Dr Sadhanashree Column: ಮಾಲಿನ್ಯ: ಆಯುರ್ವೇದದ ರಕ್ಷಣಾ ಮಾರ್ಗಗಳು
ಆಯುರ್ವೇದದ ತ್ರಿಫಲಾ ನೀರು, ಅಭ್ಯಂಗ ಸ್ನಾನ ಮತ್ತು ಪಿತ್ತಶಾಮಕ ಆಹಾರ ಕ್ರಮಗಳು ತೊಂದರೆ ಯನ್ನು ಹತೋಟಿಗೆ ತಂದವು. ೪೦ ದಿನಗಳಲ್ಲಿ ತುರಿಕೆ ಸಂಪೂರ್ಣವಾಗಿ ನಿಂತು ಚರ್ಮ ಶಾಂತ ವಾಯಿತು. ಮಾಲಿನ್ಯದಿಂದ ಉಂಟಾಗುವ ರಕ್ತದುಷ್ಟಿಗೆ ಸರಳ ಕ್ರಮಗಳೇ ಪರಿಣಾಮಕಾರಿ ಯೆಂದು ಆಕೆ ಅರಿತುಕೊಂಡಳು.
-
ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಆಹಾರದ ನಡುವೆ ಪದೇ ಪದೆ ಕಾಫಿ-ಟೀ, ಉಪಾಹಾರಗಳನ್ನು ಸೇವಿಸಬಾರದು. ಮುಂಚೆ ಸೇವಿಸಿದ ಆಹಾರವು ಸಂಪೂರ್ಣ ಜೀರ್ಣವಾಗುವ ಮೊದಲು ಮತ್ತೊಮ್ಮೆ ಆಹಾರ ಸೇವನೆ ನಿಷಿದ್ಧ. ರಾತ್ರಿ ಆಹಾರವನ್ನು ಬೇಗ ಸೇವಿಸಿ ಮಲಗುವ ಮುನ್ನ ಕನಿಷ್ಠ ಪಕ್ಷ ೧-೨ ಗಂಟೆಗಳ ಅಂತರವನ್ನು ನೀಡಬೇಕು. ಅತಿಯಾದ ಕರಿದ ಪದಾರ್ಥ, ಬೇಕರಿ ಪದಾರ್ಥ, ಸಿಹಿತಿನಿಸು ಗಳನ್ನು ವರ್ಜಿಸಿ ಹೆಚ್ಚಾಗಿ ಹಣ್ಣು ತರಕಾರಿಗಳಿಂದ ಕೂಡಿದ ಆಹಾರವನ್ನು ಸೇವಿಸಿದರೆ, ಅದು ದೇಹವನ್ನು ಶುದ್ಧಗೊಳಿಸುತ್ತದೆ.
ಕೇಸ್ ಸ್ಟೋರಿ ೧: ರೇವತಿ, ೬ ವರ್ಷ ಹುಬ್ಬಳ್ಳಿಯಲ್ಲಿ ವಾಸಿಸುವ ರೇವತಿಗೆ ದಿನವೂ ಸೀನು, ಮೂಗು ಕಟ್ಟುವುದು, ರಾತ್ರಿ ಕೆಮ್ಮಿನ ತೊಂದರೆ. ವೈದ್ಯರು ಸೂಚಿಸಿದ ನಸ್ಯದ ೨ ಹನಿ, ಅರಿಶಿನ-ಶುಂಠಿ ಕಷಾಯ ಹಾಗೂ ಊಟದ ಜತೆ ಬಿಸಿನೀರು ಸೇವಿಸುವ ಪದ್ಧತಿ ಅವಳ ತೊಂದರೆಯನ್ನು ಕಡಿಮೆ ಮಾಡಿತು.
೩ ವಾರಗಳಲ್ಲಿ ಕೆಮ್ಮು-ಸೀನು ಶೇ.೬೦ರಷ್ಟು ಇಳಿಕೆಯಾಯಿತು. ಮಾಲಿನ್ಯವನ್ನು ನಿಲ್ಲಿಸಲು ಸಾಧ್ಯ ವಿಲ್ಲವಾದರೂ, ದೇಹವನ್ನು ಬಲಪಡಿಸಬಹುದು ಎಂಬುದನ್ನು ಈ ಚಿಕಿತ್ಸೆ ತೋರಿಸಿತು.
