ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Lokesh Kayarga Column: ಆನೆಗಳ ಸ್ಥಳಾಂತರ: ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ !

ಬೇಲೂರು ಭಾಗದಲ್ಲಿ ಆನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಗೆ ಚಾಲನೆಯೂ ಸಿಕ್ಕಿದೆ. ಆನೆಗಳ ಸ್ಥಳಾಂತರ ನಿರ್ಧಾರವು ಬೇಲೂರು, ಸಕಲೇಶಪುರ ಭಾಗದ ಸಂತ್ರಸ್ತ ಜನರಿಗೆ ಒಂದಷ್ಟು ಸಮಾಧಾನ ತಂದುಕೊಡಬಹುದು. ಮತ್ತೊಂದೆಡೆ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಭಾಗದ ರೈತರಿಂದ ಹಾಗೂ ಪರಿಸರ ತಜ್ಞರಿಂದ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಆನೆಗಳ ಸ್ಥಳಾಂತರ: ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ !

-

ಲೋಕಮತ

ಕರ್ನಾಟಕದ ಮಲೆನಾಡು, ಕರಾವಳಿ ಮತ್ತು ಹಳೇ ಮೈಸೂರು ಭಾಗದ ಜಿಲ್ಲೆಗಳು ಮಾನವ-ವನ್ಯಜೀವಿ ಸಂಘರ್ಷದ ಬೇಗುದಿಯಲ್ಲಿ ನರಳುತ್ತಿವೆ. ವನ್ಯ ಪ್ರಾಣಿಗಳ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುವ, ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರುವ ಸುದ್ದಿಗಳು ನಿತ್ಯದ ಮಾತಾಗಿವೆ. ಹಾಸನ ಜಿಲ್ಲೆಯ ಬೇಲೂರು ಹಾಗೂ ಸಕಲೇಶಪುರ ತಾಲ್ಲೂಕುಗಳಲ್ಲಿ ಮೂರು ದಿನಗಳ ಅಂತರದಲ್ಲಿ ಇಬ್ಬರು ಅಮಾಯಕರು ಕಾಡಾನೆಗಳ ದಾಳಿಗೆ ಬಲಿಯಾಗಿರುವುದು ಅಲ್ಲಿನ ಜನರ ಆಕ್ರೋಶದ ಕಟ್ಟೆ ಒಡೆಯುವಂತೆ ಮಾಡಿದೆ.

ಈ ನಡುವೆ ಪ್ರತಿಭಟನಾ ಸ್ಥಳಕ್ಕೆ ಖುದ್ದು ಭೇಟಿ ನೀಡಿರುವ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಂ. ಶಿವಲಿಂಗೇಗೌಡರು, ಒಂದು ತಿಂಗಳೊಳಗೆ ಪುಂಡಾನೆಗಳು ಸೇರಿದಂತೆ ಬೇಲೂರು ಭಾಗದಲ್ಲಿ ಬೀಡು ಬಿಟ್ಟಿರುವ 56 ಕಾಡಾನೆಗಳನ್ನು ಸೆರೆಹಿಡಿದು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಇದರ ಬೆನ್ನ ವಿಧಾನಸೌಧದಲ್ಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ, ತ್ವರಿತ ಕಾರ್ಯಾಚರಣೆಗೆ ರೂಪುರೇಷೆ ಸಿದ್ಧಪಡಿಸಲಾಗಿದೆ.

ಬೇಲೂರು ಭಾಗದಲ್ಲಿ ಆನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಗೆ ಚಾಲನೆಯೂ ಸಿಕ್ಕಿದೆ. ಆನೆಗಳ ಸ್ಥಳಾಂತರ ನಿರ್ಧಾರವು ಬೇಲೂರು, ಸಕಲೇಶಪುರ ಭಾಗದ ಸಂತ್ರಸ್ತ ಜನರಿಗೆ ಒಂದಷ್ಟು ಸಮಾಧಾನ ತಂದುಕೊಡಬಹುದು. ಮತ್ತೊಂದೆಡೆ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಭಾಗದ ರೈತರಿಂದ ಹಾಗೂ ಪರಿಸರ ತಜ್ಞರಿಂದ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಇದನ್ನೂ ಓದಿ: Lokesh Kayarga Column: ಬೇಕಾಬಿಟ್ಟಿ ಏರಿಕೆಗೆ ಹಾಲು ಆಲ್ಕೋಹಾಲ್‌ ಅಲ್ಲವಲ್ಲ !

