R T Vittalmurthy Column: ಸಿದ್ದು ಸಂದೇಶ ರಾಹುಲ್ ಕಿವಿಗೆ ತಲುಪಿತು
ಮಮತಾ ಬ್ಯಾನರ್ಜಿ ಅವರ ಅಭೇಧ್ಯ ಕೋಟೆ ಛಿದ್ರವಾಯಿತು ಎಂಬುದು ಕಾಂಗ್ರೆಸ್ ಸೇರಿದಂತೆ ಬಿಜೆಪಿ ವಿರೋಧಿ ಶಕ್ತಿಗಳ ಆರೋಪ. ಈ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್ ವರಿಷ್ಟರ ಗಮನವೀಗ ಕರ್ನಾಟಕದ ಮೇಲೆ ಬಿದ್ದಿದೆ. ಅಂದ ಹಾಗೆ ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರ ಹಿಡಿದರೂ ಬಿಜೆಪಿಗೆ ಇನ್ನೂ ದಕ್ಷಿಣ ಭಾರತ ಒಲಿಯುತ್ತಿಲ್ಲ. ತಮಿಳುನಾಡಿನಲ್ಲಿ ಅದೇನೇ ಕಸರತ್ತು ಮಾಡಿದರೂ ಅದಕ್ಕೆ ಶಕ್ತಿ ಸಿಗುತ್ತಿಲ್ಲ. ಎಐಎಡಿಎಂಕೆಯ ಜತೆ ಸೇರಿ ದಷ್ಟಪುಷ್ಟ ವಾಗೋಣ ಎಂದರೂ ಅದು ಸಾಧ್ಯವಾಗಿಲ್ಲ
-
ಮೂರ್ತಿಪೂಜೆ
ತೃಣಮೂಲ ಕಾಂಗ್ರೆಸ್‌ನ ಅಧಿನಾಯಕಿ ಮಮತಾ ಬ್ಯಾನರ್ಜಿ ಕುಸಿದು ಬಿದ್ದ ರೀತಿಯಿಂದ ದಿಲ್ಲಿಯ ಕಾಂಗ್ರೆಸ್ ವರಿಷ್ಠರಿಗೆ ಚಿಂತೆ ಸುರುವಾಗಿದೆ. ಅಷ್ಟೇ ಅಲ್ಲ, ಈ ಚಿಂತೆಯ ಪರಿಣಾಮ ವಾಗಿ ಅವರೀಗ ಕರ್ನಾಟಕದ ಮೇಲೆ ಕಣ್ಣು ನೆಟ್ಟಿದ್ದಾರೆ. ಅಂದ ಹಾಗೆ ಪಶ್ಚಿಮ ಬಂಗಾಳ ವನ್ನು ಅಭೇದ್ಯ ಕೋಟೆಯನ್ನಾಗಿ ಮಾಡಿಕೊಂಡಿದ್ದ ಮಮತಾ ಬ್ಯಾನರ್ಜಿ ಇತ್ತೀಚಿನ ಚುನಾವಣೆಯಲ್ಲಿ ಕುಸಿದು ಬಿದ್ದರು. ಬಿಜೆಪಿಯ ಮಾರಕ ದಾಳಿಯ ಎದುರು ಅವರ ತೃಣಮೂಲ ಕಾಂಗ್ರೆಸ್ ಪಕ್ಷ ಸೋತು ಸುಣ್ಣವಾಯಿತು.
ಆದರೆ ಮಮತಾ ಬ್ಯಾನರ್ಜಿ ಅವರ ಪತನಕ್ಕೆ ಆ ರಾಜ್ಯದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರಣ. ರಾಜ್ಯದ ತೊಂಬತ್ತು ಲಕ್ಷಕ್ಕೂ ಹೆಚ್ಚು ಜನ ಈ ವಿಶೇಷ ಪರಿಷ್ಕರಣೆ ಯಿಂದ ಹೊರಬಿದ್ದಿದ್ದಕ್ಕಾಗಿ ತೃಣಮೂಲ ಕಾಂಗ್ರೆಸ್ ಪಕ್ಷದ ಶಕ್ತಿ ಸೊರಗಿತು. ಮತ್ತು ಇದನ್ನು ಎನ್‌ಕ್ಯಾಶ್ ಮಾಡಿಕೊಂಡ ಬಿಜೆಪಿ ಪಶ್ಚಿಮ ಬಂಗಾಳದ 200ಕ್ಕೂ ಹೆಚ್ಚು ವಿಧಾನ ಸಭಾ ಕ್ಷೇತ್ರಗಳಲ್ಲಿ ಗೆಲುವು ಗಳಿಸಿತು.