ಕೇಸ್ ಸ್ಟೋರಿ ೨: ಶ್ವೇತಾ, ೪೦ ವರ್ಷ ನಗರದ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಶ್ವೇತಾಳಿಗೆ ಧೂಳು-ರಾಸಾಯನಿಕಗಳಿಂದ ಚರ್ಮದಲ್ಲಿ ಕೆಂಪು ಗಂಧೆಗಳು, ತುರಿಕೆ ಮತ್ತು ಕಣ್ಣಲ್ಲಿ ಉರಿ ಹೆಚ್ಚಿತು.
ಆಯುರ್ವೇದದ ತ್ರಿಫಲಾ ನೀರು, ಅಭ್ಯಂಗ ಸ್ನಾನ ಮತ್ತು ಪಿತ್ತಶಾಮಕ ಆಹಾರ ಕ್ರಮಗಳು ತೊಂದರೆ ಯನ್ನು ಹತೋಟಿಗೆ ತಂದವು. ೪೦ ದಿನಗಳಲ್ಲಿ ತುರಿಕೆ ಸಂಪೂರ್ಣವಾಗಿ ನಿಂತು ಚರ್ಮ ಶಾಂತ ವಾಯಿತು. ಮಾಲಿನ್ಯದಿಂದ ಉಂಟಾಗುವ ರಕ್ತದುಷ್ಟಿಗೆ ಸರಳ ಕ್ರಮಗಳೇ ಪರಿಣಾಮಕಾರಿ ಯೆಂದು ಆಕೆ ಅರಿತುಕೊಂಡಳು.
ಇದನ್ನೂ ಓದಿ: Dr Sadhanashree Column: ಈ ಆರು ಬಗೆಯ ತರಕಾರಿಗಳ ಬಗ್ಗೆ ಬಲ್ಲಿರಾ ?
ಕೇಸ್ ಸ್ಟೋರಿ ೩: ಶಶಿಧರ, ೫೨ ವರ್ಷ ೨೦ ವರ್ಷಗಳಿಂದ ಬಸ್ ಚಾಲಕರಾಗಿರುವ ಶಶಿಧರರಿಗೆ ಹೊಗೆಯಿಂದ ಎದೆಯಲ್ಲಿ ಕಫ ಕಟ್ಟುವುದು, ಉಸಿರಾಟದ ತೊಂದರೆಯಾಯಿತು, ಬಲ ಕಡಿಮೆ ಯಾಯಿತು. ಆಯುರ್ವೇದದ ಕವಲ, ಕುಡಿಯಲು ಕಷಾಯ, ರಾತ್ರಿ ಊಟದಲ್ಲಿ ಮೊಸರು ನಿಷಿದ್ಧ ಹಾಗೂ ನಿತ್ಯ ನಸ್ಯ ಪದ್ಧತಿ- ಇವುಗಳು ಶ್ವಾಸಕೋಶವನ್ನು ಬಲಪಡಿಸಿದವು. ೨ ತಿಂಗಳಲ್ಲಿ ಸಮಸ್ಯೆ ಬಹುಮಟ್ಟಿಗೆ ಕಡಿಮೆಯಾಯಿತು. ದೈನಂದಿನ ಸಣ್ಣ ಕ್ರಮಗಳೇ ಮಾಲಿನ್ಯದ ವಿರುದ್ಧದ ದೊಡ್ಡ ರಕ್ಷಣೆಯೆಂಬುದು ಶಶಿಧರರ ಅನುಭವಕ್ಕೆ ಬಂತು.
ಸ್ನೇಹಿತರೇ, ನಗರಗಳು ಅಭಿವೃದ್ಧಿ ಹೊಂದುತ್ತಿದ್ದಂತೆ ಗಾಳಿ, ನೀರು, ಆಹಾರದಲ್ಲೂ ಮಾಲಿನ್ಯ ಹೆಚ್ಚಾಗುತ್ತಿದೆ. ಇಂದು ನಾವು ಉಸಿರಾಡುವ ಗಾಳಿಯ ಗುಣಮಟ್ಟವೇ ನಮ್ಮ ಆರೋಗ್ಯದ ಮುಖ್ಯ ನಿರ್ಧಾರಕವಾಗಿ ಮಾರ್ಪಟ್ಟಿದೆ. ಪಿ.ಎಮ್ ೨.೫, ಪಿ.ಎಮ್ ೧೦, ನೈಟ್ರೋಜನ್ ಆಕ್ಸೈಡ್, ವಾಹನಗಳ ಹೊಗೆ, ಕೈಗಾರಿಕಾ ಅನಿಲಗಳು- ಇವೆಲ್ಲವೂ ನಮ್ಮ ದೇಹವು ಪ್ರತಿದಿನ ಎದುರಿಸುವ ‘ಅದೃಶ್ಯ ವೈರಿಗಳು’.
