ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

M J Akbar Column: ಬಡತನದ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ಸಾರಿದ್ದ ಯುದ್ಧ...

ಭಾಷಣಗಳು ಪ್ರಜಾಪ್ರಭುತ್ವದಲ್ಲಿ ಸರ್ವೇಸಾಮಾನ್ಯ. ಆದರೆ ಜನರಿಗೆ ನೆನಪಿನ ಶಕ್ತಿ ಕಡಿಮೆ. ನಿಜ ಹೇಳಬೇಕೆಂದರೆ, ಸ್ವಾತಂತ್ರ್ಯೋತ್ಸವದ ದಿನ ಪ್ರಧಾನ ಮಂತ್ರಿಗಳು ಮಾಡುವಂಥ ಅತ್ಯಂತ ಪ್ರಮುಖ ವಾದ ಸಾರ್ವಜನಿಕ ಭಾಷಣವನ್ನೂ ಕೂಡ ಜನರು ಬಹಳ ಬೇಗ ಮರೆತುಬಿಡುತ್ತಾರೆ. ಆದರೆ, ಮೋದಿಯವರ ಭಾಷಣಗಳನ್ನು ಅಷ್ಟು ಸುಲಭಕ್ಕೆ ಮರೆಯಲಾಗದು.

ಬಡತನದ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ಸಾರಿದ್ದ ಯುದ್ಧ...

-

Ashok Nayak Ashok Nayak Sep 15, 2025 8:12 AM

ಅಕ್ಬರ್‌ ನಾಮಾ

ಎಂ.ಜೆ.ಅಕ್ಬರ್

ಮೋದಿಯವರು ಬಡವರ ಸಬಲೀಕರಣಕ್ಕೆ ಕೈಗೊಂಡ ಅತ್ಯಂತ ವಿಶಿಷ್ಟ ಉಪಕ್ರಮವೆಂದರೆ ಡಿಜಿಟಲ್ ಕ್ರಾಂತಿ. ಅಲ್ಲಿಯವರೆಗೂ ತಂತ್ರಜ್ಞಾನವೆಂಬುದು ಮಧ್ಯಮ ವರ್ಗದ ಸ್ವತ್ತಾಗಿತ್ತು. ಆ ನಂಬಿಕೆ ಬದಲಾಯಿತು. ಬಡವರ ಕೈಗೂಡಿ ಡಿಜಿಟಲೀಕರಣದ ಲಾಭ ವರ್ಗಾವಣೆ ಯಾಯಿತು. ಭಾರತೀಯ ಮಾರುಕಟ್ಟೆ ಕೂಡ ವೈಯಕ್ತಿಕ ತಂತ್ರಜ್ಞಾನವನ್ನು ಕೈಗೆಟಕುವ ದರದಲ್ಲೇ ಇರಿಸಿತು. ಭಾರತವೀಗ ಆತ್ಮವಿಶ್ವಾಸದಿಂದ ಹೀಗೆ ಹೇಳಬಹುದು: ‘ಬಡವರು ಬೇರೆ ದೇಶದವರಲ್ಲ!’

ಮಗು ಎಂಬುದು ಮನುಷ್ಯನ ತಂದೆ! ಈ ಮಾತು ಕವಿಗೊಂದು ಉಪಮೆಯಾಗಿ ಕಾಣಿಸಬಹುದು. ಆದರೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಇದೊಂದು ವಾಸ್ತವ. ಮೋದಿ ಹುಟ್ಟಿದ್ದು ಬಡ ಕುಟುಂಬದಲ್ಲಿ. ಬ್ರಿಟಿಷರು ಭಾರತದ ಸಂಪತ್ತನ್ನೆಲ್ಲಾ ಲೂಟಿ ಹೊಡೆದು, ಈ ದೇಶದ ಸಂಪ ನ್ಮೂಲಗಳನ್ನು ಹಿಂಡಿ ಹಿಪ್ಪೆ ಮಾಡಿ, ದೇಶದ ಆರ್ಥಿಕತೆಯನ್ನು ಅಡ್ಡಡ್ಡ ಮಲಗಿಸಿ, ಜನರನ್ನು ಬಡತನದ ಕೂಪಕ್ಕೆ ತಳ್ಳಿ, ಕೊನೆಗೆ ಎಲ್ಲಾ ಮುಗಿದ ಮೇಲೆ ದೇಶವನ್ನು ನಡುನೀರಿನಲ್ಲಿ ತೊರೆದು ಹೋದ ಸಂದರ್ಭದಲ್ಲೇ ಜನಿಸಿದವರು ಮೋದಿ.

ಬಂಗಾಳದ ಬರಗಾಲದಲ್ಲಿ ಲಕ್ಷಾಂತರ ಜನರು ಸತ್ತ ನೆನಪು ದೇಶಕ್ಕಿತ್ತು. ಅದನ್ನು ಕಣ್ಣಾರೆ ಕಂಡ ಜನರು ಆಗಿನ್ನೂ ಬಡತನದ ಭೀತಿಯಿಂದ ಹೊರಗೆ ಬಂದಿರಲಿಲ್ಲ. ದೇಶದ ಬಡವರು ಮೂಳೆಯ ಹಂದರವಾಗಿ ಜೀವ ಹಿಡಿದುಕೊಂಡಿದ್ದರು. ಅವರಿಗೆ ಆಡಳಿತ ವ್ಯವಸ್ಥೆಯ ಬಗ್ಗೆ ಆಕ್ರೋಶವಿತ್ತು.

