Gururaj Gantihole Column: ಕರಾವಳಿಯ ಬೇಲೂರು-ಬೈಂದೂರಿನ ಸೇನೇಶ್ವರ ದೇಗುಲ !
ಕರಾವಳಿ ಪ್ರದೇಶದ ದೇವಾಲಯಗಳು ಸಾಮಾನ್ಯವಾಗಿ 8ನೇ ಶತಮಾನದಿಂದ 16ನೇ ಶತಮಾನ ಗಳವರೆಗೆ ನಿರ್ಮಾಣ ವಿಧಾನ ಹಾಗೂ ವಾಸ್ತುಶಿಲ್ಪ ಶಾಸ್ತ್ರೀಯ ಅಂಶಗಳನ್ನು ಹೊಂದಿವೆ. ಇಲ್ಲಿನ ದೇವಾಲಯಗಳ ಸ್ಥಾಪನೆಯು ಪ್ರಾಚೀನದಿಂದ ವಿಜಯನಗರ ಹಾಗೂ ನಂತರದ ಕಾಲಘಟ್ಟದವರೆಗೆ ವ್ಯಾಪಿಸಿರುವುದು ಕಂಡುಬರುತ್ತದೆ.

-

ಗಂಟಾಘೋಷ
ಕೊರೋನ ಕಾಲಘಟ್ಟವನ್ನು ದಾಟಿದ ಮೇಲೆ, ಪ್ರಪಂಚದಾದ್ಯಂತ ಪ್ರವಾಸೋದ್ಯಮ ಹೆಚ್ಚು ಗರಿಗೆದರಿತು. ತೀರ್ಥಯಾತ್ರೆ ಎಂಬುದು ನಮ್ಮ ಜನರ ಜೀವನದ ಒಂದು ಸಹಜ ಭಾಗವೇ ಆಗಿದೆ. ದೇಶದಲ್ಲಿ ಇದು ಇನ್ನೂ ಹೆಚ್ಚು ಬೆಳೆಯತೊಡಗಿದಾಗ, ದೇಶಾದ್ಯಂತ ಪ್ರವಾಸೋದ್ಯಮಕ್ಕೆ ಹಾಗೂ ಆಯಾ ಜಿ ಹಾಗೂ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವಂತಹ ಪ್ರೇಕ್ಷಣೀಯ, ಆಧ್ಯಾತ್ಮಿಕ, ಐತಿಹಾಸಿಕ ದೇಗುಲ ಕ್ಷೇತ್ರಗಳ ದರ್ಶನ ಕೈಗೊಳ್ಳಲು ಅನುಕೂಲವಾಗುವ ದೃಷ್ಟಿಯಿಂದ ಧಾರ್ಮಿಕ ಪ್ರವಾಸೋ ದ್ಯಮ ( Temple tourism ) ಎಂಬ ಪರಿಕಲ್ಪನೆಯನ್ನು 2014ರಲ್ಲಿ ಕೇಂದ್ರ ಸರಕಾರ ಪರಿಚಯಿಸಿತು.
ಪ್ರಸಾದ್ ( PRASAD-Pilgrimage Rejuvenation and Spiritual Augmentation Drive ) ಮತ್ತು ಸ್ವದೇಶ ದರ್ಶನ ( Swadesh Darshan ) ಯೋಜನೆಗಳ ನೆರವಿನಿಂದ ದೇವಾಲಯ ಪ್ರವಾಸೋದ್ಯಮ ಯೋಜನೆಗಳ ಮೂಲಕ ಪಕ್ಕದ ಆಂಧ್ರಪ್ರದೇಶ ರಾಜ್ಯವು ತನ್ನ ಪ್ರಮುಖ ತೀರ್ಥಕ್ಷೇತ್ರಗಳು ಮತ್ತು ಹೆರಿಟೇಜ್ ಕ್ಷೇತ್ರಗಳಲ್ಲಿ ಮೂಲಸೌಕರ್ಯ, ಸಂಪರ್ಕಮಾರ್ಗ ಹಾಗೂ ಯಾತ್ರಿಕರ ನಿವಾಸಸ್ಥಾನ ಗಳನ್ನು ಸಮರ್ಪಕವಾಗಿ ಒದಗಿಸುವ ಮೂಲಕ ಈ ಯೋಜನೆ ಯನ್ನು ಅತ್ಯಂತ ಯಶಸ್ವಿಯಾಗಿ ಸದುಪಯೋಗ ಪಡಿಸಿಕೊಳ್ಳುತ್ತಿದೆ.