ಈ ಮಾಲಿನ್ಯವು ದೇಹವನ್ನು ನಿಧಾನವಾಗಿ ರೋಗದ ಗೂಡಾಗಿಸುವ ಸೂಕ್ಷ್ಮ ವಿಷಗಳಂತೆ ಕೆಲಸ ಮಾಡುತ್ತವೆ ಎಂದು ಆಯುರ್ವೇದ ಹೇಳುತ್ತದೆ. ಅದನ್ನು ತಡೆಯಲು ನಮಗಿರುವ ಏಕೈಕ ಮಾರ್ಗ ವೆಂದರೆ- ಪ್ರಕೃತಿಯೊಂದಿಗೆ ಹೊಂದಿಕೊಂಡ ಜೀವನಶೈಲಿ ಮತ್ತು ಉತ್ತಮ ಆಹಾರ ಪದ್ಧತಿಯ ಅನುಸರಣೆ. ಈ ಲೇಖನದಲ್ಲಿ ಮಾಲಿನ್ಯವು ದೇಹಕ್ಕೆ ಮಾಡುವ ಹಾನಿ, ಆಯುರ್ವೇದ ಅದನ್ನು ಹೇಗೆ ವಿವೇಚಿಸುತ್ತದೆ ಹಾಗೂ ದೈನಂದಿನ ಜೀವನದಲ್ಲಿ ಅನುಸರಿಸಬಹುದಾದ ಸುಲಭವಾದ ರಕ್ಷಣೆಗಳ ಬಗ್ಗೆ ನೋಡೋಣ.
ಮಾಲಿನ್ಯ ದೇಹಕ್ಕೆ ಏನು ಮಾಡುತ್ತದೆ?
ಮಾಲಿನ್ಯವು ನಮ್ಮ ದೇಹದ ತ್ರಿದೋಷ ಸಮತೋಲನವನ್ನು ಅಸ್ಥಿರಗೊಳಿಸುವ ಪ್ರಮುಖ ಕಾರಣ ವಾಗಿದೆ. ಗಾಳಿಯ ಮಾಲಿನ್ಯ- ಇದು ವಾತದೋಷವನ್ನು ಪ್ರಚೋದಿಸಿ ಉಸಿರಾಟದ ಮಾರ್ಗಗಳನ್ನು ಒಣಗಿಸುತ್ತದೆ, ಶ್ವಾಸಕೋಶದ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಅದರಿಂದ ಉಸಿರಾಟದ ಅಡಚಣೆ, ಒಣ ಕೆಮ್ಮು, ಗಂಟಲು ನೋವು ಮತ್ತು ದಣಿವು ಕಾಣಬಹುದು.
ಧೂಳು, ಹೊಗೆ, ವಾಹನಗಳ ಅನಿಲಗಳು- ಇವು ಪಿತ್ತದೋಷವನ್ನು ಹೆಚ್ಚಿಸಿ ಕಣ್ಣುಗಳಲ್ಲಿ ಉರಿ, ತಲೆನೋವು, ಚರ್ಮದ ತುರಿಕೆ , ಗಂಧೆಗಳು ಮತ್ತು ಆಲರ್ಜಿಕ್ ಪ್ರತಿಕ್ರಿಯೆಗಳನ್ನು ಉಂಟು ಮಾಡು ತ್ತವೆ.
ಭೂಮಾಲಿನ್ಯ, ರಾಸಾಯನಿಕಗಳು ಹಾಗೂ ತೇವಾಂಶ ಮಿಶ್ರಿತ ಹೊಗೆ- ಇವು ಕಫ ದೋಷವನ್ನು ಅಸಮತೋಲನಗೊಳಿಸಿ ಕಫ ಕಟ್ಟುವಿಕೆ, ಸೈನಸ್ ತೊಂದರೆ, ತಲೆ ಭಾರ, ಮೂಗು ಕಟ್ಟುವಿಕೆ, ಆಲಸ್ಯಕ್ಕೆ ಕಾರಣವಾಗುತ್ತವೆ.
