ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ಇರಾನಿನಲ್ಲಿ ಸಂಸ್ಕೃತ

ಇರಾನ್‌ನ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ ಕಲಿಕೆ ಮತ್ತು ಸಂಶೋಧನೆಗೆ ದಶಕಗಳ ಇತಿಹಾಸವಿದೆ. ಇರಾನ್ ಮತ್ತು ಭಾರತ ನೆರೆಹೊರೆಯ ರಾಷ್ಟ್ರಗಳಲ್ಲ. ಆದರೆ, ಇವುಗಳ ಭಾಷಾ ಮೂಲ ವೂ ಒಂದೇ. ಸಂಸ್ಕೃತ ಮತ್ತು ಪ್ರಾಚೀನ ಪರ್ಷಿಯನ್ ಭಾಷೆಯಾದ ‘ಅವೆಸ್ತಾನ್’ ನಡುವೆ ಅವಿನಾಭಾವ ಸಂಬಂಧವಿದೆ.

Vishweshwar Bhat Column: ಇರಾನಿನಲ್ಲಿ ಸಂಸ್ಕೃತ

-

ಸಂಪಾದಕರ ಸದ್ಯಶೋಧನೆ

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ತಾವು ಇರಾನಿನ ಮುಖ್ಯಸ್ಥ ಅಯತೊಲ್ಲಾ ಖಮೇನಿ ಅವರನ್ನು ಭೇಟಿ ಮಾಡಿದಾಗ, ಪರ್ಷಿಯನ್ ಭಾಷೆಯ ಮೂಲ ಸಂಸ್ಕೃತವೆಂದೂ, ಇರಾನಿನ ಹದಿಮೂರು ವಿಶ್ವವಿದ್ಯಾಲಯಗಲ್ಲಿ ಸಂಸ್ಕೃತವನ್ನು ಕಲಿಸಲಾಗುತ್ತಿದೆಯೆಂದು ಖಮೇನಿ ಹೇಳಿದ್ದ ರೆಂದೂ ಇತ್ತೀಚೆಗೆ ಹೇಳಿದ್ದನ್ನು ಗಮನಿಸಿರಬಹುದು. ಇರಾನ್ ಮತ್ತು ಭಾರತದ ನಡುವಿನ ಸಾಂಸ್ಕೃತಿಕ ಸಂಬಂಧವು ಸಾವಿರಾರು ವರ್ಷಗಳಷ್ಟು ಹಳೆಯದು.

ಇರಾನ್‌ನ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ ಕಲಿಕೆ ಮತ್ತು ಸಂಶೋಧನೆಗೆ ದಶಕಗಳ ಇತಿಹಾಸವಿದೆ. ಇರಾನ್ ಮತ್ತು ಭಾರತ ನೆರೆಹೊರೆಯ ರಾಷ್ಟ್ರಗಳಲ್ಲ. ಆದರೆ, ಇವುಗಳ ಭಾಷಾ ಮೂಲವೂ ಒಂದೇ. ಸಂಸ್ಕೃತ ಮತ್ತು ಪ್ರಾಚೀನ ಪರ್ಷಿಯನ್ ಭಾಷೆಯಾದ ‘ಅವೆಸ್ತಾನ್’ ನಡುವೆ ಅವಿನಾಭಾವ ಸಂಬಂಧವಿದೆ.

ಸಂಸ್ಕೃತದ ಹೋತೃ ‘ಅವೆಸ್ತಾದಲ್ಲಿ ಜೋತೃ’ ಆಗುತ್ತದೆ, ಸಂಸ್ಕೃತದ ‘ಸಪ್ತ’ ಪರ್ಷಿಯನ್‌ನಲ್ಲಿ ‘ಹಫ್ತ’ ಆಗುತ್ತದೆ. ಈ ಭಾಷಾ ಸಾಮ್ಯತೆಯೇ ಇರಾನಿನ ವಿದ್ವಾಂಸರಿಗೆ ಸಂಸ್ಕೃತದ ಮೇಲೆ ಆಸಕ್ತಿ ಮೂಡಲು ಮುಖ್ಯ ಕಾರಣ.