ಉಳಿದ ರಾಜ್ಯಗಳು ಇದರಲ್ಲಿ ಹೆಚ್ಚು ಆಸಕ್ತಿ ತೋರುತ್ತಿವೆ. ಕಬ್ಬಿಣದ ಬೃಹತ್ ಐಫೆಲ್ ಟವರ್ ಒಂದನ್ನು ಇಟ್ಟುಕೊಂಡು, ವಿಶ್ವ ಪ್ರವಾಸೋದ್ಯಮದಲ್ಲಿ ತನ್ನ ಅಗ್ರಸ್ಥಾನ ಕಾಯ್ದುಕೊಂಡಿರುವ ಫ್ರಾನ್ಸ್ ದೇಶವನ್ನು ಗಮನಿಸಿದಾಗ, ನಾವು ನಮ್ಮ ಸುತ್ತಮುತ್ತಲಿರುವ ನಮ್ಮದೇ ಪೂರ್ವಜರ ಐತಿಹಾಸಿಕ ದಾಖಲೆಗಳಂತೆ ತಲೆಯೆತ್ತಿ ನಿಂತಿರುವ ದೇವಾಲಯ, ಶಿಲ್ಪಕಲಾ ಪರಂಪರೆಯನ್ನು ಗುರುತಿಸಿ ಗೌರವಿಸುವುದನ್ನು ಮತ್ತು ಅದನ್ನು ಪ್ರವಾಸೋದ್ಯಮದ ಪ್ರಮುಖ ಭಾಗವಾಗಿ ಜೋಡಿಸಿ ಕೊಳ್ಳುವುದನ್ನು ಮರೆಯುತ್ತಿದ್ದೇವೆ.
ಇದನ್ನೂ ಓದಿ: Gururaj Gantihole Column: ಬೆನ್ನುಮೂಳೆ ಮುರಿದರೂ ಸಮಾಜಕ್ಕೆ ಬೆನ್ನೆಲುಬಾದ ವಿನಾಯಕ ರಾವ್
ಕೇಂದ್ರ ಸರಕಾರದದ ಯೋಜನೆಗಳು ಜನಪರವಾಗಿದ್ದರೂ ಸ್ಥಳೀಯ ವ್ಯವಸ್ಥೆಯು ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳದಿದ್ದರೆ ಸ್ಮಾರಕಗಳು ಉಳಿಯುವ ಬಗೆಯಾದರೂ ಹೇಗೆ? ಎಂಬು ದನ್ನು ನಾವೆಲ್ಲ ಪ್ರಶ್ನಿಸಿಕೊಳ್ಳಬೇಕಾಗಿದೆ. ಇಂತಹ ವಿಚಾರದಲ್ಲಿ ನಮ್ಮ ಕರಾವಳಿ ಭಾಗವು ಇಡೀ ರಾಜ್ಯದ ವಿಭಿನ್ನ ಮತ್ತು ವಿಶಿಷ್ಟವಾಗಿ ನಿಲ್ಲುತ್ತದೆ. ಸಮರ್ಪಕ ರಾಷ್ಟ್ರೀಯ ಹೆದ್ದಾರಿಗಳು ಇಲ್ಲಿನ ಎಲ್ಲ ಪ್ರಮುಖ ದೇಗುಲ, ಪ್ರೇಕ್ಷಣೀಯ ಸ್ಥಳಗಳನ್ನು ಜೋಡಿಸುತ್ತವೆ.
ವಿಮಾನ ಯಾನ, ರಸ್ತೆಸಾರಿಗೆ, ರೈಲುನಿಲ್ದಾಣಗಳಂತಹ ಸೌಕರ್ಯಗಳ ಮೂಲಕ ಕರ್ನಾಟಕದ ಕರಾವಳಿ ಪ್ರದೇಶವು ರಾಷ್ಟ್ರಮಟ್ಟದ ಧಾರ್ಮಿಕ ಪ್ರವಾಸೋದ್ಯಮದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆಯುವಷ್ಟು ಸಾಮರ್ಥ್ಯ ಹೊಂದಿದೆ. ಕೊಲ್ಲೂರು ಮೂಕಾಂಬಿಕಾ ದೇವಾಲಯ ದೇಶದ ಹಲವೆಡೆಗಳಿಂದ ಭಕ್ತರನ್ನು ಸೆಳೆಯುವ ಮೂಲಕ ರಾಜ್ಯ, ಅಂತರಾಜ್ಯ ಶಕ್ತಿ ಕ್ಷೇತ್ರವಾಗಿ ಗುರುತಿಸಿ ಕೊಂಡಿದ್ದರೆ, ಬೈಂದೂರಿನ ಇತಿಹಾಸ ಪ್ರಸಿದ್ಧ ಸೋಮೇಶ್ವರ ದೇವಸ್ಥಾನ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಇಂತಹ ಒಂದು ಐತಿಹಾಸಿಕ, ನಾಡಿನ ದೇವಾಲ ಯಗಳ ಶಿಲ್ಪಕಲೆಯ ವಿಶಿಷ್ಟ ಸ್ಥಾನ ಹೊಂದಿರುವ ಬೈಂದೂರಿನ ಮತ್ತೊಂದು ಐತಿಹಾಸಿಕ ಸೇನೇಶ್ವರ ದೇವಸ್ಥಾನ ಈ ಸಾಲಿಗೆ ಸೇರುತ್ತದೆ. ಬೆರಗಿನ ಶಿಲಕ್ಪಕಲೆಯ ವಿನ್ಯಾಸ ಹೊಂದಿರುವ ಈ ದೇಗುಲವು ಧಾರ್ಮಿಕ ಪ್ರವಾಸೋದ್ಯಮಕ್ಕೆ ( Temple tourism ) ಹೇಳಿ ಮಾಡಿಸಿದ ದೇವಾಲಯಗಳಲ್ಲಿ ಇದೂ ಒಂದಾಗಿದೆ ಎಂದರೆ ಅತಿಶಯೋಕ್ತಿಯಾಗ ಲಾರದು!