ಇದರೊಂದಿಗೆ, ಮಾಲಿನ್ಯವು ರಕ್ತವನ್ನು ದೂಷಿತಗೊಳಿಸುವ ಕಾರಣ, ಆಯುರ್ವೇದದಲ್ಲಿ ಇದನ್ನು ‘ರಕ್ತದುಷ್ಟಿ’ ಎಂದು ಕರೆಯಲಾಗುತ್ತದೆ. ರಕ್ತದುಷ್ಟಿ ಹೆಚ್ಚಿದಾಗ ಚರ್ಮದ ಅಲರ್ಜಿ, ಮೊಡವೆ, ಉಬ್ಬಸ, ಶ್ವಾಸಕೋಶದ ತೊಂದರೆ, ದಣಿವು, ಕಣ್ಣಿನ ತೊಂದರೆಗಳು ಹೆಚ್ಚಾಗುತ್ತವೆ.
ಮಾಲಿನ್ಯ ಒಂದು ಬಗೆಯ ವಿಷ
ಆಯುರ್ವೇದದಲ್ಲಿ ‘ವಿಷ’ವನ್ನು ೩ ಮುಖ್ಯ ವಿಭಾಗಗಳಲ್ಲಿ ವಿವರಿಸಲಾಗಿದೆ:
೧. ಸ್ಥಾವರ ವಿಷ: ಸಸ್ಯಜನ್ಯ ವಿಷ
೨. ಜಂಗಮ ವಿಷ: ಕೆಲವು ಪ್ರಾಣಿಗಳಿಂದ ಬಂದ ಸಹಜ ವಿಷಗಳು.
೩. ಗರ ವಿಷ: ಕೃತ್ರಿಮ ವಿಷಗಳು, ಕೈಗಾರಿಕಾ ರಾಸಾಯನಿಕಗಳು, ವಾಹನಗಳ ಹೊಗೆ, ಪ್ಲಾಸ್ಟಿಕ್, ಕೃತ್ರಿಮ ಬಣ್ಣ, ಧೂಳು, ದೂಷಿತ ನೀರು ಇತ್ಯಾದಿ.
ಶಾಸಗಳಲ್ಲಿ, ಈ ರೀತಿ ವಿಷಗಳಿಂದ ಪ್ರಕೃತಿಯು ದೂಷಿತವಾದಾಗ ಅದನ್ನು ದುಷ್ಟ ವಾಯು (ದೂಷಿತ ಗಾಳಿ), ದುಷ್ಟಾಂಬು (ದೂಷಿತ ನೀರು), ದೂಷಿತ ಆಹಾರ ಎಂದು ಉಲ್ಲೇಖಿಸಲಾಗಿದೆ. ಈ ರೀತಿಯ ಮಾಲಿನ್ಯಭರಿತ ನೀರು, ಗಾಳಿ ಮತ್ತು ಆಹಾರವನ್ನು ನಾವು ಸೇವಿಸಿದಾಗ ಅಗುವ ದುಷ್ಪರಿ ಣಾಮಗಳು ಹಲವು. ಅವೆಂದರೆ, ದೇಹದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ.
ಶ್ವಾಸಕೋಶದ ಶಕ್ತಿ ಕುಂದುತ್ತದೆ. ರಕ್ತ ಶುದ್ಧತೆ ಹಾಳಾಗುತ್ತದೆ. ಚರ್ಮದ ತೇಜಸ್ಸು ಕುಂದುತ್ತದೆ. ದೇಹದಲ್ಲಿ ಭಾರ ಮತ್ತು ಆಲಸ್ಯ ಹೆಚ್ಚುತ್ತದೆ. ಮಾನಸಿಕ ಕಿರಿಕಿರಿ ಮತ್ತು ಉದ್ವೇಗ ಜಾಸ್ತಿಯಾಗುತ್ತದೆ.