ಇದು ಜಿಲ್ಲೆ-ಜಿಲ್ಲೆಗಳ ನಡುವಣ ತಿಕ್ಕಾಟವಾಗಿ ಮಾರ್ಪಡುವ ಎಲ್ಲ ಸಾಧ್ಯತೆಗಳೂ ಇವೆ. ಸಚಿವರು ಬೇಲೂರು ಭಾಗದ ಆನೆಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದಷ್ಟೇ ಹೇಳಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಭದ್ರಾ ಅಭಯಾರಣ್ಯಕ್ಕೆ 56 ಆನೆಗಳನ್ನು ಬಿಡಲಾಗುವುದು ಎಂದು ಏಕಾಏಕಿ ಹೇಳಿಕೆ ನೀಡಬಾರದಿತ್ತು. ಯಾವ ಅರಣ್ಯಕ್ಕೆ ಎಷ್ಟು ಆನೆಗಳನ್ನು ಸ್ಥಳಾಂತರಿಸಬೇಕು? ಎಷ್ಟು ಆನೆಗಳನ್ನು ಸೆರೆ ಹಿಡಿಯಬೇಕೆಂಬ ನಿರ್ಧಾರವನ್ನು ತಜ್ಞರು, ಅರಣ್ಯ ಇಲಾಖೆ ಅಧಿಕಾರಿಗಳ ವಿವೇಚನೆಗೆ ಬಿಡಬೇಕಾಗಿತ್ತು.

ಒಂದು ವೇಳೆ 56 ಆನೆಗಳು ಸ್ಥಳಾಂತರವಾದರೂ ಹಾಸನ ಭಾಗದ ರೈತರು ನಿಟ್ಟುಸಿರು ಬಿಡು ವಂತಿಲ್ಲ. ಇಲ್ಲಿರುವ ಬಹುತೇಕ ಆನೆಗಳಿಗೆ ಭದ್ರಾ ಅಭಯಾರಣ್ಯ ಅಪರಿಚಿತ ಪ್ರದೇಶವೇನೂ ಅಲ್ಲ. ಆಹಾರ ಅರಸಿಕೊಂಡು ವರ್ಷಕ್ಕೆ 300 ಕಿ.ಮೀಗಿಂತ ಹೆಚ್ಚು ದೂರ ಸಾಗುವ ಇಲ್ಲಿನ ಆನೆಗಳಿಗೆ ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಘಟ್ಟದ ಕೆಳಭಾಗದಲ್ಲಿರುವ ಅರಣ್ಯ ಪ್ರದೇಶ ಅಪರಿಚಿವೇನೂ ಅಲ್ಲ.

ಬಂಡೀಪುರ ಅರಣ್ಯಕ್ಕೆ ಬಿಟ್ಟ ಆನೆ ಮತ್ತೆ ಸಕಲೇಶಪುರಕ್ಕೆ ಮರಳಿದ ಉದಾರಣೆಗಳಿವೆ. ಅರಸೀಕೆರೆ ಕ್ಷೇತ್ರದ ಶಿವಲಿಂಗೇಗೌಡರಿಗೆ ಭದ್ರಾ ಅಭಯಾರಣ್ಯದ ದೂರದ ಪ್ರದೇಶವೇನೂ ಅಲ್ಲ. ಆದರೆ ಆನೆಗಳ ಆವಾಸ ಸ್ಥಾನ, ಅವುಗಳ ಸಂಚಾರ ಸ್ವಭಾವ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲೂ ವ್ಯಾಪಕವಾಗಿರುವ ಆನೆ-ಮಾನವ ಸಂಘರ್ಷದ ಬಗ್ಗೆ ತಿಳಿದಿದ್ದರೆ ಇಂತಹ ಹೇಳಿಕೆ ನೀಡುತ್ತಿರಲಿಲ್ಲ.