ಕರ್ನಾಟಕದೊಳಗೆ ಕರಾವಳಿ ತೀರ ಎಂದರೆ ಕಿನಾರಾ ಜಿಲ್ಲೆ(ಕೆನರಾ)ಗಳಾದ ಉತ್ತರಕನ್ನಡ, ಅವಿಭಜಿತ ದಕ್ಷಿಣ ಕನ್ನಡಗಳನ್ನೊಳಗೊಂಡ ಪ್ರದೇಶದಲ್ಲಿ ಈ ಬೈಂದೂರು ಸೀಮೆಯು ಸರ್ವತೋ ಮುಖ ವಿಕಾಸದ ಅಗತ್ಯ ಮತ್ತು ಸಾಧ್ಯತೆಯನ್ನು ಹೊಂದಿರುವ ಬಗ್ಗೆ ಈಗ ಜಾಗೃತಿ ಮೂಡಿದೆ. ಈ ಸೀಮೆಯ ಮುಖ್ಯ ಸ್ಥಳ ಬೈಂದೂರು, ಯಡ್ತರೆ ಗ್ರಾಮದ ವ್ಯಾಪ್ತಿಯಲ್ಲಿದ್ದು ಈಗ ತಾಲೂಕಿನ ಆಡಳಿತ ಕೇಂದ್ರವಾಗಿದೆ.
ಒಂದೇ ಗ್ರಾಮದಲ್ಲಿ 40-50 ದೇವ-ದೈವ ಸ್ಥಾನಗಳಿರುವ ಗರಿಮೆ ಈ ಕ್ಷೇತ್ರದ್ದು. ಬೈಂದೂರು ಪೇಟೆಯ ನಾಲ್ಕೈದು ಮಹಿಮಾನ್ವಿತ ದೇವಾಲಯಗಳಿವೆ. ಅವುಗಳಲ್ಲಿ ಕಿರೀಟ ಪ್ರಾಯವಾದುದು ಊರಿನ ಹೃದಯಸ್ಥಾನ ಎನಿಸಿದ ಸೇನೇಶ್ವರ ದೇವಸ್ಥಾನ. ಬಿಂದು ಮುನಿಯ ಕ್ಷೇತ್ರವಾಗಿ ಬಿಂದುಪುರ ಎಂದು ಹೆಸರು ಇತ್ತು. ಜನಭಾಷೆಯಲ್ಲಿ ಬೈಂದೂರು ಆಯಿತಂತೆ.
ಶಾಸನ ಮತ್ತು ಇತರ ಬರಹಗಳಲ್ಲಿ ಬೈದೂರು, ಬಯಿದೂರು, ಬಯ್ದೂರು ಎಂದಾಗಿರುವುದೂ ಇದೆ. ಕರ್ನಾಟಕದ ವಾಸ್ತುಶಿಲ್ಪವು ಭಾರತೀಯ ವಾಸ್ತುಶಿಲ್ಪದಲ್ಲಿ ಅತ್ಯಂತ ಮಹತ್ವಪೂರ್ಣ ಪಾತ್ರ ವಹಿಸಿದ್ದು, ತನ್ನ ವೈವಿಧ್ಯಮಯ ಶೈಲಿಗಳು ಮತ್ತು ಭವ್ಯ ದೇವಾಲಯಗಳ ಮೂಲಕ ಶಿಲ್ಪಕಲೆಯ ಪರಂಪರೆಯನ್ನು ಇವತ್ತಿಗೂ ಕಲಾ ಶ್ರೀಮಂತಿಕೆಯಲ್ಲಿ ಜೀವಂತವಾಗಿರಿಸಿದೆ.
ಶಿಲ್ಪಕಲಾ ಪ್ರಕಾರಗಳು ಕರ್ನಾಟಕದ ವಿವಿಧ ಕಾಲಘಟ್ಟಗಳ ರಾಜವಂಶಗಳ ಬಲ ಮತ್ತು ಸಾಂಸ್ಕೃ ತಿಕ ಹಿನ್ನಲೆಯಲ್ಲಿ ರೂಪುಗೊಂಡಿವೆ. ಪ್ರತಿ ಶೈಲಿಗೂ ವಿಭಿನ್ನ ವಿನ್ಯಾಸ, ಶಿಲ್ಪ, ಗೊಪುರ ಅಥವಾ ಶಿಲ್ಪಕಲಾ ವೈಶಿಷ್ಟ್ಯವಿದೆ. ಕದಂಬ ಶೈಲಿ, ಚಾಲುಕ್ಯ ಶೈಲಿ, ರಾಷ್ಟ್ರಕೂಟ ಶೈಲಿ, ಹೊಯ್ಸಳ ಶೈಲಿ, ಚೋಳ ಶೈಲಿಗಳು ಕರ್ನಾಟಕದ ಪ್ರಮುಖ ಶಿಲ್ಪಕಲಾ ಪ್ರಕಾರಗಳಾಗಿವೆ.