ಇರಾನ್‌ನಲ್ಲಿ ಸಂಸ್ಕೃತವನ್ನು ಕೇವಲ ಒಂದು ಭಾಷೆಯಾಗಿ ನೋಡುವುದಿಲ್ಲ, ಬದಲಿಗೆ ಅದನ್ನು ಪ್ರಾಚೀನ ಜ್ಞಾನದ ಭಂಡಾರವಾಗಿ ನೋಡಲಾಗುತ್ತದೆ. ತೆಹ್ರಾನ್ ವಿಶ್ವವಿದ್ಯಾಲಯ ಇರಾನ್‌ನ ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾಲಯ. ಇಲ್ಲಿನ ‘ಫ್ಯಾಕಲ್ಟಿ ಆಫ್ ಲಿಟರೇಚರ್ ಅಂಡ್ ಹ್ಯೂಮ್ಯಾನಿ ಟೀಸ್’ ವಿಭಾಗದಲ್ಲಿ ದಶಕಗಳಿಂದ ಸಂಸ್ಕೃತವನ್ನು ಕಲಿಸಲಾಗುತ್ತಿದೆ. ‌

ಇದನ್ನೂ ಓದಿ: Vishweshwar Bhat Column: ನಾಯಿಗೆ ತತ್ವಶಾಸ್ತ್ರ ಹೇಳುವುದು ಹೇಗೆ ?

ಇಲ್ಲಿ ಭಾರತೀಯ ದರ್ಶನ ಶಾಸ್ತ್ರ ಮತ್ತು ಸಂಸ್ಕೃತ ಸಾಹಿತ್ಯದ ಮೇಲೆ ವಿಶೇಷ ಅಧ್ಯಯನಗಳು ನಡೆಯುತ್ತಿವೆ. ಇಮಾಮ್ ಖೊಮೇನಿ ಇಂಟರ್‌ನ್ಯಾಷನಲ್ ಯೂನಿವರ್ಸಿಟಿಯಲ್ಲಿ ತುಲನಾತ್ಮಕ ಧರ್ಮಶಾಸ ಮತ್ತು ಭಾಷಾ ವಿಭಾಗಗಳಲ್ಲಿ ಸಂಸ್ಕೃತಕ್ಕೆ ಆದ್ಯತೆ ಇದೆ. ಅಡಿವಾನ್ ಯುನಿವರ್ಸಿಟಿ ಆಫ್ ರಿಲಿಜಿಯ ಅಂಡ್ ಡಿನೋಮಿನೇಷ (ಕುಮ್) ಇರಾನ್‌ನ ಧಾರ್ಮಿಕ ನಗರವಾದ ಕುಮನ‌ ಲ್ಲಿರುವ ಈ ವಿಶ್ವವಿದ್ಯಾಲಯದಲ್ಲಿ ಹಿಂದೂ ಧರ್ಮ ಮತ್ತು ಸಂಸ್ಕೃತದ ಬಗ್ಗೆ ಆಳವಾದ ಸಂಶೋಧನೆಗಳು ನಡೆಯುತ್ತಿವೆ.

ಮುಸ್ಲಿಂ ವಿದ್ವಾಂಸರು ಉಪನಿಷತ್ತುಗಳನ್ನು ಮತ್ತು ವೇದಗಳನ್ನು ಸಂಸ್ಕೃತ ಮೂಲದಿಂದಲೇ ಅರ್ಥೈಸಿಕೊಳ್ಳಲು ಇಲ್ಲಿ ಶ್ರಮಿಸುತ್ತಿದ್ದಾರೆ. ಇರಾನ್‌ನಲ್ಲಿ ಸಂಸ್ಕೃತದ ಬಗ್ಗೆ ಒಲವು ಹೆಚ್ಚಾಗಲು ಮೊಘಲ್ ರಾಜಕುಮಾರ ದಾರಾ ಶಿಕೋಹ್ ಪ್ರಮುಖ ಕಾರಣ. ಆತ ಉಪನಿಷತ್ತುಗಳನ್ನು ಪರ್ಷಿಯನ್ ಭಾಷೆಗೆ ‘ಸಿರ್-ಎ-ಅಕ್ಬರ್’ (ಮಹಾ ರಹಸ್ಯ) ಎಂಬ ಹೆಸರಿನಲ್ಲಿ ಅನುವಾದಿಸಿದ್ದ. ಈ ಅನುವಾದವು ಪರ್ಷಿಯನ್ ವಿದ್ವಾಂಸರಿಗೆ ಭಾರತೀಯ ತತ್ತ್ವಶಾಸ್ತ್ರದ ಬಾಗಿಲನ್ನು ತೆರೆಯಿತು.