LK 1811

ಭದ್ರಾ ಅಭಯಾರಣ್ಯವು ಸುಮಾರು 451.7 ಚದರ ಕಿ.ಮೀ. ವಿಸ್ತೀರ್ಣ ಹೊಂದಿರುವ ರಾಜ್ಯದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶ. ಅರಣ್ಯ ಇಲಾಖೆಯ ಅಧಿಕೃತ ಅಂದಾಜಿನ ಪ್ರಕಾರ, ಈ ಅಭಯಾರಣ್ಯದಲ್ಲಿ ಈಗಾಗಲೇ ಸುಮಾರು 450 ಆನೆಗಳು ಸ್ವಾಭಾವಿಕವಾಗಿ ವಾಸಿಸುತ್ತಿವೆ. ಜತೆಗೆ ಕಾಫಿ ತೋಟಗಳಲ್ಲಿರುವ ಆನೆಗಳು ಆರಣ್ಯ ಮತ್ತು ಜನವಸತಿ ಪ್ರದೇಶದಲ್ಲಿ ಅಂಡಲೆಯುತ್ತವೆ.

ಪರಿಸರ ತಜ್ಞರ ಪ್ರಕಾರ, ಈ ಕಾಡು ಮತ್ತಷ್ಟು ಆನೆಗಳಿಗೆ ಆಸರೆಯಾಗಲು ಸಾಧ್ಯವಿಲ್ಲ ಒಂದೇ ಬಾರಿಗೆ ಹೊರಗಿನಿಂದ 56 ಆನೆಗಳನ್ನು ಇಲ್ಲಿಗೆ ತಂದು ಬಿಡುವುದು ಇಲ್ಲಿನ ಅರಣ್ಯ ಪರಿಸರ ಮಾತ್ರವಲ್ಲ ಸಾಮಾಜಿಕ ಸಮತೋಲನವನ್ನು ಬುಡಮೇಲು ಮಾಡುವ ಸಾಧ್ಯತೆ ಇದೆ.

ಚಿಕ್ಕಮಗಳೂರು ಮತ್ತು ಶಿವಮೊಗ್ಗ ಭಾಗದ ರೈತರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದು ಕೇವಲ ರಾಜಕೀಯ ವಿವಾದವಲ್ಲ; ಅದು ತಮ್ಮ ಜೀವ ಮತ್ತು ಬೆಳೆಗಳ ರಕ್ಷಣೆಗಾಗಿ ಸ್ಥಳೀಯರು ವ್ಯಕ್ತಪಡಿಸುತ್ತಿರುವ ನ್ಯಾಯಯುತ ಆತಂಕ. ಒಂದು ಜಿಲ್ಲೆಯ ಸಮಸ್ಯೆಯನ್ನು ಮತ್ತೊಂದು ಜಿಲ್ಲೆಗೆ ವರ್ಗಾಯಿಸುವ ಈ ತಂತ್ರವು ಅಂತರ-ಜಿಲ್ಲಾ ಸಂಘರ್ಷಕ್ಕೆ ಮುನ್ನುಡಿ ಬರೆಯಬಹುದು.

