Surendra Pai Column: ದುಬಾರಿ ಶಾಲಾ ಶಿಕ್ಷಣಕ್ಕೆ ಕಡಿವಾಣ ಬೇಕಲ್ಲವೇ?
ಬೆಂಗಳೂರಿನ ಬಹುತೇಕ ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳಿಗೆ ಕನಿಷ್ಠ 60 ಸಾವಿರ ಶಾಲಾ ಶುಲ್ಕ, ಒಂದನೇ ತರಗತಿಗೆ 1 ಲಕ್ಷಕ್ಕೂ ಅಧಿಕ ಶುಲ್ಕವನ್ನು ನಿಗದಿಪಡಿಸಿರುವುದನ್ನು ಕಾಣಬಹುದು. ಈ ದರ ಪಟ್ಟಿಯು ತರಗತಿಯಿಂದ ತರಗತಿಗೆ ಏರುತ್ತಲೇ ಸಾಗುತ್ತದೆ. ಮಗು ಹತ್ತನೇ ತರಗತಿ ಬಂದಾಗ ಇಂದಿನ ಶುಲ್ಕದ ಪ್ರಕಾರ ಕನಿಷ್ಠ 2 ಲಕ್ಷ ರೂಪಾಯಿಗಳನ್ನು ಪ್ರೌಢಶಾಲಾ ಶಿಕ್ಷಣ ಕ್ಕಾಗಿ ಪಾಲಕರು ವ್ಯಯ ಮಾಡುತ್ತಾರೆ.


ಪ್ರಸ್ತುತ
ಸುರೇಂದ್ರ ಪೈ, ಭಟ್ಕಳ
ಇತ್ತೀಚಿಗೆ ಪಾಲಕರು ಶಿಕ್ಷಣದ ವಿಷಯದಲ್ಲಿ ಸಿಟಿ ಶಾಲೆಗಳು ಗ್ರಾಮೀಣ ಭಾಗದ ಶಾಲೆಗಳಿಗಿಂತ ಹೆಚ್ಚು ಉತ್ತಮವಾದ ಶಿಕ್ಷಣವನ್ನು ನೀಡುತ್ತಿವೆ ಎಂಬ ತಪ್ಪು ಕಲ್ಪನೆಯನ್ನು ಹೊಂದಿದಂತಿದೆ. ತಮ್ಮ ಮಕ್ಕಳನ್ನು ನಗರ ಪ್ರದೇಶದ ದೊಡ್ಡ ದೊಡ್ಡ ಶಾಲೆಗಳಿಗೆ ಸೇರಿಸುವುದರಿಂದ ಮಕ್ಕಳು ಇನ್ನಷ್ಟು ಜಾಣರಾಗುತ್ತಾರೆ ಎಂಬ ಭಾವನೆಯೂ ಹೆಚ್ಚಾದಂತಿದೆ. ಪಾಲಕರ ಈ ಒಂದು ಮನಸ್ಥಿತಿ ಯನ್ನು ಅರಿತ ಬಹಳಷ್ಟು ನಗರ ಪ್ರದೇಶದ ಖಾಸಗಿ ಶಾಲೆಗಳು ಶಿಕ್ಷಣ ಇಲಾಖೆಯ ಆದೇಶವನ್ನು ಧಿಕ್ಕರಿಸಿ ತಮಗೆ ಬೇಕಾದ ರೀತಿಯಲ್ಲಿ ಶಾಲಾ ಶುಲ್ಕವನ್ನು ನಿಗದಿಪಡಿಸುತ್ತಿದ್ದಾರೆ.
ಬೆಂಗಳೂರಿನ ಬಹುತೇಕ ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳಿಗೆ ಕನಿಷ್ಠ 60 ಸಾವಿರ ಶಾಲಾ ಶುಲ್ಕ, ಒಂದನೇ ತರಗತಿಗೆ 1 ಲಕ್ಷಕ್ಕೂ ಅಧಿಕ ಶುಲ್ಕವನ್ನು ನಿಗದಿಪಡಿಸಿರುವುದನ್ನು ಕಾಣಬಹುದು. ಈ ದರ ಪಟ್ಟಿಯು ತರಗತಿಯಿಂದ ತರಗತಿಗೆ ಏರುತ್ತಲೇ ಸಾಗುತ್ತದೆ. ಮಗು ಹತ್ತನೇ ತರಗತಿ ಬಂದಾಗ ಇಂದಿನ ಶುಲ್ಕದ ಪ್ರಕಾರ ಕನಿಷ್ಠ 2 ಲಕ್ಷ ರೂಪಾಯಿಗಳನ್ನು ಪ್ರೌಢಶಾಲಾ ಶಿಕ್ಷಣ ಕ್ಕಾಗಿ ಪಾಲಕರು ವ್ಯಯ ಮಾಡುತ್ತಾರೆ.
