Roopa Gururaj Column: ನವರಾತ್ರಿ ಗೊಂಬೆ ಹಬ್ಬದ ವೈಭವ
ಹಳೆ ಮೈಸೂರು ಪ್ರಾಂತ್ಯದಲ್ಲಿ ಗೊಂಬೆ ಬಾಗಿನ ಸಂಪ್ರದಾಯ ಚಾಲ್ತಿಯಲ್ಲಿದೆ. ನವರಾತ್ರಿಯ ಒಂಬತ್ತು ದಿನಗಳಲ್ಲೂ ಸಣ್ಣ ಮಕ್ಕಳೆ ಗುಂಪುಗೂಡಿ ಮನೆಮನೆಗಳಿಗೆ ತೆರಳಿ ‘ನಿಮ್ಮ ಮನೆಯಲ್ಲಿ ಗೊಂಬೆ ಇಟ್ಟಿದ್ದೀರಾ’ ಎಂದು ಕೇಳಿ ಒಳನುಗ್ಗುತ್ತಾರೆ. ಮನೆಯವರಿಂದ ಗೊಂಬೆ ಬಾಗಿನ ಪಡೆದು ಮರಳುತ್ತಾರೆ.

-

ಒಂದೊಳ್ಳೆ ಮಾತು
rgururaj628@gmail.com
ನವರಾತ್ರಿ ಬಂತು ಎಂದರೆ ಎಲ್ಲರ ಮನೆಯಲ್ಲೂ ಗೊಂಬೆಗಳನ್ನು ಜೋಡಿಸಿ ಗೊಂಬೆಯ ಹಬ್ಬ ವನ್ನು ಮಾಡುವ ಸಮಯ. ಗೊಂಬೆ ಹಬ್ಬವನ್ನು ಆಚರಿಸುವಾಗ ಸಾಮಾನ್ಯವಾಗಿ ಗೊಂಬೆಗಳನ್ನು ಯಾವುದಾದರೊಂದು ವಿಷಯ ಅಥವಾ ಪೌರಾಣಿಕ ಕಥಾವಸ್ತುವನ್ನು ಆಧರಿಸಿ ಜೋಡಿಸುತ್ತಾರೆ.
ಉದಾಹರಣೆಗೆ, ರಾಮಾಯಣ, ಮಹಾಭಾರತ ಅಥವಾ ಇತರ ಹಿಂದೂ ಪುರಾಣಗಳ ಉಪ ಕಥೆಗಳು. ಗೊಂಬೆ ಜೋಡಿಸುವಾಗ ಅಲ್ಲಿನ ಅತಿ ಮುಖ್ಯ ಗೊಂಬೆಗಳನ್ನು ‘ಪಟ್ಟದ ಗೊಂಬೆ’ ಎನ್ನಲಾಗುತ್ತದೆ. ದೇವರು ಮತ್ತು ದೇವತೆಗಳಾದ ಶ್ರೀಕೃಷ್ಣ ಮತ್ತು ರಾಧಾ, ಶಿವ-ಪಾರ್ವತಿ, ರಾಮ-ಸೀತೆ ಸಾಮಾನ್ಯ ವಾಗಿ ಕಾಣ ಸಿಗುವ ಪಟ್ಟದ ಗೊಂಬೆಗಳಾಗಿವೆ.
ಪಟ್ಟದ ಗೊಂಬೆಗಳಿಗೆ ಉಳಿದ ಗೊಂಬೆಗಳಿಗಿಂತ ಹೆಚ್ಚಿನ ಮರ್ಯಾದೆ, ಅಲಂಕಾರ ಮತ್ತು ಪ್ರಾಮುಖ್ಯ ಸಿಗುತ್ತದೆ. ಗೊಂಬೆಗಳನ್ನು ಸಾಮಾನ್ಯವಾಗಿ ಮರದಿಂದ ತಯಾರಿಸಲಾಗುತ್ತದೆ. ಲೋಹ, ಪ್ಲಾಸ್ಟಿಕ್ ಅಥವಾ ಜೇಡಿಮಣ್ಣಿನಿಂದ ತಯಾರಿಸಿದ ಗೊಂಬೆಗಳನ್ನೂ ಜೋಡಿಸುವ ಪರಿಪಾಠವಿದೆ. ಗೊಂಬೆಗಳನ್ನು ಅನೇಕ ಮೆಟ್ಟಿಲುಗಳಿರುವ ವೇದಿಕೆಯ ಮೇಲೆ ಸ್ಥಾಪಿಸಿ ಪ್ರದರ್ಶಿಸಲಾಗುತ್ತದೆ.