ಇತಿಹಾಸ ಕಲಿಸಿದ ಪಾಠ

ಈ ಭಾಗದಲ್ಲಿ ಆನೆಗಳನ್ನು ಸೆರೆ ಹಿಡಿದು ಸ್ಥಳಾಂತರಿಸುವುದು ಹೊಸ ವಿಷಯವೇನೂ ಅಲ್ಲ. 1986-87ರಲ್ಲಿ ಅರಣ್ಯ ಇಲಾಖೆಯು ಸುಮಾರು 21 ಆನೆಗಳನ್ನು ಸೆರೆ ಹಿಡಿದು ಸ್ಥಳಾಂತರಿಸಿತ್ತು. ಹಾಗೆಯೇ 2013-14ರಲ್ಲೂ ಸುಮಾರು 22 ಆನೆಗಳನ್ನು ಹಿಡಿದು ಸ್ಥಳಾಂತರಿಸಲಾಗಿತ್ತು. ಆದರೆ ಆನೆಗಳನ್ನು ಅವುಗಳ ನಿತ್ಯ ಆವಾಸ ಸ್ಥಳದಿಂದ ಸ್ಥಳಾಂತರಿಸಿದಾಕ್ಷಣ, ಖಾಲಿಯಾದ ಆ ಸ್ಥಳಗಳಿಗೆ ಬೇರೆ ಅರಣ್ಯ ಪ್ರದೇಶಗಳಿಂದ ಬಂದ ಹೊಸ ಆನೆಗಳು ಬಂದು ನೆಲೆಸುತ್ತವೆ. ಈ ಪ್ರಕ್ರಿಯೆ ಈ ಹಿಂದಿನಿಂದಲೂ ನಿರಂತರವಾಗಿ ನಡೆಯುತ್ತ ಬಂದಿದೆ.

ಕಾಡಾನೆಗಳ ಹಾವಳಿಯನ್ನು ತಡೆಯಲು ಅವುಗಳ ಸೆರೆಹಿಡಿಯುವಿಕೆ ಮತ್ತು ಸ್ಥಳಾಂತರ ಅಲ್ಪಾವಧಿಯ ಕ್ರಮವಷ್ಟೇ ಹೊರತು ಶಾಶ್ವತ ಪರಿಹಾರವಲ್ಲ. ಈ ನಿಟ್ಟಿನಲ್ಲಿ ಇಲಾಖೆ ಮತ್ತು ಸರಕಾರ ದೀರ್ಘಕಾಲೀನ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಚಿಂತಿಸಬೇಕಿದೆ. ಈ ಭಾಗದಲ್ಲಿ ಆನೆಗಳ ಪ್ರಮುಖ ಆವಾಸ ಸ್ಥಾನ ಮತ್ತು ಅವು ಸಂಚರಿಸುವ ನೈಸರ್ಗಿಕ ಹಾದಿ (ಆನೆ ಕಾರಿಡಾರ್) ಒತ್ತುವರಿ ಯಾಗಿರುವುದು ಅವು ನಾಡಿನತ್ತ ಮುಖ ಮಾಡಲು ಪ್ರಮುಖ ಕಾರಣ.

ಹಾಸನದ ಸಕಲೇಶಪುರ ಮತ್ತು ಬೇಲೂರು ಭಾಗದಲ್ಲಿ ಹಲವು ರೈತರು ಸ್ವಯಂಪ್ರೇರಿತರಾಗಿ ತಮ್ಮ ಜಮೀನುಗಳನ್ನು ಆನೆ ಕಾರಿಡಾರ್‌ಗಾಗಿ ಬಿಟ್ಟುಕೊಡಲು ಮುಂದೆ ಬಂದಿದ್ದಾರೆ. ಸರಕಾರ ಇಂತಹ ರೈತರಿಗೆ ಸೂಕ್ತ ಹಾಗೂ ಆಕರ್ಷಕ ಪರಿಹಾರ ಪ್ಯಾಕೇಜ್ ನೀಡಿ, ಈ ಹಾದಿಗಳನ್ನು ಮೊದಲು ಮುಕ್ತಗೊಳಿಸಬೇಕು. ರೈಲು ಕಂಬಿಗಳ ಬೇಲಿ ನಿರ್ಮಿಸುವುದು, ಕಂದಕಗಳನ್ನು ತೋಡುವುದು ಆನೆಗಳ ದಾಳಿ ತಡೆಯಲು ಪ ರ್ಯಾಪ್ತವಲ್ಲ ಎನ್ನುವುದು ಈಗಾಗಲೇ ಸಾಬೀತಾಗಿದೆ.