ಇದು ಆಯುರ್ವೇದವು ಹೇಳುವ ‘ವಿಷಸಂಚಯ’- ಪ್ರತಿದಿನ ಸಣ್ಣ ಪ್ರಮಾಣದಲ್ಲಿ ವಿಷವು ದೇಹ ದಲ್ಲಿ ಸೇರುತ್ತಾ, ಕ್ರಮೇಣ ದೇಹದ ಸಾಮರ್ಥ್ಯವನ್ನು ಕುಗ್ಗಿಸುವ ಸ್ಥಿತಿ. ಮಾಲಿನ್ಯದಿಂದ ರಕ್ಷಣೆಗೆ ಸಲಹೆಗಳು
೧. ದೇಹದ ‘ಅಗ್ನಿ’- ನಮ್ಮ ಜೀರ್ಣಶಕ್ತಿ ನಮ್ಮನ್ನು ಬೆಂಬಲಿಸಲಿ . ನಮ್ಮ ಜೀರ್ಣಶಕ್ತಿ ಉತ್ತಮ ವಾಗಿದ್ದರೆ ಅದು ಎಲ್ಲ ರೀತಿಯ ವಿಷವನ್ನು ಭೇದಿಸಿ ದೇಹದಿಂದ ಆಚೆ ಹಾಕುವ ಸಾಮರ್ಥ್ಯ ಹೊಂದಿರುತ್ತದೆ. ಹಾಗಾಗಿ ನಮ್ಮ ಅಗ್ನಿ ಹಾಳಾಗದಂತೆ ಅದನ್ನು ರಕ್ಷಿಸಿಕೊಳ್ಳಬೇಕು.
ನಮ್ಮ ಜೀರ್ಣಶಕ್ತಿಯನ್ನು ಗಮನಿಸಿ ಆಹಾರವನ್ನು ಸೇವಿಸಬೇಕು. ಆಹಾರದ ನಡುವೆ ಪದೇ ಪದೆ ಕಾಫಿ-ಟೀ, ಉಪಾಹಾರಗಳನ್ನು ಸೇವಿಸಬಾರದು. ಮುಂಚೆ ಸೇವಿಸಿದ ಆಹಾರವು ಸಂಪೂರ್ಣವಾಗಿ ಜೀರ್ಣವಾಗುವ ಮೊದಲು ಮತ್ತೊಮ್ಮೆ ಆಹಾರ ಸೇವನೆ ನಿಷಿದ್ಧ.
ರಾತ್ರಿ ಆಹಾರವನ್ನು ಬೇಗ ಸೇವಿಸಿ ಮಲಗುವ ಮುನ್ನ ಕನಿಷ್ಠ ಪಕ್ಷ ೧-೨ ಗಂಟೆಗಳ ಅಂತರವನ್ನು ನೀಡಬೇಕು. ಅತಿಯಾದ ಕರಿದ ಪದಾರ್ಥ, ಬೇಕರಿ ಪದಾರ್ಥ, ಸಿಹಿತಿನಿಸುಗಳನ್ನು ವರ್ಜಿಸಿ ಹೆಚ್ಚಾಗಿ ಹಣ್ಣು ತರಕಾರಿಗಳಿಂದ ಕೂಡಿದ ಆಹಾರವನ್ನು ಸೇವಿಸಿದರೆ, ಅದು ದೇಹವನ್ನು ಶುದ್ಧಗೊಳಿಸು ತ್ತದೆ.
ನೀರಿನ ಸೇವನೆಯನ್ನು ಕ್ರಮವಾಗಿ ಮಾಡತಕ್ಕದ್ದು. ಊಟದ ಜತೆ ಬಿಸಿನೀರನ್ನು ಹೀರುವುದು ಮತ್ತು ಇತರ ಸಮಯದಲ್ಲಿ ಬಾಯಾರಿಕೆಯಾದಾಗ ಮಾತ್ರ ನೀರನ್ನು ಸೇವಿಸುವುದು ಎಂದಿಗೂ ಆರೋಗ್ಯ ಕರ. ನೆನಪಿರಲಿ, ‘ಅಗ್ನಿ’ ಬಲವಾಗಿದ್ದರೆ ಹೊರಗಿನ ವಿಷವು ದೇಹದಲ್ಲಿ ಸಂಚಿತವಾಗುವ ಸಾಧ್ಯತೆ ಕಡಿಮೆ
೨. ನಸ್ಯ- ಮೂಗಿನ ದ್ವಾರದ ರಕ್ಷಣೆ. ವಾಯುಮಾಲಿನ್ಯವು ಮೊದಲಿಗೆ ಹಾನಿ ಮಾಡುವ ಭಾಗವೇ ಮೂಗು. ಆಯುರ್ವೇದದಲ್ಲಿ ಮೂಗನ್ನು ‘ಶಿರಸ್ಸಿನ ದ್ವಾರ’ ಎಂದು ಕರೆಯುತ್ತಾರೆ.