ಇದನ್ನೂ ಓದಿ: Roopa Gururaj Column: ಚಂದ್ರಘಂಟಾ ದೇವಿಯಾದ ಶಿವೆ
ಸಾಮಾನ್ಯವಾಗಿ ಸುಮಾರು 9 ಸಾಲುಗಳಿದ್ದು, ಇದು ನವರಾತ್ರಿಯ 9 ದಿನಗಳನ್ನು ಪ್ರತಿನಿಧಿಸುತ್ತದೆ. ಪಟ್ಟದ ಗೊಂಬೆಗಳನ್ನು ಸಾಮಾನ್ಯವಾಗಿ ಮೇಲಿನ ಸಾಲಿನಲ್ಲಿ ಅಥವಾ ಮಧ್ಯಭಾಗದಲ್ಲಿ ಇರಿಸ ಲಾಗುತ್ತದೆ, ಇತರ ಕಿರಿಯ ಪಾತ್ರಗಳನ್ನು ಪ್ರತಿನಿಽಸುವ ಸಣ್ಣಗೊಂಬೆಗಳನ್ನು ಕೆಳಭಾಗದಲ್ಲಿ ಇರಿಸಲಾಗುತ್ತದೆ.
ಗೊಂಬೆ ಹಬ್ಬದ ಆಚರಣೆಗಳ ದೃಶ್ಯ ವೈಭವವನ್ನು ಹೆಚ್ಚಿಸಲು ಬೆಳಕಿನ ಅಲಂಕಾರಗಳು, ಹೂ ಮಾಲೆಗಳು ಮತ್ತು ಇತರ ಅಲಂಕಾರಗಳನ್ನು ಮಾಡಲಾಗುತ್ತದೆ. ಗೊಂಬೆ ಸಂಗ್ರಹಗಳನ್ನು ವೀಕ್ಷಿಸಲು ವಿಶೇಷವಾಗಿ ಮಕ್ಕಳನ್ನು ಆಹ್ವಾನಿಸಿ ಅವರಿಗೆ ಬೊಂಬೆ ಬಾಗಿನ ನೀಡುವ ಪದ್ಧತಿಯೂ ಜಾರಿಯಲ್ಲಿದೆ. ಇಂಥ ಕಲೆಯನ್ನು ಪ್ರಶಂಸಿಸಲು ಪರಸ್ಪರರ ಮನೆಗೆ ಭೇಟಿ ನೀಡುವುದು, ಸಿಹಿತಿಂಡಿ ಗಳು ಮತ್ತು ಶುಭಾಶಯಗಳನ್ನು ಹಂಚಿಕೊಳ್ಳುವುದು ಗೊಂಬೆ ಹಬ್ಬದ ಅವಿಭಾಜ್ಯ ಅಂಗವೇ ಸರಿ.
ಸರಸ್ವತಿ ಪೂಜೆಯನ್ನು ನವರಾತ್ರಿಯ 9ನೇ ದಿನ ಮಾಡಲಾಗುತ್ತದೆ. ನವರಾತ್ರಿಯ 10ನೇ ದಿನದಂದು ಗೊಂಬೆಗಳನ್ನು ವ್ಯವಸ್ಥಿತವಾಗಿ ಪೆಟ್ಟಿಗೆಯಲ್ಲಿ ಜೋಪಾನವಾಗಿ ತೆಗೆದಿಟ್ಟು ಮುಂದಿನ ವರ್ಷ ದವರೆಗೆ ವಿಶ್ರಾಂತಿ ನೀಡಲಾಗುತ್ತದೆ. ನವದುರ್ಗೆಯರಲ್ಲಿ ಪ್ರತಿದಿನ ಆಯಾ ದೇವಿಯರ ಕುಂಕುಮಾ ರ್ಚನೆ ಮಾಡಿ ಪಾಯಸ, ಸಿಹಿ ಪೊಂಗಲ, ಕೋಸಂಬರಿ, ಕಡಲೆ ಉಸುಲಿ ಹೀಗೆ ತಿನಿಸುಗಳ ನೈವೇದ್ಯ ಮಾಡಿ ಮಂಗಳಾರತಿ ಮಾಡಿ ಸಂಜೆಯ ವೇಳೆಗೆ ಮುತ್ತೈದೆಯರನ್ನು, ಹೆಣ್ಣುಮಕ್ಕಳನ್ನು ಕರೆದು ಬಾಗಿನ, ತೇಂಗೊಳಲು, ಚಕ್ಕುಲಿ, ಉಂಡೆ ಹೀಗೆ ಖಾರ, ಸಿಹಿ ತಿಂಡಿಗಳನ್ನು ಕೊಟ್ಟು ಆರತಿ ಮಾಡುವ ಪದ್ಧತಿ ಇದೆ.
