ಶುದ್ಧೀಕರಣ ಎಂಬುದು ಜೀವವಿರೋಧಿ ಆಗಬಾರದು
ನಿಘಂಟುಗಳಲ್ಲಿ ಪದಶಃ ಅರ್ಥ- ಸ್ವಚ್ಛವಾಗುವ ಅವಸ್ಥೆ ಅಥವಾ ಭಾವ (ನೈಸರ್ಗಿಕವಾದ ಆರೋಗ್ಯ ಪೂರ್ಣವಾದದ್ದು) ಸಾಮಾಜಿಕ ಅವಸ್ಥೆಯಲ್ಲಿ ಜಾತಿ ಮತ್ತು ಶ್ರೇಷ್ಠತೆಯ ವ್ಯಸನದ ಭಾಗವಾಗಿ ಬಳಕೆಗೊಳ್ಳುತ್ತಿರುವುದು ಕೆಟ್ಟ ಕಾಲದ ಸೂಚಕವೇ! ಕಾಂಗ್ರೆಸ್ ಅಧ್ಯಕ್ಷರು ಹಾಗೂ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಉತ್ತರಾಖಂಡದ ಒಂದು ಪ್ರದೇಶದಲ್ಲಿ ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಲಾಗಿದೆ ಎನ್ನುವ ವಿಷಯ ಚರ್ಚೆಗೆ ಆಹ್ವಾನಿಸಿದೆ.
-
ಪ್ರಸ್ತುತ
ಡಾ.ಎಲ್ಲಪ್ಪ ಜಿ.ಕಲಾದಗಿ
ಒಂದು ಶಬ್ದ ದುರುಪಯೋಗ ಆಗುವ ತನಕ ಅದರ ವ್ಯಾಖ್ಯಾನ ಮಾಡುವ ಒತ್ತಡವೇ ಬೀಳುವು ದಿಲ್ಲ- ಎನ್ನುತ್ತಾನೆ ಟಿ.ಎಸ್ ಎಲಿಯಟ್. ಆದರೆ ಒಂದು ಶಬ್ದದ ಅರ್ಥ ಜೀವ ವಿರೋಧಿ ಆಚರಣೆ ಯಾಗಿ ಇದ್ದಕ್ಕಿದ್ದಂತೆ ಸಂಭವಿಸುವುದಿಲ್ಲ ಮತ್ತು ಸಂಭವಿಸಿದ್ದಲ್ಲ! ಕಾಲದೊಳಗೆ ಅದು ಗುಪ್ತ ಗಾಮಿನಿಯಾಗಿ ತನಗೆ ಅಧಿಕಾರ ಮತ್ತು ಅವಕಾಶಗಳು ಸಿಕ್ಕಾಗಲೆಲ್ಲ ಬಹಿರಂಗ ಆಚರಣೆಗೆ ಮುಂದಾಗುತ್ತದೆ. ಇದಕ್ಕೆ ಪೂರಕವೆಂಬಂತೆ ‘ಶುದ್ಧೀಕರಣ’ ಎಂಬ ಪದ ಸಾಮಾಜಿಕ ಆಚರಣೆ ಯಲ್ಲಿದೆ.
ನಿಘಂಟುಗಳಲ್ಲಿ ಪದಶಃ ಅರ್ಥ- ಸ್ವಚ್ಛವಾಗುವ ಅವಸ್ಥೆ ಅಥವಾ ಭಾವ (ನೈಸರ್ಗಿಕವಾದ ಆರೋಗ್ಯ ಪೂರ್ಣವಾದದ್ದು) ಸಾಮಾಜಿಕ ಅವಸ್ಥೆಯಲ್ಲಿ ಜಾತಿ ಮತ್ತು ಶ್ರೇಷ್ಠತೆಯ ವ್ಯಸನದ ಭಾಗವಾಗಿ ಬಳಕೆಗೊಳ್ಳುತ್ತಿರುವುದು ಕೆಟ್ಟ ಕಾಲದ ಸೂಚಕವೇ! ಕಾಂಗ್ರೆಸ್ ಅಧ್ಯಕ್ಷರು ಹಾಗೂ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಉತ್ತರಾಖಂಡದ ಒಂದು ಪ್ರದೇಶದಲ್ಲಿ ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಲಾಗಿದೆ ಎನ್ನುವ ವಿಷಯ ಚರ್ಚೆಗೆ ಆಹ್ವಾನಿಸಿದೆ.