ಅದನ್ನೆಲ್ಲ ಬಡ ಹುಡುಗ ಮೋದಿ ನೋಡಿದ್ದರು. ಈಗ ಅವರ ಸರಕಾರದ ಮೂಲ ಉದ್ದೇಶವೇ ಬಡತನದಿಂದ ದೇಶಕ್ಕೆ ಮುಕ್ತಿ ಕೊಡಿಸುವುದಾಗಿದೆ. ಪೂರ್ವಗ್ರಹಗಳನ್ನು ಬದಿಗಿಟ್ಟು ಕೇಳಿಸಿ ಕೊಳ್ಳಲು ತಯಾರಿರುವವರಿಗೆ ಸಾಕಷ್ಟು ಸಾಕ್ಷ್ಯಗಳು ಸಿಗುತ್ತವೆ. ದೆಹಲಿಯ ಕೆಂಪುಕೋಟೆಯ ಮೇಲಿನಿಂದ ಅವರು 2014ರಲ್ಲಿ ಮಾಡಿದ ಮೊದಲ ಭಾಷಣವನ್ನು ಇನ್ನೊಮ್ಮೆ ಕೇಳಿಸಿಕೊಂಡರೆ ಅವರ ಉದ್ದೇಶವೇನಾಗಿತ್ತು ಎಂಬುದು ಪುನಃ ನೆನಪಾದೀತು.

ಭಾಷಣಗಳು ಪ್ರಜಾಪ್ರಭುತ್ವದಲ್ಲಿ ಸರ್ವೇಸಾಮಾನ್ಯ. ಆದರೆ ಜನರಿಗೆ ನೆನಪಿನ ಶಕ್ತಿ ಕಡಿಮೆ. ನಿಜ ಹೇಳಬೇಕೆಂದರೆ, ಸ್ವಾತಂತ್ರ್ಯೋತ್ಸವದ ದಿನ ಪ್ರಧಾನ ಮಂತ್ರಿಗಳು ಮಾಡುವಂಥ ಅತ್ಯಂತ ಪ್ರಮುಖ ವಾದ ಸಾರ್ವಜನಿಕ ಭಾಷಣವನ್ನೂ ಕೂಡ ಜನರು ಬಹಳ ಬೇಗ ಮರೆತುಬಿಡುತ್ತಾರೆ. ಆದರೆ, ಮೋದಿಯವರ ಭಾಷಣಗಳನ್ನು ಅಷ್ಟು ಸುಲಭಕ್ಕೆ ಮರೆಯಲಾಗದು.

2014ರ ಆಗಸ್ಟ್ 15ರಂದು ಪ್ರಧಾನಿ ಮೋದಿ ಕೆಂಪುಕೋಟೆಯ ಮೇಲಿನಿಂದ ಮಾಡಿದ ಮೊದಲ ಭಾಷಣವು ಮೊಟ್ಟಮೊದಲ ಬಾರಿಗೆ ಅಧಿಕಾರಿಗಳು ಬರೆದು ಕೊಡುವ ಪ್ರಧಾನಿಯ ಸ್ವಾತಂತ್ರ್ಯೋ ತ್ಸವದ ನೀರಸ ಭಾಷಣದಂತೆ ಇರಲಿಲ್ಲ. ಅದು ಪ್ರಚಂಡವಾಗ್ಮಿಯೊಬ್ಬನ ಅದ್ಭುತ ಭಾಷಣ ವಾಗಿತ್ತು.

ಇದನ್ನೂ ಓದಿ: M J Akbar Column: ಅಮೆರಿಕವನ್ನು ದುರ್ಬಲಗೊಳಿಸುತ್ತಿರುವ ಸುಳ್ಳಿನ ದೇವರು

ಅದರಲ್ಲಿ ಅವರು ತಮ್ಮ ಕಲ್ಪನೆಯ ಉತ್ತಮ ಆಡಳಿತ ಎಂದರೇನೆಂಬುದನ್ನು ಜನರ ಮುಂದೆ ತೆರೆದಿಟ್ಟಿದ್ದರು. ತಮ್ಮ ಕನಸಿನ ಭಾರತ ಹೇಗಿರಬೇಕು ಎಂಬುದನ್ನು ತಿಳಿಸಿದರು. ಸಾಂಪ್ರದಾಯಿಕ ಸಿದ್ಧ ಸೂತ್ರಗಳನ್ನು ಬದಿಗೊತ್ತಿದ ಅವರು, ಬಡತನ ಹಾಗೂ ಹಸಿವಿನ ನಾನಾ ಮುಖಗಳನ್ನೂ, ತಾವು ಅನುಭವಿಸಿದ ಕಷ್ಟಕೋಟಲೆಗಳನ್ನೂ ನಿರ್ಭಿಡೆಯಿಂದ ತಮ್ಮ ಭಾಷಣದಲ್ಲಿ ಬಿಚ್ಚಿಟ್ಟರು.