ಮಮತಾ ಬ್ಯಾನರ್ಜಿ ಅವರ ಅಭೇಧ್ಯ ಕೋಟೆ ಛಿದ್ರವಾಯಿತು ಎಂಬುದು ಕಾಂಗ್ರೆಸ್ ಸೇರಿದಂತೆ ಬಿಜೆಪಿ ವಿರೋಧಿ ಶಕ್ತಿಗಳ ಆರೋಪ. ಈ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್ ವರಿಷ್ಟರ ಗಮನವೀಗ ಕರ್ನಾಟಕದ ಮೇಲೆ ಬಿದ್ದಿದೆ. ಅಂದ ಹಾಗೆ ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರ ಹಿಡಿದರೂ ಬಿಜೆಪಿಗೆ ಇನ್ನೂ ದಕ್ಷಿಣ ಭಾರತ ಒಲಿಯುತ್ತಿಲ್ಲ. ತಮಿಳುನಾಡಿನಲ್ಲಿ ಅದೇನೇ ಕಸರತ್ತು ಮಾಡಿದರೂ ಅದಕ್ಕೆ ಶಕ್ತಿ ಸಿಗುತ್ತಿಲ್ಲ. ಎಐಎಡಿಎಂಕೆಯ ಜತೆ ಸೇರಿ ದಷ್ಟಪುಷ್ಟವಾಗೋಣ ಎಂದರೂ ಅದು ಸಾಧ್ಯವಾಗಿಲ್ಲ.
ಇದನ್ನೂ ಓದಿ: R T Vittalmurthy Column: ಮದಕರಿ ನಾಯಕ ಫ್ರಂಟ್ ಲೈನಿಗೆ ಬಂದಿದ್ದೇಕೆ ?
ತಮಿಳುನಾಡಿನ ಮತದಾರರು ಪರಂಪರಾಗತ ಎದುರಾಳಿಗಳಾದ ಡಿಎಂಕೆ-ಎಐಎಡಿಎಂಕೆ ಯನ್ನು ತಿರಸ್ಕರಿಸಿದರೂ ಬಿಜೆಪಿ ವಿರೋಧಿ ಮನಃಸ್ಥಿತಿಯ ಟಿವಿಕೆ ಪಕ್ಷದ ಕೈ ಹಿಡಿದಿದ್ದಾರೆ. ಆ ಪಕ್ಷದ ನಾಯಕ ವಿಜಯ್ ಸಿಎಂ ಗದ್ದುಗೆಯ ಮೇಲೆ ಕೂರುವಂತೆ ನೋಡಿಕೊಂಡಿದ್ದಾರೆ. ಇನ್ನು ಕೇರಳದ ವಿಷಯ ಬಂದರೂ ಬಿಜೆಪಿಯ ಸ್ಥಿತಿ ಇಂಪ್ರೂವ್ ಆಗಿಲ್ಲ.
ಬದಲಿಗೆ ಸಿಕ್ಕ ಸಿಕ್ಕ ಕಡೆ ಹೊಡೆತ ತಿನ್ನುತ್ತಿರುವ ಕಾಂಗ್ರೆಸ್ ಪಕ್ಷ ಇಲ್ಲಿ ತಲೆ ಎತ್ತಿ ಕುಳಿತಿದೆ. ಹೀಗಾಗಿ ಪಶ್ಚಿಮ ಬಂಗಾಳದಲ್ಲಿ ತಾವು ದಿಗ್ವಿಜಯ ಸಾಧಿಸಿದ ರೀತಿಯಲ್ಲಿ ಕರ್ನಾಟಕವನ್ನು ವಶಪಡಿಸಿಕೊಳ್ಳಲು ಬಿಜೆಪಿ ವರಿಷ್ಟರು ಪ್ಲಾನು ಮಾಡಿದ್ದಾರೆ. ಮತ್ತು ಆ ಪ್ಲಾನಿಗೆ ಪೂರಕ ವಾಗಿ ಆರೆಸ್ಸೆಸ್ ಕರ್ನಾಟಕದಲ್ಲಿ ರಂಗಪ್ರವೇಶ ಮಾಡಿದೆ. ಅದರಲ್ಲೂ ಮುಖ್ಯವಾಗಿ ಆರೆಸ್ಸೆಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಅವರು ಕರ್ನಾಟಕದ ಆರೆಸ್ಸೆಸ್ ಪ್ರಮುಖ ರಿಗೆ ನಿರ್ಣಾಯಕ ಸೂಚನೆ ಕೊಟ್ಟಿದ್ದಾರೆ.