ಕರ್ನಾಟಕ ರಾಜ್ಯದ ಅಪರೂಪವೆಂಬಂತೆ ಕಂಡುಬರುವ ಶಿಲ್ಪಕಲಾ ಶೈಲಿಯಲ್ಲಿ ಐತಿಹಾಸಿಕ ದೇಗುಲಗಳನ್ನು ನಿರ್ಮಿಸಲ್ಪಟ್ಟಿದ್ದು ಕರಾವಳಿ ಪ್ರದೇಶದಲ್ಲಿ ಮಾತ್ರ. ಸ್ಥಳೀಯ ಪರಂಪರೆ, ಭೌಗೋಳಿಕ ವೈಶಿಷ್ಟ್ಯಗಳಿಂದ ಕೂಡಿರುವ ಕರಾವಳಿ ಪ್ರದೇಶದ ವಾತಾವರಣವೂ ಇತರೆ ಪ್ರದೇಶ ಗಳಿಗಿಂತ ಭಿನ್ನವಾಗಿರುವುದರಿಂದ, ಕಟ್ಟಡ ನಿರ್ಮಾಣ ಮಾಡುವಾಗ ವಿಶೇಷ ಕಾಳಜಿ, ಪದ್ಧತಿ ಯನ್ನು ಅನುಸರಿಸಲಾಗುತ್ತದೆ.
ಕರಾವಳಿ ಪ್ರದೇಶದ ದೇವಾಲಯಗಳು ಸಾಮಾನ್ಯವಾಗಿ 8ನೇ ಶತಮಾನದಿಂದ 16ನೇ ಶತಮಾನ ಗಳವರೆಗೆ ನಿರ್ಮಾಣ ವಿಧಾನ ಹಾಗೂ ವಾಸ್ತುಶಿಲ್ಪ ಶಾಸ್ತ್ರೀಯ ಅಂಶಗಳನ್ನು ಹೊಂದಿವೆ. ಇಲ್ಲಿನ ದೇವಾಲಯಗಳ ಸ್ಥಾಪನೆಯು ಪ್ರಾಚೀನದಿಂದ ವಿಜಯನಗರ ಹಾಗೂ ನಂತರದ ಕಾಲಘಟ್ಟದವರೆಗೆ ವ್ಯಾಪಿಸಿರುವುದು ಕಂಡುಬರುತ್ತದೆ.
ಕುಂಬಾಶಿ, ಕೋಟೇಶ್ವರ ದೇವಾಲಯಗಳು ಸೇರಿದಂತೆ ಹಳೆಯ ದೇವಾಲಯಗಳು 8-10ನೇ ಶತಮಾನ ಗಳಲ್ಲಿ ನಿರ್ಮಾ ಣಗೊಂಡಿವೆ. ಕೆಲವು ದೇವಾಲಯಗಳು 12ನೇ ಶತಮಾನ ಮತ್ತು ಮುಂದೆ ಪಾಳೆಯ ಗಾರರ ಕಾಲದಲ್ಲಿ ಅಭಿವೃದ್ಧಿಗೊಂಡವು ಎಂದು ಇತಿಹಾಸಕಾರರು ಊಹಿಸಿದ್ದಾರೆ.
ವೈವಿಧ್ಯಮಯ ನಾಮಾಂಕಿತ, ವಿಶಿಷ್ಟ ವಿಗ್ರಹಗಳ ರಚನೆಯನ್ನು ಹೊಂದಿರುವ ಮೂಲಕ, ಪರಶುರಾಮ ಕ್ಷೇತ್ರದ ಶಿಲ್ಪಕಲಾ ಕೌಶಲದ ಒಂದು ಉತ್ಕೃಷ್ಟ ಮಾದರಿಯಾಗಿ ನಿಂತಿದೆ ಸೇನೇಶ್ವರ ದೇವಾಸ್ಥಾನ. ಚಾರಿತ್ರಿಕವಾಗಿ ಕ್ರಿ. ಶ.10-11ನೇ ಶತಮಾನದ ಕಲ್ಯಾಣ ಚಾಲುಕ್ಯ ಶೈಲಿಯ ಶಿಲ್ಪವೆಂದು ಗುರುತಿಸಲಾಗಿರುವ ಮಂದಿರದ ನಿರ್ಮಾಣ ಕಾಲ ಮಾತ್ರವಲ್ಲದೆ, ಕುಸುರಿ ಶಿಲ್ಪದ ದೃಷ್ಟಿ ಯಿಂದಲೂ ಕರಾವಳಿ ಕರ್ನಾಟಕದ ಮೊದಲ ಸ್ಥಾನದ್ದು ಎಂದು ಶಿಲ್ಪಕಲಾ ಇತಿಹಾಸಜ್ಞರು ಗುರುತಿಸಿದ್ದಾರೆ.