ದೇಶದ ಅಮ್ಮಂದಿರು, ಚಿಕ್ಕಮ್ಮಂದಿರು, ದೊಡ್ಡಮ್ಮಂದಿರು ತಮ್ಮ ಮನೆಯಲ್ಲಿ ಸರಿಯಾದ ಶೌಚಾ ಲಯದ ವ್ಯವಸ್ಥೆಯಿಲ್ಲದೆ ಸೂರ್ಯಾಸ್ತವಾಗುವುದನ್ನೇ ಕಾಯುತ್ತಾ, ಅಲ್ಲಿಯವರೆಗೂ ದೇಹದೊ ಳಗೆ ವಿಷಕಾರಿ ಪದಾರ್ಥಗಳನ್ನು ಹೇಗೆ ಅನಿವಾರ್ಯವಾಗಿ ಉಳಿಸಿಕೊಂಡು ಅನಾರೋಗ್ಯ ಕ್ಕೆ ತುತ್ತಾಗುತ್ತಿದ್ದಾರೆ ಎಂಬುದನ್ನು ಹೇಳಿದರು.

ಸಹಜವೆಂದು ಎಲ್ಲರೂ ಸ್ವೀಕರಿಸಿದ ಬದುಕಿನಲ್ಲೇ ಎಷ್ಟೊಂದು ದೌರ್ಜನ್ಯಗಳು ಅಡಗಿವೆ ಎಂಬು ದನ್ನು ಅವರು ತಿಳಿಸಿದರು. ಆ ಭಾಷಣ ಇಂಟರ್ನೆಟ್‌ನಲ್ಲಿ ಸುಲಭವಾಗಿ ಸಿಗುತ್ತದೆ. ಎಲ್ಲರೂ ಅದನ್ನು ಕೇಳಬೇಕು. ನಂತರ ಆ ಭಾಷಣವನ್ನು ಮೋದಿ ಮರೆಯಲಿಲ್ಲ. ತಕ್ಷಣವೇ ದೇಶದಲ್ಲಿ ಕೆಲಸಗಳು ಆರಂಭವಾದವು. ಸರಕಾರದ ಆದ್ಯತೆಗಳಲ್ಲಿ ನಾಟಕೀಯ ಬದಲಾವಣೆಗಳಾದವು. ಅವು ಬಡವರು, ಅದರಲ್ಲೂ ವಿಶೇಷವಾಗಿ ಮಹಿಳೆಯರ ಬದುಕಿನಲ್ಲಿ ಆಮೂಲಾಗ್ರ ಬದಲಾವಣೆ ಉಂಟುಮಾಡಿದವು.

ಬಡವರ ಬದುಕನ್ನು ಸುಧಾರಣೆ ಮಾಡುವುದು ಕೇಂದ್ರ ಸರಕಾರದ ರಾಷ್ಟ್ರೀಯ ಮಿಷನ್ ಆಯಿತು. ದೇಶದಲ್ಲಿ ಸಾಕಷ್ಟು ಮನೆಗಳಲ್ಲಿ ಟಾಯ್ಲೆಟ್ ಇರಲಿಲ್ಲ ಎಂಬುದು ಗುಟ್ಟೇನೂ ಆಗಿರಲಿಲ್ಲ. ಆದರೆ ಆವರೆಗಿನ ಯಾವ ಸರಕಾರವೂ ಶೌಚಾಲಯ ನಿರ್ಮಾಣವನ್ನು ಕಡ್ಡಾಯವಾದ ಆದ್ಯತೆ ಎಂಬಂತೆ ಪರಿಗಣಿಸಿರಲಿಲ್ಲ. ಏಕೆಂದರೆ ಮನೆಯಲ್ಲಿ ಟಾಯ್ಲೆಟ್ ಇರುವ ಆಗರ್ಭ ಶ್ರೀಮಂತರ ಕೈಯಲ್ಲೇ ಸರಕಾರವಿತ್ತು!

modi

ಆದರೆ, ಮೋದಿಯವರು ಭಾಷಣದಲ್ಲಿ ಹೇಳಿದ ನೈರ್ಮಲ್ಯ, ವಿದ್ಯುತ್, ಆರೋಗ್ಯ ವಿಮೆ, ಬ್ಯಾಂಕ್ ಖಾತೆ, ಅಡಮಾನವಿಲ್ಲದೆ ಸುಲಭವಾದ ಬ್ಯಾಂಕ್ ಸಾಲ- ಇವೆಲ್ಲ ಸರಕಾರದ ಕಡತಕ್ಕೆ ಹೋಗಿ ಅಡಗುವ ಭರವಸೆಗಳಷ್ಟೇ ಆಗಲಿಲ್ಲ. ಅವು ಎಲ್ಲರನ್ನೂ ಒಳಗೊಳ್ಳುವ ಭಾರತದ ಚಿಹ್ನೆಯಾಗಿ ಹೊರಹೊಮ್ಮಿದವು. ಬ್ಯಾಂಕ್‌ನೊಳಗೆ ಕಾಲೇ ಇಟ್ಟಿರದ ಲಕ್ಷಾಂತರ ಬಡವರಿಗೆ ಬ್ಯಾಂಕ್ ಖಾತೆ ಗಳನ್ನು ಮಾಡಿಸುತ್ತೇವೆ ಎಂದು 2014ರ ಆಗಸ್ಟ್ 15ರಂದು ಮೋದಿ ಘೋಷಿಸಿದಾಗ ಪ್ರತಿಪಕ್ಷಗಳು ನಕ್ಕಿದ್ದವು.

