿನ ಪರಸ್ಪರ ಗೌರವಕ್ಕೆ ಸಾಕ್ಷಿಯಾಗಿದೆ. ಅಂಗಣದಲ್ಲಿ ಆಟಗಾರರ ವೈಯಕ್ತಿಕ ವರ್ತನೆಗಳು ಉಭಯ ದೇಶಗಳ ನಡುವೆ ಪ್ರೀತಿಯನ್ನು ಅರಳಿಸಬಹುದು. ದ್ವೇಷವನ್ನು ಕೆರಳಿಸಬಹುದು. ಈಗ ಉಭಯ ತಂಡಗಳ ಆಟಗಾರರು ಮಾಡಿದ್ದು ಕೆರಳಿಸುವ ಕೆಲಸ.

ನಿಜವಾದ ಕ್ರೀಡಾಳು ಗೆಲುವು ಮತ್ತು ಸೋಲು ಎರಡು ಸಂದರ್ಭದಲ್ಲೂ ಎದುರಾಳಿಯನ್ನು ಗೌರವಿಸುತ್ತಾನೆ. ಕ್ರೀಡಾಂಗಣದಲ್ಲಿ, ಕ್ರೀಡಾಪಟುಗಳು ಮೊದಲು ಮನುಷ್ಯರು ಮತ್ತು ಸಹ ಆಟಗಾರರು. ಯಾರಾದರೂ ಗಾಯಗೊಂಡಾಗ ಸಹಾಯಕ್ಕೆ ಧಾವಿಸುವುದು ಅಥವಾ ಕಷ್ಟದ ಸಮಯದಲ್ಲಿ ಸಮಾಧಾನ ಮಾಡುವುದು ಮಾನವೀಯ ಗುಣ. ಇದಕ್ಕೆ ರಾಷ್ಟ್ರೀಯತೆ ಇಲ್ಲವೇ ರಾಜಕೀಯ ನಿರ್ಬಂಧಗಳಿಲ್ಲ.

ಶೀತಲ ಸಮರ ಯುಗದಲ್ಲಿ ಚೀನಾ ಮತ್ತು ಅಮೆರಿಕದ ನಡುವೆ ಬಾಂಧವ್ಯ ಬೆಸೆದಿದ್ದು ಕ್ರೀಡೆ ಎನ್ನುವುದು ಗಮನಾರ್ಹ, 1970ರ ತನಕ ಎರಡೂ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಸಂಪರ್ಕ ಇರಲಿಲ್ಲ. 1971ರಲ್ಲಿ, ಜಪಾನ್‌ನಲ್ಲಿ ನಡೆದ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್ ಸಮಯದಲ್ಲಿ ಅಮೆರಿಕದ ತಂಡವನ್ನು ಚೀನಾಕ್ಕೆ ಆಹ್ವಾನಿಸಲಾಯಿತು. ಇದು ಎರಡೂ ರಾಷ್ಟ್ರಗಳ ನಡುವಿನ ಸಂಪರ್ಕಕ್ಕೆ ದಾರಿ ಮಾಡಿಕೊಟ್ಟಿತ್ತು. ಇದರ ಮರುವರ್ಷವೇ ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಮೊದಲ ಬಾರಿಗೆ ಚೀನಾಗೆ ಭೇಟಿ ನೀಡಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಜನಾಂಗೀಯ ನೀತಿ ಕೊನೆ ಗೊಂಡ ಬಳಿಕ ದೇಶವನ್ನು ಬೇರೆ ದೇಶಗಳ ಜತೆ ಮೊದಲು ಬೆಸೆದಿದ್ದು ಕ್ರಿಕೆಟ್. ಅಲ್ಲಿನ ಕ್ರಿಕೆಟ್ ಮತ್ತು ರಗ್ಬಿ ಕ್ರೀಡೆಗಳು ದೇಶದ ಬಿಳಿ ಮತ್ತು ಕಪ್ಪು ಸಮುದಾಯಗಳನ್ನು ಒಂದುಗೂಡಿಸಲು ಸಹಾಯಕವಾದವು.

ಹಾಗೆಂದು ಕ್ರೀಡಾಂಗಣದಲ್ಲಿ ಎಲ್ಲ ಅಪಮಾನಗಳನ್ನು ಸಹಿಸಿಕೊಳ್ಳಬೇಕೆಂದಿಲ್ಲ. 1995ರ ಆಸ್ಟ್ರೇಲಿಯಾ ಪ್ರವಾಸದ ವೇಳೆ ಲಂಕಾ ತಂಡವು ಆಸ್ಟ್ರೇಲಿಯಾ ಆಟಗಾರರೊಂದಿಗೆ ಕೈ ಕುಲುಕಲು ನಿರಾಕರಿಸಿತ್ತು. ಅಂದಿನ ಲಂಕಾ ತಂಡದ ನಾಯಕ ಅರ್ಜುನ ರಣತುಂಗ ಅವರ ಈ ನಿರ್ಧಾರ ಅತ್ಯಂತ ದಿಟ್ಟ ಮತ್ತು ಸ್ವಾಭಿಮಾನದ ನಿರ್ಧಾರವಾಗಿತ್ತು. ಈ ಪ್ರವಾಸದಲ್ಲಿ ಆಸ್ಟ್ರೇಲಿಯಾದ ಅಂಪಾಯರ್ ಡ್ಯಾರೆಲ್ ಹೇರ್ ಅವರು ಯುವ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ ಬೌಲಿಂಗ್ ಶೈಲಿಯನ್ನು ‘ಚಕ್ಕಿಂಗ್’ ಎಂದು ಕರೆದು ಪದೇ ಪದೆ ನೋಬಾಲ್ ನೀಡಿದ್ದರು.