ಪಕ್ಕದ ಗೋವಾದಿಂದ ಕೇರಳದ ತಿರುವನಂತಪುರದವರೆಗೆ ಸಾವಿರಾರು ದೇಗುಲಗಳಿದ್ದರೂ ರಚನಾ ಶೈಲಿ ಹೊಂದಿರುವ ಮತ್ತು ಸೇನೇಶ್ವರ ದೇವಸ್ಥಾನಕ್ಕೆ ಸಮನಾದ ಬೇರೊಂದು ದೇಗುಲಗಳಿಲ್ಲ ಎನ್ನುವುದು ಬೈಂದೂರು ಕ್ಷೇತ್ರಕ್ಕೆ ಮತ್ತು ಸ್ಥಳೀಯವಾಗಿ ನಮ್ಮೆಲ್ಲರಿಗೆ ಹೆಮ್ಮೆಯ ವಿಚಾರವಾಗಿದೆ. ವಿಶ್ವಪ್ರಖ್ಯಾತ ಹೊಯ್ಸಳ ಶೈಲಿಯ ಬೇಲೂರು-ಹಳೇಬೀಡಿನ ಶಿಲ್ಪಕಲೆಯನ್ನೇ ಸೇನೇಶ್ವರ ದೇವಾಲಯ ಹೋಲುವುದರಿಂದ ಇದನ್ನು ಡಾ.ಗುರುರಾಜ ಭಟ್ಟರಂತಹ ಹಿರಿಯ ವಿದ್ವಾಂಸರು ಪಶ್ಚಿಮ ಕರಾವಳಿಯ ‘ದಕ್ಷಿಣ ಕನ್ನಡದ ಬೇಲೂರು’ ಎಂದು ಬಣ್ಣಿಸಿದ್ದಾರೆ.
ಹನ್ನೊಂದನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಸೇನಾರಸ ಎಂಬ ಸಾಮಂತ ರೊಬ್ಬರು ನಿರ್ಮಿಸಿದ ಐತಿಹಾಸಿಕ ದೇವಸ್ಥಾನವೆಂದು ಪರಿಗಣಿಸಲಾಗಿದೆ. ಅವರ ಹೆಸರಿನ ದ್ಯೋತಕ ವಾಗಿ ಈ ದೇವಸ್ಥಾನಕ್ಕೆ ಸೇನೆಶ್ವರ ಎಂಬ ಹೆಸರು ಬಂದಿದ್ದು ಎಂದು ಇತಿಹಾಸದ ಆಧಾರ ಕಂಡು ಬರುತ್ತದೆ.
ದೇವಸ್ಥಾನವು ಶ್ರದ್ಧಾಭಕ್ತಿಗಳ ಕೇಂದ್ರವಾಗಿದ್ದು, ಇಂದಿಗೂ ಪ್ರತಿ ಸೋಮವಾರ ವಿಶೇಷ ಪೂಜೆ ನಡೆಯುತ್ತದೆ. ಕಲೆ, ಸಂಸ್ಕೃತಿ, ಶಾಸ್ತ್ರಗಳನ್ನು ಮೇಳೈಸಿದ ಪೂಜಾ ಸೇವೆಗಳು ವಿಶೇಷ ಸಂದರ್ಭದಲ್ಲಿ ನಡೆಯುತ್ತವೆ. ಊರಿನ ‘ಗ್ರಾಮ ದೇವರು’ ಎಂದು ಪರಿಗಣಿತವಾಗಿರುವ ಸೇನೇಶ್ವರ ದೇವಸ್ಥಾನದಿಂದ ಪ್ರತಿಯೊಂದು ಕಾರ್ಯಕ್ರಮಗಳನ್ನು ಆರಂಭಿಸುವ ಪದ್ಧತಿಯಿದ್ದು ನಮಗೆಲ್ಲ ಶುಭ ತರುವುದಾಗಿದೆ ಎನ್ನುತ್ತಾರೆ ಸ್ಥಳೀಯರು.