ಆದರೆ ನಂತರ ನಡೆದಿದ್ದು ‘ಜನಧನ್ ಯೋಜನೆ’ ಎಂಬ ಕ್ರಾಂತಿ ಮತ್ತು ಪವಾಡ. ಯೋಜನೆ ಜಾರಿ ಗೊಂಡ ದಿನವೇ 1.5 ಕೋಟಿ ಬ್ಯಾಂಕ್ ಖಾತೆಗಳು ತೆರೆಯಲ್ಪಟ್ಟವು. ಮೋದಿಯವರ ಮೊದಲ ಅವಧಿ ಮುಗಿಯುವ ಹೊತ್ತಿಗೆ ಈ ಸಂಖ್ಯೆ 30 ಕೋಟಿಗೆ ಏರಿಕೆಯಾಗಿತ್ತು. ಮೋದಿಯವರು ಬಡವರ ಸಬಲೀ ಕರಣಕ್ಕೆ ಕೈಗೊಂಡ ಅತ್ಯಂತ ವಿಶಿಷ್ಟ ಉಪಕ್ರಮವೆಂದರೆ ಡಿಜಿಟಲ್ ಕ್ರಾಂತಿ.

ಅಲ್ಲಿಯವರೆಗೂ ತಂತ್ರಜ್ಞಾನವೆಂಬುದು ಮಧ್ಯಮ ವರ್ಗದ ಸ್ವತ್ತಾಗಿತ್ತು. ಆ ನಂಬಿಕೆ ಬದಲಾಯಿ ತು. ಬಡವರ ಕೈಗೂ ಡಿಜಿಟಲೀಕರಣದ ಲಾಭ ವರ್ಗಾವಣೆಯಾಯಿತು. ಭಾರತೀಯ ಮಾರುಕಟ್ಟೆ ಕೂಡ ವೈಯಕ್ತಿಕ ತಂತ್ರಜ್ಞಾನವನ್ನು ಕೈಗೆಟಕುವ ದರದಲ್ಲೇ ಇರಿಸಿತು.

ಅಂಕಿಸಂಖ್ಯೆಗಳು ಅರ್ಥಶಾಸ್ತ್ರಜ್ಞರ ಆಡುಂಬೊಲ. ಆದರೆ ಅವು ಅನೇಕ ಸಲ ಬೇರೆ ಬೇರೆ ರೀತಿಯ ಕತೆಗಳನ್ನು ಹೇಳುತ್ತವೆ. 1750ರ ದಶಕದಲ್ಲಿ ವಸಾಹತುಶಾಹಿ ಬ್ರಿಟಿಷರು ಬಂಗಾಳವನ್ನು ನಿಯಂ ತ್ರಣಕ್ಕೆ ತೆಗೆದುಕೊಂಡು ದೇಶಾದ್ಯಂತ ತಮ್ಮ ರೆಕ್ಕೆಯನ್ನು ಬಿಚ್ಚುವುದಕ್ಕೂ ಮೊದಲು ಭಾರತದಲ್ಲಿ ಜಗತ್ತಿನ ಶೇ.30ರಷ್ಟು ವ್ಯಾಪಾರ ನಡೆಯುತ್ತಿತ್ತು. ಚೀನಾದ ಪಾಲು ಇನ್ನೂ ಸ್ವಲ್ಪ ಜಾಸ್ತಿಯಿತ್ತು. ಆದರೆ ಬ್ರಿಟನ್ನಿನ ಪಾಲು ಶೇ.2ರಷ್ಟಿತ್ತು.

1947ರ ಹೊತ್ತಿಗೆ ಈ ಅಂಕಿ-ಅಂಶಗಳು ಉಲ್ಟಾಪಲ್ಟಾ ಆಗಿದ್ದವು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಶೇ.70ರಷ್ಟು ಭಾರತೀಯರು, ಅಂದರೆ 25 ಕೋಟಿ ಜನರು, ಬಡತನದ ರೇಖೆಗಿಂತ ಕೆಳಗಿದ್ದರು. ರಂಗರಾಜನ್ ಸಮಿತಿಯ ಅಂದಾಜಿನ ಪ್ರಕಾರ 2014ರ ವೇಳೆಗೆ ಭಾರತದಲ್ಲಿ ಶೇ.38.2ರಷ್ಟು ಜನರು, ಅಂದರೆ ಸುಮಾರು 45 ಕೋಟಿ ಜನರು ಬಡತನದ ರೇಖೆಗಿಂತ ಕೆಳಗಿದ್ದರು. ಇವುಗಳನ್ನು ನೀವು ಅರ್ಥಶಾಸ್ತ್ರಜ್ಞನ ಕಣ್ಣಿನಿಂದ ನೋಡದೆ ಒಬ್ಬ ಮಾನವತಾವಾದಿಯ ಕಣ್ಣಿನಿಂದ ನೋಡಿದರೆ 2014ರ ವೇಳೆಗೆ ಇನ್ನೂ 20 ಕೋಟಿಯಷ್ಟು ಹೆಚ್ಚು ಜನರು ಕಡುಬಡತನದಲ್ಲೇ ಇದ್ದರು.