ಇದನ್ನೂ ಓದಿ: Surendra Pai Column: ಸಿಹಿ ಜಡೆ ಈರುಳ್ಳಿ ಬಲ್ಲಿರಾ ?
ಇದನ್ನೆ ಕೇಳಿದಾಗ ಒಮ್ಮೆ ಹೌಹಾರುವುದು ನಿಜ!. ಇಷ್ಟೊಂದು ಶುಲ್ಕವನ್ನು ನಾವೆ ನಮ್ಮ ಪದವಿ ಶಿಕ್ಷಣಕ್ಕೂ ಭರಿಸಿರಲಿಲ್ಲ. ಲಕ್ಷ ದೂರದ ಮಾತು , ಕೆಲವೇ ಸಾವಿರಗಳಲ್ಲಿ ನಮ್ಮ ಪ್ರಾಥಮಿಕ , ಪ್ರೌಢ ಹಾಗೂ ಪಿಯುಸಿ ಶಿಕ್ಷಣ ಮುಗಿದಿರುತ್ತಿತ್ತು. ಆದರೆ ಇಂದು ನಗರ ಪ್ರದೇಶಗಳಲ್ಲಿ ಎಲ್‌ಕೆ ಜಿ ಯಿಂದ ಪಿಯುಸಿ ಶಿಕ್ಷಣ ಮಾಡಬೇಕೆಂದರೆ ಕನಿಷ್ಠ 10-15 ಲಕ್ಷ ಬೇಕಾಗುತ್ತದೆ.
ಶಿಕ್ಷಣದ ಹೆಸರಿನಲ್ಲಿ ಲಕ್ಷಗಟ್ಟಲೇ ಶುಲ್ಕ ವಸೂಲಿ ಮಾಡುವ ‘ಎಜುಕೇಶನ್ ಮಾಫಿಯಾ’ ಹೆಚ್ಚಾ ಗುತ್ತಿದೆ. ಇಷ್ಟೊಂದು ದುಬಾರಿ ಶುಲ್ಕವನ್ನು ಭರಿಸಲು ಎಲ್ಲಾ ಪಾಲಕರು ಶಕ್ತರೇ? ಇಷ್ಟೊಂದು ದುಬಾರಿ ಶಿಕ್ಷಣದ ಅವಶ್ಯಕತೆ ಇದೆಯೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ನಾವು ಉತ್ತರ ಕಂಡುಕೊಳ್ಳ ಬೇಕಿದೆ. ಲಕ್ಷ ಲಕ್ಷ ಕೊಟ್ಟರೂ ಸಹ ಎಲ್‌ಕೆಜಿ, ಯುಕೆಜಿ, ಒಂದನೇ ತರಗತಿಯ ಹಂತ ಮಗುವಿಗೆ ಅ, ಆ, ಇ.. ಕಾಗುಣಿತವನ್ನೇ ಕಲಿಸಲಾಗಬೇಕೇ ವಿನಃ ಅದಕ್ಕೂ ಮೀರಿ ಆ ವಯಸ್ಸಿನಲ್ಲಿ ಮತ್ತೇನನ್ನೂ ಕಲಿಸಲು ಸಾಧ್ಯವಿಲ್ಲ.
ಒಂದು ವೇಳೆ ಶಿಕ್ಷಕರು ಕಲಿಸಲು ಮುಂದಾದರೂ ಸಹ 3-6 ವಯಸ್ಸಿನ ಮಗುವಿನ ಬೌದ್ಧಿಕ ಬೆಳವಣಿಗೆಯನ್ನು ಮೀರಿ ಹೆಚ್ಚಿನದ್ದನ್ನು ಮಗುವಿನ ತಲೆಯೊಳಗೆ ತುರುಕಲು ಸಾಧ್ಯವಿಲ್ಲ. ಈ ಮಗುವಿನ ಮನೋ ವಿಕಾಸದ ಹಂತಗಳ ಬಗ್ಗೆ ಯಾವ ಪಾಲಕರು ಅರಿಯಲು ಸಿದ್ಧರಿಲ್ಲ. ಹೌದು ಸಿಟಿ ಶಾಲೆಗಳಲ್ಲಿ ತರಗತಿಗಳ ವಿನ್ಯಾಸ, ಪೀಠೋಪಕರಣ ಗಳು, ಲ್ಯಾಬ್, ಗ್ರಂಥಾಲಯದ ಜೊತೆಗೆ ಇಂದಿನ ಆಧುನಿಕ ತಂತ್ರಜ್ಞಾನವನ್ನು ಪರಿಚಯಿಸಲಾಗಿರುತ್ತದೆ.