ಪ್ರತಿದಿನ ಬೆಳಿಗ್ಗೆ ಮೂಗಿನ ಹೊಳ್ಳೆಗಳಿಗೆ ೨-೨ ಹನಿ ಬೆಚ್ಚಗಿರುವ ತಿಮಂ ತೈಲ/ಎಳ್ಳೆಣ್ಣೆ ಹಾಕಿದರೆ ಅದು ಹೊಗೆಗಳಿಂದ ರಕ್ಷಣೆ ನೀಡಿ, ಶಿರಸ್ಸಿನ ಪ್ರದೇಶವನ್ನು ರಕ್ಷಿಸುತ್ತದೆ. ಇದು ಕಫವನ್ನು ಕರಗಿಸಿ ಉಸಿರಾಟದ ಮಾರ್ಗವನ್ನು ಶುದ್ಧಗೊಳಿಸುತ್ತದೆ. ನಮ್ಮ ಇಂದ್ರಿಯಗಳಿಗೆ ಪುಷ್ಟಿ ಮತ್ತು ರಕ್ಷಣೆ ಯನ್ನು ನೀಡುತ್ತದೆ. ಇದು ನಗರಗಳಲ್ಲಿ ವಾಸಿಸುವವರಿಗೆ ಅತ್ಯವಶ್ಯಕವಾದ ಉಪಚಾರ.
೩. ಗೃಹದಲ್ಲಿ ವಾತಾವರಣ ಶುದ್ಧೀಕರಣ. ಬೇವು, ಮಾವು, ತುಳಸಿ, ಅಜ್ವೈನ್, ರೋಸ್ಮೆರಿ ಮುಂತಾ ದವು ಗಾಳಿಯನ್ನು ಸಹಜವಾಗಿ ಶುದ್ಧಗೊಳಿಸುತ್ತವೆ. ದೀಪದಲ್ಲಿ ತುಳಸಿ/ಬೇವಿನ ಎಣ್ಣೆ ಹಾಕಿದರೆ ಅದು ಗಾಳಿಯಲ್ಲಿರುವ ಸೂಕ್ಷ್ಮಾಣುಗಳನ್ನು ಕಡಿಮೆ ಮಾಡುತ್ತದೆ. ತುಪ್ಪದ ದೀಪ, ನಿತ್ಯವೂ ಸಂಧ್ಯಾಕಾಲದಲ್ಲಿ ಮಾಡುವ ಧೂಪನವು ಮನೆಯ ವಾತಾವರಣವನ್ನು ಶುದ್ಧಗೊಳಿಸುತ್ತದೆ.
೪. ಅಭ್ಯಂಗ- ದೈನಂದಿನ ಎಣ್ನೆ ಸ್ನಾನ. ನಮಗೆ ತಿಳಿದಿರುವ ಹಾಗೆ ಮಾಲಿನ್ಯವು ಚರ್ಮದ ಮೂಲಕ ವೂ ದೇಹವನ್ನು ಪ್ರವೇಶಿಸುತ್ತದೆ. ಇದರಿಂದ ರಕ್ಷಿಸಿಕೊಳ್ಳುವ ಏಕೈಕ ಮಾರ್ಗವೆಂದರೆ ನಿತ್ಯ ಅಭ್ಯಂಗ. ಖಾಲಿಹೊಟ್ಟೆಯಲ್ಲಿ ಮೈಗೆ ಎಣ್ಣೆ ಸವರಿಕೊಂಡು ಸ್ನಾನ ಮಾಡುವುದು. ಇದರಿಂದ ತ್ವಚೆಯ ಮೇಲೆ ಒಂದು ಜಿಡ್ಡಿನ ರಕ್ಷಾಕವಚ ನಿರ್ಮಾಣವಾಗುತ್ತದೆ.
ಇದು ದೋಷಗಳನ್ನು ಸಮತೋಲನದಲ್ಲಿ ಇಡುತ್ತದೆ, ಬಿಸಿಲು ಮತ್ತು ಹೊಗೆಯಿಂದ ಉಂಟಾಗುವ ಚರ್ಮದ ರೂಕ್ಷತೆಯನ್ನು ಕಡಿಮೆ ಮಾಡುತ್ತದೆ. ಅಭ್ಯಂಗಕ್ಕೆ ಚಳಿಗಾಲದಲ್ಲಿ ಎಳ್ಳೆಣ್ಣೆ, ಬೇಸಗೆಯಲ್ಲಿ ಕೊಬ್ಬರಿ ಎಣ್ಣೆ ಸೂಕ್ತ.