1947 ಹಾಗೂ ಮೋದಿ ಪ್ರಧಾನಿಯಾದ ಸಮಯಕ್ಕೂ ನಡುವೆ ಇದ್ದ ವ್ಯತ್ಯಾಸವಿದು. ಕೆಲ ದಿನಗಳ ಹಿಂದಷ್ಟೇ ವಿಶ್ವಬ್ಯಾಂಕ್ ಇತ್ತೀಚಿನ ಅಂಕಿ-ಅಂಶಗಳನ್ನು ನೀಡಿದೆ. 2023ರ ವೇಳೆಗೆ ಬಡತನದ ರೇಖೆ ಗಿಂತ ಕೆಳಗಿದ್ದ ಭಾರತೀಯರ ಸಂಖ್ಯೆ ಶೇ.2.8ಕ್ಕೆ ಕುಸಿದಿದೆ. ಬಿಪಿಎಲ್ ಮಾನದಂಡವನ್ನು ಬದಲಿಸಿ, ದಿನಕ್ಕೆ 2.15 ಡಾಲರ್ ಬದಲು 3 ಡಾಲರ್ ಗಳಿಸುವವರು ಮಾತ್ರ ಕಡುಬಡವರು ಎಂದು ಮಾನ ದಂಡವನ್ನು ಪರಿಷ್ಕರಣೆ ಮಾಡಿದ ಮೇಲೂ ಭಾರತದಲ್ಲಿನ ಕಡುಬಡವರ ಸಂಖ್ಯೆ ಈ ಪ್ರಮಾಣಕ್ಕೆ ಕುಸಿದಿದೆ.

ಅದು ಹಾಗಿರಲಿ, ಕೋವಿಡ್‌ನ ಹೊಡೆತ ತಿಂದ ಮೇಲೂ ಭಾರತದ ಬಡತನದ ಪ್ರಮಾಣ ಇಷ್ಟು ಕುಸಿದಿದೆ ಎಂಬುದು ಎಲ್ಲರನ್ನೂ ಅಚ್ಚರಿಗೆ ನೂಕಿತ್ತು. ಪ್ರಜಾಪ್ರಭುತ್ವ ಬಹಳ ಸರಳವಾದ ಪ್ರಶ್ನೆ ಗಳನ್ನು ಕೇಳುತ್ತದೆ: ಈಗ ಯಾವುದಾದರೂ ಮಗು ಹಸಿದ ಹೊಟ್ಟೆಯಲ್ಲಿ ಮಲಗುತ್ತಿದೆಯಾ? ತಾಯಂದಿರು ಇಂದು ಒತ್ತಡದ ಜತೆಗೆ ಹೋರಾಡುತ್ತಿದ್ದಾರಾ? ದಿನಗೂಲಿಯ ಅಪ್ಪಂದಿರು 2020ರ ಭಾರತದಲ್ಲೂ ತಮ್ಮ ಮನೆಯವರಿಗೆ ಹೊಟ್ಟೆ ತುಂಬಾ ಊಟ ಹಾಕಲು ಪರದಾಡುತ್ತಿದ್ದಾರಾ? ಇವುಗಳಿಗೆ ಉತ್ತರ ‘ಇಲ್ಲ’. ಮೋದಿಯವರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಈ ದೇಶದ ಪ್ರತಿಯೊಬ್ಬರಿಗೂ ಪರಮೋಚ್ಚ ಭದ್ರತೆಯೊಂದನ್ನು ಒದಗಿಸಿದೆ.

ಅದು ಆಹಾರ ಭದ್ರತೆ. ದೇಶದ 80 ಕೋಟಿ ಜನರು ಪ್ರತಿ ತಿಂಗಳು ಐದು ಕೆ.ಜಿ. ಗೋಧಿ ಅಥವಾ ಅಕ್ಕಿ ಮತ್ತು ತಮ್ಮಿಷ್ಟದ ಒಂದು ಕೆ.ಜಿ. ಬೇಳೆಕಾಳುಗಳನ್ನು ಪಡೆಯುತ್ತಾರೆ. ಇದು ಜಾಗತಿಕ ಇತಿಹಾಸ ದಲ್ಲೇ ಅತಿ ದೊಡ್ಡ ಸಾಮಾಜಿಕ ಕಲ್ಯಾಣ ಯೋಜನೆ. ಮೋದಿಯವರ ಪಾಲಿಗೆ ಇದು ಜನರ ಮೂಲಭೂತ ಹಕ್ಕು. ನಮ್ಮ ದೇಶದಲ್ಲಿ ಆಗಿಹೋದ ಪ್ರತಿಯೊಬ್ಬ ಪ್ರಧಾನಿಯೂ ಬಡತನವನ್ನು ಕಡಿಮೆ ಮಾಡಬೇಕು ಎಂದು ಬಯಸಿದ್ದರು.

ಆದರೆ ಎಲ್ಲರೂ ಈ ಜವಾಬ್ದಾರಿಯನ್ನು ಸರಕಾರವೆಂಬ ಬೃಹತ್ ವ್ಯವಸ್ಥೆಯ ಕೈಗೆ ನೀಡಿ ಕುಳಿತು ಕೊಂಡಿದ್ದರು. ಆ ಸರಕಾರಿ ವ್ಯವಸ್ಥೆಯು ದೇಶದ ಸಮಗ್ರ ಆರ್ಥಿಕ ಅಭಿವೃದ್ಧಿಯ ಅಲ್ಗಾರಿದಂ ಅನ್ನು ನೆಚ್ಚಿಕೊಂಡು ಕುಳಿತಿತ್ತು. ಹೀಗಾಗಿ ಬಡತನದ ಪ್ರಮಾಣ ಕಡಿಮೆ ಮಾಡುವ ಕನಸು ನನಸಾಗಿರಲೇ ಇಲ್ಲ. ಆದರೂ ದೇಶದಲ್ಲಿ ಬಡತನ ನಿರ್ಮೂಲನೆಯಾಗಿದೆ ಎಂದು ಪತ್ರಿಕಾಗೋಷ್ಠಿ ಗಳಲ್ಲಿ ಬಡಾಯಿ ಕೊಚ್ಚಿಕೊಂಡು, ‘ಟ್ರಿಕಲ್ ಡೌನ್ ಥಿಯರಿ’ ಎಂದೆಲ್ಲಾ ನಾಯಕರು ಮಾತನಾಡು ತ್ತಿದ್ದರು.