ಮುತ್ತೈದೆಯರು, ಮಕ್ಕಳು ಒಬ್ಬರು, ಮತ್ತೊಬ್ಬರ ಮನೆಗೆ ಹೋಗುತ್ತಾ ದಸರಾ ಸಂಭ್ರಮದಲ್ಲಿ ಪಾಲ್ಗೊಂಡು ಸಂತೋಷಪಡುತ್ತಾರೆ. ಇದರಿಂದ ನಮ್ಮ ಸಂಪ್ರದಾಯ, ಆಚರಣೆಗಳು ಉಳಿಯುವು ದಲ್ಲದೆ ಮುಂದಿನ ಪೀಳಿಗೆಗೂ ತೋರಿಸಿಕೊಟ್ಟು ಅವರಲ್ಲಿ ಪ್ರಜ್ಞೆಯನ್ನು ಮೂಡಿಸಿದಂತಾಗುತ್ತದೆ.
ಹಳೆ ಮೈಸೂರು ಪ್ರಾಂತ್ಯದಲ್ಲಿ ಗೊಂಬೆ ಬಾಗಿನ ಸಂಪ್ರದಾಯ ಚಾಲ್ತಿಯಲ್ಲಿದೆ. ನವರಾತ್ರಿಯ ಒಂಬತ್ತು ದಿನಗಳಲ್ಲೂ ಸಣ್ಣ ಮಕ್ಕಳೆ ಗುಂಪುಗೂಡಿ ಮನೆಮನೆಗಳಿಗೆ ತೆರಳಿ ‘ನಿಮ್ಮ ಮನೆಯಲ್ಲಿ ಗೊಂಬೆ ಇಟ್ಟಿದ್ದೀರಾ’ ಎಂದು ಕೇಳಿ ಒಳನುಗ್ಗುತ್ತಾರೆ. ಮನೆಯವರಿಂದ ಗೊಂಬೆ ಬಾಗಿನ ಪಡೆದು ಮರಳುತ್ತಾರೆ.
ಬಾಗಿನವಾಗಿ ನೀಡುವ ಕೋಡುಬಳೆ, ಚಕ್ಕುಲಿ, ನಿಪ್ಪಟ್ಟು ಮತ್ತು ಸಿಹಿ ತಿನಿಸುಗಳನ್ನು ಅವರು ಸವಿಯುವುದೇ ಒಂದು ಸೊಬಗು. ಗೊಂಬೆ ನೋಡಲು ಬರುವ ಮಕ್ಕಳಿಗೆ ಮನೆಯವರು ಪ್ರೀತಿ ಯಿಂದ ಸಿಹಿ ಮತ್ತು ಕರಿದ ಕುರು ಕಲು ತಿಂಡಿ,ತಿನಿಸುಗಳ ಜತೆಗೆ ಕಾಣಿಕೆ ನೀಡುವುದು ವಾಡಿಕೆ.
ನವರಾತ್ರಿ ಬಂತೆಂದರೆ ಮನೆಮನೆಗಳಲ್ಲಿ ‘ಗೊಂಬೆ ಬಾಗಿನ’ ಸಿದ್ಧಪಡಿಸುವುದೇ ಸಂಭ್ರಮ. ಊರ ವಾದ್ಯಗಾರರು ಪ್ರತಿ ಸಂಜೆ ಬಂದು ಗೊಂಬೆಗಳ ಮುಂದೆ ವಾದ್ಯ ಊದಿ, ಡೋಲು ಬಾರಿಸಿ, ಮನೆ ಯವರು ನೀಡುವ ದವಸವನ್ನು ಚೀಲಕ್ಕೆ ತುಂಬಿಕೊಂಡು ಹೋಗುವ ಪದ್ಧತಿಯು ಅನೇಕ ಚಿಕ್ಕ ಊರುಗಳಲ್ಲಿ ಚಾಲ್ತಿಯಲ್ಲಿದೆ.
ನಮ್ಮ ಇಂಥ ವಿಶಿಷ್ಟ ಪದ್ಧತಿಗಳನ್ನು ನಾವು ಕೂಡ ನಮ್ಮ ಕೈಲಾದ ಮಟ್ಟಿಗೆ ಆಚರಿಸಿ ಮಕ್ಕಳಿಗೆ ಈ ಹಬ್ಬಗಳ ಇತಿಹಾಸ ಮತ್ತು ವಿಶಿಷ್ಟತೆಯ ಬಗ್ಗೆ ತಿಳಿಸಿಕೊಡಬೇಕು. ಇವೆಲ್ಲ ನಮ್ಮ ಸಂಸ್ಕೃತಿಯ ಒಂದು ಭಾಗವೇ ಅಲ್ಲವೇ ?