ದೇವಾಲಯವು ಶಿವನ ಕಾರ್ಯವಾಸ್ತುಶಿಲ್ಪದ ಪರಿಕಲ್ಪನೆಯಷ್ಟೇ ಅಲ್ಲದೆ, ಚಾಲುಕ್ಯರ ವಾಸ್ತುಶಿಲ್ಪ ಶೈಲಿಯ ಆಕರ್ಷಕ ನಿರ್ಮಿತಿಯನ್ನು ಹೊತ್ತುಕೊಂಡು ನಿಂತಿದೆ ಎನ್ನಬಹುದು. ಗರ್ಭಗುಡಿ, ಸುಕನಾಸಿ, ಬಸವ ಮಂಟಪಗಳನ್ನು ಸಂಪೂರ್ಣ ಶಿಲೆಯಿಂದ ನಿರ್ಮಿಸಿದ್ದು, ಮೇಲ್ಭಾಗದಲ್ಲಿ ಅಷ್ಟದಿಕ್ಪಾಲಕರ ಮೂರ್ತಿಗಳನ್ನು ಶಾಸ್ತ್ರಬದ್ಧವಾಗಿ ಕೆತ್ತಿದ್ದಾರೆ. ನಂದಿಮಂಟಪ ಹಾಗೂ ಮೂರ್ತಿ ಗಳು ಕಲಾತ್ಮಕವಾಗಿ ಮನಮೋಹಕವಾಗಿವೆ.
ಹೊರಗೋಡೆಗಳಲ್ಲಿ ‘’ ಆಕಾರದ ಶಿಲ್ಪಕಲಾ ಕೆತ್ತನೆಗಳು ಜೊತೆಗೆ ಮಕರ ತೋರಣಗಳು ದೇಗುಲ ವಿನ್ಯಾಸದ ವಿಶೇಷತೆಯಾಗಿ ಗಮನ ಸೆಳೆಯುತ್ತವೆ. ದೇವಕೋಷ್ಟದಲ್ಲಿರುವ ಚತುರ್ಮುಖ ಬ್ರಹ್ಮ, ಕಾಳಭೈರವ, ಚಾಮುಂಡೇಶ್ವರಿ ಹಾಗೂ ಇನ್ನೆರಡು ದೇವತೆಗಳಾದ ಗುರು ನರಸಿಂಹ, ವೀರಭದ್ರ ವಿಶೇಷ ಆಕರ್ಷಣೆಯಾಗಿವೆ.
ದೇವಾಲಯದ ಹೊರಸುತ್ತಿನ ಉತ್ತರಭಾಗದ ದೇವಕೋಷ್ಠ(ಗೂಡು) ದಲ್ಲಿರುವ ಚಂಡೇಶ್ವರಿ ಅಥವಾ ಚಾಮುಂಡೇಶ್ವರಿ ಮೂರ್ತಿಯಿದೆ. ಈಕೆ ಕಲ್ಯಾಣಿ ಚಾಲುಕ್ಯರ ಮಾತೃದೇವತೆಯಾಗಿದ್ದು, ಚೋಳರ ದಾಳಿಯ ಸಮಯದಲ್ಲಿ ಈ ದೇವಾಲಯ ನಿರ್ಮಾಣಗೊಂಡಿದ್ದರಿಂದ, ಶತ್ರುಗಳ ಲಯಕರ್ತೆಯಾಗಿ ರೌದ್ರರೂಪದಲ್ಲಿ ನಿರ್ಮಿಸಿದ್ದಾರೆ ಎಂಬುದು ಇತಿಹಾಸ ಪ್ರಾಧ್ಯಾಪಕ ವೈ.ಉಮನಾಥ ಶೆಣೈ ಅವರ ಅಭಿಪ್ರಾಯ.
ಚಂಡೇಶ್ವರಿ ಮೂರ್ತಿ ವಾಸ್ತವದಲ್ಲಿ ಚಾಮುಂಡೇಶ್ವರಿ ದೇವಿಯೇ ಆಗಿದ್ದಾಳೆನ್ನಬಹುದು. ವಿಸ್ಮಯ ಮುದ್ರೆಯಲ್ಲಿ ನಿಂತಿರುವ ಭಂಗಿ, ಬಲ-ಎಡಬಾಗದಲ್ಲಿ ಎಂಟು ಕೈಗಳಿವೆ. ಬಲಭಾಗದ ಮೊದಲ ಕೈಯಲ್ಲಿ ಕೊಂಬು ಹಿಡಿದಿದ್ದಾಳೆ. ಎಡಗೈಯಲ್ಲಿ ಕಟ್ವಾಂಗ ಹಿಡಿದಿದ್ದಾಳೆ. ರುಂಡಮಾಲೆ, ತೋಳ ಬಂಧಿಯೂ ರುಂಡದಲ್ಲಿ ಮಾಡಿರುವ ಕೆತ್ತನೆಯಿಂದ ಕೂಡಿದ್ದು, ಈ ಮೂರ್ತಿಯನ್ನು ಭೈರವೀ ದೇವಿ ಎಂದು ಕರೆಯಬಹುದು.