ಮಜಾ ಏನು ಅಂದರೆ, ಅವರಿಗೆ ಟ್ರಿಕಲ್ ಪದದ ಅರ್ಥವೇ ಗೊತ್ತಿರಲಿಲ್ಲ. ಒಂದರ್ಥದಲ್ಲಿ ಅವರ ಟ್ರಿಕಲ್ ಡೌನ್ ಥಿಯರಿ ನಿಜವಾಗಿತ್ತು ಅನ್ನಿ. ಅದು ಹೇಗೆ? ಶ್ರೀಮಂತರಿಗೆ ನದಿ ಸಿಕ್ಕರೆ, ಮಧ್ಯಮ ವರ್ಗದವರಿಗೆ ತೊರೆ, ಬಡವರಿಗೆ ಹನಿಯೇ (ಟ್ರಿಕಲ್) ಸಿಗುತ್ತಿತ್ತು! ಯಾರೂ ಇದನ್ನು ಬಿಡಿಸಿ ಹೇಳಲು ಹೋಗಲಿಲ್ಲ. ಆದರೆ, ಒಳಗುಟ್ಟು ಏನೆಂದರೆ, ಯಾರಿಗೆ ಎಷ್ಟು ಯೋಗ್ಯತೆಯಿದೆಯೋ ಅಷ್ಟು ಸಿಗುತ್ತದೆ ಬಿಡು ಎಂದು ಎಲ್ಲರೂ ಸುಮ್ಮನಿದ್ದರು.

ಬಡವರು ಅವರಲ್ಲಿರುವ ಅಜ್ಞಾನ ಹಾಗೂ ಮೂರ್ಖತನದಿಂದಾಗಿ ಬಡವರಾಗಿ ಇರುವುದಕ್ಕೇ ಲಾಯಕ್ಕು ಎಂಬುದು ಬಾಟಮ್ ಲೈನ್ ಆಗಿತ್ತು. ಅವರ ಅಸ್ತಿತ್ವ ಅವರ ಬದುಕಿನ ಗುಣಮಟ್ಟದ ಆಧಾರದಲ್ಲಿ ನಿರ್ಧಾರವಾಗುವುದರ ಬದಲು ವರ್ಷದಿಂದ ವರ್ಷಕ್ಕೆ ಆದಾಯದಲ್ಲಿ ಆಗಬಹುದಾದ ಯಃಕಶ್ಚಿತ್ ಏರಿಕೆಯಿಂದ ಆಗುತ್ತಿತ್ತು. ಜನರು ಹಿಂದೆ ಇದ್ದುದಕ್ಕಿಂತ ಈಗ ಸ್ವಲ್ಪ ಚೆನ್ನಾಗಿದ್ದಾರೆ ಅಂದರೆ ಎಲ್ಲವೂ ಸುಭಿಕ್ಷವಾಗಿದೆ ಎಂದು ಹೇಳಿಬಿಡುತ್ತಿದ್ದರು.

2014ರವರೆಗೂ ದೇಶದಲ್ಲಿ ಲಕ್ಷಾಂತರ ಮಹಿಳೆಯರಿಗೆ ಸರಿಯಾದ ನೈರ್ಮಲ್ಯ ವ್ಯವಸ್ಥೆ ಇರಲಿಲ್ಲ. ಅದಕ್ಕಾಗಿ ದೇಶದ ಯಾವ ಅಧಿಕಾರಸ್ಥ ಶ್ರೀಮಂತರೂ ನಿದ್ದೆಗೆಟ್ಟು ಯೋಚಿಸಿರಲಿಲ್ಲ. ಅರ್ಧ ಬ್ರೆಡ್ ಕೊಟ್ಟು ಎಲ್ಲರನ್ನೂ ಸಮಾಧಾನಪಡಿಸುವ ಕಾರ್ಯಕ್ರಮವೇ ಸದಾ ಜಾರಿಯಲ್ಲಿತ್ತು. ಜನರು ಕೂಡ, ಪೂರ್ತಿ ಬ್ರೆಡ್ ಸಿಗದಿದ್ದರೂ ಅರ್ಧವಾದರೂ ಸಿಗುತ್ತಿದೆಯಲ್ಲ ಎಂದು ಸಮಾಧಾನ ಮಾಡಿಕೊಳ್ಳು ತ್ತಿದ್ದರು.

ಮಕ್ಕಳಿಗೆ ಶಿಕ್ಷಣವೇ ಇಲ್ಲದಿರುವುದಕ್ಕಿಂತ ಅರೆಬರೆ ಶಿಕ್ಷಣವಾದರೂ ಇದೆಯಲ್ಲ ಎಂದು ಸಮಾಧಾನ ಮಾಡಲಾಗುತ್ತಿತ್ತು. ಜನರೂ ಇದಕ್ಕೆಲ್ಲ ಹೊಂದಿಕೊಂಡು ಸುಮ್ಮನಿದ್ದರು. ಆದರೆ ವ್ಯವಸ್ಥೆಯ ಅಣಕವನ್ನು ಸರಿಪಡಿಸಲೇಬೇಕಲ್ಲ. ಪ್ರಜಾಪ್ರಭುತ್ವದಲ್ಲಿ ಸರಕಾರವನ್ನು ಜನರು ನಡೆಸುವುದಿಲ್ಲ ವಾದರೂ ಅದು ಜನರ ಮತ್ತು ಜನರಿಗಾಗಿ ಇರುವ ಸರಕಾರವಾಗಬೇಕು. ಇಲ್ಲದಿದ್ದರೆ ನೀವು ಮರು ಆಯ್ಕೆ ಆಗುವುದಿಲ್ಲ.