ಅವರ ಈ ಸೂಚನೆಯ ಹಿನ್ನೆಲೆಯಲ್ಲಿ ಅರೆಸ್ಸೆಸ್ ಕಾರ್ಯಕರ್ತರು ಕರ್ನಾಟಕದುದ್ದ ಪಸರಿಕೊಳ್ಳುತ್ತಿದ್ದಾರೆ ಮತ್ತು ಮುಖ್ಯವಾಗಿ ಯುವ ಮತದಾರರ ಒಲವು ಗಳಿಸುವ ಕಸರತ್ತು ಆರಂಭಿಸಿದ್ದಾರೆ. ಅವರು ಹೀಗೆ ಕಸರತ್ತು ನಡೆಸುತ್ತಿದ್ದಂತೆಯೇ ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯ ನಡೆದರೆ ಮತ್ತು ಬಿಜೆಪಿಯ ಇಚ್ಛೆಗೆ ತಕ್ಕಂತೆ ನಡೆದರೆ ಡೇಂಜರ್ ಗ್ಯಾರಂಟಿ ಎಂಬುದು ಕಾಂಗ್ರೆಸ್ ವರಿಷ್ಠರ ಆತಂಕ.
ಅವರಿಗಿರುವ ಸದ್ಯದ ಮಾಹಿತಿಯ ಪ್ರಕಾರ, ಕರ್ನಾಟಕದಲ್ಲಿ ಪಶ್ಚಿಮ ಬಂಗಾಳದಂತೆ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ನಡೆದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕರ ಪೈಕಿ ಮಿನಿಮಮ್ ನೂರು ಮಂದಿ ಸೋಲು ಅನುಭವಿಸಲಿದ್ದಾರೆ.
ಈ ಪ್ರಮಾಣದಲ್ಲಿ ಕಾಂಗ್ರೆಸ್ ಶಾಸಕರು ಸೋಲು ಅನುಭವಿಸಿದರೆ ರಾಜ್ಯ ಕಾಂಗ್ರೆಸ್ 1994ರ ಪರಿಸ್ಥಿತಿಗೆ ತಲುಪುತ್ತದೆ. ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಲವತ್ತು ಸೀಟುಗಳ ಗಡಿ ತಲುಪಲು ವಿಫಲವಾಗಿತ್ತು. ಇಂತಹ ಹೀನಾಯ ಸ್ಥಿತಿ 2028ರಲ್ಲಿ ರಿಪೀಟ್ ಆದರೆ ಭವಿಷ್ಯ ದಲ್ಲಿ ಮೇಲೆದ್ದು ನಿಲ್ಲುವುದೂ ಪಕ್ಷಕ್ಕೆ ಕಷ್ಟವಾಗಲಿದೆ. ಯಾಕೆಂದರೆ 94ರಲ್ಲಿ ಸೋಲು ಅನುಭವಿಸಿದರೂ ಮುಂದಿನ ಚುನಾವಣೆಯ ಹೊತ್ತಿಗೆ ಎಸ್.ಎಂ.ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಕೆ.ಹೆಚ್.ರಂಗನಾಥ್, ಎಂ.ವೈ.ಘೋರ್ಪಡೆ ಸೇರಿದಂತೆ ಹಲವು ಅತಿರಥ-ಮಹಾರಥ ರಿದ್ದ ಕಾಂಗ್ರೆಸ್ ಸೈನ್ಯ ಗೆಲುವು ಗಳಿಸಿತು.
ಆದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಸೋತರೆ 2033ರ ಹೊತ್ತಿಗೆ ಕಾಂಗ್ರೆಸ್ ಸೈನ್ಯವನ್ನು ಮೇಲೆಬ್ಬಿಸಿ ನಿಲ್ಲಿಸಲು ಇಂತಹ ಅತಿರಥ-ಮಹಾರಥರ ದಂಡು ಇರುವುದಿಲ್ಲ. ಅಷ್ಟೊತ್ತಿಗಾಗಲೇ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಸೇರಿದಂತೆ ಅತಿರಥ-ಮಹಾರಥರು ಶಸ್ತ್ರತ್ಯಾಗ ಮಾಡಿರುತ್ತಾರಾದ್ದರಿಂದ ಅವರ ಜಾಗವನ್ನು ತುಂಬು ವ ಸೇನಾನಿಗಳು ಕಡಿಮೆ.
ಹೀಗಾಗಿ 2028ರ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರದೇ ಹೋದರೂ ಸಾಲಿಡ್ಡು ಸಂಖ್ಯೆಯ ಶಾಸಕರಾದರೂ ಇರಬೇಕು ಎಂಬುದು ಕಾಂಗ್ರೆಸ್ ವರಿಷ್ಠರ ಲೆಕ್ಕಾಚಾರ. ಹೀಗಾಗಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಸಂದರ್ಭದಲ್ಲಿ ಟಾರ್ಗೆಟ್ ಆಗುವ ಪಾಕೀಟು ಯಾವುದಿದೆ? ಅದರ ಮೇಲೆ ವಿಶೇಷ ಗಮನ ಹರಿಸಬೇಕು ಮತ್ತು ಆ ಪಾಕೀಟಿನ ಜನ ಮತದಾರರ ಪಟ್ಟಿಯಲ್ಲಿ ಉಳಿದುಕೊಳ್ಳಲು ಅಗತ್ಯವಾದ ದಾಖಲೆಗಳನ್ನು ಹೊಂದಲು ಅನುಕೂಲ ಮಾಡಿಕೊಡಬೇಕು ಎಂಬುದು ಕಾಂಗ್ರೆಸ್ ವರಿಷ್ಠರ, ಅದರಲ್ಲೂ ರಾಹುಲ್ ಗಾಂಧಿಯವರ ಸಿಗ್ನಲ್ಲು.
ಮುಂದೇನಾಗುತ್ತದೋ ನೋಡಬೇಕು. ರಾಹುಲ್‌ಗೆ ತಲುಪಿದ ಸಿದ್ದು ಸಂದೇಶ ಇನ್ನು ಪಶ್ಚಿಮ ಬಂಗಾಳದ ಎಲೆಕ್ಷನ್ ರಿಸಲ್ಟು ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಅಧಿಕಾರ ಹಂಚಿಕೆಯ ಸಂಘರ್ಷಕ್ಕೆ ಹೊಸ ತಿರುವು ನೀಡಿದೆ. ಅಂದ ಹಾಗೆ ಈ ಬಾರಿಯ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷ ಕೇರಳದಲ್ಲಿ ಗೆದ್ದು ಅಧಿಕಾರವನ್ನೇನೋ ಹಿಡಿದಿದೆ.
ಆದರೆ ಪಶ್ಚಿಮ ಬಂಗಾಳದ ಫಲಿತಾಂಶ ನೋಡಿದ ಮೇಲೆ ಅತೀವ ಆತಂಕವೂ ಅಗಿದೆ. ಯಾಕೆಂದರೆ ಪಶ್ಚಿಮ ಬಂಗಾಳವನ್ನು ಗೆದ್ದ ಮೇಲೆ ಬಿಜೆಪಿಯ ಒಟ್ಟಾರೆ ಗಮನ ಕರ್ನಾಟಕದ ಕಡೆ ಸರಿದಿದೆ. ಇವತ್ತು ದಕ್ಷಿಣ ಭಾರತವನ್ನು ವಶಪಡಿಸಿಕೊಳ್ಳಲು ಬಿಜೆಪಿ ಪಾಲಿಗೆ ಕರ್ನಾಟಕವೇ ಖೈಬರ್ ಕಣಿವೆ ಇದ್ದಂತೆ.