ಇದನ್ನೂ ಓದಿ: Untouchability: ಗ್ರಾಮದೇವತೆಯ ಮೆರವಣಿಗೆಯಲ್ಲಿ ಅಸ್ಪೃಶ್ಯತೆ ಆಚರಣೆ: ಗ್ರಾಮದಲ್ಲಿ ಬಿಗುವಿನ ವಾತಾವರಣ
ಈ ಹಿಂದೆ ಕೇಂದ್ರದಲ್ಲಿ ಸಚಿವರಾದ ಎ.ನಾರಾಯಣ ಸ್ವಾಮಿಯವರನ್ನು ಪಾವಗಡ ತಾಲೂಕಿನಲ್ಲಿ ಗೊಲ್ಲರಹಟ್ಟಿಯೊಳಗೆ ಪ್ರವೇಶ ನಿರಾಕರಣೆ ಮಾಡಲಾಯಿತು. ಇವಲ್ಲದೇ ದಿನನಿತ್ಯ ಒಂದಲ್ಲ ಒಂದು ಹಳ್ಳಿಗಳಲ್ಲಿ ನಡೆಯುವ ಕೊಲೆ, ದಹನ, ಬಹಿಷ್ಕಾರ, ತಾರತಮ್ಯ, ಶೋಷಣೆ, ಅತ್ಯಾಚಾರ ಇಂತಹ ಘಟನೆಗಳು ಆಚರಣೆಗೆ ಒಳಗಾಗುತ್ತಿವೆ. ಸಂವಿಧಾನ ಬದ್ಧವಾಗಿ ಜಾತಿ ಆಚರಣೆಯು ನಿಷಿದ್ಧ. ಆರ್ಟಿಕಲ್ 17 ಅದನ್ನೇ ಸ್ಪಷ್ಟಪಡಿಸುತ್ತದೆ. ತಾರತಮ್ಯವನ್ನು ಒಪ್ಪುವುದಿಲ್ಲ. ಸಾಮಾಜಿಕ ವಿಧಿಯ ಮುಂದೆ, ಈ ಸಂವಿಧಾನ ವಿಧಿಯ ಮಾತನ್ನು ಕೇಳುವರು ಯಾರು? ಎಂಬಂತಾಗಿದೆ!
ಸಂವಿಧಾನ ಜಾರಿಯಾದ ಸಂದರ್ಭದಲ್ಲಿ ಜಾತಿಯ ಅಳಿವನ್ನು ಎರಡು ರೀತಿಯ ಭರವಸೆಗಳು ದಟ್ಟವಾಗಿಸಿದವು. ಒಂದು- ದೇಶದ ಜನ ಶಿಕ್ಷಣವಂತರಾದರೆ, ಪ್ರeವಂತರಾದರೆ ನಿಲುಗಡೆಗೆ ಬರುತ್ತೆ ಎನ್ನೋದು. ಇನ್ನೊಂದು- ದಲಿತರು, ಶೈಕ್ಷಣಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಸಬಲರಾದರೆ ನಿರ್ಮೂಲನೆ ಆಗಬಹುದೆಂಬ ಚಿಂತನೆಗಳಿದ್ದವು. ಆದರೆ ಈ ಆಶಯ ಗಳಿಗೂ ಕತ್ತಲೆ ಆವರಿಸಿದಂತಿದೆ.