ಮೂರ್ತಿಯ ಕೆಳಭಾಗದಲ್ಲಿ ಬೇತಾಳಗಳಿವೆ. ಬೇತಾಳಗಳು ಕೊಂಬು, ತಂತಿವಾದ್ಯ, ತಾಳ, ಮೃದಂಗ ವಾದ್ಯ ಬಾರಿಸುತ್ತಿದ್ದಾರೆ. ಮುಖ್ಯವಾಗಿ, ದೇವಿಯ ಹೊಟ್ಟೆಯ ಮೇಲೆ ಚೇಳು, ಎರಡು ಸ್ತನಗಳನ್ನು ಸುತ್ತಿಕೊಂಡಿರುವ ಮೂಲಕ ನಾಗಬಂಧವಿದೆ ಎಂಬ ಅಭಿಪ್ರಾಯವನ್ನು ಪುರಾತತ್ವ ವಿದ್ವಾಂಸ ಮುರಗೇಶಿ ಅಭಿಪ್ರಾಯ ಪಡುತ್ತಾರೆ.
ದೇವಾಲಯದ ಉತ್ತರಭಾಗದಲ್ಲಿ ಸೂಕ್ಷ್ಮ ಕುಸುರಿ ಕೆತ್ತನೆಯುಳ್ಳ ಕಾಲಭೈರವನ ಶಿಲ್ಪವಿದೆ. ಬೆನ್ನಿಗೆ ಚತುರ್ಮುಖ ಬ್ರಹ್ಮ ಪದ್ಮಾಸನದಲ್ಲಿ ಕುಳಿತಿರುವ ಶಿಲ್ಪಕೆತ್ತನೆ ಅತ್ಯಾಕರ್ಷಕವಾಗಿದೆ. ಕೈಗಳ, ಕಾಲಿನ ಬೆರಳುಗಳ ಉಗುರು ಕೆತ್ತನೆಯಂತಹ ಸೂಕ್ಷ್ಮಗಳೂ ಇಲ್ಲಿ ಸಾಕಾರಗೊಂಡಿವೆ. ಬೈಂದೂರು ಸೇನೇಶ್ವರ ದೇವಸ್ಥಾನದ ಶಿಲಾಶಾಸನ ಸಾಕ್ಷ್ಯಗಳು ಪ್ರಮುಖ ಐತಿಹಾಸಿಕ ದಾಖಲೆಗಳಾಗಿ ಪರಿಗಣಿಸಲ್ಪಡುತ್ತವೆ.
ಈ ಶಾಸನಗಳು ದೇವಾಲಯದ ನಿರ್ಮಾಣ, ದಾನ, ನಿರ್ವಹಣೆ ಮತ್ತು ದೇವಾಲಯಕ್ಕೆ ಸೇರಿದ ಭೂಮಿಗಳ ವಿವರಗಳನ್ನು ನೀಡುತ್ತವೆ. ಶಾಸನಗಳಲ್ಲಿ 11ನೇ ಶತಮಾನದಲ್ಲಿಯೇ ಈ ದೇವಸ್ಥಾನದ ಸ್ಥಾಪನೆ ಕುರಿತು ಉಲ್ಲೇಖವಾಗಿದೆ ಮತ್ತು ದೇವಾಲಯದ ಶಿಲ್ಪಕಲಾ, ವಾಸ್ತುಶಿಲ್ಪ ಮತ್ತು ಆರಾಧನೆ ಪದ್ಧತಿಗಳ ಕುರಿತು ವಿವರಿಸಲಾಗಿದೆ.
ಪ್ರಾಚ್ಯವಸ್ತು ಇಲಾಖೆಯ ಅಡಿಯಲ್ಲಿ ಅಧಿಕೃತವಾಗಿ, 27ನೇ ಸಂಪುಟದಲ್ಲಿ ಬೈಂದೂರಿಗೆ ಸಂಬಂಧ ಪಟ್ಟ 13 ಶಾಸನಗಳು ಇದುವರೆಗೆ ಪ್ರಕಟವಾಗಿವೆ. ಆಳೂಪ ಚಕ್ರವರ್ತಿ ವೀರಪಾಂಡ್ಯದೇವ ಶಾಸನ ದಲ್ಲಿ ಬಂಕೇಶ್ವರ ದೇಗುಲಕ್ಕೆ ದತ್ತಿ ಕೊಟ್ಟ ಮಾಹಿತಿಯಿದೆ. ವಿಜಯನಗರದ 3 ಶಾಸನಗಳು ದೊರೆತಿದ್ದು, ಒಂದು ಜೈನ ಬಸದಿಗೆ ದತ್ತಿಕೊಟ್ಟಿರುವ ಹಾಗೂ ಸೇನೇಶ್ವರ ಅಮೃತಪುರಿಗೆ ದಾನ ಕೊಟ್ಟ ಉಲ್ಲೇಖವಿದ್ದು, ಸೇನೇಶ್ವರ ದೇಗುಲಕ್ಕೆ ವಿಸ್ತಾರವಾದ ತೆಂಗಿನತೋಟವನ್ನು ದಾನಕೊಟ್ಟ ಮಾಹಿತಿ ಇದರಲ್ಲಿದೆ.