ಇವೇ ಕಾರಣಗಳಿಗಾಗಿ ತಮ್ಮ ಶಾಲೆಯು ಬೇರೆ ಶಾಲೆಗಳಿಗಿಂತಲೂ ಭಿನ್ನವಾಗಿದೆ ಎಂದು ಲಕ್ಷಾಂತರ ಶುಲ್ಕವನ್ನು ವಸೂಲಿ ಮಾಡುತ್ತವೆ. ಆದರೆ ಒಂದು ಶಾಲೆಯು ಎಷ್ಟೇ ಬಾಹ್ಯ ಸಂಪನ್ಮೂಲಗಳನ್ನು ಹೊಂದಿದ್ದರು ಸಹ ಅದನ್ನು ಮಗುವಿಗೆ ಅರ್ಥವಾಗುವಂತೆ ಪಾಠ ಮಾಡುವಲ್ಲಿ ಶಿಕ್ಷಕನ ಪಾತ್ರವೇ ನಿರ್ಣಾಯಕ.
ಅಂತಹ ಶಿಕ್ಷಕರು ಎಲ್ಲಿರುತ್ತಾರೋ ಅಲ್ಲಿ ಮಕ್ಕಳು ಆನಂದದಾಯಕ ಕಲಿಕೆಯಲ್ಲಿ ಭಾಗವಹಿಸಲು ಸಾಧ್ಯ. ಅದು ಸಿಟಿ ಶಾಲೆಯಾಗಿರಲಿ, ಹಳ್ಳಿ ಶಾಲೆಯಾಗಿರಲಿ. ಮಕ್ಕಳು ಆ ಹಂತದಲ್ಲಿ ಅ, ಆ, ಇ, ಅಥವಾ ಎ ಬಿ ಸಿ ಡಿ , ಕಾಗುಣಿತವನ್ನು ಮಾತ್ರ ಕರಗತ ಮಾಡಿಕೊಳ್ಳಲು ಸಾಧ್ಯವಲ್ಲವೇ? ನಗರ ಪ್ರದೇಶದ ಹಲವು ಶಾಲೆಗಳಲ್ಲಿ ಆಟದ ಮೈದಾನವಿಲ್ಲ. ಯಾವುದೋ ಅಪಾರ್ಟ್‌ಮೆಂಟ್ ನ ಒಂದೆರಡು ಕೊಠಡಿಗಳಲ್ಲಿ ಫ್ರೀ ಸ್ಕೂಲಿಂಗ್ ನಡೆಸುತ್ತಿರುತ್ತಾರೆ.
ತಮ್ಮ ಅನಿವಾರ್ಯತೆಗಾಗಿ ವಾಸ್ತವವನ್ನು ಮರೆತ ಜನರು ಸಿಟಿ ಶಾಲೆಗಳೇ ಹೆಚ್ಚು ಫಲಿತಾಂಶ ನೀಡುತ್ತಿವೆ ಎಂದು ಹೇಳುತ್ತಿದ್ದಾರೆ. ಆದರೆ ಕಳೆದ ಹಲವು ವರ್ಷಗಳಿಂದಲೂ ಗ್ರಾಮೀಣ ಪ್ರದೇಶ ಮಕ್ಕಳೇ ಒಟ್ಟಾರೆ ಫಲಿತಾಂಶದಲ್ಲಿ ಮುಂದಿದ್ದಾರೆ. ಅಭಿವೃದ್ಧಿಯ ಗಾಳಿ ಹಳ್ಳಿಗಳಿಗೂ ಬೀಸಿದ್ದು, ಸುಸಜ್ಜಿತ ರಸ್ತೆಗಳು, ಕುಡಿಯುವ ನೀರು, ಮೂಲಭೂತ ಸೌಕರ್ಯಗಳು ಎಲ್ಲವೂ ಮಕ್ಕಳಿಗೆ ಲಭ್ಯವಿದೆ. ಹಳ್ಳಿಯ ಮಕ್ಕಳಲ್ಲಿ ಅದಮ್ಯ ಇಚ್ಛಾಶಕ್ತಿಯಿದೆ. ಮಾನವೀಯ ಮೌಲ್ಯಗಳಿವೆ. ಗುರು ಹಿರಿಯರು, ಶಿಕ್ಷಕರು ಎಂಬ ಗೌರವವಿದೆ. ಆದರೆ ಅದುವೇ ಲಕ್ಷಗಟ್ಟಲೇ ಶುಲ್ಕ ನೀಡಿ ಅದೇ ಅ, ಆ, ಇ.. ಕಲಿಯುತ್ತಿರುವ ಸಿಟಿ ಮಕ್ಕಳಿಗರ ಇದ್ಯಾವುದೂ ಇಲ್ಲ.