ಜಾತಿ ಮಾತ್ರ ತನ್ನ ಜೀವಂತಿಕೆಯಿಂದ ಹಿಂದೆ ಸರಿಯುತ್ತಿಲ್ಲ. ನಿಂತ ನೆಲವನ್ನು ಶುದ್ಧೀಕರಣ ಮಾಡುವ, ನಿರಾಕರಿಸುವ ಮತ್ತು ಬಹಿಷ್ಕರಿಸಿ ರುವಂತಹ ಆಚರಣೆಗಳು ಬದುಕುತ್ತಿವೆ. ಸಾಮಾಜಿಕ ಆಯಾಮದಲ್ಲಿ ಶುದ್ಧೀಕರಣಕ್ಕೆ ಇರುವ ಅರ್ಥವೇನು? ಈ ಪರಿಭಾಷೆಯನ್ನು ಮೂರು ಹಂತಗಳ ನಿರ್ವಚನದಲ್ಲಿ ಪ್ರತಿನಿಽಸುತ್ತದೆ. ಒಂದು, ನಾವು- ಅವರು ಎಂಬ ಮಾನಸಿಕ ಗೋಡೆ ನಿರ್ಮಾಣ. ಅಂದರೆ ನಾವು ಶುದ್ಧರು ಅವರು ಅಶುದ್ಧರು ಎಂಬುದು. ವ್ಯಕ್ತಿ ಅಥವಾ ಸಮುದಾಯ ತನ್ನನ್ನು ಇತರರಿಗಿಂತ ಮೇಲು, ಪವಿತ್ರ ಅಥವಾ ಶುದ್ಧ ಎಂದು ಭಾವಿಸಿಕೊಳ್ಳುತ್ತದೆ. ಮತ್ತೊಂದು ಸಮುದಾಯವನ್ನು ಕೀಳು, ಅಶುದ್ಧ ಎಂದು ದೂರ ಇಡಲು ಪ್ರಯತ್ನಿಸುತ್ತದೆ.
ಎರಡನೆಯದು, ಸಾಮಾಜಿಕ ಆಚರಣೆ. ‘ಅವರು ಬೇರೆ’ ಎನ್ನುವ ಕಲ್ಪನೆಯೊಂದಿಗೆ ವಿಭಜಿಸು ವಂತಹದ್ದು. ಆ ಮೂಲಕವಾಗಿ ದೇವಾಲಯ ನಿರಾಕರಣೆ, ನಿಂತ ನೆಲವನ್ನು ಸ್ವಚ್ಛಗೊಳಿಸುವುದು ಇತ್ಯಾದಿ. ಮೂರನೆಯದು- ಸಾಮಾಜಿಕ ಅಧಿಕಾರ. ಸಾಮಾಜಿಕ ಅಧಿಕಾರ, ಸಂಸ್ಥೆಗಳು ಮತ್ತು ನಿಯಮಗಳ ಮೂಲಕ ಸ್ಥಿರತೆಗೆ ಪ್ರಯತ್ನ. ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸ್ಥಾನಮಾನಗಳನ್ನು ರೂಪಿಸುತ್ತದೆ.
ಹಾಗಾಗಿ ಈ ಶುದ್ಧತೆಯ ಹಿಂದೆ ಸ್ಥಾನಮಾನ, ಅಽಕಾರ ಮತ್ತು ಬಹಿಷ್ಕಾರ ಅಥವಾ ನಿರಾಕರಣೆ ಯಂತಹ ಸರಪಳಿಗಳಲ್ಲಿ ಸುತ್ತುತ್ತದೆ ಎನ್ನುವುದಕ್ಕೆ ಮೇಲಿನ ಘಟನೆಗಳೇ ಸಾಕ್ಷಿ. ಶುದ್ಧೀಕರಣವು ಮೊದಲು ಮನಸ್ಸಿನಲ್ಲಿ ‘ಅವರು’ಗಳನ್ನು ಸೃಷ್ಟಿಸುತ್ತದೆ; ನಂತರ ಆಚರಣೆಯಲ್ಲಿ ಅವರನ್ನು ದೂರ ಮಾಡುತ್ತದೆ; ಕೊನೆಯಲ್ಲಿ ಅಧಿಕಾರದ ಮೂಲಕ ಅವರನ್ನು ಹೊರಗಿಡುವ ವ್ಯವಸ್ಥೆಯನ್ನು ನಿರ್ಮಿಸುತ್ತದೆ. ಇಂತಹ ಅಪಾಯಗಳಿಂದ ನಾವು ಹೊರಬರದೆ ಹೋದರೆ ದೇಶವನ್ನು ವಿಶ್ವಗುರು ಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಅಡ್ಡಿಪಡಿಸುತ್ತವೆ. ಜಾತಿಗಳು ಸಾಯಬೇಕು ಎಂದರೆ ಮನುಷ್ಯತ್ವ ಜಾಗೃತಿಗೊಳಿಸಿಕೊಳ್ಳಬೇಕು. ನಮ್ಮ ಪೂರ್ವಗ್ರಹ ಜಾತಿಯ ಭಾವನೆಗಳನ್ನು ಶುದ್ಧೀಕರಣಕ್ಕೆ ಒಳಗಾಗಿಸಬೇಕಿದೆ.