ಸೋಲಾರ್ ಬೇಲಿಗಳು, ಹ್ಯಾಂಗಿಂಗ್ ಸೋಲಾರ್ ಫೆನ್ಸಿಂಗ್, ಜಿಪಿಎಸ್ ಕಾಲರ್‌ಗಳ ಮೂಲಕ ಆನೆಗಳ ಚಲನವಲನವನ್ನು ನಿರಂತರವಾಗಿ ಗಮನಿಸುವ ‘ಅರ್ಲಿ ವಾರ್ನಿಂಗ್ ಸಿಸ್ಟಮ್’ (Early Warning System) ಹಾಗೂ ತ್ವರಿತ ಕಾರ್ಯಪಡೆಗಳನ್ನು (Rapid Response Teams & RRT) ಗ್ರಾಮ ಮಟ್ಟದಲ್ಲಿ ಸಕ್ರಿಯಗೊಳಿಸಬೇಕು. ‌

ಹಿಂದೆ ಅರಣ್ಯ ಸಚಿವರಾಗಿದ್ದ ಈಶ್ವರ ಖಂಡ್ರೆ ಅವರು ವನ್ಯಪ್ರಾಣಿಗಳ ಸಂಖ್ಯೆಯನ್ನು ಸಮತೋಲನದಲ್ಲಿಡಲು ಆಯ್ದ ವನ್ಯಜೀವಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಅಥವಾ ಗರ್ಭ ನಿರೋಧಕ ಚುಚ್ಚುಮದ್ದು ನೀಡುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಅನಿರೀಕ್ಷಿತ ಹಾಗೂ ದಿಟ್ಟ ಹೇಳಿಕೆ ನೀಡಿದ್ದರು. ಈವರೆಗೆ ರಾಜ್ಯದ ಯಾವ ಅರಣ್ಯ ಸಚಿವರೂ ಹೇಳಲು ಧೈರ್ಯ ಮಾಡದ ಪ್ರಸ್ತಾಪವಿದು.

‘ಪ್ರಾಣಿಪ್ರಿಯರು’ ಎಂದು ಹೇಳಿಕೊಳ್ಳುವ ವರ್ಗ ಈ ಹೇಳಿಕೆಯನ್ನು ತಕ್ಷಣವೇ ಖಂಡತುಂಡವಾಗಿ ವಿರೋಧಿಸುವುದು ನಿರೀಕ್ಷಿತವೇ ಆಗಿತ್ತು. ಆದರೆ ಈ ಪ್ರಸ್ತಾವನೆಯನ್ನು ಕೇವಲ ಪ್ರಾಣಿಹಿಂಸೆ ಎಂದು ಭಾವಿಸದೆ, ಜಾಗತಿಕವಾಗಿ ಚಾಲ್ತಿಯಲ್ಲಿರುವ ವೈಜ್ಞಾನಿಕ ಮಾದರಿಗಳ ಹಿನ್ನೆಲೆಯಲ್ಲಿ ನೋಡಬೇಕಿದೆ.

ಇಡೀ ದೇಶದಲ್ಲಿಯೇ ಅತಿ ಹೆಚ್ಚು ಆನೆಗಳ ಸಂತತಿ ಇರುವುದು ನಮ್ಮ ರಾಜ್ಯಕ್ಕೆ ಹೆಮ್ಮೆಯ ವಿಚಾರ ಎನ್ನುವುದು ನಿಜ. ಆದರೆ ನಮ್ಮ ರಾಜ್ಯದ ಕಾಡುಗಳು ಯಾವ ಪ್ರಾಣಿಯ ಸಂತತಿಯನ್ನು ಎಷ್ಟರ ಮಟ್ಟಿಗೆ ಆಸರೆಯಾಗಬಲ್ಲದು ಎಂಬ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಬೇಕಾಗಿದೆ. ಇತ್ತೀಚಿನ ಆನೆ ಗಣತಿ ವರದಿಗಳ ಪ್ರಕಾರ, ಕರ್ನಾಟಕದ ಕಾಡುಗಳಲ್ಲಿ ಸುಮಾರು 6013 ರಿಂದ 6395 ಆನೆಗಳು ನೆಲೆಸಿವೆ.