2028ರಲ್ಲಿ ಕರ್ನಾಟಕವನ್ನು ವಶಪಡಿಸಿಕೊಂಡರೆ ಮುಂದೆ ತಮಿಳುನಾಡು, ಕೇರಳದಂತಹ ರಾಜ್ಯಗಳಲ್ಲಿ ಪಕ್ಷದ ನೆಲೆಯನ್ನು ಭದ್ರಪಡಿಸಿಕೊಳ್ಳಬಹುದು ಎಂಬುದು ಮೋದಿ-ಅಮಿತ್ ಶಾ ಯೋಚನೆ. ಹೀಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವನ್ನು ದುರ್ಬಲಗೊಳಿಸುವ ಸಣ್ಣ ಅವಕಾಶವನ್ನೂ ಈ ಜೋಡಿ ಕಳೆದುಕೊಳ್ಳಲು ಬಯಸುವುದಿಲ್ಲ. ಅದರಲ್ಲೂ 2023ರಲ್ಲಿ ತಾವೇ ನಿರಂತರವಾಗಿ ಕರ್ನಾಟಕಕ್ಕೆ ನುಗ್ಗಿದರೂ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರಲಾಗದ ಹತಾಶೆ, ಅವಮಾನವಾಗಿ ಪರಿವರ್ತನೆಗೊಂಡು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಡುತ್ತಿದೆ.
ಹೀಗಾಗಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ನಂತರ ಮತ್ತೆ ಅವರು ಕರ್ನಾಟಕಕ್ಕೆ ನುಗ್ಗತೊಡಗಿದ್ದಾರೆ. ಅಷ್ಟೇ ಅಲ್ಲ, ಸಿದ್ದರಾಮಯ್ಯ-ಡಿಕೆಶಿ ನಡುವಣ ಖುರ್ಚಿ ಕಾಳಗದ ಬಗ್ಗೆ ಪ್ರಸ್ತಾಪಿಸತೊಡಗಿದ್ದಾರೆ.
ಪರಿಣಾಮ? ಸಿದ್ದರಾಮಯ್ಯ-ಡಿಕೆಶಿ ನಡುವಣ ಅಧಿಕಾರ ಸಂಘರ್ಷದ ಎಪಿಸೋಡಿನ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಉತ್ಸಾಹವಿಲ್ಲ. ಇದೇ ರೀತಿ ಈಗ ಸಿದ್ದರಾಮಯ್ಯ ಕೂಡಾ ಎಷ್ಟು ಅಗ್ರೆಸಿವ್ ಅಗಿದ್ದಾರೆ ಎಂದರೆ ರಾಹುಲ್ ಗಾಂಧಿ ಪ್ರಸ್ತಾಪಿಸುವ ಮುನ್ನವೇ, ‘ಅಧಿಕಾರದಿಂದ ಕೆಳಗಿಳಿಯಲು ನಾನು ರೆಡಿ.
ಆದರೆ ಹಾಲಿ ಗೃಹ ಸಚಿವ, ದಲಿತ ನಾಯಕ ಡಾ.ಜಿ.ಪರಮೇಶ್ವರ್ ಅವರೇ ಮುಂದಿನ ಸಿಎಂ ಆಗಬೇಕು. ಹಾಗಾಗದಿದ್ದರೆ ಮುಂದಿನ ಪರಿಣಾಮಗಳಿಗೆ ನಾನು ಹೊಣೆಯಲ್ಲ’ ಎಂಬ ಮೆಸೇಜು ರಾಹುಲ್ ಕಿವಿಗೆ ತಲುಪುವಂತೆ ಮಾಡಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ತಾವು ದುಡುಕಿ ಒಂದು ಹೆಜ್ಜೆ ಇಟ್ಟರೆ ಮೋದಿ-ಅಮಿತ್ ಶಾ ಜೋಡಿ ರಾಜ್ಯ ಸರ್ಕಾರವನ್ನೇ ಖೆಡ್ಡಾಗೆ ಬೀಳಿಸಬಹುದು ಎಂಬುದು ರಾಹುಲ್ ಅತಂಕ. ಹೀಗಾಗಿ ಅವರು ಅಧಿಕಾರ ಹಂಚಿಕೆಯ ಹಿಯರಿಂಗ್ ಡೇಟನ್ನೇ ಮುಂದೂಡಲು ನಿರ್ಧರಿಸಿದ್ದಾರೆ ಎಂಬುದು ಕಾಂಗ್ರೆಸ್ ಮೂಲಗಳ ಮಾತು.