೫. ಹೃದಯ-ಶ್ವಾಸಕೋಶಗಳ ದಕ್ಷತೆ ಹೆಚ್ಚಿಸುವ ಯೋಗಾಭ್ಯಾಸ ಮತ್ತು ಪ್ರಾಣಾಯಾಮ (ಅನು ಲೋಮ-ವಿಲೋಮ, ಭಸಿಕಾ, ಕಪಾಲಭಾತಿ). ನಿತ್ಯವೂ ಬೆಳಗ್ಗೆ ಮಾಡುವ ಹಿತಮಿತವಾದ ವ್ಯಾಯಾ ಮವು ದೇಹದ ಅಗ್ನಿಯನ್ನು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಹೃದಯ ಮತ್ತು ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸಿ ಗಾಳಿಯಿಂದ ಬರುವ ವಿಷದ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.
೬. ತುಪ್ಪವೆಂಬ ವಿಷಹರ. ಆಯುರ್ವೇದವು ಹೇಳುವಂತೆ ತುಪ್ಪವು ವಿಷಹರ ಗುಣವನ್ನು ಹೊಂದಿದೆ. ಆದ್ದರಿಂದ ನಿತ್ಯವೂ ನಮ್ಮ ಆಹಾರದಲ್ಲಿ ಕನಿಷ್ಠಪಕ್ಷ ಒಂದರಿಂದ ಎರಡು ಚಮಚ ತುಪ್ಪವನ್ನು ಸೇವಿಸಿದರೆ ಅದು ಗಾಳಿ, ನೀರು ಮತ್ತು ಆಹಾರದಲ್ಲಿರಬಹುದಾದ ವಿಷವನ್ನು ಸ್ಥಗಿತಗೊಳಿಸಿ, ದೇಹವನ್ನು ಶುದ್ಧೀಕರಿಸಿ, ಹೃದಯವನ್ನು ರಕ್ಷಿಸುತ್ತದೆ. ಆದ್ದರಿಂದ, ತುಪ್ಪದಿಂದ ತಯಾರಿಸಿದ ಆಹಾರ, ತುಪ್ಪದ ಅಭ್ಯಂಗ, ತುಪ್ಪದಿಂದ ನಸ್ಯ. ತುಪ್ಪದಿಂದ ಅಂಜನವನ್ನು ನಿತ್ಯವೂ ಅಭ್ಯಾಸ ಮಾಡಿದರೆ ಎಲ್ಲ ರೀತಿಯ ವಿಷಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು.
೭. ಸ್ಕ್ರೀನ್ ಟೈಮ್ ತಗ್ಗಿಸುವಿಕೆ. ರಾತ್ರಿ ಸಮಯದಲ್ಲಿ ಮೊಬೈಲ್-ಟಿವಿ-ಲ್ಯಾಪ್‌ಟಾಪ್‌ಗಳ ಅತಿಬಳಕೆ ಯಿಂದ ದೇಹದ ಪಿತ್ತ ಮತ್ತು ವಾತದೋಷಗಳು ಹೆಚ್ಚುತ್ತವೆ. ಕಾರಣ, ಸ್ಕ್ರೀನ್‌ನ ನೀಲಿ ಬೆಳಕು ಕಣ್ಣು, ಮಿದುಳು ಮತ್ತು ನರಮಂಡಲದ ವ್ಯವಸ್ಥೆಯನ್ನು ಅತಿಯಾಗಿ ಉದ್ರಿಕ್ತಗೊಳಿಸುತ್ತದೆ.
ಇದರಿಂದ ನಿದ್ರೆಯ ಗುಣಮಟ್ಟ ಕುಗ್ಗುತ್ತದೆ, ದೇಹದಲ್ಲಿ ಪಿತ್ತ ಹೆಚ್ಚಳ (ತಲೆ ಬಿಸಿ, ಕಣ್ಣಿನ ಉರಿ, ಒತ್ತಡ), ವಾತವೃದ್ಧಿ (ಅಶಾಂತಿ, ಚಿಂತೆ, ನಿದ್ರೆ ಬರದಿರುವುದು) ಆಗುತ್ತದೆ, ಉಸಿರಾಟದ ಲಯವೂ ಅಸ್ಥಿರಗೊಳ್ಳಬಹುದು. ನಿದ್ರೆ ಹದಗೆಟ್ಟಾಗ ದೇಹದ ರೋಗನಿರೋಧಕ ಶಕ್ತಿ ಕುಂದುತ್ತದೆ. ಈ ಸ್ಥಿತಿಯಲ್ಲಿ ಮಾಲಿನ್ಯದ ದುಷ್ಪರಿಣಾಮವನ್ನು ಎದುರಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ.