ಇದು ದೇಶದ ಒಟ್ಟು ಆನೆಗಳ ಸಂತತಿಯ ಸರಿ ಸುಮಾರು ಶೇ. 25ರಷ್ಟು. ಇದರ ಜತೆಗೆ ಹುಲಿ, ಚಿರತೆ ಮುಂತಾದ ವನ್ಯ ಮೃಗಗಳಿಗೂ ಕರ್ನಾಟಕವೇ ಪ್ರಮುಖ ನೆಲೆ. ರಾಜ್ಯದ ಒಟ್ಟು ಭೌಗೋಳಿಕ ವಿಸ್ತೀರ್ಣದಲ್ಲಿ ಶೇ.20ಕ್ಕಿಂತ ಅಧಿಕ ಭಾಗ ಅರಣ್ಯವಿದೆ ಎಂದು ಹೇಳಲಾಗುತ್ತಿದೆ. ಆದರೆ ವಾಣಿಜ್ಯ ಬೆಳೆಗಳು (ಕಾಫಿ, ಟೀ, ಅಡಿಕೆ ತೋಟಗಳು), ಮಾನವ ಒತ್ತುವರಿ, ಕಾಡಂಚಿನ ಅಭಿವೃದ್ಧಿ ಯೋಜನೆ ಗಳು ಮತ್ತು ಕಾದಿಟ್ಟ ಅರಣ್ಯಗಳ ಒತ್ತುವರಿಯಿಂದ ಆನೆಗಳ ಸಹಜ ನೆಲೆಗಳು ಕಿರಿದಾಗಿವೆ.

ಕಳೆದ ಐದು ವರ್ಷಗಳ ಅಂಕಿಅಂಶಗಳನ್ನು ಗಮನಿಸಿದರೆ, ರಾಜ್ಯದಲ್ಲಿ ಆನೆಗಳ ದಾಳಿಗೆ ಬಲಿಯಾಗಿರುವವರ ಸಂಖ್ಯೆ 170ಕ್ಕೂ ಅಧಿಕ. ಅದರಲ್ಲೂ ಕೊಡಗು ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ 92ಕ್ಕೂ ಹೆಚ್ಚು ಜನರು ಆನೆ ದಾಳಿಗೆ ಜೀವ ಕಳೆದುಕೊಂಡಿದ್ದಾರೆ. ಹಾಸನ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಳೆದ 5 ವರ್ಷಗಳಲ್ಲಿ 50ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿ ದ್ದಾರೆ. ನೂರಾರು ಮಂದಿ ದಾಳಿಗೆ ಗುರಿಯಾಗಿ ಶಾಶ್ವತ ಅಂಗವೈಕಲ್ಯ ಕ್ಕೊಳಗಾಗಿದ್ದಾರೆ.

ಪ್ರತಿ ವರ್ಷ ರಾಜ್ಯದಲ್ಲಿ ಸರಾಸರಿ 45 ರಿಂದ 50 ಮಂದಿ ಕಾಡು ಪ್ರಾಣಿಗಳ ದಾಳಿಗೆ ಬಲಿಯಾಗು ತ್ತಿದ್ದಾರೆ. ಅಂದರೆ ಪ್ರತಿ ತಿಂಗಳು ಸರಾಸರಿ ನಾಲ್ವರು ವನ್ಯಜೀವಿಗಳ ದಾಳಿಗೆ ಸಿಲುಕಿ ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ. ಪ್ರತಿವರ್ಷ ನೂರಾರು ವನ್ಯಜೀವಿಗಳು ಮತ್ತು ಮನುಷ್ಯರು ಪ್ರಾಣ ಕಳೆದುಕೊಳ್ಳು ತ್ತಿರುವುದನ್ನು ಕಣ್ಣು ಮುಚ್ಚಿ ನೋಡಲಾಗದು. ಆಫ್ರಿಕಾದ ಕೆಲವು ದೇಶಗಳಲ್ಲಿ ಪ್ರಾಣಿಗಳ ಅತಿಪೂರ್ಣ ಜನಸಂಖ್ಯೆಯನ್ನು ನಿಯಂತ್ರಿಸಲು ವೈಜ್ಞಾನಿಕ ಗರ್ಭನಿರೋಧಕ ವಿಧಾನಗಳನ್ನು ಅಥವಾ ಸಂತಾನಹರಣ ಚಿಕಿತ್ಸೆಯನ್ನು ಬಳಸಲಾಗುತ್ತದೆ.