ಇವರಿಗೆ ಬೇಕು ಅವರಿಗೆ ಬೇಡ ಈ ಮಧ್ಯೆ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಚುನಾವಣೆಯನ್ನು ತ್ವರಿತವಾಗಿ ಮಾಡಿ ಅಂತ ರಾಹುಲ್ ಗಾಂಧಿ ರಾಜ್ಯದ ನಾಯಕರಿಗೆ ಸೂಚನೆ ಕೊಟ್ಟಿದ್ದಾರಂತೆ. ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ ರಾಜಧಾನಿ ಯಲ್ಲಿ ಹೋರಾಡಲು ಕಾರ್ಪೊರೇಟರುಗಳ ಪಡೆ ಬೇಕಲ್ಲ? ಅವರಿದ್ದರೆ ತಾನೇ ತಳಹಂತ ದಲ್ಲಿ ಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸುವುದು ಎಂಬುದು ರಾಹುಲ್ ಗಾಂಧಿ ಯವರ ಯೋಚನೆ.
ಹೀಗೆ ರಾಹುಲ್ ಗಾಂಧಿ ಅವರು ನೀಡಿದ ಸೂಚನೆಯನ್ನು ಪಾಲಿಸಲು ಸಿಎಂ ಸಿದ್ದರಾಮಯ್ಯ ಅವರಂತೂ ರೆಡಿ ಇದ್ದಾರೆ. ಆದರೆ ಜಿಬಿಎ ಚುನಾವಣೆ ನಡೆಸುವ ವಿಷಯ ದಲ್ಲಿ ಅವರಿಗೆ ಉತ್ಸುಕತೆ ಇದ್ದರೂ ಅವರ ವಿರೋಧಿ ಪಾಳಯಕ್ಕೆ ಬಿಲ್ ಕುಲ್ ಇಷ್ಟವಿಲ್ಲ. ಕಾರಣ? ಒಂದು ಸಲ ಜಿಬಿಎ ಚುನಾವಣೆ ಘೋಷಣೆಯಾದರೆ ಸಿದ್ದರಾಮಯ್ಯ ಅವರು ಸಿಎಂ ಹುದ್ದೆಯಲ್ಲಿ ಮತ್ತಷ್ಟು ಗಟ್ಟಿಯಾಗಿ ಸೆಟ್ಲಾಗುತ್ತಾರೆ.
ಎಲ್ಲಕ್ಕಿಂತ ಮುಖ್ಯವಾಗಿ ಚುನಾವಣೆ ನಡೆದರೆ ಕಾಂಗ್ರೆಸ್ ಗೆಲ್ಲುವುದು ಕಷ್ಟ. ಈಗಿರುವ ಮಾಹಿತಿಯ ಪ್ರಕಾರ ಐದು ಜಿಬಿಎಗಳ ಪೈಕಿ ನಾಲ್ಕು ಜಿಬಿಎಗಳ ಅಧಿಕಾರ ಬಿಜೆಪಿ-ಜೆಡಿಎಸ್ ಮಿತ್ರಕೂಟದ ತೆಕ್ಕೆಗೆ ಹೋಗುತ್ತದೆ. ಇದ್ದುದರಲ್ಲಿ ಸೆಂಟ್ರಲ್ ಜಿಬಿಎ ಕಾಂಗ್ರೆಸ್ ವಶಕ್ಕೆ ಬರಬಹುದು.
ಇವತ್ತು ಚುನಾವಣೆಯಲ್ಲಿ ಕನಿಷ್ಟ ಮೂರು ಜಿಬಿಎಗಳನ್ನು ವಶಪಡಿಸಿಕೊಂಡರೆ ಓಕೆ. ಹಾಗಾಗದೆ ಒಂದೇ ಜಿಬಿಎ ಕೈಗೆ ಬಂದರೆ ಸಿದ್ದರಾಮಯ್ಯ ಗ್ಯಾಂಗು ಹೊಸ ಆಟಕ್ಕಿಳಿಯು ತ್ತದೆ. ಇದು ಬೆಂಗಳೂರು ಉಸ್ತುವಾರಿ ನಾಯಕರ ವೈಫಲ್ಯ ಎನ್ನುತ್ತದೆ. ಹೀಗಾಗಿ ಜಿಬಿಎ ಚುನಾವಣೆ ತಕ್ಷಣ ನಡೆಯುವ ಬದಲು ಇನ್ನಷ್ಟು ಕಾಲ ಮುಂದಕ್ಕೆ ಹೋಗಲಿ ಎಂಬುದು ಸಿದ್ದರಾಮಯ್ಯ ವಿರೋಧಿ ಪಾಳಯದ ಲೆಕ್ಕಾಚಾರ.