ಆಡಳಿತ ಚೆನ್ನಾಗಿರಬೇಕು ಎಂಬ ಅತಿದೊಡ್ಡ ಒತ್ತಡ ಅಥವಾ ಬೇಡಿಕೆ ಬರುವುದೇ ಜನರಿಂದ. ಆದರೆ ಅವರು ಬಹಳ ಕಡಿಮೆ ದಂಗೆಯೇಳುತ್ತಿದ್ದುದು ಏಕೆ? ಹಾಗೆ ಮಾಡುವುದು ಮಾರಣಾಂತಿಕ ವಾಗುತ್ತದೆ ಎಂದು ವಾದಿಸಬಹುದು. ಪಾಶ್ಚಿಮಾತ್ಯ ದೇಶಗಳ ಓರಿಯೆಂಟಲಿಸ್ಟ್‌ಗಳು ತಮ್ಮಲ್ಲಿನ ಆರ್ಥಿಕ ದಬ್ಬಾಳಿಕೆಯನ್ನು ಸಮರ್ಥಿಸಿಕೊಂಡಿದ್ದೇ ಹಾಗೆ. ಪೂರ್ವದ ದೇಶಗಳನ್ನು ತೋರಿಸಿ, ‘ನೋಡಿ, ಅಲ್ಲಿ ಎಷ್ಟೊಂದು ಅಧ್ವಾನಗಳಿವೆ! ನಾವು ನೋಡಿ, ಎಷ್ಟು ಚೆನ್ನಾಗಿದ್ದೇವೆ’ ಎಂದು ಜನರಿಗೆ ಬೆಣ್ಣೆ ಹಚ್ಚುವ ಕೆಲಸವನ್ನೇ ಅವರು ಮಾಡಿದ್ದರು.

ಪೂರ್ವ ದೇಶಗಳ ಸಾಮಾಜಿಕ ವ್ಯವಸ್ಥೆ, ಸಂಸ್ಕೃತಿ, ಧರ್ಮ ಎಲ್ಲವೂ ಕನಿಷ್ಠ ಎಂಬ ಭ್ರಮೆಯನ್ನು ಅವರು ಬಿತ್ತಿದ್ದರು. ಹೀಗಾಗಿ ಬ್ರಿಟಿಷ್ ಓರಿಯೆಂಟಲಿಸ್ಟ್‌ಗಳು ಹಿಂದೂ ದೇವರನ್ನು ರಾಕ್ಷಸರಂತೆ ಬಿಂಬಿಸಿದ್ದರು. ಸಾವಿರಾರು ವರ್ಷಗಳ ಹಳೆಯ ಶ್ರೀಮಂತ ನಾಗರಿಕತೆ ಹಾಗೂ ಹಿಂದೂ ದೇವಸ್ಥಾನ ಗಳ ವಾಸ್ತುಶಿಲ್ಪವನ್ನು ನೋಡಿ ಅವರು ಮೂಕವಿಸ್ಮಿತರಾಗಿದ್ದರೂ ಹಿಂದೂ ದೇವರ ಅವಹೇಳನ ವನ್ನು ಅವರು ನಿಲ್ಲಿಸಲಿಲ್ಲ. ಅದೇ ರೀತಿ, ಮುಸ್ಲಿಮರನ್ನು ಹಿಂಸಾಚಾರಪ್ರಿಯರು ಎಂದು ಬಿಂಬಿಸಿ ದರು.

ಚೀನಿಯರನ್ನು ಅಫೀಮು ತಿನ್ನುವವರು ಎಂದು ಬಿಂಬಿಸಿದರು. ಅದೇ ವೇಳೆ, ತಮ್ಮ ದೇಶದಲ್ಲಿ ನಡೆಯುವ ಸಾಮೂಹಿಕ ಹತ್ಯೆ, ಬರಗಾಲದಂಥ ಸಮಯದಲ್ಲಿ ಪರೋಕ್ಷವಾಗಿ ನಡೆಸುವ ಹತ್ಯಾ ಕಾಂಡಗಳಿಗೆ ಇತಿಹಾಸದ ಪುಸ್ತಕಗಳಲ್ಲಿ ಯಾರಿಗೂ ಕಾಣದಂತೆ ಇಷ್ಟೇ ಇಷ್ಟು ಜಾಗ ಕೊಟ್ಟರು. ಆದರೂ ಸೆನ್ಸಾರ್‌ಶಿಪ್ ನಿಂದ ತಪ್ಪಿಸಿಕೊಂಡು ಅಂಥ ವಿಷಯಗಳು ಮಾಧ್ಯಮಗಳಲ್ಲಿ ಉಳಿದು ಬಿಟ್ಟರೆ ಜನರ ನೆನಪಿನಿಂದಲೇ ವ್ಯವಸ್ಥಿತವಾಗಿ ಅಳಿಸಿ ಹಾಕಿದರು.