ನಮ್ಮ ದೇಶದಲ್ಲೂ ತಜ್ಞರ ಸಲಹೆ ಪಡೆದು ಈ ಕುರಿತು ಪ್ರಾಯೋಗಿಕ ಚಿಂತನೆ ನಡೆಸುವುದು ಅತಿ ಅವಶ್ಯಕ. ಆಫ್ರಿಕಾ ರಾಷ್ಟ್ರಗಳಾದ ದಕ್ಷಿಣ ಆಫ್ರಿಕಾ, ನಮೀಬಿಯಾ, ಜಿಂಬಾಬ್ವೆ ಮುಂತಾದೆಡೆ ಆನೆ, ಕಾಡುಕೋಣ, ಕಾಡೆಮ್ಮೆಗಳಂತಹ ಪ್ರಾಣಿಗಳ ಸಂಖ್ಯೆ ಅತಿ ಹೆಚ್ಚಾದಾಗ, ಅವುಗಳ ಕಲ್ಲಿಂಗ್ (ನಿಯಂತ್ರಿತ ಹತ್ಯೆ) ಇಲ್ಲವೇ ನಿಯಂತ್ರಿತ ಟ್ರೋಫಿ ಹಂಟಿಂಗ್‌ಗೆ ಅನುಮತಿ ನೀಡಲಾಗುತ್ತದೆ. ಬೇಟೆಯಿಂದ ಬರುವ ಹಣವನ್ನು ಆ ಪ್ರಾಣಿಗಳ ಉಳಿದ ಸಂತತಿಯ ಸಂರಕ್ಷಣೆಗಾಗಿ ಬಳಸಲಾಗು ತ್ತದೆ. ಅಮೇರಿಕಾ ಮತ್ತು ಯುರೋಪ್‌ನಲ್ಲಿ ಕಾಡು ಕುದುರೆಗಳು ಮತ್ತು ಜಿಂಕೆಗಳ ಸಂತತಿ ನಿಯಂತ್ರಿಸಲು ಗರ್ಭನಿರೋಧಕ ಚುಚ್ಚುಮದ್ದನ್ನು ನೀಡುವ ಪದ್ಧತಿ ಯಶಸ್ವಿಯಾಗಿ ಚಾಲ್ತಿ ಯಲ್ಲಿದೆ.

ಜತೆಗೆ ಜಿಂಕೆ ಮತ್ತು ಕರಡಿಗಳ ಸಂಖ್ಯೆ ನಿಯಂತ್ರಣಕ್ಕೆ ನಿರ್ದಿಷ್ಟ ಋತುಮಾನಗಳಲ್ಲಿ ಬೇಟೆಯಾ ಡಲು ಪರವಾನಗಿ ನೀಡಲಾಗುತ್ತದೆ. ಆಸ್ಟ್ರೇಲಿಯಾ ತನ್ನ ರಾಷ್ಟ್ರ ಪ್ರಾಣಿಯಾದ ಕಾಂಗರೂಗಳ ಸಂಖ್ಯೆ ಮಿತಿಮೀರಿದಾಗ, ಅವು ಹುಲ್ಲುಗಾವಲುಗಳನ್ನು ಮತ್ತು ಪರಿಸರ ವ್ಯವಸ್ಥೆಯನ್ನು ನಾಶಪಡಿಸುತ್ತವೆ ಎಂಬ ಕಾರಣಕ್ಕೆ ಪ್ರತಿ ವರ್ಷ ಲಕ್ಷಾಂತರ ಕಾಂಗರೂಗಳನ್ನು ವ್ಯವಸ್ಥಿತವಾಗಿ ನಿಯಂತ್ರಣಕ್ಕೆ ಒಳಪಡಿಸಲಾಗುತ್ತದೆ.