ನಾಯಕ ಅರ್ಜುನ ರಣತುಂಗ ಗಾಯಗೊಂಡು ವಿಕೆಟ್ ನಡುವಣ ಓಟಕ್ಕೆ ಸಹಾಯಕರನ್ನು ಕೇಳಿದಾಗ ಅಂಪಾಯರ್ ನಿರಾಕರಿಸಿದ್ದರು. ಆಸೀಸ್ ಆಟಗಾರರು ಲಂಕಾ ಆಟಗಾರರನ್ನು ಜನಾಂಗೀಯ ನಿಂದನೆ ಮಾಡಿದ್ದರು. ಅಂತಿಮವಾಗಿ ನಾಯಕ ಅರ್ಜುನ ರಣತುಂಗ ಆಸ್ಟ್ರೇಲಿಯಾ ತಂಡದ ನಾಯಕ ಮಾರ್ಕ್ ಟೇಲರ್ ಮತ್ತು ಇತರ ಆಟಗಾರರೊಂದಿಗೆ ಸರಣಿಯ ನಂತರ ಕೈ ಕುಲುಕಲು ನಿರಾಕರಿಸಿ ತಮ್ಮ ಪ್ರತಿಭಟನೆ ದಾಖಲಿಸಿದ್ದರು. ಲಂಕಾ ತಂಡವು 1996ರ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ಗೆದ್ದಾಗ, ಅದು ಕೇವಲ ಒಂದು ಕ್ರಿಕೆಟ್ ವಿಜಯ ವಾಗಿರದೆ, ತಾರತಮ್ಯ ಮತ್ತು ಅಗೌರವಕ್ಕೆ ನೀಡಿದ ಪ್ರತ್ಯುತ್ತರವಾಗಿತ್ತು.

ಕ್ರಿಕೆಟ್ ಹೊರತಾಗಿ ಉಭಯ ದೇಶಗಳ ಆಟಗಾರರು ಹಲವು ಕ್ರೀಡೆಗಳಲ್ಲಿ ವೈಯಕ್ತಿಕ ಸ್ನೇಹದ ಮೂಲಕ ಪರಸ್ಪರ ಸಂಬಂಧ ಸುಧಾರಣೆಗೆ ಕೊಡುಗೆ ನೀಡಿದ್ದಾರೆ. ರೋಹನ್ ಬೋಪಣ್ಣ ಮತ್ತು ಐಸಮ್-ಉಲ್-ಹಕ್ ಖುರೇಶಿ ಜೋಡಿ ಟೆನಿಸ್ ಡಬಲ್ಸ್‌ ಆಟದಲ್ಲಿ ಇಂಡೋ-ಪಾಕ್ ಎಕ್ಸ್‌ಪ್ರೆಸ್ ಜೋಡಿ ಎಂದು ಪ್ರಸಿದ್ಧಿಯಾಗಿತ್ತು. ಈ ಜೋಡಿ 2010ರ ಅಮೆರಿಕ ಓಪನ್ ಗ್ರ್ಯಾಂಡ್ ಸ್ಲಾಮ್ ಟೂರ್ನಿ ಯಲ್ಲಿ ಫೈನಲ್ ಪ್ರವೇಶಿಸಿದಾಗ ಎರಡೂ ದೇಶದ ಕ್ರೀಡಾಭಿಮಾನಿಗಳು ಗೆಲುವಿಗಾಗಿ ಹಾರೈಸಿದ್ದರು.

ಪಾಕಿಸ್ತಾನದ ತಮ್ಮ ಸಹ ಆಟಗಾರ ಅರ್ಶದ್ ನದೀಮ್ ಬಳಿ ಜಾವೆಲಿನ್ ಕೊಳ್ಳಲೂ ಹಣವಿಲ್ಲದಾಗ, ಆತನ ನೆರವಿಗೆ ನಿಂತದ್ದು ಭಾರತದ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ. ಬೆಂಗಳೂರಿನಲ್ಲಿ ನಡೆದ ಜಾವೆಲಿನ್ ಕ್ರೀಡಾಕೂಟಕ್ಕೆ ನದೀಮ್ ಅವರನ್ನು ಆಹ್ವಾನಿಸಿದ ನೀರಜ್ ಅವರ ನಡೆ ಇಲ್ಲಿ ಕೆಲವು ಸಂಘಟನೆಗಳ ವಿರೋಧಕ್ಕೆ ಕಾರಣವಾಗಿತ್ತು. ಇಷ್ಟಾದರೂ ಉಭಯ ಆಟಗಾರರ ನಡುವೆ ಮಿತ್ರತ್ವವಿದೆ. ಇವರಿಬ್ಬರ ಮುಖಾಮುಖಿಯು ಒಂದು ಸ್ನೇಹಪರ ಸ್ಪರ್ಧೆಯಂತೆ ಇರುತ್ತದೆ ಹೊರತು ಯುದ್ಧದಂತೆ ಇರುವುದಿಲ್ಲ. ಕ್ರೀಡೆ ಇರಬೇಕಾಗಿದ್ದು ಹೀಗೆ. ಅದೆಂದೂ ಸಾವು, ನೋವಿಗೆ ಕಾರಣ ವಾಗುವ ಯುದ್ಧ ಆಗಬಾರದು.