ಎರಡು ಸದಾಶಿವ ಶಾಸನಗಳು ಮತ್ತು ಭಂಟ (ನಾಡವರು) ಅವರು ಕೊಟ್ಟ ಎರಡು ದಾನ ಶಾಸನ ಗಳಿವೆ. ಈ ಶಾಸನಗಳು ಕಲ್ಲಿನ ಮೇಳೆ ನಿಖರವಾಗಿ ಕೆತ್ತಲ್ಪಟ್ಟಿದ್ದು, ಅವುಗಳಲ್ಲಿ ದೇವತೆಗಳ ಹೆಸರು, ದೇವಸ್ಥಾನದ ಸ್ಥಾಪಕರು ಹಾಗೂ ಅದಕ್ಕೆ ಸಂಬಂಧಿಸಿದ ರಾಜಕೀಯ ಮತ್ತು ಧಾರ್ಮಿಕ ವ್ಯಕ್ತಿಗಳ ಪೈಕಿ ಸೇನಾರಸರು ಹಾಗೂ ಇನ್ನಿತರೆ ಸಾಮಂತರನ್ನು ಉಲ್ಲೇಖಿಸಲಾಗಿದೆ. ಈ ಶಾಸನಗಳ ಅಧ್ಯಯನದಿಂದ ದೇವಾಲಯದ ಇತಿಹಾಸ, ಧಾರ್ಮಿಕ ಮಹತ್ವ ಮತ್ತು ಸ್ಥಳೀಯ ಸಾಮಂತರ ವಂಶಗಳ ಸಂಬಂಧದ ಅಪ್ರತ್ಯಕ್ಷ ಮಾಹಿತಿ ದೊರಕುತ್ತದೆ.
ಕರಾವಳಿ ದೇವಾಲಯಗಳ ಪ್ರಮುಖ ಅಂಶಗಳು ವಿವಿಧ ವಾಸ್ತುಶೈಲಿ, ಧಾರ್ಮಿಕ ಪದ್ಧತಿ ಮತ್ತು ಸ್ಥಳೀಯ ಸಂಸ್ಕೃತಿಯ ವೈಜ್ಞಾನಿಕ ಮಿಶ್ರಣವೂ ಹೌದು. ಈ ದೇವಾಲಯಗಳು ಕರಾವಳಿ ಪ್ರದೇಶದ ಪೌರಾಣಿಕ, ಸಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ. ಗರ್ಭಗುಡಿ, ಮಂಟಪ, ನವರಂಗ ಹಾಗೂ ಬೆಳಕು-ಹವಾ ಹೊಂದುವ ವಿಶಿಷ್ಟ ವಿನ್ಯಾಸಗಳ ಜೊತೆಯಲ್ಲಿ ಉನ್ನತ ಗೋಪುರ, ಶಿಖರಗಳ ವಿನ್ಯಾಸ ಮತ್ತು ವಾಸ್ತುಶಿಲ್ಪದಲ್ಲಿ ಸಮ್ಮಿಳಿತಗೊಂಡಿರುತ್ತವೆ.
ಇಂತಹ ಹಲವು ವಿಶಿಷ್ಟತೆಗಳನ್ನು ಮೇಳೈಸಿಕೊಂಡು ಬೆರಗು ಹುಟ್ಟಿಸುವ ಕರಾವಳಿಯು ಸಮುದ್ರ ಕಿನಾರೆಯ ಜೊತೆಗೆ, ಐತಿಹಾಸಿಕ ಮತ್ತು ಪುರಾತನ ದೇವಾಲಯಗಳು, ಶಕ್ತಿಕೇಂದ್ರಗಳು ನಾಡಿನ, ದೇಶ-ವಿದೇಶಗಳ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಇಡೀ ರಾಜ್ಯದಲ್ಲಿಯೇ ಕರಾವಳಿ ವಿಭಾಗವು ದೇಗುಲ ಮತ್ತು ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ಕೇಂದ್ರ ಬಿಂದುವಾಗಿ ದೇಶಾದ್ಯಂತ ಗಮನ ಸೆಳೆಯ ಬಲ್ಲದು.
ನಮ್ಮಲ್ಲಿ ನಿಸರ್ಗ ರಮಣೀಯತೆ, ದೇವಾಲಯಗಳ ವಿಶಿಷ್ಟತೆ ಸೇರಿದಂತೆ ಪ್ರವಾಸೋದ್ಯಮಕ್ಕೆ ಬೇಕಾದ ಎಲ್ಲವೂ ಇದೆ. ಇಂತಹ ಹತ್ತಾರು ವಿಶೇಷತೆಗಳನ್ನು ಗುರುತಿಸಿ, ಉಳಿಸಿ ಬೆಳೆಸುವಲ್ಲಿ ಸರಿಯಾದ ಉಪಕ್ರಮಗಳನ್ನು ಕೈಗೊಳ್ಳದಿದ್ದರೆ, ಇರುವ ನೂರಾರು ವ್ಯವಸ್ಥೆಗಳು ಬೆಳೆಯುವುದಿರಲಿ, ಉಳಿಯುವುದೇ ಅನುಮಾನ ಎಂಬಂತಹ ಪರಿಸ್ಥಿತಿಗೆ ಬರುವಂತಾಗಬಾರದು.