೮. ಆಹಾರದಲ್ಲಿ ಆಂಟಿ-ಆಕ್ಸಿಡೆಂಟ್‌ಗಳು. ಮಾಲಿನ್ಯದಿಂದ ದೇಹದಲ್ಲಿ ಹೆಚ್ಚಾಗುವ ಆಕ್ಸಿಡೇಟಿವ್ ಸ್ಟ್ರೆಸ್ ಅನ್ನು ತಗ್ಗಿಸಲು, ರಕ್ತವನ್ನು ಶುದ್ಧೀಕರಿಸಿ ದೇಹಕ್ಕೆ ತೇಜಸ್ಸು ನೀಡುವಂಥ ಆಹಾರಗಳನ್ನು ಸೇವಿಸಸುವುದು ಅಗತ್ಯ.
ನಿಂಬೆ, ಆಮ್ಲಾ, ಪಪ್ಪಾಯಿ- ದೇಹದ ವಿಷಪದಾರ್ಥಗಳನ್ನು ಹೊರಹಾಕಿ ರಕ್ತಕ್ಕೆ ಶಕ್ತಿ ನೀಡುವುವು.
ಬೆಲ್ಲ, ತುಪ್ಪ- ಪಾಚಕಾಗ್ನಿಯನ್ನು ಬಲಪಡಿಸಿ ದೇಹವನ್ನು ಪೋಷಿಸುತ್ತವೆ.
ಅರಿಶಿನ, ಕಾಳುಮೆಣಸು- ಪ್ರತಿದಿನದ ಸೂಕ್ಷ್ಮ ವಿಷಗಳನ್ನು ಕರಗಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ತುಳಸಿ, ಗುಡೂಚಿ (ಅಮೃತಬಳ್ಳಿ)- ಕಫ ಪಿತ್ತಗಳನ್ನು ಶಮನ ಮಾಡಿ ಶ್ವಾಸಕೋಶವನ್ನು ಬಲಪಡಿಸುತ್ತವೆ.
ದ್ರಾಕ್ಷಿ, ದಾಳಿಂಬೆ- ರಕ್ತಪೋಷಣೆ, ಜೀರ್ಣಶಕ್ತಿ ಮತ್ತು ಚರ್ಮದ ಕಾಂತಿಗೆ ಅತ್ಯುತ್ತಮ.
ಪರಿಸರ ಮಾಲಿನ್ಯವು ನಮ್ಮ ಕೈಯಲ್ಲಿರುವ ಸಮಸ್ಯೆಯಲ್ಲ, ಆದರೆ ದೇಹವನ್ನು ಅದರ ವಿರುದ್ಧ ಬಲಪಡಿಸುವುದು ನಮ್ಮ ಕೈಯಲ್ಲಿರುವ ಅತ್ಯಂತ ದೊಡ್ಡ ಜವಾಬ್ದಾರಿ. ಆಯುರ್ವೇದವು ಹೇಳುವಂತೆ, ದೋಷಗಳ ಸಮತೋಲನ, ಶುದ್ಧ ಜೀರ್ಣಾಗ್ನಿ ಮತ್ತು ನಿತ್ಯದ ಸರಳ ಆಚರಣೆಗಳು ದೇಹವನ್ನು ಯಾವುದೇ ಬಾಹ್ಯದೂಷಣೆಯ ಪ್ರಭಾವದಿಂದ ರಕ್ಷಿಸಬಲ್ಲವು.
ನಿತ್ಯ ನಸ್ಯ, ಅಭ್ಯಂಗ, ಉಷ್ಣಜಲ, ಸೂಕ್ತ ಆಹಾರ, ಉತ್ತಮ ನಿದ್ರೆ- ಇವೆಲ್ಲವೂ ನಮಗೆ ವರವಾಗಬಲ್ಲ ದೇಹದ ರಕ್ಷಾಕವಚಗಳು. ಸ್ವಸ್ಥರಾಗಲು ಇದಕ್ಕಿಂತ ಸರಳ ಮಾರ್ಗವನ್ನು ಬೇರೆಲ್ಲಾದರೂ ಕೇಳಿದ್ದೀರಾ?