ಆಸ್ಟ್ರೇಲಿಯಾದಲ್ಲಿ ಕಾಂಗರೂ ಮಾಂಸ ಮತ್ತು ಚರ್ಮವನ್ನು ಮಾರಾಟ ಮಾಡುವ ದೊಡ್ಡ ಉದ್ಯಮವೇ ಇದೆ. ನಮ್ಮ ದೇಶದಲ್ಲಿ ಬೇಟೆಯಾಡುವುದು ಸಂಪೂರ್ಣ ಕಾನೂನುಬಾಹಿರ ವಾಗಿದ್ದರೂ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಚಿರತೆಗಳ ಸಂಖ್ಯೆ ನಿಯಂತ್ರಿಸಲು ಸಂತಾನಹರಣ ಚಿಕಿತ್ಸೆ ನೀಡುವ ಯೋಜನೆಗಳನ್ನು ರೂಪಿಸಲಾಗಿದೆ. ಹಿಮಾಚಲ ಪ್ರದೇಶದಲ್ಲಿ ಕೋತಿಗಳ ಸಂಖ್ಯೆ ನಿಯಂತ್ರಿಸಲು ಸಾಮೂಹಿಕ ಸಂತಾನಶಕ್ತಿ ಹರಣ ಚಿಕಿತ್ಸೆ ನಡೆಸಲಾಗಿದೆ.

ಸಂತಾನಶಕ್ತಿಹರಣದ ಉದ್ದೇಶ ವನ್ಯಜೀವಿಗಳ ನಿರ್ಮೂಲನೆ ಅಲ್ಲ; ಬದಲಿಗೆ ಪರಿಸರ ಸಮತೋಲನ ಮತ್ತು ಮಾನವ ಜೀವಗಳ ರಕ್ಷಣೆಗಾಗಿ ಆಯ್ದ ವನ್ಯಮೃಗಗಳ ಅತಿವೇಗದ ಸಂತತಿ ಹೆಚ್ಚಳವನ್ನು ನಿಯಂತ್ರಿಸುವ ಆರೋಗ್ಯಕರ ಕ್ರಮವಷ್ಟೇ. ಆನೆ ನಮ್ಮ ಸಾಂಸ್ಕೃತಿಕ ಪ್ರಾತಿನಿಧ್ಯದ ಹಾಗೂ ಪರಿಸರದ ಅವಿಭಾಜ್ಯ ಅಂಗ. ಅವುಗಳನ್ನು ಒಂದು ಕಾಡಿನಿಂದ ಮತ್ತೊಂದು ಕಾಡಿಗೆ ಅಟ್ಟಾಡಿಸುವುದರಿಂದ ಮನುಷ್ಯನೂ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ, ಮೂಕ ಪ್ರಾಣಿಗಳೂ ಬದುಕಲಾರವು.

ಆನೆಗಳನ್ನು ಸೆರೆ ಹಿಡಿದು ಪಕ್ಕದ ಜಿಲ್ಲೆಗೆ ಸ್ಥಳಾಂತರಿಸುವ ಆತುರದ ನಿರ್ಧಾರದ ಜತೆಗೆ, ಪರಿಸರ ತಜ್ಞರು, ಸ್ಥಳೀಯ ರೈತರು ಮತ್ತು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಂದು ಸಮಗ್ರ, ವೈಜ್ಞಾನಿಕ ಮತ್ತು ಮಾನವೀಯ ಶಾಶ್ವತ ಆನೆ ನಿರ್ವಹಣಾ ನೀತಿಯನ್ನು ರೂಪಿಸಬೇಕಿದೆ. ಇಲ್ಲದಿದ್ದರೆ, ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಸಾಗುವ ಈ ಆನೆಗಳ ಸ್ಥಳಾಂತರದ ಸರಮಾಲೆಯು ಮತ್ತಷ್ಟು ಸಮಸ್ಯೆಗೆ ದಾರಿ ಮಾಡಿಕೊಡಬಹುದು.