ಇಂದಿಗೂ ಇರಾನಿನ ಸಂಶೋಧಕರು ಸೂಫಿ ತತ್ವ ಮತ್ತು ವೇದಾಂತದ ನಡುವಿನ ಸಾಮ್ಯತೆಯನ್ನು ಹುಡುಕಲು ಸಂಸ್ಕೃತವನ್ನು ಕಲಿಯುತ್ತಾರೆ. ಇರಾನ್‌ನಲ್ಲಿ ಸಂಸ್ಕೃತ ಕಲಿಕೆಯು ಮೂರು ಮುಖ್ಯ ಉದ್ದೇಶಗಳನ್ನು ಹೊಂದಿದೆ. ಇಂಡೋ-ಇರಾನಿಯನ್ ಭಾಷಾ ಮೂಲವನ್ನು ಅರ್ಥ ಮಾಡಿ ಕೊಳ್ಳಲು ಸಂಸ್ಕೃತ ಅನಿವಾರ್ಯ. ಹಾಗೆಯೇ ಉಪನಿಷತ್ತು, ಭಗವದ್ಗೀತೆ ಮತ್ತು ಶಂಕರರ ಅದ್ವೈತ ಸಿದ್ಧಾಂತಕ್ಕೂ, ಇರಾನಿನ ‘ಇರ್ಫಾನ್’ (ಸೂಫಿ ಜ್ಞಾನಮಾರ್ಗ) ಪರಂಪರೆಗೂ ಇರುವ ನಂಟು ಅಧ್ಯಯನ ಮಾಡಲು ಹಾಗೂ ಆಯುರ್ವೇದ ಮತ್ತು ಪ್ರಾಚೀನ ಗಣಿತದ ಪಠ್ಯಗಳನ್ನು ಅಭ್ಯಸಿಸಲು ಇದು ಬೇಕೇ ಬೇಕು.

ತೆಹ್ರಾನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿದ್ದ ಡಾ.ಮೊಹಮ್ಮದ್ ಅಲಿ ಅಝರ್ ಶಬ್ ಮತ್ತು ಅಂಥ ಅನೇಕ ವಿದ್ವಾಂಸರು ಸಂಸ್ಕೃತ ಮತ್ತು ಪರ್ಷಿಯನ್ ನಡುವಿನ ಸೇತುವೆಯಾಗಿ ಕೆಲಸ ಮಾಡಿದ್ದಾರೆ. ಅಲ್ಲಿನ ವಿದ್ಯಾರ್ಥಿಗಳು ಸಂಸ್ಕೃತ ಶ್ಲೋಕಗಳನ್ನು ಲೀಲಾಜಾಲವಾಗಿ ಹೇಳುವುದನ್ನು ಕೇಳುವುದೇ ಒಂದು ಸೊಬಗು.

ಭಾರತ ಸರಕಾರದ ಐಸಿಸಿಆರ್ ಕೂಡ ಇರಾನ್‌ನ ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತ ಪೀಠಗಳನ್ನು ಸ್ಥಾಪಿಸಲು ಸಹಕರಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ಕ್ರಾಂತಿಯಿಂದಾಗಿ ಆನ್ಲೈನ್ ಮೂಲಕ ಸಂಸ್ಕೃತ ಕಲಿಯುವ ಇರಾನಿ ಯುವಕರ ಸಂಖ್ಯೆ ಹೆಚ್ಚಾಗಿದೆ. ಆದರೆ, ರಾಜಕೀಯ ಕಾರಣ ಗಳಿಂದಾಗಿ ಕೆಲವು ಬಾರಿ ಶೈಕ್ಷಣಿಕ ವಿನಿಮಯಕ್ಕೆ ಅಡೆತಡೆಗಳು ಉಂಟಾಗುತ್ತವೆ.

ಆದರೂ, ಸಂಸ್ಕೃತವು ಇರಾನಿನ ಅಕಾಡೆಮಿಕ್ ವಲಯದಲ್ಲಿ ಗೌರವಾನ್ವಿತ ಸ್ಥಾನವನ್ನು ಉಳಿಸಿ ಕೊಂಡಿದೆ. ಇರಾನ್‌ನಲ್ಲಿ ಸಂಸ್ಕೃತವು ಕೇವಲ ಒಂದು ವಿದೇಶಿ ಭಾಷೆಯಲ್ಲ, ಅದು ಅವರ ಸ್ವಂತ ಇತಿಹಾಸದ ಒಂದು ಭಾಗವೆಂಬಂತೆ ನೋಡಲಾಗುತ್ತದೆ. ಭಾರತದ ಸಂಸ್ಕೃತಿಯನ್ನು ಅರಿಯಲು ಸಂಸ್ಕೃತವೇ ಕನ್ನಡಿ ಎಂಬುದು ಅಲ್ಲಿನ ವಿದ್ವಾಂಸರ ಬಲವಾದ ನಂಬಿಕೆ.