1950ರ ದಶಕದಲ್ಲಿ ಭಾರತದ ಬಡವರಿಗೆ ಆಶಾವಾದವಿತ್ತು. ಹೀಗಾಗಿ 1967ರ ಲೋಕಸಭೆ ಚುನಾವಣೆ ಯಲ್ಲಿ ಭ್ರಮೆಯಿಂದ ಹೊರ ಬಂದು ಸೇಡು ತೀರಿಸಿಕೊಂಡರು. 1971ರಲ್ಲಿ ಇಂದಿರಾ ಗಾಂಧಿ ‘ಗರೀಬಿ ಹಟಾವೋ’ ಘೋಷಣೆಯನ್ನು ಚುನಾವಣೆಯ ಪ್ರಮುಖ ಅಜೆಂಡಾ ಮಾಡಿದರು. ಆದರೆ ಅವರು ಅಂದುಕೊಂಡಷ್ಟು ಕೆಲಸ ಮಾಡಲು ಆಗಲಿಲ್ಲ. 1980 ಮತ್ತು 1990ರ ದಶಕದಲ್ಲಿ ಭಾರತದ ಏಕತೆಗೆ ಬಂದೊದಗಿದ ಸವಾಲಿನಿಂದಾಗಿ ಆರ್ಥಿಕತೆ ಹಳ್ಳ ಹಿಡಿಯಿತು.

1990ರ ದಶಕದ ಉತ್ತರಾರ್ಧದಲ್ಲಿ ದೇಶದ ಉಳಿವಿಗಾಗಿ ಜಾರಿಗೆ ತಂದ ಆರ್ಥಿಕ ಸುಧಾರಣೆಗಳು ಅಸಮಾನ ಫಲ ನೀಡಿದವು. ಆದರೆ, ಶತಮಾನದ ಕೊನೆಗೆ ನೆಪಗಳು, ಅಡ್ಜೆಸ್ಟ್‌ಮೆಂಟುಗಳೆಲ್ಲ ಮುಗಿ ದಿದ್ದವು. ನಂತರವಂತೂ ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯರನ್ನು ಬಡತನದ ಬೇಗೆಯಿಂದ ಮೇಲೆತ್ತದೆ ಇದ್ದಿದ್ದರೆ ದೇಶದಲ್ಲಿ ಅಲ್ಲೋಲಕಲ್ಲೋಲವೇ ಆಗುತ್ತಿತ್ತು.

ಚೀನಾದಲ್ಲಿ ಮಾವೋ ಜೆಡಾಂಗ್ ನೇತೃತ್ವದಲ್ಲಿ ದೇಶವನ್ನು ಏಕಾಏಕಿ ಅಭಿವೃದ್ಧಿಗೊಳಿಸಲು ಜಾರಿಗೆ ತಂದ ‘ಎತ್ತರ ಜಿಗಿತದ’ ಆರ್ಥಿಕ ನೀತಿಗಳು 5.5 ಕೋಟಿ ಜನರ ಸಾವು ಹಾಗೂ ಆರ್ಥಿಕ ದುರಂತದಲ್ಲಿ ಕೊನೆಗೊಂಡಿತ್ತು. ಏಕೆಂದರೆ ಅವರ ನೀತಿಗಳು ದೇಶದಲ್ಲಿ ಹಾಲಿ ಇದ್ದ ಎಲ್ಲ ವ್ಯವಸ್ಥೆ ಯನ್ನೂ ತಲೆಕೆಳಗು ಮಾಡಿದ್ದವು. ನಂತರ ಡೆಂಗ್ ಕ್ಸಿಯಾಪಿಂಗ್ ಬಂದು ರಿಪೇರಿ ಮಾಡ ಬೇಕಾಯಿತು.

ಏಕಾಏಕಿ ಜಿಗಿಯುವುದಕ್ಕಿಂತ ವೇಗವಾಗಿ ನಡೆಯುವುದು ಒಳ್ಳೆಯದು. ಆಗ ನಿಮ್ಮ ಕಾಲು ನೆಲದ ಮೇಲೇ ಇರುತ್ತದೆ. ಹೀಗಾಗಿ ಭಾರತ ಜಿಗಿಯುವುದರ ಬದಲು ನಡೆಯತೊಡಗಿತು. ಆದರೆ ಅದರ ವೇಗ ಕೆಲವೊಮ್ಮೆ ಜೋರಾಗಿರುತ್ತಿತ್ತು, ಕೆಲವೊಮ್ಮೆ ನಿಧಾನವಾಗುತ್ತಿತ್ತು ಮತ್ತು ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ರೀತಿ ಇರುತ್ತಿತ್ತು. ಹೀಗಾಗಿ ಅಸಮಾನತೆ ಇನ್ನೂ ನಿವಾರಣೆಯಾಗಿಲ್ಲ. ಅದು ಆಗುವುದೂ ಇಲ್ಲ. ಪುಸ್ತಕಗಳಲ್ಲಿರುವುದನ್ನು ಬಿಟ್ಟರೆ ರಾಮರಾಜ್ಯ ಎಂಬುದು ಇಲ್ಲ. ಆದರೂ ಭಾರತವೀಗ ಆತ್ಮವಿಶ್ವಾಸದಿಂದ ಒಂದು ಮಾತನ್ನಂತೂ ಹೇಳಬಹುದು: ‘ಬಡವರು ಬೇರೆ ದೇಶದವರಲ್ಲ!’

(ಲೇಖಕರು ಹಿರಿಯ ಪತ್ರಕರ್ತರು)