ಮೂಲಗಳ ಪ್ರಕಾರ ಇದೇ ಕಾರಣಕ್ಕಾಗಿ ಜಿಬಿಎ ಚುನಾವಣೆ ನಡೆಸದಂತೆ ಸುಪ್ರೀಂ ಕೋರ್ಟಿ ನ ಮೊರೆ ಹೋಗಲು ಈ ಪಾಳಯ ನಿರ್ಧರಿಸಿದೆ. ಅಂದ ಹಾಗೆ ಜಿಬಿಎ ಚುನಾವಣೆಯನ್ನು ಮುಂದೂಡಲು ಅನುಕೂಲವಾಗುವಂತೆ ಸುಪ್ರೀಂ ಕೋರ್ಟಿನಲ್ಲಿ ವಾದಿಸಲು ಅದಕ್ಕೆ ಕಾರಣವೂ ಇದೆ.
ಯಾಕೆಂದರೆ ಈಗ ಆಗಿರುವ ಜಿಬಿಎ ವಾರ್ಡುಗಳು ಕ್ರಮಬದ್ಧವಾಗಿಲ್ಲ. ಕೆಲವು ವಾರ್ಡು ಗಳಲ್ಲಿ ಒಂಬತ್ತು ಸಾವಿರ ಮತದಾರರಿದ್ದರೆ, ಕೆಲವು ವಾರ್ಡುಗಳಲ್ಲಿ ನಲವತ್ತೈದು ಸಾವಿರ ಮತದಾರರಿದ್ದಾರೆ. ಇನ್ನು ಕೆ.ಆರ್.ಪುರಂ ವ್ಯಾಪ್ತಿಯ ಗುಂಜೂರಿನಲ್ಲಿ ಎರಡು ಅಪಾರ್ಟ್ ಮೆಂಟು ಮತ್ತು ಸ್ವಲ್ಪೇ ಸ್ವಲ್ಪ ಪ್ರದೇಶವನ್ನು ಒಳಗೊಂಡ ಚೋಟಾ ವಾರ್ಡನ್ನು ಸೃಷ್ಟಿಸ ಲಾಗಿದೆ.
ಇದೇ ರೀತಿ ಮಹಿಳಾ ಮೀಸಲಾತಿ ಸಮರ್ಪಕವಾಗಿಲ್ಲ ಎಂಬುದು ಸೇರಿದಂತೆ ಹಲವು ಲೋಪಗಳನ್ನು ಎತ್ತಿ ತೋರಿಸಲು ಈ ಪಾಳಯ ನಿರ್ಧರಿಸಿದ್ದು, ಇದೆಲ್ಲವನ್ನು ಹಿಡಿದು ಕೊಂಡು ಈ ಪಾಳಯದ ಒಂದು ಗುಂಪು ದೇಶದ ಖ್ಯಾತ ನ್ಯಾಯವಾದಿ ಮುಕುಲ್ ರೋಹ್ಟಗಿ ಬಳಿ, ಮತ್ತೊಂದು ಗುಂಪು ಅಭಿಷೇಕ್ ಮನು ಸಿಂಘ್ವಿ ಅವರನ್ನು ಸಂಪರ್ಕಿಸಿದೆ.
ಎಲ್ಲವೂ ಲೆಕ್ಕಾಚಾರದ ಪ್ರಕಾರ ನಡೆದರೆ ಜಿಬಿಎ ಚುನಾವಣೆಗೆ ಬ್ರೇಕ್ ಹಾಕಲು ಸಿದ್ದು ವಿರೋಧಿ ಪಾಳಯ ಸುಪ್ರೀಂ ವಾರ್ ಆರಂಭಿಸಲಿದೆ.